ರಿಚರ್ಡ್ ಬರ್ಟನ್ನಿಗೆ ಗೌರವಾರ್ಪಣೆ – ಶಾಲಿನಿ ಜ್ಞಾನಸುಬ್ರಹ್ಮಣಿಯನ್ ಮತ್ತು ಎರಡು ಕವಿತೆಗಳು -ರಾಜಶ್ರೀ ಪಾಟೀಲ

ಭಿತ್ತಿ ಭರ್ತಿ ತುಂಬಿದ ಬೃಹದ್ ರಿಚರ್ಡ್ (ಚಿತ್ರ೧: ಲೇಖಕಿ)

ಮಿಸ್ಟರ್ ಬರ್ಟನ್ ಚಿತ್ರವು ರಿಚರ್ಡ್ ಬರ್ಟನ್ ಅವರ ಜೀವನವನ್ನು ವಿವರಿಸುತ್ತದೆ—ಪೋನ್ಟ್ರೈಡಿವೆನ್ ಹಳ್ಳಿಯಿಂದ ಇಂಗ್ಲೆಂಡ್‌ನ ರಂಗಮಂದಿರಗಳವರೆಗೆ ಯುವಕ ರಿಚರ್ಡ್ ಜೆಂಕಿನ್ಸ್ ಅವರ ಜೀವನದಲ್ಲಿ ಅವರ ಶಾಲಾ ಶಿಕ್ಷಕರು ಪ್ರೇರಣಾದಾಯಕ ಪಾತ್ರ ವಹಿಸಿದರು—ಅವರ ಪ್ರತಿಭೆಯನ್ನು ಗುರುತಿಸಿ, ಅಭಿನಯವನ್ನು ಮುಂದುವರಿಸಲು ಪ್ರೋತ್ಸಾಹಿಸಿ, “ಬರ್ಟನ್” ಎಂಬ ತಮ್ಮ ಹೆಸರನ್ನೂ ನೀಡಿದರು. ಅವರ ಆಳವಾದ, ಪ್ರತಿಧ್ವನಿಸುವ ಧ್ವನಿ ಅವರ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿತು.

ಈ ಚಿತ್ರವನ್ನು ನೋಡಿದ ನನಗೆ ರಿಚರ್ಡ್ ಬರ್ಟನ್ ಅವರ Pontrhydyfen ಪಾಂಟ್ರಿಡ್ ವೆನ್ (ವೆಲ್ಶ್ ಭಾಷೆಯಲ್ಲಿ ’f’ ಗೆ ವ ಎನ್ನುವ ಉಚ್ಚಾರ) ಜನ್ಮಸ್ಥಳವನ್ನು ಅನ್ವೇಷಿಸಲು ಪ್ರೇರಣೆ ನೀಡಿತು. ಈ ವರ್ಷ 2025 ಅವರ ಜನ್ಮ ಶತಮಾನೋತ್ಸವದ ಸಂದರ್ಭವಾಗಿದ್ದು, ಪೋರ್ಟ್ ಟಾಲ್ಬಾಟ್ ಕೌನ್ಸಿಲ್ ಅನೇಕ ಸಂಬಂಧಿತ ಸ್ಥಳಗಳನ್ನು ‘ರಿಚರ್ಡ್ ಬರ್ಟನ್ ಟ್ರೈಲ್(trail)’ ಆಗಿ ಏರ್ಪಡಿಸಿದೆ.

ಮೇಲಿನ ಚಿತ್ರ-ಲೇಖಕಿ ಕೃಪೆ: ಇಂದಿನ ದೃಶ್ಯ; ಕೆಳಗೆ: ರಿಚರ್ಡ್ ಮತ್ತು ತಂದೆ ತನ್ನೂರಿನ ಅದೇ ಸೇತುವೆಯ ಮೇಲೆ c1950 ದಶಕದಲ್ಲಿ.
ರಿಚರ್ಡ್ ಬರ್ಟನ್ ಟ್ರೈಲ್(trail) —ಫೋಟೋ: ಶಾಲಿನಿ ಜ್ಞಾನಸುಬ್ರಹ್ಮಣಿಯನ್
ಶ್ರೀವತ್ಸ ದೇಸಾಯಿ ತಮ್ಮ ವೇಲ್ಸ್ ನೆನಪುಗಳನ್ನು ಜೋಡಿಸುತ್ತಾರೆ. 
ನಾನು ಈ ದೇಶದ ಮಣ್ಣಿನ ಮೇಲೆ ಕಾಲಿಟ್ಟದ್ದು 1974 ರಲ್ಲಿ ಆಗಸ್ಟ್ ತಿಂಗಳ ಮೊದಲ ವಾರ. ಮಾಡ್ ಕವಿಡ್ ಆಕಾಶ ಜಿಟಿ ಜಿಟಿ ಮಳೆ. ಧಾರವಾಡದ ಶ್ರಾವಣವನ್ನು ನೆನೆಯುತಿತ್ತು ಮನ. ಎಲ್ಲೆಡೆ ಹಸಿರು ಹುಲ್ಲು. ನಾನು ಮೊದಲು ಕಂಡ ನ್ಯೂಪೋರ್ಟ್, ಕಾರ್ಡಿಫ್ ಗಳು ದಕ್ಷಿಣ ವೇಲ್ಸ್ ಪ್ರಾಂತದಲ್ಲಿವೆ. ನಾನು ಭೇಟಿಯಾದ ಎಳೆದೆಳೆದು ಇಂಗ್ಲಿಷ್ ಮಾತಾಡುವ ವೆಲ್ಶ್ ಜನರ ಮಾತಿನಲ್ಲಿlilt ಒಂದು ತರದ ಲಯ. ಅಂದು ಎಲ್ಲೆಡೆಗೆ eisteddfod (ಐಸ್ಟೆಡ್ವಡ್) ಎನ್ನುವ ವೆಲ್ಶ್ ರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನದ ಪ್ರಚಾರ, ಉತ್ಸಾಹ. ಆ ಭಾಷೆಯನ್ನಾಡುವ ಸುಪ್ರಸಿದ್ಧ ಸಾಹಿತಿ, ಸಂಗೀತ, ಕಲಾಕಾರರ ಕೂಟ. ಸ್ಫರ್ಧೆಗಳು, ಕವನಗೋಷ್ಠಿ, ಇತ್ಯಾದಿ. ಹೆಮ್ಮೆಯ ಪುತ್ರ ರಿಚರ್ಡ್ ಬರ್ಟನ್ ಸಹ ಹುಡುಗರ ಸೊಪ್ರಾನೊ ಹಾಡುಗಾರಿಕೆಯಲ್ಲಿ ಗೆದ್ದಿದ್ದ. ಆತನ ದನಿ ಸುಪ್ರಸಿದ್ಧ.ಇಂದಿಗೂ ಸಹ ವೇಲ್ಸ್ನಲ್ಲಿ ಹುಟ್ಟಿದ ಶ್ರೇಷ್ಠ ಕವಿ ಡಿಲನ್ ಥಾಮಸ್ಸನ ರೇಡಿಯೋ ನಾಟಕ 'ಅಂಡರ್ ಮಿಲ್ಕ್ ವುಡ್ 'ನ ಆತನ ವಾಚನವನ್ನು Voice of Wales: mellifluous, baritone, ಎಂದು ಕರೆದು ಪದೇ ಪದೇ ಕೇಳಲಾಗುತ್ತದೆ, ಬಿತ್ತರಿಸಲಾಗುತ್ತದೆ. (ಮೇಲಿನ ಚಿತ್ರ ನೋಡಿರಿ.)
ನಾನು ಕಾಲೇಜಿನಲ್ಲಿದ್ದಾಗ ರಿಚರ್ಡ್ ಬರ್ಟನ್ ಮತ್ತು ಎಲಿಝಬೆತ್ ಟೇಲರ್ ಯಾವಾಗಲೂ ಸುದ್ದಿಮಾಡುತ್ತಿದ್ದರು; ಅವರ ಸಿನಿಮಾಗಳು ಅಥವಾ ವೈಯಕ್ತಿಕ ವಿಷಯಗಳು ಯಾವಾಗಲೂ ಹಾಲಿವುಡ್ ಮಸಾಲೆಯನ್ನು ಹಂಡೆ ಗಟ್ಟಲೆ ನೀಡುತ್ತಿದ್ದವು. ಆಕೆಯ 7 ಗಂಡಂದಿರು, ಈತನಿಗೆ ಮೂವರು ಹೆಂಡತಿಯರು ಇತ್ಯಾದಿ. ಮೊದಲ ಸಲ ಇವರಿಬ್ಬರು ಮದುವೆಯಾದಾಗ ಆಕೆಯ ಐದನೆಯವನು, ಈತನ ಎರಡನೆಯವಳು ಇತ್ಯಾದಿ. ಡಿವೋರ್ಸ್ ಮಾಡಿದ ಒಂದು ವರ್ಷದಲ್ಲಿ ಮರುಮದುವೆ, ಇತ್ಯಾದಿ. ಕ್ಲಿಯೋಪಾತ್ರಾ ಸಿನಿಮಾ ಅಲ್ಲಿಯವರೆಗಿನ ಅತ್ಯಂತ ಅಧಿಕ ವೆಚ್ಚದ ಯೋಜನೆಯಾಗಿತ್ತು. ರಿಚರ್ಡ್ಗೆ ಅದರಲ್ಲಿ ಮಾರ್ಕ್ ಆಂಥನಿ ಪಾತ್ರ. ಸತ್ಯವೋ ಮಿಥ್ಯವೋ ರಾಣಿ ಕ್ಲಿಯೋಗೆ ಕತ್ತೆಯ ಹಾಲಿನಲ್ಲಿ ಸ್ನಾನ ಮಾಡುವ ರೂಢಿ ಇತ್ತಂತೆ. ಅದು ಚರ್ಮಕ್ಕೆ ಪೋಷಕ ಎಂದು ಆಕೆಯ ನಂಬಿಕೆ. ಆ ದೃಶ್ಯದ ಚಿತ್ರಣಕ್ಕೆ ಸ್ನಾನದ ಟಬ್ ತುಂಬಲು ನೂರಾರು ಹಾಲು ಕೊಡುವ ಗಾರ್ಧಭಗಳನ್ನು ರೋಮ್ ನಗರದಲ್ಲಿ ಎಲ್ಲಿಂದ ಹಿಡಿದು ತರುವುದು? ಕೊನೆಗೆ ಕೃತಕ ಹಾಲನ್ನು ಉಪಯೋಗಿಸಲಾಯಿತು. ಕೆಲವಷ್ಟೇ ಸಿನಿಮಾ ಸಿಬ್ಬಂದಿಗಷ್ಟೇ ಶೂಟಿಂಗ್ ಸಮಯದಲ್ಲಿ ಪ್ರವೇಶ, ಒಬ್ಬ ಕುರುಡ ಕವಿ ಪಾತ್ರಧಾರಿಯನ್ನು ಹೊರತಾಗಿ. ಆಮೇಲೆ ಗೊತ್ತಾದುದು ಆತನ ಪಾತ್ರವಷ್ಟೇ ಕುರುಡು, ನಿಜವಾಗಿಯೂ ಅಲ್ಲ ಅಂತ!
ನಾನು ನಾಲ್ಕು ವರ್ಷಗಳನ್ನು ದಕ್ಷಿಣ ವೇಲ್ಸ್ ನಲ್ಲಿ ಕಳೆದಿದ್ದೇನೆ. ಅವರಿಗೆ ತಮ್ಮ ಭಾಷೆಯಲ್ಲದೆ ಮೂರು ವಿಷಯಗಳು ಅತಿಪ್ರಿಯವಾದವು - ರಗ್ಬಿ ಆಟ, ದಿನದ ದುಡಿತವಾದ ಮೇಲೆ ಪಬ್ ನಲ್ಲಿ ಭೇಟಿಯಾಗುವದು. ಅದಕ್ಕೆ ಅವರಲ್ಲಿ ಒಂದು ನಾಣ್ನುಡಿ ಇದೆ: ವಲಸೆ ಹೋದರೂನು ಮೂವರು ವೆಲ್ಷ್ ಜನ ಕೂಡಿದರೆ ಸಾಕು ಅಲ್ಲೇ ಮೂರನ್ನು ಸ್ಥಾಪಿಸಿಬಿಡುತ್ತಾರಂತೆ: ರಗ್ಬಿ ಕ್ಲಬ್ಬು, ಪಬ್ಬು ಮತ್ತು ಒಂದು ಐಸ್ಟೆಡ್ವಡ್! ಇವೆಲ್ಲವೂ ಚಿರಾಯುವಾಗಿರಲಿ!

ಶ್ರೀವತ್ಸ ದೇಸಾಯಿ




1. ಮಿತಿಯ ಪರಿಮಿತಿ 

ತಿಳಿದಿತ್ತು ಹರಿವ ನದಿ, ಸಾಗರ ಸೇರುವದೇ ಗುರಿಯೆಂದು,
ಅದಕೇನು ಗೊತ್ತಿತ್ತು ಸಾಗರದಲೆ ಸೇರುವದರೊಟ್ಟಿಗೆ,
ಅದಕುಂಟು ಮೇಘ ಕಟ್ಟುವ, ಮಳೆ ಸುರಿಸುವ ಸಾಮರ್ಥ್ಯ
ಕಣ್ಮುಚ್ಚಿ ಕಾಣುವ ಕನಸುಗಳ ನನಸಾಗಿಸುವ,
ಕೈಗೆಟುವ ಕಾರ್ಯಗಳ ಪೂರೈಸುವ ಭರದಲ್ಲಿ
ಅರಿವಾರಿಗುಂಟು ಪ್ರತಿ ಜೀವದ ಸಾಮರ್ಥ್ಯದ ಮಿತಿಯೆಲ್ಲಿ ?

ರಾಜಶ್ರೀ ಪಾಟೀಲ
ಚಿತ್ರ: AI ಕೃಪೆ
2. ಅರಿವಿನ ಪರದೆ 

ಅಲಂಕಾರಕ್ಕೆ ಅಟ್ಟಣಿಗೆಯಲ್ಲಿ ಅಂದ ತೋರಿಸೋ ಹಿತ್ತಾಳೆ ಚರಿಗೆ,
ದೇವರ ಕೋಣೆಯಲ್ಲಿ ದರ್ಬಾರು ನಡೆಸೋ ತಾಮ್ರದ ಚರಿಗೆ,
ಬಯಲಿನ ಬಿಸಿಲುರಿಯ ದಾಹ ನೀಗುವ ಅಡುಗೆ ಮನೆಯ ಸ್ಟೀಲಿನ ಚರಿಗೆ ,
ಬೆಳ್ಳಂಬೆಳಗ್ಗೆ ತಪ್ಪದೆ ಹಿತ್ತಲ ಪ್ರವಾಸಕ್ಕೆ ಉಪಯೋಗಿಸೋ ಪ್ಲಾಸ್ಟಿಕ್ ಚರಿಗೆ ,
ಮರೆಯದೆ ಪ್ರತಿ ಅಮವಾಸೆ, ಹುಣ್ಣಿಮೆಗೆ ಬಯಲಿನ ಜೀವಜಂತುಗಳಿಗೆ ಅವ್ವ ಕಳಿಸುವ ಚರಗದ ಮಣ್ಣಿನ ಚರಿಗೆ ,
ಬಣ್ಣ ತರಾವರಿ, ಆಕಾರ ತರಾವರಿ, ಮೈಮಾಟ ತರಾವರಿ
ಆದರೆ ಪರಿ ಪರಿಯಾಗಿ ತುಂಬಿ ನೀಡುವದಲ್ಲವೇ ಗುರಿ ?

ರಾಜಶ್ರೀ ಪಾಟೀಲ
ಹೆಸರು ಉಲ್ಲೇಖಿಸದ ಚಿತ್ರಗಳು: ಇಂಟರ್ ನೆಟ್

4 thoughts on “ರಿಚರ್ಡ್ ಬರ್ಟನ್ನಿಗೆ ಗೌರವಾರ್ಪಣೆ – ಶಾಲಿನಿ ಜ್ಞಾನಸುಬ್ರಹ್ಮಣಿಯನ್ ಮತ್ತು ಎರಡು ಕವಿತೆಗಳು -ರಾಜಶ್ರೀ ಪಾಟೀಲ

  1. ಈ ವಾರದ ಅನಿವಾಸಿ, ನೆನಪು, ಸ್ಥಳ, ಭಾಷೆ ಮತ್ತು ಮಾನವ ಸಾಮರ್ಥ್ಯಗಳು ಬೆರೆತಿರುವ ಒಂದು ಸಾಂಸ್ಕೃತಿಕ ಅನುಭವ.

    ಶಾಲಿನಿ ಜ್ಞಾನಸುಬ್ರಹ್ಮಣಿಯನ್ ಅವರ ಲೇಖನ ಓದುವಾಗ, Richard Burton ಎಂಬ ಹೆಸರು ಕೇವಲ ಹಾಲಿವುಡ್‌ ನಟನಾಗಿ ಅಲ್ಲ, ಒಂದು ಭೂಗೋಳದ ಧ್ವನಿಯಾಗಿ ನಮ್ಮ ಮುಂದೆ ನಿಂತಂತೆ ಅನಿಸುತ್ತದೆ. Pontrhydyfen ಹಳ್ಳಿಯ ನದಿ, ಸೇತುವೆ, ಚಾಪೆಲ್, ಕಾಫಿ ಶಾಪ್, all become extensions of memory. ತಂದೆಯ ನೆನಪುಗಳ ಮೂಲಕ ಲೇಖಕಿ ಕಟ್ಟುವ ಈ ಯಾತ್ರೆ ಸುಂದರ.

    ಶ್ರೀವತ್ಸ ದೇಸಾಯಿ ಅವರ ವೇಲ್ಸ್ ನೆನಪುಗಳು ಮತ್ತೊಂದು ಮಗ್ಗುಲಿನಿಂದ ನಮ್ಮನ್ನು ಗತಕಾಲಕ್ಕೆ ತಳ್ಳುತ್ತವೆ.

    ರಾಜಶ್ರೀ ಅವರ ಎರಡು ಕವಿತೆಗಳು ಚಿಕ್ಕವು, ತತ್ತ್ವಶಾಸ್ತ್ರದ ಅಧ್ಯಾಗಳಂತಿವೆ.

    – ಕೇಶವ

    Like

  2. ಶಾಲಿನಿ ಅವರ ಲೇಖನವನ್ನು conceptualise ಮಾಡಿ ಬರೆದವರು ಅವರೇ ಮತ್ತು ಚಿತ್ರಗಳನ್ನು ಸಹ ಒದಗಿಸಿದರು. ಅದನ್ನು ‘ಅನಿವಾಸಿಯಲ್ಲಿ’ ಪ್ರಕಟಿಸಿಸಲು ನಾನು ನಿಮಿತ್ತ ಮಾತ್ರ. ಕೆಲವೊಂದು ಸಲಹೆ ಇತ್ತು ನನ್ನ ಕೆಲವು ನೆನಪುಗಳಿಗೆ ಅವಕಾಶ ಸಹ ಮಾಡಿಕೊಟ್ಟಿದ್ದಕ್ಕೆ ಅವರಿಗೆ ನಾನು ಋಣಿ ಸಹ.
    ರಾಜಶ್ರೀಯವರ ಕವಿತೆಗಳನ್ನು ಮೊದಲು ಕಳಿಸಿದಾಗಿನಿಂದಲೂ ಅನೇಕ ಸಲ ಓದಿದಂತೆ ಸತ್ವಯುತ ಕವನಗಳಂತೆ ಪ್ರತಿಸಲ ಬೇರೆ ಬೇರೆ ಹೊಳಹುಗಳನ್ನು ಕೊಟ್ಟಿದೆ. ನದಿಯ ಸಮುದ್ರ ಸಂಗಮದ ವಿಷಯವಾಗಿ ಅನೇಕ ವಿಚಾರಗಳು ಮತ್ತು ಕವನಗಳನ್ನು ಓದಿದ್ದೇವೆ. ಆಧ್ಯಾತ್ಮದ ಭಗವದ್ಗೀತೆಯಲ್ಲಿ ( 2.70) ಶ್ರೀಮದ್ ಭಾಗವತ (3.24.44) ದಿಂದ ಜಿ ಎಸ್ ಎಸ್ ಅವರ ಕಾಣದ ಕಡಲಿಗೆ ಹಂಬಲಿಸುವ ತೊರೆ, ಖಲೀಲ ಗಿಬ್ರಾನನ ಸಮುದ್ರ ಸೇರುವ ಮುನ್ನ ಕಂಪಿಸುವ ನದಿ ( The Fear ಕವನದಲ್ಲಿ) ಮತ್ತು ದಾಟಿ ಸಂಗಮಕ್ಕೆ ತಯಾರಾದ ಟೆನಿಸನ್ನನ ನಾವಿಕ Crossing the Bar ನಲ್ಲಿ ದೇವನನ್ನು ಎದುರು ನೋಡುವುದು ಇತ್ಯಾದಿ. ಆದರೆ ಎಲ್ಲಕ್ಕಿಂತಲೂ ಭಿನ್ನವಾಗಿ ವಿಚಾರಗಳನ್ನು ಹರಿಬಿಡುವ ರಾಜಶ್ರೀಯವರ ಮೊದಲ ಕವನದಲ್ಲಿ (ಮಿತಿಯ ಪರಿಮಿತಿ) ನದಿಯಲ್ಲಿ ಅಮಿತ ಶಕ್ತಿ ಹುದುಗಿರುವುದನ್ನು ಸುಂದರವಾಗಿ ಈ ಚಿಕ್ಕ ಕವನದಲ್ಲಿ ತೋರಿಸಿದ್ದಾರೆ. ಈಗಾಗಲೇ ಅನಿವಾಸಿಯ ಓದುಗರು ಪದ್ಯದಲ್ಲಿ, ಮತ್ತು ಶಬ್ದಗಳಲ್ಲಿ ವ್ಯಕ್ತಗೊಳಿಸಿದ್ದಾರೆ.
    ಅವರ ಎರಡನೆಯ ಕವನದಲ್ಲಿ ನಮ್ಮ ಕರ್ತವ್ಯ ಹೇಗೆಯೇ ಪೂರೈಸಿದರೂ ‘ತುಂಬಿ ಕೊಡುವದೇ’ ಗುರಿಯಾಗಿರಬೇಕೆನ್ನುವ ಸಂದೇಶವನ್ನು ಬಣ್ಣ ವಿಧವಿಧವಾದ ಚರಿಗೆಯ ಪ್ರತಿಮೆಯಲ್ಲಿಳಿಸಿದ್ದಾರೆ! ಅರ್ಜೆಂಟಾಗಿ ಬೆಳಕಿಗೆ ತಂದದ್ದು ಸಾರ್ಥಕವಾಯಿತು!

    Like

  3. ರಾಮಮೂರ್ತಿಯವರ ಕಾಮೆಂಟು:
    ಏಳು ಸಲ Best Actor ಮತ್ತು ಒಂದು ಸಲ Best
    supporting Actor ಗಳಿಗೆ Oscsr ಪ್ರಶಸ್ತಿಗೆ ನೇಮಕವಾದರೂ ಸಿಗಲಿಲ್ಲ ,ಇದು ಶೋಚನೀಯವಾದ ವಿಷಯ.
    ಅತೀ ಮಧ್ಯಪಾನ ಚಟದಿಂದ ಇರಬಹುದು 58ನೇ ವಯಸ್ಸಿನಲ್ಲೇ
    ನಿಧವಾಗಿದ್ದು ರಂಗ ಭೂಮಿಗೆ ನಷ್ಟವಾಯಿತು ಎಂದರೆ ತಪ್ಪಾಗಲಾರದು

    ರಾಮಮೂರ್ತಿ

    Like

Leave a Reply

Your email address will not be published. Required fields are marked *