
ಶ್ರೀ ತಿಪ್ಪೇಸ್ವಾಮಿ ಬಿಲ್ಲಹಳ್ಳಿ, ಈ ವರ್ಷದ ಕನ್ನಡ ಬಳಗದ ದೀಪಾವಳಿ ಕಾರ್ಯಕ್ರಮದ ರೂವಾರಿಗಳು. ಜಗದ್ವಿಖ್ಯಾತ ಆಂಗ್ಲಭಾಷೆಯ ವಿಶ್ವವಿದ್ಯಾನಿಲಯದ ಕೇಂಬ್ರಿಜ್ಜಿನಲ್ಲಿ ಕನ್ನಡದ ಕಾರ್ಯಕ್ರಮವನ್ನು ತುಂಬ ಹಚ್ಚಿಕೊಂಡು ತಮ್ಮ ನೆರೆಹೊರೆಯ ಕನ್ನಡಿಗರ ಸಹಾಯದಿಂದ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.
ಮೊಟ್ಟಮೊದಲ ಬಾರಿಗೆ ಶ್ರೀ ತಿಪ್ಪೆಸ್ವಾಮಿಯವರು `ಅನಿವಾಸಿಗೆ` ಬರೆದಿದ್ದಾರೆ. ಕನ್ನಡ ಬಳಗ ಒಬ್ಬೊಬ್ಬರಿಗೆ ಒಂದೊಂದು ಅನುಭವ ಕೊಡುತ್ತದೆ. ಈ ಸಲದ ಕನ್ನಡ ಬಳಗದ ಕಾರ್ಯಕ್ರಮದ ಬಗ್ಗೆ ಸ್ವತಃ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡ ಶ್ರೀತಿಪ್ಪೆಸ್ವಾಮಿಯವರೇ ಬರೆದಿದ್ದಾರೆ. ಓದಿ, ಪ್ರತ್ರಿಕ್ರಿಯಿಸಿ, ಹಂಚಿ – ಸಂ.
ಪುರುಷರು ಮೇಲೆ ಕೆಂಪು ಹಳದಿ ಬಣ್ಣದ ಬಂಡಿ ಉಟ್ಟು ಒಳಗೆ ಬಿಳಿ ವಸ್ತ್ರ ಧರಿಸಿದ್ದರೆ, ಬಣ್ಣ ಬಣ್ಣದ ಮೈಸೂರು ಸಿಲ್ಕ್ , ಇಳಕಲ್ ಸೀರೆ, ಕಾಂಚಿಪುರಂ ಸೀರೆ – ಈ ರೀತಿ ನಾನಾ ಬಗೆಯ ಸೀರೆಗಳನ್ನು ನಾನಾ ಬಗೆಯಲ್ಲಿ ಉಟ್ಟು, ನಮ್ಮ ಕನ್ನಡ ನಾರಿಯರು ತಮ್ಮ ತುಂಟ ಚಿನ್ನಾರಿಗಳೆಲ್ಲರನ್ನು ಬಗೆ ಬಗೆ ಉಡುಪುಗಳಿಂದ ಅಲಂಕರಿಸಿ ೧೦ನೆ ನವೆಂಬರ್ ೨೦೧೮ ರಂದು ಬೆಳಿಗ್ಗೆ ೮ ಘಂಟೆಗೆ ಸರಿಯಾಗಿ ನಿಂತಿದ್ದರೆ ನನಗೆ ಆಗ ಅನ್ನಿಸಿತು ಹೌದು!!! ಇಂದು ನಾವೆಲ್ಲರೂ ಮಾಸ ಮಾಸಗಳಿಂದ ಆಯೋಜಿಸಿದ ದೀಪಾವಳಿ ಹಬ್ಬದ ಆಚರಣೆಯ ಮಹತ್ತರದ ದಿನವೆಂದು.
ನಮಸ್ಕಾರ ಎಂಬ ಪದವನ್ನು ಒಂದೆರಡು ಘಂಟೆಯಲ್ಲಿ ಸಾವಿರಾರು ಬಾರಿ ಕೇಳಿದೆ ನಮ್ಮ ಕೇಂಬ್ರಿಜ್ ಕನ್ನಡಿಗರ ಬಾಯ್ತುಂಬ. ಎಲ್ಲ ಅತಿಥಿಗಳನ್ನು ಆದರದಿಂದ ಬರಮಾಡಿಕೊಂಡು ನೊಂದಣಿ ಪರಿವಾಡಿಯನ್ನು ಮುಗಿಸಿ ಎಲ್ಲರನ್ನು ಭೋಜನಾಲಯಕ್ಕೆ ತಿಂಡಿಗೆ ಹೊರಡಿ ಎಂದು ಸೂಚಿಸುವ ಮೂಲಕ ಬರಿ ತನು ಮನಕ್ಕಷ್ಟೇ ಹೆಮ್ಮೆಯಲ್ಲ, ಅವುಗಳನ್ನು ಜೀವಂತವಾಗಿರಿಸುವ ಹೊಟ್ಟೆಗೂ ಅಷ್ಟೇ ಸಂತೋಷ ಎನಿಸಿರಬಹುದು ಎಂದು ನನ್ನ ಭಾವನೆ.

ಕೇಂಬ್ರಿಜ್ ಚಿನ್ನಾರಿಗಳಿಂದ ಪ್ರಾರ್ಥನೆಯೊಂದಿಗೆ ನಮ್ಮ ಹಬ್ಬದ ಕಾರ್ಯಕ್ರಮ ಶುಭಾರಂಭವಾದಾಗ ಅವರೊಂದಿಗೆ ನಮ್ಮ ಖ್ಯಾತ ಗಾಯಕ ಅಜಯ್ ವಾರಿಯರ್ ಅವರ ಜೊತೆಗೂಡಿ ನಾವೆಲ್ಲರೂ ನಾಡಗೀತೆಯನ್ನು ಸ್ಮರಿಸಿ, ತಾಯಿ ಭುವನೇಶ್ವರಿ ಹಾಗೂ ದೀಪಾವಳಿ ಹಬ್ಬದ ಪ್ರತೀಕವಾದ ತಾಯಿ ಲಕ್ಷ್ಮಿದೇವಿಗೆ ನಮಸ್ಕರಿಸಿ, ವಿಘ್ನಗಳ ನಿವಾರಕ ವಿಘ್ನೇಶ್ವರನಿಗೆ ಪ್ರಣಾಮಗಳನ್ನು ಅರ್ಪಿಸಿ ನಮ್ಮ ಕಾರ್ಯಕ್ರಮವನ್ನು ಮುಂದುವೆರಿಸಿದೆವು.
ಕನ್ನಡ ಬಳಗ ಯು ಕೆ ಒಂದು ಪ್ರತಿಷ್ಠಿತ ಸಂಸ್ಥೆ. ೧೯೮೦ ರ ದಶಕದಲ್ಲಿ ಸ್ಥಾಪಿತವಾಗಿ ಇದು ಅನಿವಾಸಿ ಭಾರತೀಯರು ಬಹುಷಃ ಯುರೋಪಿನಲ್ಲಿ ನೋಂದಾಯಿಸಿರುವ ಮೊಟ್ಟಮೊದಲ ಕನ್ನಡ ಸಂಸ್ಥೆ ಎಂಬುವುದು ನಮ್ಮೆಲ್ಲ ಕನ್ನಡಿಗರಿಗೆ ಗರ್ವದ ಸಂಕೇತ. ಈ ಸಂಸ್ಥೆ ಕೇವಲ ೫-೬ ಕನ್ನಡ ಕುಟುಂಬಗಳಿಂದ ಹುಟ್ಟಿ ಈಗ ೭೦೦ ಕ್ಕೂ ಹೆಚ್ಚು ಕುಟುಂಬಗಳನ್ನು ತನ್ನ ಅಜೀವ ಸದಸ್ಯರನ್ನಾಗಿ ಸೆಳೆದಿದೆ. ಇದಕ್ಕೆ ಕಾರಣ ಯು ಕೆ ಯಲ್ಲಿ ನೆಲೆಸಿರುವ ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಯಿಂದ ಹೇಳಿಕೊಳ್ಳುವಂಥ ಸಾಧನೆಗಳನ್ನು ಮಾಡುತ್ತಲೇ ಬಂದಿದೆ. ಈ ಸಂಘ ಇದುವರೆಗೂ ತನ್ನ ಸದಸ್ಯರ ಹಾಗು ಕಾರ್ಯಕಾರಿ ಸಮಿತಿಯ ಸಹಕಾರದೊಂದಿಗೆ ಸುಮಾರು ೨೭ ಬಗೆ ಬಗೆಯ ಕನ್ನಡ ಸಂಸ್ಥೆಗಳಿಗೆ ತನ್ನ ತನು, ಮನ, ಧನ ಸಹಾಯ ಮಾಡುವ ಜೊತೆಗೆ “ಕೆರೆಯ ನೀರನ್ನು ಕೆರೆಗೆ ಚೆಲ್ಲಿ” ಎಂಬ ರೀತಿಯಲ್ಲಿ “ಕನ್ನಡ ನಾಡಿಗೆ” ತನ್ನ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಲೇ ಬಂದಿದೆ. ಸ್ವಾಗತ ಭಾಷಣದಲ್ಲಿ ಇದನ್ನೆಲ್ಲಾ ಸ್ಮರಿಸುವುದರ ಜೊತೆಗೆ ನಮ್ಮನ್ನು ಕಳೆದ ೬ ತಿಂಗಳಲ್ಲಿ ಅಗಲಿದ ೪ ಸದಸ್ಯರುಗಳ ಆತ್ಮಕ್ಕೆ ಶಾಂತಿಯನ್ನು ಕೋರಿ ಅವರ ಕುಟುಂಬಗಳಿಗೆ ಆ ಭಗವಂತ ಚೇತರಿಸಿಕೊಳ್ಳುವ ಶಕ್ತಿಯನ್ನು ಅನುಗ್ರಹಿಸಲಿ ಎಂದು ಹಾರೈಸಿ, ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಾದ ಶ್ರೀಮತಿ ಸುಧಾ ಬರಗೂರ್ ಹಾಗು ಶ್ರೀ ಅಜಯ್ ವಾರಿಯರ್ ಅವರನ್ನು ಸ್ವಾಗತಿಸಿ, ಬಳಗದ ಅಧ್ಯಕ್ಷ ಶ್ರೀ ವಿವೇಕ್ ತೊಂಟದಾರ್ಯ ಹಾಗು ಉಪಾಧ್ಯಕ್ಷೆ ಶ್ರೀಮತಿ ಪ್ರಜ್ಯೋತಿ ಮಧುಸೂದನ್ ಇವರೆಲ್ಲರನ್ನು ಕೂಡಿ ದೀಪ ಬೆಳಗಿಸಿ ಸಮಾರಂಭಕ್ಕೆ ಸಾಂದರ್ಭಿಕವಾಗಿ ಬೆರಗು ನೀಡಿದೆವು. ನಂತರ ಶ್ರೀಮತಿ ಸುಧಾ ಬರಗೂರ್ ಅವರ ಸ್ವಾಭಾವಿಕ ರೀತಿಯಂತೆ, ಮಾತಿನ ಮಲ್ಲೆಯಂತೆ, ಮಾತೆಯರ ಮಾತೆಯಂತೆ ತಮಗಾದ ಕೆನಡಾ ವೀಸಾ ಗಂಡಾಂತರದಿಂದ ವಿವೇಕ್ ಅವರನ್ನು ಪಾರು ಮಾಡಿ ಯು ಕೆ ಸಂಭ್ರಮಕ್ಕೆ ಸರಿಯಾಗಿ ಬರಮಾಡಿಕೊಂಡಿದ್ದನ್ನು ಕೊಂಡಾಡಿ ತಮ್ಮದೇ ಶೈಲಿಯಲ್ಲಿ ಅವರ ಪ್ರಯಾಣವನ್ನು ವಿವರಿಸಿ ತಮ್ಮ ಮಧ್ಯಾಹ್ನದ ಹಾಸ್ಯಕ್ಕೆ ಈಗಲೇ ಒಂದು ಮುನ್ನೋಟವನ್ನು ಬಿಂಬಿಸಿ ಪ್ರೇಕ್ಷಕರಲ್ಲಿ ಒಂದು ಕುತೂಹಲ ಮೂಡಿಸಿದ್ದರು.

ಸಾಂದರ್ಭಿಕ ಕವಿತೆ:
“ಕನ್ನಡದ ಬರಗೂರರು
ನಮ್ಮೂರಿಗೆ ಬರುವವರೇ,
ಬರಗೊಡದಿದ್ದರೆ
ಕೆನಡಾದವರಿಗೆ ಫಜೀತಿಯೇ!
ಅಲ್ಲಿಗೂ ಮುಟ್ಟಿತೇ
ಮಾತಿನಮಲ್ಲಿಯ ಕೀರುತಿ?”
(ಕವಿ: ಶ್ರೀವತ್ಸ ದೇಸಾಯಿ)
ನಂತರ ನಮ್ಮ ಭವಿಷ್ಯದ ಕನ್ನಡದ ಕಣ್ಮಣಿಗಳೆಂದೇ ಭಾವಿಸುವ ಸಾಮರ್ಥ್ಯ ಉಳ್ಳಂತಹ ನಮ್ಮ ಚಿಣ್ಣರ ಬಳಗದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಇದರಲ್ಲಿ ಭರತನಾಟ್ಯ, ಪುಣ್ಯಕೋಟಿ ಕಥೆಯ ಅಭಿನಯ, ವಚನ, ದೇವರ ನಾಮ, ಕೇಂಬ್ರಿಜ್ ಚಿಣ್ಣರ ಸಮ್ಮಿಲನ ನೃತ್ಯಗಳು ಪ್ರೇಕ್ಷಕರ ಕಣ್ಣು ಸೆಳೆದವು.
ಇದೇ ಸಮಯ್ದಲ್ಲಿ ಪಕ್ಕದ ಕೊಠಡಿಯಲ್ಲಿ ನಮ್ಮ ಪೂರ್ವ, ವರ್ತಮಾನ ಹಾಗೂ ಭವಿಷ್ಯದ ಸಾಹಿತಿಗಳಾಗುವ ಸಾಮರ್ಥ್ಯ ಉಳ್ಳಂತಹ ಹಿರಿಯ ಹಾಗೂ ಕಿರಿಯ ಕನ್ನಡಿಗರೂ ಕೂಡಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇವರೆಲ್ಲರೂ ಕೂಡಿ ತಮ್ಮ ಚುಟುಕು ಸಾಹಿತ್ಯವನ್ನು ಪ್ರದರ್ಶಿಸಿ ಇತರರನ್ನು ಹುರುದುಂಬಿಸಿದರು. ಮಹಿಳಾ ಸಾಹಿತಿಗಳು ಎಂಬ ಒಂದು ವಿಶೇಷ ಕಾರ್ಯಕ್ರಮವನ್ನು ನಡೆಸಿ ತಮ್ಮ ತರ್ಕವನ್ನು ಎಲ್ಲರೊಡನೆ ಮಂಡಿಸಿದರು.
ಇದೆಲ್ಲ ನಡೆಯುತ್ತಿರುವಾಗ ನನ್ನ ಗಮನ ಮಧ್ಯಾಹ್ನದ ಊಟದ ತಯಾರಿಯಲ್ಲಿ ಇತ್ತು. ಊಟ ಲಂಡನ್ ನಿಂದ ಬರುವಾಗ ಆಗಲೇ ಸ್ವಲ್ಪ ತಡವಾಗಿತ್ತು. ಮತ್ತೆ ಮೋಡ ಕವಿದ ವಾತಾವರಣ ಹೆಚ್ಚಾಗಿ ವರುಣದೇವ ಸಣ್ಣದಾಗಿ ಇಲ್ಲೋ ಅಲ್ಲೋ ಎಂಬಂತೆ ಹನಿ ಮಳೆ ಶುರುವಾಗಿ ಮತ್ತೆ ನಮಗೋಸ್ಕರ ತಡೆ ಹಿಡಿದು ಸ್ಥಬ್ದವಾಯಿತು. ಅಂತೂ ಊಟ ಬಂತು, ನಮ್ಮೆಲ್ಲ ಕಾರ್ಯಕರ್ತ್ರರ ತಂಡ ಊಟ ಬಡಿಸಲೂ ತೊಡಗಿದರು. ಹಿರಿಯರಿಗೆ, ಚಿಣ್ಣರಿಗೆ ವಿಶೇಷ ಸಾಲು ಹಾಗು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಊಟ ನಡಿಯುತ್ತಿಯುವ ಸಮಯದಲ್ಲಿ ನನಗೆ ಊಟ ಚೆನ್ನಾಗಿದೆಯೇ? ಸಾಕಷ್ಟು ಊಟ ಎಲ್ಲರಿಗೂ ಇದೆಯೇ? ಎಂಬ ಯೋಚನೆ ಬಂದಿತ್ತು. ಬಂದ ಅತಿಥಿಗಳನ್ನು ಕೇಳಿದಾಗ, ಕೆಲವರು ಊಟವನ್ನೇನೋ ಹೊಗಳಿದರು, ಆದರೆ ಆಗ ತಾನೆ ನಮ್ಮೆಲ್ಲರಿಗೂ ಆಘಾತವಾಗಿದ್ದು ಸಾಕಷ್ಟು ಅನ್ನ ಎಲ್ಲರಿಗೂ ಇರಲಿಲ್ಲ. ಇದನ್ನು ಕೇಳಿ ತುಂಬಾ ದುಃಖವಾಯ್ತು, ಆದರೂ ಬೇರೆ ದಾರಿ ಇಲ್ಲದೆ ಬೆಳಗಿನ ಉಳಿದ ತಿಂಡಿ ಹಾಗು ಚಪಾತಿಯನ್ನೇ ಉಳಿದ ಎಲ್ಲರೂ ಹಂಚಿಕೊಂಡು ತಿಂದದ್ದು ಸಂತೋಷವಾದರೂ ನನಗೆ ಕೆಲವರನ್ನು ಅರೆಹೊಟ್ಟೆ ಮಾಡಿದ ದುಃಖ ಕಾಡುತಿತ್ತು. ಆದರೂ ವಿವೇಕ್, ಚಂದ್ರಪ್ಪ ಮತ್ತಿತರರರು ನನ್ನ ದುಃಖವನ್ನು ಹಂಚಿಕೊಂಡು ಮುಂದಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶುರುಮಾಡಲು ಆಯೋಜನೆಗೆ ಸಹಾಯ ಹಸ್ತ ನೀಡಿದರು.
ವೆಂಕಟೇಶ್, ಶಶಿ ಇವರೆಲ್ಲರ ಮುಂದಾಳತ್ವದಲ್ಲಿ ಮಧ್ಯಾಹ್ನದ ಕಾರ್ಯಕ್ರಮ ತೊಡಗಿದವು. ಪ್ರಮೋದ್ ಮತ್ತು ಶ್ರೀರಂಜನ್ ವಾಸುದೇವನ್ ರವರ ವೀಣಾ & ಗಿಟಾರ್ ಜುಗಲ್ ಬಂದಿ ಕಾರ್ಯಕ್ರಮ ಎಲ್ಲ ಹಸಿದಿದ್ದ ಪ್ರೇಕ್ಷಕರ ಮನಸ್ಸನ್ನು ತಣಿಸಿತು. ನಂತರದ ಎಲ್ಲ ಕಾರ್ಯಕ್ರಮಗಳು ಒಂದಾದ ನಂತರ ಒಂದು ಎಂಬಂತೆ ಎಲ್ಲರನ್ನು ಮನೋರಂಜಿಸಿತು.

ಚಹಾ ಸಮಯದಲ್ಲಿ ಕೆಲವರಿಗೆ ಮಾತ್ರ ಬಿಸಿ ಪಕೋಡ ಸಿಕ್ಕಿತು. ಸಮಯದ ಅಭಾವದಿಂದ ಸಾಲಿನಲ್ಲಿದ್ದ ಎಲ್ಲರನ್ನು ವಾಪಾಸು ಕರೆತಂದು ಹಾಲಿನಲ್ಲೆ ಎಲ್ಲರಿಗೂ ಪ್ರತ್ಯೇಕವಾಗಿ ಚಹಾ ಸರಬರಾಜು ಮಾಡುವ ಸಂದರ್ಭ ಬಂತು. ಅದೇ ಸಮಯದಲ್ಲಿ ನಮ್ಮ ಸುಧಾ ಬರಗೂರ್ ಅವರು ಸತತ ಒಂದೂವರೆ ಘಂಟೆ ಕಾಲ ತಮ್ಮ ವಿಶಿಷ್ಟ ಶೈಲಿಯಲ್ಲಿ ಎಲ್ಲರನ್ನು ನಕ್ಕು ನಗಿಸಿ ಹೊಟ್ಟೆ ಹುಣ್ಣಾಗುವಂತೆ ಮಾಡಿದರು. ನಾನು ಅವರಿಗೆ ನೀರು ಕೊಡಲು ವೇದಿಕೆ ಹತ್ತಿರ ಹೋದರೆ, ಏನ್ರಿ ಸ್ವಾಮಿ, ನಾವು ಎಷ್ಟೋ ಜನಕ್ಕೆ ನೀರು ಕುಡಿಸಿದಿವಿ ನೀವು ನಂಗೆ ನೀರು ಕುಡಿಸೋಕೆ ಬರ್ತಿರಾ? ಎಂದು ಹಾಸ್ಯ ಚಟಾಕಿ ಹೊಡೆದರು.
ನಂತರ ಮನೋರಂಜೆನೆ ಮುಂದುವರಿದು ನಮ್ಮ ಬಹುಭಾಷಾ ಗಾಯಕರೆಂದೇ ಹೆಸರಾದ ಶ್ರೀ ಅಜಯ್ ವಾರಿಯರ್ ಅವರು ೭೦, ೮೦, ೯೦ ದಶಕದ ಹಾಗು ಇತ್ತೀಚೆಗಿನ ಕನ್ನಡ ಹಾಡುಗಳಿಂದ ಪ್ರೇಕ್ಷಕರೆಲ್ಲರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಎಲ್ಲರೂ ನಂತರ ನಮ್ಮ ರಾತ್ರಿ ಊಟವನ್ನು ಸಿಕ್ಕಷ್ಟು ಸವಿದು ತಮ್ಮ ತಮ್ಮ ನೆಲೆಗೆ ಹಿಂತಿರುಗುವ ತಯಾರಿ ನಡೆಸಿದರು.

ಕಾರ್ಯಕ್ರಮದ ನಂತರ ಶಶಿ ಮಠಪತಿ ಎಲ್ಲರಿಗೂ ವಂದಿಸಿದರು. ನಾನು ಮತ್ತೊಮ್ಮೆ ಎಲ್ಲ ಕೇಂಬ್ರಿಜ್ ತಂಡದ ಕನ್ನಡ ಗೆಳೆಯರ ಸಹಾಯವನ್ನು ಸ್ಮರಿಸಿ, ವೆಂಕಟೇಶ್, ಶಶಿ ಹಾಗು ಇನ್ನು ಕೆಲವು ಗೆಳೆಯರ ಕೂಡ ಹೋಟೆಲಿಗೆ ಹಿಂತಿರುಗಿದೆವು.
ವೆಂಕಟೇಶ್, ಶಶಿ, ಚಂದ್ರಪ್ಪ ಹಾಗೂ ಕೇಂಬ್ರಿಜ್ ತಂಡ ಈ ಕಾರ್ಯಕ್ರಮಕ್ಕೆ ನೀಡಿದ ಸಹಾಯಕ್ಕೆ ನಾನು ಕನ್ನಡ ಬಳಗ ಯು ಕೆ ವತಿಯಿಂದ ಎಂದೆಂದಿಗೂ ಚಿರಋಣಿಯಾಗಿರುತ್ತೆನೆ.
ಕಡೆಯದಾಗಿ ಆದರೂ ಬಹು ಮುಖ್ಯವಾಗಿ ನನ್ನ ಈ ಕಾರ್ಯಕ್ರಮದ ಆಯೋಜನೆಗೆ ನನ್ನ ಬೆನ್ನೆಲುಬು ಆಗಿ ನನಗೆ ಸಹಾಯಿಸಿದ ನನ್ನ ಮುದ್ದಿನ ಮಡದಿ ಶ್ರೀಮತಿ ಧರಿತ್ರಿ ಹೊಂಬಾರ್ಡಿ ಹಾಗೂ ನಮ್ಮ ಮಗಳು ದೀಕ್ಷಾ ಬಿಲ್ಲಹಳ್ಳಿ ಇವರಿಗೆ ನನ್ನ ಪ್ರೀತಿಯ ನಮನಗಳು
ಇಂದು ಕನ್ನಡ ಬಳಗ ನೀಲಗಿರಿಯಂತೆ ಎತ್ತರಕ್ಕೆ ಬೆಳೆದು ಕನ್ನಡಿಗರ ಮನಸ್ಸಿನಲ್ಲಿ ಅಷ್ಟೇ ಆಳವಾಗಿ ಬೇರೂರಿದೆ. ಸಿರಿಗಂಧದ ನಮ್ಮ ನಾಡಿನ ಕಂಪು ಸದಾ ಕಾಲಕ್ಕೂ ಹೀಗೆ ಚಿರವಾಗಿರಲಿ ಎಂದು ಆಶಿಸುತ್ತೇನೆ. ಬನ್ನಿ ಗೆಳೆಯರೇ ನಾವೆಲ್ಲ ಮತ್ತೆ ಮತ್ತೆ ಕೂಡೋಣ ನಮ್ಮ ಬಳಗವನ್ನ “ಆಲದ ಮರದಂತೆ” ಪ್ರಪಂಚದ ಉದ್ದಗಲಕ್ಕೂ ಬೆಳೆಸೋಣ.
ಸಾಂದರ್ಭಿಕ ಕವಿತೆ:
KB in CB last weekend
ದೀಪಾವಳಿ ಸಮಾರಂಭ
ಸು.ಬ.
ಪಾಸ್ ಪೋರ್ಟ ಕಳಕೊಂಡರೂ
ಸಪ್ಪೋರ್ ಟ ಕಳಕೊಳ್ಳಲಿಲ್ಲ!
ಎಫರ್ಟಿಗೆ ಭರ್ಜರಿ ರಿಪೋರ್ಟ
ಚಪ್ಪಾಳೆ ತಟ್ಟಿ
ಚಪ್ಪರಿಸಿ ಬೆನ್ನು!
(ಇನ್ನೂ ಬಾಗಿದೆ ದುಡಿದು!)
ಕೊಡಿ ತಂಡಕ್ಕೆ ತುರಾಯಿ
ಹಾಕಿ ನೇತಾರರಿಗೆ, ಹಾರ
ಅವರನ್ನ ಹಾಕ ಬೇಡಿ ನೇತು
(ಸ್ವಲ್ಪ ಕುಂದುಕೊರತೆ ಎಲ್ಲಿಲ್ಲ?
ಇಂದೂ ಎಂದೂ ನನ್ನಲ್ಲೂ)
Kudos! Bravo CB team!
(ಕವಿ: ಶ್ರೀವತ್ಸ ದೇಸಾಯಿ)
ಯುತ್ ಕಾರ್ಯಕ್ರಮದ ವರದಿ – ನವ್ಯಾ ಆನಂದ್

ನವ್ಯಾ ಆನಂದ್ ಎರಡನೇ ಜನರೇಶನ್ನಿನ ಕನ್ನಡದ ಹುಡುಗಿಯಾದರೂ ಅರಳು ಹುರಿದಂತೆ ಕನ್ನಡ ಮಾತಾಡುವುದಷ್ಟೇ ಅಲ್ಲ, ಕನ್ನಡದಲ್ಲಿ ಬರೆಯುತ್ತಾರೆ, ಹಾಡುತ್ತಾರೆ ಕೂಡ. ಕನ್ನಡ ಬಳಗ ಯು ಕೆ ಯಲ್ಲಿ `ಯುತ್` ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಅದರದೊಂದು ಪುಟ್ಟ ವರದಿಯನ್ನೂ ಅನಿವಾಸಿಗೆ ಬರೆದು ಕೊಟ್ಟಿದ್ದಾರೆ.
ನವ್ಯಾ ಯು ಕೆ ಕನ್ನಡಿಗರ ಹೆಮ್ಮೆ. ಇತ್ತೀಚೆ ಕನ್ನಡ ಗಮಕ ಗಳನ್ನೂ ಕಲಿತು ಬಂದಿದ್ದಾರೆ. ಅವರು ಇನ್ನೂ ಹೆಚ್ಚು ಅನಿವಾಸಿಗೆ ಬರೆಯಲಿ ಎಂದು ಆಶಿಸುತ್ತೇನೆ – ಸಂ.
ಕನ್ನಡ ಬಳಗ ಯುಕೆ ದೀಪಾವಳಿ ಸಮಾರಂಭದಲ್ಲಿ, ೧೦ ರಿಂದ ೧೬ ವರ್ಷದ ಮಕ್ಕಳಿಗೆ ನಡೆಸಿದ ಕಾರ್ಯಕ್ರಮದಲ್ಲಿ, ಸುಮಾರು ೩೦ – ೩೫ ಮಕ್ಕಳು ಭಾಗವಹಿಸಿದ್ದರು.
Pictionary ಮತ್ತು charades ಆಟಗಳನ್ನ ಕನ್ನಡದಲ್ಲಿ ಆಡಿದ ಮಕ್ಕಳಿಗೆ ಹೊಸ ಹೊಸ ಕನ್ನಡ ಪದಗಳನ್ನು ಕಲಿಯೋ ಅವಕಾಶ ಸಿಕ್ಕಿತು. ಮಕ್ಕಳು ಈ ಆಟಗಳಿಂದ ಬಹಳ ಮಜಾ ತೊಗೊಂಡ್ರು – ಅವರಿಗೆ ಆಶ್ಚರ್ಯವಾಗಿತ್ತು, ಆಂಗ್ಲಭಾಷೆಯಲ್ಲಿ ಸುಲಭವಾಗಿ ಉಪಯೋಗಿಸೋ ಪದಗಳು ಕನ್ನಡಲ್ಲಿ ಕಷ್ಟ ಪಟ್ಟು ಜ್ಞಾಪಿಸ್ಕೊಬೇಕಾಗಿತ್ತು!
ನಮ್ಮ ದೇಶದ ಸಂಸ್ಕೃತಿಯನ್ನ ಮಕ್ಕಳಿಗೆ ಪರಿಚಯ ಮಾಡಿಸಲು ನಮ್ಮ ಪುರಾಣ ಕಥೆಗಳಲ್ಲಿ ಒಂದಾದ, ನವಗ್ರಹ ದೇವತೆಗಳ ಕಥೆಗಳನ್ನ ಆರಿಸಿದ್ದೆ. ಪ್ರತಿ ಕಥೆಯನ್ನು ಆಂಗ್ಲಭಾಷೆಯಲ್ಲಿ ಬರೆದು, ೫ ಪದಗಳನ್ನ ತೆಗೆದಿದ್ದೆ. ತೆಗೆದಿರೋ ಪದಗಳಿಗೆ ೫ ಕನ್ನಡ ಪದಗಳನ್ನು ಕೊಟ್ಟಿದ್ದೆ; ಮಕ್ಕಳು ಆ ೫ ಪದಗಳನ್ನು ಓದಿ, ಸರಿಯಾಗಿರೋ ಪದವನ್ನು ವಾಕ್ಯಕ್ಕೆ ಸೇರಿಸಿದ್ದರು. ಕಡೆಯಲ್ಲಿ, ಎಲ್ಲರೂ ಕೂಡಿ, ಅಷ್ಟೂ ನವಗ್ರಹ ಕಥೆಗಳನ್ನು ಗಟ್ಟಿಯಾಗಿ ಓದಿ ಹಂಚಿಕೊಂಡರು.
ನವಗ್ರಹ ಬಗ್ಗೆ ಕಲಿಯೋ ಆಟವನ್ನು ಮಕ್ಕಳು ಮತ್ತು ನಾನು ಇಷ್ಟ ಪಟ್ಟು ಆಡಿದ್ವಿ. ಮಕ್ಕಳಿಗೆ ಎಷ್ಟೊಂದು ಕನ್ನಡ ಪದಗಳು ಗೊತ್ತಿದೆ ಅಂತ ನನಗೂ ಅರ್ಥ ಆಯಿತು – ಮಾತಾಡಕ್ಕೆ ನಾಚಿಕೆ ಪಟ್ಟರೂ, ಈ ಮಕ್ಕಳಿಗೆ ಕನ್ನಡ ಅರ್ಥ ಆಗತ್ತೆ. ಕನ್ನಡನ ಆಟದ ರೀತಿಯಲ್ಲಿ ಬಳಸಿ, ಮಜವಾಗಿ ಹೇಳಿಕೊಟ್ಟರೆ, ಮಕ್ಕಳಿಗೂ ಕನ್ನಡ ಕಲಿಯುವ ಆಸಕ್ತಿ ಇದೆ. ಈ ಆಸಕ್ತಿ ಕಂಡು, ನನಗೂ, ಮುಂದೆ ಈ ತರಹ, ಮಕ್ಕಳಿಗೋಸ್ಕರ ಕಾರ್ಯಕ್ರಮವನ್ನು ಆಯೋಜಿಸುವ ಹುರುಪು ಬೆಳಿಯತ್ತೆ.
ಇನ್ನೂ ನೂರಾರು ಚಿತ್ರಗಳನ್ನು ನೋಡಲು ಇಲ್ಲಿ ಒತ್ತಿ.
ಈ ದೇಶದಲ್ಲಿ ಕನ್ನಡ ಬಳಗದ ಇಂಥ ಕಾರ್ಯಕ್ರಮ ನಡೆಸಿಕೊಡುವದರಲ್ಲಿಯ ಪರಿಶ್ರಮ, ಸಂಘಟನೆ ಇವುಗಳನ್ನು 1983ರಿಂದಲೂ ನೋಡುತ್ತ ಬಂದಿದ್ದೇನೆ. ಕಾರ್ಯಕಾರಿ ಸಮಿತಿ ಮೂರು ವರ್ಷಗಳ ವರೆಗಿದ್ದರೂ ಸ್ಥಳೀಯ ಸಮಿತಿಯವರನೇಕರಿಗೆ ಕಾರ್ಯಕ್ರಮ ನೆರವೇರಿಸುವದು ಪ್ರತಿಸಲ ಹೊಸ ಅನುಭವವೇ ಆಗಿರುವದರಿಂದ ಹೆಚ್ಚು ಕಡಿಮೆ, ಕುಂದು ಕೊರತೆಗಳ ಕಹಿ ಉಂಡು ನಂಜುಂಡರಾಗುತ್ತಾರೆ. ಅವರೆಲ್ಲ ಧೃತಿಗೆಡಲಿಲ್ಲ ಅಂತ ಅಂದು ಕೊಂಡಿದ್ದಲ್ಲದೇ ಅವರ ಬೆನ್ನು ಸಹ ತಟ್ಟಿದ್ದೇನೆ. ತಿಪ್ಪೇಸ್ವಾಮಿಯವರು ಒಳಗಿನ ಹೊರಗಿನ ಎರಡೂ ದೃಷ್ಟಿಯಿಂದ ನೋಡಿ, KBUKದ ಬಗ್ಗೆ ಅಭಿಮಾನದಿಂದ ಬರೆದ ಪ್ರಾಮಾಣಿಕ ಬರಹಕ್ಕೆಅಭಿನಂದನೆಗಳು. ನಿಮ್ಮ ಬೆಂಬಲ ಮುಂದೂ ಕನ್ನಡ ಬಳಗಕ್ಕೆ ಇರುವ ಭರವಸೆಯಿದೆ. ಈ ಅನುಭವ ಮುಂದೆ ಮಾರ್ಗದರ್ಶನ ಮಾಡಲು ಅನುಕೂಲವಾದೀತು.
ಇನ್ನು, ನವ್ಯ ಆನಂದ ಅವರ ಯುವಮಂಡಳಿಯ ಬಗೆಗಿನ ಕಾಳಜಿ ಇನ್ನೂ ಮುಂದುವರೆದುದನ್ನು ತಮ್ಮ ಲೇಖನದಲ್ಲಿ ತೋರಿಸಿದ್ದಾರೆ. ಇವರ ಬೆಂಬಲ ನಮ್ಮ ಬಳಗದ ಆಸ್ತಿ. ಅವರಿಗೂ ಅಭಿನಂದನೆಗಳು. ಯುಗಾದಿಗೆ ಎಲ್ಲರಿಗೂ ನಮ್ಮೂರಾದ ಡೋಂಕಾಸ್ಟರಿಗೆ ಬರಲು ಮತ್ತೆ ನೆನಪು ಮಾಡಿಕೊಡುತ್ತೇನೆ. So long …
LikeLike
ವರ್ಷದ ಕೊನೆಗೆ ಸಂಘಟನೆಯ ಮಹತ್ವ, ಅವಶ್ಯಕತೆ ಮತ್ತು ಯಶಸ್ಸನ್ನು ಮತ್ತೆ ನೆನಪಿಸುವ ಸಾಂದರ್ಭಿಕ ಲೇಖನ. ನವ್ಯ ಆನಂದ್ ಅವರ ಚಿಕ್ಕ, ಚೊಕ್ಕ ವರದಿ ಮತ್ತು ಅವರ ಆಶಯ, ಡಿ.ವಿ.ಜಿ ಯವರ “ಹೊಸ ಚಿಗುರು ಹಳೆಬೇರು…. ” ಕಗ್ಗವನ್ನ ನೆನಪಿಸಿತು.
ಯು.ಕೆ ಯ ಕನ್ನಡಿಗರನ್ನ ಒಂದು ಗೂಡಿಸಿ, ೨೫ಕ್ಕೂ ಹೆಚ್ಚು ವರ್ಷಗಳಿಂದ ಬೆಳೆಸುತ್ತ, ಅನಿವಾಸಿಯಂತ ಹೊಸ ಸಾಧ್ಯತೆಗಳಿಗೆ ಅನುವುಮಾಡಿಕೊಟ್ಟ ಹಿರಿಯ ಚೇತನರೆಲ್ಲರಿಗೆ ನಮನಗಳು. ಹಾಗೆಯೇ ತಮ್ಮ ಅಮ್ಮ-ಅಪ್ಪರ ಭಾಷೆಯನ್ನ ಮರೆಯದೆ, ಉದಾಸೀನ ಮಾಡದೆ ಉಳಿಸಿಕೊಳ್ಳುತ್ತಿರುವ ‘ಕನ್ನಡಾಂಗ್ಲ’ ಕಿರಿಯರ ಉತ್ಸಾಹಕ್ಕೂ ಮೆಚ್ಚುಗೆಯ ಚಪ್ಪಾಳೆಗಳು.
ಎಲ್ಲರಿಗೂ ಬರಲಿರುವ ಹೊಸ ವರ್ಷದ ಶುಭಾಶಯಗಳು!
LikeLiked by 1 person