`ಉಳಿದವ(ರು)(ನಾ) ಕಂಡಂತೆ` – ಗಿರಿಧರ ಹಂಪಾಪುರ
‘ಉಳಿದವರು ಕಂಡಂತೆ’ ನಾನು ಇತ್ತೀಚಿಗೆ ನೋಡಿದ ಉತ್ತಮ ಕನ್ನಡ ಚಿತ್ರಗಳಲ್ಲಿ ಒಂದು. ಒಂದು ಸಿನಿಮಾ ಅಥವಾ ನಾಟಕವು ಯಶಸ್ವಿಯಾಗಬೇಕೆಂದರೆ ಅದರ ಕಥೆ ಚೆನ್ನಾದ್ದಿರಷ್ಟೇ ಸಾಲದು, ಅದರ ನಿರೂಪಣೆಯೂ ಅಚ್ಚುಕಟ್ಟಾಗಿ ಇರಬೇಕು. ಕನ್ನಡದಲ್ಲಿ ಕಥಾ ನಿರೂಪಣೆಯ ಕೆಲವೇ ತಂತ್ರಗಳನ್ನು ಪದೇ ಪದೇ ಉಪಯೋಗಿಸಿ ನೋಡುಗನನ್ನು ನಿರ್ದೇಶಕರು ಬೋರ್ ಹೊಡೆಸಿದ್ದರು. ಉಳಿದವರು ಕಂಡಂತೆ ಕನ್ನಡ ಚಿತ್ರಗಳಲ್ಲಿ ಈ ದಿಕ್ಕಿನಲ್ಲಿ ಬಹಳ ಹಿಂದೆ, ನಾನು ಮತ್ತು ಸಿನೆಮಾಟೋಗ್ರಫಿ ಅಧ್ಯಯನ ಮಾಡಿದ್ದ ನಮ್ಮ ತಂದೆಯವರು ‘ಸೂರಜ್ ಕಾ ಸಾತ್ವಾ ಘೋಡಾ’ ಅನ್ನೋ ಚಿತ್ರವನ್ನು ನೋಡಿದ್ದೆವು. ನಮ್ಮ ತಂದೆಯವರು ಆ ಕಥಾ ನಿರೂಪಣಾ ತಂತ್ರದ ಬಗ್ಗೆ ಬಹಳ ವಿವರವಾಗಿ ಹೇಳಿದ್ದರು. ಆ ಕಥಾ ನಿರೂಪಣೆ ತಂತ್ರ ನನ್ನ ತಲೆಯಲ್ಲಿ ನಿಂತು ಬಿಟ್ಟಿತ್ತು. ಹಿಂದಿಯ ‘ಉತ್ತ ಪತಾಂಗ್’ ಅನ್ನೋ ಚಿತ್ರವೂ ಅದೇ ನಿರೂಪಣಾ ತಂತ್ರ ಉಪಯೋಗಿತ್ತು. ಜಪಾನಿನ ‘ರಶೋಮೊನ್’ ಎಂಬ ಚಿತ್ರ ಈ ತಂತ್ರವನ್ನು ಮೊದಲ ಬಾರಿಗೆ ಉಪಯೋಗಿಸಿತ್ತಂತೆ.
ಕಥೆಯನ್ನು ನಾನು ಹೇಳುವುದಿಲ್ಲ – ನಿಮ್ಮ ಆಸಕ್ತಿ ಮತ್ತು ಕುತೂಹಲ ಕೆಡಿಸುವುದಿಲ್ಲ. ‘ಉಳಿದವರು ಕಂಡಂತೆ’ ಒಂದೇ ಕತೆಯಾದರು ಬೇರೆ ಬೇರೆಯವರ ದೃಷ್ಟಿಯಿಂದ ಹೇಳಿದ ಕಥೆ. ಕಥೆ ಕುತೂಹಲಕಾರಿಯಗಿದೆ. ಕಡೆಯ ತನಕ ಒಂದು ರೀತಿಯ ಸಸ್ಪೆನ್ಸ್ ಇದೆ. ಸಿನೆಮಾದ ಕೆಲವು ದೃಶ್ಯಗಳನ್ನು ಬೇರೆ ಬೇರೆ ಕೋನದಿಂದ, ಸಿನೆಮಾದ ಮಧ್ಯೆ ಮಧ್ಯೆ ವಿವಿದ ಪಾತ್ರಗಳ ದೃಷ್ಟಿಕೋನದಿಂದ ತೋರಿಸುತ್ತಾನೆ. ಕಳ್ಳತನ ಮಾಡಿಯೂ ಮಾಡದೇ ಇರುವ ಮಗ, ವರ್ಷಗಳಿಂದ ಮಗನಿಗಾಗಿ ಕಾಯುತ್ತಿರುವ ತಾಯಿ, ರಿಮ್ಯಾಂಡ್ ಹೋಮಿನಿಂದ ವಾಪಸಾಗಿರುವ ಯುವಕ, ದೋಣಿ ವೋನರೊಬ್ಬ ಹಾಗು ಹುಲಿ-ಕುಣಿತದ practitioner ಒಬ್ಬ, ಇವರ ದೃಷ್ಟಿಗಳಿಂದ ಹೇಳಿದ ಒಂದೇ ಕತೆಯು – ಕಮರ್ಷಿಯಲ್ ಸಿನೆಮಾದಲ್ಲಿನ ಭಾಷೆಯ ಹಾಗು ಮಂಗಳೂರು ಆಸುಪಾಸಿನ pictursque locationಗಳು ಬಹಳ ಚೆನ್ನಾಗಿವೆ. ಕಥೆಯ ನಿರ್ದೇಶನ ಚೆನ್ನಾಗಿದೆ. ಎಡಿಟಿಂಗ್ ಸ್ವಲ್ಪ ಶಕ್ತಿಶಾಲಿಯಾಗಿದ್ದರೆ ಸಿನೆಮಾ ಇನ್ನೂ ಚೆನ್ನಾಗಿ ಇರುತ್ತಿತ್ತು. ಹೊಸ ನಿರ್ದೇಶಕ ರಕ್ಷಿತ ಶೆಟ್ಟಿ ನಿರ್ದೇಶನ ಮಾಡಿ ನಟಿಸಿದ್ದಾರೆ.ಮಿಕ್ಕ ಎಲ್ಲ ಪಾತ್ರಗಳನ್ನು able actors ವಹಿಸಿರುವುದರಿಂದ ಪಾತ್ರಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ, ವಿಶೇಷವಾಗಿ democracy ಎಂಬ ಪಾತ್ರ.
‘ಭೂತಯ್ಯನ ಮಗ ಅಯ್ಯು’ – ಒಂದು ಕಿಂಡಿ – ವಿನತೆ ಶರ್ಮ
ನಾನು ಸಿದ್ದಲಿಂಗಯ್ಯನವರ ‘ಭೂತಯ್ಯನ ಮಗ ಅಯ್ಯು’ ಕನ್ನಡ ಚಲನಚಿತ್ರವನ್ನು ನೋಡಿದ್ದು ಅದು ಬಿಡುಗಡೆಯಾದ ಕೆಲವರ್ಷಗಳ ನಂತರ. ಶಾಲಾ ಬಾಲಕಿಯಾಗಿದ್ದಾಗ ಆಗಾಗ ಗೌರಿಬಿದನೂರು ಹೋಬಳಿಗೆ ಸೇರಿದ ಹಳ್ಳಿಯ ಅಜ್ಜಿಯ ಮನೆಗೆ ನಾವೆಲ್ಲಾ ಹೋಗುತ್ತಿದ್ದೆವು. ಕಣ್ಣು ಬಾಯಿ ಬಿಟ್ಟುಕೊಂಡು ಆ ಹಳ್ಳಿ ಟೆಂಟ್ ಸಿನಿಮಾ ನೋಡಿದ್ದು ಧಮನಿಗಳಲ್ಲಿ ಇಳಿದುಬಿಟ್ಟಿತು. ಅಜ್ಜಿಯ ಹೊಲ, ಊರಿನ ವಿಶಾಲವಾದ ಸ್ವಚ್ಚ ನೀರಿನ ಕೆರೆ, ಕೆರೆಯ ದಡದಲ್ಲಿದ್ದ ಕುಡಿಯುವ ನೀರಿನ ಬಾವಿ, ಬಾವಿಯಲ್ಲಿದ್ದ ಆಮೆ ಕುಟುಂಬ, ಕೆರೆಯ ಪಕ್ಕದಲ್ಲಿದ್ದ ಕಬ್ಬು, ರಾಗಿ ಹೊಲಗಳು. ವಿಪರೀತ ಭಯ ಹುಟ್ಟಿಸುತ್ತಿದ್ದ ನೆಲಬಾವಿಗಳು, ಅಪರೂಪದ ಭತ್ತ, ಹೇರಳ ರಾಗಿ, ನಾನು ಹೊಲದಲ್ಲೇ ಕೂತು ಭೂಮಿಯಿಂದಲೇ ನೇರವಾಗಿ ಕಿತ್ತು ತಿನ್ನುತ್ತಿದ್ದ ರಸಭರಿತ ಕಡ್ಲೇಕಾಯಿ ತೆನೆ, ತೊಗರಿ ತೆನೆ, ಅಜ್ಜಿ ಮನೆಯಲ್ಲಿನ ವಿಶೇಷ ತಾಜಾ ರುಚಿಯಿರುತ್ತಿದ್ದ ಸರಳ ಅಡುಗೆ, ಚೇಷ್ಟೆ ಮಾಡಿದಾಗ ಅಜ್ಜಿ ಬೈಯುತ್ತಿದ್ದ ‘ನಾಟಿ’ ಬೈಗಳು, ಆಕೆ ರೈತರೊಡನೆ ತೆಲುಗು ಮಿಶ್ರಿತ ಕನ್ನಡವನ್ನ ಮತ್ತು ಕೋಲಾರದ ಗಡಿ ತೆಲುಗನ್ನ ಮಾತನಾಡುತ್ತಿದ್ದ ಭಂಗಿ. ಎಲ್ಲವೂ ಸರಿಸಮಾನಾಗಿ ತೆಕ್ಕೆಹಾಕಿಕೊಂಡು ನನ್ನನ್ನು ‘ಭೂತಯ್ಯನ ಮಗ ಅಯ್ಯು’ ಎಂಬ ನೆಲ-ಹೊಲ-ಸ್ವಾಭಿಮಾನ- ಕೆರೆ-ರೈತಾಪಿ-ಬೈಗಳ ಲೋಕಕ್ಕೆ ಕರೆದೊಯ್ದು ಆ ಚಲನಚಿತ್ರವನ್ನ ನನ್ನದಾಗಿ ಮಾಡಿಬಿಟ್ಟವು. ಭೂತಯ್ಯನ ಪಾತ್ರ ಮಾಡಿದ ಎಂ ಪಿ ಶಂಕರ್ ಮತ್ತು ಅಯ್ಯು ಪಾತ್ರಧಾರಿ ಲೋಕೇಶ್ – ತಂದೆಮಗ ಪಾತ್ರಗಳು ಮತ್ತು ಈ ಇಬ್ಬರ ನಟನೆ, ಆಹಾ! ರೈತರ, ಬಡವರ ನೆತ್ತರು ಹೀರಿ ತಾನು ಚೆನ್ನಾಗಿರುವ ತಂದೆಯ ಕುಯುಕ್ತಿ, ಮಗ ತಾನು ತಂದೆಯಿಂದ ಬಳುವಳಿ ಪಡೆದ ಆಸ್ತಿ ಜೊತೆ ಆತನ ಕ್ರೂರತೆ – ಎಷ್ಟು ನೈಜ ನಟನೆ. ಅದೇ ಮಗ ಮುಂದೆ ತಪ್ಪರಿತು ಹೆಂಡತಿಯ, ಮಕ್ಕಳ ಮಾತಿಗೆ ಬೆಲೆಕೊಟ್ಟು ಬದಲಾಗುವ ಪರಿ – ಲೋಕೇಶ್ ಗೆ ಅವರೇ ಸಾಟಿ ಆ ನಟನೆಯಲ್ಲಿ. ಇನ್ನು ಗುಳ್ಳನ ಪಾತ್ರಧಾರಿ ಯುವಕ ವಿಷ್ಣುವರ್ಧನ್ – ಅದೇನು ಕಣ್ಣಿನ ಹರಿತ, ಮೂಗಿನ ತುದಿಯ ಕೋಪ, ಸಿಡುಕು, ‘ಮಲೆನಾಡ ಹೆಣ್ಣ ಮೈ ಬಣ್ಣ, ಆ ನಡು ಸಣ್ಣ’ ಹಾಡ ಅಭಿನಯದ ತುಟಿಯ ಮಿಂಚು! ಸಾಲ ತೀರಿಸುವ ಸಲುವಾಗಿ ತನ್ನ ಶತ್ರು ಅಯ್ಯುವಿನ ಮನೆಯಲ್ಲಿ ಕೆಲಸಗಾರನಾಗುವ ಗುಳ್ಳನ ಸ್ವಾಭಿಮಾನ, ತಂದೆಯ ಶವವನ್ನು ಹೊತ್ತ ಗಾಡಿಯನ್ನು ತಾನೇ ನಡೆಸುವ ಅಯ್ಯುವಿನ ಅಭಿಮಾನ, ಇಬ್ಬರ ಮನೆ ಹೆಂಗಸರ ನಿಟ್ಟುಸಿರು, ತಮ್ಮ ಗಂಡಂದಿರ ನಡುವೆ ಶಾಂತಿಗಾಗಿ ಅವರ ಪಟ್ಟುಬಿಡದ ಪ್ರಯತ್ನ – ಎಲ್ಲವೂ ಸೂಚ್ಯ, ಸಾಂಕೇತಿಕ, ಅಬ್ಬರವಿಲ್ಲದ ನೇರ ಮನಮುಟ್ಟುವ ಸಂದೇಶಗಳು. ಆಸ್ತಿ, ಸ್ವಾರ್ಥ, ವೈಷಮ್ಯ ಬೇಡ – ಪರಸ್ಪರ ಆದರ, ಸ್ವೀಕರಿಕೆ, ಒಪ್ಪಿಕೊಳ್ಳುವುದು, ಗೌರವ, ಪ್ರೀತಿ ಈ ಮನುಷ್ಯ ಸಂಬಂಧಗಳು ಮುಖ್ಯ ಎಂದು ಹೇಳುವ ದೃಶ್ಯಕಾವ್ಯ. ಕಿವಿಗಳು ಮತ್ತೆ ಮತ್ತೆ ಕೇಳಬಯಸುವ ‘ಮಾರಿಯೇ ಗತಿಯೆಂದು’, ‘ವಿರಸವೆಂಬ ವಿಷಕೆ ಬಲಿಯಾದೆ ಏತಕೆ’ ಹಾಡುಗಳು. ಚಿತ್ರದ ಕೊನೆಯ ಕ್ಲೈಮಾಕ್ಸ್ – ನದಿ ಕಟ್ಟೆ ಒಡೆದಾಗ ಗುಳ್ಳ ಅತೀವ ಸಾಹಸದಿಂದ ಆ ಚಿಕ್ಕ ಹರಿಗೋಲಲ್ಲಿ ಅಯ್ಯುವಿನ ಹೆಂಡತಿ ಮಕ್ಕಳನ್ನು ರಕ್ಷಿಸುವುದು -ಇವು ನನ್ನನ್ನು ಮತ್ತೆ ಮತ್ತೆ ಅಜ್ಜಿ ಊರಿನ ಕೆರೆಗೆ ಸೆಳೆದೊಯ್ದು ನನ್ನದೇ ಕಲ್ಪನಾ ಸಾಮ್ರಾಜ್ಯವನ್ನ ಕಟ್ಟಿಕೊಟ್ಟಿತು.
ಕಡೆಯ ಹೈ ಲೈಟ್ – ಒಬ್ಬರಿಗೆ ಮಾತ್ರ ದುಡ್ಡು ಕೊಟ್ಟು, ತಲೆ ಮೇಲೆ ಟವಲ್ ಹಾಕಿಕೊಂಡು, ಪಕ್ಕ ಸರಿದು ಸರಿದು ನಾಲ್ವರು ಒಂದೇ ಎಲೆಯಲ್ಲಿ ಊಟ ಮಾಡುವುದು, ಮತ್ತು ಅಯ್ಯುವಿನ ಮನೆಯನ್ನು ಕೊಳ್ಳೆ ಹೊಡೆಯುವಾಗ ಆ ಉಪ್ಪಿನಕಾಯಿಯ ಜಾಡಿಯನ್ನು ಮಾತ್ರ ಕದ್ದು ತಬ್ಬಿಕೊಳ್ಳುವ ಪಾತ್ರ. ಲೋಕನಾಥ್, ನಿಮಗೆ ಹಾಯ್ ಫೈವ್.
`ಲೂಸಿಯಾ` ನೀ ಮಾಯಯೊಳಗೋ ನಿನ್ನೊಳು ಮಾಯೆಯೋ – ರಾಮಶರಣ
“ಲೂಸಿಯಾ” ಹೆಸರು ಕೇಳಿದಾಗ ಯಾವ ಲೂಸ್ ಈ ಪಿಕ್ಚರ್ ಮಾಡಿದಾನಪ್ಪಾ ಎಂದೆನಿಸಿತ್ತು ನನಗೆ. ಇತ್ತೀಚಿನ ಕನ್ನಡ ಚಿತ್ರಗಳ ಹೆಸರು ಕೇಳಿದಾಗ, ಹಾಡುಗಳನ್ನು ಕೇಳಿದಾಗ ಇಂತಹ ವಿಚಾರ ಬಂದರೇನೂ ಆಶ್ಚರ್ಯವಿಲ್ಲ, ಬಿಡಿ. ಗೆಳೆಯರಿಬ್ಬರು ,”ಡಿಫರೆಂಟಾಗಿದೆ, ನೋಡು”, ಎಂದಿದ್ದಲ್ಲದೇ, ಚಿತ್ರದ ಸೀಡಿ ಕೂಡ ಕೈಯಲ್ಲಿ ತುರುಕಿ ಹೋದ್ರು. ಅಂತೂ ಇಂತೂ ಹೆಂಡತಿ-ಮಕ್ಕಳು ಇಲ್ಲದ ಸಮಯ ನೋಡ್ಕೊಂಡು, ಧೈರ್ಯ ಮಾಡಿ ಸೀಡಿಯನ್ನು ನಾಲಿಗೆ ಚಾಚಿದ ಡೀವಿಡಿ ತಟ್ಟೆಯ ಮೇಲಿಟ್ಟೆ. ಮೆಲ್ಲನೆ ಅದರ ಬಾಯೊಳಗೆ ಸೀಡಿ ಮಾಯವಾಗುತ್ತಿದಂತೇ, “ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ” ಎಂದು ಕನಕ ದಾಸರ ಕೀರ್ತನೆ ಷುರುವಾಯ್ತು; “ಇಂಟರೆಸ್ಟ್” ಕುದುರಿತು.
ನಿಕ್ಕಿ ಕೆಲಸ ಹುಡುಕಿ ಕೊಂಡು ಹಳ್ಳಿಯಿಂದ ದಿಳ್ಳಿಗೆ ಬರುವ ಮಾಮೂಲಿ ಯುವಕ. ಕಣ್ಣಲ್ಲಿರುವ ಕನಸಷ್ಟೇ ಅವನ ಬಂಡವಾಳ. ಬೆಂಗಳೂರಿನ ಸ್ಲಮ್ ಒಂದ್ರಲ್ಲಿ ಇವನಂಥವರೊಂದಿಗೆ ಒಂದು ಕೋಣೆಯಲ್ಲಿ ಇವನ ವಾಸ. ಚಿಕ್ಕ ಸಿನೆಮಾ ಥೇಟರ್ ನಲ್ಲಿ ಬ್ಯಾಟ್ರಿ ಬಿಡೋದು ಅವನ ಕೆಲಸ. ಥೇಟರ್ ಮಾಲಕ ಶಂಕ್ರಣ್ಣ ಅವನ ಆಪ್ತ ಮಿತ್ರ. ಕೆಲಸ ಮುಗಿಸಿ ಬಂದ ಮೇಲೆ ನಿಕ್ಕಿಗೆ ಕಣ್ಣಿಗೆ ನಿದ್ದೆ ಹತ್ತದ ರೋಗ, ಸುತ್ತೆಲ್ಲ ಗೊರಕೆ ನಾದ. ಒಂದು ರಾತ್ರಿ ಇವನಿಗೆ ಹೇಗೋ ಹೊಸ ಬಗೆಯ ನಿದ್ದೆ ಗುಳಿಗೆ “ಲೂಸಿಯಾ” ಮಾರುವವನ ಪರಿಚಯವಾಗುತ್ತೆ. ಈ ಮದ್ದಿನ ವಿಶೇಷ ಏನಂದ್ರೆ, ನಿದ್ದೆ ಬಂದಾಗ ಕನಸು ಬೀಳುತ್ತೆ, ಆ ಕನಸಲ್ಲಿ ನಿನಗೆ ಏನಾಗ್ಬೇಕೋ ಅದಾಗ್ಬೋದು. ನಿಕ್ಕಿ ಕನಸಲ್ಲಿ ಹೆಸರಾಂತ ಕನ್ನಡ ಚಲನಚಿತ್ರ ನಟ ನಿಖಿಲ್ ಆಗ್ತಾನೆ. ಆಪ್ತ ಶಂಕ್ರಣ್ಣ ಇವನ ಪಿಏ. ಬಣ್ಣದ ಚಲನಚಿತ್ರದಲ್ಲಿ ಕನಸಿನ ಲೋಕದ ರಂಗಿನ ಚಲನಚಿತ್ರ ರಂಗ ಕಪ್ಪು-ಬಿಳುಪು; ನಿಖಿಲ್ ಯಾವಾಗ್ಲೂ ಹಾಕೋದು ಕಪ್ಪು ಕನ್ನಡಕ.
ನಿಕ್ಕಿಯ ಬದುಕಿನಲ್ಲಿ ಅಕಸ್ಮಾತ್ತಾಗಿ ಪಿಝ್ಝಾ ಅಂಗಡಿಯಲ್ಲಿ ಕೆಲಸ ಮಾಡುವ ಶ್ವೇತಾಳ ಆಗಮನ ಅಗುತ್ತಿದಂತೆ, ನಿಖಿಲ್ ಸೀರೆ ಮಾಡೆಲ್ ಶ್ವೇತಾಳ ಸೌಂದರ್ಯದ ಬಲೆಗೆ ಬೀಳ್ತಾನೆ. ನಿಕ್ಕಿ-ಶ್ವೇತಾರ ಸ್ನೇಹ-ಪ್ರೇಮ ಏಳು-ಬೀಳು ಕಂಡಂತೆ, ನಿಖಿಲ್-ಶ್ವೇತಾರ ಪ್ರಣಯವೂ ಜೀವನ ಸುಳಿಯಲ್ಲಿ ಸಿಲುಕಿ ನಲುಗುತ್ತದೆ. ನಿಕ್ಕಿ- ನಿಖಿಲ್ ಇಬ್ಬರ ಬದುಕಿನಿಂದ ಶ್ವೇತಾ ದೂರ ಹೋಗುತ್ತಿದ್ದಂತೇ, ಎಂದೋ ನಡೆದ ಕರ್ಮದ ಫಲವಾಗಿ ಶಂಕ್ರಣ್ಣನೂ ಅಸ್ತಂಗತನಾಗ್ತಾನೆ. ನಿಖಿಲ್ ನ ಬದುಕು ನುಚ್ಚು ನೂರಾಗುತ್ತೆ; ನಿಕ್ಕಿ ಶಂಕ್ರಣ್ಣನ ಥೇಟರ್ ಜೀರ್ಣೋದ್ಧಾರದ ಕೈಂಕರ್ಯ ಮಾಡ್ತಾನೆ. ಅವನತಿಯ ಹಾದಿಯಲ್ಲಿರುವ ನಿಖಿಲ್ ತನ್ನ ಬದುಕಿನ ಹಿನ್ನಲೆ ವಿವರಿಸುತ್ತ ನೀಡಿದ ಸಂದರ್ಶನದಲ್ಲಿ ತನಗಿರುವ ವರ್ಣಾಂಧತೆಯ ವಿಚಾರ ಹೊರಬಿಡುವಾಗ; ನಾಯಕನ ಕಪ್ಪು ಕನ್ನಡಕ, ನಿರ್ದೇಶಕ ಪವನ್ ಕುಮಾರ್ ಬಳಸಿದ ಕಪ್ಪು-ಬಿಳುಪಿನ ಚಿತ್ರೀಕರಣದ ಮರ್ಮ ಥಟ್ಟನೆ ಮೈ ತಟ್ಟುತ್ತದೆ. ನಿಕ್ಕಿಯ ಮುಗ್ಧ ಪ್ರೇಮದ ಅರಿವಾಗಿ ಹೊಸ ರೂಪದ ಥೇಟರ್ ಉದ್ಘಾಟನೆಗೆ ಬರುವ ಶ್ವೇತಾಳ ಕೈಗೆ ಸಿಗದೇ ನಿಕ್ಕಿ ಮೆಲಿಂದ ಹಾರುತ್ತಾನೆ; ಕನಸಿನ ಲೋಕದಲ್ಲಿ ನಿಖಿಲ್ ಮನೆಗೆ ಶ್ವೇತಾ ಬರುವಾಗ, ನಿದ್ದೆ ಮಾತ್ರೆಗಳನ್ನು ತಿಂದು ನಿಖಿಲ್ ಬೈ-ಬೈ ಹೇಳುತ್ತಾನೆ. ಇಬ್ಬರೂ ಐಸಿಯುನಲ್ಲಿ ತ್ರಿಶಂಕುವಾಗಿ ಒಂದಾಗುತ್ತಾರೆ.
ಈ ಅತಂತ್ರನಿಗೆ ದಯಾ ಮರಣ ನೀಡಬೇಕೆ ಎಂದು ಸುದ್ದಿ ಮಾಧ್ಯಮಗಳಲ್ಲಿ ತೀವ್ರ ಚರ್ಚೆ ನಡೆಯುವಾಗ, ನಿಕ್ಕಿಯ ಹಿಂದಿನ ಘಟನೆಗಳ ವಾಸನೆ ಹಿಡಿದು ಮುಂಬೈನಿಂದ ಬರುವ ತನಿಖಾಧಿಕಾರಿ ಸಂಜಯ್ ಲೂಸಿಯಾ ಮಾತ್ರೆಯ ಅಕ್ರಮ ವ್ಯಾಪಾರಿಯ ಪತ್ತೆ ಹಚ್ಚುತ್ತಾನೆ. ಇಬ್ಬರ ಬದುಕಿನ ಘೂಢತೆಗಳ ಈರುಳ್ಳಿಯ ಪದರಗಳನ್ನು ಸುಲಿಯುತ್ತ ಹೋಗುವ ಸಂಜಯ್, ನಿಕ್ಕಿ-ನಿಖಿಲ್ ಇವರ ಅತಂತ್ರ ಸ್ಥಿತಿಯನ್ನು ಸುತಂತ್ರಗೊಳಿಸಲು ಹಾಕಿದ ತಂತ್ರದೊಂದಿಗೆ ಚಿತ್ರ ಮುಕ್ತಾಯವಾಗುತ್ತೆ.
ಚಿತ್ರದುದ್ದಕ್ಕೂ ನಿಕ್ಕಿ-ನಿಖಿಲ್ ರ ಜೀವನ ಬಿಂಬ-ಪ್ರತಿಬಿಂಬಗಳನ್ನಾಗಿಸಿ ನಮ್ಮನ್ನು ಭ್ರಮಾ ಲೋಕಕ್ಕೆ ಪವನ್ ಕುಮಾರ್ ಸಾಗಿಸುತ್ತಾರೆ. ಕಥೆಯಲ್ಲಿನ ಬಿಗಿತ ಸಡಿಲವಾಗಲು ಬಿಡುವುದೇ ಇಲ್ಲ. ಪ್ರಾರಂಭದಲ್ಲಿ ಬರುವ ಕೀರ್ತನೆ ತುಂಬ ಸಮಂಜಸವಾಗಿ ಬಿಡುತ್ತದೆ. “ಲೂಸಿಯಾ” ಒಂದು ಚಿತ್ರ-ಕಾವ್ಯವನ್ನಾಗಿಸುವಲ್ಲಿ, ಚಿತ್ರದುದ್ದಕ್ಕೂ ಬರುವ ಪ್ರತಿಮೆಗಳು ಯಶಸ್ವಿಯಾಗಿವೆ. ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ಪೂರಕವಾಗಿದೆ, ಬೇಕಾದಲ್ಲಿ ಇಂಪಾಗಿದೆ.
ಹಲವಾರು ಮಜಲುಗಳಲ್ಲಿ “ಲೂಸಿಯಾ” ಹಿತವೆನಿಸುತ್ತದೆ. ವಿಭಿನ್ನ ಪರಿಕಲ್ಪನೆ, ಕ್ರೌಡ್ ಫಂಡಿಂಗ್ ಬಳಸಿ ಬಂಡವಾಳ ಒಟ್ಟು ಹಾಕಿದ ಸಾಹಸ, ಕನ್ನಡದಲ್ಲಿ ಹೊಸ ಶತಮಾನಕ್ಕೆ ತಂದ ಹೊಸ ಅಲೆ ಈ ಚಿತ್ರ. ಮುಗಿದ ಮೇಲೂ ಮತ್ತೆ ಮತ್ತೆ ಚಿತ್ರದಲ್ಲಿ ಬರುವ ವಿಚಾರಗಳತ್ತ ಚಿಂತಿಸುವಂತೆ ಪ್ರೇರೇಪಿಸುವಲ್ಲಿ ನಿರ್ದೇಶಕ ಗೆಲ್ಲುತ್ತಾರೆ. ನನ್ನ ಗೆಳೆಯರು ಹೇಳಿದಂತೆ, “ಲೂಸಿಯಾ” ಡಿಫರೆಂಟ್, ನೋಡಲೇ ಬೇಕಾದ ಚಿತ್ರ ನನ್ನನಸಿಕೆಯಂತೆ.
ಗಾಂಧಿಯೆಂಬ`ಕೂರ್ಮಾವತಾರ` – ಕೇಶವ ಕುಲಕರ್ಣಿ
ಯಾವುದೇ ಸಣ್ಣ ಪಟ್ಟಣದಲ್ಲಿ, ಯಾರಿಗೂ ಅಷ್ಟೇನೂ ಪರಿಚಯವಿಲ್ಲದ (ತನ್ನ ಮನೆಯಲ್ಲೇ ಅಪರಿಚಿತನಂತೆ ಬದುಕುವ), ಯಾವುದೇ ಸರಕಾರಿ ಕಛೇರಿಯಲ್ಲಿ ಕಾರಕೂನಿಕೆ ಮಾಡಿಕೊಂಡು, ಯಾವುದೇ ಆದರ್ಶಕ್ಕಾಗಲೀ ಆಮಿಷಕ್ಕಾಗಲೀ ಒಳಗಾಗದೇ, ದಶಕಗಳಗಟ್ಟಲೇ ಅದೇ ಬದುಕನ್ನು ಬದುಕುತ್ತ, ನಿವೃತ್ತಿಯ ಹಾದಿಯಲ್ಲಿರುವ ಕೆಳಮಧ್ಯಮವರ್ಗದ ವಿಧುರ ಗುಮಾಸ್ತ, ತಲೆ-ಕೈ-ಕಾಲುಗಳನ್ನು ಒಳಗೆ ಎಳೆದುಕೊಂಡು ಚಿಪ್ಪಿನಂತೆ ಬಿದ್ದುಕೊಂಡಿರುವ ಕೂರ್ಮದಂತೆ ಬದುಕಿರುತ್ತಾನೆ. ನೋಡಲು ಗಾಂಧಿಯಂತೆ ಇರುವುದೇ ಮಹಾಪರಾಧವಾಯಿತೇನೋ ಎನ್ನುವಂತೆ, ಮೊದಲಿನ ಗಾಂಧಿ ಪಾತ್ರಧಾರಿ ಕೈಕೊಟ್ಟದ್ದರಿಂದ, ಟಿವಿ ಸಿರಿಯಲ್ಲಿನ ಗಾಂಧಿಯ ಪಾತ್ರ ಈತನನ್ನು ಹುಡುಕಿಕೊಂಡು ಬರುತ್ತದೆ. ಮೊಮ್ಮಗ ಇಂಜಿನಿಯರ್ ಆಗುವ ಕನಸಿದ್ದರೆ ಹಣ ಬೇಕು ಎಂದು ಮೊಮ್ಮಗನ ಪ್ರೀತಿಯ ದಾಳ ಎಸೆದು, ಮಗ (ಬಡ್ಡಿ-ಶೇರ್ ಮಾರುಕಟ್ಟೆ ವ್ಯವಹಾರ ಮಾಡಿ ಜೀವನ ಮಾಡುತ್ತಾನೆ) ಈ ಕೂರ್ಮನನ್ನು ಗಾಂಧಿ ಪಾತ್ರಮಾಡಲು ಒಪ್ಪಿಸುತ್ತಾನೆ. ಗಾಂಧಿ ಪಾತ್ರ ಮಾಡುತ್ತ ಮಾಡುತ್ತ ಈ ಕೂರ್ಮನ ತಲೆ, ಕೈ, ಕಾಲುಗಳು ಚಿಪ್ಪಿನಿಂದ ಹೊರಬರಲು ಆರಂಭಿಸುತ್ತವೆ. ಗಾಂಧಿಯ ಆದರ್ಶಗಳು ಒಳಗಿಳಿಯಲು ಹತ್ತುತ್ತವೆ. ಮಗ, ಮಿತ್ರರು, ನೆರೆಹೊರೆಯವರು, ಜಾಹೀರಾತುದಾರರು ಈ ಹೊಸ ಗಾಂಧಿಯ ಪ್ರಸಿಧ್ಧಿಯನ್ನು ಎನ್-ಕ್ಯಾಷ್ ಮಾಡಿಕೊಳ್ಳಲು ತೊಡಗುತ್ತಾರೆ. ಅದರಿಂದ ಸಿಡಿದೆದ್ದು ಹೊರಬರಲು ಸಾಕಷ್ಟು ಪ್ರಯತ್ನ ಮಾಡಿ, ಸಾಧ್ಯವಾಗದೇ ಸೋಲುತ್ತಾನೆ. ಗೋಡ್ಸೆಯಿಂದ ಹತ್ಯೆಯಾಗುವ ದೃಶ್ಯದಲ್ಲಿ ನಟಿಸಿ ಸಾಯುತ್ತಾನೆ. ನೆಹರು, ಪಟೇಲ, ಗೋಡ್ಸೆ ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ.
ಅಟೆನ್-ಬರೋ ಅವರ `ಗಾಂಧಿ` ಸಿನೆಮಾದಂತಯೇ, ಗಾಂಧಿಯ ಹತ್ಯೆಯೊಂದಿಗೇ ಸಿನೆಮಾ ಶುರುವಾಗಿ, ಫ್ಲ್ಯಾಷ್-ಬ್ಯಾಕಿನಲ್ಲಿ ಕತೆ ಶುರು ಅಗುತ್ತದೆ, ಕಾಸರವಌಯವರ `ಕೂರ್ಮಾವತಾರ`. ಆದರೆ `ಗಾಂಧಿ` ಸಿನೆಮಾದಲ್ಲಿ, ನಿಜಜೀವನದಲ್ಲಿ ಗಾಂಧಿಯ ಹತ್ಯೆ ಆಗಿದ್ದು ಒಂದೇ ಗುಂಡಿನಿಂದ. ಇಲ್ಲಿ ದೃಶ್ಯ ಸರಿಯಾಗಿ ಮೂಡಿಬಂದಿಲ್ಲವೆಂದು, ಗಾಂಧಿಯನ್ನು ಪದೇ ಪದೇ ಕೊಲ್ಲಲಾಗುತ್ತದೆ.
ವೈಯಕ್ತಿಕ ಆದರ್ಶಗಳ, ಕುಟುಂಬದ, ಮಾಧ್ಯಮಗಳ, ಜಾತಿ-ಧರ್ಮಗಳ, ಸಮಾಜದ ಪದರು ಪದರುಗಳನ್ನು ಅದೇ ಸಂಕೀರ್ಣತೆಯಲ್ಲಿ ಉಣಬಡಿಸುತ್ತಾರೆ. ನಾನು ಇತ್ತೀಚೆ ನೋಡಿದ ಕನ್ನಡ ಚಿತ್ರಗಳಲ್ಲಿ `ಕೂರ್ಮಾವತಾರ` – ಅ ಮಸ್ಟ್ ವಾಚ್.
ಶರಪಂಜರ -`ನಾ ಬಂದೆ, ನಾ ನೋಡ್ದೆ, ನಾ ಗೆದ್ದೆ` – ಸರೋಜಿನಿ ಪಡಸಲಗಿ
ಪುಟ್ಟಣ್ಣ ಕಣಗಾಲ ಅವರ,”ಶರಪಂಜರ” ತ್ರಿವೇಣಿಯವರ ಅದೇ ಹೆಸರಿನ ಕಾದಂಬರಿಯಾಧಾರಿತ ಚಲನಚಿತ್ರ.ಅದರ ನಾಯಕಿ ಕಾವೇರಿಗೆ “ಮಿನುಗು ತಾರೆ” ಕಲ್ಪನಾ ಜೀವ ತುಂಬಿದರೋ, ಕಾವೇರಿಯೇ ಅವರಿಗೆ ಸ್ಫೂರ್ತಿಯಾದಳೋ ಹೇಳುವುದು ಕಷ್ಟ.ಅಷ್ಟೊಂದು ತಾದಾತ್ಮಭಾವದ ನಟನೆ. ಮದುವೆಗೆ ಮೊದಲು ಶೀಲ ಕಳೆದುಕೊಂಡ ಕಾವೇರಿ ಮದುವೆಯಾಗಿ ಎರಡನೇ ಹೆರಿಗೆಯ ನಂತರ ಉನ್ಮಾದರೋಗಕ್ಕೆ ಬಲಿಯಾಗಿ, ಅದುಮಿಟ್ಟ ಭಾವನೆಗಳ ಸಾಗರ ಉಬ್ಬರಿಸಿ, ಮನದ ಭಿತ್ತಿಯನ್ನು ಸೀಳಿಕೊಂಡು, ಹಾರಿ ಈಚೆಬರುತ್ತವೆ. ಅರೆ ಪ್ರಜ್ಞಾವಸ್ಥೆಯಲ್ಲಿ ಕಾವೇರಿ ತಾನು ಕಳೆದು ಕೊಂಡದ್ದನ್ನು ಆ ನದಿತೀರದಲ್ಲಿಯೇ ಮರಳನ್ನು ಬಗೆ ಬಗೆದು” ಇಲ್ಲಿಯೇ ಕಳೆದುಕೊಂಡೆ”ಅಂತ ಹುಡುಕಾಡುವ ಕಲ್ಪನಾಳ ಅಭಿನಯ ಮನೋಜ್ಞ, ಅನೂಹ್ಯ.
“ಮಾನಸಿಕ ರೋಗಿ”ಯಾಗಿ, ಹುಚ್ಚಾಸ್ಪತ್ರೆ ಸೇರಿ, ಗುಣವಾಗಿ ತಿರುಗಿ ಬರುವ ಕಾವೇರಿ ಎದುರಿಸುವ ಸವಾಲುಗಳು ಹಲವು. ಇಲ್ಲಿ ಕಲ್ಪನಾ ಅವರ ಅಭಿನಯ ಉತ್ತುಂಗಕ್ಕೇರಿದೆ ಎಂದರೆ ತಪ್ಪಲ್ಲ. ಮಾನಸಿಕ ರೋಗಿ ಅಂತ ಹಣೆ ಪಟ್ಟಿ ಹಚ್ಚಿಕೊಂಡರೆ ಸಮಾಜ ಅವರನ್ನ ನೋಡುವ ರೀತಿಯೇ ಬೇರೆ. ಒಂದೇ, ಎರಡೇ ನೂರೆಂಟು ಇರಿತಗಳು, ಕೂರಂಬುಗಳು. ಎಲ್ಲ ಸಹಿಸಿ ನಗಲು ಯತ್ನಿಸಿ ಸೋತಳು ಕಾವೇರಿ. ಹೆಜ್ಜೆ, ಹೆಜ್ಜೆಗೂ ಅವಳು ಮರೆಯಬೇಕೆಂದಿರುವುದನ್ನು ನೆನಪಿಸುವ ಸಮಾಜ, ತನ್ನವರು, ಕೊನೆಗೆ ಗಂಡ ಎಲ್ಲರನ್ನೂ ಕಾವೇರಿ ಕೇಳುವುದೊಂದೆ-“ನನಗೆ ಕರುಣೆ ಬೇಡ.ಪ್ರೀತಿ,ಸಹಜ ಪ್ರೀತಿ ಬೇಕು”. ಮನ ಕಲಕುವಂತೆ ಕೇಳುವ ಕಾವೇರಿ ಚಿತ್ತದಿಂದ ಸರಿದೇ ಇಲ್ಲ. ಸಿನಿಮಾಗಳ ಸನ್ನಿವೇಶಗಳನ್ನ ನೋಡಿ ಅಳುವವರ ಗೇಲಿ ಮಾಡುವ ನಾನು, ಕಾವೇರಿಯ ಮಗು ಶಾಲೆಯಿಂದ ಬಂದು,”ಅಮ್ಮಾ ಹುಚ್ಚಿ ಎಂದರೆ ಯಾರು”ಅಂತ ಕೇಳಿದಾಗ ಅವಳು ಅಳು ನುಂಗಿ,”ನಿನ್ನ ಮುದ್ದು ಮಾಡಿ,ಆಟ ಆಡಿಸ್ತಾಳಲ್ಲ ಅವಳೇ ಹುಚ್ಚಿ’ ಎಂದು ಹೇಳುವಾಗ ನನಗರಿಯದಂತೆ ಕಣ್ಣೀರು ಧಾರೆಯಾಗಿತ್ತು.
ಸಮಾಜದ ಅಪಹಾಸ್ಯ, ಅಪನಿಂದೆಗಳ “ಶರಪಂಜರ”ದಲ್ಲಿ ಬಂದಿಯಾದ ಕಾವೇರಿಯ ಮನೋವಿಕಲತೆ ಉಮ್ಮಳಿಸಿದ್ದು, ಗಂಡ ಸತೀಶ್ ಮೊದಲು ತಾನೇ ನಿರಾಕರಿಸಿದ ಹೆಣ್ಣಿನ ಸಂಗ ಬೆಳೆಸಿದಾಗ. ಅಲ್ಲಿಗೆ ಕಾವೇರಿಯ ಮನದ ಧೃಡತೆ ಕುಸಿದೇ ಹೋಯ್ತು.”ನೀವು ಒಂದೇ ಒಂದು ಅವಕಾಶ ಕೊಡಬೇಕಿತ್ತು” ಅಂತ ಹಲುಬಿ ಉನ್ಮಾದದ ತಾರಕಾವಸ್ಥೆಯಲ್ಲಿ ಕೂಗುವ ಕಾವೇರಿ, ಇಂದಿಗೂ ಕಣ್ಮುಂದೆ ಕುಣಿಯುತ್ತಾಳೆ. “ನಾ ಬಂದೆ,ನಾ ನೋಡ್ದೆ,ನಾ ಗೆದ್ದೆ” ಅಂತ ಚೀರುವ “ಶರಪಂಜರ”ದ ನಾಯಕಿ ಚಿತ್ತ ಕಲಕುತ್ತಾಳೆ. ಇಲ್ಲಿ ಗೆದ್ದವಳು ಕಾವೇರಿಯಲ್ಲ, ಆದರೆ ಮನ ತಟ್ಟುವ ಅಭಿನಯದಿಂದ ಪ್ರೇಕ್ಷಕರನ್ನ ಗೆದ್ದ “ಕಲ್ಪನಾ” ಬೆಳ್ಳಿ ತೆರೆಯ ಮಿನುಗು ತಾರೆಯಾದರು. ಆಶೆಗಳನ್ನು ಹೊತ್ತ ಕಾವೇರಿಯನ್ನು ಬಾಳಗೊಡದ ಸಮಾಜದ ಒಂದು ಭಾಗವಾದ ನಾನು ಮೂಕ ಪ್ರೇಕ್ಷಕಿಯಾದೆ.
ಕನ್ನಡ ಸಾಹಿತ್ಯದಲ್ಲಿ ಸಣ್ಣಕಥೆಗಳ ಮೂಲಕ ಸಮಾಜದ ಸಮಸ್ಯೆಗಳನ್ನು ವಿಶ್ಲೇಷಿಸಿ, ಜನಕ್ಕೆ ಸಂದೇಶ ನೀಡುವ ಲೇಖಕರು ಬೆರಳೆಣಿಸುವಷ್ಟು ಮಂದಿ ಮಾತ್ರವಿದ್ದಾರೆ. ನನ್ನ ಮಟ್ಟಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಇಬ್ಬರೂ ಈ ಸಣ್ಣಕಥೆಗಳ ಸರದಾರರು. ಗೊರೂರು ರಾಮಸ್ವಾಮಿ ಅಯ್ಯಂಗಾರರ ಸಣ್ಣದೊಂದು ಪುಸ್ತಕ ಕಥೆಯಾದ “ಭೂತಯ್ಯನ ಮಗ ಅಯ್ಯುವಿನ“ ಮೇಲಾಧರಿತವಾದ ಅದೇ ಹೆಸರಿನ ಚಲನಚಿತ್ರ ೭೦ರ ದಶಕದ ಮತ್ತೊಂದು ಮೈಲುಗಲ್ಲಿನ ಕನ್ನಡ ಚಲನಚಿತ್ರವೆನ್ನಬಹುದು. ಹಳ್ಳಿಯ ಸಾಮಾಜಿಕ ಸಮಸ್ಯೆಗಳನ್ನು ಆಧಾರಿಸಿದ ಈ ಕಥೆಯಲ್ಲಿ, ಅಂದಿನ ಮೇಲ್ಜಾತಿ ವರ್ಗದ ಜಮೀನುದಾರರು, ದಲಿತವರ್ಗದ ಮೇಲೆ ನಡೆಸುತ್ತಿದ್ದ ಕ್ರೌರ್ಯದ ಪರಿಚಯ ನಮಗಾಗುತ್ತದೆ. ಹಳ್ಳಿಯ ವಿವಿಧ ಜನಗಳ ಜೀವನವನ್ನು ಒಂದು ಜಾಲದಲ್ಲಿ ನೇಯ್ದ ಈ ಆಸಕ್ತಿಪೂರ್ಣ ಕಥೆಯಲ್ಲಿ, ತಂದೆ ಭೂತಯ್ಯನಿಗಿಂತ, ವಿದ್ಯಾವಂತನಾದ ಮಗ ಅಯ್ಯು ತನ್ನ ಬದಲಾದ ಮನದಿಂದ ಪ್ರೇಕ್ಷಕರ ಮನಗೆಲ್ಲುತ್ತಾನೆ. ಈ ಕಥೆಯ ವಿಶ್ಲೇಷಣೆಯನ್ನು ತಮ್ಮ ಬಾಲ್ಯದ ಸವಿನೆನಪಿನೊಂದಿಗೆ ಹೆಣೆದು ಬರೆದ ವಿನುತೆಯವರ ಶೈಲಿ ಬಹಳ ಚೆನ್ನಾಗಿದೆ. ಈ ಚಿತ್ರದಲ್ಲಿನ ಎಲ್ಲಾ ಪಾತ್ರಧಾರಿಗಳೂ ತಮ್ಮ ತಮ್ಮ ಅಭಿನಯವನ್ನು ಬಹಳ ಉತ್ಕೃಷ್ಟ ಮಟ್ಟದಲ್ಲಿ ನಿರ್ವಹಿಸಿದ್ದಾರೆ. ಚಪ್ಪಲಿ ಹೊಲೆಯುವವನ ಪಾತ್ರದಲ್ಲಿ ಲೋಕನಾಥ್ ಅಭಿನಯ, ಬೆಂಗಳೂರಿನ ಹೋಟೆಲಿನಲ್ಲಿ ಒಂದು ಪ್ಲೇಟ್ ಊಟದ ಬೆಲೆಯಲ್ಲಿ ೪ ಜನ ಊಟ ಮಾಡುವ ದೃಷ್ಯಗಳು ಮನದಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಭೂತಯ್ಯನ ಪಾತ್ರದ ಎಂ. ಪಿ. ಶಂಕರ್ ತಾವೊಬ್ಬರು ನಿಜವಾದ ಪ್ರತಿಭೆಯ ಖಳನಾಯಕ ಎನ್ನುವುದನ್ನು ನಿರೂಪಿಸುತ್ತಾರೆ. ಅಯ್ಯುವಿನ ಪಾತ್ರದ ಲೋಕೇಶ್ ಕನ್ನಡ ಚಿತ್ರರಂಗ ಕಂಡ ಬಹಳ ಅಪರೂಪದ ಪ್ರತಿಭೆಯ ನಟನೆಂಬುದರಲ್ಲಿ ಸಂಶಯವಿಲ್ಲ. ಗುಳ್ಳನ ಪಾತ್ರದ ವಿಷ್ಣುವರ್ಧನ್ ತಮ್ಮ ನಟನಾ ವೃತ್ತಿಯ ಪ್ರಾರಂಭದಲ್ಲೇ ಈ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿ ಚಪ್ಪಾಳೆಗಿಟ್ಟಿಸುತ್ತಾರೆ. ಚಿತ್ರದ ಛಾಯಾಗ್ರಹಣ ಅತ್ಯುತ್ತಮವಾಗಿದೆ. ಸಂಗೀತ ಪೂರಕವಾಗಿದ್ದು ಕನ್ನಡಿಗರ ಮನದಲ್ಲಿ ಬಹಳಕಾಲ ಉಳಿಯುವ ಚಿತ್ರಗಳಲ್ಲಿ ಇದೂ ಒಂದು ಎನ್ನಬಹುದು. ಈ ಶೀರ್ಷಿಕೆಯಲ್ಲಿನ ಇನ್ನೆರಡು ಚಿತ್ರಗಳಾದ “ಲೂಸಿಯಾ“ ಮತ್ತು “ಕೂರ್ಮಾವತಾರ“ ಚಲನಚಿತ್ರಗಳನ್ನು ನೋಡುವ ಅವಕಾಶ ನನಗೆ ದೊರೆತಿಲ್ಲ. ಈ ಚಿತ್ರಗಳ ವಿಶ್ಲೇಷಣೆ ಓದಿದ ನಂತರ, ಅವನ್ನು ಖಂಡೀತಾ ನೋಡಬೇಕೆನ್ನುವ ಅಭಿಲಾಷೆ ಹುಟ್ಟಿದೆ.
ಉಮಾ ವೆಂಕಟೇಶ್
LikeLiked by 1 person
Thanks for comments. I would have written some more but thought whether it will be more. But anyway this will guide me. And to say about Mr.Satya’s question he can get CDs Thanks once again.
LikeLike
I have seen Bhutayyana maga and Sharapanjara.
Both are my all time favourites. Bhutayyana Maga is a movie with an astute direction , impeccable script, dialogues and execution,Songs, acting expressions are just exemplary. Siddhalingaiah made this movie to match Bangarada Manushya, from his own banner and he did a splendid job.
Sharapanjara is again a movie with ground breaking concept, looking ahead of its time.Songs are just out of this world. The combination of Vijayanarasimha, Kanagal Prabhakara Shastri, VijayaBhaskar, P.B.Srinivas and P.Susheela produced timeless melodies.
Kalpana became famous, and sadly Gangadhar started losing his market value for the negative tone of his role, Just as Kalyan Kumar lost his roles and offers following Bellimoda.
The other three movies, I have not seen yet.
Nice write ups. Saharapanjara write up could be a bit more elaborative and analytical.
LikeLiked by 1 person
May I clarify one point. There was a longer version of Sharapanjara critique. Foreshortened by word limit!
LikeLike
೧೯೭೦ರ ದಶಕದಲ್ಲಿ ತೆರೆಕಂಡ ಶರಪಂಜರ ಚಲನಚಿತ್ರ, ಸುದರ್ಶನ್ ಅವರ ಅಭಿಪ್ರಾಯದಂತೆ ಕನ್ನಡ ಚಲನಚಿತ್ರರಂಗದ ಒಂದು ಮೈಲುಗಲ್ಲೆನಬಹುದು. ಅಂದಿನ ಸಮಾಜದ ಅತಿ ಸೂಕ್ಷ್ಮವಾದ ಸಾಮಾಜಿಕ ಸಮಸ್ಯಗಳನ್ನು ತಮ್ಮ ಪುಸ್ತಕಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಹೊರತರುತ್ತಿದ್ದ ಕನ್ನಡದ ಅತಿ ಯಶಸ್ವಿ ಕಾದಂಬರಿಗಾರ್ತಿ ದಿ. ತ್ರಿವೇಣಿ, ಶರಪಂಜರದಲ್ಲಿ ಮಾನಸಿಕ ಉನ್ಮಾದದ ರೋಗವುಳ್ಳ ವ್ಯಕ್ತಿಯ ವೈವಾಹಿಕ ಜೀವನದ ಸರ್ವನಾಶವನ್ನು ಬಹಳ ಚೆನ್ನಾಗಿ ವರ್ಣಿಸಿದ್ದಾರೆ. ಈ ಪುಸ್ತಕವನ್ನು ನಾನು ನನ್ನ ಹೈಸ್ಕೂಲಿನ ದಿನಗಳಿಂದ ಹಿಡಿದು, ಇಲ್ಲಿಯವರೆಗೂ ಸುಮಾರು ೫೦ ಬಾರಿಯಾದರೂ ಓದಿರಬಹುದು. ಈ ಚಲನಚಿತ್ರವನ್ನು ಅನೇಕಬಾರಿ ನೋಡಿದ್ದೇನೆ. ಆದರೆ ಪ್ರತಿ ಬಾರಿಯೂ ಮೊದಲ ಬಾರಿ ನೋಡಿದ ಅನುಭವವೇ ನನ್ನದು. ಓದುಗರ, ನೋಡುಗರ ಹೃದಯವನ್ನು ಕಲಕುವ ಈ ಕಥೆಗೆ, ಸರಿಸಾಟಿಯಾದ ಮತ್ತೊಂದು ಪುಸ್ತಕ ಮತ್ತು ಚಲನಚಿತ್ರವನ್ನು ನಾನು ನೋಡಿಲ್ಲ. ಕನ್ನಡದ ಸರ್ವೋತ್ತಮ ಅಭಿನೇತ್ರಿಯೆನ್ನಬಹುದಾದ ಮಿನುಗುತಾರೆ ಕಲ್ಪನಾ, ಈ ಚಿತ್ರದಲ್ಲಿ ನಟಿಸುವ ವೇಳೆಗೆ ಒಬ್ಬ ಯಶಸ್ವಿ ಮತ್ತು ಪ್ರಬುದ್ಧ ನಟಿಯಾಗಿದ್ದರು. ಕಾವೇರಿಯ ಪಾತ್ರದಲ್ಲಿ ಮುಳುಗಿ ಮೇಲೆದ್ದಿರುವ ಆಕೆಯ ಅಭಿನಯವನ್ನು ಕೇವಲ ಬೆರಳೆಣಿಸುವಷ್ಟು ನಟಿಯರಿಗೆ ಮಾಡುವ ಸಾಮರ್ಥ್ಯವಿದೆ. ವೆನಿ, ವೆಡಿ, ವೆಝಿ ಎನ್ನುವ ಶಬ್ದಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿರುವ ನಿರ್ದೇಶಕ ಪುಟ್ಟಣ್ಣ ಕಣಗಾಲ್ ತಮ್ಮ ನಿರ್ದೇಶನದ ಸಾಮರ್ಥ್ಯವೆಲ್ಲವನ್ನೂ ಈ ಚಿತ್ರದಲ್ಲಿ ಧಾರೆಯೆರೆದಿದ್ದಾರೆ. ಈ ಚಿತ್ರದ ಕಡೆಯಲ್ಲಿ ಕಲ್ಪನಾ ಮತ್ತೊಮ್ಮೆ ಮಾನಸಿಕ ಉನ್ಮಾದದ ಪರಾಕಾಷ್ಠೆಯನ್ನು ತಲುಪಿದ ನಂತರ ಹೇಳುವ “ ಮೇಲ್ ಬಿದ್ದ ಸೂಳೆ, ಮೂರ್ ಕಾಸಿಗೂ ಬೇಡಾ“ ಎನ್ನುವ ಸಂಭಾಷಣೆಯನ್ನು ಕೇಳಿದಾಗ, ಚಿತ್ರಮಂದಿರದಲ್ಲಿದ್ದ ಯಾವ ಕಲ್ಲು ಹೃದಯಿಗೂ ಕಣ್ಣಲ್ಲಿ ನೀರು ಬಾರದಿರಲು ಸಾಧ್ಯವೇ ಇಲ್ಲ! ಈ ಚಿತ್ರವನ್ನು ಪ್ರತಿ ಬಾರಿ ನೋಡಿದಾಗಲೂ ನನ್ನ ಕಣ್ಣುಗಳು ಒದ್ದೆಯಾಗಿ, ಹೃದಯ ಭಾರವಾಗುತ್ತದೆ. ಚಿತ್ರದ ಸಂಗೀತ, ಹಿನ್ನೆಲೆ ಸಂಗೀತ ಎಲ್ಲವೂ ಅತ್ಯಂತ ಪರಿಪೂರ್ಣವಾಗಿವೆ. ಚಿತ್ರದ ನಾಯಕ ಗಂಗಾಧರ್ ತಮ್ಮ ಪಾತ್ರದ ಕಾರಣದಿಂದ, ಮುಂದೆ ಪ್ರೇಕ್ಷಕರ ಮತ್ತು ಚಿತ್ರರಂಗದ ಮಾರುಕಟ್ಟೆಯ ಅವಕೃಪೆಗೆ ಒಳಗಾದರೂ, ಆತನ ಅಭಿನಯ ಜೀವನದ ಅತ್ಯಂತ ಯಶಸ್ವಿ ಚಿತ್ರ ಇದೇ ಎಂದು ನನ್ನ ಅಭಿಪ್ರಾಯ. ನಟಿ ಕಲ್ಪನಾ ಜೊತೆ ತೆರೆಯ ಮೇಲೆ ಅವರಿಬ್ಬರ ನಡುವೆ ಇದ್ದ ಕೆಮಿಸ್ಟ್ರಿ ನಿಜಕ್ಕೂ ಅದ್ಭುತ!
ಈ ಚಿತ್ರದ ವಿಶ್ಲೇಷಣೆ ಬರೆದ ಸರೋಜಿನಿ ಪಡಸಲಗಿ ಅವರಿಗೆ ನನ್ನ ಅಭಿನಂದನೆಗಳು. ಶರಪಂಜರದ ಕಾವೇರಿ (ಕಲ್ಪನಾ) ನಮ್ಮ ಮನಗಳಿಂದ ಎಂದೂ ಮರೆಯಾಗುವ ಸಾಧ್ಯತೆಯೇ ಇಲ್ಲಾ!
ಉಮಾ ವೆಂಕಟೇಶ್
LikeLike
Thanks for these details. But I am wondering where do we get these movies? I live in Australia. If someone can guide me to contact any relevant authorities, it would be of great help.
Satya
LikeLike
Thanks for the comments. I would have written more about Kaveri, but I thought it will be lengthy.Anyway it is guide line for me About Mr Satya’s question he can contact Belgere Book stall,Gandhi Bazaar main Road B’lore Thanks once again
LikeLike
Thanks for comments.
LikeLike