ಅಂತಿಮ ತೀರ್ಪು

ಆತ್ಮೀಯ ಓದುಗರಿಗೆ
ಈ ಲೋಕ ಇರುವವರೆಗೂ ಹೆಣ್ಣಿನ ಮೇಲಿನ ದೌರ್ಜನ್ಯ ನಿಲ್ಲದು. ಗಂಡಸಿನ ಕ್ರೂರ ಕೃತ್ಯೆಗೆ ಬಲಿಯಾಗಿ, ಅತ್ಯಾಚಾರ ಮತ್ತು ಕೊಲೆಗೆ ಆಹುತಿಯಾಗಿ, ಅದೆಷ್ಟೋ ಮುಗ್ದ ಹೆಣ್ಣುಗಳ ಬಾಳ ಭವಿಷ್ಯ, ಅರಳುವ ಮುನ್ನವೇ ಕಮರಿ ಹೋಗುತ್ತಿರುವುದು ದಿನದ ಸಂಗತಿ. ಇಂತಹ ಎಷ್ಟೋ ಹೀನಾಯಮಾನವಾದ ಘಟನೆಗಳಿಗೆ ಸರಿಯಾದ ಸಾಕ್ಷಿಗಳು ಸಿಗದೆ, ಸಿಕ್ಕರೂ ಏನೇನೋ ಕಾರಣಗಳಿಂದ, ಅಪರಾಧಿಗಳು ಶಿಕ್ಷೆಯನ್ನು ತಪ್ಪಿಸಿಕೊಂಡು ಓಡಾಡುತ್ತಿರುವುದು ನಮಗೆಲ್ಲ ಗೊತ್ತಿರುವ ವಿಷಯ. ಇತ್ತೀಚಿಗೆ ಕೋಲ್ಕತ್ತಾದಲ್ಲಿ ನಡೆದ ಇಂತಹ ಕ್ರೂರ ಘಟನೆಯನ್ನು ಕುರಿತು ಕತೆಯನ್ನು ಬರೆಯಬೇಕೆನಿಸಿತು. ನ್ಯಾಯಾಲಯದ ತೀರ್ಪನ್ನು ಕಾಯುವಷ್ಟು ಸಹನೆ ಇಲ್ಲದೆ, ನನ್ನ ಅನಿಸಿಕೆಯ ಅಂತಿಮ ತೀರ್ಪನ್ನು ಈ ಕತೆಯಲ್ಲಿ ನೀಡಿರುವೆನು. ಸಾಧ್ಯವಾದರೆ ಓದಿ ತಮ್ಮ ಅಭಿಪ್ರಾಯ ತಿಳಿಸಿ

– — ಇಂತಿ ಸಂಪಾದಕ

——————————————————————————————————————–

“ಬೇಕೇ ಬೇಕು, ನ್ಯಾಯ ಬೇಕು” ಎಂದು ಆಸ್ಪತ್ರೆಯ ಹೊರಾಂಗಣದಿಂದ ಒಕ್ಕೋರಿಲಿನಿಂದ ಕೇಳಿ ಬರುತ್ತಿದ್ದ ಕಿರು ವೈದ್ಯರ ಧ್ವನಿ, ಆಸ್ಪತ್ರೆಯ ಮೂರನೆಯ ಮಹಡಿಯ ಮೂಲೆಯಲ್ಲಿದ್ದ ತೀವ್ರ ನಿಗಾ ಘಟಕದವರೆಗೂ ಪಸರಿಸಿತ್ತು. ಇದೇ ಆಸ್ಪತ್ರೆಯಲ್ಲಿ, ಕಾರ್ಯನಿರತವಾಗಿದ್ದ ಅಮಾಯಕ ವೈದ್ಯಳ ಮೇಲೆ, ಮನುಷ್ಯನೆಂಬ ರಾಕ್ಷಸನು ಹೀನಾಯಮಾನವಾಗಿ ಅತ್ಯಾಚಾರವೆಸಗಿ, ಬರ್ಬರವಾಗಿ ಅವಳ ಕೊಲೆ ಮಾಡಿದ್ದ. ಅವಳನ್ನು ಸುಟ್ಟ ಚಿತೆಯು ಆಗಲೇ ಆರಿಹೋಗಿದ್ದರೂ, ಎರಡು ವಾರಗಳ ಹಿಂದೆ ನಡೆದ ಈಅಮಾನವೀಯ ಘಟನೆಯ ಕುರಿತು ನಡೆದ ಪ್ರತಿರೋಧ, ಆಕ್ರೋಶ ಮತ್ತು ಅಸಹಾಯಕತೆ ಮಾತ್ರ ಇಲ್ಲಷ್ಟೇ ಅಲ್ಲ, ದೇಶದ ಮೂಲೆ ಮೂಲೆಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿ ಜನಮನದಲ್ಲಿ ಪ್ರತಿಧ್ವನಿಸುತ್ತಲಿತ್ತು. ಅನಿರತವಾಗಿ ರೋಗಿಗಳ ಚಿಕಿತ್ಸೆಯ ಕಾರ್ಯಾಚರಣೆಯಲ್ಲಿದ್ದ, ಡಾ ರಶ್ಮಿಯವರ ದೃಷ್ಟಿಯು ಹಾಗೆಯೇ ಒಂದು ಕ್ಷಣ ಐ ಸಿ ಯು ಘಟಕದ ಅರೆತೆರೆದ ಕಿಟಕಿಯಿಂದ
ಹೊರಗೆ ತೂರಿತು. ಜಿಟಿ ಜಿಟಿಯಾಗಿ ಚಿಮ್ಮುತ್ತಿದ್ದ ಮಳೆಯಲ್ಲಿಯೂ ಅವಳ ಭಾವ ಚಿತ್ರದೊಂದಿಗೆ, ಕದಲದೆ ಮುಂದುವರೆದಿತ್ತು ಅವರ ಮುಷ್ಕರ. ಡಾ ರಶ್ಮಿ ತಮ್ಮ ಮನಸ್ಸಿನಲ್ಲಿಯೇ ಗೊಣಗಿಕೊಂಡರು ‘ಇವರಿಗೆಲ್ಲ ನಿಜವಾಗಿಯೂ ನ್ಯಾಯ ಸಿಗುವುದೆ? ಆ ಪೈಶಾಚಿಕ ಘಟನೆಗೆ ಬಲಿಯಾದ ಅವಳ ಆತ್ಮಕ್ಕೆ ಶಾಂತಿ ಸಿಗುವುದೆ? ಆ ರಾಕ್ಷಸನಿಗೆ ತಕ್ಕ ಶಿಕ್ಷೆಯಾಗುವುದೆ? ಇವರೆಲ್ಲರ ಧ್ವನಿಯೊಂದಿಗೆ, ನನ್ನದೂ ಒಂದು ಧ್ವನಿ ಸೇರಿದ್ದರೆ ಎಷ್ಟೊಂದು ಚನ್ನಾಗಿರುತ್ತಿತ್ತಲ್ಲವೇ? ಎಂದು ಯೋಚಿಸುತ್ತಿರುವಾಗಲೇ, ಪಕ್ಕದ ಬೆಡ್ಡಿನಿಂದ ಕುಯ್ — ಕುಯ್ ಎಂದು ಕೇಳಿಬರತೊಡಿಗಿದ ಮಾನಿಟರಿನ ಸಪ್ಪಳವು, ಅವರನ್ನು ಅಲ್ಲಿಂದ ಕದಲುವಂತೆ ಮಾಡಿತು.
ಬೆಡ್ಡಿನ ಮೇಲಿದ್ದ ರೋಗಿಗೆ ಯಾವುದೇ ಹೊಸ ತೊಂದರೆಯಿಲ್ಲವೆಂದು ನರ್ಸಿನಿಂದ ಖಚಿತಪಡಿಸಿಕೊಂಡು ಸೆಂಟ್ರಲ್
ಮಾನಿಟರಿಂಗ್ ಡೆಸ್ಕಿನತ್ತ ನಡೆದರು ಡಾ. ರಶ್ಮಿ. ಅನತಿ ದೂರದಲ್ಲಿದ್ದ ಡೆಸ್ಕಿನ ಮೇಲೆ ಅವಳೇ ಕುಳಿತ್ತಿದ್ದಂತೆ ಅನಿಸಿತು ರಶ್ಮಿಯವರಿಗೆ. ಆದರೆ ಅದು ತನ್ನ ಕಲ್ಪನೆ ಮಾತ್ರ ಎಂದು ಅರಿಯುವುದರಲ್ಲಿ ಅವರಿಗೆ ತಡವೇನೂ ಆಗಲಿಲ್ಲ. ಕಳೆದೆರಡು ವಾರದಿಂದ ಮಾನಸಿಕ ತುಮುಲದಲ್ಲಿ ಒದ್ದಾಡುತ್ತಿದ್ದ ರಶ್ಮಿಯವರ ಮನಸಿನಲ್ಲಿ, ಸಮಯ ಸಿಕ್ಕಾಗಲೆಲ್ಲ ಮತ್ತೆ ಮತ್ತೆ ಅವಳ ಬಗೆಗಿನ ಯೋಚನೆಗಳೇ ಸುಳಿದಾಡುತ್ತಲಿದ್ದವು.
ಹೌದು — ಎರಡು ವಾರಗಳ ಹಿಂದೆ, ಇದೇ ವಾರ್ಡಿನಲ್ಲಿ ಅವಳು ಪಟ ಪಟನೆ ಓಡಾಡುತ್ತಿದ್ದಳಲ್ಲವೇ?… ಅವಳ ನಡುಗೆಯಲ್ಲಿ ಅದೆಷ್ಟು ವೇಗವಿತ್ತು? … ಅವಳ ಕಣ್ಣುಗಲ್ಲಿ ರೋಗಿಗಳ ಬಗ್ಗೆ ಅದೆಷ್ಟು ಕರುಣೆಯಿತ್ತು?… ಅವಳ ಕೈಗಳಲ್ಲಿ ಬೇರೆಯವರ ಬಗ್ಗೆ ಚಿಮ್ಮುವ ಅದೆಷ್ಟು ಸಹಾಯದ ಚಿಲುಮೆಯಿತ್ತು? … ಅವಳ ಬಾಳ ಭವಿಷ್ಯದಲ್ಲಿ ಅದೆಷ್ಟು ಕನಸುಗಳ ಹೂ ರಾಶಿಯಿತ್ತು? ಹಾಗಾದರೆ ಆ ಕಾಮುಕ ವ್ಯಾಘ್ರನ ಕಪಿ ಮುಷ್ಟಿಯಲ್ಲಿ ಅವಳ ಬಾಳು, ಭವಿಷ್ಯ ಯಾಕೆ ಕಮರಿ ಹೋಯಿತು? ಅವಳಿಗ್ಯಾಕೆ ಅಂತ ದುರ್ಮರಣ ಪ್ರಾಪ್ತವಾಯಿತು? ಅವಳದೇನು ತಪ್ಪಿತ್ತು?ಅವಳು ಹೆಣ್ಣಾಗಿ ಹುಟ್ಟಿದ್ದೇ? …ಅಬಲೆಯಾಗಿದ್ದೆ? ಸ್ಪುರದ್ರೂಪಿಯಾಗಿದ್ದೆ? ಹಗಳಿರಲು ಶ್ರಮಪಟ್ಟು ವೈದ್ಯೆಯಾಗಿದ್ದೆ? ಅದೆಷ್ಟೋ ರೋಗಿಗಳ ಸಾವಿನೊಡನೆ ಸೆಣಸಾಡಿ ಅವರ ಜೀವ ಉಳಿಸಿದ್ದೆ?…. ದೇವರೂ ಸಹ ಅವಳ ಪಾಡಿಗೆ ಕ್ರೂರಿಯಾಗಿಬಿಟ್ಟನಲ್ಲವೇ? ಎಂದು ಕಾಣದ ದೇವರನ್ನು ಹಳಿಯುತ್ತಿದ್ದಾಗಲೇ, ಅವರ ಮೊಬೈಲ್ ಫೋನು ರಿಂಗ್ ಆಗತೊಡಗಿತ್ತು. ಈ ನಡು ರಾತ್ರಿಯಲ್ಲಿ ಬರುವ ಕರೆ ಅಮ್ಮನದೇ ಇರಬಹುದೆಂಬ ಅವರ ಊಹೆ ನಿಜವಾಗಿತ್ತು. ಅಮ್ಮನ ಬಗ್ಗೆ ಪಾಪ! ಎನಿಸಿತು. ಕಳೆದ ಎರಡು ವಾರಗಳಿಂದ ತಾನು ರಾತ್ರಿ ಡ್ಯೂಟಿ ಮೇಲೆ ಇದ್ದರೆ ಅಮ್ಮನಿಗೆ ನಿದ್ರೆಯೇ ಇಲ್ಲದ್ದು ಸತ್ಯ, ಪ್ರತಿ ಗಂಟೆಗೊಮ್ಮೆ ಅವಳಿಂದ ಫೋನು ಬರುವುದು ವಾಡಿಕೆಯಾಗಿತ್ತು
“ಯಾಕಮ್ಮ, ಇನ್ನು ನಿದ್ರೆ ಬಂದಿಲ್ಲವೇ?”
“ಇಲ್ಲಮ್ಮಾ ಮಲಗಿದ್ದೆ, ಹಾಗೆಯೇ ಎಚ್ಚರವಾಯಿತು. ಹುಷಾರಾಗಿ ಇರು. ವಾರ್ಡ್ ಬಿಟ್ಟು ಒಬ್ಬಳೇ ಹೊರಗೆ ಹೋಗಬೇಡ”‘ಎಲ್ಲರ ಅಮ್ಮಂದಿರು ನನ್ನ ಹಾಗೆ ಕೆಲಸದ ಮೇಲೆ ಇದ್ದವರಿಗೆ ಈಗ ಇದೇ ತರಹದ ಎಚ್ಚರಿಕೆಯನ್ನು
ಕೊಡುತ್ತಿರಬಹುದಲ್ಲವೇನಮ್ಮಾ?
ಹುಷಾರಾಗಿ ಇರ್ತೀನಿ, ಎಲ್ಲರೂ ಹುಷಾರಾಗಿಯೇ ಇರ್ತಾರೆ …. ಅವಳೂ ಸಹ ಹುಷಾರಾಗಿಯೇ ಇದ್ದಳು!” ಎಂದು, ಒಂದು ಕ್ಷಣ ಮೌನವಾಗಿ, ಮಾತು ಮುಂದುವರೆಸಿದಳು,
“ವಾರ್ಡು ಬ್ಯುಸಿ ಇದೆ, ಕೆಲಸ ಜಾಸ್ತಿ ಇದೆಯಮ್ಮ, ಈಗ ಮಲಗಿ ಬಿಡು. ಬೆಳಿಗ್ಗೆ ಸೀದಾ ಮನೆಗೆ ಬಂದು ಬಿಡುತ್ತೇನೆ”
ಎಂತೆಂದು ಫೋನು ಕಟ್ಟು ಮಾಡಿದರು.
‘ಅವಳಮ್ಮನೂ ಹೀಗೆಯೇ ಫೋನು ಮಾಡುತ್ತಿದ್ದಿರಬಹುದಲ್ಲವೇ? ಗಂಟೆ ಗಂಟೆಗೂ … ಅವಳು ಆ ಕೊನೆಯ ನರಕಯಾತನೆಯನ್ನು ಅನುಭವಿಸುವದಕ್ಕಿಂತ ಮುಂಚೆಯೂ’ ಎಂಬ ಜ್ಞಾಪನೆಯೊಂದಿಗೆ, ಕಣ್ಣಂಚಿನಲ್ಲಿ ಮೂಡಿದ ಹನಿಯೊಂದನ್ನು ಯಾರಿಗೂ ಗೊತ್ತಾಗದ ಹಾಗೆ ಒರೆಸಿಕೊಂಡು, ಮಾನಿಟರ್ ಗಳತ್ತ
ದೃಷ್ಟಿ ಹಾಯಿಸಿದರು.
ಡಾ. ರಶ್ಮಿ ಒಬ್ಬಂಟಿ ಅಮ್ಮನ ಪ್ರೋತ್ಸಾಹದಿಂದ, ಸ್ನಾತಕೋತ್ತರ ವೈದ್ಯಕೀಯ ತರಬೇತಿಯನ್ನು ಮುಗಿಸಿ, ಕಾಲೇಜಿನಲ್ಲಿ ಲೆಕ್ಚರ್ಅಂ ತ ಸೇರಿ ಒಂದು ವರ್ಷ ಕಳೆದಿತ್ತು. ಕಾಲೇಜು ಸೇರಿದಾಗಿನಿಂದಲೂ, ಆ ನತದೃಷ್ಟ ಕಿರು ವೈದ್ಯೆಯ ತರಬೇತಿಗೆ ಮಾರ್ಗದರ್ಶಿಯಾಗಿ, ಅವಳ ಹೃದಯಕ್ಕೆ ಹತ್ತಿರವಾಗಿದ್ದರು. ಅವಳಮ್ಮನ ಜೊತೆಗೆ ಅದೆಷ್ಟೋ ಸಲ ಮನಬಿಚ್ಚಿ ಮಾತನಾಡಿದ್ದರು. ಅವಳ ಮದುವೆಯ ನಿಶ್ಚಿತಾರ್ಥ ತಿಳಿದು, ಶುಭ ಹಾರೈಸಿ ಸಂತೋಷಪಟ್ಟಿದ್ದರು. ಅವಳ ಭವಿಷ್ಯ ಜೀವನದ ಆಲೋಚನೆಗಳನ್ನು ಕೇಳಿ, ತುಂಬು ಹೃದಯದ ಮೆಚ್ಚಿಗೆಯನ್ನು ಸೂಸಿದ್ದರು. ಅವಳೂ ಸಹ ತನ್ನಂತೆ ಬಡ ಕುಟುಂಬದಿಂದ, ಶ್ರಮಪಟ್ಟು, ಸಾವಿರ ಕನಸುಗಳನ್ನು ಹೊತ್ತು ಜೀವನದಲ್ಲಿ ಮುಂದೆ ಬಂದವಳೆಂದು ತಿಳಿದು, ಅವಳ ಬಗ್ಗೆ ಬಹಳೇ ಅಭಿಮಾನವಿತ್ತು. ಅವಳಿಗಾದ ಪರಿಸ್ಥಿತಿಯಿಂದ ಅವರ ಹೃದಯ ನಡುಗಿ ಹೋಗಿ, ಮಾನಸಿಕ ವೇದನೆಯಿಂದ ಮನಸು ದಿನವಿಡೀ ಒದ್ದಾಡುತ್ತಲಿತ್ತು. ರಜೆ ಹಾಕಿ ಮನೆಯಲ್ಲಿ ಇದ್ದುಬಿಡಬೇಕೆಂದರೆ, ಕಿರು ವೈದ್ಯರ ಮುಸ್ಕರದಿಂದ ರಜೆ ಸಿಗುವಂತಿರಲಿಲ್ಲ. ರಾತ್ರಿ ಶಿಫ್ಟಗಳೆಲ್ಲ ಲೆಕ್ಚರ್ರಗಳ ಪಾಲಿಗೆ ಬಿದ್ದಿದ್ದವು. ಬೇಡವೆಂದರೂ ತೇಲಿ ಬಂದು ಆಗಾಗ್ಗೆ ಕಣ್ಣುಗಳನ್ನು ತೇವುಗೊಳಿಸುತ್ತಿದ್ದ ಅವಳ ನೆನಪುಗಳಲ್ಲಿ, ಬದುಕು ಸಾವುಗಳ ನಡುವೆ ಬಡಿದಾಡುತ್ತಿದ್ದ ರೋಗಿಗಳ ಸೇವೆ ಮತ್ತು ಪರಿಶೀಲನೆಯಲ್ಲಿ, ರಾತ್ರಿಯು ಮುಗಿದಿದ್ದು ರಶ್ಮಿಯವರಿಗೆ ಗೊತ್ತಾಗಲೇ ಇಲ್ಲ. ರೋಗಿಗಳ ವಿವರವನ್ನು ಬೆಳಗಿನ ಸರದಿಯ ವೈದ್ಯರಿಗೆ ಒಪ್ಪಿಸಿ, ಮನೆಯನ್ನು ಸೇರಿದಾಗ ಹತ್ತು ಗಂಟೆಯಾಗಿತ್ತು. ಘಮ್ಮೆನ್ನುವ ತಿಂಡಿಯನ್ನು ಮಾಡಿ, ಬಾಗಿಲಿನಲ್ಲಿಯೇ ಬರುವಿಗಾಗಿ ಕಾಯುತ್ತಲಿದ್ದ ಅಮ್ಮ ಅವಳ ದಣಿದ ಮುಖವನ್ನೇ ನೋಡುತ್ತಾ ಅಂದಳು,
“ಕೈ ತೊಳೆದುಕೊಂಡು ಬಂದು ಬಿಡು, ಊಟ ಮಾಡಿ ಮಲಗಿವಿಯಂತೆ”
“ಯಾಕೋ ಹಸಿವು ಇಲ್ಲಮ್ಮ”
“ನನಗೆ ಗೊತ್ತು ನಿನಗ್ಯಾಕೆ ಹಸಿವು ಇಲ್ಲವೆಂದು. ಇಂಥ ಮಾನಸಿಕ ವೇದನೆಯಲ್ಲಿ ನೀನು ಹೇಗೆ ಕೆಲಸ ಮಾಡುತ್ತಿರುವೆ ಎಂದು ನನಗೆ ತಿಳಿಯವಲ್ಲದು.”
ಕೊರಳಲ್ಲಿದ್ದ ಸ್ಟೆಥೋಸ್ಕೋಪನ್ನು ಟೇಬಲ್ಲಿನ ಮೇಲೆ ಇಡುತ್ತಾ ರಶ್ಮಿಯವರೆಂದರು,

“ಕರ್ತವ್ವ್ಯದ ಕರೆ ಮತ್ತು ಅನಿವಾರ್ಯತೆಯಮ್ಮ! ಸೇನೆಯನ್ನು ಸೇರಿದ ಯೋಧನು ಯುದ್ಧದ ಕರೆ ಬಂದಾಗ, ತನ್ನತನವನ್ನು ಲೆಕ್ಕಿಸದೆ ರಣಭೂಮಿಗೆ ನುಗ್ಗುವದಿಲ್ಲವೇನಮ್ಮಾ? ವೈದ್ಯರ ಜೀವನವೂ ಹಾಗೆಯೇ, ಅವಶ್ಯಕತೆಯಿದ್ದಾಗ ಹೋಗಲೇ ಬೇಕು … ತನ್ನತನವನ್ನು ಮರೆತು”
ಅವಳನ್ನೇ ನೋಡುತ್ತಾ ಪಿಸು ಧ್ವನಿಯಲ್ಲಿ ಅಮ್ಮನೆಂದಳು,
“ಅರ್ಥವಾಗುತ್ತಿದೆ … ಹಾಗೆಯೇ ಪಶ್ಚಾತಾಪವೂ ಆಗುತ್ತಿದೆ ನಿನ್ನನ್ನೇಕೆ ವೈದ್ಯಳನ್ನಾಗಿ ಮಾಡಿದೆನೆಂದು?”
“ನೀನೇಕೆ ಹೀಗೆ ಯೋಚಿಸುತ್ತಿರುವಿಯೆಂದು ನನಗೂ ಚನ್ನಾಗಿ ಅರ್ಥವಾಗುತ್ತಿದೆಯಮ್ಮ. ಆದರೆ, ವೈದ್ಯಕೀಯ ವೃತ್ತಿ, ಶ್ರೇಷ್ಠ ವೃತ್ತಿ. ನನಗಂತೂ ಯಾವ ಪಶ್ಚಾತಾಪವಿಲ್ಲ. ಓದಿಸಿದ್ದಕ್ಕೆ ನಿನ್ನ ಮೇಲೆ ತುಂಬಾ ಅಭಿಮಾನವಿದೆ. ನಿನ್ನ ಮಗಳು ವೈದ್ಯಳೆಂದು ಹೇಳಿಕೊಳ್ಳಲು ನನಗೆ ಬಹಳೇ ಹೆಮ್ಮೆ ಇದೆ. ಹಾಗೆಯೇ, ವೈದ್ಯರ ಮೇಲೆ ನಡೆಯುತ್ತಿರುವ ಇಂತ ದೌರ್ಜನ್ಯವನ್ನು ಕಂಡು ಮನಸಲ್ಲಿ ತುಂಬಾ ನೋವಿದೆ. ಏನು ಮಾಡುವದೀಗ? ಹಾದಿಯನ್ನು ತುಳಿದಿದ್ದಾಗಿದೆ, ಹಿಂಬರುವ ಪ್ರಶ್ನೆಯೇ ಇಲ್ಲ. ಧೈರ್ಯದಿಂದ ಮುಂದೆ ಸಾಗಲೇ ಬೇಕಲ್ಲಾ! ಇರಲಿ ಬಿಡು, ಒಳ್ಳೆಯ ಅಡಿಗೆಯನ್ನು ಮಾಡಿದ ಹಾಗೆ ಕಾಣಿಸುತ್ತೆ, ಟಿ ವಿ ಹಾಕು, ನೋಡುತ್ತಾ ಊಟ ಮಾಡೋಣವಂತೆ” ಅಮ್ಮನಿಗೆ ಬೇಜಾರು ಮಾಡಿಸಬಾರದೆಂಬಂತೆ ನುಡಿದರು ರಶ್ಮಿ.
“ಟಿ ವಿ ಯಲ್ಲಿ ಏನಿದೆ? ಎರಡು ವಾರಗಳಿಂದ ದಿನವಿಡೀ ಅದೇ ಬರ್ಬರ ಘಟನೆಯ ಬಗ್ಗೆನೇ ಚರ್ಚೆ, ನೋಡಲು ದುಃಖವಾಗುತ್ತೆ” ಎಂದು ಸಂಕಟ ವ್ಯಕ್ತಪಡಿಸಿದಳು ಅಮ್ಮಾ.
“ದಿನಕ್ಕೊಂದು ತಿರುವು ಕಂಡುಕೊಳ್ಳುತ್ತಿರುವ, ಬಿಸಿ ಬಿಸಿ ಸುದ್ದಿ ತಾನೆ? ಟಿ ವಿ ಯಲ್ಲಿಯೂ ಬರುತ್ತೆ… ಪತ್ರಿಕೆಗಳ ಮುಖ ಪುಟದಲ್ಲಿಯೂ ಬರುತ್ತೆ. ಇಂಥ ಎಷ್ಟೊಂದು ಹೀನಾಯ ಘಟನೆಗಳನ್ನು ನೀನು ಟಿ ವಿ ಯಲ್ಲಿ ನೋಡಿಲ್ಲ? ಪತ್ರಿಕೆಗಳಲ್ಲಿ ಓದಿಲ್ಲ ? ಕೊನೆಗೆ ಏನಾಯಿತೆಂದು ನಿನಗೇ ಗೊತ್ತಲ್ಲಮ್ಮ! … ಸ್ತ್ರೀ ಸ್ವಾತಂತ್ರದ ಸಂಘಟನೆಗಳು ಬಾವುಟ ಹಿಡಿದು ಮುಸ್ಕರ ನಡೆಸುತ್ತವೆ. ವಿರೋಧ ಪಕ್ಷದವರು ಆಡಳಿತ ಪಕ್ಷವನ್ನು ನಿಂದಿಸಿ, ಮೊಸಳೆ ಕಣ್ಣೀರು ಸುರಿಸುತ್ತಾರೆ … ಆಡಳಿತ ಪಕ್ಷದವರು ದೊಡ್ಡ ಭಾಷಣವನ್ನು ಬಿಗಿಯುತ್ತಾರೆ, ಪರಿಹಾರ ಧನದ ಘೋಷಣೆಯಾಗುತ್ತೆ … ದೊಡ್ಡ ದೊಡ್ಡ ವಕೀಲರು ಭಾಗಿಯಾಗುತ್ತಾರೆ … ವರ್ಷಾನೂ ಗಂಟಲೇ ಕೋರ್ಟಿನಲ್ಲಿ ವಾದ ಪ್ರತಿವಾದದ ನಾಟಕ ನಡೆಯುತ್ತೆ … ಗಟ್ಟಿಯಾದ ಸಾಕ್ಷಾಧಾರಗಳು ಇಲ್ಲವೆಂದು ಕೇಸು ಮಣ್ಣು ಪಾಲಾಗುತ್ತೆ… ಕನಿಕರ ಸುರಿಯುತ್ತಿದ್ದ ಜನರ ಮನಸಿನಿಂದ ಘಟನೆಯ ನೆನಪು ಅಳಿಸಿ ಹೋಗುತ್ತೆ… ಕೆಲವು ದಿನಗಳಾದ ಮೇಲೆ ಇನ್ನೊಂದು ಹೊಸ ಸುದ್ದಿ ಬರುತ್ತೆ …. ಹಳೆಯ ಸುದ್ಧಿ ಹಾಗೆಯೇ ತಣ್ಣಗಾಗಿ ಮೂಲೆ ಸೇರುತ್ತೆ … ಇಷ್ಟೇ ಅಲ್ಲವೇನಮ್ಮಾ ಈ ವ್ಯವಸ್ಥೆಯ
ಹಣೆಬರಹ!” ಎಂದು ದೊಡ್ಡದೊಂದು ನಿಷ್ಟುಸಿರನ್ನೆಳೆದು, ಕೈ ತೊಳೆಯಲೆಂದು ವಾಸಿಂಗ್ ಬೇಸಿನ್ನತ್ತ ನಡೆದರು ರಶ್ಮಿ. ಊಟ ಮುಗಿಯುತ್ತಿದ್ದಂತೆ ಅಮ್ಮ ಅಂದಳು,
“ದುರದೃಷ್ಟವಶಾತ್ ! ನಮಗೆ ಬೇರೆ ಆಯ್ಕೆಗಳು ಇಲ್ಲವಲ್ಲಮ್ಮ. ಇದ್ದ ವ್ಯವಸ್ಥೆಯಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು ತಾನೇ? ದಣಿದು ಬಂದು ಊಟ ಮಾಡಿದ್ದೀಯಾ, ಚನ್ನಾಗಿ ನಿದ್ದೆ ಮಾಡು. ಮತ್ತೆ ಅದೇ ವಿಷಯದ ಬಗ್ಗೆನೇ ಚಿಂತಿಸಬೇಡ. ಕಾಲಬದಲಾಗುತ್ತಿದೆ, ಕಾನೂನು ಬದಲಾಗುತ್ತಿದೆ, ನನಗೇನೋ ಆ ಪಾಪಿಷ್ಠನಿಗೆ ತಕ್ಕ ಶಿಕ್ಷೆಯಾಗುತ್ತೆ ಎಂಬ ನಂಬಿಕೆಯಿದೆ.”
ಹಾಸಿಗೆಯ ಮೇಲೆ ಮೈ ಚಲ್ಲುತ್ತಲಿದ್ದ ರಶ್ಮಿಯವರೆಂದರು,
“ಇಂತ ಪಾಪಿಗೆ ಬರೀ ಗಲ್ಲು ಶಿಕ್ಷೆಯಾದರೆ ಸಾಲದು. ಅವನೂ ಸಹ ಅವಳಂತೆ ನರಕ ಯಾತನೆಯನ್ನು ಅನುಭವಿಸುತ್ತ ಸಾಯಬೇಕು. ಅವನಿಗೆ ಬದುಕಲು ಯಾವ ಹಕ್ಕೂ ಇಲ್ಲ. ಹೌದು , ಕಾನೂನು ಬದಲಾಗುತ್ತಿದೆ ಆದರೆ ಪಾಲಿಸುವವರು ಬೇಕಲ್ಲ? ಕಾಲ ಬದಲಾಗುತ್ತಿದೆ ಆದರೆ ಎತ್ತ ಕಡೆ?… ಯಾವ ದಿಕ್ಕಿನಲ್ಲಿ? … ಏನನ್ನೋ ಕನವರಿಸುತ್ತಾ ಹಾಗೆಯೇ ನಿದ್ದೆಗೆ ವಶವಾಗಿದ್ದರು ರಶ್ಮಿ. ಅಮ್ಮ ಅವಳ ಹಣೆಗೊಂದು ಮುತ್ತನ್ನಿಟ್ಟು ಕೋಣೆಯಿಂದ ಹೊರಗೆ ಬಂದಳು. ರಶ್ಮಿ ನಿದ್ದೆ ಮಾಡಿ ಎದ್ದಾಗ ಅಮ್ಮನು ಹಾಕಿದ್ದ ಟಿ ವಿ ಯಲ್ಲಿ ಇನ್ನೊಂದು ಹೊಸ ಸುದ್ದಿ ಜೋರಾಗಿ ಸದ್ದು ಮಾಡುತ್ತಲಿತ್ತು. ವರದಿಗಾರ ಸುದ್ದಿಯನ್ನು ಗಟ್ಟಿ ಧ್ವನಿಯಲ್ಲಿ ಓದುತ್ತಲಿದ್ದ.

‘ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಇತ್ತೀಚಿಗಷ್ಟೇ ಬಂಧಿತನಾಗಿದ್ದ ವ್ಯಕ್ತಿಯ ಮೇಲೆ, ಕಾರ್ಯ ನಿರತವಾಗಿದ್ದ ಮಹಿಳಾ ಪೇದೆಯಿಂದಲೇ ಗುಂಡಿನ ದಾಳಿಯಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅವನನ್ನು ಹತ್ತಿರದ ಸರ್ಕಾರಿ ವೈದ್ಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ ಅವನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಘಟನೆಗೆ ಸಂಬಂಧಿಸಿ, ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡಿರುವ ಸುಮಾರು ಇಪ್ಪತ್ನಾಲ್ಕು ವರುಷದ ಮಹಿಳಾ ಪೇದೆಯನ್ನು ಬಂಧಿಸಲಾಗಿದೆ. ಮುಂದಿನ ವಿವರಗಳಿಗೆ ಕಾಯುತ್ತೀರಿ …’
“ಪಾಪಿಷ್ಟ! ಇನ್ನೂ ಬದುಕಿಕೊಂಡನೆ?” ಎಂದು ನಿಷ್ಟುಸಿರು ಹಾಕುತ್ತಿರುವಾಗಲೇ ಅಮ್ಮ ಕಾಫಿಯ ಲೋಟದೊಂದಿಗೆ ಹತ್ತಿರ ಬಂದಿದ್ದಳು.
“ರಶ್ಮಿ, ಇಂಥ ಚಂಡಾಲರಿಗೆ ಇನ್ನಷ್ಟು ಪಾಪ ಮಾಡಲೆಂದು ದೇವರು ಎಷ್ಟೊಂದು ಗಟ್ಟಿ ಹೃದಯವನ್ನು ಕೊಟ್ಟಿರುತ್ತಾನಲ್ಲವೇ? ಆದರೆ, ಒಬ್ಬ ಹೋದರೇನಮ್ಮಾ? ಇವನಂತ ಇನ್ನೂ ಹತ್ತು ಜನ ಸಮಾಜದಲ್ಲಿ ಮರು ಹುಟ್ಟುತ್ತಾರವಲ್ಲವೇ? ಪಾಪ! ಆ ಪೇದೆಯ ಗತಿ ಏನಾಗುತ್ತೋ ಕಾಣೆ?” ಎಂದು ಮರುಕಪಡುತ್ತಾ ಅಮ್ಮ ಕಾಫಿಯ ಗುಟುಕೊಂದನ್ನು ಹೀರಿದಳು.
ಅಷ್ಟರಲ್ಲಿಯೇ ರಶ್ಮಿಯವರ ಮೊಬೈಲ್ ಎಡಬಿಡದೆ ಸದ್ದು ಮಾಡತೊಡಗಿತ್ತು. ವಾಟ್ಸ್ ಯಾಪ್ ಗಳ ಗುಂಪುಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಅವನ ಮೇಲೆ ದಾಳಿಯನ್ನು ಮಾಡುವ ಕೆಲವೇ ಸಮಯದ ಮೊದಲು, ಮಹಿಳಾ ಪೇದೆಯು ಆನ್ ಲೈನ್ಮೂ ಲಕ ತನ್ನ ಗೆಳತಿಗೆ ಕಳುಹಿಸಿದ ಪತ್ರವು ಫಾರ್ವರ್ಡ್ ಆಗಿ, ಹಲವಾರು ಮೆಚ್ಚಿಗೆಗಳೊಂದಿಗೆ ಮೊಬೈಲ್ ಫೋನುಗಳಲ್ಲಿ ಹರಿದಾಡತೊಡಗಿತ್ತು.
‘ನಾನು ಮಾಡಲು ಹೊರಟಿರುವ ಕಾರ್ಯವನ್ನು ಬಹಳಷ್ಟು ಯೋಚಿಸಿ, ಯಾರದೇ ಪ್ರಭಾವವಿಲ್ಲದೆ, ನನ್ನ ಸ್ವಂತ ಇಚ್ಛೆಯಿಂದ ಮತ್ತು ದುಃಖತಪ್ತ ಹೃದಯದಿಂದ ಮಾಡಲು ಹೊರಟಿರುವೆನು. ಇದರಿಂದ ನನ್ನ ಬದುಕಿನ ಮೇಲೆ ಮತ್ತು ನನ್ನ ಭಾವೀ ಜೀವನದ ಕನಸನ್ನು ಕಾಣುತ್ತಿರುವ ನನ್ನ ಪರಿವಾರದ ಮೇಲೆ ಎಂತ ಪರಿಣಾಮವಾಗುತ್ತದೆ ಎಂಬುದರ ಸಂಪೂರ್ಣ ಕಲ್ಪನೆ ನನಗಿದೆ. ಎರಡು ವಾರಗಳಿಂದಲೂ ಮಾನಸಿಕ ತೊಂದರೆಯಲ್ಲಿ ಹೊಯ್ದಾಡುತ್ತಿರುವ ನನಗೆ, ಇವನು ಮಾಡಿದ ಬರ್ಬರ ಕೃತ್ಯವನ್ನು ಊಹೆ ಕೂಡ ಮಾಡಲು ಸಾಧ್ಯವಾಗುತ್ತಿಲ್ಲ. ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡಿರುವ ನ್ಯಾಯದೇವತೆಯು, ತನ್ನ ಕಾಣದ ತಕ್ಕಡಿಯನ್ನು ತೂಗಿ ತೀರ್ಪು ಕೊಡಲು ಎಷ್ಟು ಸಮಯವಾಗುತ್ತೆ ಎಂದು ನನಗೆ ಗೊತ್ತಿಲ್ಲ. ಆದರೆ, ನನ್ನ ತೀರ್ಪಿಗೆ ಯಾವ ಸಾಕ್ಷಿಗಳೂ ಬೇಕಾಗಿಲ್ಲ. ನನ್ನ
ಆತ್ಮ ಸಾಕ್ಷಿ ಮಾತ್ರ ಸಾಕು. ಇವನಿಗೆ ಅಲ್ಲಿಯವರೆಗೂ ಬದುಕಲು ಹಕ್ಕಿಲ್ಲವೆಂದು ನನ್ನ ಅನಿಸಿಕೆ, ಅದಕ್ಕಾಗಿ, ನನ್ನ ಮನಸಿಗೆ ತೋಚಿದ ಅಂತಿಮ ತೀರ್ಪನ್ನು ತೆಗೆದುಕೊಂಡಿರುವೆ. ಇದರಿಂದ ನರಕಯಾತನೆ ಅನುಭವಿಸಿ ಇಹಲೋಕ ತ್ಯಜಿಸಿರುವ ಅವಳ ಆತ್ಮಕ್ಕೆ ಮತ್ತು ಹೆಣ್ಣು ಹೆತ್ತ ಎಲ್ಲ ತಾಯಂದಿರ ಮನಸಿಗೆ ನೆಮ್ಮದಿ ಸಿಗುತ್ತದೆ ಅಂತ ನನ್ನ ಭಲವಾದ ನಂಬಿಕೆ. ನನ್ನ ಈ ಕೃತ್ಯದಿಂದ ಯಾರಿಗಾದರೂ ಬೇಸರವಾಗಿದ್ದರೆ ಅವರಲ್ಲಿ ನನ್ನ ಕ್ಷಮೆ ಇರಲಿ. ಇಂತಿ ನಿಮ್ಮವಳು, ಚಾಮುಂಡಿ’

ಪತ್ರವನ್ನು ಓದಿ, ನೀನು ನಿಜವಾಗಿಯೂ ಚಾಮುಂಡಿಯ ಅವತಾರವೆೇ ಎಂದು ಮನಸ್ಸಿನಲ್ಲಿಯೇ ಮೆಲಕು ಹಾಕಿ, ರಾತ್ರಿಯ ಶಿಫ್ಟಿಗೆ ತಯಾರಾಗತೊಡಗಿದರು ರಶ್ಮಿ. ವಾರ್ಡ ಮುಟ್ಟಿದ ಮೇಲೆ ಗೊತ್ತಾಯಿತು, ಆ ಕಿರಾತಕನನ್ನು ಆಪರೇಷನ್ ಮುಗಿದ ಮೇಲೆ ಐ ಸಿ ಯು ಗೆ ಶಿಫ್ಟ್ ಮಾಡಿದ್ದಾರೆಂದು. ಅಲ್ಲಿಯವರೆಗೂ ಅವನ ಆರೈಕೆಯನ್ನು ನೋಡಿಕೊಳ್ಳುತ್ತಲಿದ್ದ ಪ್ರೊಫೆಸರ್ ಜಗನ್ ಇವರತ್ತ ಬಂದು,
“ಗುಂಡಿನೇಟಿನಿಂದ ತುಂಬಾ ರಕ್ತ ಸ್ರಾವವಾಗಿದೆ. ಪರಿಸ್ಥಿತಿ ಅಷ್ಟೊಂದು ಚನ್ನಾಗಿಲ್ಲ. ಸಾಕಷ್ಟು ರಕ್ತವನ್ನು ಕೊಟ್ಟಿದ್ದಾಗಿದೆ. ಇನ್ನೂ ಬಿ.ಪಿ ಹೆಚ್ಚು ಕಡಿಮೆ ಆಗ್ತಾ ಇದೆ. ಅವನಿಗೆ ನಿಕಟ ಮೇಲ್ವಿಚಾರಣೆಯ ಅಗತ್ಯವಿದೆ. ಆರೈಕೆಯ ಯೋಜನೆಯನ್ನು ಬರೆದಿಟ್ಟಿದ್ದೇನೆ. ನಿನ್ನ ಹಿರಿಯ ಸಹದ್ಯೋಗಿಗಳಿಗೆ ಆಸ್ಪತ್ರೆಯಲ್ಲಿಯೇ ಇರಲು ಸಹ ಹೇಳಿದ್ದೇನೆ. ರಾತ್ರಿಯ ಯಾವ ಸಮಯದಲ್ಲಾಗಲಿ ಏನಾದರು ಸಹಾಯ ಬೇಕಿದ್ದರೆ ಸಂಕೋಚವಿಲ್ಲದೆ ನನಗೆ ಫೋನು ಮಾಡು. ಅವನ ಪರಿಸ್ಥಿತಿ ಸ್ಥಿರವಾದ ಮೇಲೆ, ದೆಹಲಿಯ ಏಮ್ಸ್ ಆಸ್ಪತ್ರೆಗೆ ಹಸ್ತಾಂತರಿಸುವ ಯೋಚನೆ ಇದೆ. ಟೇಕ್ ಕೇರ್” ಎಂದು ಹೇಳಿ ಹೋದರು. ಅವರ ಮಾತಿಗೆಲ್ಲ ತಲೆ ಅಲ್ಲಾಡಿಸಿದ ರಶ್ಮಿಯವರು ತಪಾಸಣೆಗೆಂದು ಅವನಿದ್ದ ಕಡೆಗೆ ನಡೆದರು.
ಅವನಿಗಾಗಿ ಸ್ಪೆಷಲ್ ರೂಮು, ಕಾವಲಿಗಾಗಿ ಬಾಗಿಲಿನಲ್ಲಿ ಇಬ್ಬರು ಪೊಲೀಸರು, ಆರೈಕೆಗೆ ಇಬ್ಬರು ನರ್ಸಗಳು.
ಮನಸ್ಸಿನಲ್ಲಿಯೇ ರಶ್ಮಿ ಅಂದುಕೊಂಡರು ‘ಅವನಿಗೆ ಒದಗಿಸಿರುವ ಈ ವ್ಯವಸ್ಥಿತ ಕಾಳಜಿಯಲ್ಲಿನ ಒಂದು ಸಣ್ಣ
ಭಾಗವನ್ನಾದರೂ,ಕೆಲಸದ ಮೇಲೆ ಇರುತ್ತಿದ್ದ ಕಿರು ವೈದ್ಯರಿಗೆ ದಯಪಾಲಿಸಿದ್ದಿದ್ದರೆ, ಬಹುಶ ಅವಳು
ಜೀವಂತವಾಗಿರುತ್ತಿದ್ದಳಲ್ಲವೇ? ಇಂದಿನ ಈ ಪರಿಸ್ಥಿತಿ ಬರುತ್ತಿರಲಿಲ್ಲವೆೇ?’ ಎಂದೆಂದುಕೊಂಡು, ಒಂದು ಕ್ಷಣ ಅವನ ಕಡೆಗೆ ದೃಷ್ಟಿ ಹಾಯಿಸಿದರು. ಪಾಪದ ಪಿಂಡವೇ ಬೆಡ್ಡಿನ ಮೇಲೆ ಬಿದ್ದಿರುವ ಹಾಗಿತ್ತು. ಅವಳ ಕತ್ತು ಹಿಚುಕಿದ ಅವನ ಕೈಗಳಲ್ಲಿ ರಕ್ತ ಕೊಡುತ್ತಿರುವ ಸೂಜಿಗಳಿದ್ದವು, ಅವುಗಳ ಮುಖಾಂತರ ಯಾರೋ ಪುಣ್ಯಾತ್ಮರು ದಾನವೆರೆದ ಪವಿತ್ರವಾದ ರಕ್ತವು ಆ ಪಾಪಿಷ್ಠ ದೇಹವನ್ನು ಸೇರುತ್ತಲಿತ್ತು. ಅವಳ ದೇಹವನ್ನು ಕಚ್ಚಿದ ಆ ಬಾಯಿಯಲ್ಲಿ ಪ್ರಾಣವಾಯುವನ್ನು ಕೊಡುತ್ತಿರುವ ನಳಿಕೆಯಿತ್ತು, ಅವಳ ಪಾವಿತ್ರ್ಯತೆಯನ್ನು ಹರಿದು ಹಾಕಿದ ಅವನ ಗುಪ್ತಾಂಗದಿಂದ ಕಶ್ಮಲ ಮೂತ್ರವನ್ನು ಹರಿಸುತ್ತಿದ್ದ ಪೈಪು ಇಳಿ ಬಿದ್ದಿತ್ತು. ಅಪರಾದದ ಮೂಟೆಯನ್ನೇ ಬಚ್ಚಿಟ್ಟುಕೊಂಡಿದ್ದ ಅವನ ಎದೆಯ ಮೇಲೆ ಮಾನಿಟರಿನ ತಂತಿಗಳು ಬಳ್ಳಿಯಂತೆ ಹಬ್ಬಿಕೊಂಡಿದ್ದವು. ‘ಅನಿಷ್ಟ’
ಎಂದು ಉದ್ಘಾರವೆತ್ತಿದ ಅವರು,’ ಈ ರಾತ್ರಿಯು ತನ್ನ ವೈದ್ಯ ಜೀವನದ ಅಗ್ನಿ ಪರೀಕ್ಷೆ’ ಎಂದು, ತಮ್ಮಷ್ಟಕ್ಕೆ ತಾವೇ
ವಟಗುಟ್ಟಿಕೊಂಡರು. ಮಾನಿಟರಿನ ರೀಡಿಂಗನ್ನು ಓದಿ, ಏನಾದರು ತೊಂದರೆ ಇದ್ದರೆ ತಕ್ಷಣವೇ ನನಗೆ ತಿಳಿಸು ಎಂದು ನರ್ಸಗೆ ಹೇಳಿ, ಕೋಣೆಯಿಂದ ಹೊರಬಂದು,ವಾರ್ಡಿನಲ್ಲಿದ್ದ ಬೇರೆ ರೋಗಿಗಳ ವಿಚಾರಣೆಯಲ್ಲಿ ತೊಡಗಿದರು. ಕೆಲವೇ ಸಮಯದ ನಂತರ ಆತನನ್ನು ನೋಡಿಕೊಳ್ಳುತ್ತಲಿದ್ದ ನರ್ಸು ಏದುಸಿರು ಬಿಡುತ್ತಾ ಇವರ ಹತ್ತಿರ ಬಂದು,
“ಡಾಕ್ಟರ್! ಆತನ ಬಿ.ಪಿ ಡ್ರಾಪ್ ಆಗ್ತಾ ಇದೆ ಬೇಗನೇ ಬನ್ನಿ” ಎಂದು ಉಸಿರಿದಳು.
ಆತನ ಕೋಣೆಯ ಕಡೆಗೆ ಧಾವಿಸತೊಡಗಿದ ರಶ್ಮಿಯವರ ಕಂಗಳಿಗೆ ದೂರದಲ್ಲಿ ಚಾಮುಂಡಿ ನಿಂತು ಕಿರುಚುತ್ತಿರುವಂತೆ ಅನಿಸಿತು,
‘ಡಾಕ್ಟರ್ ನಿಲ್ಲಿ! ನಾನು ಮಾಡಿದ ಅರ್ಧ ಕೆಲಸವನ್ನು ಪೂರ್ತಿಗೊಳಿಸಿ, ಆತನಿಗೆ ಬದುಕಲು ಹಕ್ಕಿಲ್ಲ … ಹಕ್ಕಿಲ್ಲ’. ಇನ್ನೊಂದೆಡೆ ಅವರ ಕಿವಿಗಳಲ್ಲಿ ಆ ನತದೃಷ್ಟ ಕಿರು ವೈದ್ಯೆಯದಾಗಿರಬಹುದಾದ ಅಂತಿಮ ಆರ್ತನಾದ ಪ್ರತಿಧ್ವನಿಸತೊಡಗಿತು, ನನ್ನನ್ನು ಬಿಟ್ಟು ಬಿಡು … ನನ್ನನ್ನು ಬಿಟ್ಟು ಬಿಡು’ ಎಂದು. ಈ ಎಲ್ಲ ವಿಚಿತ್ರ ಪರಿಕಲ್ಪನೆಗಳಿಂದಾಗಿ ರಶ್ಮಿಯವರ ಕಾಲುಗಳು ನಡುಗತೊಡಗಿದ್ದವು, ಮೈಯೆಲ್ಲಾ ಬೆವರಿ ಕೈಗಳು ಅದುರತೊಡಗಿದ್ದವು. ಹೇಗೋ ಸಾವರಿಸಿಕೊಂಡು ಆತನ ಕೋಣೆಯನ್ನು ತಲುಪಿ, ಜೋರಾಗಿ ಶಬ್ದ
ಮಾಡುತ್ತಲಿದ್ದ ಮಾನಿಟರಿನತ್ತ ನೋಡಿದರು. ಅವನ ಹೃದಯ ಬಡಿತವು ಲಯವನ್ನು ತಪ್ಪಿ ಎತ್ತೆತ್ತಲೋ ಹೊಡೆದುಕೊಳ್ಳುತ್ತಲಿತ್ತು, ಬಿ.ಪಿ ಮತ್ತು ಪ್ರಾಣವಾಯುವಿನ ಪ್ರಮಾಣ ಕಡಿಮೆಯಾಗತೊಡಗಿತ್ತು. ಕೂಡಲೇ ರಶ್ಮಿಯವರಲ್ಲಿಯ ಅಂತರಾತ್ಮದ ಧ್ವನಿ ನುಡಿಯಿತು, ನೀನು ವೈದ್ಯೆ … ನಿನ್ನ ವೃತ್ತಿ ಪವಿತ್ರ … ವೈದ್ಯ ಶಪಥವನ್ನು ಮಾಡಿದ್ದೀಯಾ … ವೈರಿಯಾದರೇನು? ದ್ವೇಷಿಯಾದರೇನು? … ಯಾವ ಬೇಧವಿಲ್ಲದೇ ನರಳುತ್ತಿರುವ ಜೀವವನ್ನು ಕಾಪಾಡುವುದು ನಿನ್ನ ಕರ್ತವ್ವ್ಯ … ಡು ನೋ ಹಾರ್ಮ.
ಅಷ್ಟರಲ್ಲಿಯೇ, ಅವನ ಹೃದಯ ಬಡಿತ ನಿಂತಂತಾಯಿತು. ರಶ್ಮಿಯ ಶರೀರದಲ್ಲಿ ಅಡ್ರಿನ್ಯಾಲಿನ್ ಚಿಮ್ಮಿತು.
ತಕ್ಷಣವೇ ಅವರು ಚೀರತೊಡಗಿದರು,
“ನರ್ಸ್! ಕಾರ್ಡಿಯಾಕ್ ಅರೆಸ್ಟ್ ( ಹೃದಯ ಸ್ತoಭಣ)
ಹೆಲ್ಪ್ , ಹೆಲ್ಪ್, ಹೆಲ್ಪ್
ಬೇಗ ಡಿಫೈಬ್ರಿಲ್ಲೇಟರ್ ಆನ್ ಮಾಡಿ”
ಆ ಕ್ಷಣದಲ್ಲಿ ಅವರಿಗೆ ಅವನೊಬ್ಬ ರೋಗಿಯಾಗಿ ಮಾತ್ರ ಕಾಣತೊಡಗಿದ್ದನು. ಅವನ ಪ್ರಾಣ ಪಕ್ಷಿಯನ್ನು ಹಾರಲು ಬಿಡಬಾರದೆಂಬ ಶಪಥದಿಂದ ಕಾರ್ಡಿಯಾಕ್ ಮಸಾಜನ್ನು ರಶ್ಮಿ ತ್ವರಿತಗೊಳಿಸಿದ್ದರು. ಒಂದು ಹೆಣ್ಣಾಗಿ ಅಲ್ಲ, ಆದರೆ ಒಬ್ಬಳು ವೈದ್ಯಳಾಗಿ ಅವರು ಆ ತೀರ್ಪನ್ನು ತೆಗೆದುಕೊಂಡಿದ್ದರು. ಅವನ ಎದೆಯ ಮೇಲೆ ತಮ್ಮೆರಡು ಕೈಗಳನ್ನಿಟ್ಟು ಒತ್ತಿ ಒತ್ತಿ, ಅವನ ಹೃದಯಕ್ಕೆ ಚಾಲನೆ ಕೊಡಲು ಒಂದೇ ಸಮನೆ ಶ್ರಮಿಸುತ್ತಲಿದ್ದರು. ಹಿರಿಯ ಸಹದ್ಯೋಗಿಗಳು ಬರುವಷ್ಟರಲ್ಲಿಯೇ ಅವರು ತಮ್ಮ ಹೋರಾಟದಲ್ಲಿ ವಿಫಲರಾಗಿದ್ದರು. ಅವನ ಪ್ರಾಣ ಪಕ್ಷಿ ಅವರ ಕೈಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಶ್ವಿಯಾಗಿತ್ತು. ಕಾರ್ಡಿಯಾಕ್ ಮಸಾಜಿನಿಂದ ಸೋತು ಹೋಗಿ, ಏದುಸಿರು ಬಿಡುತ್ತಿದ್ದ ರಶ್ಮಿ ,ತಂಪು ಗಾಳಿಯ ಅನ್ವೇಷಣೆಯಲ್ಲಿ ಕೋಣೆಯ ಕಿಟಕಿಯನ್ನು ತೆರೆದು, ಆಕಾಶದತ್ತ ನೋಡಿದರು. ಮಿನುಗುತ್ತಿದ್ದ ತಾರೆಗಳ ಮಧ್ಯೆ ನಿಂತು, ಹಸನ್ಮುಖದಿಂದ ಆ ನತದೃಷ್ಟ ಕಿರು ವೈದ್ಯೆ ನಗುತ್ತಿರುವಂತೆ ಭಾಸವಾಯಿತು. ಅವಳನ್ನೇ ನೋಡುತ್ತಾ ರಶ್ಮಿಯವರೆಂದರು,
“ನಿನ್ನ ಆತ್ಮಕ್ಕೆ ಶಾಂತಿ ಇರಲಿ.” ಅವರಾಡಿದ ಆ ನುಡಿಯು ಬೀಸುತ್ತಿದ್ದ ತಂಗಾಳಿಯಲ್ಲಿ ಅಲೆ ಅಲೆಯಾಗಿ, ದೂರ ದೂರಕ್ಕೆ ಹರಿದು ಹೋಯಿತು.

—– ಶಿವಶಂಕರ ಮೇಟಿ

Leave a Reply

Your email address will not be published. Required fields are marked *