ದೇಶಭಕ್ತಿ ಎಂದರೆ ಗಡಿಯಲ್ಲಿ ಶಸ್ತ್ರ ಹಿಡಿದು ಹೋರಾಡುವುದಕ್ಕೆ ಸೀಮಿತವಿಲ್ಲ; ಅಗತ್ಯ ಬಂದಾಗ ತನ್ನ ವೈಯಕ್ತಿಕ ಸುಖ–ಸೌಕರ್ಯ, ಭಯ, ಭವಿಷ್ಯ ಎಲ್ಲವನ್ನೂ ಬದಿಗಿಟ್ಟು ದೇಶಕ್ಕಾಗಿ ನಿಲ್ಲುವ ಧೈರ್ಯವೇ ನಿಜವಾದ ದೇಶಭಕ್ತಿ. ಇಂತಹ ಮೌನವಾದ, ಆದರೆ ಅಪಾರ ತ್ಯಾಗದಿಂದ ಕೂಡಿದ ದೇಶಭಕ್ತಿಯ ಪ್ರತೀಕವೇ ನೂರ್ ಇನಾಯತ್ ಖಾನ್.ಇತಿಹಾಸದ ಪುಟಗಳಲ್ಲಿ ಬಹಳಷ್ಟು ಬಾರಿ ಮಹಿಳೆಯರ ತ್ಯಾಗಗಳು ಅಂಚಿಗೆ ಸರಿದಿವೆ. ವಿಶೇಷವಾಗಿ ವಸಾಹತುಶಾಹಿಯ ಕಾಲಘಟ್ಟದಲ್ಲಿ ಭಾರತ ಮೂಲದ ಅನೇಕರು ನೀಡಿದ ಕೊಡುಗೆಗಳು ಸೂಕ್ತ ಗೌರವವನ್ನು ಪಡೆಯಲಿಲ್ಲ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಗೂಢಚರ್ಯಾ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಿದ ನೂರ್ ಇನಾಯತ್ ಖಾನ್ ಅವರ ಜೀವನವು, ದೇಶಭಕ್ತಿಯ ಅರ್ಥಕ್ಕೆ ಹೊಸ ಆಯಾಮವನ್ನು ನೀಡುತ್ತದೆ. ಈ ಲೇಖನವು ನೂರ್ ಇನಾಯತ್ ಖಾನ್ ಅವರ ಜೀವನ ಕಥೆಯನ್ನು ಮಾತ್ರವಲ್ಲ, ದೇಶಭಕ್ತಿ ಎಂಬ ಮೌಲ್ಯವು ಜಾತಿ, ಧರ್ಮ, ಲಿಂಗ, ರಾಷ್ಟ್ರಗಳ ಗಡಿಗಳನ್ನು ಮೀರಿ ಮಾನವೀಯತೆಯೊಂದಿಗೆ ಬೆಸೆಯಲ್ಪಟ್ಟಿರುತ್ತದೆ ಎಂಬ ಸತ್ಯವನ್ನು ನಮ್ಮ ಮುಂದಿಡುತ್ತದೆ. ಇಂತಹ ಮರೆತುಹೋಗಿರುವ ವೀರಗಾಥೆಗಳು ಪುನಃ ಓದಿಗೆ ಬರುವುದೇ ನಮ್ಮ ಇತಿಹಾಸದ ಜವಾಬ್ದಾರಿ.ನೂರ್ ಇನಾಯತ್ ಖಾನ್ ಅವರ ಕಥೆ, ದೇಶಭಕ್ತಿ ಎಂದರೆ ಘೋಷಣೆ ಅಲ್ಲ; ಅದು ಮೌನ ತ್ಯಾಗ, ಅಚಲ ನಿಷ್ಠೆ ಮತ್ತು ಕೊನೆಯ ಉಸಿರಿನವರೆಗಿನ ಧೈರ್ಯ ಎಂಬುದನ್ನು ನಮಗೆ ನೆನಪಿಸುತ್ತದೆ.
ಇಂತಹ ಮೈಜುಮ್ಮೆನ್ನುವ ರೋಚಕ ಜೀವನ ಚರಿತ್ರೆಯನ್ನು ನಮ್ಮೊಂದಿದೆ ಹಂಚಿಕೊಂಡಿದ್ದಕ್ಕೆ ಈಗಾಗಲೇ ‘ಅನಿವಾಸಿ’ಗೆ ಅನೇಕ ಅಮೂಲ್ಯ ಇತಿಹಾಸ ಪ್ರಬಂಧಗಳನ್ನು ಕೊಟ್ಟು ಸುಪರಿಚಿತರಾದ ರಾಮಮೂರ್ತಿಯವರಿಗೆ ಧನ್ಯವಾದಗಳು.
~ ರಾಧಿಕಾ ಜೋಶಿ
1914–1918 ಮತ್ತು 1939–1945ರಲ್ಲಿ ನಡೆದ ಈ ಎರಡು ಮಹಾಯುದ್ಧಗಳಲ್ಲಿ ಭಾರತದ ಸುಮಾರು ಇಪ್ಪತ್ತು ಲಕ್ಷ ಸೈನಿಕರು ಭಾಗವಹಿಸಿದ್ದರು. ಆದರೆ ಇವರ ತ್ಯಾಗವನ್ನು ನೆನಪಿಸಿಕೊಂಡು ನವೆಂಬರ್ ತಿಂಗಳಲ್ಲಿ ನಡೆಯುವ Remembrance Day ದಿನದಂದು Poppy Wreath ಇಡುವುದು ಅಪರೂಪವಾಗಿದೆ. ಈ ಯುದ್ಧಗಳಲ್ಲಿ ಅನೇಕ ಮಹಿಳೆಯರೂ ತಮ್ಮ ಕೈಲಾದ ಸೇವೆಯನ್ನು ಸಲ್ಲಿಸಿದ್ದರು. ಅವರಲ್ಲಿ ನೂರ್ ಇನಾಯತ್ ಖಾನ್ ಒಬ್ಬಳು. ಈ ಹೆಸರನ್ನು ನೀವು ಬಹುಶಃ ಕೇಳಿರಲಿಕ್ಕಿಲ್ಲ. 112 ವರ್ಷಗಳ ಹಿಂದೆ ಜನಿಸಿದ ಭಾರತ ಮೂಲದ ನೂರ್ ಇನಾಯತ್ ಖಾನ್ ಈ ದೇಶಕ್ಕೆ ನೀಡಿದ ಕೊಡುಗೆ ಅಪಾರವಾದುದು.
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ, ಅಂದಿನ ಪ್ರಧಾನಮಂತ್ರಿ ಸರ್ ವಿಂಸ್ಟನ್ ಚರ್ಚಿಲ್ ಸ್ಥಾಪಿಸಿದ Special Operations Executive (SOE) ವಿಭಾಗಕ್ಕೆ ಸೇರಿ, ಫ್ರಾನ್ಸ್ ದೇಶದಲ್ಲಿದ್ದು ಶತ್ರುಗಳ ಕುರಿತು ಸಂಗ್ರಹಿಸಿದ ಮಾಹಿತಿಯನ್ನು ಅತ್ಯಂತ ಗುಪ್ತವಾಗಿ ವೈರ್‌ಲೆಸ್ ಮೂಲಕ ಲಂಡನ್ ಕಚೇರಿಗೆ ಕಳುಹಿಸುವುದು ಅವಳ ಕೆಲಸವಾಗಿತ್ತು. ಆ ಸಮಯದಲ್ಲಿ ನಾಜಿ ಜರ್ಮನಿ ಫ್ರಾನ್ಸ್ ದೇಶವನ್ನು ಆಕ್ರಮಿಸಿಕೊಂಡಿತ್ತು. ಆದ್ದರಿಂದ ಬ್ರಿಟಿಷ್ ಗೂಢಚಾರಿಗಳು ಅತ್ಯಂತ ಸೂಕ್ಷ್ಮತೆ ಮತ್ತು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗಿತ್ತು. ಸಿಕ್ಕಿಬಿದ್ದರೆ ಸಾವೇ ಶಿಕ್ಷೆ.
ಪ್ರತಿ ದಿನ ಒಂದು ಸುರಕ್ಷಿತ ಮನೆಯಿಂದ ಇನ್ನೊಂದು ಮನೆಗೆ ಗುಪ್ತವಾಗಿ ಸ್ಥಳಾಂತರಗೊಂಡು, ಅಟ್ಟದಲ್ಲೋ ಅಥವಾ ನೆಲಮಾಳಿಗೆಯಲ್ಲೋ ವೈರ್‌ಲೆಸ್ ಉಪಕರಣಗಳನ್ನು ಜೋಡಿಸಿ ಸಂದೇಶ ಕಳುಹಿಸುವುದು ಸುಲಭದ ಕೆಲಸವಾಗಿರಲಿಲ್ಲ. ಶತ್ರುಗಳಿಗೆ ಸುಳಿವು ಸಿಗದಂತೆ ಅವಳು ಅನೇಕ ಹೆಸರುಗಳನ್ನು ಬಳಸುತ್ತಿದ್ದಳು—ಮ್ಯಾಡಲೀನ್, ನೊರಾ ಇತ್ಯಾದಿ. ಆದರೆ ಕೊನೆಗೆ ಒಬ್ಬ ದ್ರೋಹಿಯ ಕಾರಣದಿಂದ ಶತ್ರುಗಳಿಗೆ ಸಿಕ್ಕಿಬಿದ್ದು, ಹಲವಾರು ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿ ಭೀಕರ ಚಿತ್ರಹಿಂಸೆಯನ್ನು ಸಹಿಸಿದರೂ, ಒಂದು ಚೂರು ರಹಸ್ಯವನ್ನೂ ಬಿಟ್ಟು ಕೊಡದ ಧೈರ್ಯಕ್ಕಾಗಿ Dachau Concentration Camp ನಲ್ಲಿ Gestapo ಗುಂಡಿನಿಂದ ಹತ್ಯೆಗೊಳಗಾದಳು.
ಬಾಲ್ಯ ಜೀವನ ಮತ್ತು ಕುಟುಂಬ ಹಿನ್ನೆಲೆ
ತಂದೆ ಹಜರತ್ ಇನಾಯತ್ ಖಾನ್ ಬರೋಡಾ ನಗರದಲ್ಲಿ ಜನಿಸಿದರು. ತಾಯಿ ಕಡೆಯಿಂದ ಅವರು ಮೈಸೂರಿನ ಟಿಪ್ಪು ಸುಲ್ತಾನನ ವಂಶಸ್ಥರು(ಮರಿಮಗ). ಟಿಪ್ಪು ಸುಲ್ತಾನ ಬ್ರಿಟಿಷರ ವಿರುದ್ಧ ಯುದ್ಧ ಮಾಡಿ 1799ರಲ್ಲಿ ಮರಣ ಹೊಂದಿದರು. ಹಜರತ್ ಇನಾಯತ್ ಖಾನ್ ಶಾಂತಿಪ್ರಿಯರಾಗಿದ್ದು, ಇಸ್ಲಾಂ ಧರ್ಮದ ಸೂಫಿ ಪರಂಪರೆಯನ್ನು ಅನುಸರಿಸಿ ಸಂಗೀತವನ್ನು ಕಲಿತವರು. ಈ ಸಂಪ್ರದಾಯವನ್ನು ವಿಶ್ವದಾದ್ಯಂತ ಹರಡುವ ಉದ್ದೇಶದಿಂದ ಅಮೆರಿಕಾ ಮತ್ತು ಯುರೋಪ್‌ನಲ್ಲಿ ಪ್ರವಾಸ ಮಾಡಿದರು.
ತಾಯಿ ಅಮೆರಿಕಾದ ಪ್ರಜೆ ಒರಾ ರೇ ಬೇಕರ್; ನಂತರ ಇಸ್ಲಾಂ ಧರ್ಮ ಸ್ವೀಕರಿಸಿ ಅಮೀನಾ ಬೇಗಂ ಎಂದು ಹೆಸರು ಪಡೆದರು. ಯುರೋಪ್‌ನಲ್ಲಿ ಸಂಚರಿಸಿ ಕೆಲ ವರ್ಷಗಳು ಮಾಸ್ಕೋ ನಗರದಲ್ಲಿ ವಾಸಿಸಿ, 1914ರಲ್ಲಿ ಮೊದಲ ಮಹಾಯುದ್ಧ ಆರಂಭವಾಗುವ ಮೊದಲು ಕುಟುಂಬದೊಂದಿಗೆ ಲಂಡನ್‌ನ ಬ್ಲೂಮ್ಸ್‌ಬರಿ (Bloomsbury)ಯಲ್ಲಿ ನೆಲೆಸಿದರು. ನೂರ್ 01-01-1914ರಂದು ಮಾಸ್ಕೋ ನಗರದಲ್ಲಿ ಜನಿಸಿದರು.
ಮಹಾಯುದ್ಧ ಮುಗಿದ ನಂತರ 1920ರಲ್ಲಿ ಲಂಡನ್‌ನಿಂದ ಪ್ಯಾರಿಸ್‌ಗೆ ಬಂದು ನೆಲೆಸಿದರು. ಇನಾಯತ್ ಖಾನ್ ಸಂಗೀತ ಮತ್ತು ಸೂಫಿ ಧರ್ಮದ ಪ್ರಚಾರ ಆರಂಭಿಸಿದರು. ಆದರೆ 1927ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಅನಾರೋಗ್ಯದಿಂದ ನಿಧನರಾದರು.
13 ವರ್ಷದ ನೂರ್ ಮೇಲೆ ಕುಟುಂಬದ ಹೊಣೆಗಾರಿಕೆ ಬಿದ್ದರೂ, ಅವಳ ವಿದ್ಯಾಭ್ಯಾಸವನ್ನು ಮುಂದುವರೆಸಿ ಪ್ರಸಿದ್ಧ Sorbonne ವಿಶ್ವವಿದ್ಯಾಲಯದಲ್ಲಿ ಮಕ್ಕಳ ಮನೋವಿಜ್ಞಾನ (Child Psychology) ಪದವಿ ಪಡೆದಳು. ಸಂಗೀತದಲ್ಲೂ ಅವಳು ಪ್ರವೀಣಳಾಗಿದ್ದಳು. ನಂತರ ಮಕ್ಕಳ ಪುಸ್ತಕಗಳ ಲೇಖಕಿಯಾಗಿ, 1939ರಲ್ಲಿ ಬೌದ್ಧ ಧರ್ಮದಿಂದ ಪ್ರೇರಿತವಾದ “ಇಪ್ಪತ್ತು ಜಾತಕ ಕಥೆಗಳು” ಸೇರಿದಂತೆ ಹಲವು ಬರಹಗಳು ಫ್ರೆಂಚ್ ಭಾಷೆಯಲ್ಲಿ ಪ್ರಕಟವಾದವು.
ಎರಡನೇ ಮಹಾಯುದ್ಧದಲ್ಲಿ ವೈರ್‌ಲೆಸ್ ಆಪರೇಟರ್
1939ರಲ್ಲಿ ನಾಜಿ ಜರ್ಮನಿ ಯುರೋಪ್ ಖಂಡವನ್ನು ಕಬಳಿಸುವ ಪ್ರಯತ್ನದಿಂದ ಯುದ್ಧ ಆರಂಭವಾಯಿತು. 1940ರಲ್ಲಿ ಫ್ರಾನ್ಸ್ ಜರ್ಮನಿಯ ವಶವಾಯಿತು. ಅಹಿಂಸಾವಾದಿಗಳಾದ ಈ ಕುಟುಂಬ Bordeaux ನಿಂದ ಸರಕು ಸಾಗಿಸುವ ಹಡಗಿನಲ್ಲಿ ಲಂಡನ್‌ಗೆ ಮರಳಿದರು.
ನೂರ್ ಮತ್ತು ಅವಳ ಸಹೋದರ ವಿಲಾಯತ್ ಅವರ ತಂದೆಯಂತೆ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ವಿಮುಕ್ತವಾಗಬೇಕೆಂದು ಕನಸು ಕಂಡಿದ್ದರು. ಆದರೆ ಈಗ ಜರ್ಮನಿ ಯುರೋಪ್ ಖಂಡವನ್ನೇ ಆಕ್ರಮಿಸುವ ಅಪಾಯ ಎದುರಾದ್ದರಿಂದ, ಇದನ್ನು ತಡೆಯಲು ತಮ್ಮ ಕೈಲಾದ ಸೇವೆ ಸಲ್ಲಿಸಲು ನಿರ್ಧರಿಸಿದರು.
ನೂರ್ ಆಗತಾನೆ ಆರಂಭವಾಗಿದ್ದ WAAF (Women’s Auxiliary Air Force) ಗೆ ಸೇರಿ Signals ಮತ್ತು Wireless ವಿಭಾಗದಲ್ಲಿ ತರಬೇತಿ ಪಡೆದು, ಜೂನ್ 1943ರಲ್ಲಿ ಫ್ರಾನ್ಸ್‌ನಲ್ಲಿ ಕೆಲಸ ಆರಂಭಿಸಿದಳು. Gestapo ಪ್ಯಾರಿಸ್‌ನಲ್ಲಿ ಅನೇಕ ಬ್ರಿಟಿಷ್ ಗೂಢಚಾರಿಗಳನ್ನು ಹಿಡಿದು ಕ್ರೂರ ಶಿಕ್ಷೆ ವಿಧಿಸುತ್ತಿತ್ತು. ಇಂತಹ ಅಪಾಯಕರ ಪರಿಸ್ಥಿತಿಯಲ್ಲೂ ನೂರ್ ವೇಷ ಬದಲಿಸಿ ಸುರಕ್ಷಿತ ಮನೆಗಳಿಂದ ಮನೆಗಳಿಗೆ ಸ್ಥಳಾಂತರಗೊಳ್ಳುತ್ತಾ ತನ್ನ ಕೆಲಸ ಮುಂದುವರೆಸಿದಳು.
ಅವಳ ಫ್ರೆಂಚ್ ಭಾಷೆಯ ಉಚ್ಚಾರಣೆ ಸ್ಥಳೀಯರಂತೆಯೇ ಇದ್ದುದರಿಂದ ಅವಳ ಮೇಲೆ ಸಂಶಯ ಬಹಳ ಕಡಿಮೆ ಇತ್ತು. ಅವಳು ಅತ್ಯಂತ ಶಿಸ್ತಿನಿಂದ ನಿರ್ವಹಿಸುತ್ತಿದ್ದ ಕೆಲಸ ಲಂಡನ್‌ನಲ್ಲೂ ಮೆಚ್ಚುಗೆ ಪಡೆದಿತ್ತು. ಆದರೂ ಅವಳ ಸುರಕ್ಷತೆ ಬಗ್ಗೆ ಆತಂಕವಿತ್ತು; ಹಲವು ಬಾರಿ ಅವಳನ್ನು ವಾಪಸ್ಸು ಬರಲು ಕರೆ ಮಾಡಲಾಯಿತು. ಆದರೆ ನೂರ್ ಅದನ್ನು ನಿರಾಕರಿಸಿ ಫ್ರಾನ್ಸ್‌ನಲ್ಲೇ ಕೆಲಸ ಮುಂದುವರೆಸಿದಳು.
ದುರದೃಷ್ಟವಶಾತ್, ಫ್ರಾನ್ಸ್‌ನ ಒಬ್ಬ Double Agent ದ್ರೋಹ ಮಾಡಿದ್ದರಿಂದ Gestapo ನೂರ್ ಅನ್ನು ಸೆರೆಹಿಡಿಯಲು ಸಾಧ್ಯವಾಯಿತು.
ಕೊನೆಯ ದಿನಗಳು
Gestapo ಕಾರಾಗೃಹದಲ್ಲಿ ಇಟ್ಟ ಮೊದಲ ದಿನವೇ ಕಿಟಕಿಯ ಮೂಲಕ ತಪ್ಪಿಸಿಕೊಳ್ಳಲು ಅವಳು ಪ್ರಯತ್ನಿಸಿದಳು. Gestapo ಎಷ್ಟೇ ಹಿಂಸೆ ನೀಡಿದರೂ ನೂರ್ ತನ್ನ Code Word ಸೇರಿದಂತೆ ಯಾವುದೇ ರಹಸ್ಯವನ್ನೂ ಬಿಟ್ಟು ಕೊಡಲಿಲ್ಲ. ಇತರ ಬಂಧಿಗಳೊಂದಿಗೆ ಸೆರೆಯ ಕಂಬಿಗಳನ್ನು ಮುರಿದು ತಪ್ಪಿಸಿಕೊಳ್ಳುವ ಪ್ರಯತ್ನ ವಿಫಲವಾಯಿತು.
ನಂತರ ಅವಳನ್ನು ಏಕಾಂತ ಬಂಧನದಲ್ಲಿ ಇಟ್ಟರೂ ಯಾವುದೂ ಹೊರಬರಲಿಲ್ಲ. ಕೊನೆಗೆ ಅವಳನ್ನು ಸರಪಳಿಗಳಿಂದ ಕಟ್ಟಿ ಜರ್ಮನಿಯ ಕಠಿಣ Pforzheim ಕಾರಾಗೃಹಕ್ಕೆ ಕರೆದೊಯ್ದು ಅಮಾನವೀಯವಾಗಿ ಹಿಂಸೆ ನೀಡಿದರು. ಇದು ನವೆಂಬರ್ 1943. ಹತ್ತು ತಿಂಗಳುಗಳ ಕಾಲ ನಡೆದ ಹಿಂಸೆಯಲ್ಲಿಯೂ ಅವಳಿಂದ ಯಾವುದೇ ರಹಸ್ಯ ಬಯಲಾಗಲಿಲ್ಲ.
ಕೊನೆಗೆ ನೂರ್ ಮತ್ತು ಇನ್ನೂ ನಾಲ್ಕು ಬಂಧಿಗಳನ್ನು Dachau Concentration Camp ಗೆ ಕಳುಹಿಸಿ 13 ಸೆಪ್ಟೆಂಬರ್ 1944ರಂದು ಗುಂಡಿಟ್ಟು ಹತ್ಯೆಗೊಳಗಾದರು (ಇಲ್ಲಿ ಲಕ್ಷಾಂತರ ಯಹೂದಿಗಳನ್ನು ಗ್ಯಾಸ್ಚೇಂಬರ್‌ಗಳಲ್ಲಿ ಹತ್ಯೆ ಮಾಡಲಾಗಿತ್ತು).
ನೂರ್‌ನ ಕೊನೆಯ ಮಾತು ಅವಳ ತುಟಿಗಳಿಂದ ಹೊರಬಂದದ್ದು—“LIBERTÉ”, ಅಂದರೆ ಸ್ವಾತಂತ್ರ್ಯ. ಕೇವಲ 30 ವರ್ಷದ ಈ ಧೈರ್ಯಶಾಲಿ ಮಹಿಳೆ ತನ್ನ ಪ್ರಾಣವನ್ನು ಈ ದೇಶಕ್ಕೆ ಅರ್ಪಿಸಿದಳು.
ಮಹಾಯುದ್ಧ ಮುಗಿದ ನಂತರ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಹೊರಡುವ ಯೋಚನೆ ಅವಳಿಗಿತ್ತು. WAAF ಸೇರಿದ್ದಾಗ ನೂರ್ ಇದನ್ನು ಕೆಲವರ ಮುಂದೆ ಹೇಳಿದ್ದಾಳೆ ಎಂಬುದು ತಿಳಿದುಬರುತ್ತದೆ.
Dachau ನಲ್ಲಿ ಕೊಲೆಯಾದವರ ಅಂತ್ಯಕ್ರಿಯೆ ಯಥೋಚಿತ ಗೌರವದಿಂದ ನಡೆಯುತ್ತಿರಲಿಲ್ಲ; ಇದು Gestapo ಯ ಅಮಾನವೀಯ ವರ್ತನೆಯ ಮತ್ತೊಂದು ಉದಾಹರಣೆ. ಹೀಗೆ ಮೃತರಾದವರ ಸಂಖ್ಯೆ ಅನೇಕ. ಬಹಳ ವರ್ಷಗಳ ನಂತರ ನೂರ್‌ನ ಕೊನೆಯ ದಿನಗಳ ವಿವರಗಳು National Archives ನಲ್ಲಿರುವ ಐತಿಹಾಸಿಕ ದಾಖಲೆಗಳಿಂದ ಬೆಳಕಿಗೆ ಬಂದವು.
ಭಾರತದ ಪತ್ರಕರ್ತೆಯಾದ ಶ್ರೀಮತಿ ಶ್ರಭಾನಿ ಬಸು ಅವರ ಸಂಶೋಧನೆಯಿಂದ ನೂರ್ ಕುರಿತ ಹೆಚ್ಚಿನ ವಿಷಯಗಳು ಬಹಿರಂಗವಾದವು. ನಂತರ “Spy Princess: The Life of Noor Khan” ಎಂಬ ಪುಸ್ತಕ ಪ್ರಕಟವಾಯಿತು.
ಮರಣೋತ್ತರ ಗೌರವಗಳು
ಯುದ್ಧದಲ್ಲಿ ಮೃತರಾದವರ ಸ್ಮಾರಕ Runnymede ನಲ್ಲಿ ಇದೆ; ಅಲ್ಲಿ ನೂರ್ ಹೆಸರನ್ನು ಕಾಣಬಹುದು. ಲಂಡನ್‌ನ ಅನೇಕ ಸ್ಥಳಗಳಲ್ಲಿ ನೂರ್ ಸ್ಮಾರಕಗಳಿವೆ ಮತ್ತು ಅವಳಿಗೆ ಹಲವಾರು ಮರಣೋತ್ತರ ಪ್ರಶಸ್ತಿಗಳು ದೊರೆತಿವೆ. ಮುಖ್ಯವಾದವುಗಳು George Cross ಹಾಗೂ ಫ್ರಾನ್ಸ್ ದೇಶದ Croix de Guerre.
08-11-2012ರಂದು ಅವಳ ಕಂಚಿನ ಪ್ರತಿಮೆಯನ್ನು Bloomsbury ಯ Gordon Square ನಲ್ಲಿ ಅನಾವರಣ ಮಾಡಲಾಯಿತು. ನೂರ್ ವಾಸವಾಗಿದ್ದ Taviton Street ಮನೆಯ ಮುಂದೆ 2020ರಲ್ಲಿ
English Heritage ಸಂಸ್ಥೆ Blue Plaque ಅನ್ನು ಅನಾವರಣ ಮಾಡಿತು. 25-03-2014ರಂದು ನೂರ್ ಭಾವಚಿತ್ರವಿರುವ ಅಂಚೆಚೀಟಿಯನ್ನು ಬಿಡುಗಡೆ ಮಾಡಲಾಯಿತು.
2019ರ ಚಲನಚಿತ್ರ A Call to Spy ಯಲ್ಲಿ ರಾಧಿಕಾ ಆಪ್ಟೆ ನೂರ್ ಪಾತ್ರದಲ್ಲಿ ನಟಿಸಿದ್ದಾರೆ.
The Independent ಪತ್ರಿಕೆಯಲ್ಲಿ ನೂರ್ ಬಗ್ಗೆ ಹೀಗೆ ಬರೆಯಲಾಗಿದೆ:
She died with “freedom” on her lips. It was hers. And it was ours as well.
— ರಾಮಮೂರ್ತಿ
ಕಾಂಗಲ್ ಟನ್, ಚೆಶೈರ್



Acknowledgements
Images from Google
The Princess who became a Spy: Independent Fed 2016 National Archives National Archives

On behalf of Shri Ramamurthy I am posting his comment, addressed to the editor:
“ ರಾಧಿಕ, ಶ್ರೀವತ್ಸ ದೇಸಾಯಿ ಹೇಳಿದಂತೆ ನನ್ನ ಲೇಖನಕ್ಕೆ ಮುಂಚೆ ಬರೆದ ಮುನ್ನುಡಿ ಬಹಳ ಚೆನ್ನಾಗಿದೆ. ದೇಶ ಪ್ರೇಮ ಮತ್ತು ನಮ್ಮ ಕರ್ತವ್ಯ ಬಗ್ಗೆ ಹೇಳಿದ ಮಾತನ್ನು ಸೊಗಸಾಗಿ ಮಂಡಿಸಿದ್ದೀರ
ಇದನ್ನು ದಯವಿಟ್ಟು ನನ್ನ ಪರವಾಗಿ comments ನಲ್ಲಿ ಹಾಕಿ,
ನಾನು direct ಆಗಿ ಕಾಮೆಂಟ್ ಮಾಡುವುದಕ್ಕೆ ಸಾಧ್ಯ ವಾಗಿಲ್ಲ Not accepting it!”
LikeLike
ನೂರ್ ಇನಾಯತ್ ಖಾನ್ ಎನ್ನುವ ಮಹಿಳೆ ಟೀನೇಜ್ ಆಗುತ್ತಿದ್ದಂತೆಯೇ ತಂದೆಯನ್ನು ಕಳೆದುಕೊಂಡು ಜೀವನದಲ್ಲಿ ಅನೇಕ ಕಷ್ಟಗಳನ್ನೆದುರಿಸಿ ದೇಶಕ್ಕಾಗಿ ತನ್ನ ಜೀವವನ್ನೇ ತೆತ್ತ ಈ ಹುತಾತ್ಮಳ ಕಥೆ ನಿಜವಾಗಿಯೂ ರೋಚಕವಾಗಿದೆಯಲ್ಲದೆ ಮೈನವಿರೇಳಿಸುತ್ತದೆ. ಶ್ರಬಾನಿ ಬಾಸು ಅವರ ಸಂಶೋಧನೆಯ ಬಗ್ಗೆ ಕೇಳಿದ್ದೆ. ಬ್ರಿಟಿಷ್ ಭಾರತೀಯ ಇತಿಹಾಸದ ಇನ್ನೊಂದು ಮಹತ್ತಾದ ಅಧ್ಯಾಯವನ್ನು ಬರೆದ ರಾಮಮೂರ್ತಿಯವರಿಗೆ ಅಭಿನಂದನೆಗಳು. ಈ ಪ್ರಕಾರದ ಇತಿಹಾಸದ ಲೇಖನಗಳನ್ನು ನಮಗೆ ಕಾಲಕಾಲಕ್ಕೆ ಬರೆದು ಉಣಿಸುವ, ಅವರ ಉತ್ಸಾಹಕ್ಕೆ ತಲೆಬಾಗುವೆ. ಒಳ್ಳೆಯ inviting ಸಂಪಾದಕೀಯ ಬರೆದು ಸಮಯಕ್ಕೆ ಸರಿಯಾಗಿ ಪ್ರಕಟಿಸಿದ ರಾಧಿಕಾ ಅವರ ಪ್ರಯತ್ನವೂ ‘worth mentioning in the despatches!’ ಆಕೆ ಸರಸ್ವತಿ ವೀಣೆಯನ್ನು ನುಡಿಸಲು ಪಳಗಿದ್ದಳಂತೆ. ಆ ಕೊನೆಯ ಫೋಟೋದಲ್ಲಿದ್ದಂತೆ! ಜೊತೆಗೆ ಹಾರ್ಪ್ ಮತ್ತು ಪಿಯಾನೋ. ಹೆಮ್ಮೆಯ ಸಂಗತಿ!
LikeLike