ಪ್ರವಾಸಕಥನ, ಇತಿಹಾಸ, ಆಧ್ಯಾತ್ಮ ಇವೆಲ್ಲ ಮೇಳೈಸಿವೆ ಶಾಲಿನಿ ಜ್ಞಾನಸುಬ್ರಹ್ಮಣಿಯನ್ ಅವರ ಈ ಲೇಖನದಲ್ಲಿ. ಐವತ್ತು ವರ್ಷಗಳ ಹಿಂದೆ ನಾನು ಈ ವೇಲ್ಸ್ ನಾಡಿಗೆ ಬಂದಾಗ ಸ್ಕಂದವೇಲ್ ಎನ್ನುವ ಜಾಗದ ಹೆಸರು ಕೇಳಿದಾಗ
- ಮಹದಾಶ್ಚರ್ಯವಾಗಿತ್ತು. ಅದು ವೆಲ್ಷ್ ಶಬ್ದವಲ್ಲವೇ ಅಲ್ಲ ಅಂತ. ಆಗ ತಾನೇ ಅಲ್ಲೊಂದು ಅಪರೂಪದ “ಸಂಪ್ರದಾಯಗಳ ಸಮ್ಮಿಲನ” ಎನ್ನ ಬಹುದಾದ ಪ್ರಯೋಗ (Syncretism) ಊರ್ಜಿತವಾಗಲಾರಂಭಿಸಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಶ್ರೀಲಂಕಾದ ಅನುಕೂಲವಂತ ಡಾಕ್ಟರರ ಮಗನಾಗಿದ್ದ ಯುವ ಸುಬ್ರಹ್ಮಣ್ಯ ಎಲ್ಲವನ್ನು ತೊರೆದು ಆಧ್ಯಾತ್ಮದ ಮಾರ್ಗ ಹಿಡಿದು ಮಹಾಯುದ್ಧಪೂರ್ವದ ಲಂಡನ್ನಿಗೆ ಬಂದನು. ಉಪಜೀವನಕ್ಕೊಂದು ಹೂವಿನಂಗಡಿಯಿಟ್ಟಿದ್ದರೂ ಬಿಡುವಿನ ಸಮಯದಲ್ಲಿ ಯೋಗ, ಸರಳ ಜೀವನದ ಪಾಠವನ್ನು ಜನರಿಗೆ ಬೋಧಿಸಲು ಶುರುಮಾಡಿದನು. ಅದು ಬೆಳೆದು ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಪಂಥದ ಮತ್ತು ಬೌದ್ಧ ಅನುಯಾಯಿಗಳು ಸೇರಿಕೊಂಡರು. ಪ್ರಾರ್ಥನೆ, ಪೂಜೆ, ಸಂಪ್ರದಾಯದಲ್ಲಿ ಪಾಲ್ಗೊಂಡರು, ಅವರದು ಸರಳ ಬದುಕು, ಉಡುಪು, ಪ್ರಾಣಿ, ಪರಿಸರ ಪ್ರೀತಿಯಷ್ಟೇ ಅಲ್ಲ, ಉಡುಪು (ನಿಲುವಂಗಿ) ಸಹ ಫ್ರಾನ್ಸಿಸ್ಕನ್ monk ತರ ಇರುತ್ತದೆ. ಅವರು ಎಲ್ಲವನ್ನು ತ್ಯಾಗ ಮಾಡಿ ಬಡತನದ ಜೀವನ ಶೈಲಿಯನ್ನು ಅನುಸರಿಸುತ್ತಾರೆ. 1973ರಲ್ಲಿ ವೇಲ್ಸಿನ ಕಮಾರ್ದನ್ (Camarthen) ಊರಿನ ಹತ್ತಿರದ ಕ್ಲಾಮ್ಪುಂಸೇಂಟ್ (Llanpumsaint) ಹಳ್ಳಿಯಲ್ಲಿ ಬರೀ ಆರು ಜನ ಕೂಡಬಹುದಾಗಿದ್ದ ಒಂದು ಫಾರ್ಮ್ ಹೌಸ್ ಇತ್ತು. ಅದೇ ಮುಂದೆ ಸ್ಕಂದವೇಲ್ ಆಗಿ ಪರಿವರ್ತನಗೊಂಡಿತು. ನಾನು ಹದಿನೈದು ವರ್ಷಗಳ ಹಿಂದೆ ಅಲ್ಲಿಗೆ ಮೊದಲ ಸಲ ಹೋಗಿದ್ದೆ. ಈಗಿನ ಅದರ ವರ್ಣನೆಯನ್ನು ಮತ್ತು ತಮ್ಮ ಅನುಭವವನ್ನು ಶಾಲಿನಿಯವರ ಕೆಳಗಿನ ಲೇಖನದಲ್ಲಿ ಓದಿರಿ. (ಸಂ)


ಪಶ್ಚಿಮ ವೇಲ್ಸ್ನ ಹಸಿರು, ದಟ್ಟ ಕಣಿವೆಗಳಲ್ಲಿ, ಕಮಾರ್ದನ್ ಸಮೀಪದಲ್ಲಿರುವ ಸ್ಕಂದ ವೇಲ್ —ಇದು ಸುಬ್ರಮಣ್ಯ ಸ್ವಾಮಿಯ ದಿವ್ಯ ನಿವಾಸ. ಕಳೆದ ವಾರ ನಾನು ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡಿದ್ದೆ, ಈ ಸಲಿ ಸಂಜೆಯ ಭೇಟಿ, ನಮ್ಮ ಸ್ನೇಹಿತರ ಪರಿವಾರದೊಂದಿಗೆ. ಕಾರ್ಡಿಫ್ ನಿಂದ ಸುಮಾರು ಒಂದೂವರೆ ಗಂಟೆಯಕಾಲದ ಪ್ರಯಾಣ. ಕಾಳಿ ದೇವಸ್ಥಾನದಲ್ಲಿ ಸಂಜೆ ಆರು ಗಂಟೆಗೆ ನಡೆಯುವ ಆರತಿಗೆ ತಲುಪೋಣವೆಂಬ ಯೋಜನೆ ಮಾಡಿದೆವು. ಬೆಟ್ಟ-ಗುಡ್ಡ, ಕಿರಿದಾದ ರಸ್ತೆಗಳನ್ನು ದಾಟಿ, ದೊರಕುವ ಈ ’ತೀರ್ಥಯಾತ್ರಾ’ ಕೇಂದ್ರದ ವಾತಾವರಣ ಪ್ರಶಾಂತ, ಮನಮೋಹಕ ಹಾಗೆಯೇ ದೈವಿಕ. ‘Sweet are the fruits of adversity’ ಅಂತಾರಲ್ಲಾ, ಹಾಗೆ! ಸ್ಕಂದ ವೇಲ್ ಗೆ ನಾನು ಹಲವು ಬಾರಿ ಭೇಟಿ ನೀಡಿದ್ದೇನೆ. ಪ್ರತಿ ಸಾರಿಯೂ ಹೊಸ ಹುರುಪು, ಹೊಸ ಅನುಭವ, ಹೊಸ ತಿಳುವಳಿಕೆ, ಮತ್ತು ಆಧ್ಯಾತ್ಮಿಕ ಚಿಂತನೆ, ಮತ್ತೆ ತೆರಳಬೇಕೆಂಬ ಕಾತುರ. ಪ್ರಕೃತಿ ಮಾತೆಯ ಮಡಿಲಲ್ಲಿ, ತಮ್ಮ ಗೂಡು ಕಟ್ಟಿ, ತಮ್ಮ ಪಾಡಿಗೆ ತಾವು ನಿತ್ಯ ನಿರಂತರ ಕರ್ಮ ಯೋಗ, ಭಕ್ತಿ ಯೋಗದ ಅಭ್ಯಾಸದಲ್ಲಿ ಜೀವನವನ್ನು ಸಾಗಿಸುತ್ತಿರುವ ಇಲ್ಲಿಯ ಕಾರ್ಯವಾಸಿಯರನ್ನು ಕಂಡು ಯಾರು ತಾನೇ ಆಶ್ಚರ್ಯಚಕಿತರಲ್ಲ?! ಇಲ್ಲಿಯ ಶಾಂತ ಪರಿಸರ, ಬೆಟ್ಟ ಗುಡ್ಡಗಳ ಮಧ್ಯೆಯಲ್ಲಿ ಇರುವ ಈ ಆಶ್ರಮದ ಸ್ಥಳ-ಎಲ್ಲವೂ ಬಣ್ಣಿಸಲಾಗದಷ್ಟು ಮನೋಹರ. ಒಮ್ಮೆಯಾದರೂ ಅನುಭವಿಸಬೇಕು.


ಸ್ಕಂದ ವೇಲ್ ಅನ್ನು 1973ರಲ್ಲಿ ಗುರು ಶ್ರೀ ಸುಬ್ರಮಣಿಯಂ ಅವರು (1929 – 2007) ವಿವಿಧ ಧರ್ಮದ ಜನರು ಒಟ್ಟಾಗಿ ಸೇವೆ ಮತ್ತು ಪೂಜೆಗೆ ಬರುವ ತೀರ್ಥಯಾತ್ರಾ ಕೇಂದ್ರವಾಗಿ ಸ್ಥಾಪಿಸಿದರು. ಅಶ್ರಮದಲ್ಲಿ ನಾಲ್ಕು ದೇವಾಲಯಗಳಿವೆ— ಮುರುಗನ್/ಸುಬ್ರಮಣ್ಯ ಸ್ವಾಮಿ ದೇವಾಲಯ, ಮಹಾಶಕ್ತಿ ದೇವಾಲಯ, ಶ್ರೀ ರಂಗನಾಥ ದೇವಾಲಯ ಮತ್ತು ಸಾಯಿಬಾಬಾ ದೇವಾಲಯ. ಮುರುಗನ್/ಸುಬ್ರಮಣ್ಯ ಸ್ವಾಮಿ ದೇವಾಲಯವೇ ಮೊದಲನೆಯದು. ರಂಗನಾಥ ಸ್ವಾಮಿ ದೇವಾಲಯವು ಮುಕ್ತಾಕಾಶದ ದೇವಾಲಯವಾಗಿದ್ದು, ಯುಕೆಯಲ್ಲಿ ಈ ರೀತಿಯ ಏಕೈಕ ದೇವಾಲಯ. ಮಹಾಶಕ್ತಿ (ಕಾಳಿ) ದೇವಾಲಯವು ಬೆಟ್ಟದ ಮೇಲಿದ್ದು, ಕಾರ್ ಪಾರ್ಕ್ನಿಂದ 20 ನಿಮಿಷ ನಡೆಯಬೇಕು ಅಥವಾ ಹಿರಿಯರು/ಅಸಹಾಯಕರಿಗೆ ವಾಹನ ವ್ಯವಸ್ಥೆ ಇದೆ. ಸಾಯಿಬಾಬಾ ದೇವಾಲಯವು ಇತ್ತೀಚಿನ ಸೇರ್ಪಡೆ. ಪ್ರತಿದಿನ ಸ್ಕಂದ ವೇಲ್ ನಲ್ಲಿ ಆರು ಪೂಜೆಗಳ ನಿಯಮಿತ ಕ್ರಮವಿದೆ.
ಗುರು ಶ್ರೀ ಸುಬ್ರಮಣಿಯಂ ಅವರು ಶ್ರೀಲಂಕಾದಲ್ಲಿ ಜನಿಸಿ, ತಮ್ಮ ಆಧ್ಯಾತ್ಮಿಕ ಪರಂಪರೆಯನ್ನು ಅರಿತು, ಲಂಡನ್ಗೆ ಬಂದು, ವ್ಯಾಪಾರೀಕರಣದಿಂದ ಮುಕ್ತವಾದ ಪೂಜಾ ಸ್ಥಳವನ್ನು ಸ್ಥಾಪಿಸುವ ಧ್ಯೇಯದಿಂದ ಕಾರ್ಯನಿರ್ವಹಿಸಿದರು. ಅವರು ಮತ್ತು ಅವರ ಸ್ನೇಹಿತರು—ರೆವರೆಂಡ್ ಜೇಮ್ಸ್ ಕೀಲರ್ ಮತ್ತು ಬುದ್ಧ ಧರ್ಮದ ಅನುಯಾಯಿ ಡಾ. ಮಲಲಸೇಕೆರಾ—ಈ ಸಮುದಾಯವನ್ನು “The community of the many names of God” ಎಂದು ಹೆಸರಿಸಿದರು. ಈ ಹೆಸರನ್ನು ಇಂದಿಗೂ ಬಳಸಲಾಗುತ್ತದೆ. ಪೂಜೆಗಳು, ಮಂತ್ರೋಚ್ಚಾರಣೆ, ಭಜನೆಗಳು, ಆರತಿಗಳು— ಎಲ್ಲವನ್ನು ಇಲ್ಲಿಯ ಸ್ಥಳೀಯ ವೆಲ್ಶ್ ಪುರೋಹಿತರು ನಿರ್ವಹಿಸುತ್ತಾರೆ.
ಸ್ಕಂದ ವೇಲ್ ಸತ್ಯ, ಧರ್ಮ, ಶಾಂತಿ ಮತ್ತು ಪ್ರೇಮ ಎಂಬ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಇಲ್ಲಿ ಎಲ್ಲಾ ಜೀವಿಗಳೂ ಪವಿತ್ರವೆಂಬ ತತ್ವವಿದೆ. ಅಶ್ರಮದಲ್ಲಿ ಪ್ರಾಣಿಗಳ ಆಶ್ರಯ ಕೇಂದ್ರವಿದೆ—ಅನಾದರ, ಹಿಂಸೆ ಅಥವಾ ಕೊಲೆಯಿಂದ ರಕ್ಷಿಸಲಾದ ಪ್ರಾಣಿಗಳು. ಆನೆ ಇರುವ ಯುಕೆಯ ಏಕೈಕ ದೇವಾಲಯ ಇದಾಗಿದೆ. ವಲ್ಲಿ ಎಂಬ ಆನೆ ಮೊದಲನೆಯದು, ಸ್ವಾಮಿ ಕರುಣಾ ಅವರು ವಲ್ಲಿಗೆ ಆರೈಕೆದಾರರಾಗಿದ್ದರು.
ಯುಕೆಯಲ್ಲಿ ವಿವಿಧ ಸಂಸ್ಥೆಗಳೊಂದಿಗೆ ಆಹಾರ ವಿತರಣೆಯು ಸ್ಕಂದ ವೇಲ್ ಪ್ರಮುಖ ಕಾರ್ಯವಾಗಿದೆ.


1987ರಲ್ಲಿ ಹೃದಯಾಘಾತದ ನಂತರ, ಆಸ್ಪತ್ರೆಯಲ್ಲಿ ಕಾಲ ಕಳೆದ ಗುರು ಶ್ರೀ ಸುಬ್ರಮಣಿಯಂ ಅವರು, ಗಂಭೀರ ಕಾಯಿಲೆಗಳಿಂದ ಬಳಲುವವರಿಗೆ ಸಂಪೂರ್ಣ ಆರೈಕೆ ಅಗತ್ಯವಿದೆ ಎಂಬುದನ್ನು ಅರಿತು, ಸ್ಕಂದ ವೇಲ್ ಹಾಸ್ಪೀಸ್ (hospice)ನ್ನು ಸ್ಥಾಪಿಸಿದರು. ಇದು ಕಮಾರ್ದನ್ಶೈರ, ಕೆರೆಡಿಗಿಯಾನ್ (Cardigan) ಮತ್ತು ಪೆಂಬ್ರೋಕ್ಶೈರ್ ಜಿಲ್ಲೆಗಳಿಗೆ ಸೇವೆ ನೀಡುತ್ತದೆ. ಎಲ್ಲಾ ಸೇವೆಗಳು ಉಚಿತವಾಗಿವೆ—ವಯಸ್ಸು, ಲಿಂಗ, ಹಿನ್ನೆಲೆ ಅಥವಾ ನಂಬಿಕೆಗಳೆಲ್ಲಾ ಅಸ್ತಿತ್ವವಿಲ್ಲ. ಮೇಲಿನ ಫೋಟೋದಲ್ಲಿ ಗುರುಗಳ ಸಮಾಧಿ (2007) ಇದೆ .
ಇದು ನಾನು ಯುಕೆಯಲ್ಲಿ ಭೇಟಿ ಮಾಡಿದ ಮೊದಲ ದೇವಸ್ಥಾನ. ನನ್ನ ಪತಿ, ಶೇಖರ್, ಬಾಲ್ಯದಲ್ಲಿ ಸ್ಕಂದ ವೇಲ್ಗೆ ಭೇಟಿ ನೀಡುತ್ತಿದುದ್ದು, ಸ್ಕಂದವೇಲ್ ಬಗ್ಗೆ ಅವರ ಬಾಲ್ಯದ ನೆನಪುಗಳನ್ನು ನಾವು ಹಲವು ಬಾರಿ ಚರ್ಚಿಸುತ್ತೇವೆ. ಅಂದು ದೇವಾಲಯಕ್ಕೆ ತಲುಪಲು ಮುಖ್ಯ ರಸ್ತೆಯಿಂದ 1.5 ಮೈಲು ನಡೆದು ಬೆಟ್ಟ ಏರಬೇಕಾಗುತ್ತಿತ್ತು. ಆಗ ಸುಬ್ರಮಣ್ಯ ಸ್ವಾಮಿ ದೇವಾಲಯ ಒಂದೇ ಇತ್ತು. ಪುಟ್ಟ ಗುಡಿಯಂತೇ ಇತ್ತು. ಇಂದಿಗೂ, B ರಸ್ತೆಯಿಂದ ದೇವಾಲಯದವರೆಗೆ ಇರುವ ಮಾರ್ಗ ಕಿರಿದಾದುದು. ಮಳೆ ಬಂದರೆ ಕೆಸರುಗೊಳ್ಳುತ್ತದೆ. ತಲುಪಿ ಸೇರಿದ ನಂತರದ ಅನುಭವವೇ ಬೇರೆ.
ನನ್ನ ಕಳೆದ ವಾರದ ಭೇಟಿಯಲ್ಲಿ, ಸಂಜೆಯ ಆರು ಗಂಟೆಗೆ ನಡೆದ ಮಹಾಶಕ್ತಿ ಪೂಜಾ ಮತ್ತು ಆರತಿಯನ್ನು ಸ್ನೇಹಿತರೊಂದಿಗೆ ವೀಕ್ಷಿಸಿದೆವು. ನಂತರ, ಬೆಟ್ಟದ ಕೆಳಭಾಗದ ಅಶ್ರಮದಲ್ಲಿ ಸ್ವಯಂಸೇವಕರಿಂದ ತಯಾರಿಸಲಾದ ಪ್ರಸಾದ ಭೋಜನ. ಅವರು ಲೀಡ್ಸ್ನ ಐಟಿ ವೃತ್ತಿಪರರು ಎಂದು ತಿಳಿದುಬಂದಿತು—ಒಂದು ವಾರದ ಕಾಲ ಅಶ್ರಮದಲ್ಲಿ ವಾಸಿಸಿ ಸೇವೆ ಮಾಡುತ್ತಿದ್ದರು. ಅದೆಷ್ಟು ಸ್ಫೂರ್ತಿದಾಯಕವಾಗಿತ್ತು!
ಕಾರ್ ಪಾರ್ಕ್ ಹತ್ತಿರ ಒಂದು ಕೋಣೆಯಲ್ಲಿ 2023ರ 50ನೇ ವಾರ್ಷಿಕೋತ್ಸವದ ಅಂಗವಾಗಿ ಅಶ್ರಮದ ಕಥಾವಸ್ತುವನ್ನು ವಿವರಿಸುವ ಪ್ರದರ್ಶನವೂ ಇದೆ.
ಕೆಲವರು ಆಧ್ಯಾತ್ಮಿಕವಾಗಿ ಇಷ್ಟು ಸಾಧನೆ ಮಾಡಬಲ್ಲರು, ಅವರ ಜೀವನ ಸಮುದಾಯ ಸೇವೆಗೆ ಮೀಸಲಾಗಿರುತ್ತದೆ, ಮುಂದಿನ ಪೀಳಿಗೆಗಳಿಗೆ ಆಧ್ಯಾತ್ಮಿಕ ನಿಧಿಯನ್ನು ಬಿಟ್ಟು ಹೋಗುತ್ತಾರೆ ಎಂದಿತು ಮನದಾಳದ ಮಾತು. ಆ ದೈವಿಕ ಶಕ್ತಿಗೆ ನಾನು ನಮನ ಮಾಡುತ್ತೇನೆ.
ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಮ್ ।
ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ॥
ಸಂಸ್ಕೃತದ ಈ ಶ್ಲೋಕ ತಿಳಿಸುವಂತೆ - ಹೇಗೆ ಆಕಾಶದಿಂದ ಬಿದ್ದ ಮಳೆಯ ನೀರು ಪುನಃ ಸಮುದ್ರವನ್ನು ಸೇರುತ್ತದೆಯೋ, ಎಲ್ಲ ರೀತಿಯ ಭಕ್ತಿ ಮಾರ್ಗವು ಸೇರುವುದು ಆ ಸರ್ವಶಕ್ತನಿಗೆ.
ಸ್ಕಂದ ವೇಲ್ ಇದರ ಜೀವಂತ ಸಾಕ್ಷಿಯಾಗಿ, ಭಾರತೀಯರನ್ನು, ಮತ್ತು ಲೋಕಲ್ ವಾಸಿ ಸಮುದಾಯವವನ್ನು ದೇಶದ ಮೂಲೆ ಮೂಲೆಯಿಂದ ಕರೆದೊಯ್ಯುತ್ತದೆ . ಅಷ್ಟೇ ಅಲ್ಲ ವಿದೇಶೀಯರನ್ನೂ ಸಹ ಅನೇಕ ಸಲ ಅಲ್ಲಿ ಕಂಡಿದ್ದೇನೆ.
ಶಾಲಿನಿ ಜ್ಞಾನಸುಬ್ರಮಣಿಯನ್ , ಕಾರ್ಡಿಫ಼್, ವೇಲ್ಸ್
(ಫೋಟೋಗಳು: ಲೇಖಕಿಯರವು, ಕೊನೆಯ ಎರಡನ್ನು ಬಿಟ್ಟು. )
ಸಂಸ್ಥೆಯ ಮುಖ ಪುಟದ ಲಿಂಕ್: https://www.facebook.com/share/19W2EEuyiY/?mibextid=wwXIfr
https://www.skandavale.org/


ಶಾಲಿನಿಯವರ ಈ ಲೇಖನ ಓದುಗರನ್ನು ಒಂದು ಆಧ್ಯಾತ್ಮಿಕ ಪ್ರವಾಸಕ್ಕೆ ಕರೆದೊಯ್ಯುತ್ತದೆ. ಮೊದಲಿಗೆ ದೇಸಾಯಿಯವರ ಪರಿಚಯಾತ್ಮಕ ಭಾಗದಿಂದಲೇ ಸ್ಕಂದವೇಲ್ ಹುಟ್ಟಿದ ಕಥೆ, ಶ್ರೀಲಂಕಾದ ಸುಬ್ರಮಣಿಯಂ ಸ್ವಾಮಿಗಳ ತ್ಯಾಗಮಯ ಜೀವನ, ಅವರ “Syncretism” ಪ್ರಯೋಗ ಹಿನ್ನಲೆಯನ್ನು ಒದಗಿಸುತ್ತವೆ.
ಶಾಲಿನಿಯವರ ಬರಹ ಹಸಿರು ಬೆಟ್ಟಗುಡ್ಡಗಳ ಮಧ್ಯೆ ಹಾದು, ಕಮಾರ್ದನ್ ಹಳ್ಳಿಯ ಶಾಂತ ವಾತಾವರಣದಲ್ಲಿ ಕೂತು, ಆಶ್ರಮದ ಸರಳ ಜೀವನದ ದರ್ಶನವನ್ನು ಮಾಡುತ್ತದೆ. ಇದು ಕೇವಲ ಪ್ರವಾಸದ ವರ್ಣನೆ ಅನಿಸುವುದಿಲ್ಲ, ಆ ಸ್ಥಳದ ಆಧ್ಯಾತ್ಮಿಕ ಶಕ್ತಿ, ಸೇವಾ ಚಟುವಟಿಕೆಗಳು, ಸ್ಥಳೀಯರ ಹಾಗೂ ವಿದೇಶೀಯರ ಸಮಾನ ಭಾಗವಹಿಸುವಿಕೆಗಳನ್ನು ಚಿತ್ರಿಸಿದ್ದಾರೆ. ಎಲ್ಲ ಭಕ್ತಿ ಮಾರ್ಗಗಳೂ ಅಂತಿಮವಾಗಿ ಒಂದೇ ದೈವಿಕ ಮೂಲವನ್ನು ಸೇರುತ್ತವೆ ಎಂಬ ಸಂದೇಶ ಸರಳ ಸತ್ಯ. ಶಾಲಿನಿಯವರ ಬರಹದಲ್ಲಿ ಪ್ರವಾಸದ ವಿವರಣೆಯೂ ಇದೆ, ಇತಿಹಾಸವೂ ಇದೆ, ಆಧ್ಯಾತ್ಮಿಕ ತತ್ತ್ವವೂ ಇದೆ.
ನಾನೂ ಇಲ್ಲಿ ತುಂಬ ಹಿಂದೆ ಹೋಗಿದ್ದೆ. ವಾರಗಟ್ಟಲೇ ಮಳೆ ಬಂದು ಕಾರು ಓಡಿಸುವುದು ಕಷ್ಟವಾಗಿತ್ತು ಆ ಚಿಕ್ಕ ರಸ್ತೆಯಲ್ಲಿ.
LikeLike