ಕ್ರಿಸ್ಮಸ್ ಹಬ್ಬದ ಸಡಗರಕ್ಕೆ ಕವಿತೆಗಳ ತೋರಣ

ಪ್ರಿಯ ಓದುಗರೇ, 
ಈ ವಾರ ಅನಿವಾಸಿ ಅಂಗಳದಲಿ ಕ್ರಿಸ್ಮಸ್ ಹಬ್ಬದ ಸಂಭ್ರಮವನ್ನು ಹೊತ್ತು ಎರಡು ಕವಿತೆಗಳು ನಿಮಗಾಗಿ ಕಾಯುತ್ತಿವೆ. ನಾವು ಭಾರತೀಯರು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಆ ನೆಲದ ಆಚರಣೆಯ ಸೊಬಗಿನಲ್ಲಿ ನಮ್ಮ ನಾಡಿನ ಯಾವುದೋ ಛಾಯೆಯನ್ನು ಅರಸುತ್ತೇವೆ. ಸಂಗೀತ ಸಾಹಿತ್ಯ ಲೋಕವೂ ಇದಕ್ಕೆ ಹೊರತಲ್ಲ. ಅದೇ ನೆಲೆಯಲ್ಲಿ ಈ ವಾರದ ಅನಿವಾಸಿ ಸಂಚಿಕೆ ನಮ್ಮನಾಡಿನ ಹೆಮ್ಮೆಯ ಕವಿ ಬೇಂದ್ರೆಯವರ ಕವಿತೆಯ ಧಾಟಿಯಲ್ಲಿ ಡಾ ಜಿ ಎಸ್ ಶಿವಪ್ರಸಾದ ಮತ್ತು ಡಾ ಶ್ರೀವತ್ಸ ದೇಸಾಯಿ ಅವರು ಬರೆದ ಎರಡು ಮಜಾಶೀರ ಕ್ರಿಸ್ಮಸ್ ಸಂಬಂಧಿ ಕವಿತೆಗಳೊಂದಿಗೆ ನಿಮ್ಮ ಮುಂದಿದೆ. ಜೊತೆಗೆ ಬೆಲ್ಫಾಸ್ಟ್ ನಗರದ ಕ್ರಿಸ್ಮಸ್ ಮಾರ್ಕೆಟ್ ನ ಒಂದಷ್ಟು ಚಿತ್ರಗಳಿವೆ. 
ತಮ್ಮೆಲ್ಲರಿಗೂ ಕ್ರಿಸ್ಮಸ್ ಸಂಭ್ರಮಾಚಾರಣೆಯ ಶುಭಾಶಯಗಳು. 
-ಸಂಪಾದಕಿ 

ಇನ್ನು ಯಾಕ ಬರಲಿಲ್ಲವ್ವ ?

ಡಾ ಜಿ ಎಸ್ ಶಿವಪ್ರಸಾದ್, ಶೇಫೀಲ್ಡ್

ಸ್ಯಾಂಟ ಇನ್ನು ಯಾಕೆ ಬರಲಿಲ್ಲ? 
( ದ.ರಾ.ಬೇಂದ್ರೆ ಅವರ ಕ್ಷಮೆಯಾಚಿಸಿ) 

ಇನ್ನು ಯಾಕೆ ಬರಲಿಲ್ಲವ್ವ 
ಅಜ್ಜ ನಮ್ಮವ 
ವರ್ಷ ವರ್ಷ ಕ್ರಿಸ್ಮಸ್ಸಿಗಂತ 
ಬಂದು ಹೋಗಾವಾ 

ಕೆಂಪು ಮೂಗಿನ ಜಿಂಕಿ ಮ್ಯಾಲೆ 
ಜಾರಿ ಬರುವವ 
ಮನಿಮ್ಯಾಲಿನ ಚಿಮ್ನಿಯೊಳಗ   
ತೂರಿ ಬರುವವ 

ಬಿಳಿ ಗಡ್ಡ, ಬಿಳಿ ಮೀಸೆ 
ಹೊತ್ತು ನಿಂತವ 
ಡೊಳ್ಳುಹೊಟ್ಟೆ ಮ್ಯಾಲೆ 
ಕೆಂಪು ಅಂಗಿತೊಟ್ಟವ 

ಕೂಸು ಕೂಸಿನ ಕೆನ್ನೆ ಸವರಿ 
ಉಡುಗೊರೆ ಕೊಟ್ಟವ 
ಚಿಣ್ಣರ ಕನಸಿಗೆ ಬಣ್ಣ ತುಂಬಿ 
ನಕ್ಕು ನಲಿದವ 

ಬೆನ್ನಿನ ಮ್ಯಾಲೆ ಬಯಕೆಯ 
ಭಾರವ ಹೊತ್ತು ತಂದವ 
ಕತ್ತಲಲ್ಲಿ ಬೆಳಕನು ಚಲ್ಲಿ 
ಮಾಯವಾದವ 

ಮೂರು ಬಾರಿ ಕೋವಿಡ್ ವ್ಯಾಕ್ಸಿನ್ 
ಹಾಕಿಸಿ ಕೊಂಡವ 
ಓಮೈಕ್ರಾನಿನ ಹೆಸರ ಕೇಳಿ 
ಅಂಜಿ ಕೂತವ!

ಡಾ ಜಿ ಎಸ್ ಶಿವಪ್ರಸಾದ್

ಕ್ರಿಸ್ಮಸ್ ಕ್ಯಾರಲ್

ಡಾ ಶ್ರೀವತ್ಸ ದೇಸಾಯಿ


ಯುಗ ಯುಗಾದಿ ಕಳೆದರೂ
ನಾತಾಳ* ಮರಳಿ ಬರುತಿದೆ
ಅದರ ಬೆನ್ನು ಹತ್ತಿದ ಬೇತಾಳದಂತೆ
ಹೊಸವರ್ಷವು ಮರಳಿ ಬರುತಿದೆ
ಚಾಕಲೇಟು, ಪ್ರೆಸೆಂಟ್ ಬಿಲ್ ಹೊತ್ತು
ಬೆನ್ನೂ ಬಿಲ್ಲಾಗಿ ಬಾಗಿದೆ, ಕಿಸಿಗೆ ತೂತು ಬಿದ್ದಿದೆ
ಬ್ಯಾಂಕು ಬ್ಯಾಲನ್ಸ್ ಅಂತೂ ಪಾತಾಳ ಸೇರಿದೆ!
*	*	*	*	*
ಅಲ್ಲಿ ಪಾರ್ಟಿಯಂತೆ, ಜನಜಂಗುಳಿ ಸೇರಿ ಹಂಗಾಮಾ ಮಾಡಿದೆ
ಆದರೆ ನಿಮಗೊಂದು ಎಚ್ಚರಿಕೆ!
ಮುತ್ತಿನಂಥ ನಿಮ್ಮ ಹಳೆಗೆಳತಿಯೊಬ್ಬಳು
‘ಮಿಸಲ್ ಟೋ‘ ದಡಿ ಕಾದುಕೂತಿದ್ದಾಳೆ
ಅಪ್ಪಿ ಮುತ್ತುಗಳ ಮಳೆಗರೆಯಲು
ಕಾಡುವ ಹಳೆಯ ನೆನಪುಗಳ ಓಕುಳಿಯಾಡಿದ್ದಾಳೆ 
ಕಂಡರೂ ಕಾಣದಂತೆ ಮಡದಿ ಕಿಡಿಕಿಡಿಯಾಗಿದ್ದಾಳೆ!
ಬರುತ್ತದೆ ನಿಮ್ಮತ್ತ ಒಂದು ಪಾರ್ಟಿ ಕ್ರಾಕರ್, ಜೋಕೆ!

*ನಾತಾಳ= ಕ್ರಿಸ್ಮಸ್ 

ಚಿತ್ರಗಳು – ಅಮಿತಾ ರವಿಕಿರಣ್

5 thoughts on “ಕ್ರಿಸ್ಮಸ್ ಹಬ್ಬದ ಸಡಗರಕ್ಕೆ ಕವಿತೆಗಳ ತೋರಣ

  1. ಪ್ರಸಾದ್‌ ಅವರ ತುಂಟತನದ ಅಣಕುವಾಡು ಬಹಳ ಚೆನ್ನಾಗಿದೆ. ಇದನ್ನು ಖಂಡಿತವಾಗಿ ಕನ್ನಡನಾಡಿನ ಕ್ರಿಸ್ಮಸ್‌ ದಿವಸಕ್ಕೆ ಮುಂದಾಗಿ ಜನರು ಹಾಡುತ್ತ ಪ್ರಸಿದ್ದಗೊಳಿಸಬಹುದು. ಬಾರಿ ಬಾರಿಯೂ ಖರಾರುವಕ್ಕಾಗಿ ಪ್ರಾಸಬದ್ದವಾಗಿ ಕೇಳಿಸಬಲ್ಲ ಕವನವಿದು.
    ದೇಸಾಯಿಯವರ ಇನ್ನೆರಡು ಪುಟ್ಟ ಗಪದ್ಯಗಳ ನಾತಾಳ-ಬೇತಾಳ ಪ್ರಾಸ ಅತ್ಯಂತ ಹೊಸದು. ಮತ್ತೊಂದು ಪಾರ್ಟಿ ಜೋಕ್ ನಂತೆ ಮಜಾ ಕೊಡುತ್ತದೆ

    Like

  2. ವರಕವಿ ಬೇಂದ್ರೆಯವರ ಸುಪ್ರಸಿದ್ಧ ‘ಹುಬ್ಬಳ್ಳಿಯಾಂವ’ ಹಾಡಿನ ಅಣಕುವಾಡು ಕ್ರಿಸ್ಮಸ್ಸಿಗೆ ಪ್ರಸಾದ್ ಅವರು ಕನ್ನಡ ಅಣಕುವಾಡು ಲೋಕಕ್ಕೆ ಕೊಟ್ಟ ಅತ್ತುತ್ತಮ ಕಾಣಿಕೆ. ಅಮಿತಾ ಅವರು ಅದನ್ನು ಹಾಡಿ ಹಾಕಬೇಕೆಂದು ನನ್ನ ಕೋರಿಕೆ.

    ದೇಸಾಯಿಯವರ ಎರಡು ಗಪದ್ಯಗಳು ತುಂಟತನದಿಂದ ಮತ್ತು ‘ಮಿಸಲ್ ಟ್ರೀ’ಯ ಪ್ರತಿಮೆಯಿಂದ ಗಮನ ಸೆಳೆಯುತ್ತವೆ.

    – ಕೇಶವ

    Like

  3. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಕವನಗಳು ಚೇತೋಹಾರಿಯಾಗಿವೆ. ಹೊಸತು – ಹಳತನ್ನು ಸುಂದರವಾಗಿ ತುಳುಕು ಹಾಕಿವೆ. ಅಮಿತಾರ ಕ್ರಿಸ್ಮಸ್ ಮಾರುಕಟ್ಟೆಯ ಚಿತ್ರಗಳು ಚುಮುಚುಮು ಛಳಿಯಲ್ಲಿ ಬೆಚ್ಚಗಿನ ಕೌದಿಯ ಬಿಸುಪು ನೀಡಿವೆ.
    ರಾಂ

    Like

  4. ಪ್ರಸಾದ ಅವರ ಹಿಂಜರೆಯುತ್ತಿರುವ ಸಾಂಟನ. ಬಗೆಗಿನ ಕ್ರಿಸ್ಮಸ್ ಅಣಕುಗೀತ ಚೇತೋಹಾರಿಯಾಗಿದೆ. ಇನ್ನೂ ಒಂದು ದಿನವಿದೆ ಕ್ರಿಸ್ಮಸ್ ಗೆ. ಕಾಯುವ, ಬಂದೇ ಬರುತ್ತಾನೆ ಅನ್ನುವ ಭರವಸೆ! After three vaccine jabs, he won’t vacillate! ಅಮಿತಾ ಅವರ ಸಂಪಾದಕೀಯ ಮತ್ತು ಚಿತ್ರಗಳೂ ರಂಗೇರಿಸಿವೆ ಈ ನಾತಾಳಕ್ಕೆ! Merry Christmas to all!

    Like

Leave a Reply

Your email address will not be published. Required fields are marked *