
ಇನ್ನೊಮ್ಮೆ ಮಗದೊಮ್ಮೆ ಅಂತ
ಪ್ರೀತಿಯ ಹಾದಿಯ ನಕ್ಷೆಯ
ಬೆದಕಿ, ಕೆದಕಿದ್ದೇನೆ
ಚೆಂಡು ಹೂವಿನ ತೋಟ
ಮಗ್ಗಲಿಗೆ ನೀರಿಲ್ಲದ ಬಾವಿ
ಜಾರಿ ಬಿದ್ದವರು ಹಜಾರ ಮಂದಿ
ಅಂತ ಕೇಳಿದ್ದೇನೆ
ಆದರೂ ಸೋಪಾನ ಹತ್ತೋದನ್ನು
ಇಳಿಯೋದನ್ನು ಬಿಟ್ಟಿಲ್ಲ
ಬುದ್ದಿವಾದಕೆ ಕಿವಿ ಕೊಟ್ಟಿಲ್ಲ
ಪುರಾತನ ಬೇರುಗಳ ಹೊಸ
ಚಿಗುರಿನ ನವಿರಿಗೆ
ಬೆರಗಾಗುವುದನು ತೊರೆದಿಲ್ಲ
ಕೈಗೆಟುಕದ ಮಾಯೆ ಬಾನಿಗೆ
ಮುಖವ ಮಾಡಿ
ಚುಕ್ಕಿ ತಾರೆಗಳ ಎಣಿಸುವುದನು ನಿಲಿಸಿಲ್ಲ
ಬಯಲ ಆಲಯದ ತುಂಬ
ಎದ್ದ ಗೋರಿಗಳ
ಪ್ರೀತಿಯ ಗಾಳಕೆ ಬಿದ್ದ ಜೀವಗಳ
ಮರಳಿ ಎಣಿಸುತ್ತ
ಪ್ರೇಮ ಪಾಶಕೆ ಕೊರಳ ಚಾಚಿ
ಅಲೆಯೋದನು ಮರೆತಿಲ್ಲ
ಪ್ರೀತಿಯ ಚಂದ್ರನ ಮೇಲೇರಿ
ಕೆಳಜಾರಿದವರ ಒಂಟಿ ರಾಗದಲಿ
ಕಂದಕಗಳ ಹುಡುಕಿ
ಬೆಚ್ಚಗೆ ಮಲಗುವ ಕನಸು
ಹೊರಬರುವ ಮನಸಿಲ್ಲ
ನಿನ್ನ ಪ್ರೀತಿಯ ವರ್ತುಲ
ಹೊಕ್ಕು ಹೊರಬರಲಾಗದೆ ಸೋತ
ಅಭಿಮನ್ಯುವಾಗಿ ಮಡಿಯಲು
ಹಾಜರಿ ಹಾಕುವುದ ಮರೆತಿಲ್ಲ
–ಡಾ. ಪ್ರೇಮಲತ ಬಿ.
ನಿಮ್ಮ ಕವನಗಳು ಅಡಿಗರ ಕವನದ ರೀತಿಯಲ್ಲಿ ಒಂದೇ ಓದಿಗೆ ದಕ್ಕುವುದಿಲ್ಲವೆಂಬುದು ನನ್ನ ಅಭಿಪ್ರಾಯ!
ಹಲವಾರು ದಾರಿಗಳಲ್ಲಿ ನಕ್ಷೆ ಹಿಡಿದು ಸಾಗಿ ಪ್ರೀತಿಯ ಹಲವು ಮುಖಗಳನ್ನು ಕಂಡು ಅದರ ಸುಳಿಯಲ್ಲಿ ಎದ್ದವರ ಬಿದ್ದವರ ಹಾಗು ಅದರ ಸೆಳೆತ ಹಾಗೂ ಬಂಧನಗಳಲ್ಲಿ ಸಿಕ್ಕಿಕೊಂಡಾಗ ಆಗುವ ಪರಿಣಾಮಗಳ ಚಿತ್ರಣ ಚೆನ್ನಾಗಿ ಮೂಡಿಬಂದಿವೆ. ಪ್ರೇಮಕ್ಕೆ ಸಂಬಂಧಿಸಿದ ಕವನಗಳನ್ನು ರಚಿಸುವಲ್ಲಿ ನಿಮಗೆ ವಿಶೇಷ ಆಸಕ್ತಿ ಇರಬಹುದೆಂದು ನನ್ನ ಅಂದಾಜು,. ಹೆಸರಿಗೆ ತಕ್ಕ ಪ್ರತಿಭೆ!
LikeLike
ಚಿತ್ರ ಒದಗಿಸಿದ ಡಾ.ಗೂಡೂರ್ ಮತ್ತು ಡಾ. ರಾಂ ಅವರಿಗೆ ಧನ್ಯವಾದಗಳು.
ನಿಮ್ಮೆಲ್ಲರ ಉತ್ತೇಜನದ ಮಾತುಗಳಿಗೂ ಧನ್ಯವಾದಗಳು.
LikeLike
‘ಪುರಾತನ ಬೇರುಗಳ ಹೊಸ
ಚಿಗುರಿನ ನವಿರಿಗೆ
ಬೆರಗಾಗುವುದನು ತೊರೆದಿಲ್ಲ’
ತುಂಬ ಇಷ್ಟವಾದ ಸಾಲುಗಳು.
ಪ್ರೀತಿಯ ಚಕ್ರವ್ಯೂಹದಲ್ಲಿ ಅರ್ಜುನನಾಗ್ದಿದ್ದರೂ ಸರಿ, ಅಭಿಮನ್ಯುವಾದರೂ ಸಾಕಲ್ಲವೆ?
ಅದ್ಭುತ ಕವನ – ಕೇಶವ
LikeLike
ಬಹಳ ಸುಂದರವಾದ ಕವನ,
೧. GPS ಇರುವ ಕಾರಿನಲ್ಲಿಒಳ್ಳೆಯ ಟಾರು ರಸ್ತೆಯಲ್ಲಿ ಹೋದಾಗ ಪ್ರೇಮ ಸುಗಮವಾಗಿ ಸಿಗಬಹುದು. ೨. ಇಷ್ಟವಾಗಿದ್ದೀಲ್ಲಾ ಕಷ್ಟ ಎನುಸುವುದಿಲ್ಲ.
LikeLike
ಪ್ರೀತಿಯ ನವಿರು ನವಿರಾದ ಹಲ ಮೆಟ್ಟಿಲು ಗಳ ಸುಂದರ ವರ್ಣನೆ.ಪ್ರೀತಿಯ ಸುಳಿಯಲ್ಲಿ ಸಿಲುಕಿ ಹೊರ ಬರಲಾರೆ ಅಂತ ಗೊತ್ತು.ಆ ಮಧುರ ಜೇನಧಾರೆಯಲ್ಲಿ ಸಿಲುಕಿ ಒದ್ದಾಡಿ ಸಾಗುವ ಆಶೆ ಈ ಜೀವಕ್ಕೆ.ಅದುವೇ ಈ ಬಾಳ ಮಾಧುರ್ಯ.ಆ ಪ್ರೀತಿಯನೊಲ್ಲದ ಬಾಳು ಬಾಳೇ,ಬರೀ ಬೆಂಗಾಡು.ಅಭಿಮನ್ಯು ಆದರೂ ಪರವಾಗಿಲ್ಲ ಬಿಡಲಾರೆ , ಹೊರಬರಲೊಲ್ಲೆ ಆ ಚಕ್ರದಿಂದ!!ವಾವ್!! ಮಧುರ ಭಾವಗಳಝೇಂಕರಿಸುವ ಸುಂದರ ಕವನ ಪ್ರೇಮಲತಾ ಅವರೇ!!
ಸರೋಜಿನಿ ಪಡಸಲಗಿ
LikeLiked by 1 person
ಪ್ರೀತಿಯ ಸೋಪಾನ ಹತ್ತುವದು, ಇಳಿಯುವದು, ಚಂದ್ರನ ಮೇಲೇರಿ ಜಾರುವದು …ಇಂಥವೆಲ್ಲ ಸಿಸಿಫಿಯನ್ (Sisiphean) ಯತ್ನಗಳ ಪಟ್ಟಿಯನ್ನೇ ಕೊಡುತ್ತ ಪ್ರೀತಿಯ ವಿವಿಧ ಮುಖಗಳನ್ನು ಜೋಡಿಸುವ ಅದ್ಭುತ ಸಾಹಸವಿದು! ಅಭಿಮನ್ಯು ಆಗುವದು ಬೇಡ, ಬೆಚ್ಚಗಿನ ಕನಸಿನಲ್ಲೇ ಮಲಗಲಿ ಎಂದು ಅಮರ ಪ್ರೇಮಿಗೆ ಹಾರೈಸೋಣವೆ? ಸುಂದರ ಕವನ, ಪ್ರೇಮಲತಾ. ಶ್ರೀವತ್ಸ
LikeLike