ಶಾಲಿನಿ ಜ್ಞಾನಸುಬ್ರಮಣಿಯನ್ ‘ಅನಿವಾಸಿ’ಗೆ ಹೊಸಬರು. ಅವರ ಪ್ರಥಮ ಲೇಖನವನ್ನು ಪ್ರಸ್ತುತ ಪಡಿಸುತ್ತಿದ್ದೇವೆ. ಅವರ ಸ್ವಪರಿಚಯ: “ನನ್ನ ಹುಟ್ಟೂರು ಬೆಂಗಳೂರು, ಓದಿದ್ದು ಬೆಳೆದಿದ್ದು ಎಲ್ಲಾ ಅಲ್ಲೇ. ಕಳೆದ ಇಪ್ಪತ್ತು ವರ್ಷಗಳಿಂದ ಯುಕೆ ನಲ್ಲಿ ಪರಿವಾರಸಹಿತವಾಗಿ ನೆಲೆಸಿರುವ ಕನ್ನಡತಿ. ಪ್ರಸ್ತುತ ನಾವು ಕಾರ್ಡಿಫ್ ನಲ್ಲಿ
ನೆಲೆಸಿದ್ದೇವೆ. ವೃತ್ತಿಯಿಂದ ನಾನೊಬ್ಬ ಕಲಿಕೆ ಮತ್ತು ಅಭಿವೃದ್ಧಿ ತರಬೇತುದಾರಳು (Learning & development Trainer). ಶಾಸ್ತ್ರೀಯ ಸಂಗೀತದಲ್ಲಿ ನನಗೆ ತುಂಬಾ ಆಸಕ್ತಿ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತೇನೆ ಮತ್ತು ಹಾಡುತ್ತೇನೆ.”
ಚಿಕ್ಕಂದಿನಲ್ಲೇ ಜಾಲಿಯನ್ವಾಲಾ ಬಾಗ್ ಹತ್ಯಾಕಾಂಡದ ವಿವರಗಳು ಒಬ್ಬ ಪ್ರತ್ಯಕ್ಷದರ್ಶಿಯಿಂದ ಕೇಳಿ ಪ್ರಭಾವಿತರಾಗಿ ಕೆಲ ವರ್ಷಗಳ ಹಿಂದೆ ಸ್ವತಃ ತಮ್ಮ ಪರಿವಾರದೊಡನೆ ಹೋಗಿ ನೋಡಿಬಂದಿದ್ದಾರೆ. ಇತ್ತೀಚೆಗೆ ಯು ಕೆ ದಲ್ಲಿ ರಿಲೀಸಾದ ಚಿತ್ರ ”ಕೇಸರಿ – 2” ನೋಡಿದ ನಂತರ ಈ ಲೇಖನವನ್ನು ಬರೆದು ಕಳಿಸಿದ್ದಾರೆ. ಆ ಸಿನಿಮಾದ ಹಿನ್ನೆಲೆಯನ್ನರಿತವರಿಗೆ ಅಲ್ಲಿಯ ವಾಸ್ತವತೆ ಮತ್ತು ಅದರಲ್ಲಿಯ ಕಾಲ್ಪನಿಕ ಘಟನೆಗಳ ಬಗ್ಗೆ ಓದಿ ತಿಳಿದಿರ ಬಹುದು. ಇಲ್ಲಿ ಇನ್ನೊಂದು ಸ್ಪಷ್ಟೀಕರಣವೆಂದರೆ: ಬಹಳ ಜನರು ಜಾಲಿಯನ್ವಾಲಾ ಬಾಗ್ ನಲ್ಲಿ ಗೋಲೀಬಾರಿಗೆ ಆಜ್ಞೆ ಕೊಟ್ಟ ಕರ್ನಲ್ ( ಆಗ ತಾತ್ಕಾಲಿಕ ಬ್ರಿಗೇಡಿಯರ್ ಜನರಲ್ ಆಗಿದ್ದ) ರೆಜಿನಾಲ್ಡ್ ಡೈಯರ್ (Dyer) ಮತ್ತು ಆಗಿನ ಪಂಜಾಬ್ ಪ್ರಾಂತದ ಗವರ್ನರಾಗಿದ್ದವ ಮತ್ತು ರೆಜಿನಾಲ್ಡನ ಕುಕೃತ್ಯವನ್ನು ಸಮರ್ಥಿಸಿದ ಮೈಕೇಲ್ ಓ’ಡ್ವೈಯರ್ (O’Dwyer) ಹೆಸರುಗಳನ್ನು ಕನ್ಫ್ಯೂಸ್ ಮಾಡಿಕೊಳ್ಳುವ ಸಾಧ್ಯತೆಯಿದೆ.-ಸಂ)
ಜಾಲಿಯನ್‍ವಾಲಾ ಬಾಗ್ ನೆನಪುಗಳು -ಶಾಲಿನಿ ಅವರ ಲೇಖನ
ಕೆಲವೊಂದು ಚಲನ ಚಿತ್ರಗಳು ಹೀಗೂ ಇರುತ್ತವೆ. ಅದನ್ನು ನೋಡಿದಾಗ ನಮ್ಮೊಳಗಿನ ಭಾವನೆಗಳು ಹೊಮ್ಮುಕ್ಕುವುದಲ್ಲದೆ ನಮ್ಮನ್ನು ಸತ್ಯದೆಡೆಗೆ ಕರೆದೊಯ್ದು, ದೇಶಾಭಿಮಾನವನ್ನು ಕೆರಳಿಸಿ, ಪ್ರಜ್ವಲಿಸಿ ಭಾರತದ ಬಗ್ಗೆ ಹೆಮ್ಮೆಯಿಂದ ಎದೆಯುಬ್ಬಿಸುತ್ತದೆ. ನಿಮಗೂ ಒಮ್ಮೆಯಾದರೂ ಅಂಥ ಅಭಿಮಾನವುಂಟಾಗಿರಲು ಸಾಕು.
”Kesari 2: The untold story of Jallianwala Bagh” ಇಂತಹ ಒಂದು ಚಲನ ಚಿತ್ರ. ಅದನ್ನು ನೋಡುವಾಗ 1919 ರಲ್ಲಿ ಜಾಲಿಯನ್ವಾಲಾ ಬಾಗ್ದಲ್ಲಿ ನಡೆದ ಆ ಕರಾಳ ಘಟನೆಯನ್ನು ಹತ್ತಿರದಿಂದ ’ನೋಡಿ’ ಪ್ರಮಾಣಿಸಿ, ಪ್ರಶ್ನಿಸುವ, ಮತ್ತೊಮ್ಮೆ ಉದ್ವೇಗಿತರಾಗುವ ಅನುಭವ ನಮ್ಮದಾಗುತ್ತದೆ.
ಜಾಲಿಯನ್‍ವಾಲಾ ಬಾಗ್! ಈ ಶೀರ್ಷಿಕೆಯೇ ಸಾಕು, ಭಾರತದ ಸ್ವಾತಂತ್ರ್ಯ ಚಳುವಳಿಯ ಅತ್ಯಂತ ದುಃಖದ ಅಧ್ಯಾಯದ ಸ್ಮರಣೆಯನ್ನು ತಂದು ನಮಗೆಲ್ಲ ಭಾರತೀಯರಿಗೆ ವಿವಿಧ ಭಾವನೆಗಳನ್ನೆಬ್ಬಿಸುತ್ತದೆ. ನನಗೆ ಇದರೊಡನೆ ವೈಯಕ್ತಿಕ ಸಂಬಂಧವಿದೆ ಎಂದರೆ ಉತ್ಪ್ರೇಕ್ಷೆ ಅಲ್ಲ ಎಂದು ಭಾವಿಸುತ್ತೇನೆ. ಶಾಲೆಯಲ್ಲಿದ್ದಾಗ ಇತಿಹಾಸದ ಪುಟಗಳಲ್ಲಿ ಓದಿದ್ದು ಪ್ರಾಯಶಃ ದಾಖಲೆಯಾಗಿರಬಹುದೇನೋ, ಆದರೆ ಅದಕ್ಕಿಂತ ಹೆಚ್ಚಾಗಿ ಆ ಹತ್ಯಾಕಾಂಡವನ್ನು ಸ್ವತಃ ವೀಕ್ಷಿಸಿದವರ ವರ್ಣನೆಯನ್ನು ಅವರ ಬಾಯಿಂದಲೇ ಕೇಳಿದ್ದೆನಲ್ಲ ಅದರಿಂದಲೇ ಏನೋ! ಅದು ಹೇಗೆ, ಅಂತೀರೋ? ಮುಂದೆ ಓದಿ!
ಪಂಡಿತ್ ಸುಧಾಕರ ಚತುರ್ವೇದಿ (1897 - 2020)
ನನ್ನ ಹದಿಹರೆಯದ ವರ್ಷಗಳಲ್ಲಿ ನಮ್ಮ ತಾಯಿ ನಮ್ಮನ್ನು(ನನ್ನ ತಮ್ಮ ಮತ್ತು ನಾನು) ಹುರಿದುಂಬಿಸಿ ಪಂಡಿತ್ ಸುಧಾಕರ ಚತುರ್ವೇದಿ (20th April 1897-27th February 2020) ಯವರ ಸತ್ಸಂಗಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಅದು ನಮ್ಮ ಜೀವನದಲ್ಲಿ ಬಲವಾದ ಮೌಲ್ಯಗಳ ಅಡಿಪಾಯವನ್ನೇ ಹಾಕಿತ್ತು. ಕನ್ನಡಿಗರಾದ ಪಂಡಿತ್ ಜಿ ಅವರು ವೇದಪಾರಂಗತರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಂಧಿತರಾಗಿ ಎರವಾಡ ಜೈಲಿನಲ್ಲಿದ್ದಾಗ 'ಜ್ಯೋತಿ ಸ್ವರೂಪ ಭಗವಾನ್, ಆ ದಿವ್ಯ ಜ್ಯೋತಿ ನೀಡು' ಎಂಬ ಕೃತಿಯನ್ನು ರಚಿಸಿದವರು. ಗಾಂಧೀಜಿಯವರ ಪತ್ರಗಳನ್ನು ರಹಸ್ಯವಾಗಿ ಒಂದೆಡೆಯಿಂದ ಇನ್ನೊಂದೆಡೆ ತಲುಪಿಸುತ್ತಿದ್ದರಿಂದ ಅವರನ್ನು ’ಗಾಂಧೀಜಿಯವರ Postman’ ಎಂದು ಕರೆಯುತ್ತಿದ್ದರು! ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಗಾಂಧೀಜಿ ಅವರ ಮನವಿಯಂತೆ ಲಾಹೋರಿಗೆ ಭೇಟಿನೀಡಿದಾಗ, ಪಾಕಿಸ್ತಾನದಲ್ಲಿ ಅವರ ಮೇಲೆ ದಾಳಿಯಾಗಿ ಅವರನ್ನು ಕತ್ತಿನವರೆಗೆ ಮಣ್ಣಿನಲ್ಲಿ ಜೀವಂತ ಸಮಾಧಿ ಮಾಡಲಾಯಿತು. ಆದರೆ ಹೇಗೋ ಅಲ್ಲಿಗೆ ಬಂದ ಭಾರತೀಯ ಸೈನ್ಯ ಪಡೆಯವರು ಅವರನ್ನು ಪಾರುಮಾಡಿ ರಕ್ಷಿಸಿ ಮುಂದಿನ ರೈಲು ಗಾಡಿಯಲ್ಲಿ ವಾಪಸ್ ಕಳಿಸಿದರು! (ಇದನ್ನು ಶ್ರೀ ಶ್ರೀ ರವಿಶಂಕರವರ ವಿಡಿಯೋದಲ್ಲಿ ಕೇಳಬಹುದು). ಪ್ರತಿ ಶನಿವಾರದಂದು, ಬೆಂಗಳೂರಿನ ಅವರ ಮನೆಯಲ್ಲಿ ನಡೆಯುತ್ತಿದ್ದ ಸತ್ಸಂಗದಲ್ಲಿ, ವೇದಮಂತ್ರಗಳ ಉಪನ್ಯಾಸದ ಜೊತೆಗೆ ಪಂಡಿತ್ ಜಿ ಅವರು ತಮ್ಮ ಜೀವನದ ವಿವಿಧ ರೋಚಕ ಅನುಭವಗಳನ್ನೂ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು.
13-4-1919 ರಂದು, ಅಂದರೆ ಇಂದಿಗೆ 106 ವರ್ಷಗಳ ಹಿಂದೆ ಜನರಲ್ ಡೈಯೆರ್ ನಡೆಸಿದ ಜಾಲಿಯಾನ್ ವಾಲಾ ಬಾಗ್ ಸಾಮೂಹಿಕ ಹತ್ಯೆಯನ್ನು ಪ್ರತ್ಯಕ್ಷವಾಗಿ ನೋಡಿ, ದೈಹಿಕ ಮತ್ತು ಮಾನಸಿಕ ನೋವುಂಡವರು ಆಗಿನ ತರುಣ ಪಂಡಿತ್ ಜಿ ಅವರು. ಆ ದಿನ ಸುತ್ತಲೂ ಬಂದೂಕಿನ ಸುರಿಮಳೆಯಾಗುತ್ತಿದ್ದಂತೆ ಒಂದು ಚರಂಡಿಯಲ್ಲಿ ಬಚ್ಚಿಟ್ಟುಕೊಂಡು ಪಾರಾದರು. ಈ ಹತ್ಯಾಕಾಂಡದ ನಂತರ ಅನೇಕರಿಗೆ ಅಂತ್ಯಕ್ರಿಯೆ ವಿಧಿಯನ್ನು ಸಹ ನಿರ್ವಹಿಸಿದ ಸ್ವಯಂಸೇವಕರು ಅವರು!
ಹಲವು ಬಾರಿ ಈ ಘಟನೆಗಳನ್ನು ಅವರ ಬಾಯಿಂದ ಕೇಳಿದ ನನಗೆ ಮನದಾಳದಲ್ಲೆದ್ದ ಭಾವನೆ: ಎಂದೂ ನಮ್ಮ ಇತಿಹಾಸವನ್ನು, ನಮ್ಮ ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರರನ್ನು ಮರೆಯಬಾರದೆಂದು.
ಜಾಲಿಯನ್ವಾಲಾ ಬಾಗ್ ಗೆ ನಮ್ಮ ಭೇಟಿ.
ನಮ್ಮ ಮಗಳಿಗೆ ಹನ್ನೆರಡು ವರ್ಷ ವಯಸ್ಸಾದಾಗ ನಾವು ಭಾರತ ಪ್ರವಾಸ ಮಾಡಿದಾಗ, ಅಮ್ರಿತ್ಸರ್ ಗೆ ಹೋಗ ಬೇಕೆಂದು ಯೋಜನೆ ಮಾಡಿದೆವು
ಪೋಲೆಂಡ್ ದೇಶದಲ್ಲಿ ಎಲ್ಲ ಶಾಲಾ ಮಕ್ಕಳು ಬಲು ಚಿಕ್ಕ ವಯಸ್ಸಿನಲ್ಲೇ ಎರಡನೆಯ ವಿಶ್ವ ಸಮರದ ಸಮಯದಲ್ಲಿ ಆಶ್ವಿಟ್ಜ್ಎನ್ನುವ ಸ್ಥಳದಲ್ಲಿ ನಡೆದ ಕ್ರೂರ ಕಾನ್ಸಂಟ್ರೇಶನ್ ಕ್ಯಾಂಪನ್ನು ಎಂದೂ ಮರೆಯದಿರಲಿ ಎಂದು, ಆಶ್ವಿಟ್ಜ್ ಗೆ ಶಾಲಾ ಪ್ರವಾಸವನ್ನು ಕಡ್ಡಾಯವಾಗಿ ಏರ್ಪಡಿಸುತ್ತಾರೆ. ನಮ್ಮ ಭಾರತದಲ್ಲಿ ಇದೇನೂ ಇಲ್ಲ. ಇನ್ನು ಇಲ್ಲಿ ಯು ಕೆ ದಂಥ ಪರದೇಶದಲ್ಲಿ ಬೆಳೆಯುತ್ತಿರುವ ನಮ್ಮ ಭಾರತೀಯ ಮಕ್ಕಳಿಗೆ ನಮ್ಮ ಸ್ವಾತಂತ್ರ್ಯದ ಬಗ್ಗೆ ಹೇಗೆ ತಿಳಿದೀತು? ಈ ಮನವರಿಕೆಯಿಂದ ಅಮ್ರಿತ್ಸರ್ ನಲ್ಲಿರುವ ಜಾಲಿಯನ್ವಾಲಾ ಬಾಗ್ ಗೆ ನಾವೆಲ್ಲ 2022 ರಲ್ಲಿ ಭೇಟಿ ನೀಡಿದೆವು. ಜಾಲಿಯನ್ವಾಲಾ ಉದ್ಯಾನದಲ್ಲಿ ಆ ಎಪ್ರಿಲ್ ದಿನ (13-4-1919 ರಂದು) ಪುಟಾಣಿ ಮಕ್ಕಳಿಂದ ಹಿಡಿದು, ಗರ್ಭಿಣಿಯರು, ತಾಯಂದಿರು, ಮಹಿಳೆಯರು, ವೃದ್ಧರು, ಹದಿಹರಿಯದವರು, ಗಂಡಸರು ಯಾರನ್ನೂ ಲೆಕ್ಕಿಸದೆ, ಅವರ ಮೇಲೆ ತನ್ನ ಕೈಕೆಳಗಿನ ಸೈನಿಕ ಪಡೆಯವರಿಗೆ ಸತತ ಹದಿನೈದು ನಿಮಿಷಗಳ ಗುಂಡಿನ ಮಳೆಗರೆದು ಹತ್ಯೆ ಮಾಡಲು ಜನರಲ್ ಡೈಯರ್ ಆರ್ಡರ್ ಕೊಟ್ಟ. ಚೆಲ್ಲಾಪಿಲ್ಲಿಯಾಗಿ ಚದುರಿದ ಜನ ಸಮೂಹ, ಬಾವಿಗೆ ಹಾರಿದ ಜನರೆಷ್ಟು; ಪಾರಾಗಲು ಯತ್ನಿಸುತ್ತಾ ಅಲ್ಲಿದ್ದ ಗೋಡೆಯ ಹಿಂದೆ ಬಚ್ಚಿಟ್ಟುಕೊಂಡು ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸಾವನ್ನಪ್ಪಿದವರೆಷ್ಟು ಸಾವಿರಾರು ಭಾರತೀಯರು! ಮುಗಿಲು ಮುಟ್ಟುವ ಅವರ ಚೀತ್ಕಾರ! ಆ ವಾತಾವರಣವನ್ನು ನೆನೆದು ನಮ್ಮ ಕಿವಿಗಳನ್ನು ತೂತು ಮಾಡಿದಂತೆ ಭಾಸವಾಯಿತು. ಇಂದಿಗೂ ಆ ಉದ್ಯಾನದಲ್ಲಿ ಕಾದಿಟ್ಟ ಗೋಡೆಗಳಲ್ಲಿ ಬುಲ್ಲೆಟ್ಗಳ ಗುರುತುಗಳನ್ನು ನೋಡಬಹುದು. (ಕೆಳಗಿನ ಚಿತ್ರ ನೋಡಿರಿ. ಚಿತ್ರ ಕೃಪೆ: ಶಾಲಿನಿ). ಆ ಹುತಾತ್ಮರ ನೆನಪಿನಲ್ಲಿ ಅಲ್ಲಿ ಉರಿಯುತಿದೆ ಒಂದು ಅಮರ ಜ್ಯೋತಿ. ಅದೆಲ್ಲ ನೋಡುತ್ತ ಪಂಡಿತ್ ಜಿ ಅವರನ್ನು ನೆನೆದುಕೊಂಡೆ. ಅವರೆಲ್ಲಿ ಬಚ್ಚಿಟ್ಟುಕೊಂಡು ಪಾರಾಗಿರಬಹುದು ಅಂತ ನನ್ನ ಕಣ್ಣುಗಳು ಚರಂಡಿಗಳನ್ನು ಅರಸುತ್ತಿತ್ತು! ಈಗಲೂ ನನಗೆ ಆಗಿಂದಾಗ ಆ ಭೇಟಿಯ ನೆನಪಾಗುತ್ತಿರುತ್ತದೆ; ಕಣ್ಣು ಮಂಜಾಗುತ್ತದೆ!
.

ಇತ್ತೀಚೆಗೆ ನಾವು ಕಂಡ ಚಲನ ಚಿತ್ರ- ಕೇಸರಿ -2
ಎಪ್ರಿಲ್ ತಿಂಗಳಿನಲ್ಲಿ ವರ್ಷಾಬ್ದಿಯಂದು ರಿಲೀಸ್ ಆದ ಈ ಚಲನ ಚಿತ್ರದ ಅಧಿಕೃತ ಹೆಸರು Kesari Chapter 2: The Untold Story of Jallianwala Bagh. ನನ್ನ ಪತಿ ಸೇಕರ್ ಮತ್ತು ಮಗಳೊಂದಿಗೆ ಕಾರ್ಡಿಫ್ ನ ಚಿತ್ರಮಂದಿರದಲ್ಲಿ ನೋಡಿದೆವು. ಚಿತ್ರದ ಆರಂಭದಲ್ಲಿ 13-4-1919ರ ಆ ಕರಾಳ ದಿನದ ಘಟನೆಗಳನ್ನು ತೋರಿಸಿದ್ದಾರೆ. ಹೇಗೆ ಮರೆಯಲಾದೀತು ಈ ದೃಶ್ಯಗಳನ್ನು? ಸಿನಿಮಾ ಮುಗಿದ ನಂತರವೂ ಕಣ್ಣ ಮುಂದೆ ಅನವರತ ರೀಲುಗಳಂತೆ ಅದೇ ದೃಶ್ಯ!
ಸಿನಿಮಾದ ಕಥಾ ವಸ್ತು ಮೇಲಿನ ಘಟನೆಗಳ ಹಂದರದಲ್ಲಿ ಹೆಣೆದ ರೋಚಕ ಚಲನಚಿತ್ರ (docudrama). ಸಿನಿಮಾದ ’ನಾಯಕ’ ಶಂಕರನ್ ನಾಯರ್(ಅಕ್ಷಯ್ ಕುಮಾರ್). ಆತ ವೃತ್ತಿಯಿಂದ ವಕೀಲ. ಬ್ರಿಟಿಷರಿಂದ ನಿಯುಕ್ತನಾದ ವೈಸರಾಯ್ ಕೌನ್ಸಿಲ್ ನ ಹಿರಿಯ ಸದಸ್ಯ ಹಾಗು ತನ್ನ ’ಸೇವೆಗೆ’ ಬ್ರಿಟಿಶ್ ಸರಕಾರದಿಂದ ನೈಟ್( knighthood) ಪದವಿನ್ನು ಪಡೆದಿದ್ದ ಸಹ. ಜಾಲಿಯಾನ್ವಾಲಾ ಬಾಗ್ ನ ಕ್ರೂರ ಹತ್ಯಾಕಾಂಡದ ನಂತರ ಸತ್ಯಾನ್ವೇಷಣೆಯ ವಿಚಾರಣೆ ನಡೆಸಿ (ತಮ್ಮ ಪರವಾಗಿ)ವರದಿಮಾಡಲು ಸರಕಾರದಿಂದ ನೇಮಿತವಾದವನು ಬರಬರುತ್ತ ಘಟನೆಗಳ ಹಿಂದಿನ ಸತ್ಯ ತೆರೆದುಕೊಂಡಂತೆ ಭಾರತೀಯರ ಪರವಾಗಿ ಹೋರಾಡುತ್ತಾನೆ. ಅಂಥ ಭಾರತಮಾತೆಯ ಧೀರ ಪುತ್ರನ ಕಥೆ ಅದು. ಜಾಲಿಯನ್ವಾಲಾ ಬಾಗ್ನಲ್ಲಿ ಕೂಡಿದ್ದ ಸಿಖ್ ಜನರು ಶಸ್ತ್ರಧಾರಿಗಳಾಗಿದ್ದರೆಂದು ನಂಬುವಂತೆ ಸರಕಾರದಿಂದ ಪ್ರಚಾರ ಮಾಡಲಾಗಿತ್ತು. ನಿಜ ಸಂಗತಿಯಲ್ಲಿ ಬೈಸಾಕಿ ದಿನದಲ್ಲಿ, ಅವರೆಲ್ಲ ರೌಲಟ್ಟ್ ಆಕ್ಟ್ ನ ಕುರಿತು ಶಾಂತಿಯುತ ಪ್ರತಿಭಟನೆಗಾಗಿ ಕೂಡಿದ್ದರು, ಮತ್ತು ಬ್ರಿಟಿಷ್ ಸರ್ಕಾರದ ಜನರಲ್ ಡೈಯರ್ ನೀಡಿದ ಆದೇಶ ಜನಾಂಗೀಯ ಘೋರ ನರಮೇಧಕ್ಕೆ ಕಾರಣವಾಯಿತೆನ್ನುವ ಸತ್ಯವನ್ನು ಮುಚ್ಚಿಡುವ ಪ್ರಯತ್ನಗಳು ಎನ್ನುವದನ್ನು ಸಿನಿಮಾ ಸ್ಪಷ್ಟಪಡಿಸುತ್ತದೆ. ಇದೊಂದು ಮನಸೆಳೆಯುವ ಕೋರ್ಟ್ ರೂಂ ನಾಟಕ. ಬ್ರಿಟಿಷರ ಪರ ವಕೀಲರಾಗಿ ನೆವಿಲ್ ಮೆಕಿನ್ಲಿ (ಮಾಧವನ್) ಮತ್ತು ಬಾರತೀಯರ ಪರವಾಗಿ ಶಂಕರನ್ ನಾಯರ್ (ಅಕ್ಷಯ್ ಕುಮಾರ್) ಅವರ ಮಧ್ಯೆ ನಡೆಯುವ ಘರ್ಷಣೆ ವೀಕ್ಷಿಸಲು ಯೋಗ್ಯವಾಗಿದೆ.
ದಿಲ್ರೀತ್ ಕೌರ್ ಗಿಲ್ (ಅನನ್ಯ ಪಾಂಡೆ ) ಕಿರಿಯ ವಕೀಲಳು, ಆದರೆ ನೂರು ವರ್ಷಗಳ ಹಿಂದೆ, ಸತ್ಯಕ್ಕಾಗಿ ಶಂಕರನ್ ನಾಯರ್ ಜೊತೆ ಸೇರಿ, ಅವರನ್ನು ಪ್ರೇರೇಪಿಸಿದ ವೀರ ಯೋಧೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾಳೆ. ಚಿತ್ರಕಥೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದ್ದರಿಂದ, (ಉದಾಹರಣೆಗಾಗಿ, ಮೆಕಿನ್ಲಿ ಮತ್ತು ದಿಲ್ರೀತ್ ಗಿಲ್ ಪಾತ್ರಗಳು ಕಾಲ್ಪನಿಕ) ಇದನ್ನು ಸಾಕ್ಷಿಚಿತ್ರ (documentary) ಎಂದು ಪರಿಗಣಿಸಲಾಗದು. ಆದರೂ ಅಜ್ಞಾತವಾಗಿದ್ದ ಯೋಧರ ಬಗ್ಗೆ, ಮುಚ್ಚಿಟ್ಟ ನಮ್ಮ ಭಾರತದ ಸ್ವಾತಂತ್ರದ ಹೋರಾಟದ ಪ್ರಮುಖ ಅಧ್ಯಾಯವನ್ನು ಬಹಿರಂಗ ಪಡಿಸಿರುವ ಈ ಚಲನ ಚಿತ್ರವನ್ನು ಎಲ್ಲ ಭಾರತೀಯರು ನೋಡಲೇ ಬೇಕು. 15 ವರ್ಷದ ಮೇಲಿನ ಮಕ್ಕಳಿದ್ದರೆ ಅವರನ್ನ ಕರೆದುಕೊಂಡು ಹೋಗಿರಿ. ( ಹತ್ಯಾಕಾಂಡದ ತೀವ್ರ ಗ್ರಾಫಿಕ್ ಚಿತ್ರಣದಿಂದಾಗಿ ಯುಕೆನಲ್ಲಿ ಸೆನ್ಸಾರ್ ಬೋರ್ಡ್ನಿಂದ ’15 certificate ಕೊಡಲಾಗಿದೆ). ನೀವೂ ಪರಿವಾರ ಸಮೇತವಾಗಿ ನೋಡಿ ಎಂದು ಶಿಫಾರಸ್ಸು ಮಾಡ ಬಲ್ಲೆ.
106 ವರ್ಷಗಳಾದ ನಂತರವೂ ನ್ಯಾಯಕ್ಕಾಗಿ ಭಾರತೀಯರ ಹೋರಾಟ ಮುಂದುವರಿಯುತ್ತಿದೆ. ಚಿತ್ರದ ಕೊನೆಯಲ್ಲಿ ಬ್ರಿಟಿಷ್ ಸರ್ಕಾರವು ಇನ್ನೂ ಕ್ಷಮಾಪಣೆ ಕೇಳಿಲ್ಲ ಎಂಬ ವಾಸ್ತವವನ್ನು ತಿಳಿಸಿದ್ದಾರೆ. ಇತಿಹಾಸದ ಪುಟಗಳಲ್ಲಿ ಶಂಕರ್ ನಾಯರ್ ಅವರಂತಹ ಉತ್ಕಟ ದೇಶಪ್ರೇಮಿಯ ಕೊಡುಗೆಯ ಬಗ್ಗೆ ಇಲ್ಲಿಯವರೆಗೂ ಕೇಳಿರಲಿಲ್ಲವಲ್ಲ ಎಂದು ನನಗೆ ಬೇಸರವಾಯಿತು.
- ಶಾಲಿನಿ ಜ್ಞಾನಸುಬ್ರಹ್ಮಣಿಯನ್
Learning & Development Trainer
Cardiff
Wales, U K





ಚಿತ್ರ ಕೃಪೆ: ಎಲ್ಲ ಫೋಟೋಗಳೂ ಲೇಖಕಿಯವರವು: (ಚತುರ್ವೇದಿಯವರದನ್ನು ಬಿಟ್ಟು - CC). ಲೇಖನದ ಅಡಿಯಲ್ಲಿಯ ಚಿತ್ರಗಳು ಜಾಲಿಯನ್ ವಾಲಾ ಬಾಗ್ ದೃಶ್ಯಗಳು. ಭಿತ್ತಿ ಶಿಲ್ಪಗಳು ಮತ್ತು ಸ್ಮಾರಕಗಳು ಮತ್ತು ಒಂದು ಅಮರಜ್ಯೋತಿ

ಮೂರು ಸ್ತರಗಳಲ್ಲಿ ಲೇಖಕಿ ಶಾಲಿನಿಯವರ ಮೇಲೆ ಜಾಲಿಯಂವಾಲಾ ಬಾಗ್ ನರಮೇಧ ಪರಿಣಾಮ ಮಾಡಿದ್ದರಿಂದ ಈ ಲೇಖನ ಉದ್ಭವವಾಗಿದೆಯೆಂದು ಕೊಳ್ಳುತ್ತೇನೆ. (ಇತಿಹಾಸ ಪಾಠ, ಪ್ರತ್ಯಕ್ಷ ವರದಿ, ಭೇಟಿ , ನಂತರ ಚಲನ ಚಿತ್ರ). ಮೊದಲನೆಯದಾಗಿ ಹಳೆಯ ಇತಿಹಾಸದ ಪುಟಗಳಲ್ಲಿ ಒಂದೆರಡು ಸಾಲು ಅಥವಾ ಪ್ಯಾರಾಗಳಲ್ಲಿ ಉಲ್ಲೇಖವಾಗಿದ್ದು ಅಷ್ಟು ಪರಿಣಾಮ ಮಾಡಿರಲಿಕ್ಕಿಲ್ಲ. ಲೇಖನವನ್ನು ಓದುತ್ತ ಅವರ ಕುಟುಂಬಕ್ಕೆ ಹತ್ತಿರವಿದ್ದ ಮತ್ತು ಸ್ವಾತಂತ್ರ್ಯ ವೀರ ಮತ್ತು ಸತ್ಯನಿಷ್ಠ ಚತುರ್ವೇದಿಯವರ ಬಾಯಿಂದ ಕೇಳಿದಾಗ ಅದೆಂಥ ರೋಮಾಂಚನವಾಗಿರಲಿಕ್ಕಿಲ್ಲ ಅಂತ ಕಲ್ಪಿಸಿಕೊಳ್ಳುತ್ತಾ ಇದ್ದೆ. ತಮ್ಮ ಭಾರತ ಯಾತ್ರೆಯನ್ನು ಅಷ್ವಿಟ್ಜ್ (Aschwitz)ಗೆ ಹೋಲಿಸುವಷ್ಟು ಮನಕಲಕಿರಬೇಕು ಆ ಜಾಲಿಯಂವಾಲಾ ಬಾಗ್ ಸ್ಮಾರಕದ ಭೇಟಿ. ಆ ವಿವರಗಳನ್ನು ಕೇಳಿದಾಗ ಈಗಲೂ ರಕ್ತ ಕುದಿಯುತ್ತದೆ. ಆಂಗ್ಲ ಬರಹಗಳಲ್ಲಿ ಆಗಾಗ ವಸಹಾತುಶಾಲಿ ಬ್ರಿಟಿಷ್ ಇತಿಹಾಸದಲ್ಲಿ 1756 ರ ಪ್ಲಾಸಿ ಕಾಳಗದ ಪೂರ್ವದಲ್ಲಿ ಸಿರಾಜುದ್ದೌಲಾ ಕೈಕೆಳಗೆ ನಡೆದ Black hole of Calcutta” ಘಟನೆಯನ್ನೇ ದೊಡ್ಡದು ಮಾಡಿ ಹೀನ – ಕ್ರೌರ್ಯ ಘಟನೆಯೆಂದು ಸಾರುವಾಗ ಜಾಲಿಯನ್ ವಾಲಾ ಅಧ್ಯಾಯದ ಬಗ್ಗೆ ಎಷ್ಟು ನೆನಪಿಸಿದರೂ ಸಾಲದು. ನಮ್ಮ ಇತಿಹಾಸದ ಅನೇಕ ಪುಟಗಳನ್ನು ಮತ್ತೆ ಬರೆಯ ಬೇಕು; ಮಕ್ಕಳಿಗೆ ಮಾನವರಿಕೆಯಾಗ ಬೇಕು. ಇದನ್ನು ಒದಗಿಸಿದ ಶಾಲಿನಿ ಜ್ಞಾನಸುಬ್ರಹ್ಮಣ್ಯನ್ ಅವರಿಗೆ ಅಭಿನಂದನೆಗಳು.
ನಾನು ಇನ್ನಷ್ಟು ಪ್ರತಿಕ್ರಿಯೆಗಳನ್ನು ಎದುರು ನೋಡುತ್ತಿದ್ದೆ.
ಶ್ರೀವತ್ಸದೇಸಾಯಿ
LikeLiked by 1 person
interesting. Instigates to watch the movie.
LikeLiked by 1 person