ಸತಿಯ ಹಾಡು – ರಾಜಾರಾಮ್ ಕಾವಳೆ

ನಾನು ಒಂದು ದಿನ ನನ್ನ ಹೆಂಡತಿಗೆ ಉದಾಸೀನತೆಯಿಂದ, ‘ಏನು ಇವತ್ತೂನು ಕಾಲೀಫ್ಲವರಿನ ಪಲ್ಲ್ಯವೇ?’ ಎಂದು ಕೇಳಿದೆ.

ಅದಕ್ಕೆ ಅವಳು, ‘ಇನ್ನಾವ ತರಕಾರಿ ಈ ದೇಶದಲ್ಲಿ ಹೇರಳವಾಗಿ ದೊರಕುತ್ತದೆ? ಇರೋತರಕಾರಿಗಳನ್ನೇ ಉಪಯೋಗಿಸಿ ಅಡುಗೆಮಾಡುವುದು ನನ್ನ ಕರ್ಮ. ನನ್ನಹಾಗೆ ಇಷ್ಟು ವರ್ಷಗಳಷ್ಟುಸತತವಾಗಿ ಅಡುಗೆಮಾಡುತ್ತಾ ಇರುವವರು ನನ್ನ ಬಂಧುಬಳಗದವರಲ್ಲಿ ಯಾರೂ ಇಲ್ಲ’ ಎಂದಳು.

ತಕ್ಷಣ ನನಗೆ ರಾಷ್ಟ್ರಕವಿ ಮಾನ್ಯ ಶಿವರುದ್ರಪ್ಪನವರ ‘ಎದೆತುಂಬಿ ಹಾಡಿದೆನು’ ಎಂಬ ಪದ್ಯದಲ್ಲಿನ, ‘ಹಾಡುವುದು ಅನಿವಾರ್ಯ ಕರ್ಮ ಎನಗೆ’ ಮತ್ತು ‘ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?’ ಎಂಬ ಸಾಲುಗಳು ಜ್ಞಾಪಕಕ್ಕೆ ಬಂದವು.

ನನ್ನ ಸತಿಯು ಅಡುಗೆಮಾಡುವುದು ಮತ್ತು ಆ ಹಕ್ಕಿಯು ಹಾಡುವುದು, ಇವೆರಡೂ ಅವುಗಳಿಗೆ ಒಂದು ಕರ್ಮವಾಗಿದೆಯಲ್ಲವೇ? ಎಂದು ಅನಿಸಿತು. ಆ ಪದ್ಯದಲ್ಲಿ ‘ಹಾಡುವುದು’ ಎಂಬ ಪದದ ಬದಿಲು ‘ಅಡುಗೆಮಾಡುವುದು’ ಎಂಬ ಪದವನ್ನು ಅಳವಡಿಸಿ ಈ ಪದ್ಯವನ್ನು ಬರೆದಿದ್ದೇನೆ.

ಈ ಪದ್ಯವನ್ನು ಒಂದುವರೆ ವರ್ಷಗಳ ಹಿಂದೆಯೇ ಬರೆದಿದ್ದೆ. ಈಗ ಇದನ್ನು ಶಿವರುದ್ರಪ್ಪನವರ ಕುಮಾರರಾದ ಡಾ. ಶಿವಪ್ರಸಾದರವರಿಗೆ ಸ್ವಲ್ಪ ಅರೆಮನಸ್ಸಿನಿಂದ ತೋರಿಸಿದೆ. ಅದಕ್ಕೆ ಅವರು, ‘ಈ ಪದ್ಯವನ್ನು ಎರಡು ವರ್ಷಗಳ ಹಿಂದೆಯೇ ನನಗೆ ತೋರಿಸಿದ್ದರೆ, ಅದನ್ನು ನಮ್ಮ ತಂದೆಯವರಿಗೆ ತೋರಿಸುತ್ತಿದ್ದೆ. ಅದಕ್ಕೆ ಅವರು ನಿಮ್ಮ ಊಹೆಯ ಕಾರ್ಯಕ್ಕೆ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದರು’ ಎಂದು ಹೇಳಿದರು. ಆದುದರಿಂದ ಮಾನ್ಯ ಶಿವರುದ್ರಪ್ಪನವರ ಕ್ಷಮೆಬೇಡಿ ಈ ಪದ್ಯವನ್ನು ಬರೆದಿದ್ದೇನೆ.

ಸತಿಯ ಹಾಡು

(ಮಾನ್ಯ ಜಿ ಎಸ್ ಶಿವರುದ್ರಪ್ಪನವರ ಕ್ಷಮೆಬೇಡಿ)

ಎಡೆಬಿಡದೆ ಮಾಡಿದೆನು ಅಡುಗೆ ನಾನು
ಮನ ತೃಪ್ತಿ ಮಾಡಿದಿರಿ ಊಟ ನೀವು.
ಇಂದು ಮಾಡಿದ ಅಡುಗೆಯನು ಎಂದಿನಂತೆಯೆ ಕುಳಿತು
ಮಾಡಿದಿರಿ ಊಟವ ಎನಗದುವೆ ಬಹುಮಾನ,
ಅಡುಗೆಮಾಡುವಳಿಗೆ ಬೇಕೆ ಬಿರುದು ಸನ್ಮಾನ

ಎಲ್ಲ ಉಣಲೆಂದು ನಾನು ಅಡುಗೆಮಾಡುವುದಿಲ್ಲ
ಅಡುಗೆಮಾಡುವುದು ಅನಿವಾರ್ಯ ಕರ್ಮ ಎನಗೆ.
ಉಣುವರಿಹರೆಂದು ನಾಬಲ್ಲೆ, ಅದರಿಂದ
ಮಾಡುವೆನು ಅಡುಗೆಯನು ಎಂದಿನಂತೆ,
ಯಾರು ಉಣದಿದ್ದರೂ ಎನಗಿಲ್ಲ ಚಿಂತೆ.

7 thoughts on “ಸತಿಯ ಹಾಡು – ರಾಜಾರಾಮ್ ಕಾವಳೆ

  1. ಮಾನ್ಯ ಪ್ರಸಾದ್ ಅವರೇ, ನಾನು ಬಂದ ಹೊಸದರಲ್ಲಿ ನನಗೆ ಗ್ರಾಮಾಂತರ ಪ್ರದೇಶಗಳಲ್ಲಿರುವ ಆಸ್ಪತ್ರೆಗಳಲ್ಲೇ ಕೆಲಸಗಳು ದೊರಕುತ್ತಿದ್ದವು. ನಮಗೆ ’ಟೇಕ್-ಅವೇ’ ಜಾಯಿಂಟುಗಳು ಯಾವುವೂ ಹತ್ತಿರದಲ್ಲಿರಲಿಲ್ಲ ಅಲ್ಲದೆ ಇಂಡಿಯನ್ ಅಥವ ಬಾಂಗ್ಲಾ ದೇಶದ ರೆಸ್ಟೂರೆಂಟುಗಳು ಯಾವುವೂ ಹತ್ತಿರದಲ್ಲಿರಲಿಲ್ಲ. ಬಾಂಗ್ಲಾದೇಶವೇ ಇನ್ನೂ ಉದಯಿಸಿರಲಿಲ್ಲ. ಎಲ್ಲದಕ್ಕೂ ಲಂಡನ್ನಿಗೆ ತೆರಳಬೇಕಾಗಿತ್ತು. ಇದೀಗ ನಮ್ಮೂರಿನಲ್ಲೂ ನಿಮ್ಮೂರಿನಲ್ಲಿರುವಂಥಹ ಟೇಕ್ ಅವೇ ಜಾಯಿಂಟುಗಳು ಬದಿವೆ. ಜೀವನವು ಬಹಳ ಉತ್ತಮಗೊಂಡಿದೆ. — ರಾಜಾರಾಮ್ ಕಾವಳೆ

    Like

  2. Dear RRC – This is a brilliant trans-creation of the original poem and it has come out well
    ಕೆಲವು ಅನಿವಾಸಿ ಮಹಿಳೆಯರು ದಿನ ನಿತ್ಯ ಅಡುಗೆಮಾಡುವ ಕರ್ಮದಿಂದ ಮುಕ್ತಿಯನ್ನು ಪಡೆದಿದ್ದಾರೆ ಅದರಲ್ಲಿ ನನ್ನ ಹೆಂಡತಿಯೂ ಸೇರಿದ್ದಾಳೆ. ನಮ್ಮ ಮನೆಯ ಸುತ್ತ ಮುತ್ತ ಬಹಳಷ್ಟು Take away joints ಇರುವುದರಿಂದ ನಮ್ಮ ಬದುಕು ಸ್ವಲ್ಪ ಅನಾಯಾಸ ವೆನ್ನ ಬಹುದು. ಕೇವಲ ೨೦ ನಿಮಿಷಗಳ ಅವಧಿಯಲ್ಲಿ ಚಪಾತಿಯಿಂದ ಹಿಡಿದು ವೆಜ್ ನಾನ್ವೆಜ್ ಊಟವನ್ನು ಸರಬರಾಜು ಮಾಡುವ ಈ ಬಾಂಗ್ಲಾದೇಶಿ ಜನಗಳಿಗೆ ನಾವು ಬಹಳ ಧನ್ಯರು. ವಾರದಲ್ಲಿ ಎರಡು ದಿನ ಅಡಿಗೆಮಾಡಿ “ತಂಗಳು ತಿಜೋರಿ”ಯಲ್ಲಿ (Fridge) ಸುಭದ್ರವಾಗಿ ಸೇರಿಸಿ ಮತ್ತೆ ಬಿಸಿಮಾಡಿಕೊಟ್ಟರೂ ಧನ್ಯತೆಯಿಂದ ” ಕೈ ಬಿಡದವಳು ಕೈ ಹಿಡಿದವಳು ಮಾಡಿದ ಅಡಿಗೆಯೆ ಚೆನ್ನ” ಎಂದು ಸೇವಿಸುವ ಅನಿವಾಸಿ ಗಂಡಂದಿರು ಇದ್ದಾರೆ!

    Like

  3. ಪರದೇಶಕ್ಕೆ ವಲಸೆ ಬಂದಿರುವ ಭಾರತೀಯ ಸಂಸಾರಗಳ ವನಿತೆಯರಿಗೆ ಅಡುಗೆ ಮಾಡುವ ಕರ್ಮ ಜೀವನ ಪರ್ಯಂತವೆಂದು ನನ್ನ ಅನಿಸಿಕೆ. ನಿಮ್ಮ ಪತ್ನಿಯ ಪೀಳಿಗೆಯವರಿಗಂತೂ, ಅದು ಬಹಳ ನಿಷ್ಠೆಯ ಕಾರ್ಯವೂ ಹೌದು. ಈಗ ಭಾರತದಲ್ಲಿ ಅಡುಗೆ ಮನೆಗೆ ವನಿತೆಯರು ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿ ಇಲ್ಲವೇ ಇಲ್ಲ. ಹೊರಗಿನಿಂದ ಏನನ್ನು ಬೇಕಾದರೂ ಕೊಳ್ಳಬಹುದು. ಈ ವಿದೇಶದಲ್ಲಿ ಪತ್ನಿಯರು ಮಾಡುವ ಈ ಕಾರ್ಯವನ್ನು ಮೆಚ್ಚಿ ಕವಿತೆಗೆ ಅಳವಡಿಸಿರುವವರು ಬಹಳ ಅಪರೂಪ. ಬಹುಶಃ ನೀವೇ ಮೊದಲಿಗರೇನೋ ಅಂತ ಕಾಣಿಸುತ್ತೆ. ನಿಮ್ಮ ಮನದ ಭಾವನೆಯನ್ನು ವ್ಯಕ್ತಪಡಿಸಲು, ನೀವು ಆಯ್ದುಕೊಂಡ ಮೂಲ ಕವನ ನಿಜಕ್ಕೂ ಒಂದು ಅಪರೂಪದ ಕವನವೇ ಸರಿ. ಮಾನ್ಯ ಜಿ.ಎಸ್. ಶಿವರುದ್ರಪ್ಪನವರ ಈ ಅತ್ಯಂತ ಜನಪ್ರಿಯ ಕವನವನ್ನು ಅಳವಡಿಸಿಕೊಂಡು ಚೆನ್ನಾಗಿ ಬರೆದಿದ್ದೀರಿ. ಪದ್ಮಾರಿಗೆ ಬಹಳ ಸಂತೋಷವಾಗಿರಲೇ ಬೇಕು!
    ಉಮಾ

    Like

    • ನಾನು ಮತ್ತು ನನ್ನ ಪತ್ನಿಯು ಮದುವೆಯಾಗಿ ಈ ವರ್ಷದಲ್ಲಿ ಐವತ್ತು ವರ್ಷಗಳಾಗುತ್ತದೆ. ಹೊಸದಾಗಿ ಮದುವೆಯಾಗಿ ಹೊರದೇಶಕ್ಕೆ ಬಂದಾಗಿನಿಂದಲೂ ನನ್ನ ಪತ್ನಿಯು ಸತತವಾಗಿ ಅಡುಗೆಮಾಡುತ್ತಿರುವಳು. ಅಂದಿನಿಂದಲೂ ನನಗೆ ಒಂದೇ ಕೊರಗು. ಅದೇನೆಂದರೆ ನನ್ನ ಪತ್ನಿಯ ಕರ್ತವ್ಯವನ್ನು (ಅಡುಗೆಮಾಡುವ ಕರ್ಮವನ್ನು) ಹೇಗೆ ಕಡಿಮೆಮಾಡುವುದು ಅಥವಾ ಅದರಿಂದ ಅವಳನ್ನು ಸಂಪೂರ್ಣವಾಗಿ ಬಿಡುಗಡೆಮಾಡುವುದಕ್ಕೆ ಏನಾದರೂ ಉಪಾಯಗಳಿವೆಯೇ ಎಂಬ ಯೋಚನೆಯು ಸದಾ ನನ್ನ ಮನಸ್ಸಿನಲ್ಲಿ ಕಾಡುತ್ತಿದೆ. ಸಾಮಾನ್ಯವಾಗಿ ಮನೆಯ ಗಂಡಂದಿರಿಗೆ ಅಡುಗೆಮಾಡುವ ಚತುರತೆ ಅಷ್ಟಕ್ಕಷ್ಟೆ! ಆದರೂ ನನಗೆ ತಿಳಿದಿರುವ ಈ ದೇಶದಲ್ಲಿರುವ ಸ್ನೇಹಿತರಲ್ಲಿ ಹಲವು ಗಂಡಂದಿರು, ಸ್ವಾಭಾವಿಕವಾಗಿ ಅಥವಾ (ಬೇರೆಮಾರ್ಗವಿಲ್ಲದೆ) ಕಲಿತ ವಿದ್ಯೆಯಿಂದಲೋ ತಮ್ಮ ಮನೆಗಳಲ್ಲಿ, ಸಂಪೂರ್ಣವಾಗಿ ಅಥವ ಭಾಗಶಃ ಅಡುಗೆಮಾಡಿ ಅವರುಗಳ ಪತ್ನಿಯರಿಗೆ ಸ್ವಲ್ಪ ಬಿಡುವು ಮಾಡಿಕೊಡುತ್ತಿದ್ದಾರೆ. ಅವರಿಗೆಲ್ಲರಿಗೂ ನನ್ನ ಶ್ಲಾಘನೆಗಳು. ನಾನೂ ಕೂಡ ಸ್ವಲ್ಪ ಸ್ವಾಭಾವಿಕವಾಗಿ ಮತ್ತು ಸ್ವಲ್ಪ ಕಲಿತ ವಿದ್ಯೆಯಿಂದ ನನ್ನ ಪತ್ನಿಗೆ ಬಿಡುವು ಮಾಡಿಕೊಡುತ್ತಿದ್ದೇನೆ. ಮನೆಗೆಲಸ, ಪಾತ್ರೆಗಳನ್ನು ತೊಳೆಯುವುದು, ಇದೀಗ ಡಿಶ್‍ವಾಶರಿಗೆ ಪಾತ್ರೆಗಳನ್ನು ಹಾಕುವುದು ಮತ್ತು ತೆಗೆಯುವುದಂತಹ ನಿತ್ಯಗಟ್ಟಳೆಯ ಬೇಸರದ ಕೆಲಸಗಳನ್ನು ಮಾಡಿ, ಅಲ್ಲದೆ ಸ್ವಲ್ಪ ಅಡುಗೆ ಕೆಲಸಗಳಿಗೆ ಸಹಾಯಮಾಡಿ ಪತ್ನಿಗೆ ಅವಳ ಕೆಲಸವನ್ನು ಕಡಿಮೆಮಾಡುತ್ತಿದ್ದೇನೆ. ನನ್ನ ಪದ್ಯದಲ್ಲಿ ಅವಿತ ಒಂದು ಸಂದೇಶವಿದೆ. ಈ ಹೊರದೇಶದಲ್ಲಿ ವಾಸಿಸುವ ನಮ್ಮಂತಹ ವಿದೇಶಿಗಳಿಗೆ, ಗಂಡಹೆಂಡಿರ ಪರಸ್ಪರ ಸಹಾಯತೆ ಅತ್ಯಗತ್ಯ. ನಮ್ಮ ಮಕ್ಕಳು ಎಂದಾದರೂ ತಮ್ಮ ಕಾರ್ಯ‍-ಉದ್ಯೋಗಗಳ ಸಲುವಾಗಿ ಬೇರೆ ಹೋಗುವರು (ನಾವುಗಳು ಬಂದಹಾಗೆ) ಆದುದರಿಂದ ಗಂಡಹೆಂಡಿರ ಪರಸ್ಪರ ಸಹಕಾರ ಅತ್ಯಗತ್ಯ.

      Like

  4. ಹೇರಳವಾಗಿ ತರಾವರಿ ತರಕಾರಿ ಸಿಗುವ ಭಾರತದಲ್ಲೇ ಈಗ ಅತಿಥಿಗಳಿಗೆ ಹೋಟೆಲಿನಿಂದ ಅಡುಗೆ ತರಿಸಿಬಿಡುವ ಅನುಕರಣೆ ಶುರುವಾಗಿದೆ.
    ಮನೆಮಂದಿಗೆ ದಿನನಿತ್ಯ ಸುಲಭ ಸಿದ್ದ ಅಡುಗೆಗಳು ಸಿಗಹತ್ತಿವೆ. ಅನುಕೂಲಸ್ತರ ಮನೆಯಲ್ಲಿ ಅಡುಗೆಯವರು ಯಾವತ್ತಿನಿಂದಲೂ ಇದ್ದಾರೆ. ಈ ಯಾವುದೂ ನಮ್ಮ ದೇಶದ ಅಡುಗೆಗಳಿಗೆ ಸಾಧ್ಯವಾಗದ ಕಾರಣ, ಅದರಲ್ಲೂ ಸಸ್ಯಹಾರಿಗಳು ಮನೆಯಲ್ಲಿಯೇ ಅಡುಗೆ ಮಾಡಬೇಕಾದ ಅನಿವಾರ್ಯ (ಕರ್ಮ) ಇರುವ ವಿದೇಶಿವಾಸಿಗಳಿಗೆ ಕಾವಳೆಯವರ ಪದ್ಯ, ಅವರ ಸತಿಯ ದೈನಂದಿನ ಸಮಸ್ಯೆ ಪ್ರತಿದಿನವೂ ಅನ್ವಯ!! ಅದನ್ನು ವ್ಯಕ್ತಪಡಿಸಲು ಕಾವಳೆಯವರು ಅಳವಡಿಸಿಕೊಂಡ ಕವನವೂ ಆಸಕ್ತಿದಾಯಕ.
    ಓದಿದಕೂಡಲೇ ತಲೆದೂಗಿಸಿ, ಮೆಚ್ಚುಗೆಯಿಂದ ನಗೆತರಿಸುವ ಬರಹ.

    Like

  5. ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’ ಎನ್ನುತ್ತಾ ಅನಿವಾಸಿ ಸತಿಯರು ಸಾಕಷ್ಟು ಕಿಚನ್ ನಲ್ಲಿ ದುಡಿಯುವದು ಸತ್ಯವೇ. ಗಂಡಸರು, ಮಕ್ಕಳು ತಿಂದು ಹೋಗಲಿ ಬಿಡಲಿ ತಮ್ಮ ಕರ್ತವ್ಯವೆಂದು ಅಡುಗೆ ಮನೆಯನ್ನು ಸಂಭಾಳಿಸುವದನ್ನು ನೋಡಿದವರೆಲ್ಲ ಈ ಕವನಕ್ಕೆ👍 ಎನ್ನುವದರಲ್ಲಿ ಸಂದೇಹವಿಲ್ಲ. ಬಿರುದಿಲ್ಲದಿದ್ದರೂ ಸ್ವಲ್ಪವಾದರೂ ಮನ್ನಣೆ ಕೊಟ್ಟ ರಾಜಾರಾಮರಿಗೆ ಋಣಿ!

    Like

  6. ಅಣಕವಾಡು ತುಂಬಾ ಚೆನ್ನಾಗಿದೆ. ಇನ್ನೂ ಬರೆಯುತ್ತಿರಿ.

    Like

Leave a comment

This site uses Akismet to reduce spam. Learn how your comment data is processed.