ಬೆರಗು- ಹೊಸ ಅತಿಥಿ ‘ಶ್ರೀ ನಂಜುಂಡ ಭಟ್’ ಅವರ ಕವನ

beragu

ಬೆರಗು

ಮನ ಕುಣಿವುದು ಮುಂಜಾನೆಯ ಮುಸುಗಿಗೆ

ಕಣ್ ತಣಿವುದು ಪ್ರತಿ ಸಂಜೆಯ ಕೆಂಪಿಗೆ

ಬೆರಗಾಗುವುದೀ ಸೃಷ್ಟಿಯ ಬೆಡಗಿಗೆ

ಛಂದಃಪ್ರಾಸವಿರಡಿಗಡಿಗೆ

 

ಸುಳಿದಾಡುವ ತಂಗಾಳಿಯ ಸ್ಪರ್ಶಕೆ

ಹರಿಯುವ ಹೊನಲಿನ ಬೆಳ್ನೊರೆ ನಗುವಿಗೆ

ಗುಡುಗಿಗೆ ಸಿಡಿಲಿಗೆ ಕಡಲಿನ ಮೊರೆತಕೆ

ವನಖಗಜಲಚರ ನಿಃಸ್ವನಕೆ

 

 

ಕುಸುಮಿತ ತರುಗಳ ಬಹುಫಲಭಾರಕೆ

ಗಿರಿಕಟಿಯಟವಿಯ ಮೈಕೈಮಾಟಕೆ

ಸರಸರ ಚಿಮ್ಮುವ ಚಿಗುರಗಳೋಟಕೆ

ಚಂದನಚರ್ಚಿತ ಘಮಘಮಕೆ

 

ಅನ್ನವ ಬೆಳೆಯುವ ಬುವಿ ತಾಯ್ತನಕೆ

ಚಿನ್ನವ ನೀಡುವ ಗಣಿ ನಿಸ್ಸ್ವಾರ್ಥಕೆ

ಕಾಣದ ಕೈಗಳ ಬಳೆಗಳ ನಾದಕೆ

ಶ್ರುತಿಲಯವಿರೆ ಪ್ರತಿ ಕಣಕಣಕೆ

 

 

 

 

ಡಿ.ನಂಜುಂಡ

4 thoughts on “ಬೆರಗು- ಹೊಸ ಅತಿಥಿ ‘ಶ್ರೀ ನಂಜುಂಡ ಭಟ್’ ಅವರ ಕವನ

  1. ಸುದರ್ಶನ್ ಅವರು ನಂಜುಂಡ ಭಟ್ ಅವರ ಪರಿಚಯದಲ್ಲಿ ಬರೆದಿರುವಂತೆ, ಅವರ ಪದ ಭಂಡಾರ ಬಹಳ ಶ್ರೀಮಂತವಾಗಿದೆ. ಪ್ರಕೃತಿಯ ಸೊಬಗು ಮತ್ತು ನಿಸ್ವಾರ್ಥತೆಯನ್ನು ತಮ್ಮ ಸುಂದರ ಲಯದಲ್ಲಿ ಬರೆದಿರುವ ವೈಖರಿ ಬೆರಗುಗೊಳಿಸುವಂತಿದೆ. ಪ್ರಕೃತಿಯ ಮೋಹಕ ಚಲುವನ್ನು ತಮ್ಮದೇ ಶೈಲಿಯಲ್ಲಿ ನಮ್ಮ ಮುಂದಿಟ್ಟಿದ್ದಾರೆ.
    ಉಮಾ ವೆಂಕಟೇಶ್

    Like

  2. ಪರಿಚಯಿಸಿದ ಸುದರ್ಶನ್ ರಾವ್ ರವರಿಗೂ, ಪತ್ರಿಕೆಗೂ ಮತ್ತು ಸಂಪಾದಕರಿಗೂ ಕೃತಜ್ಞತೆಗಳು

    Like

  3. ಬೆರಗು! ನಿಜ. ಇಂದು ’ಮುಂಜಾನೆಯ ಮುಸುಗಿಗೆ ಮನ ಕುಣಿದಂತೆಯೇ’ ನಂಜುಂಡರ ಕವಿತೆ ಬೆರಗು, ಮುದ ಎಲ್ಲ ಕೊಟ್ಟಿತು. ಇದರಲ್ಲಿ ತುಂಬಿದ ’’ಛಂದಃಪ್ರಾಸವಿರಡಿಗಡಿಗೆ” ಇಂಥ ಕವನಗಳು ಹೊಸ ಕವಿಗಳಿಂದ ಬರುವದಪರೂಪ, ಇತ್ತಿತ್ತಲಾಗಿ! ಆ ಛಂದ.ಪ್ರಾಸ, ಲಯವಷ್ಟೇ ಅಲ್ಲ, ಅವರ ಚಂದನ ಸೂಸುವ ಸಾಲು ಸಾಲುಗಳಲ್ಲಿಯ ಪ್ರತಿಮೆಗಳಿಗೆ ಮನಸೋತೆ. ಅತಿಥಿಗಳಿಗೆ ಸುಸ್ವಾಗತ. ಮಹಾ ಸ್ವಾಗತ! ಅನ್ವರ್ಥಕ ಚಿತ್ರವಿನ್ಯಾಸವೊದಗಿಸಿದ ಸಂಪಾದಕರಿಗೂ ಕೃತಜ್ಞತೆಗಳು.

    Like

Leave a Reply to drdaksha Cancel reply

Your email address will not be published. Required fields are marked *