‘ಇಷ್ಟಕಾಮ್ಯ’ – ಡಾ.ಪ್ರೇಮಲತಾ ಬರೆದ ಸಿನಿಮಾ ವಿಮರ್ಶೆ

‘ಇಷ್ಟಕಾಮ್ಯ’ ಕನ್ನಡ ಚಲನಚಿತ್ರವನ್ನು ಅದರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ಇತ್ತೀಚಿಗೆ ಬ್ರಿಟನ್ ನ ಕೆಲ ಊರುಗಳಲ್ಲಿ ಬಿಡುಗಡೆ ಮಾಡಿದ್ದರು. ‘ಅನಿವಾಸಿ’ ಬಳಗದ ಡಾ.ಪ್ರೇಮಲತಾರವರು ಚಂದ್ರಶೇಖರ್ ರ ಜೊತೆ ನಡೆಸಿದ ಸಂದರ್ಶನವನ್ನು ‘ಅನಿವಾಸಿ’ ಪ್ರಕಟಿಸಿತ್ತು- ಡಾ. ನಾಗತಿಹಳ್ಳಿ ಚಂದ್ರಶೇಖರ ರೊಡನೆ ಸಂದರ್ಶನ-ಡಾ. ಪ್ರೇಮಲತ ಬಿ.. ಪ್ರೇಮಲತಾ ಬರೆದಿರುವ ‘ಇಷ್ಟಕಾಮ್ಯ’ ಚಲನಚಿತ್ರದ ವಿಮರ್ಶೆ ಇಲ್ಲಿದೆ.

ಸಿಂಗಪುರದ ಕನ್ನಡ ಸಂಘ ಏರ್ಪಡಿಸಿದ್ದ ಸಾಹಿತ್ಯ ಸ್ಪರ್ಧೆಯ ಅನಿವಾಸಿಗಳ ವಿಭಾಗದಲ್ಲಿ ಪ್ರೇಮಲತಾರ ಸಣ್ಣ ಕಥೆ ‘ಸ್ವಾತಂತ್ರ್ಯ’ ಕ್ಕೆ ಪ್ರಥಮ ಬಹುಮಾನ ದೊರಕಿದೆ. ಅವರಿಗೆ ‘ಅನಿವಾಸಿ’ಯ ಅಭಿನಂದನೆಗಳು.

ಮರೆಯುವ ಮುನ್ನ – ಈ ನವೆಂಬರ್ ತಿಂಗಳ ಕನ್ನಡ ರಾಜ್ಯೋತ್ಸವದ ಶುಭಾಶಯಗಳು!

ಇಷ್ಟಕಾಮ್ಯ– ಸಿನಿಮಾ ವಿಮರ್ಶೆ

ಡಾ.ಪ್ರೇಮಲತಾ

ishtakaamya-poster-1

ಇಷ್ಟವಾದ ಕಾಮನೆಗಳೇ ಗಂಡು – ಹೆಣ್ಣಿನ ನಡುವಿನ ಪಾಸಿಟಿವ್ ಕೆಮಿಸ್ಟ್ರಿ!!

ಇವೇ ಸಂಬಂಧ/ಮದುವೆಯ ಮೂಲವಾಗಬಹುದು ಅಥವಾ ಪರಸ್ಪರರ ವ್ಯಕ್ತಿತ್ವಗಳ ಆಕರ್ಷಣೆ ಬೆಳೆದು ಸಾಂಗತ್ಯವನ್ನು ಮುಂದುವರೆಸುವ ಕಾರಣಕ್ಕೆ ಸಂಬಂಧ ಮುದ್ರೆಯ ಹೆಸರಲ್ಲಿ ಮದುವೆ ಸಂಭವಿಸಬಹುದು. ಮೇಲಿನೆರಡು ಸಂದರ್ಭಗಳಲ್ಲಿ ಹುಟ್ಟುವ ಕಾಮನೆಗಳು ಪರಸ್ಪರರಿಗೆ ಸಮ್ಮತವಾದವು. ಸಲಿಂಗ ಪ್ರೇಮದ  ಅಯಾಮವೂ ಇದೇ ವ್ಯಾಪ್ತಿಯಲ್ಲಿ ಬರುತ್ತದೆ. ಮದುವೆಯ ಹೊರತಾದ ಸಮ್ಮತಿ ಪೂರ್ಣ ಮಿಲನವೂ ಇದೇ ಹೆಸರಡಿ ಬರುವಂತವು. ಇಷ್ಟಕಾಮ್ಯಗಳು,

‘ಇಷ್ಟಕಾಮ್ಯ’ ಚಿತ್ರ ಡಾ. ದೊಡ್ಡೇರಿ ವೆಂಕಟಗಿರಿ ರಾವ್ ರ ಕಾದಂಬರಿಯನ್ನು ಆಧರಿಸಿದ  ಚಿತ್ರ. ’ಸುಧಾ’ ವಾರಪತ್ರಿಕೆಯಲ್ಲಿ ಇದು ಧಾರವಾಹಿಯಾಗಿ ಬಂದಿತ್ತು. ಡಾ. ಡಿ.ವಿ. ರಾವ್ ರ ಕಥೆಗಳ ವಿಶೇಷಣಗಳು ಹಲವು. ಅವರ ಕಾದಂಬರಿಗಳಿಗೆ ಬಹಳ ವಿರಳವಾಗಿ ಕೇಳಿಬರುವ ಹೆಸರುಗಳನ್ನು ಇಡುತ್ತಾರೆ. ಜೊತೆಗೆ, ಪಾತ್ರಗಳಿಗೂ. ಇವರ ಪಾತ್ರಗಳು ಓದಿದ, ಉತ್ತಮ ಮನೆತನದಿಂದ ಬಂದವು. ಪ್ರೌಢತೆಯನ್ನು ಬೆಳೆಸಿಕೊಂಡಂತವು.ಕಥೆಗಳು ನಡೆಯುವುದು ಪ್ರಕೃತಿಗೆ ಹೆಸರಾದ ಮಲೆನಾಡು, ಚಿಕ್ಕಮಗಳೂರು, ಶಿವಮೊಗ್ಗಗಳಂತ ಜಾಗಗಳಲ್ಲಿ.ಇವರು ಕಟ್ಟುವ ಪ್ರೀತಿ –ಪ್ರೇಮಕ್ಕೆ ರಮ್ಯವಾದ ಹಂದರಗಳಿರುತ್ತವೆ. ನಾಜೂಕಾದ ಮಾತುಗಳಲ್ಲಿ ಪ್ರೇಮ ಅರಳುತ್ತದೆ. ಇಲ್ಲಿ ಕ್ರೌರ್ಯ, ಕೊಲೆ, ಅತ್ಯಾಚಾರ,ಅತಿರೇಕಗಳಿಗೆ ಕಡಿಮೆ ಆದ್ಯತೆ.

ಸ್ವತಃ ಉತ್ತಮ ಬರಹಗಾರರಾದ,ತಮ್ಮ ಸೃಜನಶೀಲತೆಯಿಂದ ಚಿತ್ರೋದ್ಯಮದ ಗಮನ ಸೆಳೆದ, ಚಿತ್ರ ಕಥೆ-ಸಂಭಾಷಣೆ-ಹಾಡು-ನಿರ್ದೇಶನಕ್ಕೆ ಹಲವಾರಿ ಪ್ರಶಸ್ತಿ ಗಳಿಸಿರುವ ಡಾ. ನಾಗತಿಹಳ್ಳಿ ಚಂದ್ರಶೇಖರರ ಕಲಾವಿದ ಕಣ್ಣುಗಳಿಗೆ  ’ಇಷ್ಟಕಾಮ್ಯ’ ದ ಕಥೆ ಬಿದ್ದದ್ದು ಆಶ್ಚರ್ಯವೇನಿಲ್ಲ.ಇದನ್ನು ಆಧರಿಸಿ ಅದೇ ಹೆಸರಲ್ಲಿ ಸಿನಿಮಾ ಮಾಡುವಾಗ ಅವರು ರಿಸ್ಕ್ ತಗೊಂಡರೆನ್ನಬಹುದೇನೋ.

ಇಷ್ಟಕಾಮ್ಯ ಸಿನಿಮಾಕ್ಕೆ ನಾಗತಿಯವರ ಚಿತ್ರ ಕಥೆ, ಸಂಭಾಷಣೆ ಮತ್ತು ನಿರ್ದೇಶನ ದೊರೆತಿದೆ. ಸಿನಿಮಾಕ್ಕೆ ಬೇಕಾದಂತೆ ಕಥೆಯನ್ನು ಮುಂದುವರೆಸಿ ಬೆಳೆಸಲಾಗಿದೆ.

ಒಳ್ಳೆಯದು– ಕಣ್ತಣಿಸುವ  ಛಾಯಾಗ್ರಹಣ, ಮನಸ್ಸನ್ನು ಹದವಾಗಿ ಮೀಟುವ, ಉತ್ತಮ ಸಾಹಿತ್ಯವಿರುವ ಹಾಡುಗಳು, ಅರ್ಥಗರ್ಭಿತವಾದ ಸಂಭಾಷಣೆಗಳಿರುವ, ಸಭ್ಯ ಚಿತ್ರವಿದು. ಚಿತ್ರ ಕಥೆ ಮಲೆನಾಡಿನಲ್ಲಿ ನಡೆವಂತದ್ದು. ಅಂದಮೇಲೆ ಸೌಂದರ್ಯಕ್ಕೆ ಕೊರತೆಯೇ ಇಲ್ಲ.

ಯುವ ಜೋಡಿಗಳನ್ನು ಆಧರಿಸಿ ಮಾಡಿದ ತ್ರಿಕೋನ ಪ್ರೇಮಕಥೆಯಿರುವ ಕಾರಣ, ಸಣ್ಣವಯಸ್ಸಿನ  ಸುಂದರ ತಾರಾಗಣವಿದೆ. ಇವರಿಗೆ ಪೂರಕವಾಗಿ ಮನೋಜ್ಞ ಅಭಿನಯ ನೀಡಬಲ್ಲ ನುರಿತ ಕಲಾವಿದರ  ದೊಡ್ಡ ತಂಡವಿದೆ. ಒಂದಷ್ಟು ಹಾಸ್ಯ ಚಿತ್ರ ಕಥೆಯುದ್ದಕ್ಕೂ ಇದೆ. ಇವರಲ್ಲಿ ಕಾಲಕ್ಕೆ ತಕ್ಕಂತೆ ಪಾತ್ರ ಬದಲಾಯಿಸುವ ನಿಂಬೆಯ ಪಾತ್ರವಾಗಿ ಚಿಕ್ಕಣ್ಣ, ಮದುವೆಯ ಅಗತ್ಯವಿಲ್ಲದ ‘ಲಿವಿಂಗ್ ಟುಗೆದರ್’ ಸಂಬಂಧ ಪ್ರತಿಪಾದಕನಾಗಿ ಪ್ರಕಾಶ ಬೆಳವಾಡಿಯವರ, ಪಾತ್ರ ಗಮನ ಸೆಳೆಯುತ್ತವೆ. ’ಮದುವೆಯ ಅಜ್ಜಿ’ಯಾಗಿ ಕಾಣಿಸಿಕೊಂಡಿರುವ ಬಿ. ಜಯಶ್ರೀ, ಇಲ್ಲಿ ಸಾಂಕೇತಿಕ ಪಾತ್ರವಾಗಿ ಯುವ ಹೃದಯಗಳಲ್ಲಿ ಮದುವೆಯ ಸಂಭ್ರಮವನ್ನು ಹರಡುತ್ತಾಳೆ. ಮಿಕ್ಕರ್ಧದಲ್ಲಿ, ಇದೇ ಪಾತ್ರ ಸಾಂಕೇತಿಕವಾಗಿ ಜೀವನದ ಅನಿರೀಕ್ಷಿತ ಘಟನೆಗಳಿಕೆ ತಿರುವು ನೀಡುತ್ತದೆ. ಬದುಕಲ್ಲಿ ಅಂದು ಕೊಂಡಂತೆ ಎಲ್ಲ ಆಗುವುದಿಲ್ಲ ಎಂಬುದನ್ನು ಪ್ರತಿಪಾದಿಸುತ್ತದೆ.

ನಿರ್ದೇಶಕರಾಗಿ ನಾಗತಿಯವರು ಎಲ್ಲ ಪಾತ್ರಗಳಿಗೂ ಉತ್ತಮ ಸಂಭಾಷಣೆಯನ್ನು ನೀಡಿದ್ದಾರೆ. ಹಾಸ್ಯದ ಹೊರತಾಗಿ ಮಿಕ್ಕ ಎಲ್ಲ ಸಂಭಾಷಣೆಗಳು ಸಂದೇಶಗಳೇ. ವಿಚಾರಪರವೇ. ಹಾಗಾಗಿ ಕೇಳಿದ ನಂತರ, ಮರೆತುಹೋಗುವುದಿಲ್ಲ. ಮನಸ್ಸಲ್ಲಿ ಉಳಿಯುತ್ತವೆ. ವೀಕ್ಷಕರು ಯಾರೆಂಬುದರ ಮೇಲೆ ಇದು ನಿರ್ಧರಿತ!

ನಿರ್ದೇಶಕರು ಯುವಜನತೆಗೆ ಬೇಕಾದ ಪ್ರೀತಿಯ ಸಿಹಿಯನ್ನು ಮೊದಲರ್ಧ ಸಿನಿಮಾದ ಉದ್ದಕ್ಕೂ ಹಂಚಿದ್ದಾರೆ. ಆದರ್ಶಗಳನ್ನು ಹೊತ್ತ ಯುವ ವೈದ್ಯ ‘ಆಕರ್ಷ’ನಾಗಿ ವಿಜಯ್ ಸೂರಿಯ ಪಾತ್ರ, ಅವನ ಆಸಕ್ತಿಯನ್ನು ಗಮನಿಸಿ ಆಕರ್ಷಣೆಗೊಳಗಾಗಿ ಪ್ರೀತಿಗೆ ಬೀಳುವ, ಮದುವೆಯ ಕನಸು ಕಾಣುವ ಹುಡುಗಿಯಾಗಿ ಮಯೂರಿ ಕ್ಯಾತರಿ ‘ಅಚ್ಚರಿ’ಯಾಗಿ ಅಭಿನಯಿಸಿದ್ದಾರೆ. ishtakaamya-poster-2ಒಮ್ಮೆ ಈ ಯುವ ವೈದ್ಯ ಮೆಲ್ಲನೆ ಬಾಗಿ ಪ್ರೇಯಸಿಯ ಗಲ ಗಲಿಸುವ ಝುಮುಕಿಯನ್ನು ಸಣ್ಣಗೆ ಬಡಿಯುತ್ತಾನೆ. ಇಲ್ಲಿಯ ನವಿರು ಪ್ರೇಮದ ಪರಿ, ತಕದಿಮನೆ ಕುಣಿವ ಪ್ರೇಮದ ಹಲವು ಹಾಡುಗಳಿಗಿಂತ ಹೆಚ್ಚು ಬಲವಾಗಿ ಮನಸ್ಸುಗಳಲ್ಲಿ ನಿಲ್ಲುತ್ತದೆ. ಚಿತ್ರದ ಮೊದಲಲ್ಲೇ ಕಾಣಿಸಿಕೊಂಡರೂ, ನಂತರ ಈ ಆಕರ್ಷನ ಹೆಂಡತಿಯಾಗಿ ಬರುವ ’ಅದಿತಿ’ ಪಾತ್ರದಲ್ಲಿ   ಕಾವ್ಯ ಶೆಟ್ಟಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ತನ್ನ ದೈನಂದಿನ ವ್ಯಾಪಾರದ ನಡುವೆ ನಿಜವಲ್ಲದ ಬೊಗಳೆಯಲ್ಲಿ ಒಂದಷ್ಟು ಸುಖ ಕಾಣುವ ಪಾತ್ರದ ಮಾವನಾಗಿ ರಂಗಾಯಣದ ರಘು ಮಿಂಚಿದ್ದಾರೆ. ರೋಗಿಯಾಗಿ ಮಂಡ್ಯ ರಮೇಶ್ ಹಾಸ್ಯ ಪಾತ್ರಧಾರಿಯಾದರೆ ಮಿಮಿಕ್ರಿ ದಯಾನಂದ ’ವೈದ್ಯ’ ರಾಗಿದ್ದಾರೆ.

ಉಳಿದರ್ಧ ಭಾಗದಲ್ಲಿ ಅನಿರೀಕ್ಷಿತ ತಿರುವು ಕಾಣಿಸುತ್ತದೆ. ಇಲ್ಲಿ ಪ್ರೇಕ್ಷಕನಿಗೂ ಶಾಕ್ ! ಇಲ್ಲಿಯೇ ವಿವಾದಗಳೂ ಹುಟ್ಟುತ್ತವೆ. ಕೊನೆಗೆ ಇಬ್ಬರು ಹೆಣ್ಣು ಪ್ರೇಮಿಗಳಲ್ಲಿ ಒಬ್ಬರ ಸಾವಿನ ದುರಂತದ ಜೊತೆ ಅಂತ್ಯ. ಆದರೆ ನಾಯಕನ ಮುಂದಿನ ಬದುಕು ಪ್ರೇಕ್ಷಕ ಚಿತ್ರಿಸಬಹುದಾದ ಖಾಲಿ ಕ್ಯಾನ್ವಾಸ್ ಆಗುತ್ತದೆ! ಅಂದರೆ ಸಿನಿಮಾದಲ್ಲಿ ಈ ಬಗ್ಗೆ ಏನನ್ನೂ ತೋರಿಸದೆ ಪ್ರೇಕ್ಷಕನ ಊಹೆಗೆ ಇದನ್ನು ಬಿಡಲಾಗಿದೆ

ನಿರ್ದೇಶಕರಾಗಿ ನಾಗತಿಯವರು ಉದ್ದಕ್ಕೂ ಮದುವೆಯ ವಿವಿಧ ಮುಖಗಳನ್ನು ವಿಮರ್ಷೆಗೆ ಒಡ್ಡಿದ್ದಾರೆ. ಮಲೆನಾಡಿನ ದೀಪಾವಳಿ, ಟೀ ಎಸ್ಟೇಟಿನ ಕಾರುಭಾರುಗಳು, ಆಳು ಕಾಳುಗಳು, ಮದುವೆಯ ಜಾನಪದ ವರ್ಣನೆ, ಮಿಡಿಮಾವಿನ ಕಾಯಿ ಉಪ್ಪಿನ ಕಾಯಿಯ ಬಗ್ಗೆಗಿನ ದೃಶ್ಯಗಳಲ್ಲಿ , ಹವ್ಯಕ ಕನ್ನಡದ ಬಳಕೆಯಲ್ಲಿ ಸಂಪ್ರದಾಯಗಳಿಗೆ ಮೆರುಗುಕೊಟ್ಟಿದ್ದಾರೆ. ಉತ್ತಮ ಭಾಷೆಯನ್ನು ಬಳಸಿ ಕನ್ನಡವನ್ನು, ಅದರ ಸೌಂದರ್ಯ- ಸಂಸ್ಕೃತಿಯನ್ನು ಉಳಿಸಿ ಈ ಚಿತ್ರವನ್ನು ಸಂಭಾವಿತರು ಕೂತು ನೋಡುವಂತೆ ಮಾಡಿದ್ದಾರೆ.

ಕುವೆಂಪು ಬದುಕಿ ಬಾಳಿದ ಮನೆ, ಕವಿ ಶೈಲದ ದೃಶ್ಯದ ಬಳಕೆ, ಕವಿಸಮಾಧಿಯ ದರ್ಶನ ಮಾಡಿಸಿದ್ದಾರೆ. ಕುವೆಂಪು ಬರೆದ ಹಾಡಿನಲ್ಲಿ ಹೆಣ್ಣನ್ನು ಬಹುವಚನದಲ್ಲಿ ಸಂಬೋಧಿಸುವ ಮೂಲಕ ಮನುಕುಲದ ಉನ್ನತ ಸಂಸ್ಕೃತಿಯನ್ನು ಮತ್ತೆ ಕನ್ನಡ ಸಿನಿಮಾರಂಗಕ್ಕೆ ತಂದಿದ್ದಾರೆ!

ಟೀಕಿಸುವಂತದ್ದು–   ಈ ಚಿತ್ರದ ನಾಯಕ ಆದರ್ಶಗಳನ್ನು ಹೊತ್ತ ನವ ಯುವಕ. ಹಳ್ಳಿಯ ತನ್ನ ತಾತನ ನರ್ಸಿಂಗ್ ಹೋಂ ಅನ್ನು ನಡೆಸುತ್ತ ತನ್ನ ಮನೆತನದ ಆಸ್ತಿಯೊಡನೆ ಪ್ರೀತಿಯಿಂದ ಜನರ ಸೇವೆ ಮಾಡುತ್ತ ನಡೆವ ಮನೋಭಾವದವನು. ತನಗೆ ತಿಳಿಯದಾಗ ಬೇರೆಯವರೊಡನೆ ಸಲಹೆ-ಉತ್ತರಗಳನ್ನು ಕೇಳುವ-ಕಾಣುವಂತವನು. ಇಂತಹ ವಿಚಾರವಂತ, ತನ್ನ ಮೊದಲನೆಯ ಹೆಂಡತಿಯೊಡನೆ ವಿಚ್ಛೇದನವಿಲ್ಲದೆ ಇನ್ನೊಂದು ಜೀವಿಯೊಡನೆ ಸರಸ ಸಲ್ಲಾಪ ನಡೆಸುವಾಗ ಅವನ ಮನಸ್ಸಿನ ತಳಮಳಗಳನ್ನು ಇನ್ನಷ್ಟು ಗಾಢವಾಗಿ ಚಿತ್ರಿಸಬೇಕಿತ್ತು ಅನ್ನುವುದು ಈ ಚಿತ್ರದ ಮುಖ್ಯ ಕುಂದಾಗಿದೆ.

ತಪ್ಪೇ ಮಾಡದೆ, ಮದುವೆಯ ಸಹಜತೆಯಿಂದ ವಂಚಿತನಾಗುವ ಒಳ್ಳೆಯ ಮನಸ್ಸಿನ, ಸಲಹೆಗಳನ್ನು ಕೇಳುತ್ತ ನಡೆವ ನಾಯಕನ, ತನ್ನ ಬಡತನದ ಹಿನ್ನೆಲೆಯನ್ನು ಕಡೆಗಣಿಸಿ ಉಪಚರಿಸಿದ, ಸಹಾಯ ಮಾಡಿದ ವೈದ್ಯನ ಆಸಕ್ತಿಗೆ ನೀರೆರವ ಕನಸ ಕಂಗಳ ದುಡುಕಿನ ನಾಯಕಿ ಅಚ್ಚರಿಗೆ ಯಾವ ದೃಶ್ಯದಲ್ಲೂ ತನಗೆ ಈಗಾಗಲೇ ಮದುವೆಯಾಗಿರುವ ಬಗ್ಗೆ ಹೇಳುವುದೇ ಇಲ್ಲ. ನಿಂಬೆಯೂ ಕೂಡಿ, ಇಡೀ ಆಸ್ಪತ್ರೆಯೇ ಇವರ ಓಡಾಟವನ್ನು ಗಮನಿಸಿದರೂ ಯಾರೂ ಅಚ್ಚರಿಗೆ ವೈದ್ಯನಿಗೆ ಮದುವೆಯಾಗಿರುವ ಬಗ್ಗೆ ಹೇಳುವುದಿಲ್ಲ. ಯಾವ ಕಾರಣಕ್ಕೆ ಆಕರ್ಷ ಯಾರನ್ನೂ ಕರೆಯದೆ ಗುಟ್ಟಾಗಿ ಮದುವೆಯಾಗುವ ಬಗ್ಗೆ ಸಬಲ ಕಾರಣಗಳನ್ನು ಹೇಳಬೇಕಾಗಿತ್ತು. ಮಾನಸಿಕ ವ್ಯಾಧಿಗೆ ತುತ್ತಾದ ಅದಿತಿ ಪೂರ್ತಿ ’ಯು ಟರ್ನ್’ ತಗೊಳ್ಳಲು ಒಂದೆರಡು ಘಟನೆಗಳು ಮಾತ್ರ ಸಾಕಾದವೇ? ಒಬ್ಬ ವ್ಯಕ್ತಿ ತನ್ನವನು ಎನ್ನುವ ಅನ್ನುವ ಪೊಸೆಸಿವ್ ನೆಸ್ ಮತ್ತು ಈರ್ಷ್ಯೆ ಮಾತ್ರಕ್ಕೆ ಅವಳು ನಾಯಕನ ಬದುಕಿಗೆ ಹಿಂತಿರುಗುವ ಹೆಣ್ಣೇ?

ಸಂಭಾಷಣೆ ಚಿತ್ರದ ಜೀವಾಳ. ಆದರೆ ಮನೋಜ್ಞ ಅಭಿನಯದ ಮೌನ ಅದಕ್ಕಿಂತ ಪರಿಣಾಮಕಾರಿ. ಅಂತಹ ದೃಶ್ಯಗಳು ಕಡಿಮೆ. ಮಾನಸಿಕ ತುಡಿತಗಳನ್ನು, ತಾನು ಮಾಡುತ್ತಿರುವುದು ತಪ್ಪೇ, ಸರಿಯೇ ಅನ್ನುವ ತಾಕಲಾಟಗಳನ್ನು ಮೂರೂ ಪಾತ್ರಗಳಲ್ಲಿ ಮತ್ತಷ್ಟು ತರ ಬಹುದಿತ್ತು.

ಇತರೆ-ಪಾಶ್ಚಾತ್ಯ ಸಿನಿಮಾಗಳಲ್ಲಿ ಈ ಯಾವ ಕುಂದುಗಳೂ ದೊಡ್ಡವಾಗುತ್ತಿರಲಿಲ್ಲ. ಯಾಕೆಂದರೆ ಇಲ್ಲಿ ಪಾತ್ರಗಳಿಗಿಂತ ಸಂದೇಶ ಮುಖ್ಯವಾಗುತ್ತದೆ. ಆಧುನಿಕ ಜಗತ್ತಿನ ಲಿವಿಂಗ್ ಟುಗೆದರ್ ಆಗಲೀ, ಭಾರತ ಸರ್ಕಾರವೇ ಇನ್ನೂ ಗುರುತಿಸಿರದ ’ಗೇ’ಗಳ ಸಂಬಂಧವಾಗಲೀ, ಸಂಬಂಧದ ಹೆಸರಿನ ಅಗತ್ಯವಿಲ್ಲದ ಜೀವನ ಹಂಚಿಕೊಳ್ಳುವ ಪಾರ್ಟ್ನರ್ ಶಿಪ್ ನ ವೈಚಾರಿಕತೆಯನ್ನು ಈ ಸಿನಿಮಾ ಒರೆಗೆ ಹಚ್ಚುತ್ತದೆ. ಭಾರತೀಯ ಪರಂಪರೆಯ ಪುರಾತನ ಮದುವೆಯ ಮಿತಿಗಳನ್ನೂ ಇದು ಒರೆಗೆ ಹಚ್ಚುತ್ತದೆ. ಅದೇ ಜಾಡಿನಲ್ಲಿ ಬಡತನ, ಅದರ ಅರಿವನ್ನು ತಿಳಿಹೇಳುವ ಅಚ್ಚರಿಯ ತಾಯಿ, ಮಲೆನಾಡಿನ ತೋಟದ ಕೆಲಸಗಾರ್ತಿ, ಗಟ್ಟಿಗಿತ್ತಿ ಗೆಳತಿ ಎಲ್ಲ ಪಾತ್ರಗಳಲ್ಲಿ ನಾಗತಿಹಳ್ಳಿಯವರು ಕನ್ನಡ ಜನತೆಗೆ ನೂರಾರು ಸಂದೇಶಗಳನ್ನು, ತಾಕಲಾಟಗಳನ್ನು ಕೊಟ್ಟು ವಿಚಾರ ಮಾಡಲು ಕರೆಕೊಟ್ಟಿದ್ದಾರೆ. ಅದನ್ನು ಅತಿಯಾದ ಅತಿರೇಕಗಳ ಮೂಲಕ, ಉತ್ಪ್ರೇಕ್ಷೆಯಿಲ್ಲದೆ ಉಣಬಡಿಸಿದ್ದಾರೆ.

ಇತರೆ ಹಲವು ಸಿನಿಮಾ ನಿರ್ದೇಶಕರ ಸಿನಿಮಾದಲ್ಲಿ, ೫೦ ಜನ ಖದೀಮರನ್ನು ಐದು ನಿಮಿಷದಲ್ಲಿ ಸದೆ ಬಡಿವ ನಾಯಕನನ್ನು ತಂದದಕ್ಕೆ, ತಲೆ ಬುಡವಿಲ್ಲದ ಕಥೆ-ಸಂಭಾಷಣೆಗೆ, ದ್ವಂದ್ವಾರ್ಥದ ಹಾಸ್ಯಕ್ಕೆ ಯಾವ ಸಿನಿಮಾ ವಿಮರ್ಶಕನೂ ಚಕಾರ ವೆತ್ತದೆ ಸುಮ್ಮನಿರುತ್ತಿದ್ದರು. ಆದರೆ ನಾಗತಿಹಳ್ಳಿಯವರ ಸಿನಿಮಾ ಎಂದ ಕೂಡಲೆ ನಿರೀಕ್ಷೆ ಗಳು ಗರಿಗೆದರಿ ಬಿಡುತ್ತವೆ, ಸಿನಿಮಾ ವಿಮರ್ಶಕರು ನಾಲಿಗೆಯನ್ನು ಸಾಣೆ ಹಿಡಿಸಿಕೊಂಡು ಕಾಯುತ್ತಾರೆ. ಇವರು ಅರಿಯಬೇಕಾದ್ದು ಬಹಳ ಇದೆ. ಕಲಾತ್ಮಕ ನಿರ್ದೇಶಕನೊಬ್ಬ ಕಲಾವಂತಿಕೆಯನ್ನು, ಜೊತೆಗೆ ನಿರ್ಮಾಪಕರ ಹಣ ಹೂಡಿಕೆಗೆ ನ್ಯಾಯವನ್ನು ಎರಡನ್ನೂ ಕೂಡಿಸಿ ಒಂದು ಹೈಬ್ರಿಡ್ ತಳಿಯ ಸಿನಿಮಾ ವನ್ನು ಮಾಡಲು ಇಷ್ಟಕಾಮ್ಯದ ಮೂಲಕ ಪ್ರಯತ್ನ ಪಟ್ಟಿದ್ದಾರೆ.

ಈ ಪ್ರಯತ್ನವನ್ನು ಗುರುತಿಸಿ, ಆದರಿಸಿ ನೋಡಿದರೆ ಈ ಸಿನಿಮಾ ಇತ್ತೀಚೆಗೆ ನೋಡಿದ ಒಂದು ಉತ್ತಮ ಕನ್ನಡ ಸಿನಿಮಾ ಅನ್ನಬಹುದು

 (ಎರಡೂ ಪೋಸ್ಟೆರ್ಗಳು ಕೃಪೆ-ಗೂಗಲ್)

4 thoughts on “‘ಇಷ್ಟಕಾಮ್ಯ’ – ಡಾ.ಪ್ರೇಮಲತಾ ಬರೆದ ಸಿನಿಮಾ ವಿಮರ್ಶೆ

  1. ಪ್ರೇಮಲತಾ ಅವರದು ಬಹಳ balanced ವಿಮರ್ಶೆ. ನನ್ನ ಅರ್ಧದಷ್ಟು ಜೀವಮಾನ ಅನಿವಾಸಿಯಾಗೇ ಕಳೆದಿದ್ದೇನೆ. ನೋಡಿದ ಕನ್ನಡ ಚಿತ್ರಗಳು ಬೆರಳೆಣಿಸುವಷ್ಟು. ಆಗಾಗ ಒಳ್ಳೆಯ ಚಿತ್ರಗಳನ್ನು, ಅದರಲ್ಲಿಯೂ ಒಳ್ಳೆಯವುಗಳನ್ನು(ಕೆಲವು ”curate’s egg, good in parts” ಆದರೂ) ನೋಡಿ ಖುಶಿ. ಇಂಥದರಲ್ಲಿ ‘ಇಷ್ಟಕಾಮ್ಯ’ ಒಂದು. ರಮ್ಯವಾದ ಪ್ರಕೃತಿ ಸೌಂದರ್ಯವನ್ನು ಕಲಾತ್ಮಕವಾಗಿ ಸೆರೆಹಿಡಿದ ಫೋಟೋಗ್ರಾಫಿ, ಸುಂದರ ಸಂಭಾಷಣೆ, ಆಕರ್ಷಕ ಅಭಿನೇತಾರರು, ಸಮರ್ಥ ಡೈರೆಕ್ಷನ್ ಇವೆಲ್ಲ ಸಾಮಗ್ರಿ ಇಲ್ಲಿ. ಕಥೆ logical ಆ ಎಂದು ನೋಡಿದರೆ ಎಂಟರ್ಟೇನ್ಮೆಂಟ್ ಗೆ ಭಂಗ ಬಂದೀತಾ? ಕಲೆ ಮತ್ತು ಗಲ್ಲಾ ಪೆಟ್ಟಿಗೆಯ ಬ್ಯಾಲನ್ಸ್ ಕಷ್ಟವೆಂದೇ ನನ್ನ ಅನಿಸಿಕೆಯಾದರೂ ಚಿತ್ರ ತನ್ನ ಉದ್ದೇಶದಲ್ಲಿ ವಿಫಲವಾಗಿಲ್ಲವೆನಿಸುತ್ತದೆ.

    Liked by 1 person

  2. ಪ್ರೇಮಲತಾ ಕನ್ನಡ ಬಳಗದ ದೀಪಾವಳಿ ಗಲಾಟೆಯಲ್ಲಿ ನಿಮ್ಮ ಲೇಖನ ಹುದುಗಿಹೋಗಿದೆ! ನಾನು ಈ ಚಿತ್ರ ವನ್ನು ನಿರ್ದೇಶಕರಾದ ನಾಗತಿ ಹಳ್ಳಿ ಅವರ ಸಮ್ಮುಖದಲ್ಲಿ ವೀಕ್ಷಿಸಿ ಬಹಳ ದಿನಗಳ ನಂತರ ಒಂದು ಒಳ್ಳೆ ಕನ್ನಡ ಸಿನಿಮಾ ನೋಡಿದ ಅನುಭವದಿಂದ ತೆರಳಿದೆ. ನಿಮ್ಮ ಚಿತ್ರ ವಿಮರ್ಶೆ ಬಹಳ objective ಹಾಗೂ Balanced ಆಗಿದೆ ಅನ್ನಬಹುದು. ಇದು ಕಲಾತ್ಮಕ ಹಾಗೂ ಕಮರ್ಷಿಯಲ್ ಚಿತ್ರಗಳ ‘ಹೈಬ್ರಿಡ್’ ಅನ್ನುವುದು ನಾನು ಒಪ್ಪುತ್ತೇನೆ. ಮದುವೆ ಅನ್ನುವ ಒಂದು institution ಹಿನ್ನೆಲೆಯಲ್ಲಿ ಬದಲಾಗುತ್ತಿರುವ ಸಮಾಜದಲ್ಲಿ ಅದರ relevance ಅನ್ನು ಪ್ರಶ್ನಿಸುತ್ತ ಹಾಗೆ ವಿಚ್ಚೇದನ ವೆಂಬ ಸಾಮಾಜಿಕ ಪಿಡುಗನ್ನು ಚಿತ್ರಕಥೆ ಯಲ್ಲಿ ತರುವ ಸಾಧ್ಯತೆ ಇದ್ದರು ಅದನ್ನು ಬದಿಗಿಟ್ಟು ಮದುವೆ ಎಂಬ ವ್ಯವಸ್ಥೆಯ ಬಗ್ಗೆ ಒಂದು sanctity ಭಾವನೆಯನ್ನು ಎತ್ತಿಹಿಡಿಯುವ ಒಂದು ಸಂದೇಶದೊಂದಿಗೆ ಚಿತ್ರ ಹಲವು ತಿರುವುಗಳನ್ನು ಕಂಡು ಮುಕ್ತಾಯವಾಗುತ್ತದೆ. ಸಿನಿಮ ನೋಡಿದ ನಂತರ ಕೆ ಎಸ ಎನ್ ಅವರ ಕೆಳಗಿನ ಕವನದ ಸಾಲುಗಳು ನೆನಪಿಗೆ
    ಬರುತ್ತದೆ;
    ‘ಒಂದು ಗಂಡಿಗೊಂದು ಹೆಣ್ಣು
    ಹೇಗೋ ಸೇರಿ ಹೊಂದಿಕೊಂಡು
    ಮಾತಿಗೊಲಿಯದ ಅಮೃತ ಉಂಡು
    ಬಾಳು ಹಗುರ ವೆನಿಸಿರೆ
    ಪ್ರೇಮವೆನಲು ಹಾಸ್ಯವೆ ?

    ‘ಹೇಗೋ ಸೇರಿ ಹೊಂದಿಕೊಂಡು’ ಎಂಬ ಅಂಶ although is utopian, it is very relative and subjective, very much related to the background context particularly in this day and age.

    ಪ್ರೇಮಲತಾ ನಿಮ್ಮ ವಿಮರ್ಶೆಯನ್ನು ನಾಗತಿಹಳ್ಳಿ ಯವರಿಗೆ ತಲುಪಿಸಿದಲ್ಲಿ ನಿರ್ದೇಶಕರಿಗೆ ಒಳ್ಳೆ feedback ಸಿಗಬಹುದು.
    I strongly recommend it.

    Liked by 2 people

  3. ‘ ಪರಸ್ಪರರಿಗೆ ಸಮ್ಮತವಾದ ಕಾಮನೆಗಳೇ ಇಷ್ಟಕಾಮ್ಯ’ ಅಂತ ಹೇಳುತ್ತ ‘ ಇಷ್ಟಕಾಮ್ಯ ‘ ಚಿತ್ರದ ವಿಶ್ಲೇಷಣೆಯನ್ನು ತುಂಬಾ ಸುಂದರವಾಗಿ ಮಾಡಿದ್ದಾರೆ ಪ್ರೇಮಲತಾ ಅವರು.ನಿಜಕ್ಕೂ ಯುವ ಹೃದಯಗಳಲ್ಲಿ ಮಧುರ , ಸವಿಭಾವನೆಗಳನ್ನು ಅರಳಿಸುತ್ತ ಮುದಗೊಳಿಸುವ ಚಿತ್ರ ,’ಇಷ್ಟಕಾಮ್ಯ ,ಮೊದಲರ್ಧ ಭಾಗದಲ್ಲಿ. ಪ್ರತಿಯೊಂದು ನಲಿವಿನಲ್ಲಿ ನೋವಿನ ಎಳೆಯಿರುವುದು ನಿಜ ಎನಿಸದಿರಲಾರದು. ಅದನ್ನ ಚೆನ್ನಾಗಿ ವಿಮರ್ಶಿಸಿ, ಎಳೆ ಎಳೆಯಾಗಿ ಬಿಡಿಸಿಟ್ಟ ಪ್ರೇಮಲತಾ ಅವರಿಗೆ ಅಭಿನಂದನೆಗಳು. ಇದರ ಜೊತೆಗೆ ಸಿಂಗಪೂರದ ಕನ್ನಡ ಬಳಗದ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಅವರನ್ನು ಅಭಿನಂದಿಸಲು ಅಭಿಮಾನ ,ಸಂತಸ ಒಟ್ಟೊಟ್ಟಿಗೆ ಉಕ್ಕಿ ಬರುತ್ತವೆ
    ಸರೋಜಿನಿ ಪಡಸಲಗಿ

    Liked by 2 people

Leave a comment

This site uses Akismet to reduce spam. Learn how your comment data is processed.