ಬ್ರಿಟನ್ ಒಂದು ಸಾಂಸ್ಕೃತಿಕ ದೇಶ ಎಂದರೆ ತಪ್ಪಾಗಲಾರದು. ಇಲ್ಲಿ ನೂರಾರು ವರ್ಷಗಳ ಇತಿಹಾಸವುಳ್ಳ ಬಹಳಷ್ಟು ಸ್ಮಾರಕಗಳು ಕಟ್ಟಡಗಳು ಇವೆ. ರಾಜ ಮಹಾರಾಜರು ಹಾಗು ಸಾಮ್ರಾಜ್ಞಿಯರು ವಾಸಿಸಿದ ಕೋಟೆ ಅರಮನೆಗೂ ಈ ದೇಶವನ್ನು ಅಲಂಕರಿಸಿವೆ. ಇಂತಹ ಒಂದು ವಿಕ್ಟೋರಿಯನ್ ಕಾಲದ ಭವ್ಯ ನಿವಾಸಕ್ಕೆ ಭೇಟಿ ಕೊಟ್ಟ ಪ್ರತಿಭಾ ರಾಮಚಂದ್ರ ತಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಇತಿಹಾಸ ಹಾಗು ಮಾಹಿತಿಯುಳ್ಳ ಲೇಖನ ಎರಡು ಕಂತಿನಲ್ಲಿ ನಿಮ್ಮೆಲ್ಲರಿಗಾಗಿ.
~ಸಂ

ನಮ್ಮ ಪಟ್ಟಣದ ಒಂದು ಐತಿಹಾಸಿಕ ಮನೆ: ಹುಹೆಂಡೆನ್ ಮ್ಯಾನರ್ – ಭಾಗ 1
ನಾವು ವಾಸವಿರಿವುದು ಬಕಿಂಗ್ಹ್ಯಾಮ್‌ಶೈರ್ ಕೌಂಟಿಯ ಹೈ ವಿಕಂಬ್ ಎಂಬ ಸಣ್ಣ ಪಟ್ಟಣದಲ್ಲಿ. ಕಳದೆ ವರ್ಷ ನನ್ನ ಮಗನ ಶಾಲೆಯಿಂದ ಒಂದು ಸ್ಪರ್ಧೆಯ ಬಗೆಗೆ ಈಮೇಲ್ ಬಂದಿತ್ತು. ನಮ್ಮ ಪಟ್ಟಣದಲ್ಲಿರುವ ಹುಹೆಂಡೆನ್ ಮ್ಯಾನರ್ ಎಂಬ ಐತಿಹಾಸಿಕ ಮನೆಯ ಟ್ರಸ್ಟ್ನವರು ಈಸ್ಟರ್ ಹಬ್ಬದ ಪ್ರಯುಕ್ತ ತಮ್ಮ ಸುತ್ತಮುತ್ತಲಿನಲ್ಲಿರುವ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಆಯೋಜಿಸಿದ ಸ್ಪರ್ಧೆ ಇದು. ಈ ಸ್ಪರ್ಧೆಯ ವಿಷಯ ಬಹಳ ವಿಭಿನ್ನ ಹಾಗು ವಿಶೇಷವಾಗಿತ್ತು — ಒಂದು ಕಾಲ್ಪನಿಕ ಜೀವಿಯನ್ನು (Mythical Creature) ವಿನ್ಯಾಸ ಮಾಡಿ ಆದರ ಬಗೆಗೆ ಸಂಕ್ಷಿಪ್ತ ವಿವರಣೆ ಕೊಡಬೇಕು ಎಂದು. ಪ್ರತಿ ಶಾಲೆಗೂ ನಿರ್ದಿಷ್ಟ ಬಗೆಯ Mythical Creature ವಿನ್ಯಾಸ ಮಾಡಲು ವಿಷಯ ಕೊಟ್ಟಿದ್ದರು. ನನ್ನ ಮಗನ ಶಾಲೆಯವರಿಗೆ ಒಂದು ಕಾಲ್ಪನಿಕ ಹಿಮ ಜೀವಿಯನ್ನು (Mythical Ice Creature) ವಿನ್ಯಾಸ ಮಾಡುವದಕ್ಕೆ ಹೇಳಿದ್ದರು. ಈ ಸ್ಪರ್ಧೆಯ ಬಹುಮಾನ ಕೂಡ ವಿಶೇಷವಾಗಿತ್ತು — ಪ್ರತಿ ಶಾಲೆಗೆ ಒಂದು ಚಿತ್ರವನ್ನು ಆಯ್ಕೆ ಮಾಡಲಾಗುವುದು ಹಾಗೂ ಆಯ್ಕೆಯಾದ ಚಿತ್ರವನ್ನು ಹೈ ವಿಕಂಬ್ ನ ನುರಿತ ಕಲಾವಿದರೊಬ್ಬರು ಲೈಫ್ ಸೈಜ್ ಆಕಾರದಲ್ಲಿ ಪುನರ್ ನಿರ್ಮಿಸುತ್ತಾರೆ ಮತ್ತು ಅದನ್ನು ಹುಹೆಂಡೆನ್ ಮ್ಯಾನರ್ ಗಾರ್ಡನ್ಸ್ ನಲ್ಲಿ ಈಸ್ಟರ್ ರಜೆ ವೇಳೆ 1 ತಿಂಗಳು ಪ್ರದರ್ಶಿಸಲಾಗುವುದು, ಜೊತೆಗೆ ಸ್ಪರ್ಧೆಯಲ್ಲಿ ವಿಜೇತಾರಾದ ಮಕ್ಕಳ ಕುಟುಂಬದವರಿಗೆ ಹುಹೆಂಡೆನ್ ಮ್ಯಾನರ್ ಮತ್ತು ಗಾರ್ಡನ್ಸ್ ನ್ನು ನೋಡಲು complimentary ಟಿಕೆಟ್ ಕೊಡಲಾಗುವುದು ಎಂದು ಸಹ ತಿಳಿಸಿದ್ದರು. ನನ್ನ ಮಗನಿಗೆ ಡ್ರಾಯಿಂಗ್ ನಲ್ಲಿ ತುಂಬಾ ಆಸಕ್ತಿ, ಹಾಗಾಗಿ ಅತ್ಯಂತ ಉತ್ಸುಕತೆಯಿಂದ “Frozen Claw” ಅಂತ ಒಂದು ಕಾಲ್ಪನಿಕ ಹಿಮ ಜೀವಿಯನ್ನು ವಿನ್ಯಾಸ ಮಾಡಿ, ಅದರ ಚಿತ್ರ ಬಿಡಿಸಿ ಶಾಲೆಯವರಿಗೆ ಕೊಟ್ಟ. ಅವನ ಚಿತ್ರ ಚೆಂದವಿತ್ತು ಹಾಗು ಅನನ್ಯವಾಗಿಯೂ ಇತ್ತು, ಆದರೆ ಅವನು ಅದಕ್ಕೆ ತಕ್ಕ ವಿವರಣೆ ಕೊಟ್ಟಿರಲಿಲ್ಲ, ಬಹುಶಃ ಅದೇ ಕಾರಣಕ್ಕೆ ಅದು ಬಹುಮಾನಕ್ಕೆ ಆಯ್ಕೆಯಾಗಲಿಲ್ಲ, ಆದ್ದರಿಂದ ಅವನಿಗೆ ಸ್ವಲ್ಪ ನಿರಾಶೆಯಾಯಿತು. ಹೋಗಲಿ ಬಿಡು ಪುಟ್ಟ, ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ, ಬಹುಮಾನ ಸಿಗುವುದಲ್ಲ ಎಂದು ಅವನಿಗೆ ಸಮಜಾಯಿಷಿ ಹೇಳಿ ಸುಮ್ಮನಾದೆ. ಅನಂತರ ಅವನು teacher ಇದನ್ನು ಕೊಟ್ಟರು ಎಂದು ಒಂದು envelope ಕೊಟ್ಟ, ಅದರಲ್ಲಿ ಹುಹೆಂಡೆನ್ ಮ್ಯಾನರ್ ನ್ನು ನೋಡಲು complimentary ಫ್ಯಾಮಿಲಿ ಎಂಟ್ರಿ ಟಿಕೆಟ್ voucher ನ್ನು ಕೊಟ್ಟಿದ್ದರು. ಇದನ್ನು ನಾವು ನಿರೀಕ್ಷಿಸಿರಲಿಲ್ಲ, ಬಹುಶಃ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆಲ್ಲರಿಗೂ ಹುಹೆಂಡೆನ್ ಮ್ಯಾನರ್ ಹಾಗೂ ಆದರ ಗಾರ್ಡನ್ಸ್ ನಲ್ಲಿ ಪ್ರದರ್ಶನಕ್ಕೆ ಇಡಲಿರುವ ಈಸ್ಟರ್ special mythical ಜೀವಿಗಳ cut-out ಗಳನ್ನು ನೋಡಲು ಅವಕಾಶ ಸಿಗಲಿ ಎಂದು ಕೊಟ್ಟಿರಬೇಕು, ಅದಾದರೂ ಸಿಕ್ಕಿದೆಯಲ್ಲ ಎಂದು ಖುಷಿಯಾಯಿತು. ಆದರೆ ಆ voucher ಮುಂಬರುವ 2 ವಾರದ ಈಸ್ಟರ್ ಸ್ಕೂಲ್ ರಜೆಯಲ್ಲಿ ಕೇವಲ 3 ನಿರ್ದಿಷ್ಟ ದಿನಗಳಲ್ಲಿ ಮಾತ್ರ ಮಾನ್ಯವಾಗಿತ್ತು!! ಬ್ರಿಟನಿನ ಮಳೆ ಬಗ್ಗೆ ನಮಗೆಲ್ಲಾ ಗೊತ್ತೇ ಇದೇ, ಒಮ್ಮೊಮ್ಮೆ storm ಬಂದರೆ ಎಡೆಬಿಡದೆ 3 ದಿನಗಳ ಕಾಲ ಗಾಳಿ-ಮಳೆ ಇರುತ್ತೆ. ಆ ತರಹ ಏನಾದರೂ ಆದರೆ ಗಾರ್ಡನ್ಸ್ ನೋಡಲು ಹೋಗುವದಕ್ಕೆ ಆಗೋದಿಲ್ಲ, ಹಾಗೆ ಆಗದಿರಲಿ ಎಂದು ಆಶಿಸೋಣ ಅಂತ ಮಗನಿಗೆ ಹೇಳಿದೆ. ಇದಾದ 1 ವಾರದ ಬಳಿಕ ಶಾಲೆಯ ಈಸ್ಟರ್ ರಜೆ ಶುರುವಾಯಿತು. ಮಾನ್ಯವಿದ್ದ 3 ನಿರ್ದಿಷ್ಟ ದಿನಗಳು ಸಮೀಪಿಸಿದಾಗ ಹವಾಮಾನ ಮುನ್ಸೂಚನೆ ನೋಡಿಕೊಂಡೆವು, 2 ದಿನ ಮಳೆಯ ಮುನ್ಸೂಚನೆ ಇತ್ತು, ಸದ್ಯ 3 ನೆ ದಿನಕ್ಕೆ ಮಳೆಯ ಮುನ್ಸೂಚನೆ ಇರಲಿಲ್ಲ , ಹಾಗಾದ್ರೆ ಆ ದಿನ ಹೋಗೋಣವೆಂದು ನಿರ್ಧರಿಸಿದೆವು.
ನಮ್ಮ ಹುಹೆಂಡೆನ್ ಮ್ಯಾನರ್ ಭೇಟಿಯ ಬಗೆಗೆ ಹೇಳುವ ಮುನ್ನ ಹೈ ವಿಕಂಬ್ ಮತ್ತು ಸುತ್ತಮುತ್ತಲಿನ ಪ್ರದೇಶದ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ಕೊಡುತ್ತೇನೆ. ಇದನ್ನು ಸಾಮಾನ್ಯವಾಗಿ ವಿಕಂಬ್ ಎಂದು ಕರೆಯಲಾಗುತ್ತದೆ, ಇಲ್ಲಿಯ ಸಂಸದ್ ಸಭಾ ಕ್ಷೇತ್ರದ ಹೆಸರು ಕೂಡ ವಿಕಂಬ್ ಎಂದೇ ಇರೋದು. ಇದು ಇಂಗ್ಲೆಂಡ್‌ನ ಬಕಿಂಗ್ಹ್ಯಾಮ್‌ಶೈರ್ ಕೌಂಟಿಯಲ್ಲಿರುವ ಒಂದು ಮಾರುಕಟ್ಟೆ ಪಟ್ಟಣವಾಗಿದೆ. ಇದರ ದಕ್ಷಿಣದ ಕಡೆಗೆ ಸೆಂಟ್ರಲ್ ಲಂಡನ್ ಸುಮಾರು 29 ಮೈಲಿ ದೂರದಲ್ಲಿದೆ, ಹಾಗು 15 ಮೈಲಿ ಉತ್ತರಕ್ಕೆ ಪ್ರತಿಷ್ಟಿತ ವಿಶ್ವವಿದ್ಯಾನಿಲಯ ವಿರುವ ಆಕ್ಸ್‌ಫರ್ಡ್ ನಗರವಿದೆ. ಚಿಲ್ಟರ್ನ್ ಬೆಟ್ಟಗಳಿಂದ ಆವೃತಗೊಂಡ, ವೈ ನದಿಯ ಕಣಿವೆಯಲ್ಲಿರುವ ಈ ಪಟ್ಟಣವು ರಮಣೀಯ ಪ್ರಕೃತಿ ಸೌಂದರ್ಯಕ್ಕೂ ಹೆಸರುವಾಸಿಯಾಗಿದೆ, ಜೊತೆಗೆ ಶ್ರೀಮಂತ ಮತ್ತು ವೈವಿಧ್ಯಮಯ ಇತಿಹಾಸವನ್ನು ಕೂಡ ಹೊಂದಿದೆ. ಇಲ್ಲಿ ಪ್ರತಿ ವಾರ ಕಟ್ಟುವ ಮಾರುಕಟ್ಟೆಯು ಯುಕೆಯ ಅತ್ಯಂತ ಹಳೆಯ ಮಾರುಕಟ್ಟೆಗಳಲ್ಲಿ ಒಂದು, ಸುಮಾರು 700 ವರ್ಷಗಳಿಂದ ಚಾಲನೆಯಲ್ಲಿ ಇದೆ ಎಂದು ಕೇಳಿದ್ದೇನೆ. ಪ್ರಸ್ತುತ, ವಾರದಲ್ಲಿ 3 ದಿನಗಳು (ಮಂಗಳವಾರ, ಶುಕ್ರವಾರ ಮತ್ತು ಶನಿವಾರ) ಮಾರುಕಟ್ಟೆ ನಡೆಯುತ್ತದೆ. 1800 ರ ದಶಕದಲ್ಲಿ ಈ ಊರು ಕುರ್ಚಿ ತಯಾರಿಕೆಗೆ ಅತ್ಯಂತ ಪ್ರಸಿದ್ಧಿವಾಗಿತ್ತು. ಸುತ್ತಮುತ್ತಲು ಚಿಲ್ಟರ್ನ್ ಬೆಟ್ಟಗಳಿರುವುದರಿಂದ ವಿಧ ವಿಧಾವಾದ ಮರದ ಪ್ರಕಾರಗಳು ಹೇರಳವಾಗಿದ್ದೆವು. ಹಾಗಾಗಿ ಆ ಮರವನ್ನು ಕುರ್ಚಿ ತಯಾರಿಕೆಗೆ ಬಳಸಲಾಗುತಿತ್ತು. ಇದೇ ಚಿಲ್ಟರ್ನ್ ಬೆಟ್ಟದ ಒಂದು ಭಾಗದಲ್ಲಿ ವಿಶಾಲವಾದ ಹುಹೆಂಡೆನ್ ಎಸ್ಟೇಟ್ ಇರೋದು. ಸುಮಾರು 135 ಎಕರೆಗಳಷ್ಟು ಇರುವ ಈ ಎಸ್ಟೇಟ್, ಯುರೋಪಿನ ಅತಿದೊಡ್ಡ ಸಂರಕ್ಷಣಾ ಚಾರಿಟಿ ಸಂಸ್ಥೆಯಾದ ನ್ಯಾಷನಲ್ ಟ್ರಸ್ಟ್ ನ ಸ್ವತ್ತಾಗಿದೆ. ಹುಹೆಂಡೆನ್ ಮ್ಯಾನರ್ ಮತ್ತು ಗಾರ್ಡನ್ಸ್ ಈ ಎಸ್ಟೇಟ್ನ ನೆತ್ತಿಯ ಮೇಲೆ ನಿಂತಿವೆ. ನ್ಯಾಷನಲ್ ಟ್ರಸ್ಟ್ ಸದಸ್ಯರಿಗೆ ಮ್ಯಾನರ್ ಮತ್ತು ಗಾರ್ಡನ್ಸ್ ನೋಡಲು ಉಚಿತ ಪ್ರವೇಶ ಸಿಗುತ್ತದೆ. ಹೈವಿಕಂಬ್ ನ ಬಗ್ಗೆ ಹೇಳುವ ಉತ್ಸುಕತೆಯಲ್ಲಿ ನನ್ನ ಬರಹದ ಮೂಲ ವಿಷಯದಿಂದ divert ಆಗೋದು ಬೇಡ, ಮತ್ತೊಮ್ಮೆ ನಮ್ಮ ಹುಹೆಂಡೆನ್ ಮ್ಯಾನರ್ ಭೇಟಿಯ ದಿನಕ್ಕೆ ಬರೋಣ. ನಾನು ಮೊದಲೇ ಹೇಳಿದಂತೆ ಮಳೆಯ ಮುನ್ಸೂಚನೆ ಇಲ್ಲದಿರುವ ದಿನದಂದು ಮಧ್ಯಾಹ್ನ ಊಟ ಮುಗಿಸಿ, ಹುಹೆಂಡೆನ್ ಮ್ಯಾನರ್ ನೋಡಲು ಹೊರಟೆವು. ನಮ್ಮ ಮನೆಯಿಂದ ಅಲ್ಲಿಗೆ ಕಾಲನಡಿಗೆಯಲ್ಲಿ ಕೂಡ ಹೊಗಬಹುದು, ಹುಹೆಂಡೆನ್ ಎಸ್ಟೇಟ್ ನ ಗಡಿರೇಖೆಯ ಒಂದು ತುದಿ ನಮಗೆ ಸುಮಾರು 1 ಮೈಲಿ ದೂರವಿದೆಯಷ್ಟೇ, ಹಾಗಾಗಿ ಎಸ್ಟೇಟ್ ನ ಸುತ್ತ-ಮುತ್ತ ಸ್ಪ್ರಿಂಗ್ ಮತ್ತು ಬೇಸಿಗೆ ಕಾಲದಲ್ಲಿ ಕೆಲವು ಬಾರಿ ವಾಕಿಂಗ್ ಹೋಗಿದ್ದೇವೆ, ಆಗ ಎಸ್ಟೇಟ್ ನ ಮತ್ತೊಂದು ತುದಿಯಲ್ಲಿರುವ ಮ್ಯಾನರನ್ನು ದೂರದಿಂದ ನೋಡಿದ್ದೇವೆ, ಆದರೆ ಎಂದೂ ಅದರರೊಳಗೆ ಹೋಗಿ ನೋಡುವ ವಿಶೇಷ ಆಸಕ್ತಿ ಬಂದಿರಲಿಲ್ಲ. ಕಡೆಗೂ ಇಂದು ಅದರೊಳಕ್ಕೆ ಹೋಗುವದಕ್ಕೆ ಕಾಲ ಕೂಡಿ ಬಂದಿತು! ಹವಾಮಾನ ಯಾವಾಗ ಬೇಕಾದರೂ ಬದಲಾಗುವ ಸಾಧ್ಯತೆ ಇರುವ ಕಾರಣ ಮಳೆ ಬಂದರೆ ಕಷ್ಟವಾಗುತ್ತದೆ ಎಂದು ಈ ಬಾರಿ ಕಾರಿನಲ್ಲಿಯೇ ಹೊರಟೆವು, 6-7 ನಿಮಿಷಗಳಲ್ಲೇ ಅಲ್ಲಿಗೆ ತಲುಪಿದೆವು, ಕಾರ್ ಪಾರ್ಕ್ ಮಾಡಿ ಟಿಕೆಟ್ ಕೌಂಟರ್ ಬಳಿ ಹೋಗಿ ನಮ್ಮ complimentary voucher ತೋರಿಸಿ ಮ್ಯಾನರ್ ಪ್ರವೇಶದ 3 ಟಿಕೆಟ್ಗಳನ್ನು ಪಡೆದವು. ನಂತರ ಅಲ್ಲೇ ಟಿಕೆಟ್ ಕೌಂಟರ್ ನಿಂದ ಸ್ವಲ್ಪ ದೂರ ನಡೆದು ಹೋಗುವಷ್ಟರಲ್ಲೇ ಏನೋ ಕಣ್ಣಿಗೆ ಬಿತ್ತು, ಒಂದು ಉದ್ದನೆಯ ಹಗ್ಗದ ಬೇಲಿಯ ಮೇಲೆ ಚಿತ್ರಗಳನ್ನು ನೇತಿ ಹಾಕಿದ್ದ ಹಾಗೆ ಕಂಡಿತು, ಹತ್ತಿರ ಹೋಗಿ ನೋಡಿದಾಗ ತುಂಬಾ ಆಶ್ಚರ್ಯ ಆಯ್ತು!! ಆ ಚಿತ್ರಗಳು ಏನು ಗೊತ್ತೇ? ಅವು Mythical Creature Designing ಸ್ಪರ್ಧೆಯಲ್ಲಿ ಭಾಗವಿಸಿದ ಮಕ್ಕಳೆಲ್ಲರ ಡ್ರಾಯಿಂಗ್ಗಳು, ಅವರಿಗೆ ಬಂದಿದ್ದ ಪ್ರತಿಯೊಂದು ಡ್ರಾಯಿಂಗ್ ನ್ನು ಪ್ರತ್ಯೇಕವಾಗಿ laminate ಮಾಡಿ ಗಾರ್ಡನಿನ ಆವರಣದ ಸುತ್ತ ನೇತುಹಾಕಿದ್ದರು. ಡ್ರಾಯಿಂಗ್ಗಳನ್ನು ಒಂದೊಂದಾಗಿ ನೋಡುತ್ತಾ ಹೋದೆವು, ಸ್ವಲ್ಪ ಮುಂದೆ ಹೋಗುತ್ತಿದಂತೆಯೇ ನಮ್ಮ ಮಗನ ಡ್ರಾಯಿಂಗ್ ಸಿಕ್ಕಿತ್ತು, ಅದನ್ನು ನೋಡಿ ನಮ್ಮೆಲರಿಗೂ ಬಹಳ ಸಂತೋಷ ಆಯ್ತು. ಆದರ ಪಕ್ಕದಲ್ಲಿ ನಿಂತು ಫೋಟೋ ತೆಗೆದು ಕೊಂಡೆವು. ಅದೇ ಆವರಣದಲ್ಲಿ ಮೊದಲ Mythical Creature ನ cut out ಕೂಡ ಪ್ರದರ್ಶಿಸಲಾಗಿತ್ತು, ಅದು ಗ್ರೀಕ್ ಪುರಾಣದಲ್ಲಿರುವ Medusa (The Snake-haired Gorgon) ಎಂಬ ಕಾಲ್ಪನಿಕ ಜೀವಿ. ಅದನ್ನು ಮಕ್ಕಳು ಯಾರು ವಿನ್ಯಾಸ ಮಾಡಿದಲ್ಲಾ ಅನ್ನಿಸಿತು, ಏಕೆಂದರೆ ಆದರ ವಿವರಣೆಯಲ್ಲಿ ಅದನ್ನು ವಿನ್ಯಾಸ ಮಾಡಿದದವರ ಹೆಸರು ಹಾಕಿರಲಿಲ್ಲ. ಇದನ್ನು ನೋಡಿದ ನಂತರ ನೇರವಾಗಿ ಹುಹೆಂಡೆನ್ ಮ್ಯಾನರ್ ಕಡೆಗೆ ಹೊರಟ್ವಿ. ಮ್ಯಾನರ್ ನ ಆವರಣದಲ್ಲಿ ಮತ್ತಷ್ಟು Mythical Creature ಗಳ cut out ಗಳನ್ನು ಪ್ರದರ್ಶಿಸಿದ್ದರು. ನನ್ನ ಯಜಮಾನರಿಗೆ ಆವತ್ತು ರಾಜಾ ದಿನವಾಗಿರಲಿಲ್ಲ, ಇದನ್ನು ನೋಡೋ ಸಲುವಾಗಿ ಕೆಲಸದಿಂದ ಕೇವಲ 2 ಘಂಟೆ ಕಾಲದ ವಿರಾಮ ತಗೊಂಡು ಬಂದಿದದ್ದರು. ಆದ್ದರಿಂದ ಅವರು ನಾನು ಬರಿ ಆವರಣದಲ್ಲೇ ಇಷ್ಟು ಹೊತ್ತು ನೋಡ್ತಾ ನಿಂತರೆ, ಮ್ಯಾನರ್ ಮತ್ತು ಗಾರ್ಡನ್ ನೋಡಲು ಸಮಯ ಇರುವುದಿಲ್ಲ ಎಂದು ನನಗೆ ಜೋರು ಮಾಡಿ, ಮೊದಲು ಮ್ಯಾನರ್ ಒಳಗೆ ಹೋಗೋಣ ಅಂತ ಎಳೆದುಕೊಂಡು ಹೋದರು!
ಮ್ಯಾನರ್ ನ ಪ್ರವೇಶದ್ವಾರದಲ್ಲಿ National Trust ನವರ ಒಂದು ಫಲಕ ಇತ್ತು. ಅದರಲ್ಲಿ ಈ ಕೆಳಗಿರುವ ಸ್ವಾಗತ ಸಂದೇಶವಿತ್ತು:-
Welcome to Hughenden Manor
Hughenden was the home of Victorian Prime Minister Benjamin Disraeli, and later a Second World-War map making operation, codenamed ‘Hillside’.
ಹುಹೆಂಡೆನ್ ಮ್ಯಾನರ್‌ಗೆ ಸುಸ್ವಾಗತ
ಹುಹೆಂಡೆನ್ ಮ್ಯಾನರ್ ವಿಕ್ಟೋರಿಯನ್ ಪ್ರಧಾನಿ ಬೆಂಜಮಿನ್ ಡಿಸ್ರೇಲಿ ಅವರು ವಾಸವಿದ್ದ ಮನೆ ಮತ್ತು ನಂತರ ಎರಡನೇ ವಿಶ್ವ-ಯುದ್ಧದ ವೇಳೆ “ಹಿಲ್ಸೈಡ್” ಎಂಬ ಸಂಕೇತನಾಮವಿದ್ದ ಗೌಪ್ಯ ನಕ್ಷೆ ತಯಾರಿಕೆ ಕಾರ್ಯಾಚರಣೆ ನಡೆದ ಸ್ಥಳ.
ಈ ಸಂದೇಶದ ಮೊದಲನೇ ಭಾಗದ ಬಗ್ಗೆ ನನಗೆ ಮಾಹಿತಿಯಿತ್ತು, ಆದರೆ ಎರಡನೇ ಭಾಗದ ಮಾಹಿತಿ ಇರಲಿಲ್ಲ, ಹಾಗಾಗಿ ಅದು ನನ್ನ ಕುತೂಹಲ ಕೆರಳಿಸಿತು! ನಾವು ಒಳಗೆ ಪ್ರವೇಶ ಮಾಡಿದ ತಕ್ಷಣ ಮ್ಯಾನರ್ ನ ಮೇಲ್ವಿಚಾರಕ ರೊಬ್ಬರು ನಮ್ಮನ್ನು ಸ್ವಾಗತಿಸಿದರು. ಹುಹೆಂಡೆನ್ ಮ್ಯಾನರ್ ಗೆ ಇದು ನಿಮ್ಮ ಮೊದಲ ಭೇಟಿಯೇ ಎಂದು ಕೇಳಿದರು, ಹೌದು ಎಂದೆವು. ಹಾಗಾದರೆ ಬನ್ನಿ ನಿಮಗೆ ಕೆಲವು ಕೊಠಡಿಗಳನ್ನು
ತೋರಿಸಿ ಅದರ ವಿವರಣೆ ಕೊಡುತ್ತೇನೆ ಎಂದು ನಮ್ಮನ್ನು ಅವರೊಟ್ಟಿಗೆ ಕರೆದೊಯ್ಯದರು. ಮೊದಲು ಸಿಕ್ಕಿದ್ದು ಬೆಂಜಮಿನ್ ಡಿಸ್ರೇಲಿ ಅವರ ದೊಡ್ಡ ಲೈಬ್ರರಿ – ಇದು ಮುಂಚೆ ಅವರ ಡ್ರಾಯಿಂಗ್ ರೂಮ್ ಆಗಿತ್ತು, ಅವರ ಸೋದರಳಿಯ Coningsby ಯವರು ಇದನ್ನು 1890 ರ ದಶಕದಲ್ಲಿ ಗ್ರಂಥಾಲಯವಾಗಿ ಪರಿವರ್ತಿಸಿದರು ಎಂದು ತಿಳಿಯಿತು. ಡಿಸ್ರೇಲಿಯವರು ಪುಸ್ತಕ ಪ್ರಿಯರಾಗಿದ್ದ ಕಾರಣ ಹೆಚ್ಚು ಸಮಯ ಲೈಬ್ರರಿಯಲ್ಲಿ ಕಳೆಯುತ್ತಿದ್ದರಂತೆ. ಲೈಬ್ರರಿಯ 4 ಗೋಡೆಗಳ ಸುತ್ತಲೂ ಪುಸ್ತಕಗಳಿಂದ ತುಂಬಿದ ಕಪಾಟುಗಳು, ಎಲ್ಲಾ ಸೇರಿ ಸುಮಾರು 3000 ಪುಸ್ತಕಗಳಿವೆಯಂತೆ. ಮಧ್ಯದ ಗೋಡೆಯಲ್ಲಿ ಒಂದು Fire place ಇತ್ತು, ಅದರ ಮೇಲೆ ಬೆಂಜಮಿನ್ ಡಿಸ್ರೇಲಿ ಅವರ ಒಂದು ದೊಡ್ಡ ಚಿತ್ರವಿತ್ತು. ಲೈಬ್ರರಿಯ ಒಂದು ತುದಿಯಲ್ಲಿ ಅವರ ವರ್ಕಿಂಗ್ ಡೆಸ್ಕ್ ಇತ್ತು, ಅದರ ಮೇಲೆ ಒಂದು ವಿಚಿತ್ರ ವಸ್ತು ಕಂಡಿತು, ಅದು ಮಾರ್ಬಲ್ನಲ್ಲಿ ಮಾಡಿದ್ದ ಒಂದು ಪಾದದ ಶಿಲ್ಪ, ಇದೇನು ಅಂತ ಮೇಲ್ವಿಚಾರಕನ್ನು ಕೇಳಿದೆ, ಅದು ಡಿಸ್ರೇಲಿಯವರ ಹೆಂಡತಿ Mary-Anne ರವರ ಪಾದದ ಶಿಲ್ಪ, ಅವರು ಅದನ್ನು Paperweight (ಕಾಗದದ ತೂಕವಾಗಿ) ಬಳಸತಿದ್ದರು ಎಂದರು – ಇದನ್ನು ಕೇಳಿ ಇದೆಂಥ ವಿಚಿತ್ರ ಅಂತ ಅನ್ಕೊಂಡು ಮುಂದಿನ ಕೊಠಡಿಯ ಕಡೆಗೆ ನಡೆದವು. ಈ ಕೊಠಡಿಯಲ್ಲಿ ಡ್ರಾಯಿಂಗ್ ರೂಮ್ ಅನ್ನು recreate ಮಾಡಿದ್ದರು, ಈ ರೂಮಿನ ಬಣ್ಣಗಳು ಮತ್ತು ಪೀಠೋಪಕರಣಗಳು ನನಗೆ ತುಂಬಾ ಇಷ್ಟವಾದವು. Fire place ಮೇಲೆ Mary-Anne ರವರ ಒಂದು ಸುಂದರವಾದ ಭಾವಚಿತ್ರ ಇತ್ತು. 1872 ರಲ್ಲಿ Mary-Anne ರವರ ದೇಹಾಂತವಾದ ನಂತರ ಡಿಸ್ರೇಲಿಯವರು ಈ ಭಾವಚಿತ್ರವನ್ನು ಮಾಡಿಸಿದ್ದರೆಂದು ಹಾಗು ಈ ಕೋಠಡಿಯು Mary-Anne ರವರ ರುಚಿಗೆ ತಕ್ಕ ಹಾಗೆ ವಿನ್ಯಾಸ ಮಾಡಲಾಗಿತ್ತು ಎಂದು ಅಲ್ಲಿ ಬರೆದಿದ್ದರು. ಮುಂದಿನ ಕೊಠಡಿ ಗಾರ್ಡನ್ Hall, ಇಲ್ಲಿಂದ ಗಾರ್ಡನ್ನಿನ terrace ಗೆ ತೆರೆದುಕೊಳ್ಳುವ ದ್ವಾರಗಳಿವೆ.
ಇದಾದ ನಂತರದ ಕೊಠಡಿಗಳು ಮಹಡಿ ಮೇಲೆ ಇರುವವು, ಮೊದಲಿಗಿರುವ ಕೊಠಡಿಯ ಹೆಸರು Boudoir ಎಂದು. ಈ ತರಹದ ಸಾಂಪ್ರದಾಯಿಕವಾದ ಮನೆಗಳಲ್ಲಿ, ಮಹಿಳೆಯರು ಕುಳಿತುಕೊಳ್ಳುವ ಖಾಸಗಿ ಕೋಣೆಗೆ Boudoir ಎಂದು ಕರೆಯುತ್ತಿದ್ದರಂತೆ. ಈ ಕೋಣೆಯ ಕಿಟಕಿಗಳಿಂದ ಇಡೀ ಗಾರ್ಡನ್ ಕಾಣುತ್ತದೆ, ಹಾಗಾಗಿ Mary-Anne ರವರು ಇಲ್ಲಿ ಕುಳಿತು ಗಾರ್ಡನಿನ ರೂಪಾಂತರವನ್ನು ಯೋಜಿಸುತ್ತಿದ್ದರಂತೆ ಹಾಗು ತಮ್ಮ ಮನೆಯ ಖಾತೆಗಳನ್ನು ಮಾಡಲು ಕೂಡ ಇದೇ ಕೋಣೆಯಲ್ಲಿ ಕೂರುತ್ತಿದ್ದರಂತೆ. ಅಲ್ಲೇ ಹತ್ತಿರದ ಮತ್ತೊಂದು ಕೋಣೆಯಲ್ಲಿ ಡಿಸ್ರೇಲಿಯವರು ಎಕ್ಸ್‌ಚೀಕರ್‌ನ ಕುಲಪತಿಯಾಗಿರುವಾಗ (Chancellor to the Exchequer) ಧರಿಸಿರುತ್ತಿದ್ದ ಕಪ್ಪು ರೇಷ್ಮೆ ನಿಲುವಂಗಿಯನ್ನು ಪ್ರದರ್ಶಿಸಿದ್ದಾರೆ, ಎಕ್ಸ್‌ಚೀಕರ್‌ನ ಕುಲಪತಿಯಾಗಿ ಅವರ ಅವಧಿ ಮುಗಿದ ಮೇಲೆಯೂ ಅವರು ಆ ನಿಲುವಂಗಿಯನ್ನು ಬಿಟ್ಟುಕೊಡಲು ನಿರಾಕರಿಸಿದ ಕಾರಣ, ಅದು ಅವರಲ್ಲಿಯೇ ಉಳಿಯಿತಂತೆ.
ಮುಂದಿನ ಕೊಠಡಿ ಬೆಡ್ರೂಮ್, ಈ ಕೋಣೆಯಲ್ಲಿ ಸುಂದರವಾದ ಮಂಚ ಮತ್ತು ಇತರೆ ಪೀಠೋಪಕರಣಗಳನ್ನು ಬಿಟ್ಟು ಗಮನ ಸೆಳೆಯುವ ವಸ್ತುಗಳೆಂದರೆ ಡಿಸ್ರೇಲಿಯವರ ಕಮೋಡ್ (ನಿಜವಾದ ವಿಕ್ಟೋರಿಯನ್ ಶೌಚಾಲಯ!) ಮತ್ತು Fire Place ನ ಗೋಡೆಯ ಮೇಲೆ ನೇತಾಡುತ್ತಿದ್ದ ಮಹಾರಾಣಿ ವಿಕ್ಟೋರಿಯಾ ಮತ್ತು ಅವರ ಪತಿ ಪ್ರಿನ್ಸ್ ಆಲ್ಬರ್ಟ್ ರವರ ಚಿತ್ರಗಳು. ಆ ಎರಡೂ ಚಿತ್ರಗಳನ್ನು ರಾಣಿ ವಿಕ್ಟೋರಿಯ ರವರೇ ಡಿಸ್ರೇಲಿಯವರಿಗೆ ಉಡುಗರೆಯಾಗಿ ಕೊಟ್ಟಿದ್ದಂತೆ, ಚಿತ್ರಗಳ ಕೆಳಗೆ ರಾಣಿ ಮತ್ತು ಪ್ರಿನ್ಸ್ ರ ಸಹಿಗಳಿವೆ. ಮುಂದಿನ ಕೊಠಡಿ ಸ್ಟಡಿ ರೂಮ್, ಇದು ಡಿಸ್ರೇಲಿಯವರು ಕೆಲಸ ಮಾಡುತ್ತಿದ್ದ ಕೋಣೆಯಾಗಿತ್ತಂತೆ. ಈ ಕೋಣೆಯಲ್ಲಿ ಅವರ ಸ್ಟಡಿ ಟೇಬಲ್ ಮತ್ತು ಕುರ್ಚಿ ಅಲ್ಲದೆ ಪಕ್ಕದಲ್ಲಿ ಒಂದು ಪುಟ್ಟ ಟೇಬಲ್ ಮೇಲೆ ಒಂದು ಕೆಂಪು ಬಣ್ಣದ Parliamentary Dispatch box ಅನ್ನು ಕೂಡ ನೋಡಬಹುದು. ಇದನ್ನು ಡಿಸ್ರೇಲಿಯವರು ಪ್ರಧಾನಿಯಾಗಿದ್ದ ಕಾಲದಲ್ಲಿ ಸರ್ಕಾರದ sensitive documents (ಸೂಕ್ಷ್ಮ ದಾಖಲೆಗಳನ್ನು) ಸಂಸದ್ ಸಧನಕ್ಕೆ ಸಾಗಿಸಲು ಬಳಸುತ್ತಿದ್ದರಂತೆ.
ಮತ್ತೆ ಮಹಡಿ ಇಳಿದು ಕೆಳಗೆ ಬಂದಾಗ ಡೈನಿಂಗ್ ರೂಮ್ ಸಿಕ್ಕಿತು. ಈ ಕೊಠಡಿಗೆ ಪ್ರವೇಶವಾಗುತ್ತಿದಂತೆ ಎದ್ದು ಕಾಣುವ ವಸ್ತು ಎಂದರೆ ಎದುರಿನ ಗೋಡೆಯ ಮೇಲಿರುವ ಡಿಸ್ರೇಲಿಯವರ ದೊಡ್ಡ ಭಾವಚಿತ್ರ, ಇದು ಡಿಸ್ರೇಲಿಯವರು ಪ್ರಧಾನಿಯಾಗಿದ್ದ ಸಮಯದ ಚಿತ್ರವಂತೆ. ಕೋಣೆಯ ಬಲಭಾಗದಲ್ಲಿ ಮನೋಹರವಾದ fully laid ಡೈನಿಂಗ್ ಟೇಬಲ್ ಇದೆ. ಡಿಸ್ರೇಲಿಯವರು ಮಹಾರಾಣಿ ವಿಕ್ಟೋರಿಯರ ನೆಚ್ಚಿನ ಪ್ರಧಾನ ಮಂತ್ರಿಯಾಗಿದ್ದರಂತೆ, ಹಾಗಾಗಿ ಅವರು 1877 ರಲ್ಲಿ ಒಮ್ಮೆ ಹ್ಯೂಹೆಂಡೆನ್‌ಗೆ ಭೇಟಿ ನೀಡಿ ಇಲ್ಲಿ lunch ಕೂಡ ಮಾಡಿದ್ದರಂತೆ. ಆ ಸಂದರ್ಭದಲ್ಲಿ, ಮಹಾರಾಣಿ ವಿಕ್ಟೋರಿಯಾ ರವರು ಆರಾಮವಾಗಿ ಕುಳಿತುಕೊಳ್ಳಲು ಮತ್ತು ಅವರ ಪಾದಗಳು ಸುಲಭವಾಗಿ ನೆಲವನ್ನು ತಲುಪಲು ಅನುವಾಗುವಂತೆ ಡಿಸ್ರೇಲಿಯವರು ರಾಣಿಯ ಕುರ್ಚಿಯ ಪಾದವನ್ನು ಕತ್ತರಿಸಿ ಇಟ್ಟಿದ್ದರಂತೆ!! ಆ ಕುರ್ಚಿಯನ್ನು ಈಗಲೂ ಹಾಗೆ ಇಟ್ಟಿದ್ದಾರೆ. Dining ಟೇಬಲ್ ನ ಎದುರಿನ ಗೋಡೆಯ ಮೇಲೆ ಮಹಾರಾಣಿ ವಿಕ್ಟೋರಿಯ ರವರ ಭವ್ಯವಾದ ಭಾವಚಿತ್ರವೊಂದನ್ನು ನೋಡಬಹುದು, ಇದನ್ನು ಸ್ವತಃ ರಾಣಿ ವಿಕ್ಟೋರಿಯ ರವರೇ ಡಿಸ್ರೇಲಿಯವರಿಗೆ ಕೊಟ್ಟಿದ್ದಂತೆ. ಮತ್ತು ಈ ಕೋಣೆಯಲ್ಲಿ ಎರಡು ರಹಸ್ಯ ಬಾಗಿಲುಗಳು ಕಂಡವು, ಅವು ಅಡುಗೆಮನೆಗೆ ತೆರೆಯುತ್ತವೆ ಹಾಗು ಅವನ್ನು ಮನೆ ಕೆಲಸದವರು ಬಳಸುತ್ತಿದ್ದರು ಎಂದು ತಿಳಿಯಿತು. ಕೋಣೆಯ ಎಡ ಭಾಗದಲ್ಲಿ ಬೆಂಜಮಿನ್ ರ ತಂದೆ ಇಸಾಕ್ ಡಿಸ್ರೇಲಿಯವರ ಒಂದು ಭಾವಚಿತ್ರ ಕೂಡ ಇದೆ. ಕೆಳಗಿನ ಮಹಡಿಯಲ್ಲಿಯೇ Disraeli Room ಎಂಬ ಮತ್ತೊಂದು ಕೊಠಡಿಯಿದೆ, ಇಲ್ಲಿ ಗಮನ ಸೆಳೆಯುವ ವಸ್ತು – ಎತ್ತರದ ವೇದಿಕೆಯ ಮೇಲಿರುವ ಪಲ್ಲಕ್ಕಿ ಮಾದರಿಯ ಉದ್ದನೆಯ ಕೈಹಿಡಿಗಳುಳ್ಳ ಒಂದು ಕುರ್ಚಿ. ಈ ಕುರ್ಚಿಯನ್ನು ಡಿಸ್ರೇಲಿಯವರು ಮೊದಲ ಬಾರಿಗೆ ಸಂಸದ್ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ವಿಕಂಬಿನ ಪ್ರಖ್ಯಾತ furniture ಕಂಪನಿಯಾದ Ercol ನಿಂದ ಮಾಡಿಸಿದ್ದರಂತೆ. ಆ ಕಾಲದಲ್ಲಿ ಸಂಸದ್ ಚುನಾವಣೆಯಲ್ಲಿ ಯಾರಾದರೂ ವಿಜೇತಾರಾದಾಗ, ಅವರನ್ನು ಇಂತಹ ಪಲ್ಲಕ್ಕಿ ಮಾದರಿಯ ಕುರ್ಚಿಯ ಮೇಲೆ ಕೂರಿಸಿ, ಅವರ ಬೆಂಬಲಿಗರು ಅದನ್ನು ಹೊತ್ತುಕೊಂಡು ಊರಿನ ಮುಖ್ಯ ಬೀದಿಯಲ್ಲಿ ಮೆರವಣಿಗೆ ಹೋಗುವ ಪ್ರತೀತಿಯಿತ್ತಂತೆ, ಇದಕ್ಕೆ “Chairing” ಎಂದು ಕರೆಯುತ್ತಿದ್ದರಂತೆ. ಆದರೆ ಡಿಸ್ರೇಲಿಯವರು 3 ಬಾರಿ ಸಂಸದ್ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಒಮ್ಮೆಯೂ ವಿಜೇತಾರಾಗಲಿಲ್ಲವಾದ ಕಾರಣ ಅವರಿಗೆ “Chairing” ನ ಸೌಭಾಗ್ಯ ದೊರೆಯಲಿಲ್ಲ, ಹಾಗಾಗಿ ಈ ಖುರ್ಚಿಯನ್ನು ಉಪಯೋಗಿಸಲೇ ಇಲ್ಲವಂತೆ!! ಅದಕ್ಕೆ ಈ ಕುರ್ಚಿಗೆ “Spare Chair” ಎಂಬ ಹೆಸರು ಬಂದಿತು. ಈ ಕುರ್ಚಿಯನ್ನು ಬಿಟ್ಟು ಇಡೀ ಮ್ಯಾನರ್ ನ ಎಲ್ಲಾ ಕೊಠಡಿಗಳಲ್ಲಿಯೂ ವಿಕಂಬಿನಲ್ಲಿ ತಯಾರಾದ ವಿವಿಧ ಬಗೆಯ ಕುರ್ಚಿಗಳನ್ನು ಕೂಡ ನೋಡಬಹುದು.
ಇದಿಷ್ಟು ಬ್ರಿಟನ್ನಿನ ಪೂರ್ವ ಪ್ರಧಾನ ಮಂತ್ರಿ ಬೆಂಜಮಿನ್ ಡಿಸ್ರೇಲಿ ಹಾಗು ಅವರ ಉತ್ತರಾಧಿಕಾರಿಯ ಕಾಲದಲ್ಲಿ ಹುಹೆಂಡೆನ್ ಮ್ಯಾನರ್ ಹೇಗಿತ್ತು ಅನ್ನೋ ಚಿತ್ರಣವನ್ನು ಕೊಡವ ಒಂದು ಸಣ್ಣ ಪ್ರಯತ್ನ. ಇಲ್ಲಿಗೆ ಈ ಭಾಗವನ್ನು ಮುಗಿಸಿ, ಮುಂದಿನ ಭಾಗದಲ್ಲಿ ಹುಹೆಂಡೆನ್ ಮ್ಯಾನರ್ ನ ಮತ್ತೊಂದು ಸ್ವಾರಸ್ಯಕರ ಕಥೆಯ ಬಗೆಗೆ ತಿಳಿಸುತ್ತೇನೆ, ನಿರೀಕ್ಷಿಸಿ

ಮತ್ತಷ್ಟು ರೋಚಕ ಮಾಹಿತಿಯೊಂದಿಗೆ ಭಾಗ -೨ ಸಧ್ಯದಲ್ಲೇ ನಿರೀಕ್ಷಿಸಿ
ಲೇಖನ- ಶ್ರೀಮತಿ ಪ್ರತಿಭಾ ರಾಮಚಂದ್ರ
Shri Ramamurthy asked me to write this on his behalf: ( as he is unable to enter on the blog. I will do on his behalf.
“ಈ ದೇಶದಲ್ಲಿ ಇತಿಹಾಸದ ಅನೇಕ ಕಟ್ಟಡಗಳು ಮತ್ತು ಸ್ಮಾರಕಗಳು ಸರ್ವೇ ಸಾಮಾನ್ಯ. ಇವನ್ನು ಕಾಪಾಡಲು ಇಂಗ್ಲಿಷ್ ಹೆರಿಟೇಜ್ ಮತ್ತು ನ್ಯಾಶನಲ್ ಟ್ರಸ್ಟ್ ಮುಂತಾದ ಸಂಸ್ಥೆಗಳಿವೆ. ಪ್ರತಿಭಾ ಅವರು ಹ್ಯೂಎಂಡೆನ್ ಕಟ್ಟಡದ ಇತಿಹಾಸದ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದಾರೆ.
ಪ್ರಧಾನ ಮಂತ್ರಿ ಬೆಂಜಮಿನ್
ಡಿಸ್ರೀಲಿ ನಿವಾಸ ವಾಗಿದ್ದ ಹ್ಯೂಎಂಡೆನ್ ೧೦೬೬ ನಂತರ ಪ್ರಕಟಿಸಿದ Doomsday ಸಮೀಕ್ಷೆ ನಲ್ಲಿ ಪ್ರಸ್ತಾಪವಿದೆ. ಅನೇಕ
ತಲಮಾರಗಳ ನಂತರ 1738 ರಲ್ಲಿ ಇದು ಒಂದು ಫಾರಂ ಹೌಸ್ ಆಗಿತ್ತು ,1862 ನಲ್ಲಿ ಡಿಸ್ರೀಲಿ ದಂಪತಿಗಳ ವಾಸಕ್ಕೆ
ಮಾರ್ಪಡಿಸಲಾಯಿತು.
ನಿಮ್ಮ ಎರಡನೇ ಕಂತಿಗೆ ಎದರು ನೋಡುತ್ತಿರುತ್ತೇನೆ.” Basingstoke Ramamurthy. ( now in Cheshire)
LikeLike
Author Pratibha replies to Ramamurthy:
”Thanks for sharing it, please convey my thank you to Ramamurthy Sir🙏🏽
He is like the history special writer of Anivaasi, glad he liked my first try on writing about the Hughenden Manor.
In my draft, I had actually included the fact about it being a farmhouse before it was remodelled for the Disrealis to live there, but later removed it for some reason! 😅”
LikeLike
ಪ್ರತಿಭಾ ರಾಮಚಂದ್ರ ಅವರ ‘ಪ್ರವಾಸ ಕಥನ’ ಅತ್ಯಂತ ಸ್ವಾರಸ್ಯಕರವಾಗಿದೆ. Stateley homes ಗೆ ಹೋಗುವದೆಂದರೆ ನನಗೆ ಇಷ್ಟದ ವಿಷಯ. ಬೆಂಜಾಮಿನ್ ಡಿಸ್ರೇಲಿಯವರ ಬಗ್ಗೆ ಬಹಳ ಜನ ಓದಿದ್ದಾರೋ ಏನೋ. ಇಲ್ಲಿಗೆ (ಮಹಲಿಗೆ) ಭೇಟಿ ಕೊಟ್ಟಿರಲಿಲ್ಲ. ಅದಕ್ಕೆ ಆಸ್ಥೆಯಿಂದ ಓದಿದೆ. ಹಾಯ್ ವಿಕಂಬಿನ ಪರಿಚಯ, ಮಹಲಿನ ಎಲ್ಲ ಕೋಣೆಗಳ ವಿವರಣೆ, ಇವೆಲ್ಲ ಕಣ್ಣಿಗೆ ಕಟ್ಟುವಂತೆ ಪ್ರತಿಭಾ ಅವರು ಬರೆದಿದ್ದಾರೆ.ತಮ್ಮ ಮನೆಯಿಂದ ‘ಎಡವಿ’ ಬಿದ್ದರೆ ಸಿಗುವ ಮಹಲೊಳಗೆ ಹೋಗಲು ಇಷ್ಟು ದಿನ ಬೇಕಾಯಿತೇ? ಮಗನ ಚಿತ್ರಕೌಶಲ್ಯದ ಪ್ರತಿಫಲ ಇದು. ಕೊನೆಯಲ್ಲಿ ಆ ಚಿತ್ರ ಕೊಟ್ಟು ಕುತೂಹಲ ಶಾಂತ ಮಾಡಿದಿರಿ. ಆತನಿಗೆ ಅಭಿನಂದನೆಗಳು, ನಮಗೆ ಓದಲು ಸಿಕ್ಕದ್ದು. ಮಹಲಿನ ಸರಿಯಾದ ಪ್ರಚಲಿತ ಉಚ್ಚಾರ ‘ಹ್ಯೂಯೆಂಡನ್‘ ಅಂತ ಇರಬೇಕಾಗಿತ್ತೇನೋ ಅಂತ ನನ್ನ ಅನುಮಾನ. ಡಿಸ್ರೇಲಿ ದಂಪತಿಗಳಿಬ್ಬರೂ ‘ವಿಕ್ಷಿಪ್ತ’ ಅಂತ ಓದಿದ ನೆನಪು. ‘ ವಿಷ್ಣು ಪಾದ’ ಕೇಳಿದ್ದೇನೆ. ಈ ಪತ್ನಿಪಾದ ನಿಜಕ್ಕೂ ಸ್ವಾರಸ್ಯಕರ! ಇನ್ನಷ್ಟು ಚಿತ್ರಗಳು ಮತ್ತು ಪರಿಚ್ಛೇಧಗಳನ್ನು ಮಾಡಿದ್ದರೆ ಇನ್ನೂ ಉತ್ತಮ ಸಂಪಾದಕೀಯವಾಗುತ್ತಿತ್ತು, ಮತ್ತು ಲೇಖನವನ್ನು ‘sticky’ ಮಾಡಿದ್ದರೆ ಅನುಕೂಲವಾಗುತ್ತಿತ್ತು! ಮುಂದಿನ ಕಂತಿಗೆ ಕಾಯಲಾರೆ! ಇಬ್ಬರಿಗೂ ಅಭಿನಂದನೆಗಳು. ಶ್ರೀವತ್ಸದೇಸಾಯಿ
LikeLike