ಹೊಸ ವರ್ಷ 2020 – ಎರಡು ಕವನಗಳು 

‘ಅನಿವಾಸಿ’ಯ ಓದುಗರೆಲ್ಲರಿಗೂ ಹೊಸ ವರ್ಷದ ಹಾರ್ದಿಕ  ಶುಭಾಶಯಗಳು. ಹೊಸವರುಷಾರಂಭ, ಹೊಸ ಸಂಕಲ್ಪಗಳನ್ನು ಮಾಡಿ ಹೊಸ ಯೋಜನೆಗಳನ್ನು ಹಾಕಿಕೊಳ್ಳುವಂತೆ ಮಾಡುವ ಒಂದು ಅಧ್ಭುತ ಪ್ರಚೋದಕ ಶಕ್ತಿ. ಈ ಕೇಂದ್ರೀಕೃತ ಶಕ್ತಿಯನ್ನು ಉಪಯುಕ್ತವಾಗಿ ಬಳಸಿ , ಮನೋಧೃಢತೆ  ಮತ್ತು ಪರಿಶ್ರಮದ ಹಾದಿ ಹಿಡಿದರೆ ನಮ್ಮ ದಾರಿಯಲ್ಲಿ  ಹೊಸತನವನ್ನು ಕಾಣುವುದರ ಜೊತೆಗೆ, ಕನಸುಗಳು ಸಾಕಾರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಕಳೆದ ವರ್ಷ ‘ಅನಿವಾಸಿ’ಯಲ್ಲಿ ಬರಹಗಳ ಸುಗ್ಗಿ.  ಅನೇಕ ಲೇಖನಗಳು ಮತ್ತು ಕವಿತೆಗಳೊಂದಿಗೆ ಶ್ರೀಮಂತವಾದ ಅನಿವಾಸಿ ತಾಣ, ಬರಹಗಾರರ ಆಸಕ್ತಿ ಮತ್ತು  ಸಂಪಾದಕರ ಪರಿಶ್ರಮ ಹಾಗೂ ಕಾರ್ಯಕ್ಷಮತೆಗೆ ಕನ್ನಡಿ ಹಿಡಿದಿತ್ತು. ಈ ಭದ್ರ ಬುನಾದಿಯ ಮೇಲೆ ನಾವು ಹೊಸ ವರ್ಷ ೨೦೨೦ ಕ್ಕೆ ಕಾಲಿಡುತ್ತಿದ್ದೇವೆ.  ಹೊಸವರ್ಷದ ಪ್ರಾರಂಭದಲ್ಲಿ ನಾನು ಹೊಸ ಸಂಪಾದಕನಾಗಿರುವುದು ಕಾಕತಾಳೀಯವಾದರೂ ನನಗೆ ಸಂತೋಷ ತಂದಿರುವ ಸಂಗತಿ. ಈ ಗುರುತರ ಜವಾಬ್ದಾರಿಯನ್ನು ನಂಬಿಕೆಯಿಂದ ನನಗೆ ವಹಿಸಿರುವ ‘ಅನಿವಾಸಿ’ ಬಳಗಕ್ಕೆ ಮತ್ತು ಅದರ ಪೋಷಕರಿಗೆ ನಾನು ಆಭಾರಿಯಾಗಿದ್ದೇನೆ. ಹೊಸ ಬರಹಗಾರರು ಮತ್ತು ಸಾಹಿತ್ಯಾಸಕ್ತರು ‘ಅನಿವಾಸಿ’ಯ ಸದಸ್ಯರಾಗುತ್ತಿರುವುದು, ‘ಅನಿವಾಸಿ’ಯ ಕನಸುಗಳಿಗೆ ರೆಕ್ಕೆ ಪುಕ್ಕ ಬಂದಂತಾಗಿದೆ. ಬನ್ನಿ ಎಲ್ಲರೂ  ಸೇರಿ ‘ಅನಿವಾಸಿ’ಯನ್ನು ಮತ್ತಷ್ಟು ಸಮೃಧ್ದಗೊಳಿಸೋಣ.

ಈ ವಾರ ನಾನು ಮತ್ತು ರಮ್ಯಾ ಭಾದ್ರಿಯವರು ಬರೆದಿರುವ ಹೊಸ ವರ್ಷದ ಕುರಿತಾದ ಕವಿತೆಗಳನ್ನು ಪ್ರಕಟಗೊಳಿಸುತ್ತಿದ್ದೇವೆ. ಈ ಹೊಸ ವರ್ಷದ ಒಂದು ವಿಶೇಷತೆ ಎಂದರೆ , ಇದು ೨೧ ನೇ ಶತಮಾನದ ಹದಿ ಹರೆಯ ವರುಷಗಳಿಗೆ (Teenage) ಕೊನೆಹಾಡುತ್ತಿದ್ದೆ. ಈ ಸಂಧರ್ಭದಲ್ಲಿ ನನ್ನೊಳಗೆ ಮೂಡಿದ ಕೆಲವು ಅನಿಸಿಕೆಗಳನ್ನು ಕವನರೂಪದಲ್ಲಿ ಮಂಡಿಸುವ ಪ್ರಯತ್ನ ಮಾಡಿದ್ದೇನೆ.
ಹೊಸ ವರ್ಷದ ಹೊಸ ಕಿರಣಗಳು ಭೂರಮೆಯನ್ನು ಸ್ಪರ್ಶಿಸಲು, ಪ್ರಕೃತಿಯಲ್ಲಾಗುವ ನವೋಲ್ಲಾಸದ ಬದಲಾವಣೆಗಳನ್ನು  ರಮ್ಯಾ ಭಾದ್ರಿ ಯವರು ತಮ್ಮ  “ಹೊಸ ವರುಷ ಬರುವುದು ತರುತ ಹರುಷ ” ಎಂಬ ಕವನದಲ್ಲಿ ಬಣ್ಣಿಸಿದ್ದಾರೆ. ಈ ಎರೆಡೂ ಕವನಗಳೂ ನಿಮ್ಮ ಮನ ಮುಟ್ಟಲಿ ಎಂದು ಆಶಿಸುತ್ತಾ ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ  ಶುಭಾಶಯಗಳನ್ನು ಕೋರುತ್ತೇನೆ -ಸಂ

೧.ಶತಮಾನ

ಬರೆದವರು: ಶ್ರೀನಿವಾಸ ಮಹೇಂದ್ರಕರ್

polution

ಹದಿಹರೆಯ ವರುಷಗಳ (Teens ) ದಾಟಿ ಸಾಗಿದೆ
ಶತಮಾನ, ಜವಾಬ್ದಾರಿಯ ಯವ್ವನದೆಡೆಗೆ
ತೆರೆಯಬೇಕಲ್ಲವೇ ಉಳಿತಾಯ ಖಾತೆ ಶುಭ್ರ
ಗಾಳಿಗಾಗಿ, ಹೂಡಬೇಕಲ್ಲವೇ ಠೇವಣಿ ಬರುವ
ಪೀಳಿಗೆಯ ಬದುಕಿಗಾಗಿ, ಕನಸ ಸಾಕಾರಕಾಗಿ.

 ಪೂರ್ವಜರ ನಾಗರೀಕತೆಯ ಬುನಾದಿಯಮೇಲೆ
ನಡೆದ ಯಡವಟ್ಟುಗಳ ವಿಸ್ಮೃತಿಯಿಂದ ಹೊರ-
ಬರಬೇಕಾಗಿದೆ. ವಿಶ್ವ ಮಾನವ ಪ್ರಜ್ಞೆ ಮತ್ತೆ
ಜಾಗರವಾಗಬೇಕಾಗಿದೆ ಭವ್ಯ ಭವಿತವ್ಯಕ್ಕಾಗಿ.
ಪಟ್ಟಾಂಗ  ನಾಯಕರ ಕೈತುರಿಗೆ ಪಾಲಾಗದೆ
ತೊರೆಯಬೇಕಾಗಿದೆ ಮದ್ದು ಗುಂಡುಗಳೆಂಬ ಮಾದಕಗಳ.

ಕನಸು ಕಾಣುವ ವಯಸ್ಸಿನಿಂದ ನನಸಾಗಿಸುವತ್ತ
ದುಡಿಮೆಯ ಗರಿಮೆಯ ಅರಿತು ಸಮೃದ್ಧಿಯತ್ತ
ಪ್ರೀತಿ ಸ್ನೇಹಗಳು ಗಿಡದಿಂದ ಮರವಾಗುವತ್ತ
ಊರ ಸರಹದ್ದು ದಾಟಿ, ಹೊಸ ಜಗತ್ತಿನತ್ತ
ಸಾಗುತ್ತಿದೆ ಈ ಶತಮಾನ ಹದಿಹರೆಯ ವರುಷಗಳ ದಾಟಿ.

ನಾವು ಶತಮಾನದಿಂದಲೋ, ಅದು ನಮ್ಮಿಂದಲೋ
ಎನುವ  ಜಿಜ್ಞಾಸೆಯ  ನಡುವೆ  ನಡೆದು ಸಾಗಲಿ
ಕೊಡುಕೊಳೆ  ನಮ್ಮಿಬ್ಬರ ನಡುವೆ.
ಈ ಹೊಸ ವರುಷ ನಮ್ಮ ಅನುಕ್ರಮ ನಡುಗೆಗೆ
ನಾಂದಿಯಾಗಲಿ ಒಂದು ಗುರಿಯ ಕಡೆಗೆ
ಕತ್ತಲಿಂದ ಬೆಳಕಿನೆಡೆಗೆ, ಹಸನು ಬದುಕಿನಡೆಗೆ.

೨.ಹೊಸ ವರುಷ ಬರುವುದು ತರುತ ಹರುಷ

ಬರೆದವರು: ರಮ್ಯ ಭಾದ್ರಿ

sunrise-1200-800

ನಭದಲ್ಲಿರುವ ನೇಸರನನ್ನು ಮಗದೊಮ್ಮೆ ಸುತ್ತುವ ಕಾತುರದಿ
ಭೂಮಿಯು ನವ ಸಂವತ್ಸರಕ್ಕೆ ಕಾಲಿಡುವ ಸುಂದರ ಘಳಿಗೆಯಲಿ
ಆದಿತ್ಯನು ಈ ಆಗಮನವನ್ನು ಆನಂದದಿ ಆಲಂಗಿಸುತ್ತಾ
ತನ್ನ ಎಳೆಯ ಹೊಂಗಿರಣಗಳಿಂದ ಭೂರಮೆಯನ್ನು ಸ್ಪರ್ಶಿಸಲು
ಸೃಷ್ಟಿಯ ಕಣ ಕಣದಲ್ಲೂ ಮೂಡುಹುದು ಹೊಸದೊಂದು ಸಂಚಲನ
ಅದುವೇ ಹೊಸ ವರುಷ, ಬರುವುದು ತರುತ ಹರುಷ

ಹೊಸ ಹುರುಪಿನಿಂದ ಧುಮ್ಮಿಕ್ಕಿ ಭೋರ್ಗರೆಯುವ ಝರಿಗಳು
ವೈಯ್ಯಾರದಿ ಹರಿಯುತ ಸಾಗರವನ್ನು ಸೇರುವ ನದಿಗಳು
ನವೋಲ್ಲಾಸದಿ ವನಸಿರಿಯಲ್ಲಿ ಅರಳುವ ಮಂದಾರ ಪುಷ್ಪಗಳು
ಚಿಗುರೊಡೆದ ಹಸಿರೆಲೆಗಳ ಮೇಲಿನ ಇಬ್ಬನಿಯೊಡನೆ
ಮಳೆಹನಿಯ ಸಮಾಗಮದ ಅಮೃತ ಬಿಂದು ಮಣ್ಣಿನೊಳಗೊಂದಾದಾಗ
ಹೊಮ್ಮುವ ಕಂಪು ಎಲ್ಲೆಡೆಯೂ ತಂಪೆರೆದು ಸೊಂಪಾದ ಗಿಡ ಮರಗಳೊಳಗಿಂದ
ನವೀನ ಭಾವದಿ ಕೋಗಿಲೆಗಳು ಇಂಪಾಗಿ ಹಾಡುವವು ಹೊಸದೊಂದು ರಾಗ
ಅದುವೇ ಹೊಸ ವರುಷ , ಬರುವುದು ತರುತ ಹರುಷ

ಪ್ರಕೃತಿಯ ಈ ರಮ್ಯ ರಾಗದಿಂಚರ ಮನವನ್ನು ರಂಜಿಸುತ್ತಿರಲು
ಜೀವ ರಾಶಿಗಳಲ್ಲಿ ನವ ಚೇತನವು ಪುಟಿದು ಹೊಸ ಸ್ಪೂರ್ತಿಯ ತಳೆದು
ನವ ಕಲ್ಪನೆಗಳನ್ನು ಮನಗಾಣುತ್ತಾ
ಕಳೆದ ಕಹಿ ನೆನಪುಗಳ ಕಣ್ಣೀರಿನ ಭಾರವನ್ನು ಇಳಿಸಿಕೊಂಡು
ಸುಂದರ ಕ್ಷಣಗಳನ್ನು ಮೆಲಕು ಹಾಕಿಕೊಂಡು
ಕಣ್ಣುಗಳಲ್ಲಿ ಹೊಸ ಕನಸುಗಳನ್ನು ತುಂಬಿಕೊಂಡು
ಬದುಕಿನ ನಿರೀಕ್ಷೆ ಹಾಗು ಅನಿರೀಕ್ಷೆಗಳನ್ನು ಹೊಸದಾಗಿ ಕಂಡಾಗ
ಅದುವೇ ಹೊಸ ವರುಷ , ಬರುವುದು ತರುತ ಹರುಷ.

ನಿರೀಕ್ಷಿಸಿ : ಮುಂದಿನ ವಾರದ ಸಂಚಿಕೆಯಲ್ಲಿ ಮಕ್ಕಳುಗಳು ಬರೆದಿರುವ ಇಂಗ್ಲಿಷ್ ಕವನಗಳು ಮತ್ತು ಅವುಗಳ ಕನ್ನಡ ಅನುವಾದಗಳನ್ನು ಪ್ರಕಟಿಸಲಾಗುವುದು.

9 thoughts on “ಹೊಸ ವರ್ಷ 2020 – ಎರಡು ಕವನಗಳು 

 1. ಎಲ್ಲರ ಮೆಚ್ಚುಗೆಗೆ ತುಂಬು ಹೃದಯದ ಧ್ಯವಾದಗಳು🙏🙏. ನಿಮ್ಮೆಲ್ಲರ ಪ್ರೋತ್ಸಾಹವೆ ನಮಗೆ ಸ್ಫೂರ್ತಿ. ಇಂತಹ ದೊಂದು ಅದ್ಬುತವಾದ ಪ್ರತಿಭಾನ್ವಿತರು ಹಾಗೂ ಮೇಧಾವಿಗಳ ತಾಣದಲ್ಲಿ ಓದಿ ತಿಳಿಯುವುದು ನೋಡಿ ಕಲಿಯುವುದು ಬಹಳಷ್ಟಿದೆ. ಇದಕ್ಕೆ ಅನುವುಮಾಡಿಕೊಟ್ಟ ಹಾಗೂ ನಮ್ಮ ಕಿರು ಪ್ರಯತ್ನಗಳಿಗೆ ಅವಕಾಶ ಕಲ್ಪಿಸಿಕೊಟ್ಟ ಎಲ್ಲರಿಗೂ ಅನಂತ ಧನ್ಯವಾದಗಳು. ರಮ್ಯ ಭಾದ್ರಿ

  Like

 2. ಅನಿವಾಸಿ ಎಂಬ ಹಳೆ ಬೇರಿನಿಂದ ಹೊಸ ಚಿಗುರುಗಳು ಕಾಣಿಸಿಕೊಂಡಿರುವುದು ಭರವಸೆಯ ಸಂಕೇತ!
  ಕಾವ್ಯದಲ್ಲೂ ಚೈತ್ರದ ಚಿಗುರಿನ ಹೊಸತನ ಕಾಣಿಸಿಕೊಂಡಿದೆ. ನಾಳಿನ ಕಾಳಜಿಗಳ ಬಗ್ಗೆ ಚಿಂತನೆಗಳಿವೆ
  ಮಬ್ಬು ಕವಿದ ಡಿಸೆಂಬರ್ ಜನವರಿ ತಿಂಗಳಲ್ಲಿ ಈ ಕವನಗಳು ಹೊಸ ಚೇತನ ಮತ್ತು ಉಲ್ಲಾಸಗಳನ್ನು ತಂದಿವೆ

  Like

 3. ಹೊಸ ವರುಷದ ಸಂಪಾದಕರಾದ ಮಹೇಂದ್ರ ಅವರಿಗೆ ವಂದನೆಗಳು

  ಈ ವಾರ ಪ್ರಕಟಿಸಿದ ಎರಡೂ ಕವನಗಳು
  ಅರ್ಥಬದ್ಧವಾಗಿವೆ

  ವಿಜಯನರಸಿಂಹ

  Liked by 1 person

 4. ಹೊಸ ವರುಷದ ಶುರುವಿನಲ್ಲೇ ಅಚ್ಚ ಕನ್ನಡದಲ್ಲಿ ಬರೆದ ಎರಡು ಕವನಗಳನ್ನು ಓದಲು ಅನುವು ಮಾಡಿಕೊಟ್ಟಿದ್ದಕ್ಕೆ ಇಬ್ಬರಿಗೂ ಧನ್ಯವಾದಗಳು. ಎರಡು ಸುಂದರವಾದ, ವಿಭಿನ್ನವಾದ ಕವನಗಳು ಹೊಸ ವರುಷದ ಹೊಸತನವನ್ನು ಸುಂದರವಾಗಿ ಸರೆಹಿಡಿದಿವೆ. ಹೀಗೇ ಸುಂದರ ಕವನಗಳನ್ನು ಮತ್ತಷ್ಟು ಓದಲು ಅವಕಾಶ ಸಿಗಲಿ ನಮಗೆಲ್ಲ ಎಂದು ಆಶಿಸುತ್ತಾ ಮತ್ತೊಮ್ಮೆ ಹೊಸ ವರ್ಷದ ಶುಭಾಶಯಗಳು.

  Liked by 1 person

 5. ಹೊಸ ವರುಷದ ಶುರುವಿನಲ್ಲೇ ಅಚ್ಚ ಕನ್ನಡದಲ್ಲಿ ಬರೆದ ಎರಡು ಕವನಗಳನ್ನು ಓದಲು ಅನುವು ಮಾಡಿಕೊಟ್ಟಿದ್ದಕ್ಕೆ ಇಬ್ಬರಿಗೂ ಧನ್ಯವಾದಗಳು. ಎರಡು ಸುಂದರವಾದ, ವಿಭಿನ್ನವಾದ ಕವನಗಳು ಹೊಸ ವರುಷದ ಹೊಸತನವನ್ನು ಸುಂದರವಾಗಿ ಸರೆಹಿಡಿದಿವೆ. ಹೀಗೇ ಸುಂದರ ಕವನಗಳನ್ನು ಮತ್ತಷ್ಟು ಓದಲು ಅವಕಾಶ ಸಿಗಲಿ ನಮಗೆಲ್ಲ ಎಂದು ಆಶಿಸುತ್ತಾ ಮತ್ತೊಮ್ಮೆ ಹೊಸ ವರ್ಷದ ಶುಭಾಶಯಗಳು.

  Liked by 1 person

 6. ಎರಡು ವಿಭಿನ್ನ ಕವನಗಳು ಹೊಸ ವರುಷವನ್ನು ಬರಮಾಡಿಕೊಂದ ರೀತಿ ಅದಮ್ಯ. ಕವನಗಳಲ್ಲಿ‌ ಹೊಸತನವಿದೆ. ಹೊಸ‌ ಕಲ್ಪನೆಗಳಿವೆ. ಹೊಸ ಸಂಪಾದಕರಿಗೆ ಗುಡ್ ಲಕ್ ಮತ್ತು ಬೆಸ್ಟ್ ವಿಷಸ್.

  ಕೇಶವ

  Liked by 1 person

 7. ಹೊಸವರ್ಷದ ಯುವಕವಿಗಳಿಗೆ (ಟೀನೇಜರ್ಸ್ ಅಲ್ಲ!) ಅಭಿನಂದನೆಗಳು! ಎರಡೂ ಸುಂದರ ಕಲ್ಪನೆಯ ಕವನಗಳು .
  ‘ಅನಿವಾಸಿ’ಯಲ್ಲಿ ಹೊಸ ವರ್ಷದ ಹೊಸ ಹವೆ ಬೀಸುತ್ತಿದೆ. ಸಂಪಾದಕರು ಮುಖಪುಟಕ್ಕೆ ಹೊಸತೋರಣವನ್ನೂ ಕಟ್ಟಿದ್ದಾರೆ. ಸುಸ್ವಾಗತ!

  Liked by 1 person

 8. ಹೊಸತನದ ರಮ್ಯ ಸಾಲುಗಳಲ್ಲಿ ಹೊಸ ವರ್ಷದ ಶುಭಾರಂಭ ಮಾಡಿರುವ ಅನಿವಾಸಿಯ ಹೊಸ ಸಾರಥಿಗೆ, ಮತ್ತು ಅನಿವಾಸಿಯ ಹಳೆ, ಹೊಸ ಪಯಣಿಗರೆಲ್ಲರಿಗೆ ಶುಭ ಪ್ರಯಾಣದ ಹಾರೈಕೆಗಳು…ವರುಷವಿಡೀ ಹೊಸ ದಿಕ್ಕುಗಳ, ದೂರದೂರದ ಗುರಿಗಳ ತಲುಪಿ, ಅಲ್ಲಿನ ವಿಶೇಷಗಳ ವಿಧ-ವಿಧದಲಿ ನಮಗುಣಿಸುತ್ತಿರಲಿ ಅನಿವಾಸಿಗಳ ಅದಮ್ಯ ಸ್ನೇಹ-ಚೇತನ!

  ಮುರಳಿ ಹತ್ವಾರ್

  Liked by 1 person

 9. ಶ್ರೀನಿವಾಸ ಮತ್ತು ರಮ್ಯಾರಿಗೆ ಎರಡು ಉತ್ತಮ ಹೊಸವರ್ಷದ ಕವನಗಳಿಗಾಗಿ ಧನ್ಯವಾದಗಳು .
  ಮುದಕೊಟ್ಟ ವಿಚಾರವೆಂದರೆ, ಕಾಲ ಟೀನೇಜ್ ನಲ್ಲಿತ್ತು ಮತ್ತು ಇದೀಗ ಪ್ರೌಡಾವಸ್ಥೆಗೆ ಕಾಲಿಟ್ಟಿದೆ ಎನ್ನುವ ಕಲ್ಪನೆ. ಆ ನಿಟ್ಟಿನಲ್ಲಿ ಇದುವರೆಗೆ ಯೋಚಿಸಿಯೇ ಇರಲಿಲ್ಲ. ಕವಿ ಕಲ್ಪನೆ ಎಷ್ಟು ಸುಂದರ ಅಲ್ಲವೇ?
  ರಮ್ಯಾರ ರಮ್ಯ ವರ್ಣನೆಯೂ ಸುಂದರವಾಗಿದೆ.ಇಬ್ಬರಿಗೂ ಅಭಿನಂದನೆಗಳು.

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.