ನಮ್ಮ ಅಳತೆಯನ್ನು ತಿಳಿಸುತ್ತಿರುವ ಲಾಕ್ ಡೌನ್ ಮತ್ತು Lock down ಕರಾಮತ್ತು

ಈ ವಾರದ ಸಂಚಿಕೆಯಲ್ಲಿ ಲಾಕ್ ಡೌನ್ ಬಗ್ಗೆ ಎರಡು ರೀತಿಯ ವಿಶಿಷ್ಟ ಬರಹಗಳಿವೆ. ಮೊದಲ ಬಾರಿಗೆ ಅನಿವಾಸಿ ಈ-ಜಗುಲಿಯ (ಮೇ ತಿಂಗಳ ೩೦ನೇ ತಾರೀಖು) ಹರಟೆ, ಸಮಾಜಿಕ ಮಾಧ್ಯಮದಲ್ಲಿ ಶುರುವಾಯಿತು. ಇದರಲ್ಲಿ ಲಾಕ್ ಡೌನ್ ಬಗೆಗೆ ನಡೆದ ಹರಟೆಯಲ್ಲಿ ಹಂಚಿಕೊಂಡ ಚಿಂತನೆ ಮತ್ತು ಇದರಿಂದ ಪ್ರೇರೇಪಿತವಾಗಿ ಬರೆದ ಕವಿತೆಯನ್ನು ನಿಮ್ಮ ಮುಂದಿಡಲಾಗಿದೆ.
ಮೊದಲನೆಯದಾಗಿ, ಯೋಗೀಂದ್ರ ಮರವಂತೆಯವರ ಚಿಂತನೆಯ ಲಹರಿ, ನಾವು ಜೀವನದ ಎಲ್ಲಾ ಘಟ್ಟಗಳಲ್ಲೂ ಅತಿ ಎಚ್ಚರಿಕೆಯಿಂದ, ನಮ್ಮ ಸ್ವಾರ್ಥದ ದೃಷ್ಟಿಯಿಂದ ಅಳೆದು, ಸುರಿದು, ನಮ್ಮ ಮುಂದಿರುವ ಪರಿಸ್ಥಿತಿಗಳನ್ನು ನಿಭಾಯಿಸುವುದರಲ್ಲಿ ನಿಸ್ಸೀಮರಾಗಿದ್ದರೂ, ನಾವೆಂದು ಊಹಿಸದಿದ್ದ, ಪ್ರಪ೦ಚವನ್ನೆ ತಲ್ಲಣಗೊಳಿಸಿದ, ನಮ್ಮ ಅಳತೆಗೆ ಸಿಗಲಾರದ ಸ್ಥಿತಿ ಎದುರಾದಾಗ ನಮ್ಮ ನಿಜವಾದ ಬಣ್ಣ ಬಯಲಾಗುತ್ತದೆಯೆ ಅಥವಾ ನಮಗೇ ಅರಿವಿಲ್ಲದೆ ನಮ್ಮಗಳಲ್ಲಿ ಹುದುಗಿರಬಹುದಾದ ಹೊಸ ಸ್ಥೈರ್ಯ, ಅನುಕಂಪ, ಮಾನವೀಯತೆಯ ಪರಿಚಯವಾಗುತ್ತದೆಯೆ ಎನ್ನುವ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ.
ಎರಡನೆಯದಾಗಿ, ರಮ್ಯಾ ಭಾದ್ರಿಯವರ ಕವಿತೆ, ಈ ಅಭೂತಪೂರ್ವ ಲೋಕದಲ್ಲಿ, ನಾವು ಕಾಲದ ಅನುಕೂಲಕ್ಕಾಗಿ ರಚಿಸಿಕೊಂಡ, ಸಾಮಾಜಿಕ ಮಾಧ್ಯಮದ ಹೊಸ ಸಮಾಜ ತ೦ದುಕೊಟ್ಟ ಸ೦ವಹನೆ, ಸಾಂತ್ವನ, ಸಂತೋಷಗಳ ಪರಿಚಯವನ್ನು ಹಾಸ್ಯದ ಸಿಹಿ ಲೇಪಿಸಿ, ಪ್ರಾಸಬದ್ಧವಾಗಿ ನಮ್ಮನ್ನು ರಂಜಿಸುತ್ತದೆ. ಈ ಕವಿತೆಯಲ್ಲಿ ಮುಂದೆ ಎದುರಿಸಬೇಕಾದ ಭವಿಷ್ಯದ ಬಗೆಗಿನ ಕಳಕಳಿ ಮತ್ತು ನಮ್ಮ ಪರಿಚಿತ, ವಾಸ್ತವ ಪ್ರಪ೦ಚಕ್ಕೆ ತೆರಳುವ ಕಾತುರ, ಇದನ್ನು ನಾವೆಲ್ಲರು ಒಟ್ಟಾಗಿ ಎದುರಿಸಿ, ಗುರಿಸೇರಬಲ್ಲೆವೆನ್ನುವ ಆಶಾವಾದವೂ ಸೇರಿದೆ – ಸಂ

ನಮ್ಮ ಅಳತೆಯನ್ನು ತಿಳಿಸುತ್ತಿರುವ ಲಾಕ್ ಡೌನ್

(ಈ-ಜಗುಲಿ, ಅನಿವಾಸಿ ಯು ಕೆ ಕೂಟದ ಮೊದಲ ಹರಟೆಯಲ್ಲಿ ಯೋಗೀಂದ್ರ ಮರವಂತೆ ಹಂಚಿಕೊಂಡ ಕಿರುಲಹರಿ)

This image has an empty alt attribute; its file name is e-jaguli-1.jpg
ಚಿತ್ರ‌ . ಲಕ್ಷ್ಮೀನಾರಾಯಣ ಗುಡೂರ

ಯಾವ ಕಾಲಕ್ಕೆ ಯಾರನ್ನು ಎದುರು ಹಾಕಿಕೊಳ್ಳಬಾರದು, ಅಂತ ಯೋಚಿಸುತ್ತಲೇ ಘಟನೆಗಳನ್ನು, ಮನುಷ್ಯರನ್ನು ಎದುರಿಸುವವರು ನಾವು. ಪರೀಕ್ಷೆಯೋ “ವೈವಾ”ವೋ ಇದ್ದರೆ ಸಂಬಂಧಪಟ್ಟ ಅಧ್ಯಾಪಕರನ್ನು ಎದುರು ಹಾಕಿಕೊಂಡರೆ ಉತ್ತೀರ್ಣರಾಗುತ್ತೇವೋ ಇಲ್ಲವೋ ಎನ್ನುವ ಭಯ ಇರುತ್ತದಲ್ಲ ಹಾಗೆ ಈ ಕೋವಿಡ್ ಲಾಕ್ ಡೌನ್ ಕಾಲದಲ್ಲಿ ವೈದ್ಯರನ್ನು ಎದುರು ಹಾಕಿಕೊಂಡರೆ ಕಷ್ಟ. ಹಲವು ವೈದ್ಯಮಿತ್ರರೇ ಕೂಡಿ ಸಂಘಟಿಸಿರುವ ಅನಿವಾಸಿ ಬಳಗದ “ಈ -ಜಗುಲಿ” ಕಾರ್ಯಕ್ರಮಕ್ಕೆ ಹಾಗಾಗಿ ಬರುವುದಿಲ್ಲ ಅಂತ ಹೇಳುವ ಹಾಗಿರಲಿಲ್ಲ.

ನಾವೆಲ್ಲರೂ ಈ ” ಲಾಕ್ ಡೌನ್” ಬಂಧನದಲ್ಲಿ ಇರುವವರು. ಈಗಾಗಲೇ ಬಂಧನದಲ್ಲಿ ಇರುವವರನ್ನು “ಈ-ಜಗುಲಿ “ಯಲ್ಲಿ ತಂದು ಮತ್ತೆ ಬಂಧಿಸಿದ್ದು, ಕೈದಿಗಳ ಸಮ್ಮೇಳನದ ತರಹ ಕಾಣಿಸುತ್ತಿದೆ . ಮತ್ತೆ ಜಗುಲಿಯಲ್ಲಿ ಯಾರೊಡನೆ ಕೂತು ಮಾತಾಡಿದರೂ ಅದು ವಿಶಿಷ್ಟ ಅನುಭವವೇ. ಜಗುಲಿಗೆ ಕಿಟಕಿ ,ಬಾಗಿಲು,ಕಂಬಿ, ಬೀಗ, ಅಗುಳಿ ಯಾವುವೂ ಇರುವುದಿಲ್ಲ. ಖುಲ್ಲಂ ಖುಲ್ಲಾ ಮಾತಾಡುವುದಕ್ಕೆ ಬಹಳ ಸೂಕ್ತ ಜಾಗ. ಮನಸಿನ ಆಳದ್ದು, ತೀರ ಒಳಗಿನದು ಜಗುಲಿಯಲ್ಲಿ ಕೂತು ಮಾತಾನಾಡುವಾಗ ಅನಾಯಾಸವಾಗಿ ಹೊರಗೆ ಬಂದು ಬಿಡುತ್ತದೆ. ಅಥವಾ ಒಬ್ಬರೇ ಕೂತು ಯೋಚಿಸಲಿಕ್ಕೂ ಆತ್ಮ ವಿಮರ್ಶೆ ಮಾಡಿಕೊಳ್ಳಲಿಕ್ಕೂ ಈ ಜಗುಲಿ, ಆ ಜಗುಲಿ ಎಲ್ಲ ಜಗುಲಿಗಳೂ ಪ್ರಶಸ್ತ . ಎಲ್ಲರ ಬದುಕಿನಲ್ಲಿ ಏನೋ ಒಂದು ತೀವ್ರವಾದದ್ದು ನಡೀತಾ ಇರುವಾಗ ಹೀಗೆ ಜಗುಲಿ ಮೇಲೆ ನಾವೆಲ್ಲ ಕೂತು ಮಾತಾಡುತ್ತಿರುವುದು ಹಿತ ಅನ್ನಿಸುತ್ತಾ ಇದೆ.

ದಿನ ಬೆಳಗಾದರೆ ಅಳತೆಕೋಲು ಅಥವಾ ಸ್ಕೇಲ್ ಹಿಡಿದುಕೊಂಡು ಓಡಾಡುವವರು ನಾವು. ನಮ್ಮ ಅಳತೆ ಪಕ್ಕದವರದ್ದು ಹೇಗೆ ,ಎದುರು ಸಿಕ್ಕವರದ್ದು ಹೇಗೆ ,ಮತ್ತೊಬ್ಬರದು ಏನು, ಹೇಗೆ ಎಂದು ಅಳೆಯುತ್ತಿರುತ್ತದೆ. ನಮ್ಮ ಅವರ ಇವರ ಹುದ್ದೆ, ಕೌಶಲ ಪ್ರತಿಭೆ, ಜೀವನ ಶೈಲಿ, ಸಂಸಾರ, ಸುಖ ದುಃಖ, ಕಲೆ, ಸಾಹಿತ್ಯ, ಆರೋಗ್ಯ ಎಲ್ಲವೂ ನಿರಂತರವಾಗಿ ನಮ್ಮ ನಮ್ಮ ಕೈಯ ಅಳತೆಕೋಲಿನ ಅಳತೆಯ ವಸ್ತುಗಳು . ಬೆಳಗಿಂದ ರಾತ್ರಿಯ ತನಕ, ಹುಟ್ಟಿನಿಂದ ಸಾವಿನ ತನಕ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಳತೆ ಪ್ರಕ್ರಿಯೆಯಲ್ಲಿ ತಲ್ಲೀನರು ನಾವು. ಈಗಿನ ಲಾಕ್ ಡೌನ್, ಕೊರೊನ ದಾಳಿ ಸ್ವಲ್ಪ ಮಟ್ಟಿಗೆ ನಮ್ಮ ನಿಜವಾದ ಅಳತೆಯನ್ನು ನಾವಿದ್ದಲ್ಲಿಗೆ ತಂದು ಒಪ್ಪಿಸುವ ಕೆಲಸ ಮಾಡಿದೆ. ಈ ಕಾಲಕ್ಕೆ ಆಗಬಾರದ ಅನಾಹುತಗಳು, ಅನಾವಶ್ಯಕ ಸಾವುಗಳು, ಸಂಕಟಗಳು ಸುಮಾರು ಆಗಿದ್ದರೂ ಅವುಗಳ ಎಡೆಯಲ್ಲಿ ನಮ್ಮನ್ನು, ನಮ್ಮ ಸುತ್ತಮುತ್ತಲನ್ನು ಅರಿಯುವ, ತಿಳಿಯುವ ಅವಕಾಶ ಲಾಕ್ ಡೌನ್ ಮಾಡಿಕೊಟ್ಟಿದೆ.

ಮೊನ್ನೆ ಮೊನ್ನೆ ಮೈಸೂರಲ್ಲಿ ನಡೆದ ಒಂದು ಘಟನೆಯ ಬಗ್ಗೆ ನೀವು ಕೇಳಿರಬಹುದು. ಅಲ್ಲಿನ ಒಂದು ಸಂಸ್ಥೆ ಕಳೆದ ಒಂದು ತಿಂಗಳಿಂದ ಈ ಕಾಲಕ್ಕೆ ಆಶ್ರಯ ಕಳಕೊಂಡವರಿಗೆ, ಹಸಿದ ಕಾರ್ಮಿಕರಿಗೆ, ಊಟ ನೀಡುವ ವ್ಯವಸ್ಥೆ ಮಾಡಿದೆ. ಇಂತಹ ಅನ್ನದಾನ ಶಿಬಿರಕ್ಕೆ ಕಮಲಮ್ಮ ಎನ್ನುವ ಎಪ್ಪತ್ತು ಪ್ರಾಯದ ಮಹಿಳೆ ನಡೆದು ಬಂದಳು. ಇವಳನ್ನು ನೋಡಿದ ಸಂಘಟಕರು ಈಕೆ ಸಹ ಊಟಕ್ಕೆ ಬಂದಿರಬೇಕು ಅಂದುಕೊಂಡರು. ಅಲ್ಲಿಗೆ ಬಂದ ಈಕೆ ಶಿಬಿರದ ಆಯೋಜಕರನ್ನು ಕಂಡು ಅವರಿಗೆ ಐದುನೂರು ರೊಪಾಯಿಗಳನ್ನು ಕೊಟ್ಟು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಸಣ್ಣ ದೇಣಿಗೆ ತೆಗೆದುಕೊಳ್ಳಿ ಎಂದಳು. ತಿಂಗಳಿಗೆ ಆರುನೂರು ರೊಪಾಯಿಯ ಪಿಂಚಣಿ ಪಡೆಯುವವಳು ಕಮಲಮ್ಮ, ಆಕೆಯ ವಯಸ್ಸಿನ ಕಾರಣದಿಂದ ಮಾಡುತ್ತಿದ್ದ ಮನೆಗೆಲಸವೂ ತಪ್ಪಿಹೋಗಿತ್ತು . ಸಂಘಟಕರೂ ಮೊದಲಿಗೆ ಬೇಡವೆಂದರೂ ಇಷ್ಟು ಉದಾತ್ತ ಯೋಚನೆಯ ಸರಳ ಜೀವಿಗೆ ಗೌರವ ಸೂಚಕವಾಗಿ ಹಣವನ್ನು ಸ್ವೀಕರಿಸಿದರು. ಕೋವಿಡ್ ಸಂಧಿಗ್ಧದ ಈ ಕಾಲದಲ್ಲಿ ಹಲವು ದಾನಿಗಳು ಜಗತ್ತಿನ ಮೂಲೆಮೂಲೆಯಲ್ಲಿ ಹಣದ ದೇಣಿಗೆ ನೀಡಿದ್ದಾರೆ. ಟಾಟಾ ,ಪ್ರೇಂಜಿ ,ಗೇಟ್ಸ್ ಇನ್ನಿತರ ಉದ್ಯಮಿಗಳು ನಮ್ಮ ಊಹೆಗೆ ಮೀರಿದ ಮೊತ್ತವನ್ನು ದಾನ ಮಾಡಿದ್ದಾರೆ . ಆದರೆ ಈ ಜಗತ್ತಿನ ಮನುಷ್ಯರನ್ನೆಲ್ಲ ಒಂದೆಡೆ ಅವರ ದುಡಿಮೆಯ ಆಧಾರದ ಮೇಲೆ ಸಾಲಾಗಿ ನಿಲ್ಲಿಸಿದರೆ ಆ ಸಾಲಿನ ಕೊನೆಯ ಕೆಲವು ಜನರ ಪೈಕಿ ಒಬ್ಬಳಾಗಿ ಕಾಣುವ ಕಮಲಮ್ಮ ಕೊಟ್ಟ ದೇಣಿಗೆ ಮುಖಬೆಲೆಯಲ್ಲಿ ಧೂಳಿನ ಕಣದಂತೆ, ದೊಡ್ಡ ಮೊತ್ತಗಳ ದೇಣಿಗೆಯ ಎದುರಿಗೆ ಕಂಡರೂ ಮಾನವೀಯ ಮೌಲ್ಯದ ನೆಲೆಯಲ್ಲಿ ಅತ್ಯಂತ ಶ್ರೇಷ್ಠವಾದುದು. ಕನಿಷ್ಠ ಜೀವನಶೈಲಿ ದುಡಿಮೆಯಲ್ಲಿರುವ ವ್ಯಕ್ತಿಯ ಗರಿಷ್ಠ ಸಹಾಯ, ಸಹಕಾರ, ದಾನ ಮತ್ತು ಹೃದಯ ವೈಶಾಲ್ಯತೆಯ ಉದಾಹರಣೆ ಇದು. ಇಂತಹ ನೂರಾರು ಸೂಕ್ಷ್ಮ ಸಂವೇದನಾಶೀಲ ಕತೆಗಳು ಈ ಕಾಲಕ್ಕೆ ಜಗತ್ತಿನ ಮೂಲೆಮೂಲೆಯಲ್ಲಿ ಕಂಡುಕೇಳಿಬರುತ್ತಿವೆ . ಮತ್ತೆ ಇವೇ ನಮ್ಮನ್ನು ಸರಿಯಾಗಿ ಅಳೆಯಲಿಕ್ಕೆ ತೂಗಲಿಕ್ಕೆ ಸಹಾಯ ಮಾಡುತ್ತಿವೆ . ತನ್ನೊಳಗೆ ಇಂತಹ ಹಲವು ಕಥೆ, ವ್ಯಥೆ, ಕತೆಯ ವ್ಯಥೆ ,ವ್ಯಥೆಯ ಕತೆಗಳನ್ನು ತುಂಬಿಕೊಂಡ ಲಾಕ್ ಡೌನ್ ಮುಂದೊಂದು ದಿನ ಪೂರ್ತಿಯಾಗಿ ಮುಗಿಯಬಹುದು. ಆದರೆ ಈ ಸಮಯ ನಮಗೆ ಕೊಟ್ಟ ಕೊಡುತ್ತಿರುವ ಸ್ಪೂರ್ತಿದಾಯಕ ಘಟನೆಗಳು ಸ್ವಅವಲೋಕನದ ಅವಕಾಶ ಮುಂದುವರಿಯುತ್ತಲೇ ಇರಬೇಕಾಗಿದೆ . ನಿತ್ಯವೂ ಮನೆಯಲ್ಲಿ ಕನ್ನಡಿಯಲ್ಲಿ ಮುಖ ನೋಡಿಕೊಳ್ಳದೆ ಹೊರಬೀಳದ ನಾವು ಹೀಗೆ ನಮಗೆ ಲಭ್ಯ ಆಗಿರುವ ಮಾನವೀಯತೆಯ ಮನುಷ್ಯತ್ವದ ಕನ್ನಡಿಗಳಲ್ಲಿ ದಿನವೂ ನಮ್ಮನ್ನು ನೋಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕಾಗಿದೆ. ಲಾಕ್ ಡೌನ್ ಕಾಲ ನಮ್ಮ ಸರಿಯಾದ ನಿಜವಾದ ಅಳತೆಗಳನ್ನು ನಮಗೆ ಮುಟ್ಟಿಸುವ ಕನ್ನಡಿಯಾಗಲಿ ಎನ್ನುವ ಹಾರೈಕೆಯೊಂದಿಗೆ …. ಅವಕಾಶ ಆಲಿಸುವಿಕೆಗೆ ವಂದನೆಗಳು.

ಯೋಗೀಂದ್ರ ಮರವಂತೆ

Lock down ಕರಾಮತ್ತು

courtesy -ITV

ಪ್ರಪಂಚದ ಮೂಲೆಯೊಂದರಿಂದ ಕೊರೋನಾ ಸುದ್ದಿ ಕೇಳಿ ಬಂತು
ನಮಗ್ಯಾಕೆ ಅದರ ಉಸಾಬರಿಯಂದು ಮನವಂತು
ನೋಡುತ್ತಿದ್ದಂತೆಯೇ ಊರು ಕೇರಿ ಬೀದಿಯವರು ಹರಡಿತು
ಹೇಗೋಎಂತು ಕೊರೋನಾ ಬಂದೆ ಬಂತು ಜೊತೆಗೆ lockdownನು ತಂತು!

ಎಲ್ಲೆಲ್ಲೂ Lock downನದೆ ಕರಾಮತ್ತು
ಇದರರಿಂದ ಬಿತ್ತು ಎಲ್ಲರ ಸ್ವಾತಂತ್ರ್ಯಕ್ಕೂ ಕುತ್ತು
ಸೃಷ್ಟಿಯಾಯ್ತು ಅಂತರ್ಜಾಲದ ಸುತ್ತ ಸುತ್ತುವ ಮನೆಯಂಬ ಹೊಸಜಗತ್ತು
ಇಲ್ಲಿ ದಿನ ವಾರಗಳೇ ತಿಳಿಯದೆ ಕಳೆದಿದೆ ಹೊತ್ತು

ಅಮ್ಮನಿಗೆ ಅಡುಗೆಯ ಚಿಂತೆ
ನಿಲ್ಲದ ಅಪ್ಪನ ಮೀಟಿಂಗ್ಗಳ ಘಂಟೆ
ಬಗೆಹರಿಯದ ಮಕ್ಕಳ ತುಂಟಾಟದ ತಂಟೆ
ಅಜ್ಜ ಅಜ್ಜಿಯರ ಪ್ರತ್ಯೇಕತೆಗೆ ವಿಡಿಯೋ ಕಾಲ್ ಒಂದೇ ಸಂಗಾತಿಯಂತೆ

ಜೊತೆಯಲ್ಲಿದ್ದರು ಇಲ್ಲದ ಹಾಗೆ ಕಳೆದ ಸಮಯವೇ ಹೆಚ್ಚು
ಒಟ್ಟಿಗೆ ಬೆರೆಯಲು ಸಾವಕಾಶವಿದ್ದರೂ social media ಒಡನಾಟವೇಅಚ್ಚುಮೆಚ್ಚು
ಹಿಂದೆಂದೂ ಇರದ ಮುಂದೆಂದೂ ಬಾರದ ಪರಿವಾರದೊಂದಿಗಿನ ಸುಂದರ ಕ್ಷಣಗಳಿವು
ಎಂದೆಂದೂ ಚಂದದ ಸವಿ ನೆನಪುಗಳನ್ನಾಗಿಸುವವರು ನಾವು

ಹಿಂತಿರುಗಿ ನೋಡಲು ಆ ಹಳೆಯ ಬದುಕಿಗೆ ಮರಳಲು ಹಾತೊರೆದಿದೆಮನ
ಭವಿಷ್ಯದ ಅನಿಶ್ಚಿತತೆಗೆ ಕಳವಳಗೊಂಡು ದೂಡುವಂತಾಗಿದೆ ದಿನ
ಏನೇ ಆದರೂ ಪರಿವಾರದ ಒಗ್ಗಟ್ಟು ನೀಡಿಹುದು ಎದುರಿಸುವಧೈರ್ಯವನ್ನ
ಹೊಸ ಹುರುಪಿನಿಂದ ಕಾರ್ಯೋನ್ಮುಖರಾಗಿ ನಿರೀಕ್ಷಿಸುವ ಹೊಸಬದುಕನ್ನ.

ರಮ್ಯ ಭಾದ್ರಿ

                                                                                                                     

ಪರಿಸರದ ಗೀತೆ

ಯುನ್ನೈಟೆಡ್ ನೇಶನ್(United Nations) ಪ್ರತಿವರ್ಷ ” ವಿಶ್ವ ಪರಿಸರ ದಿನ” ವನ್ನು ಜೂನ್ ೫ ನೇ ತಾರೀಖು ೧೯೭೪ ರಿ೦ದ ಆಚರಿಸುತ್ತಿದೆ. ಇತ್ತೀಚಿನ ದಶಕಗಳಲ್ಲಿ ಹೆಚ್ಚಾಗುತ್ತಿರುವ ಜಲ ಮತ್ತು ಭೂಮಾಲಿನ್ಯ, ಜಾಗತಿಕ ತಾಪಮಾನದ ಏರಿಕೆ, ಪ್ರಾಣಿಗಳ ಮತ್ತು ಪ್ರಕೃತಿಯ ಮೇಲೆ ಮಾನವನಿ೦ದಾಗುತ್ತಿರುವ ದುಷ್ಪರಿಣಾಮಗಳು ಇದರೆಲ್ಲದರ ಬಗ್ಗೆ ಪ್ರಪ೦ಚದಾದ್ಯ೦ತ ಜಾಗೃತಿಯನ್ನು ಮೂಡಿಸುವುದು ಈ ಆಚರಣೆಯ ಉದ್ದೇಶ. ಬಹಳಷ್ಟು ಸ೦ಘ, ಸ೦ಸ್ಥೆಗಳು ಈ ವಿಷಯಯನ್ನು ನಮ್ಮೆಲ್ಲರ ಮತ್ತು ಸರ್ಕಾರಗಳ ಗಮನಕ್ಕೆ ತರಲು ಅವಿರತವಾಗಿ ದುಡಿಯುತ್ತಿವೆ. ನಾವುಗಳೆಲ್ಲರೂ ನಮ್ಮ ಈ ಸು೦ದರ ವಿಶ್ವಕ್ಕಾದ ಮಾಲಿನ್ಯವನ್ನು ಹತ್ತಿಕ್ಕಲು, ನಮ್ಮ ಕೈಲಾದ ಅಳಿಲು ಸೇವೆಯನ್ನು ಮಾಡಲು ಸಜ್ಜಾಗಿದ್ದೇವೆ೦ದು ನನ್ನ ಭಾವನೆ. ಅದು ಮನೆಯಲ್ಲಿ ಕಸ ವಿ೦ಗಡಿಸುವುದರಿ೦ದ ಶುರುವಾಗಿ, ವಿದ್ಯುತ್ ದೀಪ ಆರಿಸುವುದರಿ೦ದ ವಿದ್ಯತ್ ವಾಹನಗಳನ್ನು ಉಪಯೋಗಿಸುವ ತನಕ ಬೆಳೆಯುತ್ತಿರುವುದು ಸ೦ತಸದ ವಿಷಯ. ಈ ಪ್ರಯತ್ನ ನಮ್ಮ ಮು೦ದಿನ ಪೀಳಿಗೆಗೆ ನ್ಯಾಯವನ್ನು ಸಲ್ಲಿಸುವ ಜವಾಬ್ದಾರಿ ಅಷ್ಟೇ ಅಲ್ಲ, ನಾವುಗಳು ನೋಡಿ ಬೆಳೆದ, ನಮ್ಮನ್ನು ನಲಿಸಿದ ಪ್ರಕೃತಿ, ಪ್ರಾಣಿಗಳಿಗೆ ನಾವು ಸಲ್ಲಿಸಬೇಕಾಗಿರುವ ಋಣ.
ಲ೦ಡನ್ ಎಕ್ಟಿ೦ಕ್ಷನ್ ರೆಬೆಲ್ಲಿಯನ್ (Extinction Rebellion)ಸ೦ಘದ ಮುಷ್ಕರ, ಸ್ವೀಡನ್ ದೇಶದ ಬಾಲೆ ಗ್ರೆಟಾ ತುನ್ಬರ್ಗ್ ( Greta Thunberg) ಪ್ರಕೃತಿ ಮಾಲಿನ್ಯವನ್ನು ತಡೆಗಟ್ಟಲು ಮಾಡಿದ ಕ್ರಾ೦ತಿ ಇವೆಲ್ಲ ಪ್ರಕೃತಿಯನ್ನು ಉಳಿಸಲು ಮಾನವ ಮಾಡುತ್ತಿರುವ ವಿಧವಿಧದ ಹೋರಾಟವನ್ನು ನೆನಪಿಸುತ್ತವೆ.
“People must feel that the natural world is important and valuable and beautiful and wonderful and an amazement and a pleasure” – David Attenbrough
ಡಾ ಪ್ರಸಾದ್ ರವರು ಈ ವಾರ ತಮ್ಮ ಪರಿಸರ ಗೀತೆಯಲ್ಲಿ, ನೂರಾರು ವರ್ಷಗಳು ಬೆಳೆದು, ತನ್ನ ಬೇರನ್ನು ಭದ್ರವಾಗಿ ನಿಲ್ಲಿಸಿ, ಬಿಸಿಲು ಮಳೆ ಗಾಳಿಗಂಜದೆ ನಿಂತು ಉಸಿರು, ಹೂವು, ಹಣ್ಣು ಆಶ್ರಯವನ್ನು ಎಡಬಿಡದೆ ನಮಗಿತ್ತು, ನಮ್ಮನ್ನು ಸಲಹುವ ಮರಗಳನ್ನು ಭಾವನಾತ್ಮಕವಾಗಿ ಬಣ್ಣಿಸಿರುವುದಲ್ಲದೆ, ತನ್ನ ಸ್ವಾರ್ಥಕ್ಕಾಗಿ ಈ ಮರಗಳನ್ನು ಕ್ಷಣಮಾತ್ರದಲ್ಲಿ ಧ್ವಂಸ ಮಾಡುವ ಮಾನವನ ಕ್ರೂರತೆಗೆ  ಕಾನನವೆ ಕಂಬನಿ ಮಿಡಿದ ಚಿತ್ರಣವನ್ನು ನಮ್ಮ ಮುಂದಿಟ್ಟಿದ್ದಾರೆ.
ಈ ಪರಿಸರ ಗೀತೆ, ನಮ್ಮ ನಿಮ್ಮ ಮೋಹಕ, ಅಧ್ಬುತ, ಶಾ೦ತಿಯ ಬೀಡಾದ ಈ ಪ್ರಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಆದ್ಯ ಕರ್ತವ್ಯವನ್ನು ಮತ್ತೊಮ್ಮೆ ನಮಗೆ ಮನವರಿಕೆ ಮಾಡಿಕೊಟ್ಟಿದೆ. ಪರಿಸರ ದಿನಾಚರಣೆಗೆ ಸೂಕ್ತವಾದ ಗೌರವ ಈ ಕವಿತೆ -ಸಂ

ಪರಿಸರದ ಗೀತೆ

ಮರಗಳು, ಮರಗಳು, ಮರಗಳು
ಎಲ್ಲೆಡೆ ಹಸುರಿನ ಮರಗಳು
ಗಿರಿಯನು ತಬ್ಬಿದ ತರುಗಳು
ಕಣಿವೆಯ ತುಂಬಿದ ವನಗಳು

ಉಸಿರನ್ನೀಯುವ ಮರಗಳು
ಸಿಹಿ ಕಹಿಯನ್ನುಣಿಸುವ ಮರಗಳು
ಸ್ಥಾವರ ಹಸುರಿನ ಸಂತಾನಗಳು
ನಿಶ್ಚಲ ಮೌನ ತಪಸ್ವಿಗಳು

ಹೂವನು ತೊಟ್ಟು ಮೆರೆಯುವ ಮರಗಳು
ಹಣ್ಣನು ಕೊಟ್ಟು ಹರಸುವ ಮರಗಳು
ಋತು ಋತುವಿಗು ಬದಲಾಗುವ ಮರಗಳು
ಸಾರ್ಥಕ ಪರಾರ್ಥಕ ಜೀವಿಗಳು

ಬಂದೇ ಬಂದ ಸ್ವಾರ್ಥ ಮಾನವ
ಕೊಡಲಿಯ ಹಿಡಿದ ಧೂರ್ತ ದಾನವ
ಕೊಚ್ಚಿದ, ಚಚ್ಚಿದ ಮರಗಳ ಬುಡವ
ಸ್ತಬ್ಧವಾಯಿತು ಕಾನನ ಕಲರವ

ಉರುಳುತ ಬಿದ್ದವು ಮರಗಳು
ಕಂಬನಿಗರೆದವು ಮಳೆ ಹನಿಗಳು
ನಿಡುಸುಯ್ದವು ಕಾನನ ಸ್ವರಗಳು
ವಿಕಾರ ವಿನಾಶದ ಚಿತ್ತಾರಗಳು

ಕಾಡಿಗೆ ಹಚ್ಚಿದ ಬೆಂಕಿಯ ಕಿಚ್ಚು
ತಾಯಿಯ ಬೆತ್ತಲೆಗೊಳಿಸುವ ಹುಚ್ಚು
ಅಂದಿನ ಸುಂದರ ಸಮೃದ್ಧಿಯ ಕಾಡು
ಇಂದಿನ ದಾರುಣ ಸುಡುಗಾಡು

ಕುಗ್ಗಿವೆ, ತಗ್ಗಿವೆ ಹಸುರಿನ ನೆಲೆಗಳು
ಬತ್ತಿವೆ ನದಿ ಹೊಳೆ ಕೆರೆಗಳು
ಪ್ರಗತಿಯ ಹೆಸರಲಿ ವಿಶ್ವ ವಿನಾಶ
ಬಿಸಿಲು ಮಳೆಗಳ ತೀವ್ರ ಆಕ್ರೋಶ

ಬನ್ನಿರಿ ಚಿಣ್ಣರೆ ಛಲವನು ಹಿಡಿದು
ಹಸುರಿನ ಕ್ರಾಂತಿಯು ನಡೆಯಲಿ ಇಂದು
ತೊಲಗಲಿ ಸ್ವಾರ್ಥ ಪ್ರಲೋಭಗಳು
ಚಿಮ್ಮಲಿ ಹಸುರಿನ ಸಸಿಗಳು

ನಾಳಿನ ನಾಡಿದು ನಿಮ್ಮಯದು
ಇದನುಳಿಸುವ ಹೊಣೆ ನಮ್ಮೆಲ್ಲರದು
ಪರಿಸರ ಪ್ರೇಮವ ಬೆಳೆಸೋಣ
ಮರಗಳ ಹಸಿರನು ಉಳಿಸೋಣ

ಡಾ. ಜಿ. ಎಸ್. ಶಿವಪ್ರಸಾದ್ ಶೆಫೀಲ್ಡ್ , ಯು. ಕೆ .