ಹೀಗೂ ಒಬ್ಬ ರಾಜಕುಮಾರ- ಡಾ.ಜಿ.ಎಸ್.ಶಿವಪ್ರಸಾದ್ ಅವರ ರಚನೆ

ಮನಸೆಂಬ ಮಾಯಾವಿಗೆ ಕೊಟ್ಟ ಮಾತು ತಪ್ಪಲಾಗದ ಅನಿವಾರ್ಯತೆಯಿಂದಲೂ, ಬದುಕುವ ಛಲದಿಂದಲೂ,ಕಛೇರಿಗೆ ಕಾಲನ್ನೋ ಕಾರನ್ನೋ ಎಳೆದುಕೊಂಡು ಹೋಗಿ, ದಿನವೆಲ್ಲಾ ದುಡಿದು ಚಿಂತೆ ಆತಂಕ,ಆಯಾಸಗಳು ಮೇಳೈಸಿರುವ ಬೇಸರವೆಂಬ ಬೇತಾಳವನ್ನು ಬೆನ್ನಿಗೇರಿಸಿಕೊಂಡು ಮರಳಿ ಮನೆಗೆ ಬಂದಿರುವ ಆಧುನಿಕ ಯುಗದ ವಿಕ್ರಮಾದಿತ್ಯರಾದ ನಿಮ್ಮೆಲ್ಲರಿಗೆ ನಿಮ್ಮ ಬೇಸರ ಕಳೆಯುವಂಥ ಕವಿತೆ ಹೇಳುತ್ತೇನೆ ಕೇಳಿ.
ಜಿ.ಎಸ್.ಶಿವಪ್ರಸಾದರು ಬರೆದ ಈ ಕವಿತೆಯನ್ನು ಓದುತ್ತಾ ಸಾಗಿದರೆ , ಭಾಷೆಯ ಸೌಂದರ್ಯದಿಂದಲೂ, ವಿಷಯ ಲಾಲಿತ್ಯದಿಂದಲೂ ಇದ್ದೂ ಇರದಂತೆ ಸುಪ್ತವಾಗಿರುವ ವಿಡಂಬನೆಯಿಂದಲೂ ಖಂಡಿತವಾಗಿಯೂ ನಿಮ್ಮ ಆಯಾಸ ಪರಿಹಾರವಾಗುತ್ತದೆ. ಪದ್ಯವನ್ನು ಓದಿ ಮುಗಿಸಿದಾಗ ಅದು ಯಾರನ್ನು ಕುರಿತು ಎಂಬ ರಹಸ್ಯ ನಿಮಗೆ ತಾನೇ ತಾನಾಗಿ ಹೊಳೆದಿರುತ್ತದೆ. ಇದನ್ನು ಓದಿ, ಉತ್ತರದ ಜೊತೆಗೆ ವಿಮರ್ಶೆಯನ್ನು ನಮ್ಮ ಜಾಲಜಗುಲಿಯಲ್ಲಿ ಬಿತ್ತರಿಸದೇ ಇದ್ದ ಪಕ್ಷದಲ್ಲಿ, ಜಡತ್ವವನ್ನು ತೊರೆದು ಬರೆಯದೇ ಹೋದಲ್ಲಿ ನಿಮ್ಮಲ್ಲಿ ಅಡಗಿ ಕುಳಿತಿರುವ  ತಾಮಸ (ಆಲಸಿ ಪ್ರವೃತ್ತಿ) ಗುಣ ನುಚ್ಚುನೂರಾಗಿ ಸಿಡಿದು ಹೋದೀತು ……………. ಎಂದ ಅನಿವಾಸಿ ಕವಿತೆಯನ್ನು ತಮಗೆಲ್ಲರಿಗೂ ಪ್ರಸ್ತುತಪಡಿಸತೊಡಗಿತು……….

ಹೀಗೂ ಒಬ್ಬ ರಾಜಕುಮಾರ 

ಚಾಣಾಕ್ಷ, ಸುಂದರಾಂಗ, ಸದ್ಗುಣ ಸಂಪನ್ನ

ಪರಿಸರ ಪ್ರೇಮಿ

ಬಹು ಜನಪ್ರಿಯ ರಾಜಕುಮಾರ

 

ವಿಜೃಂಭಣೆಯ ದಶಕದ ಮದುವೆ

ಬೆಡಗಿನ ಹೆಂಡತಿಯ ಪ್ರೀತಿಸಲಾರದೆ

ಓರ್ವಪ್ರೇಮಿಗೆ ಕಾದು

ಪ್ರೇಮಲೋಕದಲ್ಲಿ ಕೈಗೊಂಡ ವನವಾಸ!

 

ಸ್ವರ್ಗಸ್ಥ ಹೆಂಡತಿಯಾದಳು

ಸಾಮಾನ್ಯರ ಕನಸಿನ ರಾಣಿ

ಮೊಮ್ಮಗ ಹುಟ್ಟಿದ್ದರೂ ತಾನು

ಇನ್ನು ರಾಜಕುಮಾರ!

 

ದೊರೆಯ ಪಟ್ಟಕ್ಕೆ

ಯಾವ ಯುದ್ಧವನ್ನು ಹೊಡಬೇಕಿಲ್ಲ

ಪಿತೂರಿ ಕೊಲೆಗಳ ಅಗತ್ಯವಿಲ್ಲ

ಯಾವ ನಾಡನ್ನು ಜಯಿಸಬೇಕಿಲ್ಲ

 

ಜಪಿಸಬೇಕು ಸಹನೆ ನಿರೀಕ್ಷೆಯ ಮಂತ್ರಗಳು

ಎಂಥ ಅನಿವಾರ್ಯ ರಾಜ ಸೂತ್ರಗಳು

ಗೆಲುವಿನಲ್ಲೂ ಇದೆಂತಹ ಸೋಲು

ದೊರೆಯಾಗುವ ಕನಸು ಮಾತ್ರ ತನ್ನ ಪಾಲು!

Dr.G.S.Shivaprasad.

10 thoughts on “ಹೀಗೂ ಒಬ್ಬ ರಾಜಕುಮಾರ- ಡಾ.ಜಿ.ಎಸ್.ಶಿವಪ್ರಸಾದ್ ಅವರ ರಚನೆ

  1. ತಾಂತ್ರಿಕ ಅಡಚಣೆ ನಿವಾರಿಸಿದ ಸುದರ್ಶನ್ ಅವರಿಗೆ ಧನ್ಯವಾದಗಳು. ಜಾಲಜಗುಲಿಗೆ ತನ್ನದೆ ಆದ ಮನ್ನಸಿದೆ ಎಂಬುದು ಸ್ಪಷ್ಟವಾಗಿದೆ!
    ನೀವು ಜೋಡಿಸಿದ ಪಂಕ್ತಿಗಳು ಮತ್ತೆ ಬೆರತಿವೆ. ಪರವಾಗಿಲ್ಲ. ಹಾಗೆ ಬಿಡುವುದು ಉತ್ತಮ.
    ಪ್ರಸಾದ್

    Like

  2. ಶಿವಪ್ರಸಾದರಿಗೆ ವಂದನೆಗಳು. ನೆನ್ನೆ ಜಗುಲಿಗೆ ಏರಿಸಿದಾಗ ಸರಿಯಾಗಿಯೇ ಇದ್ದ ಕವನದ ಸಾಲುಗಳು ಇಂದು ಒಂದರ ಪಕ್ಕ ಒಂದು ಕುಳಿತದ್ದೇಕೆ ಎಂಬುದು ನನಗೆ ತಿಳಿಯದ ವಿಷಯ. ನಾನು ಮೊದಲು ಇದನು ನೋಡಿದರು ಸರಿಪಡಿಸಲು ಪರಿಕರಗಳು ಇರದ ಕಾರಣ ತಡವಾಯ್ತು. ಮತ್ತೆ ಈಗ ಸರಿಯಾಗಿ ಜೋಡಿಸಿ ಏರಿಸಿದ್ದೇನೆ.
    ಅನುದ್ದಿಶ್ಯ ತಪ್ಪಿಗೆ ಕ್ಷಮೆ ಇರಲಿ.
    ಸುದರ್ಶನ

    Like

  3. ನಿಮ್ಮೆಲ್ಲರ ಮೆಚ್ಚುಗೆಗೆ ಧನ್ಯವಾದಗಳು
    ನನ್ನ ಕವನಗಳ ಸಾಲುಗಳು ಹಾಗು ಪಂಕ್ತಿಗಳನ್ನು ನಾನು ಕಳುಹಿಸಿಕೊಟ್ಟಿದ್ದ ಮೂಲ ಸ್ವರೂಪದಲ್ಲಿ ಪ್ರಕಟಿಸಬೇಕೆಂದು ಕೊರಿದ್ದೆ.
    ಸಂಪಾದಕರು ಕವನವನ್ನು ಜಾಲಜಗುಲಿಗೆ ಏರಿಸುವಲ್ಲಿ ತಾಂತ್ರಿಕ ಅಡಚಣೆಗಳಿದ್ದಲ್ಲಿ ಅದರ ಬಗ್ಗೆ ಕೂಡಲೆ ಗಮನಹರಿಸಬೇಕೆಂದು ಒತ್ತಾಯಿಸುತ್ತೇನೆ.

    Like

  4. ಶಿವಪ್ರಸಾದರೆ, ಸದಾ ನವ ಯುವಕನಾಗಿಯೇ ರಾಜಕುಮಾರನಾಗಿರುವ ಅದೃಷ್ಟ ಎಷ್ಟು ಮಂದಿಗಿದೆ. ರಾಣಿ ಇನ್ನೂ ತನ್ನ ದೇಹದಾರ್ಢ್ಯವನ್ನು ಚೆನ್ನಾಗಿ ಉಳಿಸಿಕೊಂಡೇ ಬಂದಿರುವ ಈ ಸಾಮ್ರಾಜ್ಯದಲ್ಲಿ, ಆತ ಪರಿಸರವಾದಿಯಾಗಿ ಮುಂದುವರೆಯುವ ಸಾಧ್ಯತೆಗಳೇ ಹೆಚ್ಚಾಗಿರುವಂತೆ ಕಾಣುತ್ತಿದೆ. ರಾಜಕುಮಾರನ ಸರದಿ ಬರುವ ಹೊತ್ತಿಗೆ, ಜನತೆ ದಂಗೆ ಎದ್ದು, ನೆರೆಯ ದೇಶದಂತೆ, ರಾಜಮನೆತನವನ್ನು ತಿರಸ್ಕರಿಸುವ ಸಾಧ್ಯತೆಗಳೂ ಇವೆ. ಹಾಗಾಗಿ ರಾಷ್ಟ್ರಗೀತೆಯನ್ನು “Long live the king ” ಎನ್ನುವ ಪದಗಳಿಗೆ ಬದಲಾಯಿಸುವ ಸನ್ನಿವೇಶ ಒದಗಿ ಬರುತ್ತದೆಯೋ ಇಲ್ಲವೋ ತಿಳಿಯದು. ಒಳ್ಳೆಯ ವಿಡಂಬನೆ. ಹೊಸದಾದ ವಿಷಯವೊಂದನ್ನು ಸಂಭೋಧಿಸಿ ಕವನವನ್ನು ರಚಿಸಿದ್ದೀರಿ. ಸುಂದರವಾಗಿದೆ. ಈ ಕಥೆಯ ಅಂತ್ಯವನ್ನು ಪ್ರಜೆಗಳು ಕಾಲವೆಂಬ ರಜತ ಪರದೆಯ ಮೇಲೆ ನೋಡಿಯೇ ಆನಂದಿಸಬೇಕು. ಸ್ವರ್ಗಸ್ಥ ಹೆಂಡತಿಯ ಭೇತಾಳವನ್ನು ಬೆನ್ನಲ್ಲೇ ಏರಿಸಿಕೊಂಡು ಈ ರಾಜಕುಮಾರ ನಡೆದಾಡುತ್ತಿದ್ದಾನೆ ಎನ್ನಿಸುತ್ತದೆ ಹಲವೊಮ್ಮೆ!
    ಉಮಾ ವೆಂಕಟೇಶ್

    Like

  5. ತುಂಬಾ ಚಂದವಾದ ಪದ್ಯ. ಯಾಕೋ ನಮ್ಮ ರಾಷ್ಟ್ರಕವಿ ತೊಡಗಿಸಿಕೊಂಡ ಹಾಗೆ ಅವರ ಮಕ್ಕಳಾದ ಇವರು ಅಷ್ಟು ಹೆಚ್ಚಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲಿಲ್ಲ.

    Like

  6. “ಮೊಮ್ಮಗ ಹುಟ್ತಿದರೂ ರಾಜಕುಮಾರ!” ಬಲು ಚಂದದ ಆದರೆ ವಿಡಂಬನೆಯ ಮಾತು. ಹಾನೋವರ್ (House of Hanovar) ಗೆ ಯಾರು ಕೊಟ್ಟ ಶಾಪವೋ? ಇದರ ಪರಿಹಾರ ಹೇಗೆ ಎಂದು ಕಾತುರದಿಂದ ಕಾಯುವೆ. ಪ್ರಸಾದರ ಕವಿತೆಯನ್ನು ಮೆಚ್ಚಿದೆ.
    ಶ್ರೀವತ್ಸ

    Like

  7. ಶಿವಪ್ರಸಾದ್,

    ಅದ್ಭುತವಾಗಿದೆ ನಿಮ್ಮ ವಿಡಂಬನಾತ್ಮಕ ಕವಿತೆ. ಸೂಪರ್ ಲೈಕ್!!

    ಕೇಶವ

    Like

  8. ಜನೆತೆಯ ಆದರ್ಶಿಯಾದ ರಾಜ, ತನ್ನ ರಾಜ್ಯವನ್ನು ಜನತೆಗೆ ಒಪ್ಪಿಸಿ ತನ್ನ ರಾಜನಿಲ್ಲದ ರಾಜ್ಯವನ್ನು ತನ್ನ ರಾಜಕುಮಾರನಿಗೆ ಅನುವಂಶಿಕವಾಗಿ ಒಪ್ಪಿಸಿದಾಗ, ಆ ಕುಮಾರನು ’ರಾಜ್ಯವಿಲ್ಲದ ರಾಜ’ ನಾಗಿ ಗೆಲುವಿನಲ್ಲೂ ಸೋತರೂ, ಜನತೆಗಳ ಹೃದಯದಲ್ಲಿ ರಾಜನಾಗಿ ಜಯಿಸಿದ್ದ ಮೈಸೂರು ರಾಜಕುಮಾರನು ಮಡಿದಾಗ ಆ ಊರ ಮಳಿಗೆಗಳೂ, ಕಛೇರಿಗಳೂ ಮುಚ್ಚಿ ಜನತೆಯು ತಮ್ಮ ವ್ಯವಹಾರಗಳನ್ನು ನಿಲ್ಲಿಸಿ, ದಾರಿಯ ಇಬ್ಬದಿಯಲ್ಲಿ ಮೌನದಿಂದ ಸಂತಾಪವನ್ನು ಸೂಚಿಸಿದ ಆ ರಾಜಕುಮಾರನಿಗೆ ಜನತೆಯ ಹೃದಯದ ರಾಜ್ಯವನ್ನು ಜಯಿಸಿದಾ ಆತನಿಗೆ ಯಾವ ಯುದ್ಧಗಳನ್ನು ಹೂಡಬೇಕಿರಲಿಲ್ಲ, ಯಾವನಾಡನ್ನು ಜಯಿಸಲಿಲ್ಲ. ಇದು ಈ ರಾಜನ ಸೋಲಿನಲ್ಲೂ ಗೆಲುವಲ್ಲವೇ?

    –ರಾಜಾರಾಮ ಕಾವಳೆ.

    Like

  9. ಸಧ್ಯ ನನ್ನ ತಲೆ ಒಡೆದು ಚೋರಾಗೋದು ತಪ್ಪಿತು! 🙂

    Like

  10. sooper! ಬಹಳ ಚೆನ್ನಾಗಿದೆ 🙂 ಈ ರಾಜಕುಮಾರನ ಕುಮಾರ, ಮತ್ತು ಅವನ ಕುಮಾರ ಅದಿನ್ನೆಷ್ಟು ಕಾಯಬೇಕೋ ಆ ದೇವರಿಗೇ ಗೊತ್ತು! ಒಟ್ಟಿನಲ್ಲಿ, ತಾಳಿದವನು ಬಾಳಿಯಾನು 🙂

    Like

Leave a Reply to prasad092014 Cancel reply

Your email address will not be published. Required fields are marked *