ರೇಡಿಯೋ ಕಳ್ಳನ ಕಥೆ!

ಆತ್ಮೀಯ ಓದುಗರೇ,

ಈ ಮೊದಲು ‘ಕಳ್ಳ ಮತ್ತು ಕಳ್ಳತನದ’ ಬಗ್ಗೆ ಪ್ರಕಟವಾಗಿದ್ದ ಹಾಸ್ಯ ಲೇಖನಗಳು ನಿಮ್ಮಲ್ಲಿ ಹಲವರಿಗೆ ನಿಮ್ಮ ಜೀವನದಲ್ಲಾದ ಘಟನೆಗಳನ್ನು ನೆನಪಿಸಿದ್ದಿರಬಹುದು,ಈ ಬಾರಿಯ ಸಂಚಿಕೆಯಲ್ಲಿ ಡಾ ಲಕ್ಷ್ಮೀನಾರಾಯಣ್ ಗುಡೂರ್ ಅವರು ತಮ್ಮ ಶಾಲಾದಿನಗಳಲ್ಲಿ ನಡೆದ ಅಂಥದ್ದೇ ಒಂದು ರೋಚಕ ಘಟನೆಯನ್ನ ಸುಂದರ ಶೈಲಿಯಲ್ಲಿ ವಿವರಿಸಿದ್ದಾರೆ. ಈ ಬರಹ ನಿಮಗೂ ನಿಮ್ಮ ಜೀವನದಲ್ಲಾದ ಇಂಥ ಯಾವುದಾದರು ಘಟನೆಯನ್ನು ನೆನಪಿಸಿದರೆ ದಯಮಾಡಿ ‘ಅನಿವಾಸಿ’ ಓದುಗರೊಂದಿಗೆ ಹಂಚಿಕೊಳ್ಳಿ. ಅನಿವಾಸಿಯ ಅಕ್ಷರ ಪಾತ್ರೆ ಅಕ್ಷಯವಾಗಲಿ ಎಂಬ ಆಶಯದೊಂದಿಗೆ

– ಸಂಪಾದಕಿ 

ನಾವೂ ಕಳ್ಳನನ್ನು ಹಿಡಿದೆವುಲಕ್ಷ್ಮೀನಾರಾಯಣ ಗುಡೂರ್, ಪ್ರೆಸ್ಟನ್

ನಾನು, ಮುರಲಿ ಇಬ್ಬರೂ ಕಲಬುರ್ಗಿಯಲ್ಲಿ ಅಜ್ಜಿ-ತಾತನ ಮನೆಯಲ್ಲಿದ್ದೆವು.  ನಾನಾಗ ಹತ್ತನೆಯ ತರಗತಿಯಲ್ಲಿದ್ದೆ, ನನ್ನ ಸೋದರತ್ತೆಯ ಮಗ ಮುರಲಿ ಪಿಯುಸಿ 1ನೇ ವರ್ಷ. ನಮ್ಮ ಮನೆಯಂಗಳದಲ್ಲಿ ಹಲವಾರು ಹಣ್ಣಿನ,ಹೂವಿನ ಗಿಡಗಳು ಇದ್ದು, ಕರಿಬೇವು, ಕಿರುನೆಲ್ಲಿಕಾಯಿ, ಪಾರಿಜಾತದ ಹೂಗಳು ಇತ್ಯಾದಿ ಯಥೇಚ್ಛ ಬೆಳೆಯುತ್ತಿದ್ದವು. ನೆಲ್ಲಿಕಾಯಂತೂ ಗಿಡ ಮುಟ್ಟಿದರೆ ಸಾಕು ಆಲಿಕಲ್ಲಿನ ಮಳೆ ಬಂದಂತೆ ನಮ್ಮ ತಲೆಯ ಮೇಲೆ ಉದುರುತ್ತಿದ್ದವು. ನಮ್ಮ ಮನೆಯಿದ್ದ ಜಾಗದ ಸುತ್ತಮುತ್ತ ಹಲವಾರು ಶಾಲೆಗಳಿದ್ದು, ಹುಡುಗರು ಹೊಗುವಾಗ, ಬರುವಾಗ, ಮಧ್ಯಂತರದಲ್ಲಿ ನಮ್ಮ ಮನೆಗೆ ಬಂದು ಅಜ್ಜಿ-ತಾತನನ್ನು ಕಾಡಿ, ಬೇಡಿ ನೆಲ್ಲಿಕಾಯಿ ಆಯ್ದುಕೊಂಡೊಯ್ಯಲು ಬರುತ್ತಿದ್ದರು. ನೆಲ್ಲಿಕಾಯಿಯ ಜೊತೆಗೆ, ಪಕ್ಕದಲ್ಲಿದ ನಿಂಬೆಹಣ್ಣು, ಕರಿಬೇವನ್ನೂ ಕೆಲವರು ಹೇಳದೇ ಕೇಳದೇ ಕಿತ್ತಿಕೊಂಡು ಹೋಗುವವರೂ ಇದ್ದರು. ಆದರೂ ಅಜ್ಜಿ-ತಾತ ಯಾರಿಗೂ ಇಲ್ಲವೆಂದದ್ದು ನಾನು ನೋಡಿರಲೇ ಇಲ್ಲ; ನೀವಿಬ್ಬರೇ ಇರುವಾಗ (ಇಬ್ಬರಿಗೂ 70+ ವಯಸ್ಸು, ಅಜ್ಜಿಯ ಬೆನ್ನು ಬಗ್ಗಿ ಮುಖ ನೆಲ ಮುಟ್ಟುತ್ತಿತ್ತು) ಯಾರನ್ನೂ ಮನೆಯೊಳಗೆ ಬಿಡಬೇಡಿ ಅಂದರೂ, “ಪಾಪ ಸಣ್ಣ ಹುಡುಗ್ರು, ತಿಂತಾವ ಬಿಡು; ನಮಗೇನು ಮಾಡ್ತಾವ” ಅಂದು ನಮ್ಮನ್ನು ಸುಮ್ಮನಾಗಿಸುತ್ತಿದ್ದರು. ಬಂದವರಲ್ಲಿ ಹೆಚ್ಚಿನ ಹುಡುಗರೂ ಅಜ್ಜಿ-ತಾತನನ್ನು ಗೌರವದಿಂದಲೇ ನೋಡುತ್ತಿದ್ದರೆನ್ನಿ; ಅಷ್ಟೇ ಅಲ್ಲ, ಪರೀಕ್ಷೆಯ ಹೋಗುವ ಮುನ್ನ ಅವರಿಗೆ ನಮಸ್ಕಾರ ಮಾಡಲೂ ಎಷ್ಟೋ ಮಕ್ಕಳು ಬರುತ್ತಿದ್ದರು. ಅವರಲ್ಲಿ ಕೆಲವರು ಕೇಳಿ ನೀರು ಕುಡಿಯುತ್ತಿದ್ದರು. 46 ಡಿಗ್ರಿಯ ಬಿಸಿಲಲ್ಲಿ ಬಂದವರಿಗೆ ನೀರು ಕೊಡಲೆಂದೇ ಬೋರ್ ವೆಲ್ಲಿನಿಂದ ಒಂದು ಕೊಡ ಹೆಚ್ಚೇ ತಂದು ಇಟ್ಟಿರುತ್ತಿದ್ದೆವು.


ಇಂಥ ಒಂದು ದಿನ, ಒಬ್ಬ ಹುಡುಗ ನೀರು ಕೇಳಿ ಬಾಗಿಲಿಗೆ ಬಂದ. ಅಜ್ಜಿ ಒಳಗೆ ಹೋಗಿ ನೀರು ತಂದು ಕೊಟ್ಟರು, ಹುಡುಗ ಕುಡಿದು ಹೋದ. ನಾನು ಸಾಯಂಕಾಲ ಮನೆಗೆ ಬಂದು ರೇಡಿಯೋ ಹಾಕೋಣವೆಂದು ನೋಡಿದರೆ, ಪಡಸಾಲೆಯ ಗಣಪತಿ / ಗೌರಿ / ರೇಡಿಯೋ ಮಾಡ ಖಾಲಿ ಹೊಡೆಯುತ್ತಿದೆ! ಟಿವಿಯಿಲ್ಲದ ಆ ಕಾಲದ ಮನೆಗಳಲ್ಲಿ, ರೇಡಿಯೊ ಮನೆಯವರೆಲ್ಲರ ಏಕಮಾತ್ರ ಎಂಟರ್ಟೇನ್ಮೆಂಟ್ ಫೆಸಿಲಿಟಿ ಆಗಿದ್ದು, ಅದಿಲ್ಲದ ನಮ್ಮ ದಿನಗಳು ಓಡುವುದು ಹೇಗೆ? ನಮ್ಮ ಚಿತ್ರಗೀತೆ, ಅಭಿಲಾಷಾ ಕಾರ್ಯಕ್ರಮಗಳೂ ಇಲ್ಲ; ತಾತನ ಮೂರು ಭಾಷೆಯ ಆರು ನ್ಯೂಸುಗಳೂ ಇಲ್ಲ! ಅಜ್ಜಿಯ ವಂದನಾ ಭಕ್ತಿಗೀತೆಗಳು, ನಮ್ಮೆಲ್ಲರ ಇಷ್ಟದ ರಾತ್ರಿ 9.30ರ ನಾಟಕಗಳು, 11ರ ವರೆಗಿನ ಶಾಸ್ತ್ರೀಯ ಸಂಗೀತ – ಒಟ್ಟಿನಲ್ಲಿ ರೇಡಿಯೋ ಇಲ್ಲದ ಒಂದು ಸಂಜೆ, ಮೊನ್ನೆಯ ವ್ಹಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಗಳಿಲ್ಲದ ಸಂಜೆಯಂತಾಗಿತ್ತು.

ಆಗ ನಮ್ಮನೆಗೆ, ನಮ್ಮ ಅಜ್ಜಿಯ ತಂಗಿ ಅಕ್ಕೂ ಅಜ್ಜಿಬಂದಿದ್ದರು. ಭಾರೀ ಚಾಲಾಕಿನ ಅಜ್ಜಿ ಅವರು. ಅವರಿಗೂ ರೇಡಿಯೋ ಇಲ್ಲದ ದಿನಗಳನ್ನು ಹೇಗೆ ಕಳೆಯುವುದೋ ಅನ್ನಿಸಿಬಿಟ್ಟಿತ್ತು, ಕೆಲವೇ ಗಂಟೆಗಳ ರೇಡಿಯೋ-ವಿರಹದಲ್ಲೇ! ಸರಿ, ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ ತಯಾರಾದರು. “ಇಂದಕ್ಕಾ, ಬಾ ಇಲ್ಲಿ” ಅಂತ ಅವರಕ್ಕ, ನಮ್ಮ ಅಜ್ಜಿಯನ್ನು ಸಮನ್ ಮಾಡಿ, ಇಂಟೆರೊಗೇಶನ್ ಶುರು ಮಾಡಿದರು. ಮಧ್ಯಾನ ನಾವಿಲ್ಲದ ವೇಳೆ ಬಾಗಿಲು ತೆಗೆದಿಟ್ಟು ಮಡಿ ಅಡಿಗೆಯಲ್ಲಿ ಕೂತಿದ್ದೆಯಾ, ಹಿಂದೆ ಹೂವು ತರಲು ಹೋಗಿದ್ದೆಯಾ, ಊಟಕ್ಕೆ ಕೂತಾಗ ಬಾಗಿಲು ಹಾಕಿತ್ತೋ ಇಲ್ಲವೋ…… ಇತ್ಯಾದಿ, ಇತ್ಯಾದಿ ನಡೆಯಿತು ಸ್ವಲ್ಪ ಹೊತ್ತು. ಕೊನೆಗೂ ಅಜ್ಜಿಯಿಂದ ಮಧ್ಯಾಹ್ನ ನೆಲ್ಲಿಕಾಯಿಗೆ ಬಂದ ಹುಡುಗನಿಗೆ ನೀರು ಕೊಟ್ಟ ವಿಷಯವನ್ನು ಹೊರತೆಗೆದರು, ಅಕ್ಕೂ ಅಜ್ಜಿ. ಅಲ್ಲಿಂದ ಅವನ ಬಗ್ಗೆ ವಿವರವಾಗಿ ಪ್ರಶ್ನೆಗಳು ಶುರುವಾದವು – ಹೆಸರೇನು, ಯಾವ ಶಾಲೆ, ನೋಡಲು ಹೇಗಿದ್ದ, ಯೂನಿಫಾರ್ಮ್ ಹಾಕಿದ್ದನೋ, ಹಾಕಿದ್ದರೆ ಯಾವ ಬಣ್ಣದ್ದು ಮುಂತಾಗಿ ನಡೆಯಿತು. ಆಗ ನಮ್ಮಜ್ಜಿ ಅದುವರೆಗೂ ಮರೆತಿದ್ದ ಒಂದು ವಿಷಯ ಹೊರಬಿತ್ತು – ಆ ಹುಡುಗ ತನ್ನ ಹೆಸರು ಹೇಳಿದ್ದಲ್ಲದೇ, ತನ್ನ ಅಪ್ಪ-ಅಮ್ಮನ ಹೆಸರು, ಇರುವ ಓಣಿ ಇತ್ಯಾದಿ ಹೇಳಿ, ಅವರ ಅಪ್ಪ-ಅಮ್ಮ ತಾತಾ ಅಜ್ಜಿಯ ಪರಿಚಯದವರು ಎಂತಲೂ ಹೇಳಿಕೊಂಡಿದ್ದ (ನೆಲ್ಲಿಕಾಯಿ ಜಾಸ್ತಿ ಸಿಗುವ ಆಸೆಗೆ). ಸರಿ, ಪತ್ತೇದಾರಿಣಿ ಅಕ್ಕೂ ಅಜ್ಜಿ ಕಾಲಿಗೆ ಚಪ್ಪಲಿ ತೂರಿಸಿಕೊಂಡು ಹತ್ತಿರದ ವಿಟ್ಠಲ ಮಂದಿರಕ್ಕೆ. ಅರ್ಧ ಗಂಟೆಯಲ್ಲಿ, ಗೆಲುವಿನ ಮುಖದೊಂದಿಗೆ ವಾಪಸು ಬಂದು, ನಮ್ಮನ್ನು ಕರೆದು ಆ ಹುಡುಗನ ಹೆಸರು, ಅಡ್ರೆಸ್ಸು, ಮುಂಚೆ ಮಾಡಿದ ಕಳ್ಳತನದ ಇತಿಹಾಸ ಹೇಳಿ, ಅವನೇ ನಮ್ಮ ರೇಡಿಯೋ ಕಳ್ಳ ಅಂತ ತೀರ್ಪನ್ನೂ ಕೊಟ್ಟರು. ಮುಂದಿನ ಹಂತ ಅವನನ್ನು ಹಿಡಿತರುವುದು. ಮೊದಲು, ಪೋಲಿಸ್ ಸ್ಟೇಶನ್ನಿಗೆ ಹೋಗಿ, ನಮಗೆ ಗೊತ್ತಿದ್ದ ಒಬ್ಬ ಪೋಲಿಸರಿಗೆ ಕಂಪ್ಲೇಂಟ್ ಬರೆದು ಕೊಟ್ಟು ಬಂದೆವು. ಅವರು ಮರುದಿನ ಒಬ್ಬ ಪ್ಯಾದೆಯನ್ನು ಕಳಿಸುವುದಾಗಿ ಹೇಳಿದ ಮೇಲೆ, ಮನೆಗೆ ಬಂದು ಸುಖವಾಗಿ ಮಲಗಿದೆವು.


ಎರಡು ದಿನ ಕಳೆಯಿತು. ಪರಿಚಯದ ಪೋಲಿಸಪ್ಪ ಬಂದು, “ನಾನs ಹೋಗಿದ್ದೆನ್ರೀ, ಪಾರ (ಹುಡುಗ) ಸಿಗಲಿಲ್ಲ; ಏನ ಮಾಡ್ಲಿಕಾಗಂಗಿಲ್ಲ, ಕಾಯssಬೇಕು” ಅಂತ ಹೇಳಿದ. ಮರುದಿನಕ್ಕೆ, ನಮ್ಮ ಕಮಾಂಡರ್ ಅಕ್ಕೂಅಜ್ಜಿಯ ಸಹನೆ ಮುಗಿದು, ಕಮಾಂಡೋ ಆಕ್ಷನ್ನೇ ಸರಿ; ನಾವೇ ಹೋಗಿ ಅವನನ್ನು ಹಿಡುಕೊಂಡು ಬರೋದು ಒಳ್ಳೇದು ಅಂತ ತೀರ್ಮಾನಿಸಿದರು. ನಾನು, ಮುರಲಿ ಮತ್ತು (ಸಾಕಷ್ಟು ಗಟ್ಟಿಮುಟ್ಟಾಗಿಯೇ ಇದ್ದ) ನಮ್ಮ ಸಣ್ಣಕಾಕಾ ಎರಡು ಬೈಸಿಕಲ್ಲು ತೊಗೊಂಡು ದಂಡಯಾತ್ರೆಗೆ ಹೊರಟವರಂತೆ ಹೊರಟೆವು, ರಾತ್ರಿ 9-30 ಕ್ಕೆ. ನಾಲ್ಕೈದು ಮೈಲಿ ಸೈಕಲ್ಲು ಹೊಡೆದುಕೊಂಡು ಅವರ ಮನೆಗೆ ಹೋಗಿ, ಮಲಗಿದ್ದವರನ್ನು ಬಾಗಿಲು ಬಡಿದು ಎಬ್ಬಿಸಿದೆವು. ನಿದ್ದೆಗಣ್ಣಲ್ಲಿದ್ದವರಿಗೆ ಎಲ್ಲವನ್ನೂ ಹೇಳಿ, ಅವರಿಂದ ಮಗನನ್ನು ನಮ್ಮ ವಶಕ್ಕೆ ತೆಗೆದುಕೊಂಡು, ಮತ್ತೆ 4 ಮೈಲಿ ಸೈಕಲ್ಲು ಹೊಡೆದುಕೊಂಡು ರೇಲ್ವೆಸ್ಟೇಶನ್ ಪೋಲಿಸ್ ಸ್ಟೇಶನ್ನಿಗೆ ಹೊರಟೆವು. ನಾನು ಮತ್ತು ಮುರಲಿ ಒಂದು ಸೈಕಲ್ಲಿನ ಮೇಲೆ ಇದ್ದರೆ, ಕಳ್ಳನನ್ನು ಮುಂದೆ ಕೂರಿಸಿಕೊಂಡು ನಮ್ಮ ಕಾಕಾ ಇನ್ನೊಂದು ಸೈಕಲ್ಲಿನ ಮೇಲೆ.

ಇನ್ನೇನು ಪೋಲಿಸ್ ಸ್ಟೇಶನ್ 200 ಮೀಟರ್ ಇದೆ, ಅದುವರೆಗೂ ಆರಾಮವಾಗಿ ಕೂತಿದ್ದ ಕಳ್ಳ ಒಮ್ಮೆಲೆ ಜೋರಾಗಿ ಸೈಕಲ್ಲಿನ ಹ್ಯಾಂಡಲನ್ನು ಅಲುಗಾಡಿಸಿದ. ನಮ್ಮ ಕಾಕಾ ಅದರ ಶಾಕಿನಿಂದ ಎಚ್ಚೆತ್ತುಕೊಳ್ಳುವುದರೊಳಗೆ ಕಳ್ಳ ಹಾರಿ, ಎದುರಿನ ಗಲ್ಲಿಯೊಳಗೆ ಓಡಿದ. ನಮ್ಮ ಕಾಕಾನನ್ನು ಸೈಕಲಿನ ಹತ್ತಿರಕ್ಕೆ ಬಿಟ್ಟು, ನಾವಿಬ್ಬರೂ ಹುಮ್ಮಸ್ಸಿನಿಂದ ತೆಲುಗು ಸಿನಿಮಾದಲ್ಲಿ ಮಧ್ಯರಾತ್ರಿ ಕತ್ತಲೆಯಲ್ಲಿ (’ಶಿವಾ’ ನೆನಪಿಸಿಕೊಳ್ಳಿ) ವಿಲನ್ನುಗಳ ಹಿಂದೆ ಓಡುವ ಹೀರೊ ಮತ್ತವನ ಪ್ರಾಣಸ್ನೇಹಿತನಂತೆ, ಪ್ರಾಣದ ಹಂಗು ತೊರೆದು ಕಳ್ಳನ ಹಿಂದೆ ಓಡಿದೆವು. ಆಗ ಸಮಯ ರಾತ್ರಿಯ ಹನ್ನೆರಡು-ಹನ್ನೆರಡೂವರೆ ಇರಬೇಕು. ನಾವಿಬ್ಬರೂ ಚಿಕ್ಕ ಚಿಕ್ಕ
ಗಲ್ಲಿಗಳ ನೆಟ್ವರ್ಕಿನಲ್ಲಿ ಹದಿನೈದು-ಇಪ್ಪತ್ತು ನಿಮಿಶ ಓಡಿದೆವು. ಅವನೇನೋ ತಪ್ಪಿಸಿಕೊಂಡ. ನಾವೂ ಸ್ವಲ್ಪ ಸುಧಾರಿಸಿಕೊಳ್ಳಲು ನಿಂತೆವು. ಆಗ ನಾವಿರುವ ಜಾಗದ ಅರಿವಾಯಿತು. ಅದೊಂದು ಅಷ್ಟೇನೂ ಒಳ್ಳೆಯ ಹೆಸರಿಲ್ಲದ ಭಾಗ; ಅಲ್ಲಿ ಹಾಡುಹಗಲೇ ಆಗುತ್ತಿದ್ದ ಹೊಡೆದಾಟ, ಬಡಿದಾಟಗಳ ಸುದ್ದಿಗಳು ನೆನಪಾದವು. ನಾವು ಓಡುತ್ತಿದ್ದ ಪರಿಗೆ, ಜನ ಎದ್ದು ನಮ್ಮನ್ನೇ ಹಾಕಿ ತದುಕಬಹುದು ಅನ್ನುವ ಜ್ಞಾನೋದಯವಾಗುತ್ತಿದ್ದಂತೆ ಬಂದದ್ದರ ಎರಡು ಪಟ್ಟು ವೇಗದಲ್ಲಿ ವಾಪಸ್ಸು ಓಡಿಬಂದೆವು.
ಬದುಕಿದೆಯಾ ಬಡಜೀವವೇ ಅಂತ ಮೇನ್ ರೋಡಿಗೆ ಬಂದು ಮುಟ್ಟಿದೆವು. ನಮ್ಮ ಕಾಕಾ ಇನ್ನೂ ನಾವು ಅಂಥ ಜಾಗದಲ್ಲಿ ಕಳ್ಳನ ಹಿಂದೆ ಓಡಿಹೋದ ರೀತಿಯನ್ನು ನೋಡಿದ ಶಾಕಿನಲ್ಲೇ ಇದ್ದ! ಸೈಕಲ್ಲುಗಳನ್ನು ತಳ್ಳಿಕೊಂಡು, ಸುಧಾರಿಸಿಕೊಳ್ಳುತ್ತಾ ಬೆಳಗಿನ ಜಾವ ಎರಡಕ್ಕೆ ಮನೆಗೆ ಬಂದು ಮುಟ್ಟಿದೆವು.

ಮರುದಿನ ಬೆಳಗ್ಗೆ ಎದ್ದು ನೋಡಿದರೆ, ನಮ್ಮ ಕಮಾಂಡರ್ ಅಜ್ಜಿ ನಾಪತ್ತೆ. “ಇಂದವ್ವಾ, ನಾ ಈಗ ಬಂದೆ” ಅಂತ ಹೇಳಿ ಹೋದವರು, ಮಟಮಟ ಮಧ್ಯಾಹ್ನ ಬಂದು “ಏ ಹುಡುಗ್ರಾ, ನಡೀರಿ ನಂಜೊತಿಗೆ” ಅಂದ್ರು. ಮತ್ತೆ ರಿಕ್ಷಾ ಹತ್ತಿ 5 ಮೈಲು ಹೋಗಿ ಅಲ್ಲಿದ್ದ ಒಂದು ಸ್ಲಮ್ಮಿಗೆ ಹೋದೆವು. ದಾರಿಯಲ್ಲಿ ಅಜ್ಜಿಯ ಪತ್ತೇದಾರಿಕೆಯ ವಿವರಗಳು ತಿಳಿದವು. ಪರಿಚಯದ ಪೋಲಿಸಪ್ಪನ ಜೊತೆಗೆ ಕಳ್ಳನ ಮನೆಗೆ ಹೋಗಿ, ಅವನ ಅಪ್ಪ-ಅಮ್ಮನನ್ನು ಒಳ್ಳೆಯದಾಗಿ ಮಾತಾಡಿಸಿ, ಆ ಹುಡುಗ ಮನೆಗೆ ಒಂದು ರೇಡಿಯೊ (ಗೆಳೆಯನದೆಂದು ಹೇಳಿ) ಹಿಡಿದುಕೊಂಡು ಬಂದದ್ದನ್ನೂ, ಆ ಗೆಳೆಯನಿಗೆ ಕೊಡಲು ಹೋಗಿರುವುದನ್ನೂ ತಿಳಿದುಕೊಂಡಿದ್ದರು. ರೇಡಿಯೊ ವಾಪಸ್ಸು ಬಂದರೆ, ಕೊಟ್ಟ ಕಂಪ್ಲೇಂಟ್ ವಾಪಸ್ಸು ತೆಗೆದುಕೊಳ್ಳುವದಾಗಿ ಹೇಳಿದ ಮೇಲೆ, ಗೆಳೆಯನ ಮನೆಯ ಪತ್ತೆಯೂ ಸಿಕ್ಕಿತ್ತು. ಪೋಲಿಸಪ್ಪನನ್ನು ಬ್ಯಾಕ್ ಅಪ್ ತರಲು ಕಳಿಸಿ, ನಮ್ಮನ್ನು ಕರೆಯಲು ಮನೆಗೆ ಬಂದಿದ್ದರು. ಅಲ್ಲಿಗೆ ಅವಾಂತರ ಮುಗಿದು ರೇಡಿಯೊ ಸಿಕ್ಕಿತೆಂದೆನಲ್ಲ, ಆ ಗೆಳೆಯ ಯಾರಿಗೋ ಮಾರಿಬಿಟ್ಟಿದ್ದ. ನಮ್ಮ ಜೊತೆ ಈಗ ಪೋಲಿಸರಿದ್ದರಲ್ಲ, ಕೈಯಲ್ಲಿನ ಕೋಲಿಗಿಂತ ಸಣಕಲಾದರೇನಂತೆ, ಜೋರಿಗೇನೂ ಕಡಿಮೆಯಿರಲಿಲ್ಲ, ಹಾಗಾಗಿ ಮಾರಿದ್ದ ರೇಡಿಯೋ ಕಿತ್ತಿಕೊಂಡು
ತಂದೆವು. ಅಷ್ಟೆ ಅಲ್ಲ, ಆ ಹುಡುಗ ನಮ್ಮ ಮನೆಯ ಕಡೆಗೇನಾದರೂ ಬಂದರೆ …… ಅಂತ ಹೆದರಿಸಿಯೂ ಬಂದೆವು.

ಮತ್ತೆ, ನಮ್ಮ ಮನೆಯಲ್ಲಿ ರೇಡಿಯೋದ ಪ್ರತಿಷ್ಠಾಪನೆಯಾಯಿತು, ಗಣಪತಿ ಮಾಡದಲ್ಲಿ. ಅದರಿಂದ ಹೊಮ್ಮಿದ ಸುದ್ದಿ, ಸಂಗೀತ, ನಾಟಕಗಳು ನಮ್ಮ ಜೀವನವನ್ನು ಸಂತೋಷಮಯಗೊಳಿಸಿದವು ಎನ್ನುವಲ್ಲಿಗೆ ರೇಡಿಯೋಕಳ್ಳನ ವೃತ್ತಾಂತವು ಮುಕ್ತಾಯವಾಯಿತು.
*ಶುಭಂ*

6 thoughts on “ರೇಡಿಯೋ ಕಳ್ಳನ ಕಥೆ!

  1. ಅದ್ಭುತ ಕಥಾನಕ ಗುಡೂರ್ ಅವರಿಂದ. ಕಣ್ಣಿಗೆ ಕಟ್ಟುವಂಥ ವರ್ಣನೆ. ಒಳ್ಳೆ ಕ್ಲೈಮ್ಯಾಕ್ಸ್ ಇರುವ ಸಿನಿಮಾ ನೋಡಿದ ಹಾಗಾಯ್ತು. ನೀವೇ ಬರೆದ ಚಿತ್ರಗಳಿದ್ದರೆ ಊಟಕ್ಕೆ ತಕ್ಕ ಉಪ್ಪಿನಕಾಯಿಯಾಗುತ್ತಿತ್ತು.
    – ರಾಂ

    Like

  2. ನಿಜ. ಸೊಂಟಕ್ಕೆ ಸೆರಗು ಸಿಗಿಸೆ ದಾಪುಕಾಲು ಹಾಕುತ್ತ ಹೊರಟ ಅಜ್ಜಿಯ ಚಿತ್ರ ಕಣ್ಣಿಗೆ ಕಟ್ಟುವಂತಿದೆ. ಗುಡೂರವರ ಕಥಾಕೌಶಲ್ಯ ಈ (ದುರ್)ಘಟನೆಯನ್ನು ರಸವತ್ತಾದ ತೆಲಗು ಸಿನಿಮಾದ ಎತ್ತರಕ್ಕೆ ಒಯ್ದಿದ್ದಾರೆ! ನಡೆದಿರಬಹುದಾದ ಆ blow by blow ‘ಢುಶುಂ ಢುಶುಂ’ ಬರೀ ನಮ್ಮ ಕಲ್ಪನೆಗೆ ಬಿಟ್ಟಿದ್ದು! ನೆಲ್ಲಿಕಾಯಿ ತಿನ್ನಲು ಬಂದ ಹುಡುಗ ಚಳ್ಳೆ ಕಾಯಿ ತಿನಿಸಿ ಓಡಿದ್ದು (ಆತನ caricature ಸಹ ಚೆನ್ನಾಗಿದೆ!), ‘ಭೂಕಂಪದಲ್ಲಿ ಸಿಕ್ಕಂತೆ ನಡುಗಿದ ಪೇತಲೆ ಕಾಕಾ.. ಭಲೇ! ಶುಭಂ ಅಂತ ಮುಕ್ತಾಯ ಹೇಳುವ ತನಕ ಕುತೂಹಲ ಕಾಯ್ದುಕೊಂಡಿದೆ! ಇನ್ನು ಯಾವ ‘ಅನಿವಾಸಿ’ಯ ಮನೆಯಲ್ಲಿ/ ವಸ್ತು ಕಳುವಾಗಲಿದೆ ಅಂತ ಕುತೂಹಲದಿಂದ ಕಾಯುತ್ತಿದ್ದೇನೆ! ವತ್ಸಲಾ ಅವರ ‘ಕದ್ದ’ ಐಡಿಯಾಗೆ ಧನ್ಯವಾದಗಳು, ಸರಣಿ ಬೆಳೆಯಲಿ!

    Like

  3. ಭಾರೀ ಅದ‌ ಬಿಡ್ರಿ‌ ನಿಮ್‌ ಕತಿ. ಸಿನೆಮಾ ನೋಡಿದಂಗಾತು ನಿಮ್ಮ ವಿವರ ಓದಿ. ಆಗಿನ ಕಾಲದಾಗ ರೇಡಿಯೋ ಅಂದ್ರ ಈಗಿನ ಕಾಲದ ಲ್ಯಾಪ್-ಟಾಪ್ ಇದ್ದಂಗ. ಮನ್ಯಾಗಿನ ಅತ್ಯಂತ ಬೆಲಿಬಾಳೋ ವಸ್ತು ಅದು. ರೊಕ್ಕಾ ಕಳುವಾದರ ಗೊತ್ತಾಗಲಾರದು ಅಂದ್ರ ನಡದೀತು, ಆದರ ಮನ್ಯಾಗಿರೋ ಒಂದs ಒಂದ ರೇಡಿಯೋ ಕಳುವಾದರ ಗೊತ್ತಾಗಲಿಕ್ಕೆ ಎಷ್ಟ ಹೊತ್ತು ಬೇಕು? ಭಾಳ ಮಸ್ತ ಬರದೀರಿ.

    Liked by 1 person

  4. ರೋಮಾಂಚಕಾರಿ ರೇಡಿಯೋ ಕತೆ ಆದರೆ Cartoon ಚಿತ್ರಗಳು ಇದ್ದರೆ ಇನ್ನೂ
    ಗಮ್ಮತ್ ಆಗುತಿತ್ತು !

    Like

    • ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,ನಿಮ್ಮ ಸಲಹೆಯಂತೆ ಒಂದು ಚಿತ್ರವನ್ನು ಸೇರಿಸಿದ್ದೇವೆ – ಸಂ

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.