ಬಾಲ್ಯದ ನೆನಪುಗಳು – ಉಮಾ ವೆಂಕಟೇಶ್ ಹಾಗೂ ಸವಿತಾ ಸುರೇಶ್

ನಮಸ್ಕಾರ. ಎರಡು ವಾರಗಳ ಹಿಂದೆ `ಬಾಲ್ಯದ ನೆನಪುಗಳು` ಸರಣಿಯ ಲೇಖನಗಳು ಪ್ರಕಟವಾದಾಗ ಇವು ಈ ಸರಣಿಯ ಕೊನೆಯ ಲೇಖನಗಳು ಅಂತ ನಾನು ಬರೆದಿದ್ದು ನಿಮಗೆ ನೆನಪಿರಬಹುದು. ಆಗ ಅದಕ್ಕೆ ಕಾರಣವೂ ಇತ್ತು – ಅದಕ್ಕಾಗಿ ಬಂದಿದ್ದ ಲೇಖನಗಳ ಕಂತೆ ಖಾಲಿಯಾಗಿತ್ತು! ಆದರೆ ಆ ಸರಣಿಯಲ್ಲಿ ಬಂದ ರಸಪೂರ್ಣ ಬರಹಗಳು ಇನ್ನಷ್ಟು ಆಸಕ್ತರಲ್ಲಿ ಬರೆಯುವ ಉತ್ಸಾಹವನ್ನು ಮೂಡಿಸಿ, ಸರಣಿಯನ್ನು ಫೀನಿಕ್ಸ್ ಹಕ್ಕಿಯಂತೆ ಮತ್ತೆ ಎದ್ದು ಬರುವಂತೆ ಮಾಡಿವೆ. ಸಂಪಾದಕನಾಗಿ ನನಗೇನೋ ಸಂತೋಷವೇ, ಇನ್ನಷ್ಟು ಪ್ರಕಟಣಾ ಸಾಮಗ್ರಿ ದೊರೆಯಿತೆಂದು! ಇದೋ, ಇಲ್ಲಿವೆ ಇನ್ನೆರಡು ಬರಹಗಳು. ಉಮಾ ವೆಂಕಟೇಶ್ ನಮ್ಮನ್ನು ಮೈಸೂರಿನ ತಮ್ಮ ಶಾಲೆಗೆ ಕರೆದೊಯ್ದು ತಮ್ಮೊಬ್ಬ ತುಂಟ ಸಹಪಾಠಿಯ ಪರಿಚಯ ಮಾಡಿಸಿದರೆ, ಸವಿತಾ ಸುರೇಶ್ ಅವರು ತಮ್ಮ ಬಾಲ್ಯದ ಹವ್ಯಾಸವನ್ನು ನೆನೆಯುತ್ತಾರೆ. ಎಂದಿನಂತೆ ಓದಿರಿ, ಆನಂದಿಸಿರಿ, ಕಮೆಂಟಿಸಿರಿ ಮತ್ತೂ ನೀವೂ ಬರೆದು ನನಗೆ ಕಳುಹಿಸಿರಿ – ಎಲ್ಲೆನ್ ಗುಡೂರ್ (ಸಂ.)

ಮೈಸೂರಿನ ವಾಣಿ ವಿದ್ಯಾಮಂದಿರಉಮಾ ವೆಂಕಟೇಶ್

ನೂರೊಂದು ನೆನಪು ಎದೆಯಾಳದಿಂದ, ಲೇಖನವಾಗಿ ಬಂತು ಆನಂದದಿಂದ: ಮೈಸೂರನ್ನು ನೆನೆದೊಡನೆ ಮುದಗೊಳ್ಳುವ ನನ್ನ ಮನದಲ್ಲಿ, ಬಾಲ್ಯದ ದಿನಗಳೊಂದಿಗೆ ಬೆಸದಿರುವ ನೆನಪುಗಳು ಸಾವಿರಾರು ತರಂಗಗಳಂತೆ ಹೊರಹೊಮ್ಮುತ್ತವೆ. ಈ ನೆನಪಿನ ತರಂಗಗಳಲ್ಲಿ ಮೈಸೂರಿನ ವಾಣಿ ವಿದ್ಯಾಮಂದಿರದ ಶಾಲೆಯಲ್ಲಿ ನಾನು ಕಳೆದ ೩ ವರ್ಷಗಳೂ ಸೇರಿವೆ. ನನ್ನ ತಂದೆ ಬಳ್ಳಾರಿಯಲ್ಲಿ ಭೂಗರ್ಭಶಾಸ್ತ್ರಜ್ಞರಾಗಿದ್ದರು. ಅಲ್ಲಿನ ಕೆಲಸ ಬಿಟ್ಟು ೧೯೬೯ರಲ್ಲಿ ನಮ್ಮ ತವರೂರಾದ ಮೈಸೂರಿಗೆ ಹಿಂತಿರುಗಿ ಬಂದಾಗ ನಾನಿನ್ನೂ ೫ನೆಯ ತರಗತಿಯಲ್ಲಿದ್ದೆ. ಅಕ್ಟೋಬರ್  ತಿಂಗಳಿನಲ್ಲಿ ವಾಪಸ್ ಬಂದಿದ್ದರಿಂದ ಅದು ಮಿಡ್ ಟರ್ಮ್ ಅವಧಿ. ಯಾವ ಶಾಲೆಗಳಲ್ಲೂ ಅಷ್ಟೊಂದು ಸುಲಭವಾಗಿ ಪ್ರವೇಶ ಸಿಗುತ್ತಿರಲಿಲ್ಲ. ನನ್ನ ಅಜ್ಜನಿಗೆ ವಾಣಿ ವಿದ್ಯಾಮಂದಿರದ ನಿರ್ವಾಹಕರಾಗಿದ್ದ ದಿ. ರಂಗಸ್ವಾಮಿ ಅಯ್ಯಂಗಾರ್ ಮತ್ತು ಅವರ ಸಹೋದರಿ ಪಂಕಜಮ್ಮ ಅವರ ಪರಿಚಯವಿತ್ತು. ರಂಗಸ್ವಾಮಿ ಅಯ್ಯಂಗಾರ್ ಅವರಿಗೆ ಕಾಲೇಜಿನಲ್ಲಿ ಸಹಪಾಠಿ ಆಗಿದ್ದರೆಂದು ಹೇಳುತ್ತಿದ್ದ ನೆನಪು. ಸರಿ, ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಮ್ಮ ಮನೆ ಇತ್ತು. ಈ ಶಾಲೆಯೂ ಅಲ್ಲೇ ಹತ್ತಿರದಲ್ಲಿ ಇದ್ದರಿಂದ ನಾವು ಮೂರು ಜನ ಮಕ್ಕಳಿಗೂ ಅದೇ ಶಾಲೆಯಲ್ಲಿ ಪ್ರವೇಶ ಸಿಕ್ಕಿತ್ತು. ಶಿಸ್ತು ಮತ್ತು ಉತ್ತಮ ಶಿಕ್ಷಕಿಯರಿದ್ದ ಆ ಶಾಲೆಯಲ್ಲಿ ವಿದ್ಯಾಭ್ಯಾಸದ ಮಟ್ಟ ಚೆನ್ನಾಗಿತ್ತೆಂದು ಎಲ್ಲರೂ ಹೇಳುತ್ತಿದ್ದ ಮಾತು ನಿಜವಾಗಿತ್ತು. ನನ್ನ ತರಗತಿಯಲ್ಲಿ ಸುಮಾರು ೪೦ ಜನ ಮಕ್ಕಳಿದ್ದ ನೆನಪು. ನನಗೆ ಎಲ್ಲರ ಹೆಸರೂ ನೆನಪಿಲ್ಲ. ಆದರೆ ತರಗತಿಯಲ್ಲಿ ತನ್ನ ತುಂಟತನ, ಪುಂಡಾಟಕ್ಕೆ ಹೆಸರಾಗಿದ್ದ ಚಂದ್ರಶೇಖರನ ಹೆಸರು ಮತ್ತು ಅವನು ನಡೆಸುತ್ತಿದ್ದ ಉಡಾಳತನ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಚಂದ್ರಶೇಖರ ಎಂದೂ ತರಗತಿಯಲ್ಲಿ ಪಾಠದ ಕಡೆಗೆ ಗಮನ ಕೊಟ್ಟವನಲ್ಲ. ಹೋಮ್ ವರ್ಕ್ ಮಾಡುವ ಜಾಯಮಾನವಂತೂ ಅವನದಾಗಿರಲಿಲ್ಲ. ಸದಾ ಜೊತೆಯಲ್ಲಿದ್ದ ಹುಡುಗ-ಹುಡುಗಿಯರನ್ನು ಕೀಟಲೆ ಮಾಡುತ್ತಾ, ಅವರ ಹೋಮ್ ವರ್ಕ್ ಮತ್ತು ಪಠ್ಯಪುಸ್ತಕಗಳ ಮೇಲೆ ಇಂಕ್ ಚೆಲ್ಲಿಯೋ, ಅವರನ್ನು ಚಿವುಟುತ್ತಲೋ ಗೋಳು ಹುಯ್ದುಕೊಳ್ಳುವ ಅವನ ನಡತೆ ಹಲವೊಮ್ಮೆ ನಮಗೆಲ್ಲಾ ಪ್ರಾಣಸಂಕಟವಾಗಿತ್ತು. ಆದರೆ ತರಗತಿಯಲ್ಲಿ ಟೀಚರ್ ಕೇಳುವ ಪ್ರಶ್ನೆಗಳಿಗೆ ಅವನು ನೀಡುತ್ತಿದ್ದ ಉತ್ತರದ ವೈಖರಿ ಹಲವು ಬಾರಿ ಇಡೀ ಕ್ಲಾಸಿನಲ್ಲಿ ನಗೆಯ ಬುಗ್ಗೆಯನ್ನೆಬ್ಬಿಸುತ್ತಿತ್ತು. ಒಮ್ಮೆ ನಮ್ಮ ಕನ್ನಡ ಟೀಚರ್ ಸುಬ್ಬುಲಕ್ಷ್ಮಿ, “ಲೋ ಚಂದ್ರಶೇಖರ, ಸಂಧಿ ಎಂದರೇನೋ?” ಎಂದು ಪ್ರಶ್ನಿಸಿದ್ದಾಗ, ಅವನು ಸಲೀಸಾಗಿ “ಟೀಚರ್, ನಮ್ಮ ಮನೆ ಮತ್ತು ಪಕ್ಕದ ಮನೆಯ ಕಾಂಪೋಂಡ್ ಮಧ್ಯೆ ಇರುವ ತೂತಿಗೆ ಸಂಧಿ ಎನ್ನುತ್ತಾರೆ” ಎಂದು ತನ್ನ ವಿದ್ವತ್ತನ್ನು ಮೆರೆದಿದ್ದ! ಯಾವ ವಿಷಯದ ಟೆಸ್ಟಿನಲ್ಲೂ ಅವನಿಗೆ ಒಂದಂಕಿಯಲ್ಲದೇ ಹೆಚ್ಚಿನ ಮಾರ್ಕ್ ದೊರಕುತ್ತಿರಲಿಲ್ಲ. ಇಷ್ಟಾದರೂ ಅವನೇನೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಸದಾ ಹಸನ್ಮುಖಿಯಾಗೇ ತನ್ನ ದಿನನಿತ್ಯದ ತುಂಟಾಟಗಳನ್ನು ಮುಂದುವರೆಸುತ್ತಿದ್ದ ಅವನನ್ನು ಕಂಡು ಅನೇಕ ಬಾರಿ ಬೆರಗಾಗುತ್ತಿದ್ದೆವು. ನಮ್ಮ ಶಾಲೆಯ ಮುಖ್ಯೋಪಾಧ್ಯಾಯಿನಿ ಪಂಕಜಮ್ಮ ನಮ್ಮ ಇಂಗ್ಲೀಷ್ ಟೀಚರ್. ಬಹಳ ದರ್ಪ ಮತ್ತು ಶಿಸ್ತಿನ ಮಹಿಳೆ. ೬೦-೭೦ರ ದಶಕದಲ್ಲಿ, ಶಾಲೆಯ ಪುಸ್ತಕಗಳನ್ನು ಇಟ್ಟುಕೊಳ್ಳಲು ಹೊಸದಾಗಿ ಆಲುಮಿನಿಯಮ್ ಪೆಟ್ಟಿಗೆಗಳು ಮಾರುಕಟ್ಟೆಗೆ ಬಂದಿದ್ದವು. ಸರಿ ಮಧ್ಯಮ ವರ್ಗದ ಮನೆಯ ಮಕ್ಕಳ ಕೈಯಲ್ಲಿ ಈ ಆಲುಮಿನಿಯಮ್ ಪೆಟ್ಟಿಗೆಗಳು ರಾರಾಜಿಸಲಾರಂಭಿಸಿತ್ತು. ನಮ್ಮ ತಂದೆ ನಮ್ಮ ಮನೆಯಲ್ಲಿ ಮೂವರಿಗೂ, ನಮ್ಮ ಹೆಸರನ್ನು ಕೆತ್ತಿಸಿ ಮೂರು ಪೆಟ್ಟಿಗೆ ಖರೀದಿಸಿ ಕೊಟ್ಟಿದ್ದರು. ಅದನ್ನು ಶಾಲೆಗೆ ಒಯ್ಯುವುದೇ ನಮಗೆ ಒಂದು ಹೆಮ್ಮೆಯ ಕೆಲಸ. ಸರಿ ಹುಡುಗಿಯರು ಶಿಸ್ತಾಗಿ ಈ ಪೆಟ್ಟಿಗೆ ಹಿಡಿದು ಬರುತ್ತಿದ್ದದ್ದನ್ನು ಕಂಡ ಚಂದ್ರಶೇಖರನ ಕಣ್ಣುಗಳಿಗೆ ಇದು ಸಹನವಾಗಲಿಲ್ಲ. ನನ್ನ ಸಹಪಾಠಿ ಜಯಶ್ರೀಯ ಪೆಟ್ಟಿಗೆ ಅವನ ದಾಳಿಗೆ ತುತ್ತಾಯಿತು. ಅವಳ ಕೈಯಿಂದ ಪೆಟ್ಟಿಗೆ ಕಿತ್ತುಕೊಡದ್ದಲ್ಲದೇ, ಇದೇನು ಈ ಹಜಾಮನ ಪೆಟ್ಟಿಗೆ ತಂದಿದ್ದೀಯಾ ಎಂದು ಅಣಕಿಸಿದಾಗ, ಅವಳ ಕಣ್ಣಿನಲ್ಲಿ ಗಂಗಾ-ಕಾವೇರಿಯ ಧಾರೆಯೇ ಹರಿಯಿತು. ಸರಿ, ಪಂಕಜಮ್ಮ ಅವರಿಗೆ ದೂರು ತಲುಪಿತು. ಸಿಟ್ಟಿನಿಂದ ಕೆಂಡಾಮಂಡಲವಾದ ಆಕೆ, ಕೈಯ್ಯಲ್ಲಿ ದೊಡ್ಡ ರೂಲರ್ ಝಳಪಿಸುತ್ತಾ, ತಮ್ಮ ದೊಡ್ಡ ದರ್ಪದ ಧ್ವನಿಯಲ್ಲಿ, “ಭಡವಾ, ಸರಸ್ವತಿ ಇಟ್ಟು ತರುವ ಪೆಟ್ಟಿಗೆಯನ್ನು, ಹಜಾಮನ ಪೆಟ್ಟಿಗೆಗೆ ಹೋಲಿಸುತ್ತೀಯಾ” ಎಂದು ಘರ್ಜಿಸುತ್ತಾ, ಚಂದ್ರಶೇಖರನ್ನು ಬೆಂಚಿನ ಮೇಲೆ ನಿಲ್ಲಿಸಿದರು. ಅಲ್ಲೇ ಅಳುತ್ತಾ ನಿಂತಿದ್ದ ಜಯಶ್ರೀಯನ್ನು ಕರೆದು, ಅವನ ಎರಡೂ ಕೆನ್ನೆಗೆ ಹೊಡೆಯಲು ಆಣತಿ ಇತ್ತರು. ಮೊದಲು ಸ್ವಲ್ಪ ಹಿಮ್ಮೆಟ್ಟಿದ ಜಯಶ್ರೀ, ತನ್ನ ಪೆಟ್ಟಿಗೆಗಾದ ಅವಮಾನ ನೆನಪಾಗಿ ಧೈರ್ಯಮಾಡಿ ಅವನ ಕೆನ್ನೆಗೆ ಹೊಡೆದಾಗ ಅದನ್ನು ಸ್ವಲ್ಪ ಭಯದಿಂದಲೇ ನೋಡುತ್ತಿದ್ದ ನಮಗೆ, ಸರಿ ಇನ್ನು ಚಂದ್ರಶೇಖರನ ಪುಂಡಾಟ ಅವತ್ತಿಗೆ ಮುಗಿಯಿತು ಎಂದು ನಿಟ್ಟುಸಿರಿಟ್ಟೆವು.

ವ್ಯಂಗ್ಯಚಿತ್ರ: ಲಕ್ಷ್ಮೀನಾರಾಯಣ ಗುಡೂರ್

ಆದರೆ, ಅಂದು ಶಾಲೆ ಮುಗಿಸುವವರೆಗೂ ಸ್ವಲ್ಪ ಮಂಕಾಗಿದ್ದ ಚಂದ್ರಶೇಖರ ಮನೆಗೆ ಹೊರಟಾಗ ಎಂದಿನಂತೆ ತನ್ನ ನಿತ್ಯಶೈಲಿಯಲ್ಲಿ ಇತರ ಹುಡುಗರನ್ನು ರಸ್ತೆಯಲ್ಲಿ ಗೋಳುಹುಯ್ದುಕೊಳ್ಳುತ್ತಿದ್ದ. ನಾನು, ನನ್ನ ಅಕ್ಕ ಅದನ್ನು ನೋಡಿದಾಗ, ಇದೇನು ಇವನಿಗೆ ಮನೆಯಲ್ಲಿ ತಂದೆ-ತಾಯಿ ಯಾವ ಕ್ರಮವನ್ನೂ ಕೈಗೊಳ್ಳದೆ ಒಳ್ಳೆ ಬೀದಿ ಬಸವನಂತೆ ಬಿಟ್ಟಿದ್ದಾರಲ್ಲ ಎಂದು ತಲೆಕೆಡಿಸಿಕೊಂಡಿದ್ದೆವು. ಹೀಗೆ ೩ ವರ್ಷ ಕಳೆದು ನಾವೆಲ್ಲಾ ೭ನೆಯ ತರಗತಿಗೆ ಕಾಲಿಟ್ಟೆವು. ಅದೇ ಕೊನೆಯ ವರ್ಷ. ಆಗೆಲ್ಲ ೭ನೆಯ ತರಗತಿಯ ಕೊನೆಯಲ್ಲಿ ಪಬ್ಲಿಕ್ ಪರೀಕ್ಷೆ ಇತ್ತು. ಅದು ನಮ್ಮ ಜೀವನದ ಮೊದಲ ದೊಡ್ಡ ಪರೀಕ್ಷೆ. ಹಾಗಾಗಿ ಮೊದಲಿನಿಂದಲೇ ಸ್ಪೆಶಲ್ ಕ್ಲಾಸಿನ ಕಾಟ. ಇದ್ದಕ್ಕಿದ್ದ ಹಾಗೆ ಚಂದ್ರಶೇಖರನ ನಡವಳಿಕೆಯಲ್ಲಿ ಬದಲಾವಣೆ ಕಾಣಿಸಲಾರಂಭಿಸಿತ್ತು. ಬಹುಶಃ ಪಂಕಜಮ್ಮ ಅವನ ತಂದೆ-ತಾಯಿಯರನ್ನು ಕರೆಸಿ, ಅವರಿಗೆ ultimate warning ಕೊಟ್ಟಿದ್ದರೇನೋ ಅನ್ನಿಸುತ್ತೆ. ಕ್ಲಾಸಿನಲ್ಲಿ ಗಂಭೀರವಾಗಿ ಕುಳಿತು ಪಾಠದ ಕಡೆಗೆ ಗಮನವೀಯುತ್ತಿದ್ದ ಚಂದ್ರಶೇಖರನಿಗೆ ಟೆಸ್ಟುಗಳಲ್ಲಿ ಸ್ವಲ್ಪ ಡೀಸೆಂಟ್ ಆಗಿ ಮಾರ್ಕುಗಳೂ ಬರಲಾರಂಭಿಸಿತ್ತು. ಅವನ ತುಂಟಾಟಗಳೂ ಹೆಚ್ಚುಕಡಿಮೆ ನಿಂತಿದ್ದವು. ಆದರೂ ಹಲವೊಮ್ಮೆ ಹುಡುಗಿಯರ ಜಡೆ ಎಳೆಯುವ ಚಟುವಟಿಕೆ ಮುಂದುವರೆದಿತ್ತು. ಶಾಲೆಯ ಕಡೆಯ ಟರ್ಮ್ ಶುರುವಾದಾಗ, ಸ್ಪೆಶಲ್ ಕ್ಲಾಸಿನ ಹಾವಳಿ ಹೆಚ್ಚಿ, ಅವನೂ ತಣ್ಣಗಾದ. ಪಬ್ಲಿಕ್ ಪರೀಕ್ಷೆಯಲ್ಲಿ ಅವನು ೪೦% ಮಾರ್ಕ್ ಬಂದು ಪಾಸಾಗಿದ್ದ ಎಂದು ತಿಳಿದಾಗ, ನಮಗೆಲ್ಲಾ ಸ್ವಲ್ಪ ಆಶ್ಚರ್ಯವಾಗಿತ್ತು. ಚಂದ್ರಶೇಖರನ ಯಶಸ್ಸಿಗೆ ನಮ್ಮ ಹಲವಾರು ನಮ್ಮ ಟೀಚರುಗಳ ಮುತುವರ್ಜಿ ಬಹುಶಃ ಕಾರಣವಾಗಿತ್ತು. ಶಾಲೆಯ ಕಡೆಯ ಸಮಾರಂಭ ಬೀಳ್ಕೊಡುಗೆಯ ದಿನ, ಅವನೂ ತನ್ನ ಆಟೋಗ್ರಾಫ್ ಎಲ್ಲರ ಮುಂದಿಟ್ಟಾಗ, ನಾವು ಅವನ ಹಿಂದಿನ ತುಂಟಾಟ ಪುಂಡಾಟವನ್ನು ಮರೆತು ಅದರಲ್ಲಿ Best Wishes ಬರೆದದ್ದು ಇಂದಿಗೂ ನನ್ನ ನೆನಪಿನಲ್ಲಿ ಹಸಿರಾಗಿದೆ. ವಾಣಿ ವಿದ್ಯಾ ಮಂದಿರ ಬಿಟ್ಟ ನಂತರ ನನ್ನ ಹೈಸ್ಕೂಲಿನ ದಿನಗಳಲ್ಲಿ ನಾನೆಂದೂ ಚಂದ್ರಶೇಖರನನ್ನು ನೋಡಲೇ ಇಲ್ಲಾ. ಅವನು ಎಲ್ಲಿ ತನ್ನ ಹೈಸ್ಕೂಲ್ ವಿದ್ಯಾಭ್ಯಾಸ ಮುಂದುವರೆಸಿದ ಎನ್ನುವ ಮಾಹಿತಿಯೂ ನನಗೆ ಸಿಗಲಿಲ್ಲ. ನನ್ನ ಶಾಲೆಯ ದಿನಗಳ ನೆನಪಾದಾಗಲೆಲ್ಲ, ಚಂದ್ರಶೇಖರ ಸುಳಿಯುತ್ತಿರುತ್ತಾನೆ. ಇತ್ತೀಚೆಗೆ ನನ್ನ ಅಕ್ಕನ ಕೈಯಲ್ಲಿ ಮಾತಾನಾಡುವಾಗ, ವಾಣಿ ವಿದ್ಯಾ ಮಂದಿರದ ಬಗ್ಗೆ ಮಾತನಾಡಿದ್ದೆವು. ಆಗಲೂ ಚಂದ್ರಶೇಖರ ನಮ್ಮ ಸಂಭಾಷಣೆಯಲ್ಲಿ ಸುಳಿದು ನಾವಿಬ್ಬರೂ ಅವನ ತುಂಟಾಟವನ್ನು ನೆನೆಸಿಕೊಂಡು ನಕ್ಕಿದ್ದೆವು. ಬಾಲ್ಯದ ಆಟ, ಆ ಹುಡುಗಾಟ ಇನ್ನೂ ನಮ್ಮ ನೆನಪಿನಿಂದ ಮಾಸಿಲ್ಲ. ಇಂದು ಚಂದ್ರಶೇಖರ ನಮ್ಮಂತೆಯೇ ಸಂಸಾರಿಯಾಗಿ ಮಕ್ಕಳು-ಮೊಮ್ಮಕ್ಕಳೊಂದಿಗೆ ಜೀವನ ನಡೆಸುತ್ತಿರಬೇಕು.

– ಉಮಾ ವೆಂಕಟೇಶ್

***************************************************************

ನೆನಪಿನ ನೀರೆ – ಸವಿತ ಸುರೇಶ್

ಅಮ್ಮಮ್ಮ, ದೊಡ್ಡಮ್ಮ ಹಾಗು ಅಮ್ಮ ಹಾಕುತ್ತಿದ್ದ ಕಸೂತಿ ಕೆಲಸವನ್ನು ನೋಡುತ್ತಿದ್ದ ನನಗೆ ಕಸೂತಿ ಎಂದರೆ ಆಸಕ್ತಿ ಇತ್ತು. ಆದರೆ ಹಾಕಲು ಬಿಡುತ್ತಿರಲಿಲ್ಲ. ಏಕೆಂದರೆ ಸೂಜಿ ಕೈಗೆ ಬಹಳಷ್ಟು ಬಾರಿ ಚುಚ್ಚಿಕೊಂಡಿದ್ದೆ.

ಹಾಗಾಗಿ ೭ನೇ ತರಗತಿ ಯಲ್ಲಿ ಓದುತಿದ್ದಾಗ ನಮ್ಮ ಶಾಲೆಯಲ್ಲಿ ಕಸೂತಿ ಕಕ್ಷವಿತ್ತು. ಹೇಗಾದರೂ ಮಾಡಿ ಕಸೂತಿ ಹಾಕಲೇಬೇಕೆಂದು ನಿರ್ಧರಿಸಿ, ಅಮ್ಮನಿಗೆ ಗೊತ್ತಾಗದಂತೆ ಶಾಲೆಯಲ್ಲೇ ಕುಳಿತು ಹಾಕಿದಂತ ಕಸೂತಿ.ಬಹಳಷ್ಟು ಬಾಲ್ಯದ ಮುಗ್ಧ ನೆನಪಾಗುತ್ತದೆ.

ಕಸೂತಿ ಕಲಿಸುತ್ತಿದ್ದ ನಮ್ಮ Work Experience ಶಿಕ್ಷಕಿಯಾದ ಜಯಲಕ್ಷ್ಮಿ ಮಿಸ್. ನಾವು ಮಕ್ಕಳೆಲ್ಲ ಸೇರಿ ಆಡುತ್ತಿದ್ದ ಕೊಟ್ಟಡಿ; ನಾನು ‘ಕನ್ನಡ ಪ್ರಭ ‘ ದಿನಪತ್ರಿಕೆಯಿಂದ ಮುಖ್ಯಾಂಶಗಳನ್ನು ಆಯ್ದು  ಬರೆಯುತ್ತಿದ್ದ ಬೋರ್ಡ್; ಮಧ್ಯಾಹ್ನ ಊಟದ ಸಮಯದಲ್ಲಿ ನಾವು ಸ್ನೇಹಿತರೆಲ್ಲರೂ ಪರಸ್ಪರ ಡಬ್ಬಿಯ ಊಟವನ್ನು ಹಂಚಿಕೊಂಡು ಹರಟೆ ಹೊಡೆಯುತ್ತಿದ್ದ ಜಗುಲಿ; ಬೆಲ್ ಹೊಡೆದರೆ attender ಚಿಕ್ಕಣ್ಣ ನಮ್ಮನ್ನೆಲ್ಲಾ ಕೊಟ್ಟಡಿಗೆ ಓಡಿಸುತ್ತಿದ್ದ ಸನ್ನಿವೇಶ….. ಇನ್ನೂ ಅದೆಷ್ಟೋ!!!!!!.

ಒಂದು painting ತೆಗೆದುಕೊಂಡು ಹಾಕಿದ್ದ ಕಸೂತಿ ಇದು. ಜಯಲಕ್ಷ್ಮಿ ಮಿಸ್ ಯಿಂದ ‘ V Good’ ಎಂದು ಕೆಂಪು ಶಾಹಿಯಲ್ಲಿ ಬಿದ್ದ ಸಹಿ ಮನಸ್ಸಿಗೆ ಏನೋ ಸಾಧಿಸಿದ ಹಾಗೆ ಪರಮಾನಂದ.

ನಂತರ ಮನೆಗೆ ಬಂದು ಅಮ್ಮನಿಗೆ ತೋರಿಸಿ ಶಭಾಷ್ ಎಂದು ಪ್ರಶಂಸೆ ಪಡೆದ್ದದ್ದು. ಈ ಕಸೂತಿ ಹಾಕಿ  ೩೨ ವರ್ಷಗಳಾದರೂ, ಹಾಕಿದ ಸಂದರ್ಭ, ಛಲ, ಶ್ರದ್ಧೆ, ಬಾಲ್ಯದ ನೆನಪುಗಳು ಹಾಗೆ ಅಚ್ಚಹಸಿರಾಗಿಯೇ ಉಳಿದಿದೆ ಏಕೆಂದರೆ ಇದನ್ನು ನಾನು frame ಹಾಕಿ ನನ್ನ ಕೋಣೆಯಲ್ಲೇ ಇಟ್ಟಿದ್ದೇನೆ!!!!!!!!!!

✍ಸವಿತ ಸುರೇಶ್

******************************************************************

7 thoughts on “ಬಾಲ್ಯದ ನೆನಪುಗಳು – ಉಮಾ ವೆಂಕಟೇಶ್ ಹಾಗೂ ಸವಿತಾ ಸುರೇಶ್

 1. ಪ್ರಸಾದ್ ಅವರೇ ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ನಮ್ಮ ಸಮಯದಲ್ಲಿ ಸಂಪನ್ಮೂಲಗಳ ಕೊರತೆ ಇತ್ತು. ಯಾವ ವಸ್ತುಗಳು ಅಷ್ಟು ಸುಲಭವಾಗಿ ದಕ್ಕುತ್ತಿರಲಿಲ್ಲ.
  Uma

  Like

 2. ಉಮಾ ಮತ್ತು ಸವಿತಾ ಅವರ ಬರಹಗಳು ಮತ್ತೆ ನಮ್ಮನ್ನ್ನೂ ಬಾಲ್ಯಕ್ಕೆ ಕರೆದುಕೊಂಡು ಹೋಗುತ್ತವೆ. `ಚಂದ್ರಶೇಖರ`ರಂಥವರು ಪ್ರ್ತಿ ಕ್ಲಾಸಿನಲ್ಲಿ ಒಬ್ಬರಾದರೂ ಇದ್ದೇ ಇರುತ್ತಾರೆ. ಕಸೂತಿ ಕಲೆಯ ಬಗ್ಗೆ ಸವಿತಾ ಅವರ ಬಾಲ್ಯದ ನೆನಪು ಕಸೂತಿಯಂತಿದೆ. – ಕೇಶವ

  Like

 3. ಉಮಾ ಅವರೇ
  ಚಂದ್ರ ಶೇಖರನ ಪುಂಡಾಟದ ಪ್ರಸಂಗ ಮತ್ತು ಪೆಟ್ಟಿಗೆ ನೆನಪು ಸ್ವಾರಸ್ಯಕರವಾಗಿದೆ. ಬಾಲ್ಯದಲ್ಲಿ ನಾವು ದಕ್ಕಿಸಿಕೊಂಡ ಪೆಟ್ಟಿಗೆ, ಜಾಮೆಟ್ರಿ ಬಾಕ್ಸ್ , ಪೆನ್ನು ಗಳು ಸರಳವಾದರೂ ನಮ್ಮ ಮನಸ್ಸಿನಲ್ಲಿ ಉಳಿಯುವಂಥದು. ಮಕ್ಕಳಾಗಿ ನಾವು ಕೇಳಿದ್ದೆಲ್ಲಾ ಸಿಗುವುದಾದರೆ ಅದಕ್ಕೆ ಬೆಲೆ ಇರುತ್ತಿರಲಿಲ್ಲ . ಇಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಬರ್ತ್ ಡೇ , ಕ್ರಿಸ್ಮಸ್ ಈ ನೆಪದಲ್ಲಿ ಬಯಸಿದ್ದೆಲ್ಲಾ ಮುಂಚಿಗಿಂತ ಸುಲಭವಾಗಿ ದೊರೆಯುವುದರಿಂದ ಮುಂಚಿನ ನಾವೆಲ್ಟಿ ಬಹುಶ ಇರಲಾರದು . ಕೊಳ್ಳುಬಾಕತನ ( Consumerism) ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾಗೆ ಅಮೆಜಾನ್ ಪ್ರೈಮ್ ತಾಣ ಬಯಸಿದ್ದನು ಮರು ದಿವಸವೇ ಮನೆಗೆ ತಲುಪಿಸುವ ಅವಕಾಶ ಇರುವಲ್ಲಿ , ಬಹುಶ ಹಿಂದಿನ ಖುಷಿ ಮತ್ತು ಆಕರ್ಷಣೆಗಳು ಇಂದು ಕಂಡುಬರುವುದಿಲ್ಲ ಎಂಬುದು ನನ್ನ ಅನಿಸಿಕೆ. ಇತ್ತೀಚಿನ ಮಕ್ಕಳ ಬೇಡಿಕೆಗಳು ಬಹಳಷ್ಟು ಬದಲಾಗುತ್ತಾ ಸಾಗಿದೆ. ಎಕ್ಸ್ ಬಾಕ್ಸ್ (Ex box) ಸ್ಕೂಲ್ ಪೆಟ್ಟಿಗೆಗಿಂತ ಬೇಡಿಕೆಯಲ್ಲಿರುವ ವಸ್ತುವಾಗಿರಬಹುದು. ಅಂದಹಾಗೆ ನಿಮ್ಮ ಸಹಪಾಠಿ ಅಮೇರಿಕದ ಮುಂದಿನ ಅಕ್ಕ ಸಮ್ಮೇಳನದಲ್ಲಿ ನಿಮನ್ನು ಭೇಟೆಯಾಗಬಹುದೆಂದು ನನ್ನ ಅಂತರಂಗವು ಹೇಳುತ್ತಿದೆ 🙂
  ಅವನು ಅಮೇರಿಕ ನಿವಾಸಿಯಾಗಿದ್ದರೆ ಅದು ಸೋಜಿಗವೇನಲ್ಲ . ಇಲ್ಲದಿದ್ದಲ್ಲಿ ಒಂದು ದಿನ ನಿಮ್ಮ ಶಾಲಾ ವಾಟ್ಸ್ ಆಪ್ ಗುಂಪಿನಲ್ಲಿ ಅವನು ಕಾಣಿಸಿಕೊಳ್ಳಬಹುದು, ನೋಡೋಣ.

  ಸವಿತಾ ನಿಮ್ಮ ಕಸೂತಿ ಕಲೆ ಸುಂದರವಾಗಿದಿ, ಉತ್ತಮವಾದ ಹವ್ಯಾಸ , ಮುಂದುವರೆಯಲಿ

  Prasad

  Liked by 1 person

 4. ಅನಿವಾಸಿ ಯ ಈ ಬಾಲ್ಯದ ನೆನಪುಗಳು -;ಈ ಸರಣಿ ತುಂಬಾ ಇಷ್ಟದ ಓದು ನಂಗೆ.ನಮ್ಮನ್ನೂ ಅಲ್ಲೇ ಒಯ್ದು ನಿಲ್ಲಿಸಿ ಮುದ ನೀಡುತ್ತವೆ, ಅರಿಯದೇ ಒಂದು ನಗು ಹರಿದು ಬರುತ್ತದೆ.
  ಉಮಾ ವೆಂಕಟೇಶ್ ಅವರ ನೆನಪಿನ ಚಂದ್ರಶೇಖರ್ ಒಬ್ಬ ನನ್ನ ನೆನಪಲ್ಲೂ ಸುಳಿದ.ತುಂಬ ಪುಂಡ, ಉಡಾಳನಾತ. ಆತನ್ನ ನಮ್ಮ ತಂದೆ (ಅವರು ಅದೇ ಸ್ಕೂಲ್, ಜ್ಯೂನಿಯರ್ ಕಾಲೇಜಿನಲ್ಲಿ ಲೆಕ್ಚರರ್ ಇದ್ದದ್ದು) ಕರೆದು ” ಹಾಗೆಲ್ಲ ಹೆಣ್ಣು ಮಕ್ಕಳನ್ನ ಪೀಡಿಸಬೇಡ ” ಅಂತ ಹೇಳಿದಾಗ” ಇಲ್ಲಾ ಸರ್ , ನಿಮ್ಮ ಮಗಳಿಗೆ (ನನಗೆ) ನಾ ಕಾಡಿಸಿಲ್ಲ” ಅಂದ.ಅದಕ್ಕೆ ನಮ್ಮ ತಂದೆ ” ಇಲ್ಲಿನ ಎಲ್ಲರೂ ನನ್ನ ಮಕ್ಕಳೇ” ಅಂದ್ರು.ಸುಮ್ಮನಿದ್ದ ಆತ ಮಾರನೇ ದಿನ ನಾ ಕ್ಲಾಸ್ ನಲ್ಲಿ ಸೀರೀಯಸ್ಸಾಗಿ ಪಾಠ ಕೇಳ್ತಾ ಕೂತಾಗ ಯಾವುದೇ ಹಿಂಜರಿಕೆ, ಹೆದರಿಕೆ ಇಲ್ಲದೇ ಬಂದು ನನ್ನ ಮುಖಕ್ಕೇ ನೇರವಾಗಿ ಕಾಗದದ ರಾಕೆಟ್ ಎಸೆದು ಹೋದ ಗತ್ತು ನೆನಪಾಯ್ತು ನಂಗೆ ಇದನ್ನು ಓದಿದಾಗ.ಆಗ ನಾ ಬೆರಗು, ಹೆದರಿಕೆ ಯಿಂದ ಗರಬಡಿದು ಕುಳಿತದ್ದು ನೆನೆದು ಈಗ ನಗು ಬಂತು ನಂಗೆ.ಬಹುಶ: ಈ ಚಂದ್ರಶೇಖರ ಸಂತತಿ ಎಲ್ಲಾ ಕಡೆ ಇದ್ದೇ ಇದೆ ಏನೋ.
  ಸವಿತಾ ಸುರೇಶರ ಕಸೂತಿ ತುಂಬ ಸುಂದರ.ನನಗೂ ಇದು ತುಂಬ ಮೆಚ್ಚಿನ ಹವ್ಯಾಸ. ನಮಗೆ ಸ್ಕೂಲ್ ನಲ್ಲಿ ಹೊಲಿಗೆ ಇತ್ತು.ಆದರೆ ಕಸೂತಿ ಇರಲಿಲ್ಲ.ಆದರೆ ನನ್ನ ಅಜ್ಜಿ ಕಸೂತಿ (ಗದುಗಿನ ಸೀರೆ ಪ್ರಸಿದ್ಧ ಈ ಕಸೂತಿ ಗೆ)
  ಪ್ರವೀಣೆ.ಆಕೆ ಕಡೆ ಕಲಿತಿದ್ದು ನಾ.ನನ್ನಮ್ಮ ಹ್ಯಾಂಡ್ ಎಂಬ್ರಾಯ್ಡರಿ ಕಲಿಸಿದ್ದು.ಬೇಸಿಗೆ ರಜೇಲಿ ಇದೇ ಕೆಲಸ ನಂದು. ಸವಿತಾ ಅವರ ಥರಾ ಸೂಜಿ ಚುಚ್ಚಿ ಕೊಂಡು ನರಳಿದ್ದೂ ಉಂಟು.
  ತಮ್ಮ ಸುಂದರ ನೆನಪುಗಳನ್ನ ಬರೆದು ನನ್ನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದ ಉಮಾ ವೆಂಕಟೇಶ್ ಹಾಗೂ ಸವಿತಾ ಸುರೇಶ ಅವರಿಗೆ ಅಭಿನಂದನೆಗಳೊಂದಿಗೆ ಧನ್ಯವಾದಗಳು.
  ಸರೋಜಿನಿ ಪಡಸಲಗಿ

  Liked by 1 person

 5. ನೆನಪುಗಳನ್ನು ಕಟ್ಟಿ, ಪೋಣಿಸಿದ ಶೈಲಿ ಬಹಳ ಇಷ್ಟವಾಯಿತು. ಪದಗಳ ಮಧ್ಯೆ ಮೂಡಿಬಂದಿರುವ
  ವಂಗ್ಯ ಚಿತ್ರವು ಕಣ್ಮನ ಸೆಳೆಯುವುದು. ಶುಭವಾಗಲಿ ಹೀಗೆ ಪದ ಕಟ್ಟುವ ಕಸೂತಿ ಮುಂದೆ ಸಾಗಲಿ.
  ಕೆ.ಎಲ್.ವಿ
  ನಟ,ನಿರ್ದೇಶಕ, ಕವಿ, ನಾಟಕಗಾರ,ಕನ್ನಡ ಅಧ್ಯಾಪಕ.
  7760740251,

  On 4 Dec 2020 7:00 am, “ಅನಿವಾಸಿ – ಯು.ಕೆ ಕನ್ನಡಿಗರ ತಂಗುದಾಣ” wrote:

  > Ln Gudur posted: ” ನಮಸ್ಕಾರ. ಎರಡು ವಾರಗಳ ಹಿಂದೆ `ಬಾಲ್ಯದ ನೆನಪುಗಳು` ಸರಣಿಯ
  > ಲೇಖನಗಳು ಪ್ರಕಟವಾದಾಗ ಇವು ಈ ಸರಣಿಯ ಕೊನೆಯ ಲೇಖನಗಳು ಅಂತ ನಾನು ಬರೆದಿದ್ದು ನಿಮಗೆ
  > ನೆನಪಿರಬಹುದು. ಆಗ ಅದಕ್ಕೆ ಕಾರಣವೂ ಇತ್ತು – ಅದಕ್ಕಾಗಿ ಬಂದಿದ್ದ ಲೇಖನಗಳ ಕಂತೆ
  > ಖಾಲಿಯಾಗಿತ್ತು! ಆದರೆ ಆ ಸರಣಿಯಲ್ಲಿ ಬಂದ ರಸಪೂರ್ಣ ಬರಹಗಳು ಇನ್ನಷ್ಟು ಆಸಕ್ತ”
  >

  Liked by 1 person

 6. ಈ ಲೇಖನಗಳು ನಮ್ಮನ್ನು ಬಾಲ್ಯಾವಲೋಕನ ಮಾಡಲು ಉತ್ತೇಜಿಸಿವೆ. ಅಂದು ತುಂಟಾಟ, ಪುಂಡಾಟಿಕೆ ಅಂದುಕೊಂಡರೂ, ಆ ಕ್ಷಣಗಳು ಮನದಲ್ಲಿ ಎಂದೆಂದಿಗೂ ಹಚ್ಚಹಸಿರಾಗಿರುತ್ತವೆ ಎಂಬುದಕ್ಕೆ ಉಮಾ ಅವರ ಅನುಭವವೇ ಸಾಕ್ಷಿ.

  ಮಾಡಬೇಡವೆಂಬುದನ್ನೇ ಮಾಡಬೇಕೆನ್ನುವುದು ಮಾನವ ಸಹಜ ಧರ್ಮ. ಇದನ್ನು ಸವಿತಾ ಅವರ ಬಾಲ್ಯದ ಪ್ರಸಂಗದಲ್ಲಿ ಕಾಣುತ್ತೇವೆ. ಹಿಡಿದದ್ದನು ಮಾಡಿ ತೋರುವ ಅವರ ಛಲ ಚಿಕ್ಕಂದಿನಲ್ಲೇ ಕಾಣುತ್ತೇವೆ.

  ಎಂದಿನಂತೆ ಗುಡೂರ್ ಅವರ ಚಿತ್ರ ಲೇಖನಗಳಿಗೆ ಮೆರಗು ನೀಡಿವೆ.

  Liked by 1 person

 7. ಆಹಾ, ಬಾಲ್ಯವೆಂಬ ’ಸಮುದ್ರಯಾನ’ದಲ್ಲಿ ಹೊರಟಾಗ ತೇಲಿ ಬಂದ ಇನ್ನೆರಡು ಜಗಜೀತ್ ಸಿಂಗರ ’ಕಾಗಜ ಕಿ ಕಷ್ತಿಯಾ’, -ದೋಣಿಗಳು-ಸಂಪಾದಕರು ಹಿಂದೆ ನೆನಪಿಸಿದಂತೆ!(September11, 2020) ಒಂದರಲ್ಲಿ ತೇಲಿದವರು ಉಮಾ ವೆಂಕಟೇಶ್. ಯಾಕೋ ಆ ನಾವೆ ಹೊಯ್ದಾಡುತ್ತಿತ್ತು, ಸ್ವಲ್ಪ. ಆ ತುಂಟ ಚಂದ್ರಶೇಖರನ ಉಪಟಳವಿರಬೇಕು, ಅಥವಾ ಆತ ಇನ್ನೂ ಅಲೆಯೆಬ್ಬಿಸುತ್ತಿರಬೇಕು, ತನ್ನ ಸ್ಮರಣೆಯಿಂದಲೇ –ಬೆಳದಿಂಗಳದ ಸಮುದ್ರದಂತೆ! ಬಹಳ ಮುದಕೊಟ್ಟಿತು, ಈ ಆಪ್ತ ಬರಹ. ನನ್ನ ಕ್ಲಾಸಿನ ತಾಮಸೇಯನ್ನು ನೆನಪಿಸಿತು. ಹುಡಿಗಿಯರ ಮೇಲಿರುತ್ತಿದ್ದ ’’ಆತನ ಕಣ್ಣು ಕಿತ್ ಬೇಕು, ನೋಡಲೇ,’’ ಎಂದು ನನ್ನ ಮುಂದೆ ಹೇಳುತ್ತಿದ್ದ ಕನಿಕರ ಪಟ್ಟ ನನ್ನ ಗೆಳೆಯ, ಎಂಟನೆಯ ಕ್ಲಾಸಿನಲಿದ್ದಾಗ. ’ಭೂತದ’ ಚೌಕಟ್ಟಿನಲ್ಲಿ ಎಲ್ಲವೂ ಸುಂದರ. ಆ ಚಂದ್ರಶೇಖರ, (ಅದು ಆತನ ನಿಜವಾದ ಹೆಸರು ಇರಲಿಕ್ಕಿಲ್ಲ ಎಂದು ನನ್ನ ಊಹೆ!) ಅಕಸ್ಮಾತ್ ಇದನ್ನು ಓದುತ್ತಿದ್ದರೆ ಎಷ್ಟು ಖುಷಿ ಪಡುತ್ತಾನೋ, ನಾಚಿಕೆಯೇನೂ ಪಡಲಿಕ್ಕಿಲ್ಲ!
  ಸವಿತ ಸುರೇಶ್ ಅವರು ಹತ್ತಿಬಂದ ಎರಡನೆಯ ಹಡಗು ತನ್ನ ಅಪೂರ್ವ ಸರಕನ್ನು ಸಹ ಪ್ರದರ್ಶಿಸಿದೆ! ಎಂಥ ಅಮೂಲ್ಯ ಕಸೂತಿ ಕೆಲಸ! ತಮ್ಮ ಟೀಚರ್ ಶರಾ ಮತ್ತು ಸಹಿ ಅಳಿಸದಂತೆ ಜತನದಿಂದ ಕಾಯ್ದುಕೊಡಿದ್ದಾರೆ ಅಂದ ಮೇಲೆ ಎಷ್ಟು ಹೆಮ್ಮೆ, ಅಭಿಮಾನವಿರಬೇಕು. ಇದನ್ನು ಓದಿ ಬಹಳ ಸಂತೋಷ – ಮತ್ತು ಅಸೂಯೆ ಸಹ- ಆದದ್ದಲ್ಲದೆ, ಸಧ್ಯ ಈ ಪ್ರತಿಭೆಯ ತಮಿಳು ಸಹಪಾಠಿ ಯಾರೂ ನನ್ನ ಊಟಿಯ ಶಾಲೆಯಲ್ಲಿಲ್ಲಿರಲಿಲ್ಲ ಅಂತ ಸಮಾಧಾನವಾಯಿತು! ಸವಿತ ಅವರು ಫೋಟೋವನ್ನೇ ಲಗತ್ತಿಸಿ ತಮ್ಮ ಕರಕೌಶಲ್ಯದ ಪುರಾವೆಯಷ್ಟೇ ಅಲ್ಲ, ಅದರ ಅಂದವನ್ನೂ ಕೊಟ್ಟಿದ್ದಾರೆ. ಸೂಜಿ ಚುಚ್ಚಿಸಿಕೊಂಡ ನನ್ನ ಬೆರಳ ತುದಿಗಳು ಇದನ್ನು ಟೈಪುಮಾಡುವಾಗ ಇನ್ನೂ ಒರಲುತ್ತವೆ!
  ನಮ್ಮ ನೆಚ್ಚಿನ ಸಂಪಾದಕ-ಚಿತ್ರಕಾರ ಮತ್ತೊಂದು ಅದ್ಭುತ ವ್ಯಂಗಚಿತ್ರದಲ್ಲಿ ’ವಾಣಿವಿಲಾಸಕ್ಕೇ’ ಹೋಗಿ ನೋಡಿದಂತೆ ಆ ದೃಶ್ಯವನ್ನು ಕಣ್ಣಿಗೆ ಕಟ್ಟಿದ್ದಾರೆ! A super cut! ಮೊದಲ ಸಲ ನೋಡಿದಾಗ ಆರ್ ಕೆ ಲಕ್ಷ್ಮಣರ ಸಂಗ್ರಹದಿಂದ ಅಂತ ಅನಿಸಿತ್ತು, ಅವರ ’ಮೋನಿಕರ್’ ನೋಡುವವರೆಗೆ. ಅಂಥ ಕರಕೌಶಲ ಅವರದು!
  ಕಾಕತಾಳಿಯದಂತೆ, ಇಂದಿನ ಅಂಕಣವನ್ನು ಓದುತ್ತಿದ್ದಂತೆ ಇಂದು ಪ್ರತಿ ಶುಕ್ರವಾರ ನಾನು ಆಲಿಸುತ್ತಿದ್ದಂತೆ BBC Radio 4 Desert Island Discನಲ್ಲಿ ಮಕ್ಕಳಪುಸ್ತಕಗಳ ಚಿತ್ರಕಾರ ಹೆಲೆನ್ ಆಕ್ಸೆನ್ ಬೆರಿ ಮಾತಾಡುತ್ತಿದ್ದರು!

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.