ಸಜ್ಜಿಗೆ ಕೈಗಳ ಸಿಹಿ; ವಿನತೆ ಶರ್ಮ


ಈ ಕೆಳಗಿನ ಭಾವ ಪೂರ್ಣ ಕವನಕ್ಕೆ ಹಿನ್ನೆಲೆಯನ್ನು ಅದನ್ನು ರಚಿಸಿದ ಕವಯಿತ್ರಿ ವಿನತೆ ಶರ್ಮ ಅವರೇ ಒದಗಿಸಿದ್ದಾರೆ.
ನಾನು ಟಿಪ್ಪಣಿ ಬರೆಯುವ ಅಗತ್ಯವಿಲ್ಲ. ನೆನೆಪಿಗೆ ಅದೆಷ್ಟು ಶಕ್ತಿಯಿದೆ! ಭಾವನೆಯನ್ನು ಕವಿತೆಯಾಗಿ ಮೂಡಿಸುವ ನೆನಪುಗಳು ಸಜ್ಜಿಗೆಯಷ್ಟೇ ಸಿಹಿ.
“ಎದೆಯ ಭಾವ ಹೊಮ್ಮುವುದಕೆ ಭಾಷೆ ಒಂದು ಸಾಧನ” ಎಂಬ ಕವನದ ಸಾಲುಗಳನ್ನು ನಾವು ಕೇಳಿದ್ದೇವೆ
ಇನ್ನೊಂದು ಪರಿಭಾಷೆಯಲ್ಲಿ ಹೀಗೂ ಅರ್ಥೈಸಿಸಬಹದು
ಎದೆಯ ಭಾವ ಹೊಮ್ಮುವುದಕೆ ಕವಿತೆ ಒಂದು ಸಾಧನ!

ಈ ಕವನ ಮದರ್ಸ್ ಡೇ ಹೊತ್ತಿಗೆ ಮೇ ತಿಂಗಳಲ್ಲಿ ಪ್ರಕಟಿತವಾಗಬೇಕಾಗಿದ್ದು ಸ್ವಲ್ಪ ತಡವಾಗಿಯಾದರೂ ಈಗ ದಕ್ಕಿದೆ. ಈ ಕವನ ನನ್ನ ಅಭಿಪ್ರಾಯದಲ್ಲಿ ಸರ್ವ ಕಾಲಕ್ಕೂ ಪ್ರಸ್ತುತ!

 

ಪೀಠಿಕೆ

ಆಸ್ಟ್ರೇಲಿಯಾದಲ್ಲಿ ಮೇ ತಿಂಗಳ ಎರಡನೇ ಭಾನುವಾರ ಅಮ್ಮಂದಿರ ದಿನ – Mother’s Day. ಇಂಗ್ಲೆಂಡಿನಲ್ಲಿರುವಂತೆಯೇ ಈ ದೇಶದಲ್ಲೂ ಕೂಡ ಅಮ್ಮಂದಿರ ಪ್ರೀತಿ ವಾತ್ಸಲ್ಯಗಳನ್ನು ಅವರ ಕುಟುಂಬದ ಇತರರು ಗೌರವಿಸಿ, ಆನಂದಿಸುವ ದಿನ. ಎಷ್ಟಾದರೂ ಇಂಗ್ಲೆಂಡ್ ತಾಯಿ ತವರು, ಆಸ್ಟ್ರೇಲಿಯಾ ಅದರ ಮಗಳು ಅಲ್ಲವೇ, ಎಂದು ಜನ ನಗಾಡುತ್ತಾರೆ. ನನ್ನ ಮಕ್ಕಳಿಬ್ಬರೂ ಆಸ್ಟ್ರೇಲಿಯನ್ Mother’s Day ಕಳೆದಾದ ವಾರದಲ್ಲೇ ಹುಟ್ಟಿದ್ದರಿಂದ ನನ್ನ ಸ್ನೇಹಿತರು, ‘They are your real gifts for Mother’s Day’, ಎಂದೆನ್ನುತ್ತಿದ್ದರು. ಎಷ್ಟಾದರೂ ಇಂಗ್ಲೆಂಡ್ ತಾಯಿ ತವರು, ಆಸ್ಟ್ರೇಲಿಯಾ ಅದರ ಮಗಳು ಅಲ್ಲವೇ, ಎಂದು ಜನ ನಗಾಡುತ್ತಾರೆ.
ಸ್ವಲ್ಪ ಕಾಲದ ಹಿಂದೆ ಒಂದೆರಡು ವರ್ಷಗಳ ಕಾಲ ಸತತವಾಗಿ ತೋಟಗಾರಿಕೆಯ ಹುಚ್ಚು ಹತ್ತಿ ಪರಾಕಾಷ್ಠೆ ತಲುಪಿತ್ತು. ಆಗ ನನ್ನ ಉಗುರುಗಳು ಕಂದು ಬಣ್ಣಕೆ ತಿರುಗಿ, ಕೈಗಳಲ್ಲಿ ಸದಾ ಒಡಕು, ಬಿರುಕು ಇದ್ದೇ ಇತ್ತು. ಒಮ್ಮೆ ನನ್ನ ಕಿರಿಯ ಮಗು, ‘ಅಮ್ಮ ನಿನ್ನ ಕೈಗಳು ಬಹಳ ಒರಟು’ ಎಂದಾಗ ಅದೇ ಮಾತನ್ನ ನಾನು ಬಾಲ್ಯದಲ್ಲಿ ನನ್ನ ತಾಯಿಗೆ ಹೇಳಿದ್ದ ನೆನಪು ಮರುಕಳಿಸಿತು. ಆದರೆ ಆಕೆಯ ಕೈಗಳು ಬಿರುಸಾಗಿದ್ದು ತೋಟಗಾರಿಕೆ ಎಂಬ ಹವ್ಯಾಸದಿಂದಲ್ಲ. ಬೆಳಗ್ಗೆ ಐದೂಮುಕ್ಕಾಲು ಗಂಟೆಯಿಂದ ರಾತ್ರಿ ಹತ್ತೂಕಾಲಿನವರಗೆ ಒಂದು ಕ್ಷಣವೂ ಪುರುಸೊತ್ತಿಲ್ಲದ ಅವಿರತ ಶ್ರದ್ಧಾಭಕ್ತಿಯ ದುಡಿಮೆಯಿಂದಾಗಿದ್ದು. ಅದನ್ನು ನೆನೆದು ಕಣ್ಣು ಒದ್ದೆಯಾಗಿತ್ತು. ಆ ಸಂದರ್ಭದಲ್ಲಿ ಬರೆದ ಕವಿತೆಯಿದು.

ವಿನತೆ ಶರ್ಮ

 

ಸಜ್ಜಿಗೆ ಕೈಗಳ ಸಿಹಿ

ಗುಲಾಬಿ ಪಕಳೆ ಎಳೆ ಮೈಮನವ
ದಿಟ್ಟಿಸುತ ಕಾಲಮಾನ ಕಾಯುತ್ತಿದೆ
ಪರಪಂಚವೆಲ್ಲಾ ಆ ಮಿದುವಿನಲ್ಲೇ ಮಿಂದು
ಕೂತಿದೆ ಎಂದೆಂಬ ಅರೀದ ಮಗುವಿಗೆ
ಹಣೆ ನೇವರಿಸಿದ ತಾಯ ಕೈ ಗೆರೆ
ಕೂಸಿಗೆ ಗಡುಸು ಬಿರುಸಿನ ಭ್ರಮೆಯಾಯಿತು.

ಚಳಿಗಾಲದ ಮಂದನೆ ತಂಪಿಗೆ ಸೀರೆ ಸೆರಗಿನ
ಸೆರೆಯೊಟ್ಟಿ ಕಂದನ ತಲೆ ತಟ್ಟುತ …
ಚರ್ಮವೊಡೆದ ಕೈಗಳ ಒಡತಿ ಆ ತಾಯಿ
ಅವಳ ಕೈಗಳು ಅವಳಮ್ಮನ ಪಡಿಯಚ್ಚು
ಬರೀ ಗೆರೆ, ಬಿರುಕುಗಳು, ನವೆದ ಚರ್ಮ
ಅಲ್ಲುಂಟು ದಿಕ್ಪಾಲಕರ ಹಗಲಿರುಳಿನ ಎಚ್ಚರ.

ಅವಳಮ್ಮನ ಬೆರಳು ಸಂದುಗಳು ಜರಡಿ ಹಿಡಿದಂತೆ
ಸುರಿಸಿದ ಪುಡಿ ರಂಗೋಲಿಯಾದ ಮಯಕದಲ್ಲಿ
ಬೆಳೆಯುವ ಹುಡುಗಿ ಮಗಳ ಬೆರಳುಗಳಿಗೆ
ಬಣ್ಣ ಹಚ್ಚುವ ಗಮನದಲ್ಲಿ ಅವಳಮ್ಮನ
ಒಡೆದ ಉಗುರುಗಳು, ತರೆದುಹೋದ ಬೆರಳು
ಉಗುರು ಕಣ್ಣಿನಾಳದಲಿ ಒಣಗಿದ್ದ ತುಸು ರಕ್ತ ಛಾಯೆ.

ತಿಕ್ಕಿ ತೀಡಿ ಮಡಿಸಿದ ಗರಿಗರಿ ಬಟ್ಟೆಗಳಲ್ಲಿ
ಚರ್ಮ ನವೆದು ಗೆರೆಗೆರೆಗಳಾಗಿ ಹೋದವೇ
ಹಾ ಜೀವವೇ! ಅಮ್ಮ ತಟ್ಟಿದ ಅಕ್ಕಿ ರೊಟ್ಟಿಯಲಿ
ತಿರುತಿರುವಿ ಸಿಹಿಯಾಗಿಸಿದ ಸಜ್ಜಿಗೆಯಲಿ
ಬಿಸಿಬಿಸಿ ಹಬೆಯಾಡುವ ಅನ್ನದ ಅಗಳನ್ನ
ಬಿಡಿಬಿಡಿಸಿ ಬೆರೆಸಿದ ಬೆರಳುಗಳಲಿ, ಅಯ್ಯೋ ನನ್ನಮ್ಮ!.

ಥಳಥಳಿಸುವ ಹೊಳೆಹೊಳೆಯುವ ಒಪ್ಪದಿ
ಓರಣದಿ ಜೋಡಿಸಿದ ಪಾತ್ರೆಗಳು ಹೇಳಿದ
ಪಿಸುಗುಡುವ ತರಿದುಹೋದ ಕೈಗಳ ಬಿರುಕುಗಳ
ಕತೆ ಜೀವ ಮೂಡಿ ಪಾತ್ರಗಳಾಗಿ ಬಂದ ಈ ಹೊತ್ತು
ಯಾಕೋ ನನ್ನ ನಿಟ್ಟುಸಿರು ಶಬ್ದವಾಯಿತೆಂಬ ಗಾಬರಿ
ಕೆನ್ನೆಯಿಂದಿಳಿದ ಕಂಬನಿ ಕಂದನ ತಾಕೀತೆಂಬ ಆತಂಕ.

ಹಣೆ ನೇವರಿಸುತ್ತಿದ್ದ ಕೈಯನ್ನೆಳೆದು ಮಗು ಮೆಲ್ಲನೆ
ಕೆನ್ನೆಯ ಕೆಳಗಿರಿಸಿ ಮುಖವೊತ್ತಿದಾಗ ಕತೆಗಳು
ನಲಿನಲಿದಾಡಿದವು, ಆ ಗೆರೆ ಬಿರುಕುಗಳಲಿ
ಅಮ್ಮನ ಪ್ರೀತಿ ಬಣ್ಣ ಬಳಿದ ಸಂಧ್ಯಾರಾಗ
ಒಡೆದ ಕೈಗಳ ಬೆರಳುಗಳ ಸ್ಪರ್ಶ ಅವಳು
ತಿರುತಿರುವಿದ ಸಿಹಿ ಸಜ್ಜಿಗೆಯಷ್ಟೇ ಹಿತ.

***

3 thoughts on “ಸಜ್ಜಿಗೆ ಕೈಗಳ ಸಿಹಿ; ವಿನತೆ ಶರ್ಮ

  1. ವಿನತೆ ಸುಂದರವಾದ ಕವನ. ತಾಯಿಯ ಪ್ರೀತಿ ವಾತ್ಸಲ್ಯವನ್ನು ಪದರ-ಪದರವಾಗಿ ತೆರೆದಿಟ್ಟಿದ್ದೀರ. ತನ್ನ ಮಕ್ಕಳ ಲಾಲನೆ-ಪಾಲನೆಯಲ್ಲಿ ಮುಳುಗುವ ಅವಳಿಗೆ ತನ್ನ ಕೈಗಳ ಒರಟುತನದ ಬಗ್ಗೆ ಗಮನವೀಯುವ ಸಮಯವಾದರೂ ಎಲ್ಲಿರುತ್ತದೆ? ಆ ಒರಟುಕೈಗಳ ಪ್ರತಿಯೊಂದು ಗೆರೆಯಲ್ಲೂ ಅವಳ ಶ್ರದ್ಧೆಯ ದುಡಿಮೆ ಅಡಗಿದೆ. ಬೂದಿಯಿಂದ ಪಾತ್ರೆ ತಿಕ್ಕುತ್ತಿದ್ದ ನಮ್ಮ ತಾಯಂದಿರ ಕೈಗಳಲ್ಲಿ, ಸಜ್ಜಿಗೆಸಿಹಿಯೆ ಅಡಗಿರುತ್ತಿತ್ತು. ಆ ಒರಟುಕೈಗಳನ್ನು ಮಕ್ಕಳಾಗಿದ್ದಾಗ ನೋಡಿದರೆ ಮನಸ್ಸಿಗೆ ಕಿರಿಕಿರಿಯಾಗುತ್ತಿದ್ದದ್ದು ನೆನಪಿದೆ. ಇಂದು ನಾವೇ ತಾಯಿಯರಾದ ಮೇಲೆ, ಆ ಒರಟುತನದ ಹಿಂದಿರುವ ಪ್ರೀತಿ-ವಾತ್ಸಲ್ಯಗಳು ಅರಿವಾಗುತ್ತದೆ.
    ಉಮಾ ವೆಂಕಟೇಶ್

    Like

  2. ದೇಸಾಯಿಯವರೇ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಮಕ್ಕಳಾದಂತೆ ತಾಯಿಯ ಕೈಯಲ್ಲಿ ಹೊಸ ಗೆರೆಗಳು ಮೂಡುತ್ತವೆ – ಎಷ್ಟು ನಿಜದ ಮಾತು ನಿಮ್ಮದು!
    ಕವನವನ್ನು ಓದಿದ ಮತ್ತಿಬ್ಬರು ತಾಯಂದಿರು ಕೂಡ ನಿಮ್ಮ ಮಾತಿನಂತೆಯೇ ಪ್ರತಿಕ್ರಿಯಿಸಿದ್ದಾರೆ. ಅವರ ಕಾಮೆಂಟ್ Whatsapp ನಲ್ಲಿ ಬಂದಿದೆ.
    ವಿನತೆ

    Like

  3. ಈ ಅದ್ಭುತ ಕವನವನ್ನು Father’s Day ನಂತರ ಓದಿದಾಗ ಅನಿಸಿದ್ದು, ಸಂಪಾದಕರು ಬರೆದಂತೆ, ತಾಯಿಯೆಂಬ ವಸ್ತುವಿನ(universal theme)ಮೇಲೆ ಬರೆಯಲು, ಓದಲು ಮದರ್ಸ್ಡೇನೇ ಬೇಕಿಲ್ಲ!
    ನನ್ನ ನೇವರಿಸಿದ ತಾಯಿಯ ಕೈಯ ಹುರಬರಕು ನೆನಪಾಯಿತು. ಮೊನ್ನೆ ಮಿತ್ರನೊಂದಿಗೆ palmistry ಬಗ್ಗೆ ಚರ್ಚೆ ಮಾಡುತ್ತಿದ್ದೆ. ಅದರಲ್ಲಿ ನಂಬಿಕೆಯಿಲ್ಲ,ಆ ಗೆರೆಗಳು ಭವಿತವ್ಯವನ್ನು ಹೇಳುವದಿಲ್ಲ. ಆದರೆ ಅಕ ಮತ್ತು ನಾವು ಮಕ್ಕಳು ಹುಟ್ಟಿದ ನಂತರ ತಾಯಿಯ ಕೈಯಲ್ಲಿ ಮೂಡಿದ ಹೊಸ ಗೆರೆಗಳು , ಅವು ನಮ್ಮ ಭವಿಷ್ಯವನ್ನು ರೂಪಿಸುತ್ತವೆ!ಕವಿತೆಯ ಪ್ರತಿಯೊಂದು ಸಾಲೂ ಭಾವಪೂರ್ಣವಾಗಿದೆ. ಗೆರೆಗಳ ಆಳದಲ್ಲಿ ಹುಡಿಕಿದರೆ ಕಾಣದ ಆ ಪ್ರೀತಿ,ಆ ಒರಟು ಸ್ಪರ್ಶದಲ್ಲಿಯೇ ಕಾಣುತ್ತೇವೆ. ಕೊನೆಯ ಚರಣದಲ್ಲಿ ಬರುವ, ’ಹಣೆ ನೇವರಿಸುತ್ತಿದ್ದ ಕೈಯನ್ನೆಳೆದು ಮಗು ಮೆಲ್ಲನೆ
    ಕೆನ್ನೆಯ ಕೆಳಗಿರಿಸಿ ಮುಖವೊತ್ತಿದಾಗ’
    ಸಾಲುಗಳು ಯಾವ ’ಮಗು’ವಿನ ಕಣ್ಣನ್ನೂ ತೇವ ಮಾಡಿಸುವವು. ’ಸಜ್ಜಿಗೆ ಕೈಗಳ ಸಿಹಿ’ ಕಜ್ಜಾಯ!
    ಶ್ರೀವತ್ಸ ದೇಸಾಯಿ

    Like

Leave a comment

This site uses Akismet to reduce spam. Learn how your comment data is processed.