ಪೀಠಿಕೆ:
ಪ್ರಯಾಣದಲ್ಲಿ ಅನೇಕ ಬಾರಿ ನಾವು ಸೇರುವ ಊರಿಗಿನ್ನ, ಸಾಗಿ ಹೋಗುವ ದಾರಿಯೇ ನಮ್ಮ ಮನಸ್ಸನ್ನು ಸೆಳೆಯುತ್ತದೆ, ಎಷ್ಟೋ ಸಾರಿ ಮನಸ್ಸಿನಲ್ಲೇ ಅಚ್ಚಳಿಯದೆ ಉಳಿದಿಬಿಡುತ್ತದೆ.
ಪ್ರೀತಿಯೂ ಹಾಗೆಯೇ, ಅದರ ಗುರಿಯನ್ನು ತಲುಪುವುದಕ್ಕಿಂತ ಅದರ ನವಿರಾದ ಭಾವವೇ ಹೆಚ್ಚು ಮುದ ಕೊಡುತ್ತದೆ, ನೆನಪುಗಳೇ ಕಚಗುಳಿಯಿಡುತ್ತವೆ.
ನವಿರಾದ ಭಾವ, ನಾವಿಲಾದ ಮನ, ಮಲ್ಲಿಗೆಯ ದಳಗಳಲ್ಲಿ ಇಳಿದ ಪ್ರೀತಿ, ಇಂತಹ ಅನುಭವ ಕೊಡುವ ಸೊಗಸಾದ ಕವನ ‘ಕೊಡಲೇನು ನಿನ್ನ ಹೆಸರು?’ ನೀವೂ ಓದಿ ಆಸ್ವಾದಿಸಿ.
ಥೇಟು ನವಿಲುಗರಿಯ ಹಾಗೆ
ಮನಸಿನ ಪುಟಗಳ ನಡುವೆ
ಬೆಚ್ಚಗೆ ಅಡಗಿ ಮರಿಯಿಟ್ಟು
ನೆನೆದು ನೇವರಿಸಿದಾಗೆಲ್ಲ
ಮುದ ಕೊಡುವ ನವಿರು, ನವಿರು!
ಎದುರಿಲ್ಲದೆ, ಇಡಿಯಾಗಿ ಸಿಗದೆ
ಕಲ್ಪನೆಗಳ ಚಿಗುರು ಕುಡಿಗಳಲಿ
ನಳನಳಿಸಿ ಬಳುಕಿ ಬಾಗಿ
ಕೆನ್ನೆಯಲಿ ಕಚಗುಳಿಯಾಗಿ
ಬೆಚ್ಚಗೆ ಹರಿವ ಉಸಿರು!
ಮುದ ಕೊಡುವ ನವಿರು, ನವಿರು!
ಹೂಬನದ ಸೊಬಗಲ್ಲಿ
ಮಲ್ಲಿಗೆಯ ಅರಳಲ್ಲಿ
ದಳಗಳ ಸುತ್ತುಗಳಲಿ
ಹಾಸಿ ಮಲಗಿದ ಕಂಪಾಗಿ
ಮೈಮನಗಳ ಆಹ್ವಾನಿಸಿ
ಕರೆವ ಕಂಪಿಗೆ ಯಾರ ಮೆರುಗು?
ಮುದ ಕೊಡುವ ನವಿರು, ನವಿರು!
ಕಲ್ಪನೆಯೋ, ಕಾವ್ಯವೋ
ಅರೆಗಳಿಗೆ ಮತ್ತಿನ ಮರುಳಾಗಿ
ಹಗುರಾಗಿ, ಬೆರಗಾಗಿ
ನಿನ್ನೆಡೆಗೆ ತುಡಿವ ತಂತಿನಲಿ
ನನ್ನ ಕಳಕೊಳ್ಳುವ ಪರಿಗೆ
ಕೊಡಲೇನು ನಿನ್ನ ಹೆಸರು?
ಮುದ ಕೊಡುವ ನವಿರು, ನವಿರು!
–ಡಾ. ಪ್ರೇಮಲತ ಬಿ
( the same poem has been published in Connect kannada blog. to see please click on the link below.
ಸರಳಲ ಸಾಲುಗಳಲಿ ಅವಿತ ಭಾವನೆಗಳು ಸುಂದರವಾಗಿವೆ
LikeLike
ಕವಿತೆಯ ಲಯ ನನಗೆ ತುಂಬ್ ಇಷ್ಟವಾಯಿತು. ಸರಾಗವಾಗಿ ಯಾವ ಆಡಂಬರವಿಲ್ಲದೇ, ಹಳೆಯ ಉಪಮೆಗಳನ್ನೇ ಪ್ರತಿಮೆಗಳನ್ನೇ ಉಪಯೋಗಿಸಿ ಭಾವನೆಗೊಂದು ಹೊಸ ಬಣ್ಣದ ತೋರಣ ನಿಮ್ಮ ಕವನ! ನಿಮ್ಮ ಕವನ ಸಂಕಲನದ ಎದುರು ನೋಡುತ್ತಿದ್ದೇನೆ! – ಕೇಶವ
LikeLike
ಈ ಕವಿತೆಗೆ ಕಳಶವಿಟ್ಟಂಥ ಮೊದಲ ಚರಣವೊಂದೇ ಸಾಕು ಬರವಣಿಗೆಯ ಕುಶಲತೆಗೆ, ಕಲ್ಪನೆಯ ಶ್ರೀಮಂತಿಗೆಗೆ, ನವಿರಾದ ಭಾವನೆಗಳಿಗೆ ಸಾಕ್ಷಿ. ಪುಟಗಳ ನಡುವಿನ ಪಿಂಛದಂತೆ ’ಮರಿಯಿಟ್ಟು’ ಮತ್ತೆ ಮತ್ತೆ ನೇವರಿಸಿ ಮುದಕೊಡುತ್ತದೆ. ನೀವು ಹೆಸರು ಏನೇ ಕೊಡಲಿ. ಬಿಡಲಿ, ಪ್ರೇಮಲತಾ ಅವರೆ! ಈ ಕವನ ಸಿಡಿಯಲ್ಲಿಯ ಧಾಟಿ, ಸಂಗೀತವನ್ನು ಮೀರಿ ತನ್ನಷ್ಟಕ್ಕೆ ನಿಂತಿದೆ.
LikeLike
ಪ್ರೀತಿಯ ನವಿರತೆಯನ್ನು ನವಿರಾಗಿ ಹೇಳುವ ಕೋಮಲ ಭಾವಗಳ ನವಿರಾದ ಕವನ.ಅದಕ್ಕೆ ಕೊಡುವ ಉಪಮೆಗಳ ಸೊಗಸು ಬಲು ಸುಂದರ.ಮನದಲ್ಲಿ ನವಿಲು ಗರಿ, ಹೂವಿನ ದಳಗಳ ಸುಳಿಯಲ್ಲಿ ಸೌಗಂಧವಾಗಿ, ಕಂಪಿನಿಂಪಾಗಿ ಹರಡಿ , ಕಂಗಳಲ್ಲಿ ಕನಸಾಗಿ ತುಂಬಿ ನಿಂದ , ಮನದಲ್ಲಿ ಮುದವಾಗಿ , ನವಿರಾಗಿ ಹರಡಿ ದ ಭಾವ ಕೆ ಕೊಡಲೇ ನಿನ್ನ ಹೆಸರು ಎಂದು ಕೇಳುವ ಕವಿವಾಣಿ ಮರುಳು ಗೊಳಿಸುವ ಂಂ
ಥದು.ಪ್ರೀತಿಯೇ ನಿನಗೇಸು ರೂಪವೇ, ಅದೇನು ನಿನ್ನ ಮಾಯೆಯೇ ಎಂದು ಹೇಳುವಂತಿರುವ ಮಧುರ ಕವನ.ಅಭಿನಂದನೆಗಳು ಪ್ರೇಮ ಲತಾ ಅವರೇ.
ಸರೋಜಿನಿ ಪಡಸಲಗಿ
LikeLiked by 2 people