ಸಂಪಾದಕೀಯ ರುಚಿಯಾದ ಅಡಿಗೆಯನ್ನು ಮಾಡುವದು ಒಂದು ಕಲೆಯಾದರೆ, ಮಾಡಿದ ರೀತಿಯನ್ನು ಬರೆದು, ಅಷ್ಟೇ ರುಚಿಯಾಗಿ ಓದುಗರಿಗೆ ಉಣಬಡಿಸುವದು ಇನ್ನೊಂದು ಕಲೆ. ಈ ವಾರದ ಸಂಚಿಕೆಯಲ್ಲಿ, ಈ ಎರಡೂ ಕಲೆಗಳಲ್ಲಿ ಪರಿಣಿತರಾದ ಗೌರಿ ಪ್ರಸನ್ನರ ಒಂದು ಲೇಖನವಿದೆ. ಪಾಕ ಪ್ರವೀಣೆಯ ಗಜ್ಜರ ಹಲ್ವಾದ ಸ್ವಾಧವನ್ನು ಅವರ ಬರಹದಲ್ಲಿಯೇ ಓದಿ ನಾನಂತು ಖುಷಿಯಾದೆ, ನೀವೂ ಓದಿ ಆನಂದಿಸಿವಿರೆಂದು ನಂಬಿರುವೆ. (ಸಂ- ಶಿವ ಮೇಟಿ)
ಈ ಡಿಸೆಂಬರ್, ಚಳಿಗಾಲ ಬಂತೆಂದರೆ ದೆಹಲಿಯ ಸಬ್ಜಿ ಮಂಡಿಯ ಗಾಜರ್, ಮಟರ್ ಮುಂತಾದ ವರ್ಣರಂಜಿತ ತಾಜಾ ತರಕಾರಿಗಳನ್ನು, ಪಾಲಕ್, ಮೇಥಿ, ಸರಸೋಂ, ಬಥುವಾ, ಧನಿಯಾ, ಪುದೀನಾ..ರಾಶಿ ರಾಶಿ ವಿಧವಿಧ ಹಸಿರು ಸೊಪ್ಪುಗಳ ಸುವಾಸನೆಯನ್ನು, ಚಕ್ಕಡಿಗಳ ತಾಜಾ ಬೆಲ್ಲದ ಸಿಹಿಯನ್ನು, ಮಾಸಲೆಗೆಂದು ತಳ್ಳುಗಾಡಿಗಳಲ್ಲಿ ಹೂವಿನಾಕಾರದಲ್ಲಿ ಕತ್ತರಿಸಿಟ್ಟ ಕೆಂಪು ಅಮರೂದ್ ಗಳ ಕಂಪನ್ನು, ಶೇಂಗಾ, ಎಳ್ಳಿನ ನಾನಾ ನಮೂನೆಯ ರೇವಡಿ, ಗಜ್ಜಕ್ ಗಳನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ಅಲ್ಲಿನ ಆ ಮಂಗಲ್, ಶುಕ್ಕರ್ ಬಜಾರ್ ಗಳ ಆ ತಾಜಾತನರ ವೈಭೋಗ ನೋಡಿಯೇ ತಿಳಿಯಬೇಕು. ಚುಮುಚುಮು ಚಳಿ ಶುರುವಾಗಿ ಶಾಲ್, ಸ್ವೆಟರ್ ಗಳು ದಿವಾನದಿಂದ ಹೊರಬರುತ್ತಿದ್ದಂತೆಯೇ ಮಗರಾಯನ ಬೇಡಿಕೆ ಶುರು.. ‘ಅಮ್ಮಾ, ಗಾಜರ್ ಕಾ ಹಲ್ವಾ ಮಾಡತಿ?’ ಅಂತ. ಆದರೆ ಆ ಕೆಜಿಗಟ್ಟಲೆ ಗಜ್ಜರಿ ಹೆರೆದು ನಂತರ ಲೀಟರ್ಗಟ್ಟಲೆ ಹಾಲು ಸುರಿದು, ಗಂಟೆಗಟ್ಟಲೆ ಗ್ಯಾಸೊಲೆಯ ಮೇಲಿಟ್ಟು, ಆಗಾಗ ಕೈಯಾಡಿಸುತ್ತ ಅದನ್ನು ಮಾಡಿ ಮುಗಿಸುವ ಶಕ್ತಿ,ಶ್ರಮ, ಸಮಯಗಳನ್ನೆಲ್ಲ ಎಣಿಸಿ ‘ಗಜ್ಜರಿ ಈಗ ಬರಲಿಕ್ಹತ್ಯಾವ ಮಾರ್ಕೆಟ್ ನಾಗ..ಸ್ವಲ್ಪ ಸೋವಿ ಆಗಲಿ’ ಅಂತ 2-3 ಬಾರಿ ನೆಪ ಹೇಳಿ ಮುಂದ ಹಾಕಿದಮ್ಯಾಲೆ ಮಗನ ಸಹನೆ ಮುಗಿದು ‘ ಅಮ್ಮಾ , ನಿನ್ನ ಲೆಕ್ಕದ ಫಂಡಾನೇ ನಂಗ ತಿಳ್ಯಂಗಿಲ್ಲ ನೋಡು..ಹತ್ತಿಪ್ಪತ್ತು ರೂಪಾಯಿ ಗಜ್ಜರಿ ಸಲುವಾಗಿ ವಿಚಾರ ಮಾಡತಿ. ಅದಕ್ಕ ಹಾಕೂ ಫುಲ್ ಕ್ರೀಂ ಹಾಲು, ತುಪ್ಪ, ಖೋವಾ, ಡ್ರೈಫ್ರುಟ್ಸ್ ಇವೆಲ್ಲ ಅಂತೂ ಸೋವಿ ಆಗಂಗಿಲ್ಲ ಹೌದಿಲ್ಲೋ?’ ಅಂತ ಬಲವಾದ ವಾದ ಮಂಡಿಸುತ್ತಿದ್ದ. ಆದರೂ ಗಾಜರ್ ‘ದಸ್ ಕಾ ದೇಡ್ ಕಿಲೋ’ ಅಂತ ಭಯ್ಯಾ ಹೇಳಬೇಕು.. ನಾನು ‘ ತೀಸ್ ಕಾ ಪಾಂಚ್ ಕಿಲೋ ಕರದೋಂ’ ಅಂತ ಚೌಕಾಶಿ ಮಾಡಬೇಕು..ಆವಾಗಲೇ ಗಾಜರ್ ಕಾ ಹಲ್ವಾದ ಮಜಾ ಬರುತ್ತಿದ್ದುದು.ನೀಳ ದೇಹದ, ಚೆಂದನೆಯ ಬಣ್ಣದ ಈ ಗಾಜರಿ ಚೆಲುವೆಯರನ್ನು ಹೊತ್ತು ಮನೆಗೆ ತಂರೊಡನೇ ಮಕ್ಕಳ ಕಣ್ಣುಗಳ ಹೊಳಪನ್ನು ನೋಡಬೇಕು. ಅತ್ತೆಯವರು, ಮಕ್ಕಳಿಗೆ ಪೀಲರ್, ಹೆರೋಮಣಿ ಕೊಟ್ಟು ಕೂಡಿಸಿ ಹೆರೆದಾದ ಮೇಲೆ 12 ಲೀಟರ್ ನ ದಪ್ಪ ತಳದ ಅಲ್ಯೂಮಿನಿಯಂ ಕುಕ್ಕರ್ ಗ್ಯಾಸ್ ಮೇಲಿಟ್ಟು ದೊಡ್ಡ ಚಮಚ ದೇಸಿ ಘೀ ಹಾಕಿ ಹೆರೆದ ತುರಿ ಸುರಿದು ಅದರಲ್ಲಿನ ನೀರಿನಾಂಶ ಹೋಗುವವರೆಗೆ ಹುರಿದು ಸಣ್ಣ ಉರಿಯಲ್ಲಿ ಕಾಸಿ ದಪ್ಪ ಕೆನೆಗಟ್ಟಿದ ಹಾಲನ್ನು ಸುರುವಿ ಆಗೀಗ ಕೈಯಾಡಿಸುತ್ತ, ಹಾಲೆಲ್ಲ ಇಂಗಿದ ಮೇಲೆ ಛಲೋ ಪ್ರಮಾಣದಾಗ ಖೋವಾ ಹೆರೆದುಹಾಕಿ, ತುಪ್ಪದಲ್ಲಿ ಕರಿದ ಡ್ರೈಫ್ರುಟ್ಸ್ ಗಳನ್ನು ಮೇಲೆ ಸುರುವಿದರೆ ಆಹಾ! ಬಿಸಿಬಿಸಿಯಾಗಿ,ಬೆಚ್ಚಗಾಗಿ, ಥಣ್ಣನೆಯದು ಹೇಗೇ ತಿನ್ನಿ ನಿಮ್ಮ ರಸನೇಂದ್ರಿಯಕ್ಕೆ ಮೋಸ ಮಾಡದೇ ಧನ್ಯತೆಯ ಭಾವವನ್ನು ನೀಡುವುದರಲ್ಲಿ ಯಾವ ಕಸರನ್ನೂ ಉಳಿಸದಿದು. ಬಿಸಿ ಹಲ್ವಾದ ಮೇಲೆ ಒಂದು ಸ್ಕೂಪ್ ಐಸ್ ಕ್ರೀಂ ಹಾಕಿಕೊಂಡು ತಿಂದರಂತೂ ಕಿಚ್ಚು ಹಚ್ಚೇಬಿಡುವುದು ಸ್ವರ್ಗಕ್ಕೆ. ಬಯಲುಸೀಮೆಯವರಾದ ನಮಗೆ ಸಣ್ಣಂದಿನಲ್ಲಿ ಈ ‘ ಗಾಜರ್ ಕಾ ಹಲ್ವಾ’ ಕನಸಲ್ಲಿ ಕಂಡ ಸುಂದರ ಷೋಡಷಿಯಂತೆ, ಕೈಗೆಟುಕದ ಅಪ್ಸರೆಯಂತೆ ಭಾಸವಾಗುತ್ತಿತ್ತು. ಬಾಲಿವುಡ್ ಮೂವಿಗಳಲ್ಲಿ ಅಮ್ಮಂದಿರು ತಮ್ಮ ಹೀರೋ ಬೇಟಾಗಳಿಗೆ, ಹೀರೋಯಿನ್ ಗಳು ತಮ್ಮ ಹೀರೋಗಳಿಗೆ ‘ಖುದ್ ಅಪನೆ ಹಾಥೋಂ ಸೆ ಬನಾಕೆ’ ಈ ಹಲ್ವಾ ತಿನ್ನಿಸುತ್ತಿದ್ದರೆ ಅದೇನೋ ದೇವರೋಕದ ಸ್ವೀಟೇ ಇದ್ದೀತು..ನಮ್ಮಂಥ ಬಡಪಾಯಿಗಳಿಗೇನು ದಕ್ಕೀತು ಅಂತಲೇ ಅನ್ನಿಸುತ್ತಿತ್ತು. ಯಾಕೆಂದರೆ ನಮ್ಮನೆಗೆ ಬರುವ ಗಜ್ಜರಿ ಹೋಳುಗಳಾಗಿ ಹುಳಿಯಲ್ಲೋ, ಹೆರಕಲಾಗಿ ಪಚಡಿ ಅಥವಾ ಮೊಸರು ಭಜ್ಜಿಯಲ್ಲಷ್ಟೇ ದೊರೆಯುತ್ತಿತ್ತು. ಅಪರೂಪಕ್ಕೊಮ್ಮೆ ಬಿಸಿಬೇಳೆ ಭಾತಿನ ತಪ್ಪೇಲಿಯಲ್ಲಿ ಮುಳುಗೇಳುವ ಭಾಗ್ಯ ಸಿಕ್ಕರೆ ಅದೇ ದೊಡ್ಡದು. ಹೀಂಗ ಹಲ್ವಾ ಆಗುವ ಭಾಗ್ಯ ಪಾಪ ನಮ್ಮ ದೇಸಿ ಗಜ್ಜರಿಗಳಿಗಿರಲೇ ಇಲ್ಲ. ಯಾವಾಗಾದರೊಮ್ಮೆ (ಸಿನೆಮಾದಲ್ಲಿ ನೋಡಿ) ಆಸೆಪಟ್ಟು ಅಜ್ಜಿಯನ್ನೋ, ಅಮ್ಮನನ್ನೋ ಕೇಳಿದರೆ ಅವರಿಗೆ ನಮ್ಮ ಹಯಗ್ರೀವ, ಗೋದಿಕುಟ್ಟಿದ ಪಾಯಸ, ಹೂರಣಗಳ ಮುಂದೆ ‘ಅದೇನ, ಸೌಳ ಗಜ್ಜರಿ ಸಕ್ಕರಿ ಕುದಸಿದ್ರ ಪಕ್ವಾನ್ನ ಆಗತದೇನು’ ಅನ್ನುವ ಉತ್ತರಾನೇ ಸಿಕ್ಕತಿತ್ತು ಅನ್ನಿ. ಅಂತೂ ಈ ಗಗನಕುಸುಮ ನಮ್ಮ ಕೈಗೆಟುಕಿದ್ದು ಬಿಜಾಪೂರ ಬಿಟ್ಟು ದೆಲ್ಲಿಗೆ ಬಂದಮೇಲೇನೇ. ಇದು ಮೊಘಲಾಯಿ ಡಿಶ್ ಅಂತೆ. ಮೊಘಲ್ ದೊರೆಗಳಾಳಿದ ಊರಲ್ಲಿ ಚಳಿಗಾಲ ಮುಗಿವವರೆಗೂ ಈಗಲೂ ಇದಕ್ಕೆ ರಾಜವೈಭೋಗ. ಡಿಸೆಂಬರ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ನನ್ನ ಅವಳಿ ಮಕ್ಕಳಿಗೆ ಈ ಹಲ್ವಾ ಅನೂಚಾನವಾಗಿ ನಡೆದುಕೊಂಡು ಬಂದ ಒಂದು ಪ್ರಥಾ ..ಒಂದು ಶುಭ ಶಕುನ. ಹೀಗಾಗಿ ಮೊಘಲ್ ದೊರೆಗಳ ಈ ಡಿಶ್ ಇದೀಗ ರಾಣಿಯ ನಾಡಲ್ಲೂ ತನ್ನ ಪತಾಕೆ ಹಾರಿಸಿದೆ. ಫರಕು ಇಷ್ಟೇ..ಇಲ್ಲಿನ ನೀಲಿ ಮುಚ್ಚಳದ ಕ್ಯಾನಿನ ಹಾಲಿಗೆ ಕೆನೆಗಟ್ಟುವ ಭಾಗ್ಯವಿಲ್ಲ ..ಅಲ್ಲಿನ ‘ದಸ್ ಕಾ ದೇಡ್ ಕಿಲೋ’ ಇಲ್ಲಿ ಹಜಾರ್ ಕಾ ದೇಡ್ ಕಿಲೋ.(6.99 ಕ್ಕೆ ಕೆ.ಜಿ.). ಆಖಿರ್ ಬಾತ್ ಪೈಸೋಂಕಿ ನಹೀಂ..ಮಾ ಕೆ ಹಾಥ್ ಕಿ ಹಲ್ವಾ ಕಿ ಹೈ..ಏನಂತೀರಿ?
ವೃತ್ತಿಯಲ್ಲಿ ಹೃದಯ ತಜ್ಞರಾಗಿರುವ ಡಾ. ಸುರೇಶ ಸಗರದ ಅವರಿಗೆ ಸಾಹಿತ್ಯದಲ್ಲೂ ಅಷ್ಟೇ ಅಭಿರುಚಿ. ಅವರ ಕವನಗಳು ಹಲವಾರು ಕವನ ಸಂಕಲನಗಳಾಗಿ ಪ್ರಕಟವಾಗಿವೆ. ಬಸವಣ್ಣನವರನ್ನು ಕುರಿತು ಬರೆದ ಅವರ ಕವನಗಳು ಉತ್ತಮ ರಾಗಸಂಯೋಜನೆಯ ಜೊತೆಗೆ, ‘ಧ್ವನಿ ಸುರಳಿ’ ಗಳಾಗಿ ಕೇಳುವವರಿಗೆ ಲಭ್ಯವಾಗಿವೆ. ಹೃದಯ ಆರೋಗ್ಯ ಕುರಿತು ಸಾಮಾನ್ಯ ಜನತೆಗೆ ಅರ್ಥವಾಗುವ ರೀತಿಯಲ್ಲಿ ಹಲವಾರು ಪುಸ್ತಕಗಳನ್ನೂ ಮತ್ತು ಲೇಖನಗಳನ್ನೂ ಪ್ರಕಟಿಸಿದ್ದಾರೆ. ಪ್ರಸ್ತುತ ‘ವೈದ್ಯ ಸಂಪದ’ ದ ಪ್ರಧಾನ ಸಂಪಾದಕರಾಗಿದ್ದಾರೆ. ಅವರ ಕವನ ಸಂಕಲನದಿಂದ ಆಯ್ದ ಈ ಮೂರು ಕವನಗಳನ್ನು ನಿಮ್ಮ ಮುಂದೆ ಇಟ್ಟಿರುವೆ. ಓದಿ ಪ್ರತಿಕ್ರಿಯಿಸುತ್ತೀರಿ ಎಂದು ನಂಬಿರುವೆ. – —– ಇಂತಿ ಸಂಪಾದಕ
ಡಾ. ಸುರೇಶ ಸಗರದ
1) "ನಾನು"
ಎಲ್ಲಿ ಅಡಗಿತ್ತೋ, ಹೇಗೆ ಬಂತೋ
ಒಳ ಬಂದು ಗೂಡ ಕಟ್ಟಿತ್ತು
ಒಳಗಿದ್ದರೂ ಯಾವಾಗಲೂ
ಹೊರ ತೋರುವ ಆಸೆ ಹೊತ್ತು
ಪ್ರತಿ ಕ್ಷಣವೂ ಜಗಳ
ಕೊನೆಗೆ ಗೆಲ್ಲುವುದು ಅದೇ
ಆದಿಯಿಂದಲೂ ನಡೆದಿದೆ
ಈ ಕದನ, ಹೊಸ ಕವನ
ಅದೇ ಆತ್ಮಾವಲೋಕನ!
ಇಲ್ಲಿ ಕೆಲವರೇ ಗೆದ್ದರು
ಉಳಿದವರು ಇಲ್ಲೇ ಉಳಿದರು
ನಾನು ಹೋದರೆ ಹೋಗಬಹುದು
ಎಂದವರಂತು ಹೋದರು
ಇದು ಇರುವಿಕೆಯ ಸಂಕೇತ
ಇದ್ದೂ ಇಲ್ಲದಿರುವ ಸಂಕೇತವೇನು ?
2) “ಖಾಲಿ ಖಯಾಲಿ“ ಖಾಲಿ ಮಾಡುತ ನಡೆದಿರುವೆ ಕಾಲ ತುಂಬಿದ ಚೀಲವ ಖಾಲಿತನದ ಖಯಾಲಿಯಲ್ಲ ಸಾಲ ತೀರಿಸಲು ಇದೆಲ್ಲಾ! ತಳಕೆ ಕಲ್ಲು ಬಿಟ್ಟು ಕಾಗೆ ನೀರ ಕುಡಿಯತಂತೆ ಎಲ್ಲಿಂದ ಹೆಕ್ಕಿ ತರಲಿ ಕತೆಯ ಕಲ್ಲುಗಳ ತುಂಬಿದ ಕೊಡ ಹುಟ್ಟಿ ತುಳುಕುವುದು ನೋಡಿದಿರಾ? ಇದು ಬದುಕು ತುಂಬಾ ಥಳಕು ಬೆಳಕು ಯಾವಾಗ ಕೊಡ ಖಾಲಿ ಯಾರಿಗೆ ಏನೆಂದು ಕೊಡಲಿ ಕೊಟ್ಟವನು ಪುನಃ ಪುನಃ ಕೊಡಲಿ ಕೊಡಲಿ ಮತ್ತೆ ಕೊಡ ತುಂಬಲಿ!
3) “ನಾನೋ ನೀನೋ ?“ ಬದುಕನ್ನೇ ಹುಡುಕುತ್ತಿದ್ದೆ ತಡವರಿಸುತ್ತಾ ಬದುಕಿನಲ್ಲಿ ಅವರಿಗಾಗಿ ಇವರಿಗಾಗಿ ಎನ್ನುವ ನಾಟಕದಲ್ಲಿ ನನ್ನೊಳಗೆ ಆವರಿಸಿಕೊಂಡ ನಿನ್ನನ್ನೂ ಹುಡುಕುತ್ತಿದ್ದೆ ಕೂಡಿ ಕಳೆದ ದಾರಿಯಲ್ಲಿ ನಾನು ನಿನಗಾಗಿ ನೀನು ನನಗಾಗಿ ಎನ್ನುವ ಮರೀಚಿಕೆ ತೀರದ ಅತಿ ದಾಹ ಪಂಚ ಭೂತಗಳ ಈ ಪಂಚಾಯಿತಿ ಆ ನಿರ್ದೇಶಕನ ದೂಷಿಸಿದೆ ಮತ್ತೆ ಮತ್ತೆ