(1) ಜಲಧಾರೆ
ಧಮಧಮನೆ ದುಮುಕುತಲಿದೆ
ಹಾಲ್ಧಾರೆಯಿದು ಬಂಡೆಗಳನ್ನೊಡೆದು,
ಪ್ರಪಾತದಲ್ಲಡಗಿರುವ ಗುಪ್ತ
ಆತ್ಮಲಿಂಗಕೆ ಕ್ಷೀರಾಭಿಷೇಕವಿದು.
ಈ ಮನವ ಮೇಲೆತ್ತುತಿದೆ,
ಅನ್ಯ ಗದ್ದಲವ ನುಂಗಿ ಆ ಧ್ವನಿಯು
ದೀರ್ಘ ಧ್ಯಾನ ಧಾರೆಯಂತಿರೆ.
ತೊರೆದು ಚಂಚಲತೆಯ ಅದರಂತೆ
ಭಾವಾತಿಶಯದಲಿ ಮನವು,
ಅಂತರಾಳದಿ ಭಾವಾತೀತನೆಡೆಗೆ
ಅವತರಿಸಬಾರದೇಕಿಂದು?
ದಿಶೆ ತಪ್ಪಿ ದೂರವಾಗಿಯೂ
ಮತ್ತೆ ಕೂಡುವಂತೆ ಝರಿಯು,
ಐಕ್ಯವಾಗುತಲಿರಲಿ ಭಾವಗಳು
ಭಕ್ತಿ ಧಾರೆಯಲಿ, ಅತ್ತಿತ್ತ ಅಲೆದೂ.
(2) ತಿರುವು
ನಿನ್ನ ಮಸ್ತಕದಲ್ಲಿಹುದು
ಹೊಸ ಕುಡಿಗಳ, ಹಸಿರೆಲೆಗಳ
ಬಿಂಕ;
ನಿನ್ನ ಪಾದದಡಿಯಲಿಹುದು
ಸೊರಗೊಣಗಿದ ಮೃತ ಎಲೆಗಳ
ಸಾಂದ್ರ.
ನಿಂತಿರುವೆ ನೀ ಸೂರ್ಯೋದಯದ
ಶುಭಘಳಿಗೆಯಿಂದ ಸೂರ್ಯಾಸ್ತವನು

ಕಾದು;
ಮತ್ತೆ ಸೂರ್ಯಾಗಮನವ ಕಾಯ್ವೆ ,
ಮತ್ತೊಂದು ಮಬ್ಬು ರಾತ್ರಿಯನು
ಹಾದು.
ಬಸಂತ ಋತು ಬರಲು
ಮೈದುಂಬಿ ಮನದಣಿಯೆ ಹಿಗ್ಗಿ
ನಲಿವೆ;
ಮುನ್ನಡೆದು ಹೇಮಂತದಲಿ
ಸಿರಿತನವ ಕಳೆದು ಬರಿಗೈಲೂ
ನಿಲ್ಲುವೆ.
ಹಸಿರೆಲೆಗಳಿಗೂ ತರಗೆಲೆಗಳಿಗೂ
ನೆಲೆಯಾಗಿ ತಂಗಿ, ಎಸಗುತಿದೆ
ಸೃಷ್ಟಿ;
ಹಗಲನಲ್ಲದೆ ಇರುಳನೂ
ಹೊತ್ತು, ಸೂಸುತಿದೆ ಸುಖ ದುಃಖಗಳ
ವೃಷ್ಟಿ.
-ಡಾ ಸವಿತಾ ಮಧುಸೂದನ್
ಸವಿತಾ ಅವರಿಗೆ ಈ ವೇದಿಕೆಗೆ ಸ್ವಾಗತ.
ಅವರು ಬರುತ್ತಿರುವಾಗ ಅವರೊಂದಿಗೆ ಶುಭ್ರ, ತಾಜಾ , ಮನಸ್ಸಿಗೆ ಮುದ ನೀಡುವ ಕವಿತೆಗಳನ್ನು ತಂದಿದ್ದಾರೆ. ಒಡಗೂಡಿ ಬಂದಿರುವ ಚಿತ್ರಗಳಂತೆ ಅವರ ಕವನಗಳು ನಮ್ಮ ಮನಸ್ಸನ್ನು ಆಹ್ಲಾದಕರ ಮಜಲಿಗೆ ಎತ್ತಿ ಒಯ್ಯುತ್ತವೆ. ಚೆನ್ನಾದ ಚಿತ್ರಣ.
LikeLike
ಡಾ:ಸವಿತಾ ಮಧುಸೂದನ್ ರವರು ತಮ್ಮ ಕವಿತೆಗಳ ಮೂಲಕ ಪ್ರಕೃತಿಯ ಸೊಬಗನ್ನು ಬಹಳ ಸೊಗಸಾಗಿ ಉಣಬಡಿಸಿದ್ದಾರೆ.ಕುವೆಂಪು ಪದ್ಯಗಳನ್ನು ಓದಿದ ಹಾಗಾಯಿತು. ಮತ್ತಷ್ಟು ನೀಡಲಿ ಎಂದು ಕಾಯುತ್ತಾ ಇರುತ್ತೇನೆ.
LikeLike
Many thanks to Dr. Desai and Dr. Uma Venkatesh for their warm welcome to the ‘kssvv’ family and their encouraging comments. Browsing through the website this morning, I was pleasantly surprised at the wealth of kannada literature that has been created therein over a short period of time. Look forward to attending a workshop that might help amateur writers like me develop further.
LikeLike
ಶ್ರೀಮತಿ ಸವಿತಾ ಅವರು,ತಮ್ಮ ಮೊದಲ ಕವನ “ಜಲಧಾರೆಯಲ್ಲಿ”, ಜಲಪಾತದ ಝರಿಯಂದದಿ, ಗಂಭೀರವಾಗಿ, ನಮ್ಮ ಚಿತ್ತವು ಪ್ರವಹಿಸಬಾರದೇಕೆ, ಜಲಧಾರೆಯ ತೆರದಿ ನಮ್ಮ ಚಿತ್ತವು, ಏಕಾಗ್ರತೆಯನ್ನು ಬೆಳೆಸಿ, ಶಾಂತತೆ ಮತ್ತು ಐಕ್ಯತೆಯನ್ನು ಪಡೆಯಬಾರದೇಕೆ ಎನ್ನುವ ಭಾವನೆಯನ್ನು, ಸೊಗಸಾಗಿ ಹೋಲಿಸಿದ್ದಾರೆ. ಅವರ ಎರಡನೆಯ ಕವನ ತಿರುವು, ಪ್ರಕೄತಿ ತನ್ನ ವಿವಿಧ ಋತುಗಳಲ್ಲಿ ತೋರುವ ತಿರುವನ್ನು, ನಮ್ಮ ಬಾಳಿನ ಸುಖ-ದುಃಖಗಳ ತೆರದಿ, ಎನ್ನುತ್ತಾರೆ. ಹಸಿರು ಚಿಗುರಿ ವಸಂತದಲ್ಲಿ ಮೆರೆವ ಸ್ರುಷ್ಟಿ, ಹೇಮಂತದಲ್ಲಿ ತನ್ನೆಲ್ಲ ಸೌಂಧರ್ಯವನ್ನು ಕಳೆದುಕೊಂಡು ನಿಲ್ಲುತ್ತದೆ, ಹಗಲಿನಲ್ಲಿ ಮೆರೆವ ಭೂಮಿ, ರಾತ್ರಿಯ ನೀರವವನ್ನೂ ಸಹಿಸಿ ಮತ್ತೊಂದು ಹಗಲಿಗೆ ಎದಿರುನೋಡುತ್ತದೆ. ಅದೇ ರೀತಿ, ನಮ್ಮ ಜೀವನವೂ ಕಷ್ಟ-ಸುಖಗಳ ತಿರುವಿನಲ್ಲಿ ಮುನ್ನಡೆಯುತ್ತದೆ ಎಂಬ ಮಾತನ್ನು ಉತ್ತಮ ಹೋಲಿಕೆಯೊಂದಿಗೆ ತಿಳಿಸಿದ್ದಾರೆ. ಸವಿತಾ ಅವರ ಉತ್ತಮ ಕವನಗಳು, ಹೀಗೆ ಮುಂದೆಯೂ ನಮ್ಮ ಜಾಲಜಗುಲಿಯಲ್ಲಿ ನಳನಳಿಸಲಿ ಎಂದು ಹಾರೈಸುತ್ತೇನೆ.
ಉಮಾ ವೆಂಕಟೇಶ್
LikeLike
ನಿಸರ್ಗವನ್ನು ವಸ್ತುವಾಗಿಟ್ಟುಕೊಂಡ ಈ ಎರಡು ಕವನಗಳಲ್ಲಿ ಡಾ.ಸವಿತಾ ಅವರು ತಮ್ಮ ಚಿಂತನೆಯ ಧಾರೆಯನ್ನು ನಮ್ಮತ್ತ ಹರಿಸಿದ್ದಾರೆ.ಜಲಧಾರೆ ಕೆಳಗೆ ಧುಮುಕಿದರೂ ಮನವನ್ನೆ ಮೇಲೆತ್ತುತ್ತಿದೆ. ಏಕಾಗ್ರಚಿತ್ತದ ಮನಸ್ಸಿಗೆ ಭೋರ್ಗರೆತದ ಸದ್ದು, ಸುತ್ತಲಿನ ಗದ್ದಲವ ನುಂಗಿ ’ದೀರ್ಘ ಧ್ಯಾನ’ದತ್ತ ಸಾಗಿದ ಅನುಭವ! ಜಲಧಾರೆಯಂತೆ ವೇಗದಲ್ಲಿ, ಚಂಚಲತೆಯಲ್ಲಿ ಭಾವಾತಿಶಯದಲ್ಲಿ, ದಿಶೆ ತಪ್ಪಿದ್ದರೂ ಅದು ಮತ್ತೆ ಶಾಂತತೆ ಮತ್ತು ಐಕ್ಯತೆ ಪಡೆಯುವಂತೆ ನಮ್ಮ ಭಕ್ತಿಧಾರೆಯನ್ನೂ ನಿರ್ದೇಶಿಸಿ ಆತ್ಮಲಿಂಗಕ್ಕೆ ಕ್ಷೀರಾಭಿಷೇಕ ಮಾಡಲು ಆದೇಶಿಸುತ್ತಾರೆ. ಎರಡನೆಯ ಕವನದಲ್ಲಿ ಸೃಷ್ಟಿಯ ಋತುಚಕ್ರದಲ್ಲಿ, ಹಗಲು-ರಾತ್ರಿಗಳ ರಿಂಗಣದಲ್ಲಿ ಸುಖ-ದುಃಖಗಳ ಹೋಲಿಕೆ ಸುಂದರವಾಗಿದೆ. ನಮ್ಮ ಹೊಸ ಬರಹಗಾರ್ತಿಗೆ ’ಅನಿವಾಸಿ”ಯ ಸ್ವಾಗತ. ಇನ್ನು ಮುಂದೆಯೂ ನಿಮ್ಮ ಕವಿತೆ-ಬರಹಗಳನ್ನು ಎದುರು ನೋಡುವಾ.
LikeLike