ಒಲುಮೆಯಿಂದ ಆತ್ಮಸಾಂಗತ್ಯದತ್ತ…

ಪ್ರಿಯ ಓದುಗರೆ
ಈ ವಾರದ ಅನಿವಾಸಿಯಲ್ಲಿ, ಇತ್ತೀಚಿಗೆ ಬಳಗಕ್ಕೆ ಸೇರಿದ ಹೊಸ ಬರಹಗಾರ್ತಿಯ ಬರಹವನ್ನು ಪರಿಚಯಿಸುತ್ತಿದ್ದೇನೆ.
ವೃತ್ತಿಯಲ್ಲಿ ಅರಿವಳಿಕೆ ವಿಭಾಗದಲ್ಲಿ ತಜ್ಞ ವೈದ್ಯೆಯಾಗಿರುವ ದೀಪಾ ಸಣ್ಣಕ್ಕಿಯವರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕಿನವರು. ಸದ್ಯ ಇಂಗ್ಲೆಂಡಿನ ಸ್ಟಾಕ್ಟನ್ ಆನ್ ಟೀಸ್ ಅಲ್ಲಿ ವಾಸವಾಗಿದ್ದಾರೆ. ಇತ್ತೀಚಿಗೆ ವೈದ್ಯ ಸಂಪದದಲ್ಲಿ ಅವರ ಕವನವೂ ಕೂಡಾ ಪ್ರಕಟವಾಗಿತ್ತು. ಕನ್ನಡ ಸಾಹಿತ್ಯದಲ್ಲಿ ತುಂಬಾ ಆಸಕ್ತಿ. ಮನತುಂಬಿ ಬರೆಯುವುದು ಹವ್ಯಾಸ. ದಯವಿಟ್ಟು ಓದಿ ಹರಸಿ

ಪ್ರಸಂಗ ೧
ಕಡಿದಾದ ಬೆಟ್ಟದ ಏರಿನ ಕಾಲುದಾರಿ ಸವೆಸುತ ಸಮಯ ಸಂದಿದ್ದೇ ಗೊತ್ತಾಗಲಿಲ್ಲ. ಅವರಿಬ್ಬರು ಬೆಟ್ಟದ ಪಾದದಡಿ ಸೇರಿದಾಗ ಬೆಳಗಿನ ಐದು ಕಳೆದಿರಬೇಕು. ಆಗಿನ್ನೂ ನಸುಗಪ್ಪು ಕತ್ತಲು. ಒಬ್ಬರನ್ನೊಬ್ಬರು ನೋಡದೇ ಮೂರು ವರ್ಷವೇ ಕಳೆದು ಹೋಗಿ, ಮುಖಚಹರೆಯ ನೆನಪು ಮಾಸಿಹೋದಂತಿತ್ತು‌‌. ಆದರೂ, ಫೋನಿನ ಸಂಭಾಷಣೆಯ ಚಿರಪರಿಚಿತ ಧ್ವನಿಯೊಂದಿಗೆ ಸಂಭ್ರಮದಿಂದ ಪರಸ್ಪರ ಬರಮಾಡಿಕೊಂಡಿದ್ದರು. ಪೂರ್ವಾಭಿಮುಖವಾದ ಬೆಟ್ಟವನ್ನು ಮೇಲೆರಿದಂತೆ, ಸೂರ್ಯೋದಯದ ಸೊಬಗು ಕಣ್ಣಿಗೆ ಕಾಣದಿದ್ದರೂ ಸೃಷ್ಟಿಯ ಎಲ್ಲಾ
ಸಂಕೇತಗಳೂ ಅರುಣೋದಯವನ್ನು ಸಾರುತಿದ್ದವು. ಬಾನಿನಂಚಿನಲ್ಲಿ ಬೆಳಗು ಮೂಡಲು ಕಾಯದೇ, ಹಕ್ಕಿಗಳು ಎಂದಿನಂತೆ ತಮ್ಮ ದಿನಚರಿಯಲ್ಲಿ ತೊಡಗಿದ್ದವು. ದಟ್ಟವಾಗಿ ಹಬ್ಬಿದ ಮರಗಳ ಸಂದುಗೊಂದಿನಂದ ಉದಯರವಿಯ ಕಿರಣಗಳು ತೂರಿ ಬರುತ್ತಿದ್ದವು. ಇಬ್ಬನಿಯಲಿ ತೋಯ್ದ ಇಳೆ, ಕಾಡುಹೂವುಗಳ
ಮಿಶ್ರಸುಗಂಧ, ಮರಿ ಹಕ್ಕಿಗಳ ಕೊರಳ ಇಂಪನ,ಇವೆಲ್ಲವೂ ಇಬ್ಬರ ಮನಸ್ಸನ್ನು ಆಹ್ಲಾದಕರವನ್ನಾಗಿ ಮಾಡಿದ್ದವು. ಕಳೆದ ಮೂರು ವರ್ಷದಿಂದ ಬರೀ ಫೋನಿನ ಸಂಭಾಷಣೆಯಲ್ಲಿ ತೊಡಗಿ, ಇಂದು ಮುಖಾಮುಖಿಯಾಗುವ ಅಪರೂಪದ ಸುದಿನವಾಗಿತ್ತು.‌ ಅದೇ ಕಾರಣಕ್ಕಾಗಿಯೇ, ಮಾಗಿಯ ಚಳಿಯು ನಡುಕವನ್ನುಂಟು ಮಾಡದೆ, ಮನಸನ್ನು ಪ್ರಫುಲ್ಲಿತಗೊಳಿಸುತ್ತಿತ್ತು. ಮನಮಂದಿರದಲ್ಲಿ ಸ್ಥಾಪಿಸಿದ ಮೂರ್ತಿಯು ಇಂದು ಜೀವತಳೆದು ಕಣ್ಮುಂದೆ ಅವತರಿಸಲು ಅವಳ ಮನವು ಭಾವೋನ್ಮತ್ತವಾಗಿತ್ತು.‌ಒಡಲಲ್ಲಿ ಭಾವನೆಗಳ ಮಹಾಪೂರ ಹರಿಯುತ್ತಿದ್ದರೂ ಮಾತುಗಳಿಗೆ ಬರ ಬಂದು ಮೌನವೇ ಪ್ರಧಾನವಾಗಿತ್ತು.

“ನಾನಿರುವ ಊರಲ್ಲಿ ಆಕಾಶ, ಅದೆಷ್ಟು ವಿಸ್ತಾರವಾಗಿ ಕಾಣ್ತದೆ ಗೊತ್ತಾ? ಆ ಬಾನಿನಂಚಿನಿಂದ ಈ ಬಾನಿನಂಚಿನವರೆಗಿನ ಅಗಾಧತೆಯನ್ನು ನೋಡುವುದೇ ಒಂದು ಕಣ್ಣಿಗೆ ಹಬ್ಬ ಕಣೋ!”
ಅವಳ ಮಾತಿಗೆ ಬರಿ ಹೂಂಗುಟ್ಟಿ ಅವನು ಮತ್ತೇ ದೃಷ್ಟಿಯನ್ನು ಆಗಸದೆಡೆಗೆ ನೆಟ್ಟ. ಭಾವಪ್ರವಾಹ ತುಂಬಿ ಬಂದಾಗ ಅವನು ಮೌನಕ್ಕೆ ಶರಣಾಗುವುದನ್ನು ಅವಳು ಮನಃ ಪೂರ್ತಿ ಬಲ್ಲಳು, ಒಪ್ಪಿಕೊಂಡಿರುವಳು ಕೂಡ! ಸಂಭಾಷಣೆಯಲ್ಲಿ ತೊಡಗದಿದ್ದರೂ ಅವಳ ಧ್ವನಿಯ ಅನುರಣಿತಕ್ಕೆ ಅವನು ಬಯಸಿಹನು ಎಂದರಿತು ಮತ್ತೇ ಮುಂದುವರೆಸಿದಳು.
” ಈ ವಿಸ್ಮಯಶೀಲ ನಿಸರ್ಗಕ್ಕೂ ನಿನ್ನ ಘನತೂಕದ ವ್ಯಕ್ತಿತ್ವಕ್ಕೂ ತುಂಬಾ ಸಾಮ್ಯವುಂಟು ಕಣೋ! ಈ ಅಗಾಧ ಆಕಾಶದಂತೆಯೇ, ಆ ಅಗಣಿತ ನಕ್ಷತ್ರಗಳೂ, ಅಪರಿಮಿತ ಆಳವುಳ್ಳ ಸಾಗರವೂ, ಗಗನಚುಂಬಿ ಪರ್ವತ ಶಿಖರಗಳೂ, ಅದ್ವಿತೀಯ ಶಕ್ತಿಸಾರವಾದ ಅಗ್ನಿಯೂ,ಕೈಗೆಟುಕದ ಸೂರ್ಯೋದಯ-ಅಸ್ತಗಳೂ; ಎಲ್ಲವೂ , ಎಲ್ಲವೂ ನಿನ್ನ ಇರುವಿನ ನೆನಪನ್ನು ಹೊತ್ತು ತರುತ್ತವೆ. ಈ ಸಾಂದರ್ಭಿಕ ಮಾತು, ಅತಿರೇಕವೆಂದೆನಿದರೂ ಸುಳ್ಳಲ್ಲ.‌ ನೀನೆಂದೂ ನಿನ್ನ ಘನತೆಗೆ ವ್ಯತಿರಿಕ್ತವಾಗಿ ನಡೆದಿಲ್ಲವಾದರೂ, ನಿನ್ನ ಚಿತ್ರ ನನ್ನ ಸ್ಮೃತಿ ಪಟಲದಲ್ಲಿ ಯಾವಾಗಲೂ ‘ಅನಾದಿಅನಂತ ಯೋಗೇಶ್ವರ’ ನಾಗಿಯೇ ಇದ್ದೀತು.”
ಪ್ರತ್ಯುತ್ತರವಾಗಿ ಅವಳಿಗೆ ಮತ್ತೆ ಮೌನವೇ ದೊರಕಿತು. ಆದರೆ ಈ ಬಾರಿ ಅವನ ಕಂಗಳಲ್ಲಿ ಅವಳ ಪ್ರತಿಬಿಂಬದ ಬದಲು ಅಮೃತ ಬಿಂದುಗಳ ಕೊಳವೊಂದು ಕಂಡಿತು. ತುಸುಕಾಲ ಮಾತುಗಳ ಅವಶ್ಯಕತೆ ಇಲ್ಲವಾಗಿ ಮೌನವೇ ಸನ್ನಿವೇಶದ ಅಧಿಪತ್ಯವನ್ನು ವಹಿಸಿತ್ತು. ರಾತ್ರಿಯಲ್ಲಿ ಮಾತ್ರ ಕೇಳುವ ಕೀಟಗಳ ಜೀರ್ದನಿ, ಬೀಸುತ್ತಿದ್ದ ಗಾಳಿಗೆ ತೂಗುತ್ತಿದ್ದ ಮರಗಳ ಪಿಸುದನಿ, ಹತ್ತಿರದಲ್ಲೇ ಹರಿಯುತ್ತಿದ್ದ ತಾಯಿಕಾವೇರಿಯ ಮಂಜುಳದನಿ, ದೂರದಲ್ಲೆಲ್ಲೋ ಸೀಳಿ ಬರುತ್ತಿದ್ದ ನರಿಯ ಊಳುದನಿ ಇವೆಲ್ಲವೂ ಆ ನೀರವತೆಯ ಅವಿಭಾಜ್ಯ ತರಂಗಗಳಾಗಿದ್ದವು. ಇವುಗಳ ಮಧ್ಯೆ ನಿಟ್ಟುಸಿರುಗಳ ಸ್ವರವೂ ಆಗೀಗ ಕೇಳಿಬರುತ್ತಿತ್ತು.
” ನಮ್ಮಿಬ್ಬರ ಕವಲೊಡೆದ ದಾರಿಗಳನ್ನು ಮತ್ತೆ ಸಮಾನಾಂತರಗೊಳಿಸಿದ ಚೈತನ್ಯ ಶಕ್ತಿ ಯಾವುದೋ…?” ಎಂದವಳ ಪ್ರಶ್ನೆಗೆ
” ಆ ಶಕ್ತಿ ಯಾವುದೇ ಇರಲಿ‌‌. ಈ ನಮ್ಮಿಬ್ಬರ ವಿಶಿಷ್ಟವಾದ ಸ್ನೇಹ, ಇರುವ ಹಾಗೆಯೇ ಅತ್ಯಂತ ಮಧುರವಾಗಿದೆ‌. ಜಗತ್ತಿನ ಸಂಶೋಧಕ ಕಣ್ಣಿಗೆ ನಾವು ಸತಿಪತಿಯಾಗದಿದ್ದರೂ, ನಮ್ಮನಮ್ಮ ಅಂತರ್ ದೃಷ್ಟಿಯಲ್ಲಿ ನಮಗೆ ಅದರ ಅನಿವಾರ್ಯತೆ ಇಲ್ಲ. ಈ ಸಂಬಂಧ, ಅದಕ್ಕಿಂತಲೂ ಉತ್ಕೃಷ್ಟವಾದದ್ದು, ಭವಬಂಧನದ ಮೇರೆ ಮೀರಿದ್ದು.
ಇಲ್ಲಿ ಬೇಡಿಕೆ, ಅಪೇಕ್ಷೆ, ನಿಗ್ರಹ ,ಪೂರ್ವಾಗ್ರಹ ಇತ್ಯಾದಿ ಋಣಾತ್ಮಕ ಗುಣಗಳಿಗೆ ಅವಕಾಶವಿಲ್ಲ. ಬರೀ ನಿಃಸ್ವಾರ್ಥವಾದ, ನಿಃವ್ಯಾಜ್ಯವಾದ ಅನುರಾಗ , ಸಾದರನೀಯ ಆರಾಧನೆ ಮತ್ತು ಹೃತ್ಪೂರ್ವಕ ಸಮರ್ಪಣೆಯುಳ್ಳ ಬಾಂಧವ್ಯದ ಬೆಸುಗೆಯುಂಟು‌. ಅದೇ ಕಾರಣಕ್ಕಾಗಿಯೇ ಈ ನಂಟು, ನಿಯಮಾವಳಿ/ ಕಟ್ಟುಪಾಡುಗಳಿಗೆ ಒಳಪಡದೇ ಯಾವುದೋ ಕ್ಷುಲ್ಲಕ ಪರಿಧಿಗೋ, ಪ್ರಮಾಣಕ್ಕೊ, ಪುರಾವೆಗಳಿಗೊ ಸಿಲುಕದೇ ಅತೀತವಾದದ್ದು!

One thought on “ಒಲುಮೆಯಿಂದ ಆತ್ಮಸಾಂಗತ್ಯದತ್ತ…

  1. ದೀಪ ಬಳಸಿರುವ ಭಾಷೆ, ನಿಸರ್ಗದ ವರ್ಣನೆ, ರೂಪಕಗಳು, ವಿವರಗಳು ನನಗೆ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕೃತಿಯನ್ನು ನೆನಪಿಸಿದೆ. ಗಂಡು ಹೆಣ್ಣಿನ ಸಂಬಂಧಗಳ ಅಪರೂಪದ ಮಜಲನ್ನು ದೀಪ ತೆರೆದಿಟ್ಟಿದ್ದಾರೆ. ಕಥೆಗೆ ಆದಿ ಅಂತ್ಯಗಳ ಹಂಗಿಲ್ಲದೆಯೂ, ಕಾವ್ಯದಂತೆ ಒಂದು ವಿಶೇಷ ಅನುಭವವನ್ನು ಓದುಗರಿಗೆ ಒದಗಿಸಿದ್ದಾರೆ. Good use of alliterations. The story delves into almost a plutonic relationship but in a way not, good write up. Congratulations to deepa. Welcome to Anivaasi.

    Like

Leave a Reply

Your email address will not be published. Required fields are marked *