(ಇವತ್ತು ನಮ್ಮೆಲ್ಲರ ಮೆಚ್ಚಿನ ಕವಿ ಪಿ ಬಿ ಶ್ರೀನಿವಾಸ್ ಅವರ ಪ್ರಥಮ ಪುಣ್ಯತಿಥಿ)
ಪಿ.ಬಿ.ಎಸ್ ಎನೆ ಕುಣಿದಾಡುವುದೆನ್ನೆದೆ
ಪಿ.ಬಿ.ಎಸ್ ಎನೆ ಕಿವಿ ನಿಮಿರಿವುದು
ಕರಿ ಮುಗಿಲನ್ನು ಕಾಣುವ ನವಿಲೊಲು
ಗರಿಗೆದರುತ ಮನ ಕುಣಿದಾಡುವುದು (ಕುವೆಂಪು ಅವರ ಕ್ಷಮೆ ಕೋರಿ)
ಈ ಮಾತುಗಳು ಸುಮ್ಮನೆ ಹೇಳಿದ್ದಲ್ಲ. ಎದೆಯಾಂತರಾಳದಲಿ ಪುಟಿವ ಕಾರಂಜಿಯಲಿ, ಹೃದಯ ವೀಣೆ ಮಿಡಿದು ಸಿಡಿದ ಮಾತುಗಳು – ನನ್ನ ಮಟ್ಟಿಗೆ; ನನ್ನಂಥ ಸಾವಿರಾರು ಪಿ.ಬಿ.ಎಸ್ ಅಭಿಮಾನಿಗಳ ಮಟ್ಟಿಗೆ.
ಪಿ.ಬಿ.ಎಸ್ ನಮ್ಮನ್ನು ಅಗಲಿ ಈ ಏಪ್ರಿಲ್ ೧೪ ನೇ ತಾರೀಖಿಗೆ ಒಂದು ವರ್ಷ ಕಳೆಯುತ್ತಿದೆ. ಕಳೆದ ವರ್ಷ ಅಮೇರಿಕದ ಹಲವು ಕನ್ನಡಪರ ಸಂಘಟನೆಗಳು ಅವರಿಗೆ ಭಾವಪೂರ್ಣ ಶ್ರಧ್ಧಾಂಜಲಿ ಅರ್ಪಿಸಿದವು. ಆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗಾಯಕನನ್ನು ನೆನಪಿಸಿಕೊಂಡ ಪರಿ ಹೃದಯ ತುಂಬಿಸುವಂಥ ಕೆಲಸ. ಈ ವರ್ಷ ಕೂಡ ಹಾಗೆ ನಡೆಯಲೆಂದು ಆಶಿಸುತ್ತೇನೆ.
ಪ್ರತಿವಾದಿ ಭಯಂಕರ ಎಂಬುದು ಅವರ ಹೆಸರಿನ ಜೊತೆಗಿದ್ದರೂ ರೂಪ, ಗುಣ,ನಡತೆ,ಹಾಗು ಗಾಯನದಲ್ಲಿ ಸೌಜನ್ಯ ಸಜ್ಜನಿಕೆಗಳನ್ನು ಗಾಢವಾಗಿ ಪ್ರತಿಫಲಿಸಿದಂತಹ ವ್ಯಕ್ತಿತ್ವ ಪಿ.ಬಿ.ಎಸ್ ಅವರದ್ದು. ಭಯಂಕರ ಎನ್ನುವ ಶಬ್ದಕ್ಕೆ ಭಯಂಕರನೆನ್ನಿಸುವಂತಿತ್ತು ಅವರ ನಡವಳಿಕೆ. ಪಿ.ಬಿ.ಎಸ್ ಎಂದರೆ ಪ್ರೇಯರ್ ಬಿಲೇವರ್ ಶ್ರೀನಿವಾಸ್ ಅಥವ ಪ್ಲೇ ಬ್ಯಾಕ್ ಸಿಂಗರ್ ಶ್ರೀನಿವಾಸ್ ಎಂದೂ ಅನ್ವರ್ಥಕವಾಗಿ ಅವರನ್ನು ಉದ್ಧರಿಸುವುದುಂಟು. ಪಿ.ಬಿ.ಎಸ್ ಹಾಡಿದ ಶ್ಲೋಕಗಳನ್ನು ಕೇಳಿದವರಿಗೆ ಈ ಮಾತು ೧೦೦ ಕ್ಕೆ ನೂರು ಸತ್ಯ ಎನ್ನಿಸದಿರದು.
Read More »