ನಸೀಬು (Pages from a doctor’s diary) – ಸುದರ್ಶನ ಗುರುರಾಜರಾವ್

ನಸೀಬು

Kssvv_3 (1)

ಮೇರೇ ನಸೀಬು ಮೆ ತೂ ಹೈ ಕಿ ಎ ನಹಿ
ತೇರೇ ನಸೀಬು ಮೆ ಮೈ ಹೂ ಕಿ ಎ ನಹೀ!!
ಎಂದು ನನ್ನ ಮೊಬೈಲ್ ನ ರಿಂಗ್ ಟೋನ್ ಒಂದೇ ಸಮನೆ ಬಡಿದುಕೊಂಡು ನನ್ನ ಕಣ್ಣು ತೆರೆಸಿದಾಗ ಅದು ಕನಸೋ ಇಲ್ಲ ನನಸೋ,ಭ್ರಮೆಯೋ ಇಲ್ಲ ವಾಸ್ತವವೋ ಪೂರ್ತಿ ನಿರ್ಧರಿಸುವ ಸ್ಠಿತಿಯಲ್ಲಿ ನಾನು ಇರಲಿಲ್ಲವೆಂದೇ ಹೇಳಬೇಕು.ಕಣ್ಣು ಬಿಟ್ಟು ಮೊಬೈಲ್ ಎಂಬ ಈ ಕರ್ಣಪಿಶಾಚಿಯ ಮುಖ ನೋಡುತ್ತಿದ್ದೆನಾದರೂ ಅದರ ಮೂತಿ ತೀಡಬೇಕೆಂದು ನನ್ನ ಮಂಪರು ಬುಧ್ಧಿಗೆ ಹೊಳೆಯಲೇ ಇಲ್ಲ!ಈದು ಸಾಧಾರಣ ಕರ್ಣ ಪಿಶಾಚಿಯಾಗಿರದೆ ಸ್ಮಾರ್ಟ್ ಕರ್ಣ ಪಿಶಾಚಿಯಾದ್ದರಿಂದ ಸ್ಪರ್ಶಸಂವೇದೀ ಪರದೆಯನ್ನು ಹೊಂದಿ ತನ್ನ ಸೌಂದರ್ಯ ಮೆರೆಯುತ್ತಿತ್ತು. ೨೦-೩೦ ಸೆಕೆಂಡುಗಳ ಕಾಲಾವಧಿಯಲ್ಲಿ ನಿಧಾನವಾಗಿ ಭ್ರಮನಿರಸನಗೊಂಡು ಮೂತಿ ತಿವಿದನಂತರದಲ್ಲಿ ದೂರವಾಣಿ ಕಾರ್ಯಪ್ರವೃತ್ತವಾಗಿ ಆ ಕಡೆಯಿಂದ ನನ್ನ ಕಿರಿಯ ಸಹಾಯಕ ವೈದ್ಯನ ಧ್ವನಿ ಕೇಳಿಸಿತು. ” ಡಾ.ಚಕ್ರಪಾಣಿ, ನಾನು ಗೌರಿಶಂಕರ್, ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗದಿಂದ ಮಾತಾಡುತ್ತಿದ್ದೇನೆ. ಮೂರು ವರ್ಷದ ಮಗು ಉಸಿರಾಟದ ತೊಂದರೆಯಿಂದ ಬಂದಿದೆ. ಫರಿಸ್ಥಿತಿ ಗಂಭೀರವಾಗಿದೆ, ಪ್ರಥಮ ಚಿಕಿತ್ಸೆ ನೀಡಲಾಗಿದೆ, ನಿಮ್ಮ ಸಹಾಯ ಹಾಗೂ ಮಾರ್ಗದರ್ಶನದ ಅವಶ್ಯಕತೆ ಇದೆ.ದಯವಿಟ್ಟು ತಕ್ಷಣ ಬನ್ನಿ” ಎಂದ. ಸ್ವರ್ಗದಿಂದ ಹೆಬ್ಬಾವಿನ ರೂಪದಿಂದ ಧರೆಗೆ ಬಿದ್ದ ನಹುಶನಂತೆ ಜರ್ರನೆ ವಾಸ್ತವಕ್ಕೆ ಇಳಿದು, ನಾನು ಬೇಗನೆ ಬರುವುದಾಗಿಯೂ ಅಷ್ಟರಲ್ಲಿ ಏನೇನು ಮಾಡಬೇಕು ಹಾಗೂ ಏನೇನು ಮಾಡಬಾರದು ಎಂದು ಸೂಚನೆಗಳನ್ನು ನೀಡಿ ಹಾಸಿಗೆಯಿಂದ ಎದ್ದೆ.

ಕಣ್ಣು ನಿದ್ರಾಹೀನತೆಯಿಂದ ಇನ್ನೂ ಎಳೆಯುತ್ತಿದ್ದವು.ಮೊಬೈಲಿನ ರಿಂಗ್ ಟೋನ್ ನನ್ನನ್ನು ಅಣಕಿಸುವಂತಿತ್ತು. ನನ್ನ ನಸೀಬಿನಲ್ಲಿ ನಿದ್ರೆ ಇಲ್ಲವೆಂದು ಅದು ನನಗೆ ಹೇಳಿದಂತೆಯೂ, ನಿದ್ರೆಯನ್ನು ಪಡೆಯುವ ಅದೃಷ್ಟ ನನಗಿಲ್ಲವೆಂದು ನಾನು ಕೊರಗಿದಂತೆಯೂ ಭಾಸವಾಗಿ ಅದನ್ನು ನಾನು ಬೇಡವೆಂದರೂ ಕರ್ಣಪಿಶಾಚಿಗಿ ಹಾಡಲು ಕಲಿಸಿದ ನನ್ನ ಮಿತ್ರನನ್ನು ಶಪಿಸುತ್ತಾ (ಅಮಿತಾಬ್ ನ ನಸೀಬ್ ಚಿತ್ರದ ಈ ಗಾನವನ್ನು ನನ್ನ ಮೊಬೈಲ್ ರಿಂಗ್ ಟೋನ್ ಆಗಿ ನನ್ನ ಮಿತ್ರ ಬೇಡವೆಂದರೂ ಹಾಕಿದ್ದ). , ಈ ಅವೇಳೆಯಲ್ಲಿ ಕರೆ ಬಂದದ್ದಕ್ಕೆ ಹಪಹಪಿಸುತ್ತ, ಈ ಆನ್ ಕಾಲ್ ಎಂಬ ಜೀವಶೋಷಕ ಕೆಲಸಕ್ಕೆ ಪರಿತಪಿಸುತ್ತ ಬಟ್ಟೆ ಬದಲಿಸಿ ತಯಾರಾಗತೊಡಗಿದೆ. ಹಿಂದಿನ ದಿನವು ನನ್ನ ಆನ್ ಕಾಲ್ ಬಹಳ ಬ್ಯುಸಿ ಇತ್ತು. ತುರ್ತು ಶಸ್ತ್ರಚಿಕಿತ್ಸೆಗಾಗಿ ಬಹಳಷ್ಟು ರೋಗಿಗಳು ದಾಖಲಾಗಿದ್ದು ಒಂದರ ಹಿಂದೆ ಇನ್ನೊಂದರಂತೆ ಸತತವಾಗಿ ನಡೆದು ನಾವೆಲ್ಲ ಸುಸ್ತು ಹೊಡೆದಿದ್ದೆವು. ಹೆಚ್ಚಿನ ರೋಗಿಗಳ ಪರಿಸ್ಥಿತಿ ಸಮಾಧಾನಕರವಾಗಿಲ್ಲದ ಕಾರಣಕ್ಕೆ ನಾನು ಅಲ್ಲೆ ಇದ್ದು ಸಹಾಯಕರಿಗೆ ಮಾರ್ಗದರ್ಶನ ಕೊಡುತ್ತಿದ್ದೆ. ಎಲ್ಲಾ ಒಂದು ಹಂತಕ್ಕೆ ಬಂದಾಗ ರಾತ್ರಿ ೧೧.೩೦. ಮನೆಗೆ ಬಂದು,ಸ್ವಲ್ಪ ಉಂಡ ಶಾಸ್ತ್ರ ಮಾಡಿ ಮಲಗಲು ಹೋದೆ. ಹೆಂಡತಿ ಮಕ್ಕಳು ಬೇರೆ ಕೋಣೆಯಲ್ಲಿ ಮಲಗಿ ಗೊರಕೆ ಹೊಡೆಯುತ್ತಿದ್ದರು. ನನ್ನ ಇರುವಿಕೆಗೂ ಬರುವಿಕೆಗೂ ಹೋಗುವಿಕೆಗೂ ಯಾವುದೇ ಸಂಬಧಿವಿಲ್ಲದಂತೆ ಮಲಗಿದ್ದರು. ದುಡಿಮೆಯ ಫಲಕ್ಕೆ ಮಾತ್ರ ಬಾಧ್ಯರಾಗಿ ಯಾವುದೇ ಕರ್ಮವನ್ನು ಹಂಚಿಕೊಳ್ಳಲು ಸಿಧ್ಧರಿರದ ವಾಲ್ಮೀಕಿಯ ಪೂರ್ವಾಶ್ರಮದ ಹೆಂಡತಿ ಮಕ್ಕಳಂತೆ ನನಗವರು ಗೋಚರವಾದರು. ಮನಸ್ಸಿನಲ್ಲಿ ನಸುನಕ್ಕು ಬೆಳಗಿನಿಂದ ತಲೆಯ ಮೂಲೆಯಲ್ಲಿ ತನ್ನಿರುವನ್ನು ಜ್ಯ್ನಾಪಿಸುತ್ತಿದ್ದ ಕವಿತೆಯೊಂದನ್ನು ಬರೆದುಬಿಡೋಣವೆಂದು ನನ್ನ ಟ್ಯಾಬ್ಲೆಟ್ ಕಂಪ್ಯೂಟರ್ ತೆಗೆದು ಕವಿತೆ ಬರೆದು ಮುಗಿಸಿ ಧನ್ಯತಾಭಾವದಿಂದ ಮಲಗಿದ್ದಷ್ಟೆ ಗೊತ್ತು. ಎಚ್ಚರವಾಗಿದ್ದು ಮೊದಲು ನಿವೇದಿಸಿದ ಕರ್ಣಪಿಶಾಚಿ ಪ್ರಹಸನದಿಂದಲೆ.

ಬಟ್ಟೆ ಬದಲಾಯಿಸಿದ್ದಾಗಿತ್ತು. ಬೆಳಗಿನ ಜಾವ ೪ ಘಂಟೆ. ತುರ್ತು ಪರಿಸ್ಥಿತಿ ಮಾತುಕತೆ ಬಹಳ ಇರುತ್ತದೆ ಸಲಹೆ ಕೇಳಬೇಕು,ನಿರ್ದೇಶನ ನೀಡಬೇಕು. ಬಾಯುಸಿರು ಸಹ್ಯವಾಗಿದ್ದಲ್ಲಿ ಎಲ್ಲರಿಗೂ ಅನುಕೂಲ ಹಾಗು ನಾನು ಕೂಡ ಮುಜುಗರಕ್ಕೊಳಗಾಗುವುದು ಬೇಡವೆಂದು ಚಕಚಕನೆ ಹಲ್ಲುಜ್ಜಿ,ಮುಖ ತೊಳೆದು ಕಾರೆಂಬೋ ಕುದುರೆಯನೇರಿ ಭರ್ರೆಂದು ಹೊರಟೆ.

ಗಡಿಬಿಡಿಯಿಂದ ಆಸ್ಪತ್ರೆಗೆ ಬಂದಾಗ ನನ್ನ ಕಿರಿಯ ಸಹಾಯಕರಿಬ್ಬರೂ ಕರ್ಣಪಿಶಾಚಿಯ ಮೂಲಕ ಕೊಡಮಾಡಿದ ಸೂಚನೆಗಳನ್ನು ಚಾಚೂತಪ್ಪದೆ ಮಾಡಿದ್ದರು. ರೋಗಿಯ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡಿತ್ತು ಆದರೂ ಪ್ರಾಣಾಪಾಯದ ಗಂಭೀರಸ್ಥಿತಿಯಿಂದ ಪಾರಾಗಿರಲಿಲ್ಲ.ತಾಯಿಯು ಅಲ್ಲೆ ಸ್ವಲ್ಪ ದೂರದಲ್ಲಿ ಕುಳಿತಿದ್ದಳು. ನನ್ನನ್ನು ಕಂಡು ಯಾರೆಂದು ನರ್ಸಮ್ಮನನ್ನು ಕೇಳಿದಳೆಂದೆನಿಸುತ್ತದೆ.ಆಕೆ ನಾನು ಅರಿವಳಿಕೆ ತಜ್ನ್ಯನೆಂದು ಹೇಳಿರಬೇಕು. ಆಪಾದಮಸ್ತಕ ನನ್ನನ್ನು ವಿಶ್ಲೇಷಿಸಿದಳು. ಆಕೆಗೆ ನಾನು ಯಾರು, ನನ್ನ ಕೆಲಸವೇನು ತಿಳಿದಿರಲಾರದು. ಜನಸಮಾನ್ಯರಿಗೆ ಅರಿವಳಿಕೆ (ಅನಸ್ಥೆಸಿಯ) ಶಾಸ್ತ್ರದ ಬಗ್ಗೆ ತಿಳುವಳಿಕೆ ಕಡಿಮೆ ಅಥವಾ ಇಲ್ಲವೆಂದೇ ಹೇಳಬೇಕು. ಎಷ್ಟೋ ಜನಕ್ಕೆ ನಾವು ವೈದ್ಯರೆಂಬುದು ಕೂಡಾಅರಿವಿರದು. ಈ ಬಗೆಯ ಅನುಭವಗಳು ನಮಗೆ ಹೊಸದೇನಲ್ಲ. ಏನೇ ಇರಲಿ,ಕೆಯಂತು ಕಬ್ಬ್ಬಿಣದಂಗಡಿಯಲ್ಲಿ ನೊಣಕ್ಕೇನು ಕೆಲಸ ಎಂಬಂತೆ ನನ್ನನ್ನು ನೋಡುತ್ತಿದ್ದಳು. ಮಗುವಿಗೆ ತುರ್ತಾಗಿ ಹಲವಾರು ಇಂಟರ್ವೆನ್ಷನ್ ಮಾಡಬೇಕಾದುದರಿಂದ ಆ ತಾಯಿಯನ್ನು ಹೊರಗಿನ ಕೋಣೆಯಲ್ಲಿ ಕೂಡಿಸಲು ನರ್ಸ್ ಒಬ್ಬಳಿಗೆ ಸೂಚಿಸಿ ಕಾರ್ಯಪ್ರವೃತ್ತನಾದೆ.

ಸಂಕ್ಷಿಪ್ತವಾಗಿ ರೋಗಿಯ ಬಗೆಗೆ ಕೇಳಿ ತಿಳಿದುಕೊಂಡೆ. ಇತ್ತೀಚೆಗೆ ಶುರುವಾದ ವಸಂತ ಋತುವಿನ ಪ್ರಭಾವ ಆ ಮಗುವಿನ ಮೇಲೆ ಚೆನ್ನಾಗಿಯೇ ಆಗಿತ್ತು. ವರ್ಷದೆಂಟು ತಿಂಗಳು ಚಳಿ ಮಳೆಯಲ್ಲಿ ಮುಳುಗಿರುವ ಈ ಬ್ರಿಟನ್ನಿನಲ್ಲಿ ವಸಂತನ ಸ್ಪರ್ಷವಾದ ತಕ್ಷಣ ಗಿಡ ಮರ ಬಳ್ಳಿಗಳು ನಳನಳಿಸಿ ಹೂ ಬಿಟ್ಟು ಪರಾಗರೇಣುಗಳನ್ನು ಪ್ರವಾಹದೋಪದಿಯಲ್ಲಿ ವಾತಾವರಣಕ್ಕೆ ಹರಿಯಗೊಟ್ಟದ್ದೆ, ಎಲ್ಲ ಬಗೆಯ ಅಲರ್ಜಿಗಳು ಮನುಷ್ಯಮಾತ್ರರಲ್ಲಿ ಉಲ್ಬಣಗೊಂಡು ಆಸ್ಪತ್ರೆಗಳು ಜನಜಾತ್ರೆಯಂತಾಗುತ್ತವೆ. ಈ ಮಗುವಿನ ಆಸ್ತಮ ದಿನದಿಂದ ದಿನಕ್ಕೆ ಹೆಚ್ಚಾಗಿ, ಔಷಧಿಗಳ ಪರಿಣಾಮ ಕಡಿಮೆಯಾಗಿ, ಉಸಿರಾಟದ ತೊಂದರಗೆ ಸಿಕ್ಕು ಇಲ್ಲಿ ಕರೆತಂದಿದ್ದರು. ಆ ವೇಳೆಗಾಗಲೇ ಮಗುವು ಜ್ನ್ಯಾನ ಕಳೆದುಕೊಂಡಿತ್ತೆಂದೂ, ನರ್ಸ್ ಹೋಗಿ ನೋಡಿದಾಗ ನೀಲಿ ಬಣ್ಣಕ್ಕೆ ತಿರುಗಿತ್ತೆಂದೂ, ಉಸಿರಾಟ ಇರಲಿಲ್ಲ, ಆದರೆ ಹೃದಯದ ಬಡಿತ ಇನ್ನೂ ಇತ್ತೆಂದೂ, ನರ್ಸ್ ತನ್ನ ಸಮಯಪ್ರಜ್ನೆಯಿಂದ (ಆಮ್ಲಜನಕ) ಆಕ್ಸಿಜೆನ್ ಕೊಟ್ಟಳೆಂದೂ, ಕೃತಕ ಉಸಿರಾಟದ ಪ್ರಕ್ರಿಯೆ ಶುರುಮಾಡಿದಳೆಂದೂ ಹಾಗಾಗಿ ಮಗುವು ಪೂರ್ಣಪ್ರಮಾಣದ ಹೃದಯಸ್ಥಂಭನದಿಂದ ಪಾರಾಯಿತೆಂದೂ ನನಗೆ ಪರಾಂಬರಿಸಿದರು. ನರ್ಸ್ ಗೆ ಸಲ್ಲಬೇಕಾದ ಅಭಿನಂದನೆಯನ್ನು ಸಲ್ಲಿಸಿ ಮುಂದಿನ ಶಶ್ರೂಶೆಗೆ ನಿರ್ದೇಶನ ಕೊಡತೊಡಗಿದೆ.

ಈ ರೀತಿಯ ಸಂದರ್ಭಗಳಲ್ಲಿ ನಿಗದಿತ ಸದಸ್ಯರ ತಂಡ ಒಂದೆಡೆ ಸೇರಿ ಸಾಮೂಹಿಕವಾಗಿ ಕೆಲಸ ಕಾರ್ಯಗಳನ್ನು ಹಂಚಿಕೊಂಡು ಮಾಡುವುದು ವಾಡಿಕೆ. ಸಮಯ ಇದ್ದಲ್ಲಿ ಎಲ್ಲರು ತಮ್ಮನ್ನು ಪರಿಚಯಿಸಿಕೊಂಡು, ತಮ್ಮ ಪಾಲಿನ ಕೆಲಸ ಮೊದಲೇ ತಿಳಿದುಕೊಂಡು ರೋಗಿಯ ಆಗಮನದ ತಕ್ಷಣ ಆ ದಿಸೆಯಲ್ಲಿ ಕಾರ್ಯಪ್ರವೃತ್ತ ರಾಗುವುದು ಸಾಮಾನ್ಯ. ಶಿಶು ತಜ್ನರು, ಅನಸ್ಥೇಷಿಯ ತಜ್ಞರು, ನರ್ಸ್ಗಳು ತಂಡದಲ್ಲಿರುತ್ತಾರೆ. ನಮ್ಮ ನಮ್ಮ ಯೋಗ್ಯತಾನುಸಾರ ನಮ್ಮ ಕೆಲಸ. ಸಾಮಾನ್ಯವಾಗಿ ಅರಿವಳಿಕೆಶಾಸ್ತ್ರಜ್ಞರು ತಂಡದ ನೇತೃತ್ವ ವಹಿಸುವುದು ಅಲಿಖಿತ ಒಪ್ಪಂದ. ಯಾರೊಬ್ಬರ ಪ್ರತಿಷ್ಠೆಯೂ ಇಲ್ಲಿ ನಗಣ್ಯ. ಇವತ್ತು ಒಬ್ಬಬ್ಬರನ್ನು ಪರಿಚಯಿಸಿಕೊಳ್ಳಲು ಅವಕಾಶವಿರಲಿಲ್ಲ ಹಾಗಾಗಿ ನನ್ನ ಬರುವಿಗಾಗಿ ಎಲ್ಲರೂ ಕಾಯುತ್ತಿದ್ದುದರಿಂದ ನನ್ನ ನೇತೃತ್ವದಲ್ಲಿ ಕಾರ್ಯ ಮುಂದುವರಿಯಿತು.

ರೋಗಿಯನ್ನು ಒಮ್ಮೆ ಪರೀಕ್ಷಿಸಿ, ಪರಾಮರ್ಷಿಸಿ ಪಟ ಪಟನೆ ಯಾರು ಯಾವ ಯಾವ ಕೆಲಸಗಳನ್ನು ಮಾಡಬೇಕೆಂದು ಸದಸ್ಯರಿಗೆ ಮಾರ್ಗದರ್ಶನ ನೀಡಿ ಅವುಗಳನ್ನು ಸರಿಯಾಗಿ ನಿರ್ವಹಿಸುವಲ್ಲಿ ಸಹಾಯಮಾಡುತ್ತಾ,ಮಗುವಿನ ಶಶ್ರೂಶೆ ಯನ್ನು ನಿರ್ದೇಶಿಸುತ್ತ,ಅದರ ಪರಿಣಾಮಗಳನ್ನು ಗಮನಿಸುತ್ತ , ಮಗುವಿನ ಪರಿಸ್ಥಿತಿಯಲ್ಲಾಗುತ್ತಿರುವ ಬೆಳವಣಿಗೆಗಳನ್ನು ವಿಶ್ಲೇಷಿಸುತ್ತ ನನ್ನ ಕಾರ್ಯನಿರ್ವಹಣೆ ನಡೆಸುತ್ತಿದ್ದೆ. ಸುಮಾರು ಎರಡು ಘಂಟೆಗಳ ಸತತ ಪರಿಶ್ರಮದ ಫಲವಾಗಿ ಮಗುವಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡಿತು. ತೀವ್ರ ಜೀವಾಪಾಯದಿಂದ ಪಾರಾಗಿದೆಯೆಂದು ನನ್ನ ಅನುಭವ ಹೇಳಿತು.
ಬ್ರಿಟನ್ನಿನ ಆಸ್ಪತ್ರೆಗಳಲ್ಲಿ ಹೊಸದಾಗಿ ಕೆಲಸ ಶುರುಮಾಡುವ ವೈದ್ಯರಿಗೆ ‘ಇಂಡಕ್ಷನ್ ಡೇ’ ಎಂದು ಒಂದು ದಿನ ಮೀಸಲಿಟ್ಟಿರುತ್ತಾರೆ. ಆ ದಿನ ಅಸ್ಪತ್ರೆಯನ್ನು ಭೌಗೋಳಿಕವಾಗಿ ಪರಿಚಯಿಸುವುದಲ್ಲದೆ, ಅವರವರ ಕಾರ್ಯ ವ್ಯಾಪ್ತಿಯನ್ನು, ಆಸ್ಪತ್ರೆಯ ಕಾರ್ಯ ವೈಖರಿಯನ್ನು ತಿಳಿಸುತ್ತಾರೆ. ಇಂತಹ ಒಂದು ಕಾರ್ಯಕ್ರಮದಲ್ಲಿ ಹತ್ತು ವರ್ಷಗಳ ಹಿಂದೆ ನಾನೂ ಭಾಗಿಯಾಗಿದ್ದೆ. ಆ ದಿನ ಅಲ್ಲಿನ ಮಹಾ ವೈದ್ಯ ನಿರ್ದೇಶಕರು ಹೇಳಿದ ಒಂದು ಕಿವಿಮಾತು ನನ್ನ ವ್ಯಕ್ತಿತ್ವದ ಮೇಲೆ ಬಹಳ ಪರಿಣಾಮ ಬೀರಿತು. ” ನೀವು ಎಲ್ಲೆ ಹೋಗಿ ಯಾವುದೇ ಕೆಲಸ ಮಾಡಿ, ಯಾರ ಜೊತೆಯಲ್ಲೇ ಇರಿ, ನಿಮ್ಮ ಧನಾತ್ಮಕ ಶಕ್ತಿಯನ್ನು ಕೊಂಡೊಯ್ದು ಸಂಚಯಿಸಿ. ನಿಮ್ಮಿಂದ ನಿಮ್ಮ ತಂಡದ ಎಲ್ಲರ ಸಾಧನೆಯ ಮಟ್ಟವನ್ನು ಹೊಸ ಎತ್ತರಕ್ಕೆ ಏರಿಸಿ. ಆಗ ನಿಮಗೆ ನಿಮ್ಮ ಕೆಲಸದ ದಣಿವು ಕಾಣಿಸದು”.( when you go to work, please take a positive attitude and energy with you. If you are happy people around you will be happy. Raise their energy with yours and therefroe performance. if you do so, you will not feel bored or tiered in your work) ಎಷ್ಟು ನಿಜ. ನಾನು ಕೆಲಸಕ್ಕೆ ಹೊರಡುವ ಮೊದಲು ಇದನ್ನು ಜ್ನಾಪಿಸಿಕೊಳ್ಳದೆ ಇಲ್ಲ!!

ಮಗುವಿನ ಪರಿಸ್ಥಿತಿಯ ಗಂಭೀರತೆ ಕಡಿಮೆಯಾದಂತೆ ವಾತಾವರಣವನ್ನು ಹಗುರಗೊಳಿಸುವ ತಿಳಿಹರಟೆ ಶುರುಮಾಡಿದೆ. ಅದೂ ಇದೂ ಮಧ್ಯದಲ್ಲಿ ಹರಟುತ್ತ ಅವರಿವರ ಕಷ್ಟ ಸುಖ ವಿಚಾರಿಸಿದೆ. ರಾತ್ರಿಯೆಲ್ಲ ದುಡಿದ ಕಿರಿಯ ವೈದ್ಯರಿಗೂ, ನಮ್ಮ ಸಹಾಯಕರಿಗೂ, ನರ್ಸ್ ಗಳಿಗೂ ವಿರಾಮದ ಅವಶ್ಯಕತೆ ಇದೆ ಎನ್ನಿಸಿ ಒಬ್ಬ ನರ್ಸ್ ಉಳಿದು ಮಿಕ್ಕವರು ಕಾಫಿಗಾಗಿ ಹೋಗಬಹುದೆಂದು ಅನಿಸಿತು. ತಾಯಿಯು ಹೊರಗೆ ಆತಂಕದಿಂದ ಕಾದಿರುವುದು ಅರಿವಿತ್ತು. ಸಾಮಾನ್ಯವಾಗಿ, ಮಕ್ಕಳ ಹಿರಿಯ ತಜ್ಞರು ಪೋಷಕರೊಂದಿಗೆ ವ್ಯವಹರಿಸುವುದು ವಾಡಿಕೆಯಾದ್ದರಿಂದ ಅವರಿಗಾಗಿ ಅರಸಿ ಕೇಳಿದೆ.  ”ಹ್ಹಾಂ, ನಾನು ಇಲ್ಲೆ ಇದ್ದೇನೆ. ನಿಮ್ಮ ಯೋಚನೆ ಸಮಂಜಸವಾಗಿದೆ. ಇವರೆಲ್ಲ ಕಾಫಿಗೆ ಹೋಗಲಿ ನಾನು ತಾಯಿಯೊಡನೆ ಮಾತಾಡುತ್ತೇನೆ” ಎಂಬುದಾಗಿ ಒಂದು ಹೆಣ್ಣು ಕಂಠ ಉಲಿಯಿತು. ಅತ್ತ ಕತ್ತು ಹೊರಳಿಸಿ ನೋಡಿದೆ. ಕಂಠದಷ್ಟೇ ಸುಂದರ ಭಾರತೀಯಳೆಂದು ಹೇಳಬಹುದಾದ ಮಕ್ಕಳ ತಜ್ಞೆ ನಿಂತಿದ್ದಳು. ತುಟಿಯ ಮೇಲೇ ತುಂಟ ಕಿರುನಗೆ- ಕೆನ್ನೆತುಂಬಾ ಕೆಂಡಸಂಪಿಗೆ. ನನಗಾದ ಆಶ್ಚರ್ಯ ಮುಖದ ಮೇಲೆ ತೋರಗೊಡದೆ ಆಕೆಯತ್ತ ಪ್ರಶ್ನಾರ್ಥಕ ದೃಷ್ಟಿ ಬೀರಲು, ”ಹಲೋ, ನಾನು ಕಿರಣ್ ಜೋಶಿ. ಪೀಡಿಯಾಟ್ರಿಕ್ಸ್ ಕಂನ್ಸಲ್ಟೆಂಟ್” ಎಂದು ಪರಿಚಯಿಸಿಕೊಂಡಳು. ಕೆಲಸದ ಆಯಾಸ ಪರಿಹಾರವಷ್ಟೆ ಅಗಲಿಲ್ಲ, ಹೊಸ ಹುಮ್ಮಸ್ಸೂ ಮೂಡಿ, ಆಯಾಚಿತವಾಗಿ ಕೈ ಚಾಚಿ ಹಸ್ತಲಾಘವ ಕೊಟ್ಟು ನನ್ನನೂ ಪರಿಚಯಿಸಿಕೊಂಡೆ.

ತಾನು ತಾಯಿಯೊಂದಿಗೆ ಮಾತನಾಡಿ ಬರುವುದಾಗಿ ಕಿರಣ ನರ್ಸ್ ಒಬ್ಬಳನ್ನು ಕರೆದುಕೊಂಡು ಹೋದಳು. ಉಳಿದವರು ಕಾಫಿಗೆ ಹೋದರು.ನನ್ನ ತಲೆ ಗಿರ್ರೆಂದು ತಿರುಗತೊಡಗಿತು.ನಾನು ಬಂದು ಮಗುವಿನ ಆರೋಗ್ಯ ಗಮನಿಸುವ ಗಡಿಬಿಡಿಯಲ್ಲಿ ಈಕೆಯನ್ನು ಗಮನಿಸಿರಲಿಲ್ಲ. ಎಂಥ ಆಕರ್ಷಕ ರೂಪ! ಅತಿ ಸುಂದರಿಯೆಂದೇನೂ ಅಲ್ಲ ಆದರೆ ಮತ್ತೊಮ್ಮೆ ನೋಡಬೇಕೆನ್ನುವಂಥದ್ದು. ಧ್ವನಿಯೂ ಸುಮಧುರ. ನನ್ನ ಇದುವರೆಗಿನ ಜೀವನದಲ್ಲಿ ಒಬ್ಬಳನ್ನು ಬಿಟ್ಟು ಕಿರಣ ಎನ್ನುವ ಹೆಸರಿನವರು ಅಂಥಾ ಛಾಪನ್ನೇನೂ ಉಳಿಸಿರಲಿಲ್ಲ – ಅದು ಮತ್ಯಾರೂ ಅಲ್ಲ ಕಿರಣ್ ಬೇಡಿ- ಬಿರು ಬೇಸಿಗೆಯ ಮದ್ಯಾಹ್ನದ ಸೂರ್ಯನ ಕಿರಣಗಳಂತೆ ಚುರ್ರೆನ್ನಿಸುವಂಥ ಕಿರಣ್ ಬೇಡಿ!!! ನಾನು ಚಂಡೀಗಢದ ಪ್ರತಿಷ್ಠಿತ ಅಸ್ಪತ್ರೆಯಲ್ಲಿ ಕಲಿಯುತ್ತಿದ್ದಾಗ ಆಕೆಯ ಸಂಪರ್ಕಕ್ಕೆ ಬಂದುದಿತ್ತು. ಹಾಗೆಂದು ನಾನೇನೂ ತಪ್ಪು ಮಾಡಿ ಆಕೆಯಿಂದ ಚುರುಕು ಮುಟ್ಟಿಸಿಕೊಂಡಿರಲಿಲ್ಲ. ಅವಳ ಹತ್ತಿರದ ಸಂಬಂಧಿಕರು ನಮ್ಮ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದು ಅವರನ್ನು ಕಾಣಲು ಅವಳಲ್ಲಿ ಬರುತ್ತಿದ್ದಳಷ್ಟೆ. ಈ ಕಿರಣ, ಮುಂಜಾನೆಯ ಸೂರ್ಯನ ಮುದ ನೀಡುವಂಥ ಅನುಭವ! ಬೆಳಗಿನ ಸಮಯ ಬೇರೆ. ಅವಳು ಬರುವುದನ್ನೇ ಕಾಯುತ್ತ ಮಗುವಿನ ಕಡೆಗೆ ದೃಷ್ಟಿ ಹಾಯಿಸುತ್ತ ಕಾಲ ಕಳೆದೆ. ಸ್ವಲ್ಪ ಸ್ವಲ್ಪ ಮಗುವು ಸುಧಾರಿಸುತ್ತಿತ್ತು.

ಸಹಜವಾಗಿಯೆ ಅವಳ ಬಗೆಗಿನ ನನ್ನ ಕುತೂಹಲ ಗರಿಗೆದರಿತ್ತು. ಹೇಗೆ ವಿಷಯ ಸಂಗ್ರಹಣೆ ಮಾಡಬೇಕೆಂದು ನನ್ನ ಮನಸ್ಸು ಪ್ರಶ್ನಾವಳಿಗಳ ತಾಲೀಮು ನಡೆಸುತ್ತಿತ್ತು. ಕಿರಣ ವಾಪಸ್ ಬಂದಳು. ತಾಯಿಗೆ ಎಲ್ಲ ವಿವರಿಸಿದ್ದಾಗಿಯೂ,ಮಗುವು ಸುಧಾರಿಸುವುದನ್ನು ತಿಳಿದು ಆಕೆ ಸಮಾಧಾನಗೊಂಡಿರುವುದಾಗಿಯೂ, ಬೇರೆ ಊರಿಗೆ ಮಗುವನ್ನು ಸಾಗಿಸುವ ಬಗೆಗೆ ಅಸಂತುಷ್ಟಳಾಗಿದ್ದಾಗಿಯೂ ಹೇಳಿದಳು.ನಾನು ಅದಕ್ಕೆ ಧನ್ಯವಾದ ತಿಳಿಸಿ ಆಂಬುಲನ್ಸ್ ಗೆ ನಾನು ಫೋನಾಯಿಸಲೋ ಅಥವ ನೀವೇ ಮಾಡುವಿರೋ ಎಂದೆ. ಎಲ್ಲಾ ನಿರ್ವಹಣೆ ನಿಮ್ಮದೇ ಆದ್ದರಿಂದ ನೀವೇ ಅವರೊಂದಿಗೆ ಮಾತನಾಡುವುದು ಉತ್ತಮ ಎಂದಳು. ಸರಿ ನೀವು ಮಗುವಿನ ಮೇಲೆ ನಿಗಾ ಇಡಿ ಎಂದು ಅವಳಿಗೆ ಮಗುವಿನ ಜವಾಬ್ದಾರಿ ಹಸ್ತಾಂತರಿಸಿ ನಾನು ಫೋನಾಯಿಸಲು ತೆರಳಿದೆ.

೧೦ ನಿಮಿಷಗಳ ನಂತರ ಎಲ್ಲ ಮುಗಿಸಿ ವಾಪಸ್ ಬಂದೆ. ನಮ್ಮ ಆಸ್ಪತ್ರೆಯಲ್ಲಿ ಮಕ್ಕಳ ತೀವ್ರ ನಿಗಾ ಘಟಕ ಇರದೆ ಇದ್ದುದರಿಂದ ಹತ್ತಿರದ ಆಸ್ಪತ್ರೆಗೆ ಮಗುವನ್ನು ವರ್ಗಾಯಿಸಬೇಕಿತ್ತು. ಆದಕ್ಕಾಗಿ ಆಂಬುಲನ್ಸ್ ಅವಶ್ಯಕತೆ ಇತ್ತು.
ಮಗುವಿನ ಪರಿಸ್ಥಿತಿ ಹಾಗೆ ಇತ್ತು. ಆಂಬುಲನ್ಸ್ ಬರಲು ಇನ್ನೂ ೨ ತಾಸು ಬೇಕಿರುವುದೆಂದೂ, ಅಲ್ಲಿಯ ವರೆಗೆ ಇಲ್ಲಿರುವುದು ಸೂಕ್ತವಲ್ಲವೆಂದೂ, ಮೇಲೆ ಆಪರೇಟಿಂಗ್ ಥಿಯೇಟರ್ ಆದರೆ ಅಲ್ಲಿ ವ್ಯವಸ್ಥೆ ಚೆನ್ನಾಗಿದ್ದು ಅಲ್ಲಿಗೆ ಮಗುವನ್ನು ಸಾಗಿಸಬೇಕೆಂದು ಕಿರಣಳಿಗೆ ಹೇಳಿದೆ. ಸರಿ. ಆದೂ ಒಳ್ಳೆ ಯೋಚನೆಯೆ ಎಂದು ಅನುಮೋದಿಸಿದಳು. ಕಾಫಿ ಕುಡಿದು ಬಂದ ನಂತರ ಮಾಡೋಣ ಎಂದಳು. ಸರಿ ಎಂದೆ.

ಎಲ್ಲಿಂದ ನನ್ನ ಸಂದರ್ಶನ ಶುರು ಮಾಡಲೆಂದು ನಾನು ಯೋಚಿಸುತ್ತಿರುವಾಗಲೇ ಆಕೆ, ಇತ್ತೀಚೆಗೆ ಈ ಅಸ್ಥಮಾ ರೋಗಿಗಳ ದಾಖಲಾತಿ ಹೆಚ್ಚಿದೆ ಎಂದೂ, ಇದು ಕಳೆದೆರೆಡು ದಿನಗಳಲ್ಲಿ ೧೦ ನೇ ರೋಗಿಯೆಂದೂ ಅದರೆ ಯಾರೂ ಇಷ್ಟೋಂದು ಗಂಭೀರ ಸ್ಥಿತಿಯಲ್ಲಿ ಬರಲಿಲ್ಲವೆಂದೂ ಹೇಳಿದಳು. ಮಾತಿಗೆ ವಸ್ತುಸಿಕ್ಕಂತಾಯಿತೆಂದು ನಾನು ಅದೂ ಇದೂ ಹರಟಿದೆ. ಹಾಗೇ ಅವಳ ಹಾವ ಭಾವಗಳನ್ನೂ ಗಮನಿಸುತ್ತಿದ್ದೆ. ಆಕರ್ಷಕ, ಆದರೆ ಸೌಮ್ಯ ಮುಖ. ಸುಂದರ ಕಣ್ಣುಗಳು ಹಾಗೂ ಪುಟ್ಟ ಬಾಯಿ. ಜಡೆ ಇತ್ತೆಂದು ಅನಿಸಿತು. ಮಾತನಾಡುವಾಗ ಕಂಡೂ ಕಾಣದಂತೆ ಕತ್ತು ಕೊಂಕಿಸುತ್ತಿದ್ದಳು ಅದು ಆಕೆಯ ಲಕ್ಷಣಕ್ಕೆಇನ್ನಷ್ಟು ಮೆರುಗು ನೀಡಿತ್ತು. ಮಾತಿನಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಯಾವ ಕೃತ್ರಿಮತೆಯೂ ನನಗೆ ಕಾಣಲಿಲ್ಲ. ಎಲ್ಲ ಸ್ವಾಭಾವಿಕವಾಗಿ ಬಂದಿರಬೇಕು. ಕರ್ಣ ಪಿಶಾಚಿಯನ್ನು ಶಪಿಸುತ್ತ ಮನೆಬಿಟ್ಟ ನನಗೆ ಈಗ ಅದನ್ನು ಅಭಿನಂದಿಸುವ ಮನಸ್ಸಾಗದೇ ಇರಲಿಲ್ಲ!! ಮ್ಮೀರ್ವರ ಮಧ್ಯದ ಮಂಜುಗಡ್ಡೆ ಸ್ವಲ್ಪ ಒಡೆದುದರ ಫಲವಾಗಿ ನಾನು ನನ್ನ ಮನಸ್ಸಿನಲ್ಲಿ ಕಟ್ಟಿಕೊಂಡಿದ್ದ ಪ್ರಶ್ನಾವಳಿಗಳ ಗಂಟು ಬಿಚ್ಚಿದೆ. ‘ನಾನು ಈ ಸ್ಪತ್ರೆಯಲ್ಲಿ ೫ ವರ್ಷಗಳಿಂದ ಇದ್ದೇನೆ. ನಿಮ್ಮನ್ನು ಕಂಡ ಹಾಗಿಲ್ಲವಲ್ಲ’ ಎಂದೆ. ”ಹೌದು ನಾನು ಇಲ್ಲಿ ಆರು ತಿಂಗಳಿನಿಂದ ಇದ್ದೇನೆ ” ಎಂದಳು. ನನಗೆನೋ ಗಂಟು ಕಳೆದುಕೊಂಡಂತಾಯಿತು. ಛೆ, ಇಷ್ಟು ದಿನ ಸುಮ್ಮನೆ ದಂಡವಾಯಿತಲ್ಲ ಎಂದೆನ್ನಿಸದೆ ಇರಲಿಲ್ಲ. ಈಗಲೆ ಇವಳ ಪೂರ್ವಾಪರಗಳನ್ನು ಕೋಳಿಯಂತೆ ಕೆದಕುವುದು ಬೇಡವೆಂದು, ಕೆಲಸ ಹೇಗಿದೆ ಇಲ್ಲಿ , ಆಕೆಯ ಜಾಬ್ ಪ್ಲಾನ್ ಹೇಗೆ, ಮ್ಮಾಸ್ಪತ್ರೆಯ ಆರ್ಥಿಕ ಮುಗ್ಗಟ್ಟು, ಎಲ್ಲ ಬ್ರಿಟಿಷರೂ ಮಾಡುವಂತೆ ಹೊರಗಿನ ವಾತಾವರಣ, ಇನ್ನೂ ಮಳೆ ಬಿಡದಿರುವುದು ಹೀಗೆ ಮುಂತಾದ ನನ್ನ       ‘‘ ಕೆಲಸಕ್ಕ“ ಬಾರದ ಮಾತುಕತೆಯಾಡುತ್ತಿದ್ದೆ. ಮಗು ಪರಿಸ್ಥಿತಿ ಹಾಗೆ ಇತ್ತು. ಉಳಿದ ವಿಷಯಗಳನ್ನು ಕಾಫಿಗೆ ಹೋದಾಗ ಕೆದಕಿದರಾಯ್ತೆಂದು ಸುಮ್ಮ್ಮನಾದೆ. ನರ್ಸ್ ಅಲ್ಲೆಲ್ಲ ಒಪ್ಪಗೊಳಿಸುವುದರಲ್ಲಿ ಮಗ್ನಳಾಗಿದ್ದಳು.

ಕಾಫಿಗೆ ಹೋದ ತಂಡ ವಾಪಸ್ ಬಂತು. ಅವರೆಲ್ಲರಿಗೆ ಇಲ್ಲಿಯವರೆಗಿನ ಬೆಳವಣಿಗೆ ವಿವರಿಸಿ, ಅಗತ್ಯವಾಗಿ ಏನು ಮಾಡಬೇಕೆಂದು ಹೇಳಿ, ಥಿಯೇಟರ್ ಗೆ ಸಾಗಿಸುವ ಯೋಚನೆ ವಿವರಿಸಿ ಅದಕ್ಕಾಗಿ ಏನು ಸಿದ್ಧತೆ ಬೇಕೆಂದೂ ತಿಳಿಸಿ, ನಾನು ಹಾಗೂ ಕಿರಣ ಕಾಫಿಗೆ ಹೋಗುವುದಾಗಿಯೂ, ನಾದರೂ ಬೇಕಾದಲ್ಲಿ ಕರೆ ಮಾಡಬಹುದೆಂದೂ ತಿಳಿಸಿ ಕಿರಣಳನ್ನು ಆಹ್ವಾನಿಸಿದೆ. ತನಗೂ ಕಾಫಿಯ ಅವಷ್ಯಕತೆ ಇರುವುದಾಗಿ ಹೇಳಿ ಹೊರಟುಬಂದಳು.

ಅವಳೊಡನೆ ಕಾಫಿ ಲೌಂಜಿಗೆ ಹೊರಟ ನನಗೆ ಮುಂಜಾನೆಯ ಸೂರ್ಯನ ಕಿರಣಗಳಡಿಯಲ್ಲಿ ವಾಯುವಿಹಾರ ಮಾಡಿದಷ್ಟೇ ಖುಷಿಯಾಗುತ್ತಿತ್ತು!
ಆ ಜಾಗ ಆಕೆಗೆ ಹೊಸದಾದ್ದರಿಂದ, ನಾನೆ ಕಾಫಿ ಬೆರೆಸಿ ಕೊಟ್ಟು ಆಕೆಯ ಎದುರಿನ ಸೊಫ಼ಾದಲ್ಲಿ ಕುಳಿತು ಒಂದೆರೆಡು ಗುಟುಕು ಕುಡಿದು ನಂತರ ಹಿಂದೊರಗಿ ಕಣ್ಣುಮುಚ್ಚಿ ದೊಡ್ಡ ನಿಟ್ಟುಸಿರು ಬಿಟ್ಟೆ.

ಕಾಫಿಯನ್ನೂ ಎಮೆರ್ಜೆನ್ಸಿ ನಿಭಾಯಿಸಿದಷ್ಟೆ ಚೆನ್ನಾಗಿ ಮಾಡುತ್ತೀರೆಂದಳು! ನಾನು ಕಣ್ಣುಬಿಟ್ಟು ಅವಳಕಡೆಗೆ ನೋಡಿದೆ. ಕಾಫಿ ಹೀರುತ್ತಿದ್ದಳು. ಯಾವ ಕೃತ್ರಿಮತೆಯು ನನಗೆ ಕಾಣಲಿಲ್ಲ.
‘ನಿಮ್ಮ ಕಾರ್ಯ ವೈಖರಿ ತುಂಬಾ ಚೆನ್ನಾಗಿತ್ತು, ಐ ವಾಸ್ ವೆರಿ ಇಂಪ್ರೆಸ್ಸ್ಡ್’ ಎಂದಳು. ಥ್ಯಂಕ್ಸ್ , ಆದರೆ ಏಕೆ ಎಂದೆ. ‘ಯಾವುದೇ ಉದ್ವೇಗಕ್ಕೊಳಗಾಗದೆ, ಎಲ್ಲರನ್ನು ಒಳಗೊಂಡು ,ಯಾವ ಡ್ರಾಮಾ ಮಾಡದೆ ನಿಭಾಯಿಸಿದಿರಿ’ ಎಂದಳು. ಹೊಗಳಿಕೆಗೆ, ಅದರಲ್ಲು ಒಬ್ಬಳು ಸುಂದರಿ ಹೇಳಿದರೆ! ನಾನು ಉಬ್ಬಿದೆ.
ನೀವು ಎಲ್ಲಿ ತರಬೇತಿ ಪಡೆದಿದ್ದು ಎಂದದ್ದಕ್ಕೆ, ತಾನು ಇದೇ ಪ್ರ್ಯಾಂತ್ಯದಲ್ಲಿ ತರಬೇತುಗೊಂಡವಳೆಂದೂ, ಕೆಲಸಕ್ಕಾಗಿ ಬಹಳ ಕಷ್ಟ ಪಟ್ಟಳೆಂದೂ, ಕಡೆಗೆ ಇಲ್ಲಿ ಸೇರಿದ್ದೆಂದು ಹೇಳಿದಳು. ‘ನೀವು ಭಾರತದಿಂದ ಬಂದವರಿರಬೇಕು’ ಎಂದೆ. ತಾನು ಕರ್ನಾಟಕದವಳೆಂದು, ನನ್ನ ಕಾಲೇಜಿನಲ್ಲೆ ಕಲಿತಳೆಂದೂ, ಎಮ್ ಬಿ ಬಿ ಎಸ್ ಮಾಡುವಾಗ ನನ್ನನ್ನು ನೋಡಿದ್ದಳೆಂದೂ, ನನಗಿಂತ ೩ ವರ್ಷ ಚಿಕ್ಕವಳೆಂದೂ , ಈ ಆಸ್ಪತ್ರೆಯಲ್ಲಿ ನನ್ನನ್ನು ಈ ಮೊದಲೆ ತಾನು ಕಂಡಿದ್ದಾಗಿಯೂ, ಆದರೆ ಮಾತನಾಡಿಸಲು ಸಾಧ್ಯವಾಗದೆ ಸುಮ್ಮನಾಗಿದ್ದಳೆಂದೂ ಹೇಳಿದಳು. ಕ್ಷಣ ಕ್ಷಣಕ್ಕೂ ನನ್ನನು ಒಂದಿಲ್ಲೊಂದು ಬಲೆಯಲ್ಲಿ ಬೀಳಿಸುತ್ತಲೇ ಇದ್ದಳು!

ನಾನು ಆಶ್ಚರ್ಯ ತೋರಿಸುತ್ತ ,’ನಾನೇನೂ ಕಾಲೇಜಿನಲ್ಲಿ ಅಂಥ ದೊಡ್ಡ ಹೀರೋ ಆಗಿರಲಿಲ್ಲ ಬಿಡಿ’ ಎಂದೆ. ಆದಕ್ಕೆ, ‘ಇಲ್ಲ,ನೀವು ಒಮ್ಮೆ ‘ ಕೆಂಪು ಗುಲಾಬಿಯ ಕೆನ್ನೆಯ ಚೆಲುವೇ‘ ಹಾಡಿದ್ದಿರಲ್ಲ, ಆಗ ನಾನೂ ಇದ್ದೆ ಎಂದಳಲ್ಲದೆ, ಆ ನಂತರವೂ ಹಲವಾರು ಬಾರಿ ಕಾಲೇಜಿನಲ್ಲಿ ನನ್ನನ್ನು ನೋಡಿದ್ದಾಗಿ ಹೇಳಿದಳು. ‘ಹಾಗಾದರೆ ನಿಮಗೆಂದೇ ಹಾಡಿದ್ದೆನೆಂದು ಕಾಣುತ್ತದೆ ಬಿಡಿ’ ಎಂದು ಚಟಾಕಿ ಹಾರಿಸಿದೆ. ಸುಂದರವಾಗಿ ನಕ್ಕಳು.

ತಮ್ಮ ತಂದೆ ತಾಯಿ ಬೆಂಗಲೂರಿನಲ್ಲೆ ಇರುವುದಾಗಿಯು ತಾನು ಇಲ್ಲಿಗೆ ೨೦ ಮೈಲಿ ದೂರದ ಊರಿನಿಂದ ಓಡಾಡುತ್ತಿರುವುದಾಗಿಯೂ, ಆನ್ ಕಾಲ್ ಇದ್ದಾಗ ಇಲ್ಲೆ ಅಸ್ಪತ್ರೆಯ ಹಾಸ್ಟೆಲ್ ನಲ್ಲಿ ತಂಗುವುದಾಗಿಯು ಹೇಳಿದಳು. ಸರಿ ನನಗೆ ಮದುವೆಯಾಗಿ  ಮಕ್ಕಳಿವೆಯೆಂದೂ, ಮನೆಯಿಲ್ಲೆ ೨ ಮೈಲಿ ದೂರದಲ್ಲಿದೆಯೆಂದೂ ಹೇಳಿಕೊಂಡೆ.ಉದ್ದೇಶ ನಿಮ್ಮ ಕಥೆ ಹೇಗೆ ಎಂಬುದನ್ನು ಕೆದಕುವುದೇ ಅಗಿತ್ತು. ತಾನು ಇನ್ನೂ ಒಂಟಿ ಎಂದೂ, ಮದುವೆ ಆಗಿಲ್ಲವೆಂದೂ, ಮನೆಯಲ್ಲಿ ಸಧ್ಯಕ್ಕೆ ತಾನೊಬ್ಬಳೆ ಇರುವುದೆಂದೂ,ಆಗಾಗ್ಗೆ, ಅಪ್ಪ ಅಮ್ಮ ಬಂದು ಹೋಗಿ ಮಾಡುವರೆಂದೂ ಹೇಳಿದಳಾದರೂ, ಎಲ್ಲೊ ಒಂದು ಖೇದದ ಎಳೆ ಇದೆಯೆಂದು ಅನ್ನಿಸಿತು. ಮೊದಲ ದಿನವೇ ಕೆದಕಿ ಮುಜುಗರಗೊಳಿಸುವುದು ಬೇಡವೆಂದು ಬೇರೆಡೆಗೆ ಮಾತು ಹೊರಳಿಸಿದೆ. ನ್ನೊಂದು ಕಪ್ಪು ಕಾಫಿ ತನಗೂ ನನಗೂ ಈ ಸಾರಿ ಅವಳೇ ಬೆರೆಸಿ ಕೊಟ್ಟಳು. ಕುಡಿದು ಮತ್ತೆ ತುರ್ತು ವಿಭಾಗಕ್ಕೆ ಬಂದೆವು. ಎಲ್ಲ ತಯಾರಾಗಿತ್ತು. ಮಗುವನ್ನು ಮೇಲಿನ ಮಜಲಿನ ಥಿಯೇಟರ್ಸ್ ಗೆ ಒಯ್ದು ಅಲ್ಲಿ ನಿಗಾ ವಹಿಸಲು ವ್ಯವಸ್ಥೆ ಮಾಡಿದೆವು. ನನ್ನ ಕೋಟು ಹಾಗೂ ಅವಳದ್ದನ್ನು ಅಲ್ಲಿದ್ದ ಒಂದೇ ಹ್ಯಂಗರಿಗೆ ಕಿರಣಳೆ ನೇತು ಹಾಕಿದಳು.ಮತ್ತೊಮ್ಮೆ ಎಲ್ಲ ವ್ಯವಸ್ಥೆಯನ್ನು ಪರಿಶೀಲಿಸಿದೆವು. ಮಗುವಿನ ಪರಿಸ್ಥಿತಿ ಸ್ಥಿಮಿತದಲ್ಲಿತ್ತು. ಯಾವುದೇ ಏರು ಪೇರುಗಳಿಲ್ಲದೆ ಸಮಾಧಾನಕರವಾಗಿತ್ತು.ಇನ್ನೇನಿದ್ದರೂ ಆಂಬುಲನ್ಸ್ ಬರುವ ವರೆಗೆ ಕಾಯುವುದಷ್ಟೇ ನಮ್ಮ ಕೆಲಸವಾಗಿತ್ತು. ಆದನ್ನು ಯಾರಾದರೂ ಒಬ್ಬರು ಮಾಡಬಹುದಾಗಿದ್ದರಿಂದ ನಾನು ಇಲ್ಲಿ ಇರುತ್ತೇನೆಂದೂ ನಿಮ್ಮ ಕೆಲಸ ಬೇರೇನಾದರೂ ಇದ್ದರೆ ಮುಗಿಸಬಹುದೆಂದೂ ಕಿರಣಳಿಗೆ ಹೇಳಿದೆ. ತಾನು ವಾರ್ಡ್ರೌಂಡ್ ಮುಗಿಸಿ ಬರುವುದಾಗಿ ಹೇಳಿ ಹೋದಳು. ರಾತ್ರಿ ಪಾಳಿಯ ಡಾಕ್ಟರ್ ಗಳು ಹೋಗಿ ಬೆಳಗಿನ ಪಾಳಿಯವರು ಬಂದಿದ್ದರು. ಅವರಿಗೆ ತ್ಂತಮ್ಮ ಕೆಲಸ ನೋಡಲು ಹೇಳಿ ಮಗುವಿನ ಬಳಿಯಲ್ಲಿ ಕುಳಿತೆ.

ನರ್ಸ್, ಹನುಮಂತನ ಬಾಲದಂಥ ಉದ್ದನೆಯ ಪಟ್ಟಿಯನ್ನು ಹಿಡಿದು ಬಂದಳು. ನಿನ್ನೆಗಿಂತಲೂ ಹೆಚ್ಚು ರೋಗಿಗಳು ಶಸ್ತ್ರಚಿಕಿತ್ಸೆಗಾಗಿ ಕಾದಿದ್ದರು. ತಂತಮ್ಮ ಕೇಸುಗಳನ್ನು ಮೊದಲು ಮಾಡಬೇಕೆಂದು ಅವಳ ಮೇಲೆ ಒತ್ತಡ ಹೇರುತ್ತಿದ್ದರೆಂದು ಕಾಣುತ್ತದೆ. ಆಕೆಗೆ ಸಹಜವಾಗಿಯೆ ದುಗುಡವಾಗಿತ್ತು. ಒಮ್ಮೆ ನಾನು ಬಿಡುವಾದ ನಂತರದಲ್ಲಿ ಸಮಾನಾಂತರವಾಗಿ ಇನ್ನೊಂದು ಥಿಯೇಟರ್ ನಡೆಸೋಣವೆಂದು ಹೇಳಿ, ಸರ್ಜನ್ ಗಳೊಂದಿಗೆ ಸಮಾಲೋಚಿಸಿ ಆದ್ಯತೆಯ ಪಟ್ಟಿ ಮಾಡಿ ಆಕೆಗೆ ಕೊಟ್ಟು ಯಾರಾದರೂ ಗಲಾಟೆ ಮಾಡಿದರೆ ನನ್ನ ಬಳಿ ಕಳಿಸಬೇಕೆಂದು ಧೈರ್ಯ ಕೊಟ್ಟು ಕಳಿಸಿದೆ. ಕಡೆಗೂ ಆಂಬುಲನ್ಸ್ ಬಂದು ಮಗುವನ್ನು ಅವರ ವಶಕ್ಕೆ ಒಪ್ಪಿಸಿ ನಾನು ಹೊರಬಂದೆ.

ನರ್ಸ್ ಬಳಿಹೋಗಿ ನನಗೆ ಅರ್ಧಘಂಟೆ ಸಮಯ ಬೇಕೆಂದೂ, ಇಲ್ಲೆ ಸ್ನಾನ ಮುಗಿಸಿ ಬರುವುದಾಗಿ ಹೇಳಿ ನಡೆದೆ.ನನ್ನ ಹಾಗೂ ಕಿರಣಳ ಕೋಟು ಅಲ್ಲೇ ಇದ್ದವು. ನಾನು ವಾಪಸು ಬರುವಷ್ಟರಲ್ಲಿ ಕಿರಣ ತನ್ನ ಕೋಟು ತೆಗೆದುಕೊಂಡು ನನ್ನದನ್ನು ನೀಟಾಗಿ ಹ್ಯಾಂಗರಿಗೇರಿಸಿ ಹೋಗಿದ್ದಳು. ನನ್ನ ಪೆನ್ ತೆಗೆಯಲು ಜೇಬಿಗೆ ಕೈ ಹಾಕಿದೆ. ಅರೆ, ಕರ್ಚೀಫ಼ು. ನಾನೆಂದೂ ಕರವಸ್ತ್ರ ಇಟ್ಟವನಲ್ಲ. ಇದು ಇಲ್ಲಿಗೆ ಹೇಗೆ ಬಂತು. ಕಿರಣಳದ್ದೇ ಇರಬೇಕು. ನನ್ನ ಜೇಬಿನಲ್ಲಿ ಯಾಕೆ? ಹೇಗೆ? ಉದ್ದೇಶಪೂರ್ವಕವೋ ಅಥವ ತಿಳಿಯದೆ ಬಿದ್ದಿದೆಯೋ ತಿಳಿಯದೆ,ಸಂತೋಷ, ಆಶ್ಚರ್ಯ, ಸೋಜಿಗ ಎಲ್ಲ ರೀತಿಯ ಭಾವನೆಗಳು ಬಂದು ಹೋದವು. ಆಮೇಲೆ ಕರೆ ಮಾಡಿ ಹಿಂತಿರುಗಿಸಿದರಾಯಿತು, ಆ ನೆಪದಲ್ಲಿ ಅವಳನ್ನು ಮತ್ತೆ ಭೇಟಿಯಾಗಬಹುದೆಂದು ಎಣಿಸಿದೆ. ಈ ಮದ್ಧ್ಯೆ ಅರೆ, ಒಂಟಿ ಹುಡುಗಿ, ಕನ್ನಡದವಳು, ಮನೆಗೆ ಊಟಕ್ಕಾದರೂ ಕರೆಯಬಹುದಿತ್ತು; ನನಗೆ ಹೊಳೆಯಲೇ ಇಲ್ಲ. ಮೊಬೈಲ್ ನಂಬರ್ ಕೇಳೊಣವೆಂದು ಅನ್ನಿಸಿತ್ತು. ಒಂಟಿ ಹುಡುಗಿ, ಮೊದಲ ಪರಿಚಯ, ಏನೆಂದುಕೊಂಡಾಳೋ ಎಂದು ಸುಮ್ಮನಾಗಿದ್ದೆ. ಈಗ ಹೊರಟುಹೋಗಿದ್ದಳು. ಆಮೇಲೆ ನೊಡಿದರಾಯ್ತು ಎಂದು ಉಳಿದ ಕೆಲಸದ ಕಡೆ ಗಮನ ಹರಿಸಿದೆ. ಕರ್ಚೀಫ಼ು ನನ್ನ ಎದೆಯ ಮುಂದಿನ ಜೇಬಿನಲ್ಲಿ ಭದ್ರವಾಗಿತ್ತು.

ಅಂದು ಕೂಡಾ ಪೂರ್ತಿ ದಿನ , ಮಧ್ಯ ರಾತ್ರಿ ವರೆಗೂ ಕೆಲಸ ಮುಗಿಸಿ ಮನೆಗೆ ಬಂದೆ. ಮರುದಿನ ರಜಾ. ಮಂಗಳವಾರ ನನಗೆ ಬರೀ ಆಫೀಸ್ ಕೆಲಸ ಇತ್ತು. ಒಂದಿಬ್ಬರು ವಿದ್ಯಾರ್ಥಿಗಳನ್ನು ಭೇಟಿಯಾಗುವುದಿತ್ತು. ಹೆಚ್ಚಿನ ಕೆಲಸ ಇರದ ಕಾರಣ ನಾನು ಕಿರಣಳನ್ನು ಕಾಣಲು ಮಕ್ಕಳ ವಿಭಾಗಕ್ಕೆ ಹೋದೆ. ಅಲ್ಲಿ ಅವಳ ಕಚೇರಿ ಕೋಣೆ ಯಾವುದೆಂದು ವಿಚಾರಿಸಲು, ಆ ವಾರ್ಡ್ ನ ಮೇಲ್ವಿಚಾರಕಿ ಬಂದು ಕಿರಣಳು ಇಲ್ಲಿ ಆರು ತಿಂಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದಳೆಂದೂ, ಆಕೆಯ ಸೇವಾವಧಿ ನೆನ್ನೆಗೆ ತೀರಿತೆಂದೂ, ವಾಪಸ್ ಹೋಗಿರಬಹುದೆಂದೂ ಹೇಳಿ ’ ಸಾರಿ ’ ಎಂದಳು. ಆಕೆಯ ಸ್ಸಾರಿ ಗೆ ನನ್ನ ಒಂದು ನಿಟ್ಟುಸಿರೂ ಸೇರಿ ಭಾರವಾಗಿ ಹೊರಬಂತು., ನೀನಲ್ಲಮ್ಮ ಸ್ಸಾರಿ, ನಾನು ಸ್ಸಾರಿ ಎಂಬುದಾಗಿ ಹೇಳಿ ಮನಸಿನಲ್ಲಿ ಕಸಿವಿಸಿ ಅನುಭವಿಸಿ, ಭಾರವಾದ ಹೆಜ್ಜೆ ಇಡುತ್ತ ವಾಪಸ್ ನಡೆದೆ. ಒಂದು ರೀತಿಯ ಶೂನ್ಯ ನನ್ನನ್ನು ಆವರಿಸಿದಂತಿತ್ತು. ಏನೋ ಕಳೆದುಕೊಂಡ ಭಾವ. ಆಕೆಯ ಸ್ನೇಹ ಇರಬಹುದು, ಮುಗುಳ್ನಗೆಯ ಮುಖವಿರಬಹುದು, ಮನಮೋಹಕ ಹಾವ,ಭಾವಗಳಿರಬಹುದು, ಇಂಪು ದನಿ ಇರಬಹುದು. ಸ್ಪಷ್ಟವಾಗಿ ಹೇಳಲಾರೆ. ಆಕೆ ನಾನು ಕೇಳಿದಷ್ಟಕ್ಕೆ ಉತ್ತರ ಕೊಟ್ಟಿದ್ದಳು. ಸುಳ್ಳೇನೂ ಹೇಳಿರಲಿಲ್ಲ, ವಿಷಯ ಉದ್ದೆಶಿತವಾಗಿ ಮರೆಮಾಚೂ ಇರಲಿಲ್ಲ. ಈಗ ಹೋಗಿಬಿಟ್ಟಿದ್ದಳು.

ನನ್ನ ಕಚೇರಿ ಕಡೆಗೆ ಹೆಜ್ಜೆ ಹಾಕತೊಡಗಿದೆ. ಚರ ದೂರವಾಣಿಯೆಂಬ ಕರ್ಣಪಿಶಾಚಿ ಮತ್ತೆ ಹಾಡತೊಡಗಿತು.
ಮೇರೇ ನಸೀಬು ಮೆ ತೂ ಹೈ ಕಿ ಎ ನಹಿ
ತೇರೇ ನಸೀಬು ಮೆ ಮೈ ಹೂ ಕಿ ಎ ನಹೀ!!
ಒಂದಲ್ಲ ಎರೆಡೆರೆಡು ಬಾರಿ ಹಾಡಿ ಸುಮ್ಮನಾಯಿತು. ಅದರ ಮೂತಿ ತಿವಿಯುವ ಗೊಡವೆಗೆ ನಾ ಹೋಗಲಿಲ್ಲ.