ಬದುಕು ತಾವೆಂದುಕೊಂಡಂತೆ ನಡೆಯಲಾರದೆ , ಅಸಹಾಯಕರಾಗಿದ್ದ ತಂದೆ ಮತ್ತು ಮಗನ ನಡುವೆ ಕೊಂಡೆಯಾಗಿದ್ದನು ಸೋಮಣ್ಣ. ರಾಯರ ಬದುಕಿನ ಹೆಜ್ಜೆಯನ್ನು ಹಿಂಬಾಲಿಸಿದ ಅವನಿಗೆ ಕೊನೆಗೂ ಜೀವನದ ಸಾಕ್ಷಾತ್ಕಾರವಾಯಿತು. ವಿಷಯ ಹಳೆಯದು ಆದರೆ ಕಥೆ ಹೊಸದು . ಸಾಧ್ಯವಾದರೆ ಓದಿ ತಮ್ಮ ಅಭಿಪ್ರಾಯವನ್ನು ತಿಳಿಸಿ.
– ಇಂತಿ ಸಂಪಾದಕ
ವಿಶಾಲವಾದ ಹೊರದೋಟದ ಮೂಲೆಯೊಂದರಲ್ಲಿ ಕುಳಿತಿದ್ದ ‘ರಾಯರು’ ತದೇಕದಿಂದ ಗಿಡದ ಮೇಲಿದ್ದ ಗುಬ್ಬಿಯ ಗೂಡನ್ನೇ ವೀಕ್ಷಿಸುತ್ತಿದ್ದರು. ತೋಟದ ಕೆಲಸದಲ್ಲಿ ಮಗ್ನನಾಗಿದ್ದ ಸೋಮಣ್ಣನನ್ನು ಕರೆದು ” ಸೋಮಣ್ಣ ಅದನ್ನು ನೋಡಿದೀಯಾ?” ಎಂದರು.
ಅವರೇನು ಕೇಳುತಿದ್ದಾರೆ ಎಂದರಿಯದೆ ಕಕ್ಕಾಬಿಕ್ಕಿಯಾದ ಸೋಮಣ್ಣನು ” ರಾಯರೆ ನೋಡಿದೆ, ಆ ಗುಲಾಬಿ ಕಂಟಿಯನ್ನು ಚನ್ನಾಗಿ ಕಟ್ಟು ಮಾಡಬೇಕು , ನಾಳೆ ಮಾಡುತ್ತೀನಿ ” ಎಂದನು.
” ನಿನಗೆ ಗುಲಾಬಿ ಕಂಟಿಯ ಮೇಲೆ ಧ್ನ್ಯಾನ , ನನಗೆ ಆ ಗುಬ್ಬಿಯ ಗೂಡಿನ ಮೇಲೆ. ಇರಲಿ ಬಿಡು, ಅವರವರ ಲಕ್ಷ ಅವರವರ ಅಭಿರುಚಿಯಂತೆ. ಭಾಳ ದಿನದಿಂದ ಆ ಗೂಡನ್ನ ನೋಡತಾ ಇದ್ದೆ. ಮರಿ ಗುಬ್ಬಿ, ತಂದೆ ಮತ್ತು ತಾಯಿ ಗುಬ್ಬಿ ಎಲ್ಲ ಸೇರಿ ಚಿವಗುಡುತಿದ್ದವು. ಈಗ ನೋಡು ಧ್ವನಿ ಇಲ್ಲದ ಆ ಮುದಿ ಗುಬ್ಬಿ ಮಾತ್ರ ಉಳಿದುಕೊಂಡಿದೆ, ಇಷ್ಟರಲ್ಲಿಯೇ ಅದೂ ಕೂಡ ಹಾರಿಹೋಗಬಹುದು”
ಅವರೇಕೆ ಈ ಮಾತನ್ನು ಆಡುತ್ತಿದ್ದಾರೆ ಎಂಬ ಅರಿವಿನೊಂದಿಗೆ ಸೋಮಣ್ಣ ಅಂದ “ಇರಲಿ ಬಿಡಿ ರಾಯರೆ, ಪ್ರಾಣಿ
ಪಕ್ಷಿಗಳಾದರೇನು ಮನುಷ್ಯರಾದರೇನು ಎಲ್ಲರಿಗೂ ಒಂದೇ ಪ್ರಕೃತಿಯ ನಿಯಮ. ಕೂಡಿದವರು ಒಂದು ದಿನ ಅಗಲುವದು ಸಹಜ ತಾನೇ ?“
” ಅರೆ ಹೌದಲ್ಲ , ನಾನು ದಡ್ಡ ನೀನು ಎಷ್ಟೊಂದು ಚನ್ನಾಗಿ ಅರ್ಥ ಮಾಡಿಕೊಂಡಿದಿ, ಇರಲಿ ಬಿಡು ಸಕ್ಕರೆ ಇಲ್ಲದ ಲೋಟಾ ಕಾಫಿ ತಗೊಂಡು ಬಾ ” ಅಂತೆಂದರು.
ಸೋಮಣ್ಣ ರಾಯರ ಮನೆಯಲ್ಲಿ ಕೆಲಸಕ್ಕೆಂದು ಸೇರಿ ಸುಮಾರು ಇಪ್ಪತ್ತೈದು ವರುಷಗಳಾಗಿದ್ದವು. ಕಾಲ ಬದಲಾಗಿದ್ದರೂ ಅವರ ಮನೆಯಲ್ಲಿಯೇ ತನ್ನ ಬದುಕನ್ನು ಕಟ್ಟಿಕೊಂಡ ಅವನಿಗೆ, ಆ ಮನೆಯನ್ನು ಬಿಟ್ಟು ಬೇರೆ ಕಡೆಗೆ ಹೋಗಬೇಕೆಂದು ಎಂದೂ ಅನಿಸಿರಲಿಲ್ಲ. ಆ ಮನೆಯಲ್ಲಿ ನಡೆದು ಹೋದ ಎಲ್ಲ ಆಗು ಹೋಗುಗಳಿಗೆ ಅವನೊಬ್ವ ಜೇವಂತ ಸಾಕ್ಷಿ. ಇತ್ತೀಚಿನ ದಿನಗಲ್ಲಿ ರಾಯರ ನಡುವಳಿಕೆಯಲ್ಲಿ ಬಹಳೇ ಬದಲಾವಣೆ ಆಗಿದ್ದನ್ನು ಸೂಕ್ಷ್ಮವಾಗಿ ಗಮಿನಿಸಿದ್ದ. ಒಮ್ಮೊಮ್ಮೆ ಹಳೆಯ ನೆನಪಿನ ಕಂತೆಯನ್ನು ಬಿಚ್ಚಿ ತಾಸುಗಟ್ಟಲೆ ಮಾತನಾಡುತ್ತ ಕೂಡ್ರುತ್ತಾರೆ, ಹೇಳಬೇಕಿದ್ದಿದ್ದನ್ನು ಮರೆತು ಇನ್ನೇನೋ ಹೇಳಿಬಿಡುತ್ತಾರೆ, ಸರಿಪಡಿಸಿದಾಗ ‘ಹೌದಲ್ಲ! ನೀನೇ ಖರೆ ಬಿಡು’ ಎಂದು ಮಾತು ಮುಗಿಸುತ್ತಾರೆ . ನಡೆದು ಹೋದ ಘಟನೆಗಳು ತಮಗೆ ಗೊತ್ತೇ ಇಲ್ಲ ಎಂಬುವಂತೆ
ವರ್ತಿಸುತ್ತಾರೆ. ರಾಯರಿಗೇನಾದರೂ ‘ ಅರಳು ಮರಳು ‘ ಆರಂಭ ಆಗಿದೆಯೇನೋ ಎಂದು ಅನಿಸಿದರೂ, ಛೆ! ಅವರಿಗೆ ಇನ್ನೂ ಅಷ್ಟೊಂದು ವಯಸಾಗಿಲ್ಲ ಬಿಡು, ಎಂದು ತನ್ನಷ್ಟಕ್ಕೆ ತಾನೇ ಸಮಾಧಾನ ಮಾಡಿಕೊಂಡಿದ್ದನು.
ಸೋಮಣ್ಣ ಅವರ ಮೆಚ್ಚಿನ ಕಾಫಿಯೊಂದಿಗೆ ಮರಳಿ ಬಂದಾಗ ರಾಯರು ಇನ್ನೂ ಗುಬ್ಬಿಯ ಗೂಡಿನಲ್ಲಿಯೇ ಮಗ್ನರಾಗಿದ್ದರು.
” ಬಿಸಿ ಕಾಫಿ ರಾಯರೆ ” ಎಂದಾಗ
” ಎಷ್ಟ ಜಲ್ದಿ ಬಂದು ಬಿಟ್ಟೆ, ನಿನಗೂ ಒಂದು ಲೋಟ ತಂದಿಯಲ್ಲ? ಕೂತಕೊ ನಿನಗ ಒಂದು ಮಾತು ಹೇಳಬೇಕೆಂದಿದ್ದೆ —“
ಎಂದು ಪೀಠಿಕೆ ಹಾಕಿದಾಗ ಸೋಮಣ್ಣನಿಗೆ ಅನಿಸಿತು, ಕನಿಷ್ಠ ಇನ್ನೊಂದು ಗಂಟೆಯವರೆಗೂ ಇಲ್ಲಿಂದ ಮುಕ್ತಿಯಿಲ್ಲವೆಂದು. ಮನಸು ಗಟ್ಟಿಮಾಡಿಕೊಂಡು ಕೇಳಿದ “ಅದೇನು ರಾಯರೆ ಹೊಸ ಮಾತು?” ಎಂದು.
” ರಾಘು ದೊಡ್ಡವನಾಗಿ ಬಿಟ್ಟಾನಲ್ಲ ಅವನಿಗೆ ಸಾವಿತ್ರಿ ಮಗಳ ಕೂಡ ಮದುವಿ ಮಾಡಿಬಿಡಬೇಕಲ್ಲ”
ಸೋಮಣ್ಣನಿಗೆ ಸ್ವಲ್ಪ ಆಘಾತವಾದರೂ ತೋರಿಸಿಕೊಳ್ಳದೆ ಅಂದ
“ರಾಯರೇ ರಾಘುನ ಮದುವೆ ಆಗಿ ಹತ್ತು ವರ್ಷವಾಯಿತಲ್ಲ”
ಸ್ವಲ್ಪ ಏನೋ ವಿಚಾರಿಸಿ ತಲೆಕೆರೆದುಕೊಂಡು ರಾಯರೆಂದರು.
” ಅರೆ , ಹೌದಲ್ಲ ಮರತೇ ಹೋಗಿತ್ತು. ನೀನೆ ಖರೆ ನೋಡು . ಹೋದ ವರ್ಷನ ಬಂದಿದ್ದನಲ್ಲ ತನ್ನ ಬಿಳಿ ಹೆಂಡತಿ ಮತ್ತ ಮಗನನ್ನ ಕರಕೊಂಡು. ಅವನಿಗೆ ನಾನೇ ಮದುವೆ ಮಾಡಬೇಕೆಂದು ಅಂದುಕೊಂಡಿದ್ನಲ್ಲ ಅದಕ್ಕ ಇನ್ನೂ ಅದರ ನೆನಪು ಉಳದೈತಿ ನೋಡು” ಎಂದು ಹೇಳಿ ಕಾಫಿಯ ಗುಟುಕನ್ನು ಹೀರಿದರು.
ರಾಘು ರಾಯರ ಒಬ್ಬನೇ ಮಗ. ರಾಯರ ಇಚ್ಛೆಯಂತೆ ಓದಿ ಡಾಕ್ಟರನಾಗಿದ್ದ. ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಇಂಗ್ಲೆಂಡಿಗೆ ಹೋದವನು ಅಲ್ಲಿಯೇ ಬಿಳಿಯ ಹೆಂಡತಿಯನ್ನು ಕಟ್ಟಿಕೊಂಡು ನೆಲೆ ಊರಿದ್ದ. ರಾಯರಿಗೆ ಮೊದಲಿನಿಂದಲೂ ತಮ್ಮ ತಂಗಿ ಸಾವಿತ್ರಿಯ ಮಗಳನ್ನು ಸೊಸೆಯನ್ನಾಗಿ ಸ್ವೀಕರಿಸುವ ಇಚ್ಛೆಯಿದ್ದರೂ ಸಾಧ್ಯವಾಗದ ಕಾರಣ ತುಂಬಾ ಬೇಜಾರು ಆಗಿತ್ತು. ಆದರೆ ಮಗನ ಮನಸಿಗೆ ನೋವಾಗಬಾರದೆಂದು ಸುಮ್ಮನೆ ಇದ್ದರು.
“ಹೋಗಲಿ ಬಿಡಿ ರಾಯರೆ ಎಲ್ಲಾ ದೈವ ಇಚ್ಛೆಯಂತೆ ನಡೆಯುವದು ತಾನೇ?” ಎಂದು ಹೇಳಿ ಸೋಮಣ್ಣ ಮಾತು ಮುಗಿಸಲು ಯತ್ನಿಸಿದ.
” ಇರಲಿ ಬಿಡು, ಕಸ್ತೂರಿಯ ಹುಟ್ಟು ಹಬ್ಬಕ್ಕೆ ಹೊಸ ಸೀರೆ ತರಬೇಕಲ್ಲ, ನೀನೂ ತಯ್ಯಾರ್ ಆಗು ಇಬ್ಬರೂ ಪೇಟೆಗೆ ಹೋಗಿ ಬಂದು ಬಿಡೋಣ” ಎಂದಾಗ ಸೋಮಣ್ಣನ ಕಣ್ಣಿನಲ್ಲಿ ಒಂದೆರಡು ಹನಿಗಳು ಗೊತ್ತಿಲ್ಲದ ಹಾಗೆ ಮೂಡಿದ್ದವು.
“ರಾಯರೆ ಕಸ್ತೂರಮ್ಮ ಮೇಲೆ ಹೋಗಿ ಎರಡು ವರ್ಷಗಳಾದುವಲ್ಲ” ಎಂದು ಹೇಳಿ ಕಣ್ಣೀರು ವರಸಿಕೊಂಡ.
“ಹೌದಲ್ಲ ಸೋಮಣ್ಣ , ನಾನು ಮರತೇ ಹೋಗಿನ್ನಿ ನೋಡು, ಮನೆಯೊಳಗೆ ರೊಟ್ಟಿ ಸುಡಾಕತ್ತಾಳ ಅಂತ ಅಂದುಕೊಂಡಿದ್ದೆ” ಅಂತ ಹೇಳಿ ರಾಯರು ಗುಬ್ಬಿಯ ಗೂಡಿನತ್ತ ಮತ್ತೊಮ್ಮೆ ನೋಡತೊಡಗಿದರು. ರಾಯರ ಈ ಮರುವಿಕೆಗೆ ಯಾಕೋ ಸೋಮಣ್ಣನಿಗೆ ಭಯವಾಗತೊಡಗಿತು. ಅವರ ಮಗನಿಗೆ ಹೇಳುವುದೇ ಒಳ್ಳೆಯದೆಂದು ಅಂದುಕೊಂಡ.
ಕಸ್ತೂರಮ್ಮ ರಾಯರ ಹೆಂಡತಿ. ಎರಡು ವರ್ಷಗಳ ಹಿಂದೆ ಅದಾವುದೊ ಕ್ಯಾನ್ಸರ್ ರೋಗಿಗೆ ಬಲಿಯಾಗಿ ಇಹಲೋಕ
ತೊರೆದಿದ್ದಳು. ಸೋಮಣ್ಣ ಅವಳನ್ನು ಯಾವಾಗಲೂ ತಾಯಿಯ ಸ್ಥಾನದಲ್ಲಿ ನೋಡಿದವನು, ಅವಳ ಹೆಸರು ಬಂದಾಗ ಅವನಿಗೆ ಗೊತ್ತಿಲ್ಲದೇ ಅವನ ಕಣ್ಣುಗಳು ಒದ್ದೆಯಾಗಿಬಿಡುತ್ತಿದ್ದವು. ಸೋಮಣ್ಣನೂ ಒಂದು ಸಲ ಗೂಡಿನತ್ತ ಕಣ್ಣಾಡಿಸಿದ, ಮುದಿ ಗುಬ್ಬಿಯೊಂದು ಯಾರದೋ ಬರುವಿಕೆಗಾಗಿ ಕಾಯುವಂತಿತ್ತು. ರಾಯರು ಸಣ್ಣಗೆ ಏನನ್ನೋ ವಟಗುಟ್ಟಿದರು ಆದರೆ ಸೋಮಣ್ಣನಿಗೆ ಅರ್ಥವಾಗಲಿಲ್ಲ.
“ಸೋಮಣ್ಣ ಆದರೂ ರಾಘು ಹಿಂಗ ಮಾಡಬಾರದಾಗಿತ್ತು. ತಾಯಿಯ ಚಿತೆಗೆ ಬೆಂಕಿ ಹಚ್ಚದವನು ಅದೆಂತ ಮಗಾ?”
“ಇರಲಿ ಬಿಡಿ ರಾಯರೆ , ಅವನೇನು ಮುದ್ದಾಮಾಗಿ ಮಾಡಲಿಲ್ಲ, ಅವನದೇನು ತಪ್ಪು? ದೂರದ ದೇಶ, ಸಮಯಕ್ಕೆ ಸರಿಯಾಗಿ ಬರಲಿಕ್ಕೆ ಆಗಲಿಲ್ಲ” ಎಂದು ಹೇಳಿ ರಾಯರನ್ನು ಸಮಾಧಾನ ಮಾಡಲು ಪ್ರಯತ್ನಿಸಿದ.
‘ದೂರದ ದೇಶದಲ್ಲಿದ್ದರೆ ಎಲ್ಲರಿಗೂ ಇದೆ ಗತಿ ತಾನೇ ‘ ಎಂದು ತನ್ನ ಮನಸಿನಲ್ಲೊಮ್ಮೆ ವಟಗುಟ್ಟಿಕೊಂಡ. ಕಸ್ತೂರಮ್ಮ ಆಕಷ್ಮಿಕವಾಗಿ ತೀರಿಕೊಂಡಾಗ ರಾಘುನಿಗೆ ಅಂತಿಮ ಸಂಸ್ಕಾರಕ್ಕೆ ಬರಲಾಗಲಿಲ್ಲ. ಕಟ್ಟಾ ಸಂಪ್ರದಾಯಸ್ಥರಾದ ರಾಯರಿಗೆ ಕಸ್ತೂರಿಯ ಕಳೇಬರವನ್ನು ಭಾಳೋತ್ತು ಇಡಲು ಮನಸಿರಲಿಲ್ಲ, ಮನಸ್ಸಿಲ್ಲದಿದ್ದರೂ ಅಣ್ಣನ ಮಗನ ಕಡೆಯಿಂದ ಚಿತಾಧಾರಣೆ ಮಾಡಿಸಿದ್ದರು. ಆ ನೋವನ್ನು ಮಗನ ಜೊತೆಗೆ ಎಷ್ಟೋ ಸಲ ತೋರಿಕೊಂಡಿದ್ದರು. ರಾಘುನಿಗೂ ಅದರ ಬಗ್ಗೆ ಬಹಳೇ ನೋವಿತ್ತು, ಕಾಲದ ಗೊಂಬೆಯಾಗಿ ಸುಮ್ಮನಾಗಿದ್ದ.
” ಸೋಮಣ್ಣ, ನೀನೂ ಅವನಂಗ ಬಾಲಾ ಬಡಿಯಾಕತ್ತಿ ನೋಡು. ಇಲ್ಲಿ ಇಷ್ಟೊಂದು ಆಸ್ತಿ ಐತಿ, ವಯಸಾದ ಅಪ್ಪ ಆದಾನು ಅನ್ನು ಖಬರ ಬ್ಯಾಡ ಅವನಿಗೆ? ಇಲ್ಲೇನು ಕಡಿಮಿ ಐತಿ? ಅವನಿಗೆ ಆಸ್ಪತ್ರೆಯನ್ನು ಕಟ್ಟಿಸಲು ಜಾಗಾ ಕೂಡಾ ನೋಡಿದ್ದೆ, ಇನ್ನೂ ಅಲ್ಲಿ ಕುಳಿತು ಏನು ತೆರಿತಾನ?”
ರಾಯರಿಗೆ ಸಿಟ್ಟು ಬಂದಿರುವುದು ಸೋಮಣ್ಣನಿಗೆ ತಿಳಿಯಿತು.
“ರಾಯರೇ ಗುಬ್ಬಿ ಗೂಡನ್ನ ನೋಡಿದಿರೆಲ್ಲ. ಸ್ವಚ್ಛಂದವಾಗಿ ಮರಿ ಗುಬ್ಬಿ ಹಾರಿ ಹೋಯಿತು, ತನಗೆ ಬೇಕಾದ ಹಾಂಗ ಜೀವನ ಮಾಡಾಕ. ರಾಘುನು ಸ್ವಚ್ಛಂದವಾಗಿ ತನ್ನ ಜೀವನಾ ಮಾಡಾಕತ್ತಾನ. ಅವನಿಗೆ ಅದೇ ದೇಶ ಇಷ್ಟವಾದಾಗ ಅಲ್ಲಿಯೇ ಇರಲಿ ಬಿಡಿ. ನೀವು ಒತ್ತಾಯ ಮಾಡಿದರ ಅವನು ಬರತಾನಂತ ತಿಳಕೊಳ್ಳ ಬ್ಯಾಡ್ರಿ. ಹೋದ ಸಲ ಬಂದಾಗ ನಿಮ್ಮನ್ನ ಕರಕೊಂಡು ಹೋಗಲು ಪ್ರಯತ್ನಿಸಿದ, ನೀವ ಹೋಗಲಿಲ್ಲ. ಅವನದೇನು ತಪ್ಪು?” ಅಂತ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದ ಸೋಮಣ್ಣ.
“ಹುಟ್ಟಿ ಬೆಳೆದ ದೇಶಾ ಬಿಟ್ಟು ನಾನು ಅಲ್ಲೇನು ಮಾಡಲಿ ಮಾರಾಯ. ಏನಾದರು ಹಾಳಾಗಿ ಹೋಗ್ಲಿ ಬಿಡು. ಮಗಾ ಅಂತ ಮಮತೆಯಿಂದ ಅವನ ಆಸೆಗೆ ವಿರುದ್ಧ ಹೋಗದೆ ಬೆಳೆಸಿದಿನಲ್ಲ ಅದು ನನ್ನ ತಪ್ಪು, ಈಗ ಪ್ರಾಯಶ್ಚಿತ ಪಡಾಕತ್ತೀನಿ. ನೀನು ಇರುತನಕ ನನಗೇನು ತೊಂದರೆ ಇಲ್ಲ ಬಿಡು” ಅಂತ ಮಾತು ಮುಗಿಸಿ ನಿಟ್ಟುಸಿರೊಂದನ್ನು ಎಳೆದರು.
” ರಾಯರೆ ಅವನಾಸೆಯಂತೆ ಅವನು ಇರಲಿ, ನಿಮ್ಮಾಸೆಯಂತೆ ನೀವು ಇದ್ದು ಬಿಡಿ. ನಾನಂತು ಇದ್ದೀನಲ್ಲ ನಿಮ್ಮ ಮಾತು ಕೇಳಾಕ” ಎಂದು ಮಾತು ಮುಗಿಸಿದ ಸೋಮಣ್ಣ.
ರಾಯರು ಕಾಫಿ ಮುಗಿಸಿ ಹಾಗೆಯೇ ಎಂದಿನಂತೆ ಅದೇ ಹಳೆ ಛತ್ರಿ ಮತ್ತು ಚಪ್ಪಲಗಳೊಂದಿಗೆ ತಮ್ಮ ದಿನ ನಿತ್ಯದ ವಾಕಿಂಗಗೆ ಎದ್ದು ಹೋದರು. ಚಪ್ಪಲಿಗಳನ್ನು ಎಷ್ಟೋ ಸಲ ಮರೆತು ಬಂದಿದ್ದರೂ ಸದಾ ಸಂಗಾತಿಯಾದ ಛತ್ರಿಯನ್ನು ಮಾತ್ರ ಎಂದೂ ಮರೆತವರಲ್ಲ. ಸೋಮಣ್ಣನಿಗೆ ಚನ್ನಾಗಿ ನೆನಪಿತ್ತು, ಕಳೆದ ಸಲ ರಾಘು ಊರಿಗೆ ಬಂದಾಗ ರಾಯರ ಜೊತೆಗೆ ಬಹಳೇ ಮಾತಾಡಿದ್ದ. ತನ್ನಲ್ಲಿಗೆ ಅವರನ್ನು ಕರೆದುಕೊಂಡು ಹೋಗಲು ಪಟ್ಟ ಸಾಹಸ ವ್ಯರ್ಥವಾಗಿತ್ತು. ರಾಘು ಬೇಜಾರು ಮಾಡಿಕೊಂಡು ತನ್ನ ಅಳಿಲನ್ನು ತೋಡಿಕೊಂಡಿದ್ದ.
“ಸೋಮಣ್ಣ, ನನ್ನ ಪರಿಸ್ಥಿತಿಯನ್ನು ಅಪ್ಪಾ ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ನಾನೇನು ಮಾಡಲಿ ಎಂದು ನನಗೂ ಗೊತ್ತಾಗ್ತಾ ಇಲ್ಲ. ಅಲ್ಲಿಯೇ ಹುಟ್ಟಿ ಬೆಳೆದ ಹೆಂಡತಿ, ಅದೇ ಸಂಸ್ಕೃತಿಯಲ್ಲಿ ಬೆಳೆದ ಮಗ ಇಲ್ಲಿ ಹೇಗೆ ಬಾಳಿಯಾರು? ನೀನು ಅವರ ಜೊತೆಗೆ ಇರುವವರೆಗೂ ನನಗೇನು ಚಿಂತೆಯಿಲ್ಲ. ಬೆಂಗಳೂರಿನಲ್ಲಿ ಸಾಕಷ್ಟು ವೃದ್ಧಾಶ್ರಮಗಳು ಆಗಿವೆ, ಒಂದಿಬ್ಬರ ಜೊತೆಗೆ ಮಾತಾಡಿದ್ದೀನಿ ಹಾಗೇನಾದರು ಅವಶ್ಯಕತೆ ಬಿದ್ದರೆ ಅವರನ್ನು ಅಲ್ಲಿಗೆ ಕಳಿಸಿದರಾಯಿತು” ಎಂದು.
“ರಾಘಪ್ಪ ಕಾಲ ಬದಲಾಗಿದೆ ಎಂದು ನನಗೂ ಗೊತ್ತು. ಮಕ್ಕಳ ಮೇಲೆ ಅವಲಂಬಿತ ಆಗ ಬಾರದೆಂದು ನಾನೂ ಬಯಸ್ತೀನಿ ಆದರೆ ರಾಯರು ಇನ್ನು ಹಳೆಯ ಸಂಸ್ಕೃತಿಯಲ್ಲಿ ಇದ್ದಾರೆ, ಅವರ ಮನ ಒಪ್ಪಿಸುವದು ಕಷ್ಟ. ಇರಲಿ ಬಿಡು ನಾನಿದ್ದೀನಲ್ಲ” ಎಂದು ಅವನಿಗೆ ಧೈರ್ಯ ಹೇಳಿ ಕಳುಸಿದ್ದ.
ರಾಯರ ವರ್ತನೆ ದಿನೇ ದಿನೇ ಬದಲಿಯಾಗುತ್ತಲಿತ್ತು. ಜಿಲ್ಲಾ ನ್ಯಾಯಾಧೀಶರಾಗಿ ನಿರ್ವುತ್ತಿಯಾಗಿದ್ದ ರಾಯರು ಸುಮಾರು ಸಲ ಟಿ ವಿ ಯಲ್ಲಿ ಬರುತ್ತಿದ್ದ ಪತ್ತೆಧಾರಿ ಸೀರಿಯಲ್ ಗಳನ್ನು ನೋಡುತ್ತಾ ಸಮಯ ಕಳೆಯುತ್ತಿದ್ದರು. ಈಗ ಅದನ್ನೂ ನಿಲ್ಲಿಸಿಬಿಟ್ಟಿದ್ದರು. ಯಾವುದೇ ಪುಸ್ತಕಗಳಲ್ಲಿ ಆಸಕ್ತಿ ಇಲ್ಲದವರು ಇತ್ತೀಚಿನ ದಿನಗಳಲ್ಲಿ ತಾಸುಗಂಟೆಲೆ ಧಾರ್ಮಿಕ ಗ್ರಂಥಗಳನ್ನು ಓದಲು ತೊಡಗಿದ್ದರು. ಸಾಯಂಕಾಲದ ಸ್ನೇಹಿತರ ಜೊತೆಗಿನ ಅಲೆದಾಟ ಕೂಡಾ ಕಮ್ಮಿಯಾಗಿತ್ತ . ಸೋಮಣ್ಣನಿಗೆ ಅವರು ಮನೆಯಲ್ಲಿ ಇರುವದು ಇಷ್ಟವಿದ್ದರೂ ಹಠಾತ್ತನೆ ಅವರಲ್ಲಿ ಆದ ಬದಲಾವಣೆಗಳು ಇಷ್ಟವಿರಲಿಲ್ಲ, ಅದರಲ್ಲೂ ಕೂಡ ಅವರ ಮರುವಿಕೆಯು ಕುರಿತು ಬಹಳೇ ಬೇಜಾರಾಗಿತ್ತು.
ಫೋನಿನಲ್ಲಿ ರಾಘುನ ಜೊತೆಗೆ ಮಾತೂ ಆಡಿದ್ದ. ರಾಘು ಏನೋ ಧೈರ್ಯ ಕೊಟ್ಟಿದ್ದ,
” ಸೋಮಣ್ಣ ಹುಬ್ಬಳ್ಳಿಯಲ್ಲಿ ನನ್ನ ಗೆಳೆಯನೊಬ್ಬ ಮಾನಸಿಕ ತಜ್ಞ ಇದ್ದಾನೆ ಅವನಿಗೆ ನೋಡಲು ಹೇಳುತ್ತೇನೆ. ಅವರನ್ನೊಮ್ಮೆ ಕರೆದುಕೊಂಡು ಹೋಗಿ ತೋರಿಸಿಕೊಂಡು ಬಾ” ಎಂದು ಅಂದಿದ್ದ. ” ರಾಯರೆ , ರಾಘು ಫೋನು ಮಾಡಿದ್ದ ನಿಮ್ಮನ್ನು ಹುಬ್ಬಳ್ಳಿಗೆ ಕರೆದುಕೊಂಡು ಹೋಗು ಅಂತ ಹೇಳಿದ “
“ಹುಬ್ಬಳ್ಳಿಗೆ ಯಾಕೆ ? ಸಿನೆಮಾ ನೋಡಕೊಂಡ ಬರಾಕೇನು? ಈಗ ಯಾರ ಟಾಕೀಜಿಗೆ ಹೋಕ್ತಾರ ಮಾರಾಯಾ, ಟಿವಿಯಲ್ಲೇ ಎಲ್ಲಾ ಸಿಗತೈತಿ ಅಲ್ಲ” ಎಂದು ಮಾತು ಮುಗಿಸಿದರು ರಾಯರು.
“ಇಲ್ಲ , ಅವನ ಡಾಕ್ಟರ ದೋಸ್ತನ ಭೇಟಿಯಾಗಿ ನಿಮ್ಮ ಆರೋಗ್ಯ ತಪಾಸ ಮಾಡಿಕೊಂಡು ಬಾ ಅಂತ ಹೇಳ್ಯಾನು” ಎಂತೆಂದನು ಸೋಮಣ್ಣ.
” ನಿಮ್ಮಿಬ್ಬರಿಗೂ ಹುಚ್ಚ ಹಿಡದೈತಿ ಏನು ? ನನಗೇನಾಗಿದೆ ? ನಾನು ಇನ್ನೂ ಗಟ್ಟಿ ಮುಟ್ಟಿಯಾಗೆ ಇದ್ದೀನಿ” ಅಂತ ಅವನ ಮಾತನ್ನು ತಿರಸ್ಕರಿಸಿದ್ದರು ರಾಯರು.
ಅದೊಂದು ದಿನ ಮಧ್ಯಾಹ್ನ ಮನೆ ಬಿಟ್ಟ ರಾಯರು ಸಾಯಂಕಾಲವಾದರೂ ಮರಳಿ ಬರಲೇ ಇಲ್ಲ. ಸೋಮಣ್ಣನಿಗೆ
ಭಯವಾಗತೊಡಗಿತು ‘ಎಲ್ಲಿ ಹೋಗಿರಬಹುದೆಂದು?’.
— ಡಾ. ಶಿವಶಂಕರ ಮೇಟಿ
( ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವದು