——————————————————————————————————————–
ಈ ವಾರದ ಅನಿವಾಸಿಯಲ್ಲಿ, ಗಂಗೆಯ ಮಡಿಲಲ್ಲಿ ಮಡಗಿದ ಜೀವಿಗಳ ಮನಸಿನಿಂದ ಮಹಾಪೂರವಾಗಿ ಹರಿದು ಬಂದ ಭಾವನೆಗಳನ್ನು, ಸುಂದರ ಪದಗಳಿಂದ ಸೆರೆ ಹಿಡಿದಿದ್ದಾರೆ ದೀಪಾ ಸಣ್ಣಕ್ಕಿಯವರು. ದಯವಿಟ್ಟು ಓದಿ ಅನಿಸಿಕೆಯನ್ನು ತಿಳಿಸಿ
— ಇಂತಿ ಸಂಪಾದಕ
——————————————————————————————————————–
ಅಂದು ಬೆಳಿಗ್ಗೆ ವಾರಾಣಸಿಯ ನಮೋಘಾಟ್ ನಲ್ಲಿ,
ಕಣ್ಣು ಹಾಯಿಸಿದಷ್ಟೂ ದೂರ ರಭಸದಿಂದ ಪ್ರವಹಿಸುತ್ತಿದ್ದ ಗಂಗೆ, ಉದಯರವಿಯ ಕೇಸರಿಯ ರಂಗವರ್ಷದಲ್ಲಿ ಮಿರಿಮಿರಿಯಾಗಿ ಮಿಂದು ಪುಳಕಗೊಳ್ಳುತ್ತಿದ್ದಳು. ಅಲ್ಲಿಲ್ಲೊಂದು ಬಾನಾಡಿಯ ಹಿಂಡು, ತುಂಬು ಅವಸರದಿಂದ ಚಿಲಿಪಿಲಿಗೈದು ಕ್ಷಣಾರ್ಧದಲ್ಲಿಯೇ ಅದೃಶ್ಯವಾಗುತ್ತದ್ದವು. ಒಂದೆರಡು ದೋಣಿಗಳು ಮತ್ತೊಂದುಬಾರಿ ಗಂಗೆಯ ಅಲೆಅಲೆಗಳಿಗೆ ಕೆನ್ನೆದೊರಲು ತವಕಿಸುತ್ತ ದಡದಲ್ಲೇ ಪ್ರವಾಸಿಗಳ ಬರುವಿಗೆ ಕಾಯುತ್ತಿದ್ದವು. ಹಿಮ್ಮೇಳದಲ್ಲಿ ಸೇತುವೆಯ ಮೇಲೆ ಶಬ್ದಪ್ರಳಯಗೈಯುತ್ತ ಹೋದ ರೈಲಾಗಲಿ ಅಥವಾ ದೋಣಿಪರ್ಯಟನೆಯ ಸವಾರಿಗಾಗಿ ಕೂಗುತ್ತಿದ್ದ ಕೇವಟರ ಆರ್ಭಟವಾಗಲಿ, ಅದೊಂದೂ ಅವಳ ಕಿವಿಗೆ ತಾಕುತ್ತಿರಲಿಲ್ಲ. ಹರಿವ
ನೀರಿಗೆ ಕಾಲ್ಗಳನ್ನು ಇಳಿಬಿಟ್ಟು ಕುಳಿತ ಅವಳ ಮನ ನೆನ್ನೆ ಸಂಜೆ ಕಂಡು ಅತ್ಯದ್ಭುತ ಗಂಗಾರತಿಯನ್ನು ಮೆಲುಕು ಹಾಕುತ್ತಿತ್ತು. ಆ ಸಂಧ್ಯಾರತಿ ಸಮಯದ ರಸಾವೇಶ ರಾತ್ರಿ ಕಳೆದು ಬೆಳಗಾದರೂ ಅವಳ ಅಂತಃಪ್ರಜ್ಞೆಯನ್ನು ಆವರಿಸಿ ಸ್ಥಂಭಿಭೂತಳನ್ನಾಗಿ ಮಾಡಿತ್ತು. ತನ್ನ ಪಾತ್ರಕ್ಕೂ ಮೀರಿ ಹರಿಯುತ್ತಿದ್ದ ಭಾಗಿರಥಿಯಂತೆಯೇ
ಅವಳ ಕಣ್ಣಾಲಿಗಳೂ ಭರಪೂರ ತುಂಬಿ ತುಳುಕಿಯಿಸಲು ತವಕಿಸುತ್ತಿದ್ದವು. ಅದು ಗಂಗಾರತಿಯಿಂದ ಒದಗಿದ ಅನುಭಾವಕ್ಕಿಂತ, ಬರಲಿರುವ ಅವನನ್ನು ಕಾಣುವ ಕಾತರತೆಯೇ ಮುಖ್ಯ ಕಾರಣವಾಗಿತ್ತು!
ನಲವತ್ತು ಸಂವತ್ಸರಗಳನ್ನು ಕಂಡ ಮೇಲೆ ಚಿಗುರೊಡೆದ ಅವರಿಬ್ಬರ ಒಲುಮೆಯು ಪ್ರಬುದ್ಧತೆಯೇ ಮೈವೆತ್ತಂತೆ,
ಅಪರಂಜಿಯಂತೆ ಪರಿಶುದ್ಧವಾಗಿ ದಿನೇದಿನೇ ಪರಿಪಕ್ವವಾಗುತ್ತಿತ್ತು. ಜಗನ್ನಯನಕ್ಕೆ ಅಪ್ರಸ್ತುತವೆಂದೆನಿಸಿದರೂ ಅವರಿಬ್ಬರ ಅಂತರ್ ನಯನಕ್ಕೆ ಈ ಬಂಧ, ಜಗನ್ನಿಯಮಕ್ಕೆ ಪೂರಕವಾಗಿಯೇ ಇದ್ದು ಭಾವಪರಿಧಿಯ ವಿಸ್ತರಣೆಗೆ, ವಿಕಸನಕ್ಕೆ ಒಂದು ಸಾಧನವಾಗಿತ್ತು. ಪೂರ್ವಾಗ್ರಹವಿಲ್ಲದ ನಿರಪೇಕ್ಷಿತವಾದ ವಿವೇಚನಾತ್ಮಕವಾದ ಇವರ ಸಾಂಗತ್ಯ ಇವರಿರ್ವರ ಮಧ್ಯೆ ಅಪರೂಪದ ಭಾವಸೇತುವೊಂದನ್ನು ನಿರ್ಮಿಸಿತ್ತು. ಪದೇಪದೇ ಕೆನ್ನೆಯೆಡೆಗೆ ಜಾರುತ್ತಿದ್ದ ಹರ್ಷಬಿಂದುಗಳನ್ನು ತೋರುಬೆರಳಿಂದ ಮೀಟಿ ಹರಿವ ನೀರಿಗೆ ಸಿಂಚಯಿಸುತ್ತಿದ್ದಳು. ತೀವ್ರಗತಿಯಲ್ಲಿ ಪ್ರವಹಿಸುತ್ತಿದ್ದ ಹೊನ್ನಲೆಗಳನ್ನು ನೆಟ್ಟ ನೋಟದಿಂದ ಸಂಭ್ರಮದಿಂದ ನಿರುಕಿಸುತ್ತಿದ್ದಾಗ, ಬಿಸಿಯುಸಿರೊಂದು
ತನ್ನಾವರಣವನ್ನು ಆವರಿಸಿದಂತಾಯಿತು. ಮೃದುವಾದ ಬಿಸುಪಿನ ಕೈಗಳೆಡು ತನ್ನ ಕಣ್ಣುಗಳನ್ನು ಮುಚ್ಚಿ ಹಿಂದೆಳೆದಾಗ ಮೈಮನಗಳಲ್ಲಿ ಶಕ್ತಿ ಸಂಚಾರವಾದಂತಾಯಿತು. ಅವನು ಇರುವಿನ ಅರಿವಿನಿಂದ ಸುತ್ತಲೆಲ್ಲ ವಸಂತಕಾಲದ ಪ್ರಫುಲ್ಲತೆ ಮೈದೋರಿದಂತಾಯಿತು. ಕಂಗಳನ್ನು ಅಂಗೈಗಳಿಂದ ಬಿಡಿಸಿಕೊಂಡು ಹಿಂತಿರುಗಿ ನೋಡಿದಾಗ ಅದೇ ಆ ಮನದಂಗಳದ ಮಂಗಳಮೂರುತಿ, ನಿಂತಿತ್ತು ಹರುಷದಿ ಚೆಲ್ಲುತ ಬೆಳದಿಂಗಳ ಕಾಂತಿ…
ಕುಶಲಕ್ಷೇಮ,ಸಂಸಾರ ಗ್ರಹಚಾರ, ಸ್ನೇಹಪರರ ಲಘುವ್ಯಾಖ್ಯಾನ ಮತ್ತಿತರ ಲೋಕಾಭಿರಾಮದ ವಿಚಾರಣೆಗಳೊಂದಿಗೆ
ಸಂಭಾಷಣೆಯು ಮೇಲೇರಿ ಕೆಳಿಗಿಳಿಯುತಲಿತ್ತು.
ಈ ಖಾಲಿಹರಟೆಗಳೆಲ್ಲವೂ ಬರೀ ಹೊರಮೇಲ್ಮೆಯ ಔಪಚಾರಿಕ ಮಾತುಗಳೆಂದು ಅವರಿಬ್ಬರೂ ಬಲ್ಲರು. ಕಲಕಿದ ನೀರು ತಿಳಿಯಾಗಿ ಪಾರದರ್ಶಕತೆ ಹೊಂದಿ ಮೇಲೆಯೇ ತಮ್ಮಿಬ್ಬರ ಅಂತರಂಗದ ಪ್ರತಿಬಿಂಬಗಳನ್ನು ಪರಸ್ಪರ ಕಾಣಬಲ್ಲರು ಎಂಬ ಸತ್ಯವನ್ನು ಅರಿತವರಾಗಿದ್ದರು. ಆ ಬಿಂಬಗಳ ಪ್ರತಿಫಲನವನ್ನು ನಿರೀಕ್ಷಿಸುವ ಅವಧಿಯಲ್ಲಿ “ಮೌನ”ವೆಂಬ ಅಶೃತಮಾತು ಅನಿವಾರ್ಯವಾಗಿದ್ದರೂ ಔಚಿತ್ಯವಾಗಿತ್ತು. ಇಂಥ ಬಾಂಧವ್ಯಗಳಲ್ಲಿ ಮಾತ್ರವೇ,
ಮುಜುಗರವನ್ನುಂಟು ಮಾಡುವ ಮೌನವೂ ಕೂಡ ಮುದವಾಗಿ ಮಧುರವಾಗಿ ಆಹ್ಲಾದಕರವೆಂದೆನಿಸುವುದು! ಸುತ್ತಲಿನ ಲೌಕಿಕ ಜಗತ್ತೆಲ್ಲ ತನ್ನ ಪ್ರವೃತ್ತಿಗೆ ಒಪ್ಪಿದಂತೆ ಅನಾಯಾಸವಾಗಿ ಓಡುತ್ತಿದ್ದರೂ ಇದರ ಪರಿವೆಯೇ ಇಲ್ಲದೆ ತಮ್ಮತಮ್ಮ ಮನದ ಮಂದ ಓಘಕ್ಕೆ ಇವರಿರ್ವರು ಸಂಬದ್ಧರಾಗಿದ್ದರು.
“ಗಂಗಾನದಿಯೆಂದರೆ ನಿನ್ನಲ್ಲಿ ಮೊಟ್ಟಮೊದಲಿಗೆ ಮೂಡುವ ಭಾವ ಯಾವುದು?” ಎಂಬ ಪ್ರಶ್ನೆಯ ಮೂಲಕ ಅವಳ
ಸುಪ್ತಪ್ರಜ್ಞೆಯನ್ನು ಜಾಗರೂಕಗೊಳಿಸಲು ಪ್ರಾರಂಭಿಸಿದನು. ಕ್ಷಣಕಾಲ ಅವನ ಕಂಗಳಲ್ಲಿ ಇಣುಕಿ ಅಲ್ಲಿರುವ ಪ್ರಾಮಾಣಿಕ ಕುತೂಹಲವನ್ನು ಕಂಡು ನಿಡುಸಿರುಗೈದಳು. ತನ್ನಲ್ಲಿ ಅದಾಗಲೇ ಹರಿಯುತ್ತಿದ್ದ ವಿಚಾರ ಲಹರಿ ಇವನಲ್ಲಿ ಪ್ರಶ್ನೆಯ ರೂಪವನ್ನು ಹೇಗೆ ತಳೆಯಿತು ಎಂದು ನಸುನಗುತ್ತಾ,
“ನನ್ನ ಅತಿಸಾಮಾನ್ಯ ಅತ್ಯಲ್ಪ ಪ್ರಮಾಣದ ವಿಚಾರದ ಹಂದರದಲ್ಲಿ ಆ ಮಹತ್ ಶಕ್ತಿಯನ್ನು ಹೇಗೆ ಬಣ್ಣಿಸಲಿ ಹೇಳು? ನಮ್ಮ ದಿನನಿತ್ಯದ ಕ್ಷುಲ್ಲಕ ಜನಜೀವನದಲ್ಲಿ ಅವಳು ಧರೆಗಿಳಿದ ಪಾಪ ವಿಮೋಚನೆಯಂದೊ, ನಮ್ಮನ್ನುದ್ಧರಿಸುವ ಭಾಗಿರಥಿಯೆಂದೊ ಅಥವಾ ಸ್ವರ್ಗಕ್ಕೆ ತಲುಪಿಸುವ ಮೋಕ್ಷದಾಯಿನಿಯಾಗಿಯೋ ಪೂಜಿಸಲ್ಪಡುತ್ತಾಳೆ. ನಮ್ಮ ಸಂಸ್ಕೃತಿಯ ಪ್ರತಿಯೊಂದು ಆಚರಣೆಯಲ್ಲಿ ಅಗ್ರಸ್ಥಾನವನ್ನು ಪಡೆದು ಪರಿಶುದ್ಧಿಯನ್ನು ವರದಯಿಸುತ್ತಾಳೆ. ದೇವವ್ರತನಂತಹ ಮಗನನ್ನು ಹೆತ್ತು ಮಹಾಭಾರತ ಕಾವ್ಯಕ್ಕೆ ಯೋಗ್ಯವಾದ ಅನುದಾನವನ್ನು ನೀಡುತ್ತಾಳೆ. ಅಖಿಲ ಭರತಖಂಡದ ಪ್ರತಿ ಆಗುಹೋಗುಗಳಿಗೆ ಆದಿಯಿಂದ ಅಂತ್ಯದವರೆಗೂ ಪ್ರತ್ಯಕ್ಷಸಾಕ್ಷಿಯಾಗಿ ಮೂಕಪ್ರೇಕ್ಷಕಳಾಗಿ ನಿಲ್ಲುವ ಅವಳು ನಿತ್ಯನಿರಂತರತೆಯ ಪ್ರತೀಕವಾಗುತ್ತಾಳೆ. ಇನ್ನು
ನಮ್ಮ ಅತಿನಾಗರಿಕವಾದ ಜೀವನದ ಸ್ವಾರ್ಥಕ್ಕೆ ತುತ್ತಾಗಿ ಅವಳ ಇಂದಿನ ಕರುಣಾಜನಕ ಸ್ಥಿತಿಗೆ ಹೃದಯದುಂಬಿ ಬರುತ್ತದೆ.
ಆದರೆ ಭಾವಜೀವಿಯಾದ ನಾನು ಅವಳನ್ನು ಒಂದು ಹೆಣ್ಣುಜೀವದಂತೆ ನೋಡಲು ಇಚ್ಛಿಸುತ್ತೇನೆ. ಅವಳ ಮತ್ತು ಪರಶಿವನ ಅವಿನಾಭಾವ ಸಂಬಂಧ ನನಗೆ ಸದಾ ಅಚ್ಚರಿಯನ್ನುಂಟು ಮಾಡುತ್ತದೆ. ಅರ್ಧನಾರೀಶ್ವರರೂಪಿಯಾದ ಪಾರ್ವತಿಗೂ ಕೂಡ ಅಲಭ್ಯವಾದ ಶಿವನ ಶಿರೋಮಣಿ ಸ್ಥಾನವನ್ನು ಗಂಗೆಯು ಸಮಂಜಸವಾಗಿ ಅಲಂಕರಿಸುತ್ತಾಳೆ. ಗಂಗಾವತರಣದ ಸಮಯದಲ್ಲಿ, ಮಹಾದೇವನೆಡೆಗೆ ಇದ್ದ ಅದಮ್ಯ ಅನಂತತೆಯ ಒಲವನ್ನು ತನ್ನ ಸಜಲಕಾಯದಲ್ಲಿ ತುಂಬಿಕೊಂಡು ಅದೆಷ್ಟು ತೀವ್ರತೆಯಿಂದ ಅವನತ್ತ ಧುಮುಕಿದ್ದಳೋ… ಅದನ್ನು ಕಣ್ಣಾರೆ ಕಂಡು ಗಂಗಾಧರನಾದ ಶಿವನೇ ವಿಸ್ತರಿಸಿ ಹೇಳಬೇಕು! ಅವನ ಜಟೆಯ ಸಮಕ್ಷಮದಲ್ಲಿ ಅವಳ ಕ್ಷುಬ್ಧಮನಃಸಮುದ್ರ ಶಾಂತವಾಗಿ ಶೀತಲಚಿತ್ತೆಯಾಗಿ ಧರೆಗಿಳಿದಿರಬಹುದು.ಪುರುಷ-ಪ್ರಕೃತಿಯ ಲೀಲೆಗಳಿಗೆ ಅಡೆತಡೆಯಾಗದೇ ವರ್ಷಧಾರೆಯಾಗಿ ಹರಿದು ಪೂರಕಳಾಗಿದ್ದಾಳೆ. ಇದೇ ಕಲ್ಪನೆಯ ಕಾರಣದಿಂದಲೇ ನನಗೆ ಪ್ರತಿ ಗಿರಿಶೃಂಗವು
ಶಂಕರನ ಶಿರದಂತೆ, ಅದನ್ನು ಹೊಂದಿಕೊಂಡು ಹರಿವ ಸಲೀಲಧಾರೆಗಳೆಲ್ಲ ಗಂಗೆಯಂತೆ ಭಾಸವಾಗುತ್ತವೆ.”
“ಆದರೆ ಸಂಕುಚಿತ ಮನೋಭಾವದ ನಮ್ಮ ಸಮಾಜದಲ್ಲಿ “ಗಂಗಾಶಂಕರ” ನೆಂಬ ಕಲ್ಪನೆಯೇ ಒಂದು ಅಪಸ್ವರದಂತೆ ಕೇಳಬಹುದು ಎಂದು ನನ್ನ ಮನ ಅಳುಕುತ್ತದೆ” ಎಂದು ಅವನೆಡೆಗೆ ನೋಡಿದಳು.
ಕ್ಷಣಕಾಲ ಗೊಂದಲಕ್ಕೊಳಗಾದ ಅವನು ಪ್ರಶ್ನಾರ್ಥಕವಾಗಿ ಅವಳ ಅರ್ಥಗರ್ಭಿತವಾದ ನೋಟವನ್ನು ಎದುರಿಸಿದಾಗ ಅವಳ ಮನದಿಂಗಿತ ಅರಿವಾಯಿತು. ಕವಿಯ ಭಾವ ಎಲ್ಲಿಂದೆಲ್ಲಿಗೆಯೋ ವಿಹರಿಸಿ ಕೊನೆಗೆ ಅವನಲ್ಲಿ ಶಿವಶಂಕರನನ್ನು ಮತ್ತು ಅವಳನ್ನು ಪ್ರೇಮವನ್ನೆರೆಯುವ ಗಂಗೆಯನ್ನಾಗಿ ಪ್ರತಿಬಿಂಬಿಸುತ್ತಿತ್ತು. ಇದನ್ನು ಒಪ್ಪಿಕೊಂಡ ಅವನು ನಿರುತ್ತರನಾದನು. ಕೆಲಕಾಲ ಕಣ್ಣೋಟದ ವಿನಿಮಯವನ್ನು ನಿಲ್ಲಿಸಿ ದೂರದಿಗಂತದಲ್ಲಿ ತನ್ನ ದೃಷ್ಟಿಯನ್ನು ವಿರಮಿಸಿ ಮತ್ತೆ ಹೀಗೆಂದನು.
” ವೈವಾಹಿಕ ಬಂಧನವೊಂದು ನಮ್ಮ ಸಮಾಜವನ್ನು ಸುವ್ಯವಸ್ಥಿತವಾಗಿ ನಡೆಸಲು ಕಟ್ಟಿದ ಒಂದು ಅನಿವಾರ್ಯವಾದ ಕಟ್ಟಳೆಯಷ್ಟೆ. ಎರಡು ಜೀವಗಳು ತಮ್ಮ ಸ್ವಂತಿಕೆಯನ್ನು ಅಭಿಪ್ರಾಯಗಳನ್ನು ಮತ್ತು ದೃಷ್ಟಿಕೋನವನ್ನು ಸ್ವಲ್ಪಮಟ್ಟಿಗೆ ಬದಿಗೊತ್ತಿ ಪರಸ್ಪರರಿಗೆ ಹೊಂದಿಕೊಳ್ಳುತ್ತ ಭವಿಷ್ಯದ ಕನಸುಗಳನ್ನು ಒಟ್ಟಿಗೆ ಹೆಣೆಯುವುದೇ ವಿವಾಹದ ಧ್ಯೇಯವಲ್ಲವೇ! ಸತಿಪತಿಯರು ವಿಭಿನ್ನ ವ್ಯಕ್ತಿತ್ವ, ಮನಸ್ಥಿತಿ, ಹಿನ್ನೆಲೆ, ಆಸಕ್ತಿ ಅಭಿರುಚಿಯುಳ್ಳವರಾದರೂ ಕುಟುಂಬದ ಒಳಿತಿಗಾಗಿ ಸ್ವರಕ್ಕೆ ಸ್ವರ ಸೇರಿಸಿ ಸಂಸಾರದ ಸಂಗೀತವನ್ನು ನಿಭಾಯಿಸಲು ಯತ್ನಸುತ್ತಾರೆ . ಅದು ಅಲ್ಲಲ್ಲಿ ತಾರಕಕ್ಕೇರಿ ಮಂದ್ರಕ್ಕಿಳಿಯುವುದು ಸಹಜವಾಗಿಯೇ
ಇದೆ. ಹೀಗೆ ಸಂಸಾರಭಾರ ನಿಭಾಯಿಸಲು ಏರ್ಪಡಿಸಲಾಗಿರುವ ಹೆಣ್ಣು-ಗಂಡಿನ ಸಂಬಂಧಗಳಲ್ಲಿ ಹೆಚ್ಚಿನ ಮಟ್ಟಿನವು ದೂರು ದೂಷಣೆ ಶೋಷಣೆಗಳಲ್ಲಿಯೇ ಅವಸಾನಗೊಳ್ಳುತ್ತವೆ. ಇನ್ನು ಕೆಲವು, ಸಾಮಾಜಿಕ ಮತ್ತು ವೈಯಕ್ತಿಕ ಮಾನದಂಡಗಳ ಮಿತಿಗಳನ್ನು ಮೀರಿ ಸಂಬಂಧಗಳ ಅರ್ಥವೇ ಸೋರಿಕೆಯಾಗಿ ದುರ್ಗಂಧವನ್ನು ಬೀರುತ್ತವೆ. ಮತ್ತೇ ಕೆಲವು “ಎಮ್ಮೆ ಏರಿಗೆ ಏರಿದರೆ ಕೋಣ ಕೆರೆಗೆ ಇಳಿಯಿತು” ಎಂಬಂತೆ ಹೊಂದಾಣಿಕೆಯಿಲ್ಲದೇ ಏದುಸಿರು ಬಿಡುತ್ತಾ ಏಗುತ್ತ ಜೀವಂತ ಶವಗಳಾಗಿರುತ್ತವೆ.
ಹೆಬ್ಭಿತ್ತಿಯಲ್ಲಿ,ಸಮಾಜದ ಸಂತೋಲನಕ್ಕಾಗಿ ಕಟ್ಟಿದ ಈ ವ್ಯವಸ್ಥೆ, ಸಕ್ಷಮವಾಗಿ ನಿರ್ವಹಿಸಿದರೂ ಮನದ ಮತ್ತು ಮನೆಯ ಕಿರುಭಿತ್ತಿಗಳಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡುತ್ತಿರುವುದು ಕಟುಸತ್ಯವಾಗಿದೆ.ಇವೆಲ್ಲವೂ ದಿನನಿತ್ಯದ ಲೌಕಿಕಜೀವನದಲ್ಲಿ ಸಂಭವಿಸುವ ಸತ್ಯಾಂಶಗಳೇ ಆಗಿವೆ. ಆದರೆ ಈ ಎಲ್ಲ ವೈಪರಿತ್ಯಗಳ ಮೇರೆಯನ್ನು ಮೀರಿದ ಉನ್ನತವಾದ ಮೇಲುಸ್ತರವೊಂದಿದೆ. ಅದು ಈ ಎಲ್ಲ ಬಾಧ್ಯತೆಗಳನ್ನು ನೀಗಿ ಮೇಲೇರಿದ ಜೀವಿಗಳಿಗಷ್ಟೇ ನಿಲುಕುವಂತದ್ದು. ಅಲ್ಲಿ ಬೆರೆಯುವ ಎರಡು ಸ್ನೇಹಜೀವಿಗಳು ನನ್ನ ನಿನ್ನ ಹಾಗೆ ಆತ್ಮವಿಕಸನದ
ಹಾದಿಯ ಅನ್ವೇಷಣೆಯಲ್ಲಿವವರು ಮಾತ್ರ. ಅಲ್ಲಿರುವ ಸಮ್ಮಥನದ ಸಂಭಾಷಣೆಯಲ್ಲಿ ದಿನನಿತ್ಯದ ಜಂಜಾಟಗಳು ಗೌಣವಾಗುತ್ತವೆ, ಜೀವನದ ಅನುಭವಗಳು ಅನಾನುಕೂಲತೆಗಳು ತಮ್ಮ ವಕ್ರರೂಪವನ್ನು ತೋರದೆ ಚಿಂತನ-ಮನನಕ್ಕೆ ವೇದಿಕೆಯಾಗುತ್ತವೆ. ಕಡುಪ್ರಾಮಾಣಿಕತೆಯಿಂದ ಜೀವನದ ಕುರೂಪತೆಯನ್ನೂ ನಗ್ನತೆಯನ್ನೂ ಜೊತೆಗೂಡಿ ಎದುರಿಸಿದಾಗ ಶಾಂತಚಿತ್ತದಿ ಆತ್ಮಾವಲೋಕನಕ್ಕೆ ಎಡೆ ಮಾಡಿಕೊಡುತ್ತವೆ. ಪ್ರಬುದ್ಧತೆ ಪಕ್ವಗೊಂಡಂತೆ ಅವರಿಬ್ಬರೂ ಸಾಕ್ಷಾತ್ ಸತ್ಯವನ್ನು ನಿರ್ದಾಕ್ಷಿಣ್ಯವಾಗಿ ತೋರುವ ಕನ್ನಡಿಯ ಪ್ರತಿಬಂಬದಂತೆ ನಿಲ್ಲಬಲ್ಲರು. ಈ ಎರಡು ಭಾವಜೀವಿಗಳು ಹರಿವ ಆನಂದಪ್ರೇಮನದಿಯ ಎರಡು ಕಿನಾರೆಗಳಿದ್ದಂತೆ, ಸಮಾನಾಂತರದಲ್ಲಿ ಜೊತೆ ಜೊತೆಯಾಗಿ ಅನ್ಯೋನ್ಯತೆಯಿಂದ ಹರಿಯುದಷ್ಟೇ ಅವರ ಗುರಿ. ಸೀಮಾತೀತರಾಗಿ ಗತಿಗೆಟ್ಟು ಪ್ರವಹಿಸಿದರೆ ಪ್ರಳಯಕ್ಕೆ ಕಾರಣರಾಗುವರೆಂದು ಅರಿತ ಪ್ರೌಢರು ಅವರು.ಪರಸ್ಪರರ
ಸಮಾವೇಶದಿಂದ ಪ್ರತ್ಯೇಕತೆಯಲ್ಲಿಯೂ ಏಕತ್ವವನ್ನು ಅವರಿಬ್ಬರು ಕಂಡುಕೊಳ್ಳುವರು,
“ಗಂಗಾವತರಣ” ಪ್ರಸಂಗದಿಂದ ಪ್ರಳಯಾಂಕಿತ ಗಂಗೆಯು ಪಾವನದಾಯಿನಿಯಾದಂತೆ, ಶಂಕರನು
ಲೋಕೋದ್ಧಾರಕನಾದಂತೆ!! ” ಅವನ ಮನದಾಳದ ಮಾತುಗಳೆಲ್ಲ ಮಾಣಿಕ್ಯಗಳಂತೆ ಉದುರುದುರಿ ನೆಲದ ಮೇಲೆ ಪುಟಿಪುಟಿದು ಕರ್ಣಾನಂದಕರ ಕೋಲಾಹಲವನ್ನು ಉಂಟುಮಾಡಿದ್ದವು. ಕ್ಷಣಕಾಲ ಅವರ ಕಣ್ಣಿಗೆ ಸ್ಥಗಿತವಾಗಿದ್ದ ಜಗತ್ತು ಮತ್ತೇ ಚಲಿಸಲಾರಂಭಿಸಿತು. ಉದಯರವಿ ತನ್ನ ಶೈಶವದ ಮೃದುತ್ವನನ್ನು ತೊರೆದು ನಿಧಾನಕ್ಕೆ ಪ್ರಖರಲಾರಂಭಿಸಿದ್ದ. ಗುರುತರವಾದ ನಿಶ್ಯಬ್ದವನ್ನು ಚಹಾ ಮಾರಾಟಮಾಡುತ್ತಿದ್ದ ಬಾಲಕನೊಬ್ಬ “ಚಾಯ್ ಚಾಯ್” ಎಂದು ಭೇಧಿಸಿದ. ಬೆಳಗಿನ ತಣ್ಣನೆಯ ವಾತಾವರಣಕ್ಕೆ ಚಹಾದ ಬಿಸುಪು ಚೇತೋಹಾರಿಯೆಂದೆನಿಸಿತು. ಶವದಹನಕ್ಕಾಗಿ ಕಟ್ಟಿಗೆಯನ್ನು ಹೊತ್ತ ದೋಣಿಯೊಂದು ಮಣಿಕರ್ಣಿಕಾ ದೆಡೆಗೆ ನಿರಸವಾಗಿ ನಿರ್ಭಾವವಾಗಿ ತೇಲುತ್ತಿತ್ತು. ಭಕ್ತರ ಬಳಗವೊಂದರ “ಕಾಶಿ ವಿಶ್ವನಾಥ ಗಂಗೆ” ಎಂದೆಂಬ ಜಯಕಾರವನ್ನು ಕೇಳಿ ಇವರಿರ್ವರು ಮುಗುಳ್ನಕ್ಕರು.
——– ದೀವಿ