ಬಹು ಮುಖ ಪ್ರತಿಭೆಯ ಕವಯಿತ್ರಿ ಸರೋಜಿನಿಯವರು ಈಗಾಗಲೇ ಮೂರು ಕವನ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಇವಲ್ಲದೆ ಎರಡು ಅನುಭವ ಕಥನಗಳನ್ನೂ ಬರೆದಿದ್ದಾರೆ. ಆ ಪ್ರದೇಶದ ಭಾಷೆಯ ಸೊಗಡನ್ನು ಅವರ ಬರಹದಲ್ಲಿ ಸವಿಯಬಹುದು. ಬೆಳಗಾಂವಿಯ ಹತ್ತಿರದ ಹುಕ್ಕೇರಿಯಲ್ಲಿ ಹುಟ್ಟಿದ ಅವರಿಗೆ ಬಾಲಕಿಯಾಗಿದ್ದಾಗಿನಿಂದಲೂ ಓದು ಮತ್ತು ಹಾಡಿನ ಹುಚ್ಚು. ಅವರಿಗೆ ಹಿಂದುಸ್ತಾನಿ ಸಂಗೀತದಲ್ಲೂ ಪರಿಣಿತಿಯಿದೆ. ತಾವೇ ರಚಿಸಿ ಪ್ರಕಟಿಸಿದ ಪುಸ್ತಕದಿಂದ ಸಂಪ್ರದಾಯದ ಹಾಡುಗಳನ್ನು ರಾಗ ಸಂಯೋಜನೆ ಮಾಡಿ ರೇಡಿಯೋ ಕಾರ್ಯಕ್ರಮದಲ್ಲೂ ಹಾಡಿದ್ದಾರೆ. ಬಹು ಕಾಲದಿಂದಲೂ ’ಅನಿವಾಸ”ಯ ಓದುಗರು ಸಹ ಎಂದು ಹೇಳಲು ಹೆಮ್ಮೆಯೆನಿಸುತ್ತದೆ. ಕರ್ನಾಟಕದಲ್ಲೆಲ್ಲ ಸರಕಾರಿ ಡಾಕ್ಟರರಾಗಿ ಸೇವೆ ಸಲ್ಲಿಸಿದ ಪತಿಯೊಂದಿಗೆ ’ದೇಶ ಸುತ್ತಿ’ ಆದ ಅನುಭಗಳನ್ನು ’ಡಾಕ್ಟರ್ ಹೆಂಡತಿ’ ಎನ್ನುವ ಪುಸ್ತಕದಲ್ಲಿ ಹೃದ್ಯವಾಗಿ ಬಣ್ಣಿಸಿ ದಾಖಲಿಸಿದ್ದಾರೆ. ಇತ್ತೀಚೆಗಷ್ಟೆ ಪ್ರಕಟವಾಗಿರುವ ಅವರ ’ಮಹಾಪ್ರಸ್ಥಾನ’* ಕವನ ಸಂಗ್ರಹದಿಂದ ಇಂದಿನ ಮೂರು ಕವನಗಳನ್ನು ಅನಿವಾಸಿಯಲ್ಲಿ ಪ್ರಕಟಿಸಲು ಅನುಮತಿ ಕೊಟ್ಟದ್ದಕ್ಕೆ ನಾವು ಅವರಿಗೆ ಆಭಾರಿ. ಇಂಥ ಅಪರೂಪದ ಸಾಹಿತಿಯ ಕವನಗಳನ್ನು ಓದಿ ಅವಶ್ಯ ನಿಮ್ಮ ಅನಿಸಿಕೆಯ ಕಮೆಂಟ್ ಮಾಡಿರಿ. (-ಸಂ)
1) ನಕ್ಕಳವಳು ...
ನಕ್ಕಳವಳು ತನ್ನನೇ ತಾ ನೋಡಿ...
ತನಗೇ ಗೊತ್ತಿಲ್ಲದ ತನ್ನ ಹತ್ತು ಹಲವು
ಚಿತ್ರಗಳ ನೂರು ಗುಣಗಳ ಹೆಸರುಗಳ
ಎಳೆ ಎಳೆಯಾಗಿ ಹೆಣೆದು ಬಂಧಿಸಿದ
ಆ ನವಿರು ಬಲೆಯತ್ತ ಮತ್ತೆ ನೋಡುತ
ಮಿಸುಕಲಾಗದೆ ಅತ್ತಿತ್ತ ನಿಟ್ಟಿಸುತ್ತ
ನಕ್ಕಳವಳು ಮತ್ತೆ...
ತನ್ನನೇ ಅಬಲೆ ಎಂದ ನಿರ್ಬಲರ ನೋಡಿ
ತಾ ಹೊತ್ತು ಇಳುಹುವ ಭಾರದ ಅಂದಾಜು
ತೂಗುವ ಬಲ ಇಲ್ಲದ ಗುಂಪಿನ ಮಬ್ಬು ಬೊಬ್ಬೆ
ಕಿವುಡಾಗಿಸಿ, ಕುರುಡಾಗಿಸಿದ ತನ್ನನೇ ನೋಡಿ
ಅಖಂಡ ಸ್ವಾರ್ಥ ತುಂಬಿದ ತನ್ನವರನೇ ನೋಡಿ
ನಕ್ಕಳವಳು ಮತ್ತೆ...
ಕೋಮಲೆ ನೀಎಂದ ಗಟ್ಟಿಗರ ಗಟ್ಟಿತನ ನೋಡಿ
ತನ್ನ ಧ್ವನಿಯಲ್ಲಿನ ಕಸುವನ್ನೆ ನುಂಗಿ ಹಾಕಿ
ಅಬ್ಬರದಿ ನಗುವ ಉಬ್ಬುಬ್ಬಿ ಹಾರುವ ಗಾವಿಲರ
ಗಾವುದ ದೂರವಿರಿಸಿ ನಿರುಕಿಸಿ ಅವರಾಳ
ತನ್ನಾಳದ ಸುಳಿವೇ ಕೊಡದೆ ಗೂಢತೆ ತುಂಬಿ
ನಕ್ಕಳವಳು ಮತ್ತೆ...
ತನಗೆ ಕಟ್ಟಿದ ಪಟ್ಟಗಳ ಇಷ್ಟುದ್ದ ಪಟ್ಟಿ ನೋಡಿ
ಆ ಪಟ್ಟದ ಗಟ್ಟಿ ಬುಡವ ಅಲ್ಲಾಡಿಸಿ ಪೊಳ್ಳಾಗಿಸಿ
ಗಟ್ಟಿ ಮುಟ್ಟಾದ ಕೋಟೆಯೊಳಗಿಟ್ಟು ಮೆರೆಯಿಸಿ
ಅರ್ಥವಿಲ್ಲದ ಆ ಭಂಡತನಕೆ ನೂರು ಹೆಸರಿಟ್ಟು
ಅಗಡಾದಿಗಡಿ ಮೆರೆವ ನೆರವಿ ನೋಡಿ ನೋಡಿ
ನಕ್ಕಳವಳು ಮತ್ತೆ...
ಹೌದು ತೆರಪಿಲ್ಲದ ನಗುವಲ್ಲಿ ತೇಲಿ ಮುಳುಗಿ
ಯಾರಿಗ್ಯಾವ ಹೆಸರು ಕೊಡದೆ ಚಿತ್ರ ಬರೆಯದೆ
ಎಲ್ಲವನೂ ತನ್ನೊಡಲಲಿ ಹುದುಗಿಸಿ ಮೌನದಿ
ನಿಶ್ಯಬ್ದದಲೆ ಶಬ್ದ ತುಂಬಿಸಿ ಯಾರಳವಿಗೂ ನಿಲುಕದ
ತನ್ನನೇ ತಾ ನೋಡಿ ಬಲು ಹೆಮ್ಮೆಯಿಂದ
2) ಸಾವು ಅಂದ್ರೆ ಸಾವು ಅಷ್ಟೇ!
ಯಾಕೋ ಸಮಯದ ಜೊತೆ ಈಗ ಬಲು ಸ್ನೇಹ
ಕೆಲಸ ಇಲ್ಲ ಬೊಗಸೆ ಇಲ್ಲ ಖಾಲಿ ಖಾಲಿ ಎಲ್ಲ
ಖಾಲಿ ನೋಟ ಸಮಯದಂತೆ ಹೂಬೇಹೂಬ
ಕುರುಡು ಕಣ್ಣು ಕಿವುಡು ಕಿವಿ ಮೌನ ಮಾತಲ್ಲೂ
ನಡೆವುದು ಸಮಯದ ಕೈಗೆ ಕೈ ಜೋಡಿಸಿ ಅಷ್ಟೇ!
ಸಮಯದ ಮನವೂ ತುಂಬಿ ಭಾರ ಬಹುಶಃ
ಸುರಿಯದ ಕಾರ್ಮುಗಿಲು! ಉಸಿರದ ಮನಸು !
ನರಳಿ ನಲುಗಿ ಏನೋ ಘನ ಕಾರ್ಯದಡಿ ಸಿಲುಕಿ
ಹೆಜ್ಜೆ ಸರಿಸಿದಾಗ ತೋರಿ ಹುಸಿ ಗಾಂಭೀರ್ಯ
ಬಲು ಆಪ್ತವೀ ಸಮಯ ಸಂದೇಹವಿಲ್ಲ ಚೂರೂ
ಮತ್ತೆ ಸಾಧ್ಯವೆ ಇನ್ನಾರಿಗೆ ಹೇಳು ಆ ಕೆಲಸ
ಅಲೆಯಂತೆ ತೇಲಿ ನೆಲೆಯಿಲ್ಲದ ತಾವಲ್ಲಿ ನೆಲೆ
ಸಿಕ್ಕಿದಂತೆ ಭ್ರಮೆ ಹುಟ್ಟಿಸಿ ಜೀವಕೆ ಅಂಟಿಸಿ ಬಿಟ್ಟ
ಬಲು ಅಮೂಲ್ಯ ಬದುಕು ಎಂಬ ನಂಬಿಕೆಯ!
ಆ ಗಡಸುಗಾರ ಸಮಯ ಬಲು ಮೆಚ್ಚು ನನಗೆ!
ಇಷ್ಟಾಗಿಯೂ ಆ ಬದುಕಾದರೂ ಏನು ಮಹಾ
ಆಕಸ್ಮಿಕ ಅಚ್ಚರಿ ದಿಗ್ಘ್ಮೂಢತೆಗಳ ಒಟ್ಟು ಮೊತ್ತ
ಹಸಿ ಸುಳ್ಳು ನೋವು ನಲಿವು ಸುಖ ದು:ಖ ಎಲ್ಲ
ಬರಡು ಬಯಲು ಅಲ್ಲುಂಟು ಹಸಿರೆಂಬ ಭ್ರಾಂತಿ
ಜಾದೂಗಾರ ಸಮಯದ ಮೋಡಿಗೆ ಮರುಳು ನಾ!
ಅದೇ ಮರುಳಿನ ನೆರಳಲಿ ಓಡಿಸಿ ಆಡಿಸಿ ಜಾರಿಸಿ
ಜಾಲಗಾರನ ಮೀರಿ ಪಟ್ಟಾಗಿ ಸಿಗಿಸಿ ಜಾಲದಲ್ಲಿ
ಕೊನೆಗೆ ಸಹನೆ ತಪ್ಪಿಸಿ,ವಿರಾಮಕೆ ಹಾತೊರೆಯೆ ಜೀವ
ದೊಡ್ಡದಾಗಿ ಕೈ ಚಾಚಿ ಬಾ ಒಯ್ವೆ ಅಲ್ಲಿದೆ ಶಾಂತಿ ತಿರುಗಿ ಬಾರದಲ್ಲಿ
ಬರಿ ದೊಡ್ಡ ಮಾತು ಸಮಯದ್ದು!ಸಾವು ಅಂದ್ರೆ ಸಾವು ಅಷ್ಟೇ ಇನ್ನೇನಿದೆ !
ಆ ಉಪಾಯಗಾರ ಸಮಯ ನನಗೆ ಬಲು ಇಷ್ಟ!
3) ಹಕ್ಕಿಲ್ಲ ಪೇದೆಗಳಿಗೆ
ನೋಡ್ತಾನೆ ಇದೀನಿ ಗಮನವಿಟ್ಟು
ಇಂಚಿಂಚು ಬಿಡದೆ ಹೊಂಚು ಹಾಕಿ
ಮನ ಈಗೀಗ ಅಂತರ್ಮುಖಿ ಯಾಕೊ
ಅದೆನೋ ಗೂಢ ಗಾಢ ಯೋಚನೆ
ನೋಟ ದೂರ ಅಗಮ್ಯ ದಿಗಂತದತ್ತ
ಹೂಂ ಈಗಲೂ ಅದೇ ಸಮಾಧಿ ಸ್ಥಿತಿ
ಸೊರ ಸೊರ ಮೂಗು ತುಸು ಏದುಸಿರು
ಕಣ್ಣಾಲಿ ತುಂಬ ನೋವಿನ ಗೀಚಾಟ
ಏನೋ ನೋಡ್ತದೆ ಅದೇನೋ ಲೆಕ್ಕಾಚಾರ
ಬುದ್ಧಿ ಏನಾದ್ರೂ ತನ್ನ ಚಾರ್ಜ್ ಕೊಟ್ತಾ
ಬುದ್ಧಿಯತ್ತ ಕಡೆಗಣ್ಣ ನೋಟ ಬೀರಿದ್ರೆ
ಎದೆ ಝಲ್ಲೆಂದು ಬಡಿತ ತಮಟೆ ಹಾಗೆ
ಮತ್ತೇನು ಮುಖ ಸಪ್ಪೆ ಕಣ್ಣು ಕೊಳ
ಹಣೆ ತುಂಬ ನೂರೆಂಟು ಗಂಟು ಗೀರು
ಅದಕೂ ಚಿಂತೆ ತನ್ನದೆ ಒಡಹುಟ್ಟಿದ್ದಲ್ವಾ
ಎಳೆದೆ ಮೆಲ್ಲಗೆ ಮನದತ್ತ ಬುದ್ಧಿಯನು
ಕಣ್ಸನ್ನೆ ಮಾಡಿ ತುಟಿಯ ಮೇಲೆ ಬೊಟ್ಟಿಟ್ಟು
ಕೆರೆದು ಧ್ಯನಿ ಸದ್ದು ಮಾಡಿದ್ರೂ ಊಂ ಹೂಂ
ಥೇಟ್ ವಿಗ್ರಹದೇ ಪೋಸು ಮಿಸುಕಲಿಲ್ಲ
ಘಬರಾಸಿ ಅಲ್ಲಾಡಿಸಿದ್ರೆ ನಿರ್ಜೀವ ನೋಟ
ಏನಾಗಿದೆ ಇದೇನು ಹುಡುಗಾಟ ನಿಂದು
ಕಿರುಚಿತು ಬುದ್ಧಿ ಕೈ ತಿರುಚಿ ತನ್ನನೆ ಪರಚಿ
ದೊಡ್ಡ ಉಸಿರು ಬಿಟ್ಟು ಮನ ತಿರುಗಿತಿತ್ತ
ಕಾಲನ ಕಾಲಿಗೆ ಬೇಡಿ ಸರಪಳಿ ಬಿಗಿಬೇಕು
ಅತ್ತಿತ್ತ ಹೊರಳಾಡದಂತೆ ನೆಟ್ಟಗೆ ನಿಲ್ಲಿಸಿ
ಈಗ ಬುದ್ಧಿಯ ಜಾಣ ನೋಟವೂ ತಪ್ತು ದಿಕ್ಕು
ಅತ್ತಿತ್ತ ತಿರುಗಿ ಮತ್ತೆ ನೆಲೆಯೂರಿ ಮನದತ್ತ
ತಲೆ ಸರೀನಾ ತಿಂದಿದ್ದು ಬರೋಬ್ಬರಿ ಅಲ್ವಾ
ಎಲ್ಲೋಗಿದ್ದೆ ಏನ ನೋಡಿದೆ ಗಾಳಿ ಸೋಂಕಾ
ಇಟ್ತು ನೂರು ಪ್ರಶ್ನೆ ನನ್ನದೂ ಬಿಡದೆ ಸೇರಿಸಿ
ಮನ ಕಕ್ಕಿತು ಈಶನ ಕಂಠದ ಕಹಿ ಎಲ್ಲ ತುಂಬಿ
ಯೋಚಿಸು ಆತ ಮಾಡೋದೆಂಥ ಘನಕಾರ್ಯ
ನಿನ್ನೆದನ್ನ ಎಗ್ಗಿಲ್ಲದೆ ಸರಿಸಿ ಮೆಟ್ಟಿ ನಿಂತು ಅವನ್ನ
ತ್ರಿವಿಕ್ರಮನಾಗ್ತನಲಾ ಇಂದು ನಾಳೆ ಅಂತ
ನೆನಪುಗಳಂತ ದೊಡ್ಡ ಲೇಬಲ್ ಹಚ್ಚಿದ್ರಾಯ್ತಾ
ಒಂದು ಗಳಿಗೆ ಬುದ್ಧಿಗೂ ಬಾಯಿ ಬಂದಾಯ್ತು
ನಿಜ ಇದಿಷ್ಟೇ ಅಲ್ವೆ ಕಾಲನ ಕೆಲಸ ಅರ್ಥವಿಲ್ಲದ್ದು
ಏನು ಸಾಧನೆ ಅನಂತ ನೋವು ಜೀವಗಳಿಗೆ
ಉಸರಿರುವ ವರೆಗೂ ಕೊರಗು ತಹತಹ ಅಷ್ಟೇ
ಇದೆ ಮನಕೂ ತಲೆ ಅನ್ಕೊಂಡ್ರೂ ಎಲ್ಲೊ ತಪ್ತು
ಮರುಚಣ ಫಕ್ಕಂತ ಹೊಳೀತು ಮಿಂಚು ನಕ್ಕಿತು ಬರೋಬ್ಬರದೆ
ತಾಳಮೇಳಿಲ್ಲದ ವಿಚಾರವ್ಯಾಕೆ
ನಿನ್ನೆಯ ಮೆಟ್ಟದಿದ್ರೆ ಹೊಸದು ಏಳೋದು ಹೇಗೆ
ಬಿಸಿಲು ಸರಿದು ಮಳೆ, ಚಿಗುರು ಹಣ್ಣು ಬೀಜ ನಿನ್ನ
ಅಸಲು ಮಂಕು ತಾಕಿತೊಂದು ಚಣ ನಂಗೆ
ಮೊಗ ಬಾಗಿ ನೆಲಕ್ಕೊರಗಿ ಬಿಡಬೇಕೆ ಮನಸು
ನಾ ಹೇಗೆ ಸಹಿಸಲಿ ಬಾಚಿ ತಬ್ಬಿ ಎರಡನ್ನೂ
ಹೇಳ್ದೆ ಕಂಬನಿಯ ಬಿಂದುಗಳಲಿ ಮೀಯಿಸುತ
ಏನಿಲ್ಲ ಬಂದಂತೆ ಹೋಗೋದಷ್ಟೆ ನಮ್ಮದು
ಹಕ್ಕಿಲ್ಲ ಬದಲಿಸಲು ಈ ಚದುರಂಗದಾಟದ ಪೇದೆಗಳಿಗೆ!!
ಬಾಯಿ ಕಟ್ತು ನಂಗೂ!
ಸರೋಜಿನಿ ಪಡಸಲಗಿ
ಬೆಂಗಳೂರು
Publisher:
ಅಣಕು ರಾಮನಾಥ !
ತೇಜು ಪ್ರಕಾಶನ ಬೆಂಗಳೂರು
+91 9448050463