ಕಥೆ ಮತ್ತು ಕವಿತೆ.

ಪ್ರಿಯ ಓದುಗರೇ , 
ಈ ವಾರ ಅನಿವಾಸಿಯಲ್ಲಿ ಮತ್ತೊಂದು ''ಕಳ್ಳತನ'' ಕುರಿತಾದ ನಗು ಉಕ್ಕಿಸುವ ಬರಹವಿದೆ. ಶ್ರೀಮತಿ ಗೌರಿ ಪ್ರಸನ್ನ ಅವರು ತಮ್ಮ ಬಾಲ್ಯದ ಅನುಭವವೊಂದನ್ನ ಅವರ ಅನನ್ಯ ಶೈಲಿಯಲ್ಲಿ ನಮಗೆಂದು ಉಂಡೆಕಟ್ಟಿ ತಂದಿದ್ದಾರೆ.
ಜೊತೆಗೆ ಶ್ರೀಮತಿ ರಮ್ಯಾ ಭಾದ್ರಿ ಅವರು ಶರದ್ಕಾಲದಲ್ಲಿ ಇಮ್ಮಡಿಯಾಗುವ ಭೂರಮೆಯ ರಮ್ಯತೆಯನ್ನು,ತಮ್ಮ ಕವಿತೆಯಲ್ಲಿ ಪೋಣಿಸಿ ಅನಿವಾಸಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. 
ಈ ವಾರದ ಓದಿಗೆ ತಮ್ಮೆಲ್ಲರಿಗೆ ಸ್ವಾಗತ. 
- ಸಂಪಾದಕಿ 
ಚಿತ್ರ: ಅಮಿತಾ ರವಿಕಿರಣ್

ಗಡ್ಡ ಎಳೆದವನಿಗೆ ಮಿಠಾಯಿ- ಶ್ರೀಮತಿ ಗೌರಿ ಪ್ರಸನ್ನ

ಅನಿವಾಸಿಯಲ್ಲಿ  ಈ ಕಳ್ಳತನದ ರೋಚಕ ಕಥೆಗಳನ್ನೆಲ್ಲ  ಓದಿ ನನಗೂ ನಮ್ಮ ಕಳ್ಳತನದ ಪ್ರತಾಪಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಮನಸ್ಸಾಗುತ್ತಿದೆ.ಕೇಳುತ್ತೀರಲ್ಲವೇ?

   ಅದು ಎಂಬತ್ತರ ದಶಕ. ನಾನು 12-13 ರ ಹುಡುಗಿ. ಮನೆಯಲ್ಲಿ ನನ್ನ ಮಾಂಶಿ(ಚಿಕ್ಕಮ್ಮ)ಯ ಬಾಣಂತನ ನಡೆದಿತ್ತು. ಬಾಣಂತಿ ಮನಿ ಎಂದ ಮೇಲೆ ಅಂಟಿನುಂಡೆ, ಕೇರಡಿಕೆಗಳಿರಲೇಬೇಕಲ್ಲವೇ? ನಾವು ಮನೆತುಂಬ ನಾಲ್ಕಾರು ಮಕ್ಕಳು, ಬರಹೋಗುವವರು ಎಲ್ಲರಿಗೂ ಬೇಕಾಗುತ್ತದೆಂದು ಬಾಣಂತಿಯ ಲೆಖ್ಖದ ಉಂಡಿಗಳನ್ನು ಬೇರೆಡೆ ಎತ್ತಿಟ್ಟು, ನಮಗೆಲ್ಲ ಮಾಸಲೆ ನೋಡಲು ಒಂದು, ಎರಡು ಕೊಟ್ಟು ಉಳಿದ ಸುಮಾರು 40-50 ಉಂಡಿಗಳನ್ನು ಎರಡು ಅಮುಲ್ ಸ್ಪ್ರೇ ಡಬ್ಬಿಗಳಲ್ಲಿ ಹಾಕಿ ಮುಕಾಟಲೆ ದೇವರ ಮಾಡದ ಹತ್ತಿರವಿದ್ದ ಇಷ್ಷುದ್ದದ ಮಾಡದಲ್ಲಿ ಹಿಂದಕ್ಕೆ ಸರಿಸಿ ಮುಚ್ಚಿಟ್ಟಿದ್ದಳು ನಮ್ಮ ಓಣ್ಯಾಯಿ. (ಅಜ್ಜಿ) ಅಲ್ಲಿಡಲು ಬಲವಾದ ಕಾರಣಗಳಿದ್ದವು. ಅಲ್ಲೇ ದೇವರ ಮಾಡ, ಪಕ್ಕದಲ್ಲೇ ಕೆಳಗಡೆ ಮಡಿನೀರು ಇರುವುದರಿಂದ ಮಕ್ಕಳಾರೂ ಆ ಕ್ಷೇತ್ರದತ್ತ ಸುಳಿಯುತ್ತಿರಲಿಲ್ಲ. ಅಲ್ಲದೇ ಉದ್ದ ಮೀಸೆಯ ಜೊಂಡಿಗವೋ, ಕಟಕ್ಕನೇ ಕೈಹಿಡಿದು ಬಿಡುವ ಕಟ್ಟಿರುವೆಯೋ, ಅಗಾಧ ಉರಿಯೆಬ್ಬಿಸಿಬಿಡುವ ಕೆಂಪಿರುವೆ-ಕೆಂಜಗವೋ, ಕೊಂಡಿಯೆತ್ತಿ ಕುಟುಕಿ ಸರಭರ ಓಡಿಹೋಗುವ ಚೇಳೋ  ಯಾವಾಗ ಬೇಕಾದರೂ ಪ್ರತ್ಯಕ್ಷವಾಗಿಬಿಡುವ  ಉದ್ದೋಉದ್ದಕ್ಕೆ ಇರುವ ಆ ಮಾಡದಲ್ಲಿ ಕೈ ಹಾಕುವ ಧೈರ್ಯವೂ ನಮಗಾರಿಗೂ ಇರಲಿಲ್ಲ ಅನ್ನಿ. ಆದರೆ ಈ ಉಂಡಿಯ ಮಾಸಲೆ ತೋರಿಸಿದ್ದೇ ನಮ್ಮಾಯಿ. ಮಾಡಿದ್ದ ತಪ್ಪಾಗಿತ್ತು. ಮನುಷ್ಯರ ರಕ್ತದ ರುಚಿ ಹತ್ತಿದ ನರಭಕ್ಷಕ ಹುಲಿಯಂತೆ ನಮ್ಮ ಜಿಹ್ವೆಗಾಗಲೇ ಅಂಟಿನುಂಡೆಯ ರುಚಿ ನೆಟ್ಟು ಬಿಟ್ಟಿತ್ತು.

   ಆಯ್ತು. ಇದಾಗಿ ಎಂಟ್ಹತ್ತು ದಿನಗಳಾಗಿರಬಹುದೇನೋ? ನೆಂಟರ, ಬೀಗರ ಗುಂಪೊಂದು ಕೂಸು-ಬಾಣಂತಿಯನ್ನು ನೋಡಲು ಬಂದಿತ್ತು. ಚಾ-ಪಾನಿ ಮುಗಿಸಿ ಹೊರಟುನಿಂತ ಅವರಿಗೆ ಪದ್ಧತಿಯಂತೆ ಕುಂಕುಮದೊಡನೆ ಅಂಟಿನುಂಡೆ, ಕೇರಡಿಕ ಕೊಡಬೇಕೆಂದು ಡಬ್ಬಿ ತೆಗೆದ ಅಜ್ಜಿಯ ಕೈಗೆ ಹತ್ತಿದ್ದು ತಳದಲ್ಲಿ ಅಲ್ಲಲ್ಲಿ  ಚದುರಿಬಿದ್ದಿದ್ದ ಗೇರುಬೀಜ, ಉತ್ತತ್ತಿಯ ತುಣುಕುಗಳು. ಗಾಬರಿಬಿದ್ದ ಅಜ್ಜಿ ಪಕ್ಕಕ್ಕಿದ್ದ ಇನ್ನೊಂದು ಡಬ್ಬಿ ತೆರೆದರೆ ಅದರಲ್ಲೂ ತನ್ನ ಬಳಗದ ಅಳಿದುಳಿದ ಅವಶೇಷಗಳ ಮಧ್ಯೆ ಅನಾಥವಾಗಿ ಡಬ್ಬಿಯ ಮೂಲೆಯಲ್ಲಿ ಬಿದ್ದಿದ್ದ ಒಂಟಿ ಅಂಟಿನುಂಡೆ. ಅಂತೂ ಬಾಣಂತಿ ಖೋಲಿಯಲ್ಲಿಟ್ಟಿದ್ದ ಉಂಡಿಗಳನ್ನೇ ಕೊಟ್ಟು ನೆಂಟರನ್ನು ಸಾಗಹಾಕಿ ತೆಹಕೀಕಾತ್ ನಡೆಸಲಾಗಿ ನನ್ನ ಮಾಮಾನ ಮಗ ಮೂರ್ತಿಯೇ ಆ ಕಳ್ಳರ ಗುಂಪಿನ ನಾಯಕನೆಂಬುದಾಗಿ ಪತ್ತೆ ಹಚ್ಚಲಾಯಿತು. ಅವನ ಹಿಂದೆ ನಾನು, ನನ್ನ  ಸಣ್ಣ ಸೋದರ ಮಾವ ಎಲ್ಲರೂ ಆ ಕಳ್ಳತನದ ಕಾಯಕದಲ್ಲಿ ಸ್ವಯಂಪ್ರೇರಣೆಯಿಂದ ಭಾಗಿಗಳಾಗಿ ಶಕ್ತಿ ಮೀರಿ ದುಡಿದಿದ್ದೆವು.

  ನಮ್ಮಜ್ಜಿ ಸಣ್ಣಗೆ ಗದರಿದರೂ ‘ಅಲ್ರೋ, ಅದ್ಯಾವ ಮಾಯದಾಗ ಎಲ್ಲಾ ತಿಂದ್ರ್ಯೋ?’ ಅಂತ ಅಚ್ಚರಿಪಟ್ಟಿದ್ದಲ್ಲದೇ ಒಂದೊಂದು ಬಾಣಂತಿ ಮೀಸಲಿನ ಉಂಡಿಯನ್ನು ನಮ್ಮ ಕೈಗಿಟ್ಟಾಗ ನನಗೆ ಅನಿರೀಕ್ಷಿತವಾಗಿ ದೊರೆತ ಉಂಡಿಗಾಗಿ ಖುಷಿಯಾದರೂ ‘ಕಳುವಿನಂಥ ಕೆಟ್ಟ ಕೆಲಸ ಮಾಡಿದ್ದಲ್ಲದೇ ಸಿಕ್ಕಿಯೂ ಬಿದ್ದೆನಲ್ಲ’ ಎಂಬ ಅಪರಾಧೀಭಾವ, ಅಪಮಾನದಿಂದಾಗಿ ಕೈಯುಂಡೆ ಕಳುವಿನುಂಡೆಯಷ್ಟು ರುಚಿಯಾಗದೇ ಯಾಕೋ  ಸ್ವಲ್ಪ ಕಹಿಯೆನ್ನಿಸಿತು. ಆದರೆ ನನ್ನ ತಮ್ಮ ಮೂರ್ತಿ ಮಾತ್ರ ‘ಗಡ್ಡ ಎಳೆದವನಿಗೆ ಮಿಠಾಯಿ’ ಕೊಟ್ಟ ದೊರೆಸಾನಿ ನಮ್ಮಜ್ಜಿಯ ಮಡಿಲಲ್ಲಿ ಕುಳಿತು ಉಂಡಿ ಮೆಲ್ಲುತ್ತಿದ್ದ.

ಕೊನೆಯದಾಗಿ ಒಂದು ಮಾತು. ನನ್ನನ್ನು ಉಂಡಿ ಕಳ್ಳಿ ಅಂತ ಕರೆವ ಮುಂಚೆ ಒಮ್ಮೆ ಜ್ಞಾಪಿಸಿಕೊಳ್ಳಿ. ನಿಮ್ಮನ್ನೂ ಚಿಕ್ಕಂದಿನಲ್ಲಿ ಅಮ್ಮ,ಅಪ್ಪ, ಅಜ್ಜ,ಅಜ್ಜಿ ಯಾರಾದರೂ ’ಛೀ ಕಳ್ಳಾ’ಎಂದು ಕರೆದೇ ಕರೆದಿರುತ್ತಾರೆ. ಅಂದಮೇಲೆ ನೀವೂ ಒಂದರ್ಥದಲ್ಲಿ ನನ್ನ ವೃತ್ತಿ ಬಾಂಧವರೇ ಆದಿರಿ ತಾನೇ?!

****************************************************

ಚಿತ್ರ : ಅಮಿತಾ ರವಿಕಿರಣ್

ಭೂ ಬನದ ಬಣ್ಣಗಳು – ಶ್ರೀಮತಿ ರಮ್ಯಾ ಭಾದ್ರಿ

ಕಣ್ಣಿನ ದೃಷ್ಟಿಗೆ ರಂಗೇರಿದಿಯೆ? ಇಲ್ಲ, ದೃಶ್ಯವೇ ವರ್ಣರಂಜಿತವಾಗಿದಿಯೇ?
ಅಥವಾ ದೃಷ್ಟಿಯ, ದೃಶ್ಯದ ಸಮ್ಮಿಲನದಿ ಸುರಿದ ಬಣ್ಣದೋಕುಳಿಯೇ?

ಚಿಗುರೆಲೆಗಳೆಲ್ಲಾ ಹಣ್ಣಾಗಿ, ಮಣ್ಣಾಗುವ ಕೊನೆಯ ಕ್ಷಣಗಳಲ್ಲಿ 
ವನದೇವತೆಯನ್ನು ಮದುಮಗಳಾಗಿ ಕಣ್ಣಾರೆ ಕಾಣುವ ಹಂಬಲದಿ ಸಿಂಗರಿಸಿರಬಹುದೆ?

ಬಿರುಸಾಗಿ ಬೀಸುವ ಗಾಳಿಗೆ ಸಿಲುಕುವ ಮುನ್ನ ಉಡುಗೊರೆಯಾಗಿ, 
ಹಣ್ಣೆಲೆಗಳೆಲ್ಲ ಒಂದಾಗಿ ತಾವೇ ಬಣ್ಣಗಳ ಗುಚ್ಛವಾಗಿ ತೋರುವ ಸಮರ್ಪಣಾ ಭಾವವೇ?

ಈ ಸೊಬಗಿನ ರೂಪರಾಶಿಗೆ ಕನ್ನಡಿಯಂತೆ,
ಸೊಗಸನ್ನು ಹನಿಹನಿಯಲ್ಲೂ ಪ್ರತಿಬಿಂಬಿಸುತ ಹೊಳೆ ಹೊಳೆಯುವ ಹೊಳೆಯೇ,

ಝುಳು ಝುಳುಯಂದು ಹರಿಯುತ್ತಾ, ನುಲಿಯುತ್ತಾ, 
ಗುನುಗುವ ಮಂಜುಳ ಗಾನಕ್ಕೆ ವನವೆಲ್ಲ ತಲೆದೂಗಿ ಚಪ್ಪಾಳೆಯ ಹೂಮಳೆ ಗೆರೆದಿರುವುದೇ?

ಹಗಲ ಗಗನದಲ್ಲಿ ಮೂಡಿದ ಕಾಮನಬಿಲ್ಲು ಹೂಡಿದ ಬಣ್ಣದ ಬಾಣಗಳಿರಬಹುದೆ?
ಇರುಳ ಆಗಸದಲ್ಲಿ ಸುಡು ಮದ್ದು ಸಿಡಿದು ಬಿಡಿಸುವ ರಂಗೋಲಿಗೆ ಇದೆ ಪ್ರೇರಣೆಯೇ?

ಹೇಗೆ ಬಣ್ಣಿಸಿದರೂ ವರ್ಣನಾತೀತ ಈ ಲಾವಣ್ಯ
ಈ ಸೊಬಗ ಸವಿಯುವ ನಯನಗಳೆ ಧನ್ಯ
ತೆರೆದ ಕಣ್ಗಳ ತುಂಬಾ ತುಂಬಿಕೊಂಡ ಸೌಂದರ್ಯ
ಕಣ್ಮುಚ್ಚಿದರೂ ಮನದಲ್ಲಿ ಅಚ್ಚಾಗುವ ನಿಸರ್ಗವೇ ಆಶ್ಚರ್ಯ

3 thoughts on “ಕಥೆ ಮತ್ತು ಕವಿತೆ.

 1. ಗೌರಿಯವರ ಇವತ್ತಿನ ನಗೆ ಬರಹ ಬಹಳ ಇಷ್ಟವಾಯಿತು.
  ವಿಚಾರಗಳನ್ನು ನಗೆಯ ಅಂಟಿನೊಂದಿಗೆ ಉಂಡೆ ಮಾಡಿ ನಮ್ಮೆಲ್ಲರ ಮನ ತಣಿಸುವ ಕತೆ ಬಡಿಸಿದ್ದಾರೆ.ಅದರ ಜಾಡಿನಲ್ಲೇ ಎಲ್ಲ ಕಳ್ಳರು ತಮ್ಮ ನೆನಪುಗಳನ್ನು ಬಾಯಾಡಿಸುವಂತೆ ಮಾಡಿದ್ದಾರೆ. ಅಮಿತಾರ ಈ ಉಂಡೀ ಚಿತ್ರವನ್ನು ನೋಡಿಯೇ ಹಿಂದೊಮ್ಮೆ ನಾನು ಐರ್ಲೆಂಡ್ ಗೆ ಹೋಗುವ ಕನಸು ಕಂಡಿದ್ದು!
  ರಮ್ಯಾ ರ ಕವಿತೆ ಮೋಹಕ ವರ್ಣನೆಗಳಿಂದ ಕೂಡಿದೆ. ನಮ್ಮನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಈ ಕವಿತೆಯ ಬಗ್ಗೆ ದೇಸಾಯಿಯವರು ಹೇಳಿರುವುದು ಬಹಳ ನಿಜ.
  ಸುಂದರ ಚಿತ್ರ ಆ ಕವನದ ಸಾಲುಗಳಿಗೆ ಜೊತೆಯಾಗಿ ಕಣ್ಮನಗಳನ್ನು ತಣಿಸುತ್ತಿವೆ.
  ರಮ್ಯಾ, ಗೌರಿ ಮತ್ತು ಅಮಿತಾರಿಗೆ ಅಭಿನಂದನೆಗಳು 💐💐💐

  Like

 2. ಗೌರಿಯವರ ಕಳ್ಳತನದ ಕಥೆ ಮಾಂಶಿಯ ಬಾಣಂತನದ ಕರದಂಟಿನ ಮಾಸಲೆ ಉಂಡೆಯಿಂದ ಹಿಡಿದು ಮೀಸೆ-ಗಡ್ಡದ ಅಕಬರ್ ಬೀರ್ಬಲ್ ಕಥೆಯ ವರೆಗೆ ಸಿಹಿಯಾಗಿ ಸ್ವಾರಸ್ಯ ಕಳೆದುಕೊಳ್ಳದಂತೆ ಒಯ್ಯುತ್ತದೆ. ನಾನೂ ಒಂದು ರೀತಿಯ ನರಭಕ್ಷಕ ಹುಲಿಯೇ, ಧಾರ್ವಾಡ ಫೇಢೆ ನಮ್ಮ ಬೇಟೆಯಾಗಿತ್ತು! ಅಥವಾ ಅವ್ವನ ಆದಿತ್ಯವಾರದ ರಾಮನ ಪ್ರಸಾದ. ನಿಮ್ಮ ಅಜ್ಜಿಯ ಉಂಡಿಯ ಡಬ್ಬಿಯ ಕಾವಲುಗಳಾದ ದೇವರ ಮಾಡ, ಮಡಿನೀರು, ಅಕಬರನ ಮೀರಿಸುವ ಮೀಸೆಯ ಜೊಂಡಿಗ, ಕೆಂಪಿರುವೆ, ಚೇಳು ಇವೆಲ್ಲ ಇಂಡಿಯಾನಾ ಜೋನ್ಸ್ ಕಥೆಯ“ಅಡಚಣಿ‘ ಗಳಂತಿವೆ. ಈ ಇಂಡಿಯನ್ ಹುಡುಗ-ಹುಡುಗಿಯರಿಗೆ ಅವುಗಳನ್ನು ದಾಟಲು ಕಷ್ಟವಾಗಿರಲಿಲ್ಲ ಬಿಡಿ!
  ಇನ್ನು ರಮ್ಯ ಅವರ ಸುಂದರ ಕವಿತೆ, ಬರೀ looking through rose-tinted glasses ಅಲ್ಲ, ಸಪ್ತವರ್ಣ ರಂಜಿತ ದೃಷ್ಟಿ ಮತ್ತು ಆಗಸದ ಕಾಮನ ಬಿಲ್ಲಿನ ಬಾಣಗಳ ವರ್ಣಲೇಪಿತ ಪ್ರಕೃತಿಯ ಮಿಲನದಿಂದ ಉಂಟಾದ ಅನೂಹ್ಯ ಅನುಭವವಿದ್ದಂತೆ ಕಾಣುತ್ತದೆ. ವನದೇವತೆ ಮದುಮಗಳು, ಸಮರ್ಪಣ ಭಾವದ ಹಣ್ಣೆಲೆಗಳು, ಅವೆಲ್ಲ ಹನಿನೀರಲ್ಲಿ ಪ್ರತಿಬಿಂಬಿಸುವುದು, ಹೂಮಳೆಯ ಚಪ್ಪಾಳೆ ಇವೆಲ್ಲ ಸುಂದರ ಪ್ರತಿಮೆ-ಉಪಮೆಗಳು. ಇವಲ್ಲದೆ ಮೂರು ಸಲ ಬರುವ ಹೊಳೆ ಹೊಳೆಯ ಹೊಳೆಯ ಅಂದ … ಕೊನೆಯಿಲ್ಲದೆ ಹರಿಯುತ್ತದೆ ವರ್ಣನೆ. ಅಶರೀರ ಕಾಮನ ಬಿಲ್ಲಿನ ಬಾಣಗಳು ಪ್ರಕೃತಿಗೆ ಬಣ್ಣ ಕೊಡುವ ಕಲ್ಪನೆ ಹೊಸತಲ್ಲವಾಗಿರಬಹುದು, ಆದರೆ ವಿರುದ್ಧ ದಿಕ್ಕಿನಲ್ಲಿ ಪೃಥ್ವಿಯಿಂದ ಮೇಲೆ ಏರುವ ಸುಡು ಮದ್ದಿನ ’ರಂಗೋಲಿ’ಗಳಲ್ಲಿ ಆ ಬಣ್ಣಗಳನ್ನು ಕಾಣುವ ಕಲ್ಪನೆ ಮಾತ್ರ ನನಗೆ ಹೊಸತು! ಯಾರಿಂದ ಯಾರ ಅನುಕರಣೆ?
  ಈ ವಾರದ ಎರಡೂ ಪ್ರಸ್ತುತಿ ಹೊಟ್ಟೆಯನ್ನೂ ಮನವನ್ನೂ ತಣಿಸುತ್ತವೆ. ಗೌರಿ ಮತ್ತು ರಮ್ಯ ಇಬ್ಬರಿಗೂ ಅಭಿನಂದನೆಗಳು. ಸರಿಯಾದ ಸಮಯದಲ್ಲಿ ಉಂಡೆ ಮಾಡಿ, ಚಿತ್ರಿಸಿ (ಎರಡೂ ಚಿತ್ರಗಳು) ಉಣಿಸಿದ ಸಂಪಾದಕಿಗೂ ಧನ್ಯವಾದಗಳು!

  Like

 3. ಗೌರಿ ಪ್ರಸನ್ಮ ಅವರ ಕಳ್ಳತನದ ಲೇಖನ ಓದುತ್ತಿದ್ದಂತೆ ತಮ್ಮ ಜೊತೆ ನಮ್ಮನ್ನೂ ಬಾಲ್ಯಕ್ಕೆ ಕರೆದುಕೊಂಡು ಹೋಗುತ್ತಾರೆ.

  ಅಂಟಿನುಂಡೆಯ ರುಚಿ ಒಮ್ಮೆ ಹತ್ತಿದರೆ ಅದರ ಮೋಹದಿಂದ ಹೊರಬರುವುದು ಕಷ್ಟ. ನೀವು ಕೊಟ್ಟ ನರಭಕ್ಷಕನ ಹೋಲಿಕೆ ನಗು ಉಕ್ಕಿಸುತ್ತದೆ.

  ನಾನೂ ಅಂಟಿನುಂಡೆ, ಹಚ್ಚಿದವಲಕ್ಕಿ, ಬೇಸನ್ ಉಂಡಿ, ರವಾದುಂಡಿ, ಹೆಸರಿಟ್ಟಿನ ಉಂಡಿ, ಬುಂದೇದುಂಡಿ ಕದ್ದು ಬೆಳೆದವನೇ.

  ರಮ್ಯಾ ಅವರ ಕವನ ರಮ್ಯವಾಗಿದೆ. ಯಾವುದೇ ಬೌದ್ದಿಕ ಆಡಂಬರವಿಲ್ಲದೇ ಹೊಸ ಪ್ರತಿಮೆಗಳನ್ನು ತಂದಿದೆ. ನಿಮ್ಮ ಕಾವ್ಯ ಪಯಣ ಹೀಗೇ ಮುಂದುವರಿಯಲಿ.

  – ಕೇಶವ

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.