ಗ್ರೇಟ್ ಬ್ರಿಟನ್ನಿಗೆ ತುರಾಯಿಯಂತಿರುವ ಸ್ಕಾಟ್ ಲ್ಯಾನ್ಡ್, ಪ್ರಕೃತಿ ಸೌಂದರ್ಯಕ್ಕೂ ಶಿಖರಪ್ರಾಯವಾಗಿದೆ ಈ ದೇಶಕ್ಕೆ ಎನ್ನುವುದರಲ್ಲಿ ಸಂಶಯವಿಲ್ಲ. ಇಲ್ಲಿನ ಉತ್ತರದ ನಗರವಾದ ಇನ್ವರ್ನೆಸ್ ನ ಉತ್ತರಕ್ಕೆ ಗುಡ್ಡ ಹಾಗು ಸರೋವರಗಳೇ (ಇಲ್ಲಿ ಇದಕ್ಕೆ ಲಾಕ್ ಎಂದು ಕರೆಯುತ್ತಾರೆ) ತುಂಬಿರುವ ಹರವಾದ ಭೂ ಪ್ರದೇಶ ಪ್ರಕೃತಿ ಆರಾಧಕರಿಗೆ, ಚಾರಣಿಗರಿಗೆ ಆತ್ಮೀಯವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ಈ ಭೂ ಪ್ರದೇಶವನ್ನು ಸುತ್ತಿರುಗಲು ಸ್ಕಾಟ್ ಲ್ಯಾನ್ಡ್ ರೂಟ್ ೫೦೦ ಎಂಬ ರಸ್ತೆಯನ್ನು ನಿರ್ಮಿಸಿ, ಇಲ್ಲಿನ ಪ್ರವಾಸಿ ಇಲಾಖೆಯ ಮುಖಾಂತರ ಪ್ರಚಲಿತಗೊಳಿಸಲಾಗಿದೆ. ಈ ರಸ್ತೆಗೆ ಹಲವು ಟಿಸಿಲುಗಲ್ಲಿದ್ದು, ಕೆಲವೇ ದಿನಗಳಿಂದ, ತಿಂಗಳುಗಳ ಕಾಲ ಈ ಭಾಗದ ವಿಹಂಗಮ ನೋಟವನ್ನೋ, ವಿವರವಾದ ಪರಿಚಯವನ್ನೋ ನಮಗಾದಷ್ಟು ಮಾಡಿಕೊಳ್ಳ ಬಹುದು. ಪತ್ರಿಕೆಯೊಂದರ ಪ್ರವಾಸೀ ವಿಭಾಗದಲ್ಲಿ ಈ ಪಯಣ ಜಗತ್ತಿನ ಅತಿ ಸುಂದರ ಹತ್ತು ರಸ್ತೆ ಪಯಣಗಲ್ಲಿ ಒಂದು ಎಂದು ಓದಿದ್ದೆ. ಹಿತ್ತಲಲ್ಲೇ ರಸ್ತೆ ಪಯಣಕ್ಕೆ ಇಂತಹ ಅವಕಾಶವಿರುವಾಗ ಹೋಗಿಯೇ ಬಿಡೋಣ ಎಂದು ನನ್ನ ಗೆಳೆಯರ ಮುಂದೆ ಪ್ರಸ್ತಾವಿಸಿದೆ. ಗೆಳೆಯರಾದ ಕೇಶವ ಕುಲಕರ್ಣಿ ಹಾಗು ದೇವ್ ಪೈ ಪರಿವಾರದೊಂದಿಗೆ ಹಿಂದೆ ಕೆಲವು ಪ್ರವಾಸಗಳನ್ನು ಜೊತೆಯಲ್ಲಿ ಮಾಡಿದ್ದೆವು. ನಮ್ಮ ಅಭಿರುಚಿಗಳು, ಮಕ್ಕಳ ನಡುವಿನ ಗೆಳೆತನಗಳೂ ಈ ಪ್ರವಾಸಗಳಿಗೆ ಪೂರಕವಾಗಿದ್ದು ಅನುಕೂಲವೇ ಆಗಿತ್ತು. ಇನ್ನೊಬ್ಬ ಗೆಳೆಯ ದಿನೇಶ್ ಯಾವುದೋ ಕಾರಣಕ್ಕಾಗಿ ನಮಗೆ ಸಾಥ್ ನೀಡಲಾಗದು ಎಂದು ಕೈಕೊಟ್ಟ.
ಇಂತಹ ಪ್ರಯಾಣ ಮಾಡಲು ಕೆಲವು ಮುಹೂರ್ತಗಳನ್ನು ಹಾಕಿಕೊಳ್ಳುವುದು ಅವಶ್ಯ ಎಂಬುದು ನಮ್ಮ ಅನುಭವ. ಪ್ರಯಾಣದ ರಸ್ತೆಯ ಸಮೀಕ್ಷೆಯಾಗಬೇಕು. ಈಗ ಅಂತರ್ಜಾಲದಲ್ಲೇ ಈ ಸಮೀಕ್ಷೆ ಸುಲಭ ಸಾಧ್ಯ. ದಾರಿ ಗುರುತು ಹಾಕಿಕೊಂಡರೆ ಸಾಕೇ? ಆ ರಸ್ತೆಯಗುಂಟ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ಬೇಕು; ಇಳಿದುಕೊಳ್ಳಲು ವಸತಿ ಗೃಹಗಳ ವ್ಯವಸ್ಥೆಯಾಗಬೇಕು. ಎಲ್ಲಕ್ಕಿಂತಲೂ ಹೆಚ್ಚು ಪ್ರವಾಸದಗುಂಟ ಮೆಲ್ಲಲು, ಮೆಲಕು ಹಾಕಲು ಪ್ರಶಸ್ತವಾದ ಜಾಗಗಳ ಆಯ್ಕೆಯೂ ಆಗಬೇಕು. ಇದ್ಕಕೆಂದೇ ಒಂದು ದಿವಸವನ್ನು ಮೀಸಲಾಗಿಡುತ್ತೇವೆ. ಮೂರು ಲ್ಯಾಪ್ ಟಾಪ್ ಗಳನ್ನು ಇಟ್ಟುಕೊಂಡು, ಚಹಾ ಕುಡಿಯುತ್ತ, ವಿವರವಾದ ಯೋಜನೆ ಸುಮಾರು ಮೂರು ನಾಲ್ಕು ತಿಂಗಳುಗಳ ಮೊದಲು ತಯಾರಾಗುತ್ತದೆ. ವಸತಿ ಗೃಹಗಳ ಆರಕ್ಷಣೆ ಈ ಹಂತದಲ್ಲೇ ಮುಗಿದುಹೋಗುತ್ತದೆ. ಪ್ರೇಕ್ಷಣೀಯ ಸ್ಥಳಗಳ ಆಯ್ಕೆ ರಮಣೀಯರು ಉತ್ಸಾಹದಿಂದ ಮಾಡುವುದರಿಂದ, ಅವರಿಗೆ ಅದರ ಜವಾಬ್ದಾರಿ ಕೊಡುವುದರಿಂದ ಪ್ರವಾಸ ಸುರಳೀತವಾಗುತ್ತದೆ ಎಂಬುದು ನಮ್ಮ ಅನುಭವ.
ಮೇ ತಿಂಗಳ ಕೊನೆಯ ಬ್ಯಾಂಕ್ ಹಾಲಿಡೇ ವಾರಾಂತ್ಯದಲ್ಲಿ ಈ ಪ್ರವಾಸ ಕೈಕೊಳ್ಳುವುದು ಎಂಬ ನಿರ್ಧಾರ ಮಾಡಿದೆವು. ಮಕ್ಕಳ ವಾರ್ಷಿಕ ಪರೀಕ್ಷೆ ಮುಗಿದಿರುವುದರಿಂದ ಅವರಿಗೂ ಶಾಲಾ ಕೆಲಸದಿಂದ ಮನಸ್ಸು ನಿರಾಳವಾಗಿರುವುದು ಇದಕ್ಕೆ ಇನ್ನೊಂದು ಕಾರಣವಾಗಿತ್ತು. ಹೊರಡುವ ಹಿಂದಿನ ದಿನ ರಾತ್ರಿ ಎಲ್ಲರು ಡಾರ್ಬಿಯಲ್ಲಿರುವ ನಮ್ಮ ಮನೆಯಲ್ಲಿ ಒಟ್ಟಾಗುವುದು ಎಂದು ನಿಶ್ಚಯಿಸಿದೆವು. ಪ್ರವಾಸದ ದಿನ ಎರಡು ಕಾರುಗಳಲ್ಲಿ ಹತ್ತು ಜನ ಡಾರ್ಬಿಯಿಂದ ಇನ್ವರ್ನೆಸ್ಸಿಗೆ ಪ್ರಯಾಣ ಮಾಡಿ ತಂಗುವುದು ನಮ್ಮ ಯೋಜನೆ. ಎರಡನೇ ದಿನ ಬೆಳಿಗ್ಗೆ ನಗರಕ್ಕೊಂದು ಸುತ್ತು ಹಾಕಿ, ಗ್ಲೆನ್ ಮೊರಂಜಿ ವ್ಹಿಸ್ಕಿ ಭಟ್ಟಿ ಕೇಂದ್ರಕ್ಕೆ ಭೇಟಿ. ಅದಾದಮೇಲೆ ಡನ್ರೋಬಿನ್ ಕಾಸಲ್ ನೋಡಿ, ತುತ್ತ ತುದಿಯಲ್ಲಿರುವ ಹಳ್ಳಿ ಜಾನ್ ಓ ಗ್ರೋಟ್ಸ್ ನ್ನು ಕಂಡು ಪಕ್ಕದ ಹಳ್ಳಿಯಲ್ಲಿ ತಂಗುವುದೆಂದು ನಿಶ್ಚಯಿಸಿದೆವು. ಮೂರನೇ ದಿನ ಸ್ಕಾಟ್ ಲ್ಯಾನ್ಡ್ ನ ಉತ್ತರ ತೀರದಗುಂಟ ಚಲಿಸಿ, ಪಶ್ಚಿಮ ಭಾಗದಲ್ಲಿ ಕೆಳಗಿಳಿದು ಉಲ್ಲಾಪೂಲ್ ಎಂಬ ಊರಿನಲ್ಲಿ ಮುಕ್ಕಾಂ ಹಾಕಲು ವಸತಿ ಗೃಹದ ಬುಕ್ಕಿಂಗ್ ಮಾಡಿದೆವು. ನಾಲ್ಕನೇ ದಿನ ಉಲ್ಲಾಪೂಲ್ ಹತ್ತಿರದ ನದಿಯ ಕಣಿವೆಯಲ್ಲಿ ನಿರ್ಮಿಸಿರುವ ಪ್ರಕೃತಿಧಾಮವನ್ನು ವೀಕ್ಷಿಸಿ ಮನೆಗೆ ಮರಳುವುದೆಂದು ನಿರ್ಧರಿಸಿದೆವು.
ಪ್ರವಾಸದ ಹಿಂದಿನ ದಿನ ನಮ್ಮನೆಯಲ್ಲಿ ಹಬ್ಬದ ವಾತಾವರಣ. ಬೆಳಗ್ಗೆ ಬೇಗ ಎದ್ದು ಹೊರಟಾಗ, ಮಕ್ಕಳ ಕಣ್ಣಲ್ಲಿನ್ನೂ ಜೋಂಪು. ನಮ್ಮಲ್ಲಿಂದ ಸ್ಕಾಟ್ ಲ್ಯಾನ್ಡ್ ಗೆ M6 ಮುಖ್ಯ ಹೆದ್ದಾರಿ. ಮುಕ್ಕಾಲು ಗಂಟೆಯಲ್ಲಿ ಗೆಳೆಯ ದಿನೇಶನ ಮನೆ. ಅಲ್ಲಿಗೇ ನಮ್ಮ ಬೆಳಗಿನ ತಿಂಡಿಗಾಗಿ ದಾಳಿ ಮಾಡುವುದಾಗಿ ಮುನ್ಸೂಚನೆ ಕೊಟ್ಟಿದ್ದೆವು. ತಲುಪಿದಾಗ ಎಲ್ಲರ ಮೆಚ್ಚಿನ ಶಲನ್ ಮಾಡಿದ ಬಿಸಿ ಬಿಸಿ ಮಂಗಳೂರು ಬನ್ಸ್, ಖಡಕ್ ಚಹಾ ನಮ್ಮನ್ನು ಕಾಯುತ್ತಿತ್ತು. M6 ಲ್ಯಾನ್ಕಾಸ್ಟರ್ ದಾಟಿದ ಮೇಲೆ, ಗುಡ್ಡಗಳ ನಡುವೆ ಬಳಕುತ್ತ, ತಬ್ಬಿಕೊಂಡು ಸಾಗುವಾಗ ಬೇಂದ್ರೆ ಅಜ್ಜನ “ಹರನ ತೊಡೆಯಿಂದ ನುಸುಳಿ ಬಾ” ಎಂಬ ಸಾಲು ನೆನಪಾಗುತ್ತದೆ. ಹೆದರ್ ಪೊದೆಗಳ ಹೊದಿಕೆಯಲ್ಲಿ ಮಲಗಿರುವ ನುಣುಪಾದ ಬೆಟ್ಟಗಳ ಸೌಂದರ್ಯ ಹೆದರ್ ಹೂ ಬಿಟ್ಟಾಗ ನೂರ್ಪಾಲು ಹೆಚ್ಚಾಗುತ್ತದೆ. ಹೆದ್ದಾರಿಯಲ್ಲಿ ಸಿಗುವ ಆನಂಡೇಲ್ ಸರ್ವೀಸ್ ಸ್ಥಾನ ಪ್ರಯಾಣಿಗರ ಪಾಲಿಗೆ ಓಯಸಿಸ್. ಇಲ್ಲಿರುವ ಕೆರೆಯನ್ನು ನೋಡುತ್ತಾ, ಹಬ್ಬಿದ ಹಸಿರನ್ನು ಆಸ್ವಾದಿಸುತ್ತ, ಕಾಫಿ ಹೀರುತ್ತ, ರಸ್ತೆಯ ಏಕತಾನತೆಯನ್ನು ಮರೆಯಬಹುದು.
ಮಧ್ಯಾಹ್ನದ ಊಟದ ಸಮಯಕ್ಕೆ ಗ್ಲ್ಯಾಸ್ಗೋ ನಗರದ ಬುಡ ತಲುಪಿದ್ದೆವು. ಊಟದ ನಂತರ ಒಂದು ಚಿಕ್ಕ ನಿದ್ದೆ ಬೇಕೆಂದು ದೇವ್ ನ ಮನಸ್ಸು ಬಯಸುತ್ತದೆ, ಡ್ರೈವ್ ಮಾಡುವಾಗ ಜೋಂಪು ಹತ್ತದಿರಲೆಂದು. ಆತ ಕಾರಿನಲ್ಲಿ ಪವಡಿಸಿದರೆ, ನಮ್ಮ ಕ್ರಿಕೆಟ್ ಹುಚ್ಚಿನ ಚಿಣ್ಣರು (ಕೇಶವ್ ಈ ವಿಷಯದಲ್ಲಿ ಚಿಣ್ಣನೇ) ಸರ್ವಿಸ್ ಸ್ಟೇಷನ್ ಪಕ್ಕದ ಹುಲ್ಲು ಹಾಸಿನಲ್ಲಿ ಆಡಿ ಮೈ ಕೈ ಚುರುಕಾಗಿಸಿಕೊಂಡರು. ಗ್ಲಾಸ್ಗೋ ಸಮೀಪಿಸುತ್ತಿದ್ದಂತೆ ಕಾಣುವ ಗಾಳಿ ಗಿರಣಿಗಳ ಮಂದೆ ಪರ್ಯಾಯ ವಿದ್ಯುಚ್ಛಕ್ತಿ ಕೊಯ್ಲಿನ ಅನುಭವ, ನಮ್ಮ ಕಾರಿನ ಪ್ರದೂಷಣೆ ಇವನ್ನೆಲ್ಲ ತೂಗಿಸಿ ನೋಡುವ ಅವಕಾಶ ಮಾಡಿಕೊಡುತ್ತದೆ. ಹಾಡುಗಳನ್ನು ಕೇಳುತ್ತ, ಸ್ಕಾಟ್ ಲ್ಯಾನ್ಡ್ ನ ಹಸಿರಿನ ಹಾವೇ ಕುಡಿಯುತ್ತ ಸ್ಟರ್ಲಿಂಗ್ ನಗರವನ್ನು ದಾಟುತ್ತಿದ್ದಂತೆ ಹೈಲ್ಯಾನ್ಡ್ ಘಟ್ಟ ಶುರುವಾಗುತ್ತದೆ. ಕಣಿವೆಯ ಬುಡದಲ್ಲಿ ತೆವಳುವ ನದಿಗಳು, ಪಕ್ಕದಲ್ಲಿ ಮಲಗಿರುವ ರೈಲಿನ ಹಳಿಗಳು, ಥಟ್ಟನೆ ಎದುರಾಗುವ ಮೋಡದ ತುಣುಕುಗಳು, ಆಗಾಗ ಮುಖಕ್ಕೆ ಬಡಿಯುವ ತುಂತುರು ಹನಿಗಳು ಯಾವುದೇ ಅರಸಿಕನನ್ನೂ ಭಾವುಕನಾಗಿಸುವ ದೃಶ್ಯಗಳು.
ನಮ್ಮ ಮೂಲ ಧ್ಯೇಯ ರೂಟ್ ೫೦೦ನ ಅನ್ವೇಷಣೆ ಯಾಗಿದ್ದರಿಂದ, ಇನ್ವರ್ನೆಸ್ ನಗರದ ಕಾಸಲ್ ದರ್ಶನ ಮುಗಿಸಿ ಟೈನ್ ಎಂಬಲ್ಲಿರುವ ಗ್ಲೆನ್ ಮೊರಂಜಿ ವ್ಹಿಸ್ಕಿ ಭಟ್ಟಿಗೆ ಹೊರಟೆವು. ಗ್ಲೆನ್ ಮೊರಂಜಿ ವ್ಹಿಸ್ಕಿಯ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ವಿಶಿಷ್ಟ ಹಳದಿ ಬಣ್ಣದ ಲೇಬಲ್ ಇದರ ಗುರುತಿನ ಚೀಟಿ, ವ್ಹಿಸ್ಕಿ ಅಭಿಮಾನಿಗಳಿಗೆ ಚಿರಪರಿಚಿತ. ಇದರ ಸುತ್ತಲೂ ಸುಂದರ ಉದ್ಯಾನವನವಿದೆ. ನಾವು ಹೋದ ದಿನ ಇದು ಮುಚ್ಚಿದ್ದರಿಂದ ಭಟ್ಟಿಯ ಒಳಗಡೆ ಹೋಗುವ, ವ್ಹಿಸ್ಕಿಯ ರುಚಿ ಅನುಭವಿಸುವ ಅವಕಾಶದಿಂದ ವಂಚಿತರಾದೆವು. ಮಕ್ಕಳು ಭಟ್ಟಿಯ ಹೊರಗಿನ ಹುಲ್ಲಿನ ದಿಬ್ಬದಿಂದ ಉರುಳಿ ಮಜಾ ತೆಗೆದುಕೊಂಡರು. ಇಲ್ಲಿಗೆ ಬರುವ ಹಾದಿಯಲ್ಲಿ ವಿಶೇಷವಾದದ್ದೇನೂ ಕಾಣಲಿಲ್ಲ. ಗ್ಲೆನ್ ಮೊರಂಜಿಯಿಂದ ಮುಂದಿನ ಹಾದಿ ಮನಮೋಹಕವಾಗಿತ್ತು. ಬಲ ಭಾಗದಲ್ಲಿ ಸಮುದ್ರ ಮರಗಳ ನಡುವೆ ಕಣ್ಣಾಮುಚ್ಚಾಲೆ ಆಡುತ್ತ ತುಂಟ ನಗೆ ಬೀರುತ್ತಿತ್ತು. ಮತ್ತೆ, ಥಟ್ಟನೆ ಖಾರಿಯಾಗಿ ರಸ್ತೆಗೆ ಅಡ್ಡಾಗಿ ಮಲಗುತ್ತಿತ್ತು. ಇದೇನು ಅಲೆಗಳ ಅಬ್ಬರದ ಸಮುದ್ರವಲ್ಲ, ನಮ್ಮಲ್ಲಿ ನದಿಯೊಂದು ಅಡ್ಡ ಬಂದಂತನಿಸುತ್ತದೆ.


ಡನ್ರೋಬಿನ್ ಕಾಸಲ್ : ಸದರ್ಲೆಂಡ್ ಎಂಬ ವಂಶಕ್ಕೆ ಸೇರಿದ ಈ ಅರಮನೆ ರೂಟ್ ೫೦೦ ರಲ್ಲಿರುವ ಎರಡು ಪ್ರಮುಖ ಮಾನವ ನಿರ್ಮಿತ ರಚನೆಗಳಲ್ಲಿ ಒಂದೆಂಬುದು ನನ್ನ ಅಭಿಪ್ರಾಯ. ಡಿಸ್ನಿ ಅರಮನೆಯನ್ನು ಹೋಲುವ ರಚನೆ ಇದಾಗಿದ್ದು, ಯಾವುದೇ ಪಾಶ್ಚಾತ್ಯ ಪಾಳೇಗಾರರ ನಿವಾಸದಂತೇ ಇದೆ. ೧೫ನೇ ಶತಮಾನದಲ್ಲಿ ನಿರ್ಮಿತ ಅರಮನೆಯ ಒಳ ಹೊರಗನ್ನು ನೋಡುವ ಅವಕಾಶವಿದೆ. ದಿಬ್ಬದ ಮೇಲಿರುವ ಅರಮನೆ, ಸಮುದ್ರ ವೀಕ್ಷಣೆಗೆ ಆಯಕಟ್ಟಿನ ಜಾಗದಲ್ಲಿದೆ. ಬುಡದಲ್ಲಿರುವ ಫ್ರೆಂಚ್ ಪ್ರಭಾವಿತ ತೋಟ ಹಸಿರಾಗಿ ನಳನಳಿಸುತ್ತಿತ್ತು. ಇಲ್ಲಿ ನಡೆಯುವ ಹದ್ದು-ಗಿಡುಗಗಳ ಪ್ರದರ್ಶನ ನಮಗೆ ಈ ಭವ್ಯ ಪಕ್ಷಿಗಳನ್ನು ಮುಟ್ಟಿ ಮಾತಾಡಿಸುವ ಅವಕಾಶ ಮಾಡಿಕೊಟ್ಟಿತು, ಮಕ್ಕಳಿಗೆ ಇದು ಉತ್ತಮ ಅನುಭವ.
ಡನ್ರೋಬಿನ್ ಕಾಸಲ್ ನಿಂದ ಜಾನ್ ಓ ಗ್ರೋಟ್ಸ್ ಗೆ ಹೋಗುವ ಹಾದಿ ರುದ್ರರಮಣೀಯವಾದದ್ದು. ರಸ್ತೆಯ ಬಲಬದಿಗೆ ಆಳವಾದ ಪ್ರಪಾತದ ಬುಡದಲ್ಲಿ ಸಮುದ್ರ ಬಾಯ್ತೆರೆದು ಕಾಯುತ್ತಿರುತ್ತದೆ. ಈ ರಸ್ತೆಗಳ ತಿರುವುಗಳು ನನಗೆ ಖಂಡಾಲಾ ಘಾಟಿಯನ್ನು ನೆನಪಿಸಿದವು. ಮಧ್ಯದಲ್ಲಿ ವಿಕ್ ಎಂಬ ಪುಟ್ಟ ಊರೊಂದು ಸಿಗುತ್ತದೆ. ಇಲ್ಲಿ ಬ್ರಿಟನ್ನಿನ ಉತ್ತರ ತುದಿಯ ಆಸ್ಪತ್ರೆ ಇದೆ (ಶೆಟ್ ಲ್ಯಾನ್ಡ್ ಆಸ್ಪತ್ರೆ ದ್ವೀಪ ಸಮೂಹಗಳಲ್ಲಿದ್ದು, ವಿಕ್ ನ ಆಸ್ಪತ್ರೆ ಬ್ರಿಟನ್ನಿನ ಮುಖ್ಯ ಭಾಗದ ಉತ್ತರ ತುದಿಯಲ್ಲಿದೆ). ೧೯೯೯ ರಲ್ಲಿ ಉದ್ಯೋಗಾರ್ಥಿಯಾಗಿ ಗುಜರಾಯಿಸಿದ ನೂರಾರು ಆಸ್ಪತ್ರೆಗಳ ಲಿಸ್ಟಿನಲ್ಲಿ ವಿಕ್ ಆಸ್ಪತ್ರೆಯೂ ಇದ್ದದ್ದು ನೆನಪಾಯಿತು. ಆಗ, ನಾನೊಮ್ಮೆ ಈ ಊರನ್ನು ಹಾದು ಹೋಗುತ್ತೇನೆಂದೂ ಊಹಿಸಿರಲಿಲ್ಲ.
ಜಾನ್ ಓ ಗ್ರೋಟ್ಸ್ : ಸಾಹಸ ಪ್ರಿಯರಿಗೆ, ಆಂಗ್ಲರಿಗೆ, ಇಲ್ಲಿ ನೆಲೆಸಿರುವ ಪರಕೀಯರಿಗೆ ಈ ಊರು ಪರಿಚಿತ. ಇದು ಬ್ರಿಟನ್ನಿನ ತುತ್ತ ತುದಿಯ ಊರು. ನೈಋತ್ಯ ಮೂಲೆಯಲ್ಲಿರುವ ಲ್ಯಾನ್ಡ್ಸ್ ಎಂಡ್ ನಿಂದ ಇಲ್ಲಿಗೆ ಸಾಹಸದ ತೆವಲಿನವರು, ಉತ್ತಮ ಕೆಲಸಕ್ಕೆ ಚಂದಾ ಎತ್ತುವವರು ನಡೆದೋ, ಸೈಕಲ್ ಸವಾರರಾಗಿ ಬರುವುದು ವಾಡಿಕೆ. ಇದು ಚಿಕ್ಕ ಮೀನುಗಾರಿಕಾ ಬಂದರು. ಇಲ್ಲಿಂದ ಒರ್ಕ್ನಿ ದ್ವೀಪಗಳಿಗೆ ಹೋಗಲು ಅನುಕೂಲತೆ ಇದೆ. ಇಲ್ಲಿ ನಿಲ್ಲಿಸಿರುವ ಕೈಕಂಬ ಜಗತ್ತಿನ ಇತರ ಪ್ರಮುಖ ನಗರಗಳಿಗಿರುವ ದೂರವನ್ನು, ದಿಕ್ಸೂಚಿಯಾಗಿ ಇಲ್ಲಿನ ನೀರವತೆಯಲ್ಲೂ ನಗರಗಳ ಗಿಜಿಗಿಜಿಯನ್ನು ಮಾರ್ದನಿಸುವ ಪ್ರಯತ್ನ ಮಾಡುತ್ತದೆ. ನನಗೆ ಪಕ್ಕದ ದಿಬ್ಬದಾಚೆ ಸಮುದ್ರದಲ್ಲಿ ಶತಮಾನಗಳ ಕೊರೆತದ ಪರಿಣಾಮವಾಗಿ ಉದ್ಭವಿಸಿದ ಮೂರು ಸಹೋದರಿ ಶಿಖರಗಳು ಮುಖ್ಯ ಆಕರ್ಷಣೆ ಎನಿಸಿತು. ಸೂರ್ಯೋದಯದ ಕಾಲದಲ್ಲಿ ಇಲ್ಲಿನ ನೋಟ ಅದ್ಭುತವಾಗಿದ್ದೀತು. ನಾವು ತಲುಪಿದಾಗ ಸೂರ್ಯನ ಕಿರಣಗಳು ಸಹೋದರಿಯರ ಬೆನ್ನನ್ನು ಮುತ್ತಿಕ್ಕುತ್ತಿದ್ದವು. ಇಲ್ಲೇ ಹತ್ತಿರದ ಊರೊಂದರಲ್ಲಿ ಹೋಟೆಲ್ ಕಾದಿರಿಸಿಟ್ಟಿದ್ದೆವು ರಾತ್ರಿ ತಂಗಲು. ಪಕ್ಕದಲ್ಲೊಂದು ಬಾಂಗ್ಲಾ ದೇಶದವರ ಊಟದ ಹೋಟೆಲ್ ಇತ್ತು. ಅದು ರಂಜಾನ್ ತಿಂಗಳು. ಅಲ್ಲಿನ ಕೆಲಸದವರು ತಮ್ಮ ಸಂಜೆಯ ಪ್ರಾರ್ಥನೆ ಮುಗಿಸಿ ಸ್ವಾದಿಷ್ಟ ಭೋಜನ ಆದರದಿಂದ ಬಡಿಸಿದ್ದು ನನಗಿನ್ನೂ ಕಣ್ಮುಂದೆ ನಿಂತಿದೆ.


ಇಲ್ಲಿಂದ ಉಲ್ಲಾಪೂಲ್ ನ ಯಾನವನ್ನು ಶಬ್ದಗಳಿಂದ ಬಣ್ಣಿಸಲಸದಳ. ಮುಗಿಲ ಮುತ್ತುವ ಬೋಳು ಗುಡ್ಡಗಳು, ಅವುಗಳ ಪಾದ ತೊಳೆಯುವ ನಿರ್ಮಲ ನೀರಿನ ತೊರೆಗಳು, ದಾರಿಯುದ್ದಕ್ಕೂ ಕಾಣುವ ಪಚ್ಚೆ ಬಣ್ಣದ ಸಮುದ್ರ, ನಿಷ್ಕಲ್ಮಶ ಶುಭ್ರ ನಿರ್ಜನ ತೀರ ಯಾವುದನ್ನ ವರ್ಣಿಸುವುದು, ಯಾವುದನ್ನ ಬಿಡುವುದು? ಎಲ್ಲವೂ ಎಸ್. ದಿವಾಕರರು ಹೇಳುವಂತೆ ಕ್ಲೀಷೆಗಳಲ್ಲೇ ಕೊನೆ ಗಂಡೀತು. ಶಬ್ದಗಳ ಬದಲು ಚಿತ್ರಗಳನ್ನೇ ನಿಮ್ಮೆದುರಿಡುವೆ. ನಿಮಗನಿಸಿದಂತೆ ವರ್ಣಿಸಿಕೊಳ್ಳಬಹುದು. ದಾರಿಯಲ್ಲಿ ಸಿಕ್ಕಿದ ತೀರದಲ್ಲಿಳಿದಾಗ ತೀರದ ಮೇಲೆ ಝಿಪ್ ವಯರ್ ಮೇಲೆ ಜಾರುವ ಸಿಕ್ಕಿದ್ದು ಅವಕಾಶ ಅಪುರ್ವವಾಗಿತ್ತು. ಇಲ್ಲಿ ತೀರದ ಮೇಲೆ ಆಡಿದ ಕ್ರಿಕೆಟ್ ಆಟ ನಮ್ಮ ಜೀವನದಲ್ಲಿ ಜಗತ್ತಿನ ಉತ್ತರ ತುದಿಯಲ್ಲಿ ಆಡಿದ ದಾಖಲೆಯಾಗಿದೆ.





ಹಾದಿಯಲ್ಲಿ ಸಿಗುವ ಕೇಯರ್ನ್ ಭಾಯನ್ ಲಾಕ್ ಮೇಲೆ ಕಟ್ಟಿರುವ ಕೈಲೆಸ್ಕು ಸೇತುವೆ ಇನ್ನೊಂದು ಮಾನವ ನಿರ್ಮಿತ ರಚನೆಗಳಲ್ಲಿ ನೋಡುವಂಥದ್ದು ಈ ಭೂಭಾಗದಲ್ಲಿ. ಇದರ ಚಿತ್ರ ಮೇಲಿದೆ.
ಉಲ್ಲಾಪೂಲ್ ತಲುಪಿದಾಗ ಸರಿಸುಮಾರು ಮಧ್ಯರಾತ್ರಿ. ಅಲ್ಲಿನ ಹೊಟೆಲ್ ಲಾಕ್ ಒಂದರ ತೀರದಲ್ಲಿತ್ತು. ಆ ಹೊತ್ತಿನಲ್ಲಿ ಕಂಡ ಚಿತ್ತಾರದ ಆಗಸದ ಚಿತ್ರ ನಾನೆಂದೂ ಮರೆಯಲಾರೆ. ಆ ಚಿತ್ರವನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿಯುವಾಗ ಸ್ಕಾಟ್ ಲ್ಯಾಂಡಿನ ವಿಶೇಷ ನುಸಿ (ಮಿಡ್ಜಸ್) ಗಳ ದಾಳಿಯನ್ನೂ ಮರೆಯಲಾರೆ.
ರೂಟ್ ೫೦೦ ರ ಕೊನೆಯ ಭಾಗವನ್ನು ಸಮಯಾಭಾವದಿಂದ ಮೊಟಕುಗೊಳಿಸಿದರೂ ಸುಮಾರು ೯೦% ಭಾಗವನ್ನು ಕ್ರಮಿಸಿ, ಮನಸೋ ಇಚ್ಛೆ ಆನಂದಿಸಿದ್ದಕ್ಕೆ ಮಕುಟವಿಟ್ಟಿದ್ದು ಗೆಳೆಯರ ಗುಂಪಿನ ಒಡನಾಟ.

