ಅನಿವಾಸಿ ಓದುಗರಿಗೆಲ್ಲ ನಮಸ್ಕಾರ, ನಾಳೆ ಪ್ರೇಮಿಗಳ ದಿನಾಚರಣೆ. ಹಳೆಯ ಡೈರಿಯಲ್ಲಿ ಎಂದೋ ಬರೆದಿಟ್ಟ, ಮತ್ತು ಅಲ್ಲೇ ಉಳಿದು ಹೋದ ಒಂದಷ್ಟು ಬಾಲಿಶ ಕವಿತೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ಬಿಡುವಾದಾಗ ಓದಿ, ಎಂದಿನಂತೆ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸುವುದ ಮರೆಯಬೇಡಿ ವಂದನೆಗಳು ಅಮಿತಾ ರವಿಕಿರಣ್
ವರವಾಗಿ ದಕ್ಕಿದ ಮನಸೇ
ಇದೀಗ ಮತ್ತೆ ನಿನ್ನ ಕನಸೊಂದು ಬಿತ್ತು ಮಳೆ ಬಿದ್ದು ಮಿದುವಾದ ಕೆಮ್ಮಣ್ಣ ನೆಲೆದಮೇಲೆ, ಪಾರಿಜಾತವೊಂದು ಬಿದ್ದು ಮೈ ನೋಯಿಸಿಕೊಂಡಂತೆ
ನೀ ಕದ್ದು ಲೂಟಿ ಮಾಡಿ ಕೂಡಿಟ್ಟ ನನ್ನ ನಿದ್ದೆಯ ರಾಶಿಯಲ್ಲಿ ಒಮ್ಮೆಯಾದರೂ ಇಣುಕಿದ್ದೀಯ ? ಎಂತೆಂಥ ಅದ್ಬುತ ಕನಸುಗಳಿವೆ ಗೊತ್ತೇ ಅಲ್ಲಿ? ಎಲ್ಲವೂ ನಿನ್ನವೇ, ಆದರೆ ನನಗೆ ಲೆಕ್ಕ ಬರದು, ನಿನಗೆ ಎಣಿಸಲು ಸಮಯವಿರದು
ನಿನ್ನ ನೋಡಬೇಕು ಎನಿಸುವುದೇ ಈ ಹಾಳು ರಾತ್ರಿಗಳಲ್ಲಿ ಆಗೆಲ್ಲ ಬಾನ ಸುತ್ತಗಲ ಅಳೆಯುತ್ತೇನೆ ಕಣ್ಣಿನಳತೆಗೆ ಸಿಗುವ ಚಿಕ್ಕಿ ತಾರೆಗಳನ್ನೆಲ್ಲ ನಿಟ್ಟಿಸುತ್ತೇನೆ ನಿನ್ನ ಕೋಣೆಯ ಆ ಕೊನೆಯ ಕಿಟಕಿಯಿಂದ ಇವೇ ನಕ್ಷತ್ರ ಕಾಣುತ್ತವೆ, ನೀನೂ ನೋಡುತ್ತಿರಬಹುದೇನೋ ಅಂದುಕೊಂಡು ನನ್ನ ಹುಚ್ಚಿಗೆ ನಾನೇ ನಗುತ್ತೇನೆ
ಒಮ್ಮುಖ ಪ್ರೀತಿಯ ಚಲುವೆ ಇದು, ಕಲ್ಪನೆಯ ಕಟ್ಟಡಕ್ಕೆ ಪಾಯ ಗೋಡೆಯೂ ಬೇಡ,
ಇಷ್ಟಕ್ಕೂ ನಾನು ಪ್ರೀತಿಸುತ್ತಿರುವುದು ನಿನ್ನನ್ನೋ, ನಿನ್ನ ಕುರಿತು ನಾನೇ ರೂಪಿಸಿಕೊಂಡ ನನ್ನ ಕಲ್ಪನೆಯನ್ನೋ ಇನ್ನೂ ನಿಚ್ಚಳವಾಗಿಲ್ಲ! ಈ ಸಲ ನಿದ್ದೆ ಮಾಡಲು ಬಿಟ್ಟರೆ ಖಂಡಿತ ಉತ್ತರ ಹುಡುಕಿಕೊಂಡು ಬರುವೆ - ಸಖಿ
(picture; Nandini MB/ Amita Ravikirana
ರಂಗೋಲಿಯಂಥ ಹುಡುಗ...
ಇಂದು ನಿನ್ನ ಆ ಮಾತಿನ ಚುಕ್ಕಿಯಿಂದ ಈ ಮಾತಿನ ಚುಕ್ಕಿಗೆ ಎಳೆಯುತ್ತಿದ್ದ ಸರಳ ವಕ್ರ ರೇಖೆಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ.
ಯಾಕೆ ಹೀಗೆ? ನಿನಗೀಗ ಬೆಳಗಿನ ಜಾವದ ಸಿಹಿ ನಿದ್ದೆ ಕನಸಿನಲ್ಲಿ ನಗ್ತಿದ್ದೀಯಾ ? ಏನೋ ಕನವರಿಸುತ್ತಾ ಇರಬಹುದು ನೀನೀಗ, ನನಗೊಂದು ದಿವ್ಯಶಕ್ತಿ ಇದ್ದಿದ್ದರೆ ನಾನೀಗ ಒಮ್ಮೆ ನಿನ್ನ ಕೋಣೆಯನೊಮ್ಮೆ ಹೊಕ್ಕು ನಿನ್ನ ಹಣೆ ನೇವರಿಸಿ ಬರುತ್ತಿದ್ದೆ. ಹ್ಮ್ ಅಷ್ಟೇ!ಅದಕ್ಕಿಂತ ಹೆಚ್ಚು ಕಡಿಮೆ ಏನೂ ಇಲ್ಲ...
ನೀ ಕಾಡುವುದಿಲ್ಲ ಪ್ರೇಮಿಯಂತೆ, ನೀ ಬೇಡುವುದಿಲ್ಲ ಯಾಚಕನಂತೆ ನೀ ನಿರ್ಲಿಪ್ತ, ನಿತ್ಯತೃಪ್ತ ಗದರಬೇಕು ಅನ್ನಿಸುತ್ತದೆ ನೀ ಎಲ್ಲರಂತೆ ಯಾಕಿಲ್ಲ ಎಂದು, ನೀ ನನ್ನ ಕಾಡಿದಷ್ಟು ನೆನಪಾದಷ್ಟು ನಿನಗೆ ನನ್ನ ನೆನಪಾಗುವುದಿಲ್ಲ ಗೊತ್ತು ಅದು ನಿನ್ನ ಸಮಸ್ಯೆ ಅಲ್ಲ ಬಿಡು! ನೀನು ಇರುವುದಕ್ಕೇ ನಾನು ಮಾತ್ರ ಶ್ರಾವಣದ ನವಿಲು ಚೈತ್ರದ ಚಿಗುರು, ಒಗರು ಒಗರು ಈ ಪ್ರೀತಿಯಲ್ಲಿ ನನ್ನದೊಂದು ಅವಸ್ಥೆ ಯಾಕೆಂದರೆ ನಾನು ಸದಾ ಕಾಲ ನಿನ್ನ ಧ್ಯಾನಸ್ಥೆ
- ಸಖಿ
ಹೇ ಕೇಳಿಲ್ಲಿ,
ಬಾನ ಮಲ್ಲಿಗೆಯ ಹೂಗಳನ್ನು ಹೆಕ್ಕಿ ಒಂದು ಚಂದದ ದಂಡೆ ಕಟ್ಟಿ ಮುಡಿಯಬೇಕು ಎನಿಸಿದೆ ನೀನೂ ಬರ್ತೀಯ ಜೊತೆ? ಹೂ ಹೆಕ್ಕೋಣ!
ಈ ಕಾಲದಲ್ಲೇ ನೋಡು ಹಾಡಿಯ ಅಂಚಲ್ಲಿ ಬೆಣಸು, ಚೂರಿ, ಮುಳ್ಳಣ್ಣು ರಾಶಿ ರಾಶಿ ಸಿಗುತ್ತವೆ , ಆ ಹುಳಿ ಬೋರೆ ಹಣ್ಣುಕೂಡ ಹಳದಿಯಿಂದ ಮೆತ್ತಗೆ ಕಂದು ಬಣ್ಣಕ್ಕೆ ತಿರುಗಿರುತ್ತದೆ ಎಲ್ಲವನ್ನೂ ಆಯ್ದು ಆ ಪುಟ್ಟ ಕುಕ್ಕೆಯಲ್ಲಿ ಹಾಕಿಕೊಂಡು, ಯಾರಿಗೂ ಕೊಡದೆ ತಿನ್ನಬೇಕು ಅನ್ನಿಸಿದೆ, ಬರ್ತೀಯ ಜೊತೆಗೆ? ನೀ ಬಂದರೆ ಕವಳಿ ಹಣ್ಣೂ ಕೊಯ್ಯಬಹುದು ಬುಟ್ಟಿ ಇನ್ನಷ್ಟು ತುಂಬುತ್ತದೆ! ದಾರಿಯೂ ಬೇಗ ಸವೆಯುತ್ತದೆ.
ಬೇಳೆ ಹೂವಿನ ಸಾರುಮಾಡಿ ಬಳ್ಳಿ ಸೊಪ್ಪಿನ ಪಲ್ಯಮಾಡಿ ಕೆಂಪಕ್ಕಿಅನ್ನಕ್ಕೆ ಒಂದು ಚೂರೇ ಚೂರು ತುಪ್ಪ ಹಾಕುವೆ, ಊಟ ಮುಗಿಸು ಕಡೆದ ಮಜ್ಜಿಗೆ ಕುಡಿದು ಕಣ್ಣು ಎಳೆದು ಬರುವಾಗ, ಇನ್ನೇನು ನಿನ್ನ ಬಾಯಿಂದ ಅನ್ನದಾತೆ ಸುಖಿಯಾಗಿರು ಎನ್ನುವ ಮಾತು ಬರುವ ಮೊದಲೇ,
ಮತ್ತೆ ಊರ ತಿರುಗಲು ನನ್ನೂರ ಇಂಚಿಂಚು ಸುತ್ತಿಬರಲು ನಿನ್ನ ಎಳೆದುಕೊಂಡು ಹೋಗಬೇಕಿದೆ, ಬರ್ತೀಯ?
ನಿನಗೆ ಪ್ರೀತಿ ಎಂದರೆ ಹೇಗೋ ಏನೋ ನನಗೆ ಗೊತ್ತಿಲ್ಲ, ನನಗೆ ಮಾತ್ರ ನನ್ನಿಷ್ಟದ ಎಲ್ಲ ಗಳಿಗೆಗಳಿಗೂ ನಿನ್ನನ್ನು ಪರಿಚಯಿಸುವುದು ನನ್ನ ಬದುಕಿನ ಎಲ್ಲ ಖುಷಿ, ಬೆರಗು, ನೆಮ್ಮದಿಯಲ್ಲಿ ನನ್ನ ಜೊತೆ ನಿನ್ನ ಹೆಜ್ಜೆಯೂ ಇರುವುದೇ ಪ್ರೀತಿ
ಓದುಗರಿಗೆಲ್ಲ ಆತ್ಮೀಯ ನಮಸ್ಕಾರ, ಸಾಮಾಜಿಕ ಜಾಲತಾಣಗಳು ಮನುಷ್ಯನ ಭಾವಾಭಿವ್ಯಕ್ತಿಗೆ ಸಶಕ್ತ ಮಾಧ್ಯಮಗಾಳಾಗಿವೆ. ಬರವಣಿಗೆ, ಹಾಡು, ಅನಿಸಿಕೆ ಅಭಿಪ್ರಾಯಗಾಲ ಜೊತೆಗೇ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಹಾಕುವುದು, ಬಹಳಷ್ಟು ಜನರ ಪ್ರಮುಖವಾದ ಹವ್ಯಾಸವಾಗಿ ಬದಲಾಗಿದೆ. ಫೋಟೋ ವಿಡಿಯೋ ಹಾಕುವ ಕಾಯಕವೇ ಹಣಗಳಿಸುವ ಉತ್ತಮ ವೇದಿಕೆಯಾಗಿಯೂ ಮಾರ್ಪಟ್ಟಿದೆ. ಒಂದಿಷ್ಟು ಜನ ತಮ್ಮ ವೈಯಕ್ತಿಕ ಜೀವನವನ್ನು ಚಿತ್ರಗಳ ಮೂಲಕ ಜಗತ್ತಿನ ಮುಂದೆ ಅನಾವರಣ ಗೊಳಿಸಿದರೆ, ಮತ್ತೊಂದಷ್ಟು ಜನ ಹೂವು, ಹಣ್ಣು, ನೀರು, ಆಕಾಶ, ಕೀಟ, ಹಕ್ಕಿ ಅಂತೆಲ್ಲ ನಮ್ಮ ಸುತ್ತಲಿನ ಸುಂದರ ಜಗತ್ತನ್ನು ಇನ್ನೂ ಸುಂದರವಾಗಿ ತಮ್ಮ ಚಿತ್ರಗಳ ಮೂಲಕ ಚಿತ್ರಿಸಿ ನಮ್ಮ ಮುಂದಿಟ್ಟು ರಂಜಿಸುತ್ತಾರೆ. ಈ ಚಿತ್ರಗಳು ಪರಿಚಯವೇ ಇಲ್ಲದ ಜಗತ್ತಿನ ಅದ್ಯಾವುದೋ ಮೂಲೆಯಲ್ಲಿದ್ದುಕೊಂಡು ಮತ್ತೊಬ್ಬ ಸಮಾನಸಕ್ತನ ಭಾವಕೋಶದ ಪದರನ್ನು ಮೆತ್ತಗೆ ತಟ್ಟಿ, ಸ್ಫೂರ್ತಿ ಕೊಡುತ್ತವೆ. ಕವಿಮನಸನ್ನು ಆವರಿಸಲು ಯಶಸ್ವಿಯಾದ ಒಂದೇ ಒಂದು ಭಾವಚಿತ್ರ ಸಾವಿರ ಭಾವಗಳನ್ನು ಪದಗಳಲ್ಲಿ ಹೊಮ್ಮಿಸಲೂಬಹುದು.
ನಾನು ಆಗಾಗ್ಯೆ, ನನ್ನ ಕ್ಯಾಮೆರಾ ಮತ್ತು ಫೋನಿನಲ್ಲಿ ತೆಗೆದ ಚಿತ್ರಗಳನ್ನ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಎಂಬ ಸಾಮಾಜಿಕ ಜಾಲತಾಣಗಲ್ಲಿ ಹಂಚಿಕೊಳ್ಳುತ್ತಾ ಇರುತ್ತೇನೆ. ಅಲ್ಲಿರುವ ಕೆಲ ಕವಿ ಹೃದಯಗಳಿಗೆ ನಾನು ಹಂಚಿಕೊಂಡ ಚಿತ್ರಗಳು ಇಷ್ಟವಾಗಿ ಅವರ ಮನ ಸೃಜಿಸಿದ ಭಾವವನ್ನು ಅಕ್ಷರರೂಪಕ್ಕಿಳಿಸಿ ನನ್ನೊಂದಿಗೆ ಹಂಚಿಕೊಳ್ಳುತ್ತಾರೆ. ಇತ್ತೀಚಿಗೆ ಲ್ಯಾಂಡ್ ಸ್ಕೇಪ್, ಹೂ, ನದಿ, ಚಿಕ್ಕ ಚಂದ್ರರ ಫೋಟೋ ಕ್ಲಿಕ್ ಮಾಡುವಾಗಲೆಲ್ಲ, ಈ ಸ್ನೇಹಿತರು ನೆನಪಾಗಿ ಬಿಡುತ್ತಾರೆ. ಈ ಚಿತ್ರ ಇವರಿಗೆ ಇಷ್ಟ ಆಗಬಹುದು/ಆಗುತ್ತದೆ ಎಂದು ಮನಸ್ಸು ಹೇಳುತ್ತದೆ.
ನಾನು ಕ್ಲಿಕ್ಕಿಸಿದ ಭಾವಚಿತ್ರವನ್ನು ಸ್ಫೂರ್ತಿಯಾಗಿ ಕವಿತೆಯನ್ನು ಬರೆದು ಕಳಿಸುವ ನನ್ನ ಮೆಚ್ಚಿನ ಮೇದಿನಿ, ಈಶ್ವರ ಭಟ್ ಕೆ, ಮತ್ತು ಗುರುರಾಜ ಹೇರ್ಳೆ ಅವರನ್ನು ಅನಿವಾಸಿ ಬಳಗಕ್ಕೆ ಪರಿಚಯಿಸಿ, ಚಿತ್ರಗಳೊಂದಿಗೆ, ಅವರ ಕವಿತೆ ಹಂಚಿಕೊಳ್ಳುತ್ತಿರುವೆ . —ಅಮಿತಾ ರವಿಕಿರಣ್ ( ವಾರದ ಸಂಪಾದಕಿ)
ಮೇದಿನಿ ಕೆಸವಿನಮನೆ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಕೆಸವಿನಮನೆಯವರಾಗಿದ್ದು ಪ್ರಸ್ತುತ ಆಯನೂರಿನಲ್ಲಿ ವಾಸವಾಗಿದ್ದಾರೆ. ಸಮೀಪದ ಸರ್ಕಾರಿ ಶಾಲೆ ಕಲ್ಕುರ್ಚಿಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಈಗ ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಮಂಗಳೂರು ವಿವಿಯಲ್ಲಿ ಬಿ.ಎಡ್. ಪ್ರಸ್ತುತ ಕುವೆಂಪು ವಿವಿಯಲ್ಲಿ ಪಿ ಎಚ್ಡಿ ಮಾಡುತ್ತಿದ್ದಾರೆ.
ಬರೆವಣಿಗೆ ಇವರ ಹವ್ಯಾಸ. ಶೈಕ್ಷಣಿಕ ಲೇಖನಗಳು, ಲಲಿತ ಪ್ರಬಂಧಗಳು, ಕವಿತೆ, ಕಥೆಗಳು - ಸುಧಾ, ವಿಕ್ರಮ, ತುಷಾರ, ಉತ್ಥಾನ, ಹೊಸದಿಗಂತ, ವಿಜಯ ಕರ್ನಾಟಕ, ಉದಯವಾಣಿ, ಪ್ರಜಾವಾಣಿ, ಕ್ರಾಂತಿದೀಪ, ಮಲೆನಾಡು ಮಿತ್ರ, ಸಂಹಿತ, ಶಾಲ್ನುಡಿ ಇತ್ಯಾದಿ ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಷಟ್ಪದಿ, ಕಂದಪದ್ಯ ಇತ್ಯಾದಿ ಛಂದೋಬದ್ಧ ಕವಿತೆಗಳ ರಚನೆಯನ್ನು ಮಾಡುತ್ತಿದ್ದು, ಇವರ "ಅಸ್ತಿತ್ವ" ಕವಿತೆಗೆ ಚೆನ್ನವೀರ ಕಣವಿ ಕಾವ್ಯ ಪುರಸ್ಕಾರ ದೊರೆತಿದೆ. ಪ್ರಜಾವಾಣಿ -ವೀರಲೋಕ ಸಹಯೋಗದ ಸಂಕ್ರಾಂತಿ ಕವನ ಸ್ಪರ್ಧೆಯ ತೀರ್ಪುಗಾರರ ಮೆಚ್ಚಿನ 50 ಕವಿತೆಗಳ ಸಂಕಲನದಲ್ಲಿ ಇವರ "ಸೇತುವೆಯಾ, ಗೋಡೆಯಾ? " ಕವಿತೆಯೂ ಇದೆ. ವೃತ್ತಿ ಬದುಕಿನ ಅನುಭವ ಕಥನವಾದ “ಮಿಸ್ಸಿನಡೈರಿ” ಇವರ ಮೊದಲ ಕೃತಿಯಾಗಿದ್ದು ಬಿಡುಗಡೆಯಾದ ಹತ್ತು ದಿನಗಳಲ್ಲಿ ಎರಡನೇ ಮುದ್ರಣ ಕಂಡಿದ್ದು ಇದೀಗ ಮೂರು ಮುದ್ರಣವಾಗಿದೆ. “ಮಕ್ಕಳಿಗಾಗಿ ಶ್ರೀ ಶ್ರೀಧರ ಸ್ವಾಮಿಗಳ ಕಥೆಗಳು” ಕೃತಿ - ಐದು ಮುದ್ರಣವಾಗಿದೆ.
ಈ ನೀಲಿಯಾಚೆಗೆ....
ಈ ನೀಲಿಯಾಚೆಗೆ ಆ ಮೋಡದೀಚಿಗೆ ನಗುತಿರುವ ಸಗ್ಗವೊಂದಿದೆ ಅಲ್ಲಿ ಬಾ ನೀಲಿಯೊಳು ಮೈಮರೆತು ಮೋಡದೊಳು ಮರೆಯಾಗಿ ಜಗವನ್ನೆ ಹೊರನೂಕಿ ಮೆರೆಯೋಣ ಬಾ
ತಬ್ಬುವುದೆಂದರೇನು ಸಖೀ? ನೀಲಾಕಾಶವು ನೀಲಸಮುದ್ರವ ಕರೆಯುತ್ತಾ ನಾ ಕೆಳಗಿಳಿದೆ, ನೀ ಮೇಲೆ ಬಾ ಎನ್ನುವ ಸಂಭ್ರಮದಿ ತಾಗಿಯೂ, ತಾಗದಿರುವುದೇ ತಬ್ಬುವುದೆಂದರೇನು ಸಖೀ?!
ಈಶ್ವರ ಭಟ್ ಕೆ (ಕಿರಣ),
ಮೂಲತಃ ಕಾಸರಗೋಡು ಕೇರಳದವರು. ಈಗ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸ ಬರಹ, ತಿರುಗಾಟ. ಗಡಿನಾಡಿನ ಸೀಮೆಯವರು ಆಗಿದ್ದಕ್ಕೂ ಏನೋ, ಕಿರಣರಿಗೆ ದಕ್ಷಿಣ ಭಾರತದ ಎಲ್ಲ ಭಾಷೆಗಳೂ ಮಾತಾಡಲು ಮತ್ತು ಓದಲು ಬರೆಯಲು ಬರುತ್ತದೆ ಅದೇ ಕಾರಣದಿಂದ ಆ ಭಾಷೆಯ ಕಥೆ, ಕವನ, ಭಜನೆಗಳನ್ನು ತುಂಬಾ ಸುಂದರವಾಗಿ ಕನ್ನಡಕ್ಕೆ ಅನುವಾದಿಸುತ್ತಾರೆ. ಇವರ ಕವಿತೆಗಳು ಸರಳವಾಗಿ ಹಾಡಿಸಿಕೊಂಡು ಹೋಗುತ್ತವೆ. ರಾಗಕ್ಕೆ, ತಾಳಕ್ಕೆ ಹೊಂದುವ ಸಾಹಿತ್ಯ ಬರೆಯುವ ಇವರು, ಹಾಸ್ಯಬರಹ, ಮತ್ತೆ ಅಷ್ಟೇ ಗಂಭೀರ ವಿಷಯಗಳನ್ನೂ ಬರೆಯಬಲ್ಲರು.
ಮಲ್ಲಿಗೆಯವಳು.
ಹೂವಬುಟ್ಟಿಯ ಹೊತ್ತು ಮಲ್ಲಿಗೇ ಮಲ್ಲಿಗೇ ಎಂದೆನುತ ಬಂದಳೋ ಬಿಂಕದವಳು ಮೊಳಕೆ ಎಷ್ಟೆಂದರೆ ಕಣ್ಣಲ್ಲೆ ಗದರಿಸುತ ಹಣದ ಲೆಕ್ಕಾಚಾರ ಯಾಕೆಂಬಳು!
ಮೊಳಕೆ ಮೂವತ್ತಾಯ್ತೆ? ಮೊನ್ನೆ ಇಷ್ಟಿರಲಿಲ್ಲ ಪಿಸುಮಾತಿಗಳಿಗಿಷ್ಟು ಕೋಪಗೊಂಡು; ಮಲ್ಲಿಗೆಯ ಗಿಡಕೆಲ್ಲ ರೋಗ ಬಂದಿದೆ ಒಡೆಯ ಮೊನ್ನೆಯಷ್ಟಿಲ್ಲ ಹೂ ಎಂದೆಂಬಳು.
ಒಂದು ಮೊಳ ಸಾಕೆನಗೆ, ತೆಗೆದುಕೋ ನಲುವತ್ತು ಎಂದಾಡಿದರೆ ಮತ್ತೆ ಜನ್ಮ ಹೊರಗೆ; ಮಾಲೆ ಕಟ್ಟುವ ಸಮಯ ಪರಿಮಳವ ಕುಡಿದೆಹೆನು ನಾ ಹೇಳುವಷ್ಟನೇ ಕೊಡು ಎಂದಳು.
ಮೊಳ ಕತ್ತರಿಸುವಾಗ ಒಂದಿಷ್ಟು ಹೆಚ್ಚಿಸುತ ಜೊತೆಗಷ್ಟು ಗುಲಾಬಿ ತೆಗೆದಿಡುತಲಿ; ಹೂವನ್ನು ಹೆಚ್ಚಿಸುವ ಖುಷಿ ತುಂಬುಮೊಗದಲ್ಲಿ ನಾಳಿನಾ ಭರವಸೆಯ ನಗು ನಕ್ಕಳು.
ಸೂರ್ಯಾಸ್ತ!
ಅಲ್ಲಿ ಕೆರೆಯಂಚಿನಲಿ, ಮುಳುಗುತಿಹ ನೇಸರಗೆ ಮರದ ಹಸಿರನು ಕಪ್ಪು ಮಾಡುವಾಸೆ ಇಲ್ಲಿಯೋ ತಂಗಾಳಿ ಬಿಸಿಯೇರೆ ಹಣಕಿಸುತ ಹತ್ತಿರಕೆ ಕಳಿಸುವುದು, ಒಲವಿನಾಸೆ!
ಎಷ್ಟು ಮಾತುಗಳಾಡಿ, ಜಗಳದಲಿ ಒಂದಾಗಿ ಮತ್ತೆ ಮಾತಿನ ದೋಣಿ ತೇಲಿಹೋಗಿ ಸುತ್ತ ಕತ್ತಲೆ ಹಬ್ಬಿ ಮಾತು ಮೌನಕೆ ದಣಿದು ಅವಳ ಸಾಮೀಪ್ಯವನೆ ಅಲೆವ ರೋಗಿ
ಹಾರುವುದು ಎದೆಗನಸು ನೂರು ಮೈಲಿಗಳಾಚೆ ಅಲ್ಲಿಯೂ ನೇಸರನು ಮುಳುಗುತಿಹನು ಅವಳಿಗೂ ಇದೆ ನೆಪವು, ಇಂತಹದೆ ಬೇಸರವು ಏನನೋ ಕಾಯುವುದು, ಹೆಳವ ನಾನು.
ಒಂದು ದಿನವಾದರೂ ಸಂಜೆಯಾಗದೆ ಇರಲಿ ದೂರವಿಹ ವಿರಹಿಗಳ ಎದೆಯ ಸುಡದೆ ಮಂದಮಾರುತ ಹೋಗಿ ಸುಖಿಪವರ ಜೊತೆಗಿರಲಿ ನನ್ನ ಕಾಡಲುಬೇಡ, ಅವಳು ಸಿಗದೆ
ಗುರುರಾಜ ಹೇರ್ಳೆ
ಮೂಲತಃ ಉಡುಪಿ ಜಿಲ್ಲೆಯ ಸಾಲಿಗ್ರಾಮ ಎಂಬ ಊರಿನವರು. ಪ್ರಸ್ತುತ ಬಹರೈನ್ ಎಂಬ ಪುಟ್ಟ ದ್ವೀಪ ರಾಷ್ಟ್ರದಲ್ಲಿ ಉದ್ಯೋಗಿ ವಾಸ. ಪ್ರಾರಂಭಿಕ ಓದು, ಬೆಳವಣಿಗೆ ಎಲ್ಲ ಉಡುಪಿಯಲ್ಲೇ ಆದರೂ, ಉನ್ನತ ವ್ಯಾಸಂಗ ಮತ್ತು ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿಯೂ ಒಂದಷ್ಟು ಕಾಲ ವಾಸಮಾಡಿದ್ದಾರೆ. ಇವರು ಒಳ್ಳೆಯ ಹಾಡುಗಾರರು. ಭಾವಗೀತೆಗಳ ಮೇಲೆ ಒಲವು ಜಾಸ್ತಿ. ಮಕ್ಕಳ ಹಾಡುಗಳು, ಪ್ರೇಮಗೀತೆಗಳನ್ನು ಬರೆಯುತ್ತಾರೆ. ಬರೆದ ಪದ್ಯಕ್ಕೆ ರಾಗ ಹಾಕಿ ಹಾಡುತ್ತಾರೆ ಕೂಡ