ಬ್ರಿಟ್-ಕನ್ನಡಿಗರ ಕವನಗಳು: ತುಂಗೆ-ಟೆಮ್ಸ್ ನದಿಗಳ ನಡು ಸೇತುವೆ

ಕನ್ನಡದಿಂದ ಇಂಗ್ಲಿಷ್ ಗೆ ಭಾವಾನುವಾದ ಮಾಡಿದರು. ಇಂಗ್ಲಿಷ್ ನಿಂದ ಕನ್ನಡಕ್ಕೆ ದಾಟಿಸಿದರು. ಧಾರೆ ಎರೆದರು. ಜೀವ ಕೊಟ್ಟರು, ತಮ್ಮ ಖಾಸಗಿ ಅನುಭವಗಳಿಗೆ, ಕ್ಷಣಗಳಿಗೆ, ಭಾವನೆಗಳಿಗೆ. ಮೆಚ್ಚಿದರು, ಯಾವುದೋ ದೇಶ ಭಾಷೆ ಸಂಸ್ಕೃತಿಗೆ ಸೇರಿದ ಕವನವನ್ನು, ಅದಕ್ಕೂ ಕನ್ನಡದ ಕಂಪನ್ನ ಹೊದಿಸಿದರು. ಕನ್ನಡದ ಮನಸ್ಸಿನಿಂದ ಹೊಮ್ಮಿದ ಕವನಗಳು ಇಂಗ್ಲಿಷ್ ನಲ್ಲಿ, ಇಂಗ್ಲೆಂಡಿನ ನೆಲದ ಮೇಲೆ ನೆಲೆ ನಿಂತವು. ಆ ದಿನ ನವೆಂಬರ್ ೫, ೨೦೧೬. ಸ್ಥಳ: ಡಾರ್ಬಿ. ಕಾರ್ಯಕ್ರಮ: ಅನಿವಾಸಿ ನಡೆಸಿದ  ‘ಈಸ್ಟ್ ಮೀಟ್ಸ್ ವೆಸ್ಟ್’ – ಕನ್ನಡ-ಇಂಗ್ಲಿಷ್ ಕವನಗಳ ಸುಮಧುರ ಮುಖಾಮುಖಿ. ಎರಡು ಭಿನ್ನ ಭಾಷಾ-ಸಾಂಸ್ಕೃತಿಕ ನೆಲೆಗಳ ನಡುಕ್ಷೇತ್ರ. ಬನ್ನಿ, ಆ ಕವನಗಳನ್ನು ಓದೋಣ. -ಸಂ.

daffodil-quest
ರೇಖಾ ಚಿತ್ರ: ಲಕ್ಷ್ಮೀನಾರಾಯಣ ಗುಡೂರ

 

ಜಿ. ಶಿವ ಪ್ರಸಾದ್ ರ  ಕವನಗಳು

 

ಎನ್ನ ಕೈ ಬಿಡು ತಾಯೆ

 ನಿನ್ನ ಮಮತೆಯ ಬಿಗು ಮುಷ್ಟಿ

ಸಡಿಲಗೊಳಿಸು ತಾಯೆ

ದೂಡು ಗೂಡಿನಾಚೆಗೆ ಎನ್ನ

ಛಲ ಬಲದಿಂದ ಸಿದ್ಧಳಿರುವ ನನ್ನ

 

 

ಅಂಜದಿರು ಓ ತಾಯೇ

ಹಾರಲು ಕಲಿತಿರುವೆ,

ಇರಲಿ ಆಗಸದೆತ್ತರ

ಈಜಲು ಕಲಿತಿರುವೆ

ಇರಲಿ ಅಳದಾಳದ ಸಾಗರ

 

 

ನನ್ನ ಬಾಳು ನನ್ನದೆಂಬ ಅರಿವಾಗಿ

ನಡೆಯುವೆನು ನಾನಾಗಿ

ರೂಪು ಗೊಳಲ್ಲಿ ನನ್ನ ವ್ಯಕ್ತಿತ್ವ

ನನ್ನದೇ ಬೀಜಗಳ ಬಿತ್ತಿ ಬೆಳಸಿ

ಎಲ್ಲರಿಗು ತೋರುವೆ ನನ್ನ ಅಸ್ತಿತ್ವ

 

 

ನಿನ್ನ ಬಳಿಗೆಂದು ಬರುವೆ ಮತ್ತೆ ಮತ್ತೆ

ಸಾಗರ ದಂಚಿನಲಿ ನಿರ್ಗಮಿಸುವ

ತೆರೆ ಮರಳುವಂತೆ

ಚೈತ್ರದ ಚಿಗುರು

ಹೂಗಳು ಮೂಡುವಂತೆ

 

 

ಇರಬಹುದು ನನ್ನಲ್ಲಿ ಧೈರ್ಯ ಸ್ಥೈರ್ಯ

ನನ್ನ ಅರಿವಿನ ಆಚೆಯಲಿ

ಮೂಡುವ ಸಂಕಷ್ಟಗಳ ಸುಳಿಯಿಂದ

ಕೈ ಹಿಡಿದೆತ್ತಿ ಸಲಹು ತಾಯಿ

 

 

ಹಾತೊರೆದು

ಮರಳಿ ಬರುವೆನು ತಾಯೆ

ನಿನ್ನ ಪ್ರೀತಿ ವಾತ್ಸಲ್ಯ ಕರೆಗೆ

ನಮ್ಮ ಹೆಮ್ಮೆಯ ಬೀಡಿಗೆ

ನಿನ್ನ ಸಂತೃಪ್ತ ಎದೆಯ ಗೂಡಿಗೆ

 

ಜಿ. ಶಿವ ಪ್ರಸಾದ್

 

 

 

 

 

 

 

Let go, Mother Let go

Let go, mother, let go

Loosen that tender grip

Let me out of the nest

For I am ready

With determination and zest

 

 

Fear not mother,

For I have learnt to fly,

Great heights they may be.

I have learnt to swim

The deepest ocean it may be

 

 

Let me walk alone

I have a life of my own

My identity,

To the world be known

I have many seeds to be sown

 

 

I shall return to you

Again and again

Like the tides that recedes

From the shores.

Like the bloom

That shows up in spring

 

 

Full of confidence, I may be the one

Crisis may come yet unknown

When I ring you,

Mother

Please pick up the phone

 

 

I shall return

For your warmth and affection

Desperate I remain

For that longing and gratification

I wish to make you proud,

And fill you with that satisfaction

 

Let go mother Let go

 

G. Shiva Prasad

 

PEACEFUL PLACE – G. Jayaram

Temples

– Where incense sticks are burning

Bells are ringing

Priests are chanting,

People are Praying,

Is a Peaceful place.

 

Meditating

 – on the river banks,

 Where birds are singing,

 Water’s flowing,

 Sun is rising,

 Is a peaceful place.

 

Walking

– along a beach,

Looking and listening

Sounds of waves

Coming up, going down,

Seeing sunset in the evening,

Is a peaceful place.

 

 Graveyard

 Where loved ones are buried,

 Lay in peace.

 Thanking for everything,

 Asking for blessing.

 Is the MOST PEACEFUL PLACE.

 – G Jayaram

 

ದೀಪದ ಹಾವಳಿ – ಪ್ರಭುರಾಜ ಗಿಣಿಮಾವ

ಸಾವಿರ ಪಣತಿ ಆರದ ಬಿಸಿ ಹತ್ತಿ

ಹಾರಿದ ಮಿಟ್ಟೆಯ ಸುಟ್ಟಿತು ಪಕ್ಕೆ

ತಿರುಗುತ ಸೇರಿತ್ತು ನೆಗೆದು ನೆಲಕ್ಕೆ

ಬಂದಿತು ದೀಪದ ಹಾವಳಿ ಸರಕ್ಕೆ

ಸುರ ಸುರ ಬಾಣದ ಭಯವನು ತಾಳದ

ಸರ ಸರ ಓಡಿ ಎಡವುತ ಗದರುತ

ಕೋಡಂಗಿಗಳ ಗಂಟಲು ಹರಿಯುತ

ಬಂದಿತು ದೀಪದ ಹಾವಳಿ ಗದರಿಸುತ

 ಧಡ ಧಡ ಫಟ ಫಟ ಸದ್ದಿನ ಪಟಾಕಿಗೆ

ಕುಂಯ್ಗುಡುವ  ಇಳಿಮುಖದ ಕುನ್ನಿಗಳಿಗೆ

ಮಿಂಯ್ಗುಡುವ ಬಿಳಿಚಿದ ಕಣ್ಣ ಕಾಮಿಗಳಿಗೆ

ಬಂದಿತು ದೀಪದ ಹಾವಳಿ ಬಳಿ ಬಳಿಗೆ

 ತಬ್ಬಲಿ ಕರುಗಳ ಉರುಳಿನ ಸೆಳೆತ

ತಾಯ್ಗಳ ಭವಣೆಯನರಿಯದ ಹಸುಳೆ

ಬಾ ಎಂದು ಕರೆದ ಗಂಟಲಿನ ಕೊರೆತ

ಬಂದಿತು ದೀಪದ ಹಾವಳಿ ಭರದಿಂದ

 ಬೆಚ್ಚನ ಗೂಡಲಿ ಮಲಗಿದ ಪಕ್ಕಿ

ಹೆಚ್ಚಿದ ಸದ್ದ ಕೇಳಿ ಬೆಚ್ಚಿದ ಹಕ್ಕಿ

ಫಟ ಫಟ ರೆಕ್ಕೆ ಬಡೆಯುತ ಹಾರಿ

ಬಂದಿತು ದೀಪದ ಹಾವಳಿ ಭಾರಿ

 ಬದುಕೋಣ ಸಹಜೀವಕೆ ಹಿತವಾಗಿ

ಫಟ ಫಟ ಧಡಧಡ ಸದ್ದ ಕಡಿತವಾಗಿ

ಮದ್ದಿನ ಹೂಮಾಲೆ ಸಾಕು ಬೇಕಾದಷ್ಟಾಗಿ

ಕೂಡಲೇ ಬರಲಿ ಅನಂತ ದೀಪಾವಳಿ

-ಪ್ರಭುರಾಜ ಗಿಣಿಮಾವ 

 

ಮನದಾಳದ ನುಡಿಗಳು-   ಸೌಭಾಗ್ಯ ಜಯಂತ್ ಮೇರ್ವೆ

ವಿನೋದ ಸಂತೋಷಕೆ

ವೇದಿಕೆ ಇದಾಗಿರುವುದಕೆ

ಮಾತೃ ಭಾಷೆಯ ಮಮತೆ ಕಾರಣವಿದಕೆ

ಕನ್ನಡಾಂಬೆಯ ಒಲವನ್ನ

ಕರುನಾಡಿನ ಕರಗಳನ್ನ

ಕಂಕಣದ ಸಂಕಲ್ಪವನ್ನ

ಕಾರಣವಾಗಿ ಹುಟ್ಟಿದ ಈ ಸಂಸ್ಥೆಯನ್ನ

ಕಂಡು ನನಗಿಂದು ತುಂಬಿತ್ತ ತನುಮನ

ನಿಮ್ಮೆಲ್ಲರಿಗೆ ನನ್ನ ಒಲವಿನ ನಮನ

           -ಸೌಭಾಗ್ಯ ಜಯಂತ್ ಮೇರ್ವೆ

ಶ್ರೀವತ್ಸ ದೇಸಾಯಿಯವರ ಕವನಗಳು

ಹಿನ್ನೆಲೆ: ನೀವು ನಂಬಲಿಕ್ಕಿಲ್ಲ. ನನಗಾಗ ೧೩ ಅಥವಾ ೧೪ ವಯಸ್ಸು. ಶಾಲೆಯಲ್ಲಿ ನಮಗೆ ಪಾಠಕ್ಕಿದ್ದ ವರ್ಡ್ಸ್ ವರ್ತ್ ಕವಿಯ ‘ಡಾಫಡಿಲ್’ ಕವಿತೆ ಓದಿದ ಮೇಲೆ ಈ ದೇಶಕ್ಕೆ ಬಂದು ಆ ಹೂವನ್ನು ನೋಡುವ ತವಕ ಹುಟ್ಟುಕೊಂಡುಬಿಟ್ಟಿತು. ಕಾಲೇಜು ಮುಗಿಸಿದ್ರೂ ಮನದಾಳದಲ್ಲಿ ಅದೇ ಆಸೆ ಇದ್ದಿರಬೇಕು. ಇಲ್ಲಿಗೆ ಬಂದಾದ್ಮೇಲೆ ಒಮ್ಮೆ ವಸಂತದಲ್ಲಿ ಲೇಕ್ ಡಿಸ್ಟ್ರಿಕ್ಟ್ ಗೆ ಹೋಗಿ ಅವುಗಳು ಕುಣಿಯುವುದನ್ನು ಕಣ್ಣು ತುಂಬಾ ನೋಡಿ ಮರಳಬೇಕು ಎಂಬ ಉತ್ಕಟ ಇಚ್ಛೆಯಾಗಿತ್ತು. ದೈವ ಮಾತ್ರ ಇನ್ನೂ ಇಲ್ಲೇ ಉಳಿಸಿದೆ. ಜೀನಾ ಯಹಾಂ …
 – ಶ್ರೀವತ್ಸ ದೇಸಾಯಿ

The Quest

(Introduction: I was dreaming of coming to this country and seeing the ‘daffodils fluttering and dancing in the breeze’, ever since I read that  poem by William Wordsworth at my school [it was in the prescribed textbook], when I had just turned a teenager. I was chasing a dream!).

  • Shrivatsa Desai

ಹೂವನ್ನರಸಿ…

ನಾನೊಬ್ಬ ಕನಸುಗಾರ

ಶಾಲೆಯ ಪಠ್ಯ ಪುಸ್ತಕದ ಹೂವನ್ನರಸಿ

ಅರಸಿಯ ನಾಡಿಗೆ ಬಂದವನು

ಆಗನಿಸಿತ್ತು ಗಗನ ಕುಸುಮ

ಈಗ ಕಂಡದ್ದಾಯಿತು

ಈ ಹೂವಿನ ನಾಡಿನಲ್ಲಿ

ಹೂ (Who?) ಗಳ ಸುರಿಮಳೆ ಹೆಜ್ಜೆ ಹೆಜ್ಜೆಗೂ

ನೀನಾರು? (Who are you?)

ಯಾರು ಕರೆಸಿದರು? (Who called you?)

ಮರು ಪ್ರಯಾಣವೆಂದು?

ನನ್ನ ಹಣೆಯಲ್ಲಿ ಬರೆದಂತೆ

ರಾಣಿಯ ನಾಡಲ್ಲೇ ಠಾಣೆ ಹಾಕಿಯಾಯಿತು

ನಾನಾರು? ಈ ಹೂದೋಟದಲ್ಲಿ

ಕನಸುಗಾರ ನಾ
ಕನಸು ಕಾಂಬೆ
ಕನಸು ಕರಗುವ ಮುನ್ನ
ಕಂಡ ಕನಸಿನ ಸ್ವರ್ಗ ಕಟ್ಟುವಾಸೆ

ನಾನಿನ್ನೂ ಕನಸುಗಾರ.

– ಶ್ರೀವತ್ಸ ದೇಸಾಯಿ

The Quest

 I was a dreamer

Searching for a flower from the school textbook

I arrived in ‘the land of hope and glory’

the homeland they called ‘Blighty’

and faced questions many

Who are you?

Who called you?

When will you return?

But I was fated to stay.

And settled here

But my dream is still unfulfilled.

Before I ‘go’

I wish to build myself  a Heaven on Earth

for I’m a dreamer, still.

 –Shrivatsa Desai

೨೦೧೪ ದೀಪಾವಳಿಯಂದು ವಿನತೆ ಶರ್ಮ ಬರೆದ ಕವನ – (‘ಅವಧಿ’ ಜಾಲಜಗುಲಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)

ದೀಪಗಳ ಸೇತು

ದೀಪಗಳ ಸಾಲು

ಸಾಂಬ್ರಾಣಿ ಹೊಗೆ ಸುತ್ತು

ಸಂಭ್ರಮದ ಓಡಾಟ

ಸಡಗರದ ತಿನಿಸು

 

ಪುಟ್ಟಿಯ ಕಾಮನಬಿಲ್ಲ ಕನಸು

ದೊಡ್ಡ ಮನೆಯ ಅವಳಂತೆ

ರೇಷ್ಮೆ ಲಂಗದ ಹುಡುಗಿ

ತಾನಾಗುವುದು ಯಾವಾಗ?

 

ಅವರು ಬಿಟ್ಟ ಊಟಕ್ಕಾಗಿ

ಕಾದ ಹಸಿದ ಹೊಟ್ಟೆ

ಆದರೂ ಕಣ್ಣಲ್ಲಿ ಬಣ್ಣದ

ಬಳೆಗಳ ಚಿತ್ರ

 

ದೀಪಗಳ ದ್ವೀಪಗಳು

ನಾವು ಕೆಲವರು.

ನಮ್ಮ ಮನೆಯ ಹರ್ಷ

ನಮ್ಮದಷ್ಟೇ, ಮನೆ ಮನೆಯೊಳಗೇ

ಮನ ಮನ ಮುಟ್ಟಿಲ್ಲ ಇನ್ನೂ

 

ಬೀದಿ ಚಿಂದಿಯ

ಪ್ಲಾಸ್ಟಿಕ್ ಚೀಲ ಹೊತ್ತ

ಅವನ ದೃಷ್ಟಿ ಆ

ದೊಡ್ಡ ಮನೆಯತ್ತ

 

ಆ ಪ್ಲಾಸ್ಟಿಕ್ ಚೀಲ

ಡಬ್ಬ ಡಬ್ಬಗಳ ಸುರುಸುರುಬತ್ತಿ,

ರಾಕೆಟ್, ಫ್ಲವರ್ ಪಾಟ್,

ದೀಪಾವಳಿಯ ಸಿಹಿಯಾಗುವುದೇ?

 

ದೀಪಗಳು ತುಂಬಿರುವ,

ದೀಪಗಳೇ ಇಲ್ಲದ,

ನಮ್ಮ ಈ ಎಷ್ಟೋ ದ್ವೀಪಗಳ

ನಡುವಿನ ಸೇತು ನಾವಾದರೆ?

 

ಅವನು ಹಚ್ಚುವ ಅವನದೇ

ಆ ಹೆಮ್ಮೆಯ ಕುಲುಕುಲು

ಸುರುಸುರು ಬತ್ತಿ ನಗು

ನಮ್ಮ ಸಂಭ್ರಮ ಸಡಗರವಾದರೇ

 

ಪುಟ್ಟಿಯ ಕನಸು, ಕಂಗಳ ಕಾಂತಿ,

ಗರಿ ಗರಿ ಹೊಸ ಲಂಗ

ಘಲ್ ಘಲ್ ಬಳೆಗಳು

ನಮ್ಮ ಬೆಳಕ ಹಣತೆಗಳು.

  • ವಿನತೆ ಶರ್ಮ

Bridge of light

Beckoning row of lights

The incense rises like a snake

Celebration in their swift feet

Sweets fill the eyes

 

Putti’s rainbow dream

Follows the Big House Girl

Waiting for her Big day

To become a Silk-draped Girl

 

Awaiting the leftovers

Carrying hunger pangs

Bangles sing in her ears

A flash in her little eyes

 

Islands of lights

Some of us, we’re

Our joy is home-kept

Not reached all hearts

 

The boy carries the bag

Picking their trash

His gaze is on the Big House

Boys there, with fireworks

 

The boy’s bag, will it fill

With Diwali sweets

With rockets, flower pots,

Boxes of sparklers

 

Closed boxes, we are

Some of us. Homes

Lit with lights, dark without

All around. Awaiting

The bridge of light

 

The boy’s smile

Lit with his joy

Be our celebration

Our Diwali

 

Putti’s dream Silk dress

Murmuring bangles

The sparkle of her eyes

Be our heart’s light.

  • Vinathe Sharma

ಡಾರ್ಬಿ ಕನ್ನಡಿಗರು ನೀಡಿದ ರಸಾಯನ, ಔತಣದ ಸ್ಪೆಷಲ್!

ನಾವೆಲ್ಲಾ ಕನ್ನಡ ಬಳಗ ಯು.ಕೆ. ಸದಸ್ಯರು ಕರುನಾಡ ಹೊರಗಿದ್ದರೂ ನಮ್ಮ ತೌರುಮನೆಯ ಕರ್ನಾಟಕದ ದರ್ಶನ ನಮಗೆಲ್ಲಾ ಅಂದು ಸಿಕ್ಕೇಬಿಟ್ಟಿತು. ಯಾವತ್ತು ಎನ್ನುವುದನ್ನು ನೀವು ಸರಿಯಾಗೇ ಊಹಿಸಿದಿರಿ. ಇಂಗ್ಲೆಂಡಿನಲ್ಲಿ, ಕುರ್ಚಿಯಲ್ಲಿ ಕೂತಿದ್ದ ಹಾಗೇ ಒಂಥರಾ ಮಾಯಾ ಬಜಾರ್ ರೀತಿಯಲ್ಲಿ ನಮ್ಮನ್ನೆಲ್ಲಾ ನಮ್ಮೂರಿಗೆ ವಾಪಸ್ ಕರೆದೊಯ್ದವರು ಯಾರು, ಆ ಒಂದು ಮಾಯೆಯನ್ನು ಅವರು ಹೇಗೆ ಸೃಷ್ಟಿ ಮಾಡಿದರು? ಆ ಮೋಡಿಯ ಹಿಂದೆ ನಡೆದ ಕಾರುಬಾರುಗಳು ಏನೇನು? ಸ್ಟೇಜ್ ಮೇಲೆ ಬಂದ ಕರ್ನಾಟಕ ದರ್ಶನ ಮತ್ತು ಮೈಸೂರು ದಸರಾಗಳನ್ನ ನೋಡಿದ ಪ್ರೇಕ್ಷಕರು ಏನನ್ನುತ್ತಾರೆ? ಇವತ್ತಿನ ಲೇಖನಗಳನ್ನ ಓದಿ ವಿವರಗಳನ್ನು ತಿಳಿದುಕೊಳ್ಳೋಣ, ಬನ್ನಿ. ಅಂದು ಸೃಷ್ಟಿಯಾದ ಅದ್ಭುತ ಲೋಕದ ಕಿರು ವಿಡಿಯೋಗಳು ಕೂಡ ಇವೆ. ಎಂಜಾಯ್ ಮಾಡಿ, ಹಂಚಿಕೊಳ್ಳಿ. ಸಂ.

ಡಾರ್ಬಿ ಕನ್ನಡಿಗರ ಒಗ್ಗಟ್ಟಿನ ಉತ್ಸಾಹದ ಫಲ -ಕರ್ನಾಟಕ ದರ್ಶನ, ಮೈಸೂರು ದಸರಾ

‘ಅನಿವಾಸಿ’ಗಾಗಿ ಶ್ರೀದೇವಿ ಮತ್ತು ಹರೀಶ್ ರನ್ನ ಮಾತನಾಡಿಸಿ, ಲೇಖನವನ್ನು ಸಿದ್ಧಪಡಿಸಿದವರು ರಾಮ್ ಶರಣ್

ಇತ್ತೀಚೆಗೆ ಡಾರ್ಬಿಯಲ್ಲಿ ನಡೆದ ಕನ್ನಡ ಬಳಗದ ದೀಪಾವಳಿ ಕಾರ್ಯಕ್ರಮದಲ್ಲಿ ಡಾರ್ಬಿ ಕನ್ನಡಿಗರು ಪ್ರಸ್ತುತ ಪಡಿಸಿದ ‘ಕರ್ನಾಟಕ ದರ್ಶನ’ ಹಾಗು ‘ಮೈಸೂರು ದಸರಾ’ ರೂಪಕಗಳು ಪ್ರೇಕ್ಷಕರನ್ನು ತಾಯ್ನಾಡಿಗೆ ಸೆಳೆದೊಯ್ದವು ಎಂದು ಬಹಳಷ್ಟು ಪ್ರೇಕ್ಷಕರು ಹೇಳಿದರು. ಅದಲ್ಲದೆ, ಇಲ್ಲಿ  ಇಂಗ್ಲೆಂಡಿನಲ್ಲಿ ಹುಟ್ಟಿ, ಬೆಳೆಯುತ್ತಿರುವ ಕಿರಿಯರಿಗೂ ನಾನು ಕನ್ನಡಿಗ ಎನ್ನುವ ಹೆಮ್ಮೆ, ವೈಯಕ್ತಿಕತೆ ಹುಟ್ಟಿಸಿತು ಎಂದು ಹೇಳಿ ಬೆನ್ನು ತಟ್ಟಿದಾಗ ಅದರಲ್ಲಿ ಪಾಲ್ಗೊಂಡ ನಮಗೆಲ್ಲ ಹೃದಯ ತುಂಬಿ ಬರುವುದು ಸಹಜವೇ. ‘ಈ ಕಾರ್ಯಕ್ರಮಗಳು ಹೊಸ ಹಾದಿ ಹಾಕಿವೆ, ಇದೆಲ್ಲದರ ಹಿನ್ನೆಲೆ ಕನ್ನಡ ಬಳಗದವರೊಂದಿಗೆ ಹಂಚಿಕೊಳ್ಳಬೇಕು, ಬರೆದು ಕೊಡಿ’ ಎಂದು ‘ಅನಿವಾಸಿ’ ಯ ಸಂಪಾದಕ ಬಳಗ ಕೇಳಿಕೊಂಡಾಗ ಆನಂದಾಶ್ಚರ್ಯವಾಯಿತು!

ತಮ್ಮ ತನುಮನ ಧನಗಳನ್ನರ್ಪಿಸಿ, ಕನ್ನಡಿಗರನ್ನೊಂದು ಮಾಡಿ, ಇವೆರಡೂ ನೃತ್ಯ ರೂಪಕಗಳನ್ನು ಕಲ್ಪಿಸಿ ಸಾಕಾರ ಮಾಡಿದ ಶ್ರೀದೇವಿ ವಲ್ಲೀಶ್ ಹಾಗೂ ಹರೀಶ್ ರಾಮಯ್ಯ ಅವರಿಂದಲೇ ಹಿನ್ನೆಲೆಯ ಕಥೆ ಹೇಳಿಸುವ ಪ್ರಯತ್ನ ಮಾಡಿದ್ದೇನೆ, ಕೇಳಿ… ರಾಮ್ ಶರಣ್

img-20161030-wa0034

ಹರೀಶ್: ಇಂಗ್ಲೆಂಡಿನ ಮಹಾನಗರಗಳ ಹೊರಗೆ ಇರುವ ಡಾರ್ಬಿ ಭಾರತೀಯ ಸಮುದಾಯ ಅನನ್ಯವಾದದ್ದು. ಸಾಂಪ್ರದಾಯಿಕವಾಗಿ ತಲೆ ತಲಾಂತರಗಳಿಂದ ನೆಲೆಸಿರುವ ಸಿಖ್ ಹಾಗು ಕೆಲವು ಗುಜರಾತಿ ಕುಟುಂಬಗಳು, ಜೊತೆಗೆ ಎನ್.ಎಚ್.ಎಸ್. ವೈದ್ಯರ ಗುಂಪಿನೊಂದಿಗೇ ಸಾಕಷ್ಟು ಇಂಜಿನಿಯರ್ ಕುಟುಂಬಗಳೂ ಬಂದು ನೆಲೆ ನಿಂತಿವೆ. ದಕ್ಷಿಣ ಭಾರತದಿಂದ ಸದ್ಯ ವಲಸೆ ಬಂದವರನ್ನು ಒಟ್ಟುಗೂಡಿಸುವ ಪ್ರಯತ್ನವಾಗಿ ಸೌತ್ ಇಂಡಿಯನ್ ಅಸೋಸಿಯೇಷನ್ (ಸಿಯಾ) ಎಂಬ ಸಂಸ್ಥೆಯನ್ನು ಸುಮಾರು ೯ ವರ್ಷಗಳ ಹಿಂದೆ ಹುಟ್ಟು ಹಾಕಿದ್ದಾಯ್ತು. ರೋಲ್ಸ್ ರಾಯ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿದ್ದ ಹಲವಾರು ಕನ್ನಡಿಗರನ್ನೆಲ್ಲ ಸಿಯಾ ದೀಪಾವಳಿಗೆ ಹುರಿದುಂಬಿಸಿ ಕರೆದುಕೊಂಡು ಹೋಗ್ತಿದ್ದೆ. ಆದರೆ ಅಲ್ಲಿ ಕನ್ನಡ ಕಾರ್ಯಕ್ರಮಗಳೇ ಇರ್ತಿರಲಿಲ್ಲ.

ಶ್ರೀದೇವಿ: ನಾನು ಬಂದ ವರ್ಷ ಸಿಯಾ ದೀಪಾವಳಿಯಲ್ಲಿ ಕನ್ನಡದವರ ಪರಿಚಯವಾದ್ರೂ ಕನ್ನಡ ಪ್ರೋಗ್ರಾಮ್ ಇಲ್ದೆ ಇರೋವಾಗ ಊಟ ಸಪ್ಪೆಯೆನಿಸ್ತು. ಅಲ್ಲೇ ನನಗೆ ಹರೀಶ್ ಪರಿಚಯ ಆಗಿದ್ದು. ಆ ವರ್ಷ ಕನ್ನಡದವ್ರದ್ದೇ ಯುಗಾದಿ ಮಾಡೋಣ ಅಂತ ಯೋಜನೆ ಹಾಕಿದ್ವು.

img-20161121-wa0045
ಯಕ್ಷಗಾನದ ಕಿರೀಟ

ಹರೀಶ್: ಯುಗಾದಿ ಕಾರ್ಯಕ್ರಮದ ಸ್ಟೇಜ್ ಅಲಂಕಾರಕ್ಕೆ ಚೆನ್ನಾಗಿರುತ್ತೆ ಅಂತ ಹಳ್ಳಿ ಮನೆ ಕಟ್ದೆ. ಕಟ್ಟೋವಾಗ ಹುರುಪು ಬರಲಿ ಅಂತ, ವಾಟ್ಸ್ಯಾಪ್ ಗುಂಪಿನಲ್ಲಿ ಚಿತ್ರಗಳನ್ನ ಹಾಕ್ದೆ. ಅದಕ್ಕೆ ಬಣ್ಣ ಬಳಿದು ಸಿಂಗಾರ ಮಾಡೋ ಕೆಲಸಕ್ಕೆ ಕನ್ನಡದವರೆಲ್ಲ ನಾ ಮುಂದು, ತಾ ಮುಂದು ಅಂತ ಬಂದಾಗ ನಾನು ದಂಗು ಬಡದ್ಹೋದೆ. ಆ ವರ್ಷದ ಯುಗಾದಿ, ಡಾರ್ಬಿ ಕನ್ನಡಿಗರನ್ನು ಒಗ್ಗೂಡಿಸ್ತು ಅಂತ ಹೇಳಬಹುದು.

ಶ್ರೀ, ಹ: ಆ ಹಳ್ಳಿ ಮನೆ ಹಿಂದಿಟ್ಕೊಂಡು ಸಿಯಾ ಬಳಗಕ್ಕೆ ಕನ್ನಡದ ಹಳ್ಳಿ ಜೀವನ, ಹಬ್ಬದ ಸಡಗರ ತೋರಿಸುವ ಉದ್ದೇಶದಿಂದ ಬೆಳಕಿಗೆ ಬಂದಿದ್ದು  ‘ಕರ್ನಾಟಕ ದರ್ಶನ’ ರೂಪಕ.  ಕರ್ನಾಟಕದ ಹಳ್ಳಿಯ ದೈನಂದಿನ ಜೀವನದ ನೋಟ ತೋರಿಸಬೇಕೆಂಬ ಕನಸಿನ ಕೂಸು ಅದು.

img-20161121-wa0052
ಶ್ರೀದೇವಿ ತಯಾರಿಸುತ್ತಿರುವ ತಟ್ಟೀರಾಯ ಮುಖವಾಡಗಳು

ನಾವು ಮಾಡಿದಂಥ ಎರಡೂ ಕಾರ್ಯಕ್ರಮಗಳಿಗೆ ಹಿನ್ನಲೆ ಸಂಗೀತ ಹೊಂದಿಸಿದ್ದು ದೊಡ್ಡ ತಲೆನೋವಿನ ವಿಚಾರ. ಹಾಡು ಇಂಪಾಗಿ, ಕುಣಿಸುವಂತಿರಬೇಕು; ಸಂದರ್ಭಕ್ಕೆ ಸರಿಯಾಗಿರಬೇಕು; ನೃತ್ಯಕ್ಕೆ ಹೊಂದಿಸೋ ಹಾಗಿರ್ಬೇಕು.  ಹಾಡಿನ ಹುಡುಕಾಟಕ್ಕೇ ಒಂದು ವಾರ ಪ್ರತಿ ರಾತ್ರಿ ೨-೩ ಗಂಟೆವರೆಗೆ ಪರದಾಡಿದ್ದೇವೆ. ಹಾಡುಗಳನ್ನು ಆರಿಸಿದ ಮೇಲೆ, ಒಳ್ಳೆ ಗುಣಮಟ್ಟದ್ದನ್ನ ಹುಡುಕೋದು, ಅದನ್ನ ಬೇಕಷ್ಟೇ ಉದ್ದಕ್ಕೆ ಕತ್ತರಿಸೋದು ದೊಡ್ಡ ಪರದಾಟ.

ಶ್ರೀದೇವಿ: ಹಾಡಿನ ಅರಸಾಟ ಮುಗಿದ ಮೇಲೆ ಅದಕ್ಕೆ ಬೇಕಾಗಿದ್ದು ನೃತ್ಯ ಸಂಯೋಜನೆ.  ವೇಷ-ವಿಭೂಷಣಗಳ ಆಯ್ಕೆ. ‘ಕರ್ನಾಟಕ ದರ್ಶನ’ದ ನೃತ್ಯ ಸಂಯೋಜನೆಗೆ ನಮ್ಮಲ್ಲೇ ಇದ್ದ ಪೃಥಾ ತುಂಬಾ ಸಹಾಯ ಮಾಡಿದ್ರು. ‘ಮೈಸೂರು ದಸರಾ’ಕ್ಕೆ ಅಮೆರಿಕಾದಲ್ಲಿರೋ ತಂಗಿ, ಲಂಡನ್ ನಲ್ಲಿರೋ ನಾದಿನಿ, ಹೀಗೆ ಹತ್ತಿರದವರು, ದೂರದವರನ್ನ ಕಾಡಿ-ಬೇಡಿ, ಯಾವ ಹೆಜ್ಜೆಗಳೂ ಪುನರಾವರ್ತಿತವಾಗದಂತೆ ನೃತ್ಯ ಸಂಯೋಜನೆ ಮಾಡಬೇಕಾಯ್ತು. ಇದನ್ನೆಲ್ಲಾ ವಿಡಿಯೋ ಮಾಡಿ ಇಟ್ಟುಕೊಂಡಾಯ್ತು.

ಶ್ರೀ, ಹ: ನಮ್ಮಲ್ಲಿ ಯಾರೂ ವೃತ್ತಿನಿರತ ಕಲಾವಿದರಲ್ಲ, ಹೆಚ್ಚಿನವರು ಪ್ರವೃತ್ತಿ ಕಲಾವಿದರೂ ಅಲ್ಲ. ಅಂಥದ್ದರಲ್ಲಿ ಪ್ರತಿಯೊಬ್ಬರೂ ಶಕ್ತಿ ಮೀರಿ ಕಾರ್ಯಕ್ರಮವನ್ನ ಯಶಸ್ವಿ ಮಾಡಿ, ಸಭಿಕರೆಲ್ಲರ ಮೆಚ್ಚುಗೆ ಪಡೆದಿದ್ದು ಈ ವರ್ಷ ದಸರಾ ಕಾರ್ಯಕ್ರಮದ ಯೋಜನೆ ಹಾಕೋದಕ್ಕೆ ಸ್ಫೂರ್ತಿ  ಆಯ್ತು. ಹಾಗೇ ಕನ್ನಡದ ಶ್ರೀಮಂತ ಪರಂಪರೆ, ಚರಿತ್ರೆ ಇವೆರಡನ್ನೂ ನಮ್ಮ ಮಕ್ಕಳಿಗೆ, ಜನರಿಗೆ ತೋರಿಸುವ ವಿಚಾರ ಬಂತು. ಮೈಸೂರು ದಸರಾ ಜಗತ್ಪ್ರಸಿದ್ಧಿ. ದಸರಾ ಮೆರವಣಿಗೆ ನಾಡಿನ ಎಲ್ಲ ಜಿಲ್ಲೆಗಳ ಸೊಗಡಿನ ಪಕ್ಷಿ ನೋಟ ಬಂದವರಿಗೆ ತೋರಿಸುತ್ತೆ. ಅದನ್ನೇ ಮಾಡಿದರೆ ಸೂಕ್ತ ಅಂತ ಸಾಕಷ್ಟು ಚರ್ಚೆ ಮಾಡಿ ನಿರ್ಧರಿಸಿದ್ವು. ಕರ್ನಾಟಕದ ಎಲ್ಲ ಜಿಲ್ಲೆಗಳನ್ನು ವೇದಿಕೆಯ ಮೇಲೆ ಸೀಮಿತ ಅವಧಿಯಲ್ಲಿ ಪ್ರತಿನಿಧಿಸೋದು ತುಂಬಾನೇ ಕಷ್ಟ. ಹಾಗಾಗಿ ಕೆಲವೇ ಪ್ರಾಂತ್ಯಗಳನ್ನು ಆರಿಸಿಕೊಂಡ್ವಿ. ಪ್ರತಿಯೊಂದು ಪ್ರಾಂತ್ಯದ್ದೂ ಮುಖ್ಯ ಪಾರಂಪರಿಕ/ಚಾರಿತ್ರಿಕ ಛಾಪನ್ನು ಪ್ರತಿನಿಧಿಸುವಂತೆ ರೂಪಕ/ನೃತ್ಯಗಳ ಪ್ಲಾನ್ ಹಾಕಿದ್ವಿ.img-20161121-wa0050

ಹರೀಶ್: ಇದಕ್ಕೆ ಸುಮಾರು ೬೦ ಜನ ಬೇಕಾಗೋದ್ರಿಂದ ಎಲ್ಲಾರನ್ನೂ ಒಂದೇ ಸಲ ಸೇರಿಸಿ ಪ್ರ್ಯಾಕ್ಟೀಸ್ ಮಾಡ್ಸೋದು ಅಂದ್ರೆ ಕಪ್ಪೆಗಳನ್ನ ತಕ್ಕಡಿಗೆ ಹಾಕಿದ ಹಾಗೆ ಅನ್ನೋ ಅಂಥ ಅನುಭವ ಆಗಿತ್ತು, ಕರ್ನಾಟಕ ದರ್ಶನ ತಯ್ಯಾರಿಯಲ್ಲಿ. ಸಾಮರ್ಥ್ಯ, ದೇಹಕಟ್ಟು ಇವನ್ನೆಲ್ಲ ಗಮನದಲ್ಲಿಟ್ಟಕೊಂಡು, ನಾನು, ಶ್ರೀದೇವಿ ಪಾತ್ರಧಾರಿಗಳನ್ನು ಆಯ್ಕೆ ಮಾಡಿದ್ವಿ. ಹೆಚ್ಚಿನವರನ್ನೆಲ್ಲ ಒಂದಿನ ಒಟ್ಟು ಹಾಕಿ ಯೋಜನೆಯನ್ನ ವಿವರಿಸಿ ಪಾತ್ರಗಳನ್ನೂ ಹಂಚಿದ್ದಾಯ್ತು. ಪ್ರತಿ ಒಂದು ರೂಪಕಕ್ಕೂ ಬೇರೆ ಬೇರೆ ವ್ಹಾಟ್ಸ್ಯಾಪ್ ಗುಂಪು ಮಾಡಿ, ಅವರ  ಗುಂಪಿಗೆ ಮಾತ್ರ ಬೇಕಾದ ನೃತ್ಯದ  ತುಣುಕನ್ನ ಕಳ್ಸಿದ್ವಿ. ಗುಂಪುಗಳಿಗೆ ಅವರವರ ತಾಲೀಮಿನ ಜವಾಬ್ದಾರಿ ಕೊಟ್ಟಿದ್ರಿಂದ ಮೇಲ್ವಿಚಾರಕರಾದ ನಮ್ಮಿಬ್ಬರಿಗೆ ಬಾಕಿ ಉಳಿದ ವೇಷ-ಭೂಷಣಗಳ ತಯಾರಿಗೆ ಸ್ವಲ್ಪ ಅವಕಾಶವಾಯ್ತು.

ಶ್ರೀ, ಹ: ಕರ್ನಾಟಕ ದರ್ಶನ, ದಸರಾ ಎರಡೂ ಕಾರ್ಯಕ್ರಮಗಳ ವೇಷ-ಭೂಷಣ, ಕತ್ತಿ, ಕಠಾರಿ, ಮನೆ, ಹಸು, ಗಾಡಿ ಹೀಗೆ ಉಪಯೋಗಿಸಿದ ಹಲವಾರು ವಸ್ತುಗಳನ್ನ ಕಲ್ಪಿಸಿ, ತಯಾರಿಸಿದ್ದು ನಮ್ಮಿಬ್ಬರ ಪರಿಶ್ರಮವಾದರೂ, ನಮ್ಮ ಗುಂಪಿನ ಸದಸ್ಯರ ಸಹಾಯವಿಲ್ದೇ ಅದೆಲ್ಲ ಸಾಧ್ಯವಾಗ್ತಿರಲಿಲ್ಲ.

ಹರೀಶ್: ಎಲ್ಲದಕ್ಕಿಂತ ಹೆಚ್ಚು ಸವಾಲೊಡ್ಡಿದ ಕಾರ್ಯ – ದಸರಾ ಆನೆಯನ್ನ ಸಾಕಾರಗೊಳಿಸಿದ್ದು. ಮೊದಲಲ್ಲಿ ನೆರಳಿನಾಟವಾಗಿ ಅಂಬಾರಿ-ಆನೆ ತೋರಿಸೋದು ಸುಲಭ ಅನ್ನಿಸ್ತು. ಆದರೆ ಅದು ಕಳೆ  ಕಟ್ಟೋದಿಲ್ಲ ಅನ್ನಿಸ್ತು. ತಂತಿಗಳನ್ನೆಲ್ಲ ಕಟ್ಟಿ ಮಾಡ್ಬಹುದಲ್ಲಾ ಅಂತಾನೂ ವಿಚಾರ ಬಂತು. ಅಂತರ್ಜಾಲ ಜಾಲಾಡಿದಾಗ ನಾಟಕಕ್ಕೆ ಪ್ರಾಪ್ಸ್ ಮಾಡುವ ಕಂಪನಿ ಪತ್ತೆಯಾಯ್ತು. ಅವರಿಗೆ ದುಂಬಾಲು ಬಿದ್ದಾಗ, ದಶಕಗಳ ಹಿಂದೆ ಅವರೇ ಮಾಡಿದ್ದ ಆನೆ ವೇಲ್ಸ್ ನಲ್ಲಿರೋದು ಪತ್ತೆಯಾಯ್ತು. ಅಲ್ಲಿಗೆ ಹೋಗಿ ಜೀರ್ಣಾವಸ್ಥೆಯಲ್ಲಿದ್ದ ಆನೆ ಓಡಿಸಿಕೊಂಡು ಬಂದೆ. ಅದರ ಜೀರ್ಣೋದ್ಧಾರ ಮಾಡಿ, ಅದಕ್ಕೆ ಹಬ್ಬದ ಆನೆಯ ಕಳೆ ತಂದಾಯ್ತು.

img-20161122-wa0002
ಆನೆ ಹಾಗೂ ಇತರ ರಂಗ ಪರಿಕರಗಳ ತಯ್ಯಾರಿಯಲ್ಲಿ ಹರೀಶ್

ಶ್ರೀ, ಹ: ಹೇಳ್ತಾ ಹೋದ್ರೆ, ಮುಗಿಯದ ಕಥೆ ಇದು. ಕಾರ್ಯಕ್ರಮ ಕೊಡೋ ದಿನದವರೆಗೂ ಒಂದಲ್ಲ ಒಂದು ತೊಂದರೆಗಳು, ಸಡ್ಡು ಹೊಡೆದು ನಿಂತ ಸಮಸ್ಯೆಗಳು… ಇವನ್ನೆಲ್ಲ ಎರಡು ತಿಂಗಳ ಕಾಲ ಹಗಲುರಾತ್ರಿ ಉಂಡು-ಹೊದ್ದು ಮಲಗಿದ್ದೇವೆ. ನಮ್ಮ ಕರೆಗೆ ಓಗೊಟ್ಟು, ಹೆಗಲಿಗೆ ನಿಂತು ಪ್ರೋತ್ಸಾಹಿಸಿದವರು ಲೋಕೇಶ್ ಗಂಗೊಳ್ಳಿಯಂಥ ಆತ್ಮೀಯರು.

ಕರೆದಾಗಲೆಲ್ಲಾ ಬಂದು, ಬೇಸರವಿಲ್ಲದೇ ತಾಲೀಮು ಮಾಡಿ ಪಾತ್ರವಹಿಸಿದ ಗೆಳೆಯ-ಗೆಳತಿಯರಿಲ್ಲದೆ ಈ ಕಾರ್ಯಕ್ರಮ ಯಶಸ್ವಿ ಆಗ್ತಿರಲಿಲ್ಲ. ನಮ್ಮ ಮಹಿಳಾ ಕೂಟ ‘ಅನ್ನಪೂರ್ಣೆ’ ಯಾಗಿರದಿದ್ದರೆ ತಾಲೀಮಿನ ಸಂಜೆಗಳಿಗೆ ರಸವಿರುತ್ತಿರಲಿಲ್ಲ. ಡಾರ್ಬಿ ಕನ್ನಡಿಗರ ಒಪ್ಪಂದದ, ಒಗ್ಗಟ್ಟಿನ ಉತ್ಸಾಹ-ಪ್ರೋತ್ಸಾಹ ಇಲ್ಲದೆ ಯು.ಕೆ ಕನ್ನಡಿಗರಲ್ಲಿ ಕರ್ನಾಟಕದ ಜಾನಪದ ಕಲೆ, ಸೊಗಡಿನ ಸುವಾಸನೆ ಹರಡೋಕ್ಕೆ ಆಗ್ತಿರಲಿಲ್ಲ. ಕನ್ನಡ ಬಳಗದ ಕಾರ್ಯಕ್ರಮದಲ್ಲಿ ಕಡೆ ಕಾಲದಲ್ಲಿ ಥಟ್ಟಂತ ಒಪ್ಕೊಂಡು ಅರುಣ್ ಅರಸ್ ಹಾಗೂ ಸಾಹಿಲ್ ಹೆಗ್ಡೆ ಆನೆಗೆ ಜೀವ ತರದೇ ಇದ್ದಿದ್ರೆ ಮಕ್ಕಳು ಮರಿಗಳೆಲ್ಲ ಬೆಕ್ಕಸ ಬೆರಗಾಗ್ತಿರಲಿಲ್ಲ. ಆ ಯುಗಾದಿ ಹಬ್ಬಕ್ಕೆ ಹಳ್ಳಿ ಮನೆ ಕಟ್ಟದೇ ಇದ್ದಿದ್ರೆ, ಕರ್ನಾಟಕ ದರ್ಶನಾನೂ  ಇರ್ತಿರಲಿಲ್ಲ, ಮೈಸೂರ್ ದಸರಾನೂ ಇರ್ತಿರಲಿಲ್ಲ!

  • ರಾಮ್ ಶರಣ್       – (ಚಿತ್ರಗಳನ್ನು ಒದಗಿಸಿದ್ದು ಶ್ರೀದೇವಿ ಮತ್ತು ಹರೀಶ್)

    ಕಿರು ವಿಡಿಯೋ/short video

“ಕರ್ನಾಟಕ ದರ್ಶನ” ಹಾಗೂ “ಮೈಸೂರು ದಸರಾ” ಹೇಗಿತ್ತು?

ಲಕ್ಷ್ಮೀನಾರಾಯಣ ಗುಡೂರ ಬರೆದ ವರದಿ 

ಡಾರ್ಬಿ ದೀಪಾವಳಿ ಉತ್ಸವದ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಡಾರ್ಬಿ ಕನ್ನಡ ಸಂಘದ ಪ್ರಸ್ತುತಿಗಳಾದ “ಕರ್ನಾಟಕ ದರ್ಶನ” ಹಾಗೂ “ಮೈಸೂರು ದಸರಾ”ಗಳ ಬಗೆಗಿನ ನನ್ನ ಚಿಕ್ಕ ವರದಿ.

ಡಾರ್ಬಿ ಕನ್ನಡ ಸಂಘದ ಮೊದಲನೆಯ ಕಾರ್ಯಕ್ರಮವಾದ “ಕರ್ನಾಟಕ ದರ್ಶನ”ದ ಪ್ರಾರಂಭ ಹಳ್ಳಿಯ ಮನೆಯ ಸುಂದರ ಹಿನ್ನೆಲೆಯಲ್ಲಿ ಆಯಿತು. ಸಹಜಸುಂದರ ಮುಂಜಾವಿನ ಚಿತ್ರಣದೊಂದಿಗೆ ಹವ್ಯಾಸಿ ಕಲಾವಿದರು ಕಾರ್ಯಕ್ರಮವನ್ನು ಆರಂಭಿಸಿದರು. ಅದರೊಂದಿಗೆ ಹಳ್ಳಿಯ ದೈನಂದಿನ ಜೀವನದ ಮೊದಲ ಪುಟವನ್ನು ನಮ್ಮ ಮುಂದೆ ತಂದರು. ಕುಂಟಬಿಲ್ಲೆಯಂತಹ ಮಕ್ಕಳ ಆಟಗಳು ಮುಖ್ಯ ದೃಶ್ಯಗಳೊಂದಿಗೆ ಮಧ್ಯಮಧ್ಯ ಪಾಯಸದಲ್ಲಿಯ ಒಣಹಣ್ಣುಗಳಂತೆ ರುಚಿಯನ್ನು ಹೆಚ್ಚಿಸಿದವು.

ಕೋಲಾಟ, ಒರಳು-ಒನಕೆಗಳೊಂದಿಗೆ ಬತ್ತ ಕುಟ್ಟುವ ಮಹಿಳೆಯರು, ಹೊಲ ಉಳುವ, ಬಿತ್ತನೆಯ, ಸುಗ್ಗಿಕಾಲದ ಚಿತ್ರಣ, ಬಳೆಗಳನ್ನು ಮಾರುವ ಬಳೆಗಾರ, ಹೂಮಾರುವವಳು ಇತ್ಯಾದಿಗಳೊಂದಿಗೆ ಕರ್ನಾಟಕದ ಜಾನಪದ ಸೊಗಡನ್ನು ನೋಡುಗರಿಗೆ ಹಂಚಲಾಯಿತು. ನಂದಿಕೋಲು ಕುಣಿತ, ಕೋಲುಮಂಡೆ ಜಂಗಮರು ಮತ್ತು ಕೀಲುಕುದುರೆ ನೃತ್ಯಗಳು ಕರುನಾಡಿನ ಜಾನಪದ ನೃತ್ಯಗಳ ಪರಂಪರೆಯನ್ನು ನೆನಪಿಸಿದವು. ರಂಗದ ಮೇಲಿನ ದೃಶ್ಯಗಳಿಗೆ ತಕ್ಕಂತೆ ಸುಂದರವಾದ ಹಿನ್ನೆಲೆಯ ಹಾಡುಗಳನ್ನು ಹೊಂದಿಸಲಾಗಿತ್ತು. ಚೆಲ್ಲಿದರೊ ಮಲ್ಲಿಗೆಯಾ, ಬಳೆಗಾರನ ಹಾಡು, ಸುಗ್ಗಿಕಾಲ ಹಿಗ್ಗಿಬಂದಿತೊ, ಶುಭವಾಗತೈತಮ್ಮೊ (ಜನುಮದ ಜೋಡಿ ಚಿತ್ರದ ಗೀತೆ) ಮುಂತಾದ ಹಿನ್ನೆಲೆಯ ಹಾಡುಗಳು ಪ್ರೇಕ್ಷಕರನ್ನು ೮೦-೯೦ರ ದಶಕದ ಜನಪ್ರಿಯ ಹಾಡುಗಳ ಕಾಲಕ್ಕೆ ಕರೆದೊಯ್ದವು.

ಒಟ್ಟಿನಲ್ಲಿ ೩೨ ಬೇರೆ ಬೇರೆ ವಯೋಮಾನದ ಕಲಾವಿದರನ್ನೊಳಗೊಂಡ ಈ ಕಾರ್ಯಕ್ರಮ ತುಂಬಾ ಸುಂದರವಾಗಿ ಮೂಡಿಬಂದಿತು. ಎಲ್ಲಾ ಕಲಾವಿದರ, ನಿರ್ದೇಶಕರ ಪ್ರಯತ್ನ ಯಶಸ್ವಿಯಾಯಿತೆಂದೇ ಹೇಳಬೇಕು.

ಕಿರು ವಿಡಿಯೋ/short video

ಎರಡನೆಯ ಪ್ರಸ್ತುತಿ “ಮೈಸೂರು ದಸರಾ” – ಇದರಲ್ಲಿ ೬೪ ಕಲಾವಿದರಿದ್ದು, ಇಡೀ ದೃಶ್ಯಕಾವ್ಯವನ್ನು ಸೀಮ್ಲೆಸ್ (seamless) ಆಗಿ ಹೆಣೆಯಲಾಗಿತ್ತು. ನಿರ್ವಾಹಕರು ಮೊದಲೇ ಹೇಳಿದಂತೆ ತಂಡಕ್ಕೆ ದೊರೆತ ಸಮಯದ ಪರಿಧಿಯಲ್ಲಿ ಕೆಲವೇ ಜಿಲ್ಲೆಗಳನ್ನು ಪ್ರತಿನಿಧಿಸುವುದು ಸಾಧ್ಯವಿದ್ದು, ದೊರೆತ ಸಮಯವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಲಾಗಿತ್ತು. “ಕರ್ನಾಟಕ ದರ್ಶನ” ಮಾಡಿಸಿ, ಮುಂದಿನ, ಅದಕ್ಕೂ ದೊಡ್ಡ, ಕಾರ್ಯಕ್ರಮ ಹೇಗಿರಬಹುದೆಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿಸುವಲ್ಲಿ ಡಾರ್ಬಿ ಕನ್ನಡ ಸಂಘ ಯಶಸ್ವಿಯಾಗಿತ್ತು.

ಬೆಂಗಳೂರಿನ ಕರಗದೊಂದಿಗೆ ಆರಂಭವಾದ ದಸರಾ ಮೆರವಣಿಗೆ, ಕೊಡಗಿನ ಸಾಂಪ್ರದಾಯಿಕ ನೃತ್ಯ, ಮಂಗಳೂರಿನ ಮೀನುಗಾರರ ಹಾಡು, ಚಿತ್ರದುರ್ಗದ ಡೊಳ್ಳುಕುಣಿತ, ಉತ್ತರ-ಪಶ್ಚಿಮ ಕರ್ನಾಟಕದ ಲಾವಣಿ ಮತ್ತು ಹಾಸನದ ವೀರಗಾಸೆಗಳೊಂದಿಗೆ ಮುಂದುವರೆಯಿತು. ಆಯಾ ಜಿಲ್ಲೆಗಳ ಜಾನಪದ ನೃತ್ಯಗಳೊಂದಿಗೆ ಅಲ್ಲಲ್ಲಿಯ ಇತಿಹಾಸದ ಪುಟಗಳನ್ನು, ದಂತಕಥೆ, ಪುರಾಣಕಥೆಗಳನ್ನು ತಳುಕು ಹಾಕಿದ್ದು ಮನಸ್ಸಿಗೆ ಮೆಚ್ಚುಗೆಯಾಯಿತು. ಉದಾಹರಣೆಗೆ – ಚಿತ್ರದುರ್ಗದ ಒನಕೆ ಓಬವ್ವ, ಕಿತ್ತೂರಿನ ರಾಣಿ ಚೆನ್ನಮ್ಮ, ಮೈಸೂರಿನ ಚಾಮುಂಡಿ-ಮಹಿಷರ ಕಾಳಗ ಇತ್ಯಾದಿ. ಬೇಲೂರು – ಹಳೇಬೀಡಿನ ಬಾಲೆಯರ ಶಾಸ್ತ್ರೀಯ ನೃತ್ಯ, ಲಾವಣಿ ಮತ್ತು ಇವೆಲ್ಲದರ ಜೊತೆಗೆ ಸಂದರ್ಭಕ್ಕೆ ತಕ್ಕಂತೆ ಅಳವಡಿಸಿದ್ದ ಹಿನ್ನೆಲೆ ಸಂಗೀತ, ನೋಡುಗರ ಕಣ್ಣು – ಮನಸ್ಸಿಗೆ ಮುದವನ್ನು ನೀಡಿದವು.

ಕೊನೆಯಲ್ಲಿ ಮೈಸೂರಿನ ದಸರಾ ಮೆರವಣಿಗೆ, ಆನೆ (ಅರ್ಜುನ) – ತಾಯಿ ಭುವನೇಶ್ವರಿ ಮಂಟಪದ ಅಂಬಾರಿಯೊಂದಿಗೆ ಸಂಪೂರ್ಣವಾಯಿತು. ಆನೆಯ ಮುಂದೆ ಮೈಸೂರಿನ ಮಹಾರಾಜರೇ ಸ್ವತಃ ನಡೆದು ಬಂದು ಎಲ್ಲರನ್ನು ವಂದಿಸಿದರು!

ಈ ಎರಡೂ ನೃತ್ಯಗೀತಗಳು ಯುಕೆ ಕನ್ನಡ ಬಳಗ ಆಯೋಜಿಸಿದ್ದ ೨೦೧೬ರ ಡಾರ್ಬಿ ದೀಪಾವಳಿ ಮಿಲನದ ಸಾಂಸ್ಕೃತಿಕ ಕಾರ್ಯಕ್ರಮದ ಹೈಲೈಟ್ಗಳಲ್ಲಿ ಒಂದಾಗಿದ್ದವೆಂದರೆ ತಪ್ಪೇನಿಲ್ಲ. ಅದರ ಯಶಸ್ಸಿನ ಪಾಲು ಪ್ರತಿಯೊಬ್ಬ ಕಲಾವಿದರನ್ನು ಸೇರಿ,  ನೃತ್ಯಗೀತಗಳ ಪರಿಕಲ್ಪನೆ ಮಾಡಿದ ಶ್ರೀದೇವಿ ವಲ್ಲೀಶ್ ಮತ್ತು ಹರೀಶ್ ರಾಮಯ್ಯ, ನಿರ್ದೇಶಕಿ ಶ್ರೀದೇವಿ ವಲ್ಲೀಶ್ ಮತ್ತು ತಾಂತ್ರಿಕ ನಿರ್ವಾಹಕ ಹರೀಶ್ ರಾಮಯ್ಯ ಅವರೆಲ್ಲರದೂ ಹೌದು. ಆನೆಯಲ್ಲಿ ಅಡಗಿ, ಕಣ್ಣಿಲ್ಲದ ಆನೆಯ ಕಾಲುಗಳಾಗಿ, ಭುವನೇಶ್ವರಿಯ ಅಂಬಾರಿ ಹೊತ್ತು ಪೂರ್ತಿ ಮೆರವಣಿಗೆಯನ್ನು ಮುಗಿಸಿದ ಸಾಹಿಲ್ ಹೆಗ್ಡೆ ಹಾಗೂ ಅರುಣ ಅರಸ್ ಅವರನ್ನು ಮರೆಯುವಂತಿಲ್ಲ.

ಅಷ್ಟು ದೊಡ್ಡ ಗುಂಪನ್ನು, ಸಣ್ಣ ಸಣ್ಣ ಗುಂಪುಗಳನ್ನಾಗಿ ವಿಂಗಡಿಸಿ, ಪ್ರತಿ ಗುಂಪಿನ ನೃತ್ಯ – ಸಂಗೀತಗಳ ಅಭ್ಯಾಸವನ್ನು ಬೇರೆ ಬೇರೆಯಾಗಿ ಮಾಡುವಂತೆ ನೋಡಿಕೊಂಡು, ನಂತರ ಅವೆಲ್ಲ ಬಿಡಿಭಾಗಗಳನ್ನು flat-pack furnitureನಂತೆ ಚೊಕ್ಕಟವಾಗಿ ಜೋಡಿಸಿ ರಂಗದ ಮೇಲೆ ಪ್ರಸ್ತುತ ಪಡಿಸುವುದು ಚಿಕ್ಕ ಕಾರ್ಯವೇನಲ್ಲ.

ಅಂದು ನಡೆದ ಕಾರ್ಯಕ್ರಮ ಹೆಸರಿಗೆ ದೀಪಾವಳಿಯದಾದರೂ, ಕಣ್ಮನ ಸೂರೆಗೊಂಡ ಕರುನಾಡನ್ನು ಎತ್ತಿಹಿಡಿವ ದೃಶ್ಯಗೀತಗಳಿಂದ ಆ ದಿನವನ್ನು ಹೊರನಾಡ ಕನ್ನಡಿಗರಿಗಾಗಿ “ನಾಡಹಬ್ಬ”ವನ್ನಾಗಿ ಮಾರ್ಪಡಿಸಿದ್ದವೆಂದು ಹೇಳಿದರೆ ತಪ್ಪೇನಿಲ್ಲ. ಈ ನಿಟ್ಟಿನಲ್ಲಿ ಯಶಸ್ವಿಯಾದ ಡಾರ್ಬಿ ಕನ್ನಡ ಸಂಘದ ಎಲ್ಲ ೬೪ ಉತ್ಸಾಹಿ ಕಲಾವಿದರು, ಶ್ರೀದೇವಿ ವಲ್ಲೀಶ್ ಹಾಗೂ ಹರೀಶ್ ರಾಮಯ್ಯ ಅವರಿಗೆ, ನೋಡಿ ಆನಂದಿಸಿದ ಪ್ರೇಕ್ಷಕರ ಪರವಾಗಿ ನನ್ನ ಅಭಿವಂದನೆಗಳು ಮತ್ತು ಅಭಿನಂದನೆಗಳು.

  • ಲಕ್ಷ್ಮೀನಾರಾಯಣ ಗುಡೂರ