ವೃತ್ತಿಯಲ್ಲಿ ಹೃದಯ ತಜ್ಞರಾಗಿರುವ ಡಾ. ಸುರೇಶ ಸಗರದ ಅವರಿಗೆ ಸಾಹಿತ್ಯದಲ್ಲೂ ಅಷ್ಟೇ ಅಭಿರುಚಿ. ಅವರ ಕವನಗಳು
ಹಲವಾರು ಕವನ ಸಂಕಲನಗಳಾಗಿ ಪ್ರಕಟವಾಗಿವೆ. ಬಸವಣ್ಣನವರನ್ನು ಕುರಿತು ಬರೆದ ಅವರ ಕವನಗಳು ಉತ್ತಮ
ರಾಗಸಂಯೋಜನೆಯ ಜೊತೆಗೆ, ‘ಧ್ವನಿ ಸುರಳಿ’ ಗಳಾಗಿ ಕೇಳುವವರಿಗೆ ಲಭ್ಯವಾಗಿವೆ. ಹೃದಯ ಆರೋಗ್ಯ ಕುರಿತು ಸಾಮಾನ್ಯ
ಜನತೆಗೆ ಅರ್ಥವಾಗುವ ರೀತಿಯಲ್ಲಿ ಹಲವಾರು ಪುಸ್ತಕಗಳನ್ನೂ ಮತ್ತು ಲೇಖನಗಳನ್ನೂ ಪ್ರಕಟಿಸಿದ್ದಾರೆ. ಪ್ರಸ್ತುತ ‘ವೈದ್ಯ
ಸಂಪದ’ ದ ಪ್ರಧಾನ ಸಂಪಾದಕರಾಗಿದ್ದಾರೆ. ಅವರ ಕವನ ಸಂಕಲನದಿಂದ ಆಯ್ದ ಈ ಮೂರು ಕವನಗಳನ್ನು ನಿಮ್ಮ ಮುಂದೆ
ಇಟ್ಟಿರುವೆ. ಓದಿ ಪ್ರತಿಕ್ರಿಯಿಸುತ್ತೀರಿ ಎಂದು ನಂಬಿರುವೆ.
– —– ಇಂತಿ ಸಂಪಾದಕ

1) "ನಾನು" ಎಲ್ಲಿ ಅಡಗಿತ್ತೋ, ಹೇಗೆ ಬಂತೋ ಒಳ ಬಂದು ಗೂಡ ಕಟ್ಟಿತ್ತು ಒಳಗಿದ್ದರೂ ಯಾವಾಗಲೂ ಹೊರ ತೋರುವ ಆಸೆ ಹೊತ್ತು ಪ್ರತಿ ಕ್ಷಣವೂ ಜಗಳ ಕೊನೆಗೆ ಗೆಲ್ಲುವುದು ಅದೇ ಆದಿಯಿಂದಲೂ ನಡೆದಿದೆ ಈ ಕದನ, ಹೊಸ ಕವನ ಅದೇ ಆತ್ಮಾವಲೋಕನ! ಇಲ್ಲಿ ಕೆಲವರೇ ಗೆದ್ದರು ಉಳಿದವರು ಇಲ್ಲೇ ಉಳಿದರು ನಾನು ಹೋದರೆ ಹೋಗಬಹುದು ಎಂದವರಂತು ಹೋದರು ಇದು ಇರುವಿಕೆಯ ಸಂಕೇತ ಇದ್ದೂ ಇಲ್ಲದಿರುವ ಸಂಕೇತವೇನು ?
2) “ಖಾಲಿ ಖಯಾಲಿ“
ಖಾಲಿ ಮಾಡುತ ನಡೆದಿರುವೆ
ಕಾಲ ತುಂಬಿದ ಚೀಲವ
ಖಾಲಿತನದ ಖಯಾಲಿಯಲ್ಲ
ಸಾಲ ತೀರಿಸಲು ಇದೆಲ್ಲಾ!
ತಳಕೆ ಕಲ್ಲು ಬಿಟ್ಟು
ಕಾಗೆ ನೀರ ಕುಡಿಯತಂತೆ
ಎಲ್ಲಿಂದ ಹೆಕ್ಕಿ ತರಲಿ ಕತೆಯ ಕಲ್ಲುಗಳ
ತುಂಬಿದ ಕೊಡ ಹುಟ್ಟಿ
ತುಳುಕುವುದು ನೋಡಿದಿರಾ?
ಇದು ಬದುಕು
ತುಂಬಾ ಥಳಕು ಬೆಳಕು
ಯಾವಾಗ ಕೊಡ ಖಾಲಿ
ಯಾರಿಗೆ ಏನೆಂದು ಕೊಡಲಿ
ಕೊಟ್ಟವನು ಪುನಃ ಪುನಃ
ಕೊಡಲಿ ಕೊಡಲಿ
ಮತ್ತೆ ಕೊಡ ತುಂಬಲಿ!
3) “ನಾನೋ ನೀನೋ ?“
ಬದುಕನ್ನೇ ಹುಡುಕುತ್ತಿದ್ದೆ
ತಡವರಿಸುತ್ತಾ ಬದುಕಿನಲ್ಲಿ
ಅವರಿಗಾಗಿ ಇವರಿಗಾಗಿ
ಎನ್ನುವ ನಾಟಕದಲ್ಲಿ
ನನ್ನೊಳಗೆ ಆವರಿಸಿಕೊಂಡ
ನಿನ್ನನ್ನೂ ಹುಡುಕುತ್ತಿದ್ದೆ
ಕೂಡಿ ಕಳೆದ ದಾರಿಯಲ್ಲಿ
ನಾನು ನಿನಗಾಗಿ
ನೀನು ನನಗಾಗಿ
ಎನ್ನುವ ಮರೀಚಿಕೆ
ತೀರದ ಅತಿ ದಾಹ
ಪಂಚ ಭೂತಗಳ
ಈ ಪಂಚಾಯಿತಿ
ಆ ನಿರ್ದೇಶಕನ
ದೂಷಿಸಿದೆ ಮತ್ತೆ ಮತ್ತೆ
ಸುರೇಶ ಸರಗದ ಅವರ ಮುಖ (ವೈದ್ಯ ಸಂಪದದ ಫೋಟೋದಲ್ಲಿ) ಪರಿಚಯದಿದ್ದರೂ ನಾನು ಅವರ ಕವನಗಳ ಅವಲೋಕನ ಮಾಡಿದ್ದು ಇದೇ ಮೊದಲು. ಬರೀ ಮೂರು ಕವನಗಳಿಂದ ಕವಿಯ ತೋಲನೆ ಮಾಡಲಾಗದು. ಬಳಸಿದ ಭಾಷೆ ಮತ್ತು ಆಯ್ದ ವಸ್ತುಗಳನ್ನು ನೋಡುವಾಗ ಆತ್ಮಾವಲೋಕನ ಮತ್ತು ಅನ್ವೇಷಣೆ ಇವುಗಳಲ್ಲಿ ಸಿಗುತ್ತವೆ. ಅದಕ್ಕೆ ಆಧ್ಯಾತ್ಮವನ್ನೂ ಸೇರಿಸಬಹುದೇನೋ. ಅಹಂಭಾವ, ಸ್ವಾರ್ಥಗಳ ಬಗ್ಗೆ ವ್ಯಂಗವಿದೆ. ದೇವರಲ್ಲಿ ನಂಬಿಕೆಯೂ ಇದೆ. ಬಸವಣ್ಣ ಹೇಳುವ ಅಂತರಂಗ ಶುದ್ದಿಯ ಅನ್ವೇಷಣೆಯಿದೆ. ತನ್ನ ದೌರ್ಬಲ್ಯಕ್ಕೆ ‘ನಿರ್ದೇಶಕ’ನನ್ನು ದೂಷಿಸುವ ಮನುಜಸಹಜ ಗುಣವನ್ನು ಕೊನೆಯದರಲ್ಲಿ ಕಾಣುತ್ತೇವೆ. ಮಧ್ಯದರಲ್ಲಿ ಖಾಲಿ- ತುಂಬುಗಳ ನಡುವೆ ಮೂರು ರೂಪಕಗಳನ್ನು ತುಂಬಿ ಸ್ವಲ್ಪ ತಾಕಲಾಟವಾದಂತೆ ಅನಿಸಿತು. ಆರಂಭದಲ್ಲಿ ‘ಖಾಲಿ’ ಚೀಲ ಬರಿದು ಮಾಡುತ್ತ, ಕೊನೆಯಲ್ಲಿ ಕೊಡವನ್ನು ತುಂಬಿಸಲು ‘ಕೊಡುವವನಿಗೆ’ ಬೇಡುತ್ತಿದ್ದನ್ನು ನಡುವೆ ನಿಂತ ವಿಷ್ಣುಶರ್ಮನ (ಈಸೋಪನ?) ಜಾಣ ಕಾಗೆ ತನ್ನಷ್ಟಕ್ಕೆ ಕಲ್ಲು ತುಂಬಿಸಿ ಕೊಡದಿಂದ ನೀರು ಕುಡಿದು ಪಿಪಾಸೆ ತಣಿಸುವಂತೆ ಓದಿ ತೃಪ್ತಿ ಪಟ್ಟೆ! ಇಂಥ ಒಳ್ಳೆಯ ಕವಿಯನ್ನು ಪರಿಚಯಿಸಿದ ಮೇಟಿಯವರಿಗೆ ಧನ್ಯವಾದಗಳು.
ಇಂದು ಧನ್ವಂತರಿಯನ್ನು ಪೂಜಿಸುವ ಧನತ್ರಯೋದಶಿಯಂದು ( ಧಾಂತೇರಾಸ್) ವೈದ್ಯರೊಬ್ಬರ ಕವನಗಳು ಪ್ರಕಟವಾಗುವದು, ಇಲ್ಲಿ ಅನೇಕ ವೈದ್ಯರು ಓದುವದು ‘ಕಾಕ’ತಾಳಿಯವಲ್ಲವೇ! (ಡಾ) ಶ್ರೀವತ್ಸ ದೇಸಾಯಿ
LikeLike