ಮೂರು ತರಹದ ಕವಿತೆಗಳು – ಕೇಶವ ಕುಲಕರ್ಣಿ

ಈ ವಾರಾಂತ್ಯದ ನಿಮ್ಮ ಓದಿಗೆ ಮೆಲುಕು ಹಾಕಲು ನಾನು ಬರೆದ ಒಂದು ಪುಟ್ಟ ಕವಿತೆ, ಒಂದು ಅನುವಾದಿತ ಗಜಲ್, ಮತ್ತೊಂದಿಷ್ಟು ಝೆನ್-ನೀಲು (ಚುಟುಕು) ಗಳಿವೆ – ಕೇಶವ

ಇಂದು ರಾತ್ರಿ ನಿನಗೊಂದು ಕವಿತೆ ಬರೆಯಬೇಕೆಂದಿದ್ದೆ

ಇಂದು ರಾತ್ರಿ ನಿನಗೊಂದು ಕವಿತೆ ಬರೆಯಬೇಕೆಂದಿದ್ದೆ
ಆದರೆ ಈ ಊರು ಅಡ್ಡ ಬರುತ್ತಿದೆ

ನಾಳೆ ಎಂಬುದೇ ಸುಳ್ಳು ಎಂಬಂತೆ
ದಾರಿಗಳು ತೆರೆಯುತ್ತಲೇ ಇದ್ದವು
ಒಂದೇ ದಿನ ಬದುಕುವ ಜೀವಿಗಳಂತೆ
ನಾವು ಅಲೆದಾಡಿದೆವು

ಹಾಗಾಗಿ ಆ ಕವಿತೆ
ಆ ನಡಿಗೆಯಾಯಿತು
ನಗುವಾಯಿತು
ರಸ್ತೆ ದಾಟುವ ನಡುವಿನ
ಮೌನದ ಕ್ಷಣಗಳಾಯಿತು

ಬಹುಶಃ ಇದೇ ನಿಜವಾದ ಕವಿತೆ
ಪ್ರತಿಕ್ಷಣವನ್ನೂ ಜೀವಿಸಿದ ಮೇಲೆ
ಬರೆಯಲು ಉಳಿಯುವುದಾದರೂ ಏನು?

ಬದುಕಿಗಿಂತ ಕಠಿಣ ಶಿಕ್ಷೆಯೇ ಇಲ್ಲ

ಬದುಕಿಗಿಂತ ಕಠಿಣ ಶಿಕ್ಷೆಯೇ ಇಲ್ಲ
ಇನ್ನಾವ ಅಪರಾಧವೂ ಉಳಿಯಲೇ ಇಲ್ಲ

ಚೂರುಚೂರಾಗಿ ಹಂಚಿ ಹೋಗಿರುವೆನು
ನನ್ನ ಪಾಲಿಗೆ ಒಂಚೂರೂ ಇರಲೇ ಇಲ್ಲ

ಜೀವವೇ, ಮರಣವೇ ನಿನ್ನ ಗುರಿ
ಬೇರೆ ಯಾವ ದಾರಿಯೂ ಕಾಣಲೇ ಇಲ್ಲ

ಚೂರು ಹೆಚ್ಚು ಕಡಿಮೆಯಾದರದು ಸತ್ಯವೇ ಅಲ್ಲ
ಸುಳ್ಳಿಗೆ ಮಿತಿಯೆಂಬುದು ಅಳಿಯಲೇ ಇಲ್ಲ

ಜೀವವೇ, ಈಗ ಹೇಳು, ಎಲ್ಲಿಗೆ ಹೋಗೋಣ
ಸಂತೆಯಲ್ಲಿ ವಿಷ ಕೂಡ ಸಿಗಲೇ ಇಲ್ಲ

ಎಂಥ ಅವತಾರ, ಎಂಥ ಪೈಗಂಬರ
ಅನಿಸುತಿದೆ ದೇವರು ಇರಲೇ ಇಲ್ಲ

ಚಿನ್ನದ ಚೌಕಟ್ಟನು ಹಾಕಿದರೆ ಏನು
ಕನ್ನಡಿಗೆ ಸುಳ್ಳು ಹೇಳಲು ಬರಲೇ ಇಲ್ಲ

ತನ್ನ ಪದಗಳೊಳಗೆ ತಾನು ಜೀವಂತ
‘ನೂರ್’ ಈ ಲೋಕದಿಂದ ಹೋಗಲೇ ಇಲ್ಲ

(ಕೃಷ್ಣ ಬಿಹಾರಿ ನೂರ್ ಅವರ ज़िंदगी से बड़ी सज़ा ही नहीं ಗಜಲಿನ ಕನ್ನಡ ಭಾವಾನುವಾದ)

ಝೆನ್ ನೀಲುಗಳು (ಗುರು ಶಿಷ್ಯನ ಸಂವಾದಗಳು)

ನೀವು ಹೇಳಿದ್ದು ಸರಿನಾ?
ಕೇಳಿದ ಶಿಷ್ಯ
ನೀನು ಕೇಳಿದ್ದು ಸರಿನಾ?
ಕೇಳಿದ ಗುರು


‘ಯಾವುದು ಸತ್ಯ, ‌ಯಾವುದು ಮಾಯೆ?’
ಎಂದು ಕೇಳಿದ ಶಿಷ್ಯ.
‘ಸತ್ಯ ಎನ್ನುವುದೂ ಮಾಯೆ
ಮಾಯೆ ಎನ್ನುವುದೂ ಸತ್ಯ
ಎನ್ನುವ ಮಾತು ಸಂಪೂರ್ಣ ಸತ್ಯ,’
ಎಂದು ನಕ್ಕ ಗುರು


ನಿಜವಾದ ಸತ್ಯ ಏನೆಂದರೆ ಸತ್ಯ ಎನ್ನುವುದು ಇಲ್ಲವೇ ಇಲ್ಲ
ಅಂದ ಗುರು
ಅದು ಹೇಗೆ ಸಾಧ್ಯ, ಶುದ್ಧ ಸುಳ್ಳು
ಎಂದ ಶಿಷ್ಯ
ಗುರು ನಕ್ಕ


‘ನೀವು ಒಂದು ವಾರ ಉಪನ್ಯಾಸ ಮಾಡಿದ್ದು
ಈ ಜೀವನಕ್ಕೆ ಏನೂ ಅರ್ಥವಿಲ್ಲ
ಎಂದಲ್ಲವೇ?’ ಎಂದು ಕೇಳಿದ ಶಿಷ್ಯ
ಹೌದೆಂದು ಗುರು ತಲೆಯಾಡಿಸಿದ
‘ಹಾಗಾದರೆ ನೀವು ಒಂದು ವಾರ ಮಾತಾಡಿದ್ದಕ್ಕೂ
ಏನೂ ಅರ್ಥವಿಲ್ಲ, ಅಲ್ಲವೇ?’ ಎಂದ
‘ಅಷ್ಟಾದರೂ ಅರ್ಥವಾಯಿತಲ್ಲ,’
ಎಂದು ಗುರು ನಕ್ಕ


‘ನಾನು ಏನನ್ನೋ ಹುಡುಕುತ್ತಿರುವೆ?’ ಎಂದ ಗುರು
‘ಏನದು?’ ಕೇಳಿದ ಶಿಷ್ಯ
‘ನನಗೆ ಗೊತ್ತಿಲ್ಲ, ಅದಕ್ಕೇ ಹುಡುಕುತ್ತಿರುವೆ’
‘ಏನು‌ ಎಂದು ಗೊತ್ತಿರದೇ ಹೇಗೆ ಹುಡುಕುವುದು?’
‘ಸರಿಯಾಗಿ ಹೇಳಿದೆ:
ನಾನು ಏನನ್ನೋ ಹೇಗೇಗೋ ಹುಡುಕುತ್ತಿದ್ದೇನೆ
ಆದರೆ ಅದು ಸಿಕ್ಕರೆ ಖಂಡಿತ ಗುರುತಿಸುತ್ತೇನೆ’


‘ಜೀವನದಲ್ಲಿ ಯಾವುದು ಮುಖ್ಯ
ಯಾವುದು ಮುಖ್ಯವಲ್ಲ?’
ಶಿಷ್ಯ ಕೇಳಿದ
‘ಯಾವುದೂ ಮುಖ್ಯವಲ್ಲ
ಯಾವುದೂ ಅಮುಖ್ಯವಲ್ಲ,’
ಗುರು ಹೇಳಿದ,
‘ನಿನ್ನ ಪ್ರಶ್ನೆಯನ್ನೂ ಸೇರಿಸಿ
ನನ್ನ ಉತ್ತರವನ್ನೂ ಸೇರಿಸಿ’


‘ಬುದ್ಧನಾಗುವುದು ಹೇಗೆ?’
ಕೇಳಿದ‌ ಶಿಷ್ಯ.
‘ಬುದ್ಧನಾಗುವ ಆಸೆಯನ್ನು ಬಿಡುವುದು,’
ಹೇಳಿದ‌ ಗುರು.


‘ಜೀವನವನ್ನು ಉತ್ಕಟವಾಗಿ ಬದುಕುವುದು ಎಂದರೇನು?’
ಕೇಳಿದ‌ ಶಿಷ್ಯ
‘ಹೊಟ್ಟೆ ತುಂಬ ಊಟ
ತಿಂದಿದ್ದೆಲ್ಲ ಕರಗುವಂಥ ವ್ಯಾಯಾಮ
ಬಿಲ್ಲಿನಂತೆ ಬಾಗುವ ಯೋಗಾಸನ
ತಲೆ ಒಂಚೂರೇ ಹಗುರಾಗಿಸುವಷ್ಟು ವೈನು
ಮಿತ್ರರು
ಸುಖವಾದ ಹಿತವಾದ ಆತುರವಿಲ್ಲದ ಮೈಥುನ
ಕಣ್ಣತುಂಬ‌ ನಿದ್ದೆ’


‘ಹೇಗೆ ಬದುಕಬೇಕು?’
ಶಿಷ್ಯ ಕೇಳಿದ
‘ನೀನು ಬದುಕಿದ್ದೇ ಬದುಕು,’
ಗುರು ಹೇಳಿದ


‘ಕೊನೆಗಾಲದಲ್ಲಿ ಉಳಿಯುವುದು ಏನು?` ಕೇಳಿದ ಶಿಷ್ಯ,
‘ಸಂಪಾದನೆ?’
‘ಅಲ್ಲ’ ಎಂದ ಗುರು
‘ಯಶಸ್ಸು?’
‘ಅಲ್ಲ’
ದಾನ?’
‘ಅಲ್ಲ’
‘ಗೆಳತನ?’
‘ಅಲ್ಲ’
‘ಪುಣ್ಯ?’
‘ಅಲ್ಲ’
‘ಪಾಪ?’
‘ಅಲ್ಲ’
‘ಜ್ಞಾನ?’
‘ಇಲ್ಲ’
‘ಕರ್ಮ?’
‘ಇಲ್ಲ’
ಭಕ್ತಿ?’
‘ಇಲ್ಲ’
‘ದೇವರು?’
‘ಇಲ್ಲ’
‘ಪಶ್ಚಾತ್ತಾಪ?’
‘ಇಲ್ಲ’
‘ಸಂತೋಷದ ದಿನಗಳು?’
‘ಇಲ್ಲ’
‘ನೀವು ಕಲಿಸಿದ ಆಧ್ಯಾತ್ಮ?’
‘ಅದಂತೂ ಅಪ್ರಯೋಜಕ’
‘ಮತ್ತಿನ್ನೇನು?’
‘ಯಾವುದೂ‌ ಇಲ್ಲ’


ಪ್ರವಚನ ಮುಗಿದ ಮೇಲೆ
‘ನಿಮ್ಮ ಮಾತಿನಲ್ಲಿ ವಿರೋಧಾಭಾಸವಿತ್ತು
ಎನಿಸುತ್ತೆ, ಯಾವುದು ಸತ್ಯ?’
ಎಂದು ಕೇಳಿದ ಶಿಷ್ಯ
‘ನಾನು ಇಲ್ಲಿಯವರೆಗೆ ಹೇಳಿರುವುದೆಲ್ಲ ಸುಳ್ಳು
ಮುಂದಿನ ಕ್ಷಣ ಅದೂ ಕೂಡ ಸುಳ್ಳು’
ಎಂದ ಗುರು


ಶಿಷ್ಯ ಕೇಳಿದನ,
‘ಜೀವನದ ಉದ್ದೇಶವೇನು?’
ಗುರು ತಿರುಗಿ ಕೇಳಿದನು,
‘ಜೀವನಕ್ಕೆ ಉದ್ದೇಶ ಏಕಿರಬೇಕು?’


‘ಜ್ಞಾನೋದಯ ಎಂದರೆ ಏನು?’
ಶಿಷ್ಯ ಕೇಳಿದ, ಗುರು ಹೇಳಿದ,
‘ಪಾತ್ರೆ ತೊಳೆಯುವಾಗ ಪಾತ್ರೆ ತೊಳೆಯುವುದು
ಅಡುಗೆ ಮಾಡುವಾಗ ಅಡುಗೆ ಮಾಡುವುದು
ಊಟ ಮಾಡುವಾಗ ಊಟ ಮಾಡುವುದು
ಕೆಲಸ ಮಾಡುವಾಗ ಕೆಲಸ ಮಾಡುವುದು’


‘ದುಃಖದಿಂದ‌ ಬಿಡುಗಡೆ ಪಡೆಯುವುದು ಹೇಗೆ?’
ಕೇಳಿದ ಶಿಷ್ಯ; ಗುರು ಕೇಳಿದ,
‘ಸುಖದಿಂದ ಬಿಡುಗಡೆ ಪಡೆಯುವುದು ಹೇಗೆ?
ಎಂದು ಯಾವತ್ತಾದರೂ ಕೇಳಿಕೊಂಡಿದ್ದೀಯಾ?’


‘ಯಾಕೆ ಎಲ್ಲರೂ ಬುದ್ಧರಾಗಬೇಕು?’
ಕೇಳಿದ ಶಿಷ್ಯ; ಗುರು ಹೇಳಿದ
‘ಬುದ್ಧ ಯಾರು ಬೇಕಾದರೂ
ಬುದ್ಧರಾಗಬಹುದು ಎಂದದ್ದು
ಯಾಕೆ ಆಗಬೇಕು ಎಂದು ಹೇಳಲಿಲ್ಲ’

Leave a comment