‘ಸೆಲೆ’- Dr.ರಾಮ್ ಶರಣ್ ಅವರ ಪ್ರಣಯ ಕವನ

ಪ್ರಕೃತಿಯಲ್ಲಿ ಇರುವ ಜೀವಿಗಳು, ಹೂ, ಮರ, ಗಿಡ, ಬಳ್ಳಿ, ಎಲ್ಲವೂ ಅವಿರತ ಸೃಷ್ಟಿಯ ಕಾರ್ಯದ ಪ್ರತೀಕ.ಎಲ್ಲಕೂ ಒಂದು ಸೆಲೆ ಇರಲೇಬೇಕು, ಸೆಲೆ ಇಲ್ಲದ ಸೃಷ್ಟಿ ನಿರರ್ಥಕವಾದುದು. ಹಾಗೆಯೇ ಪ್ರೀತಿ ಇಲ್ಲದ ಪ್ರಣಯ ಕೂಡ ನಿರರ್ಥಕವೇ ಸರಿ. ಅಂತಹುದೊಂದು ಭಾವವನ್ನು ಮೆರೆಸಿದ ಬರಹ ಇದಾಗಿದೆ. ರಾಮ್ ಅವರ ಪದ ಮೋಡಿಯೂ ಇಲ್ಲಿ ಪ್ರಣಯವಾಡಿದಂತೆ ತೋರುವುದು ಈ ಕವನದ ಮತ್ತೊಂದು ವಿಶೇಷ. ಇಲ್ಲಿ ಅವರು ‘ಸರಪಳಿ ಕಾವ್ಯ’ (chain rhyme) ವನ್ನು ಬಳಸಿ ಕವನವನ್ನು ಭಾವಗೀತೆಯಾಗಿಸಿ, ಕೇಳಿ ಆನಂದಿಸುವವರಿಗೆ ಮತ್ತೆ ಮತ್ತೆ ಕೇಳಬೇಕೆನಿಸುವ ಮಾದಕವನ್ನು ತುಂಬಿದ್ದಾರೆ.

ಕಳೆದ ತಿಂಗಳಷ್ಟೇ  KBUK ಯುಗಾದಿ ಸಂಭ್ರಮಾಚರಣೆಯಂದು ( KSSVV) ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ (UK)ಯ  ಕವಿಗಳು ಹೊರತಂದ ಧ್ವನಿಸುರುಳಿಯಲ್ಲಿ  ಈ ಕವನವೂ ಕೂಡ ಹಾಡಾಗಿ ಜನರ ಮನ ಮುಟ್ಟಿದೆ.

 ಸೆಲೆ

ಕಣ್ಣುಗಳು ಕಲೆತಾಗ ಝುಮ್ಮೆನದೇ ಹೃದಯ

ಹೃದಯ ಕುಣಿ-ಕುಣಿದಾಗ ಮೈಮರೆಯದೇ ದೇಹ

ದೇಹ ತೇಲಿ ನಲಿದಾಗ ಸ್ತಬ್ಧವಾಗದೇ ಸಮಯ

ಸಮಯ  ನಿಂತು ತೂಲಿದಾಗ  ಬಂದೆ ನೀ ಸನಿಹ

 

ಗೆಳೆಯ ನಿನ್ನ ನೆನೆದಾಗ ಮಾಯವಾಗದೇ  ಜಗ

ಜಗದರಿವು ಮರೆತಾಗ ಕಣ್ಮುoದೇ ನಿನ ಮೊಗ

ಮೊಗವೆತ್ತಿ ಹಿಡಿದಾಗ ಕಾಣದೇ ನನ ಬಿಂಬ

ಬಿಂಬದ ಪ್ರತಿಫಲನದಾಗ ಕಂಡೆ ಪ್ರತಿಬಿಂಬ

 

ಪ್ರೀತಿಯ ಸುಳಿಗೆ ಸಿಕ್ಕಾಗ ಕಂಪಿಸದೇ ಜೀವ

ಜೀವ ನದಿಯ ಕಂಡಾಗ ಹಿಗ್ಗದೇ ಪ್ರಣಯ

ಪ್ರಣಯದ ಕರೆ ಬಂದಾಗ ಮಳೆಯಾದೆ ಇನಿಯ

ಇನಿಯ ಸೆಲೆಯಾದೆ, ನಿನ್ನ ಪ್ರೀತಿಯ ಸೆಲೆಯಾದೆ  

 

-ರಾಮ್  

5 thoughts on “‘ಸೆಲೆ’- Dr.ರಾಮ್ ಶರಣ್ ಅವರ ಪ್ರಣಯ ಕವನ

  1. ಸೆಲೆಯ ಅಲೆಗಳ ಮೋಡಿ
    ಬಹಳ ಚೆನ್ನಾಗಿದೆ.
    ಮತ್ತೆ ಮತ್ತೆ ಕೇಳಬಯಸುವ ಹಾಡು
    👌👌👌👌👌

    Like

  2. ಹೂವಲ್ಲಿ ನಿನ್ನ ಮೊಗವನ್ನು ಕಂಡೆ
    ಮೊಗದಲ್ಲಿ ನಿನ್ನ ಹೂನಗೆಯ ಕಂಡೆ
    ನಗುವಲ್ಲಿ ನಿನ್ನ ಚೆಲುವನ್ನು ಕಂಡೆ
    ಚೆಲುವಲ್ಲಿ ನಿನ್ನ ಒಲವನ್ನು ಕಂಡೆ

    ಎನ್ನುವ ಚಿ.ಉ ಅವರ ಹಾಡನ್ನು ನೆನಪಿಸುವಂಥ ಸರಪಣಿ ಹಾಡು. ರಾಗಸಂಯೋಜನೆ ಮತ್ತು ಹಾಡುಗಾರಿಕೆ ಎರಡೂ ಸೊಗಸಾಗಿ ಮೂಡಿಬಂದಿದೆ.

    ಅಭಿನಂದನೆಗಳು. – ಕೇಶವ

    Like

  3. ಪ್ರೀತಿಯ ‘ಸೆಲೆ’ ಯೊಡೆದು ಉಕ್ಕಿ ಹೊರಸೂಸಿ ದೆ ಈ ಕವನದಲಿ.ಮಧುರ ಭಾವಗಳ ಮಧುರ ಕವನ.ಕಣ್ಣು ಕಣ್ಣು ಸೇರಿ ಬಿಂಬ ಪ್ರತಿಫಲಿಸಿದಾಗ ಜಾರದಿರಲಿ ಸಮಯ ಎಂದು ಕಣ್ಮುಚ್ಚಿ ಅನಂತವಾಗಲಿ ಆ ಗಳಿಗೆ ಎಂಬ ಬಯಕೆ ಮೂಡಿಸುವ ಮೃದು ಮಧುರ ಭಾವಗಳ ಮಾಧುರ್ಯ ಭರಿತ ಸುಂದರ ಸುಮಧುರ ಕವನ. ಈ ಎಲ್ಲ ಕವನಗಳನೋದ್ತಿರುವಂತೆ ಸಿಡಿ ಕೇಳುವ ಬಯಕೆ ಅದಮ್ಯವಾಗ್ತಿದೆ.ಎಲ್ಲ ಕವಿ, ಗಾಯಕರಿಗೆ ಅಭಿನಂದನೆಗಳು.
    ಸರೋಜಿನಿ ಪಡಸಲಗಿ

    Liked by 1 person

  4. ಬಹಳೇ ಸುಂದರ ಕವನ. ಸಿಡಿಯಲ್ಲಂತೂ ತುಂಬಿ ಹರಿಯುವ ‘ಸೆಲೆ’! ಅಭಿನಂದನೆಗಳು!

    Like

  5. ಉತ್ತಮ ಕವನ. ಧ್ವನಿಮುದ್ರಿಕೆಯಲ್ಲಂತು ತುಂಬ ಚೆನ್ನಾಗಿ ಕೇಳಿಬಂದಿದೆ. ಅಭಿನಂದನೆಗಳು.

    Like

Leave a Reply

Your email address will not be published. Required fields are marked *