ಬೆಕ್ಕಿನ ಬಾಣಂತನ ಆಕೆಯ ಹೆಸರು ಐಶ್ವರ್ಯ! ಮನೆಯ ಹತ್ತಿರವಿದ್ದ ಫಾರೆಸ್ಟ್ ಡಿಪೋ ದಾರಿಯಿಂದ ಹಾದು ಬರುತ್ತಿದ್ದಾಗ ನನ್ನ ಗೆಳತಿ ಮಂಗಲಾ ನನ್ನ ಕರೆದು. 'ಅಮಿತಾ ನಿನಗೆ ಬೆಕ್ಕಿನ ಮರಿ ಬೇಕಾ?' ಎಂದು ಕೇಳಿದಳು. ಬೆಕ್ಕು, ನಾಯಿ ಎಂದರೆ ನಮ್ಮ ಜನ್ಮದ ಬಂಧುಗಳು. ಅವರನ್ನು ಬೇಡ ಎಂದು ಹೇಳಿ ನಾನ್ಯಾವ ನರಕ ನೋಡಲಿ?
ಮನೆಯಲ್ಲಿ ಬೆಕ್ಕಿನ ಮರಿ ಇತ್ತಾದರೂ, ಮಂಗಲಾ ತೋರಿಸಿದ ಆ ಪುಟ್ಟ ಪುಟಾಣಿ ಮುದ್ದಿನ ಸೊಕ್ಕನ್ನ ನೋಡಿದ ಮೇಲೆ ಇಲ್ಲವೆನ್ನಲು ಆಗಲೇ ಇಲ್ಲ. ದಪ್ಪ ಬಾಲದ ಉದ್ದ ರೋಮಗಳ ಆ ಬೆಕ್ಕಿನ ಮರಿಯನ್ನ ಎತ್ತ್ಕೊಂಡ್ ಬಂದುಬಿಟ್ಟೆ.
ಆದರೆ ಈ ವಿಷಯವನ್ನು ಮನೆಯಲ್ಲಿ ಅಮ್ಮನ ಎದುರು ಹೇಳುವ ಧೈರ್ಯ ನಮ್ಮಲ್ಲಿ ಯಾರಿಗೂ ಇರ್ಲಿಲ್ಲ. ಈ ಸಾಕು ಪ್ರಾಣಿ ವಿಷಯದಲ್ಲಿ ನನ್ನ ಅಮ್ಮನಿಗೆ ಅವಳದೇ ಆದ ಕೆಲವು ನಿಲುವು, ನಿಯಮಗಳಿದ್ದವು, ಈಗಲೂ ಆಕೆ ಅವನ್ನೆಲ್ಲ ಹಾಗೆಯೇ ಪಾಲಿಸಿಕೊಂಡು ಬಂದಿದ್ದಾಳೆ. ಆಕೆಯ ಪ್ರಕಾರ ಸಾಕು ಪ್ರಾಣಿಗಳನ್ನು ಪ್ರಾಣಿಗಳಂತೆಯೇ ನೋಡಬೇಕು, ಅವನ್ನು ಮನುಷ್ಯರಂತೆ ಒಳಮನೆ, ಅಡುಗೆಮನೆ, ಹಾಸಿಗೆ ತನಕ ಕರೆದೊಯ್ದು ಮುದ್ದು ತೋರಿಸುವ ಅಗತ್ಯ ಇಲ್ಲ. ನೀವು ಹಾಸಿಗೆ ಕೊಡಿ, ಗೋಣಿಚೀಲ ಕೊಡಿ ಅವಕ್ಕೆ ಎರಡೂ ಒಂದೇ! ಎಂದು ವಾದ ಮಂಡಿಸುವ ನನ್ನ ಅಮ್ಮ, ಕೊಟ್ಟಿಗೆಯಲ್ಲಿದ್ದ ಬೆಳ್ಳಿ ಭಾಮು, ಪುಟ್ಟಿ, ಆದಿ ಎಂಬ ನಾಮಾಂಕಿತ ಗೋವುಗಳ ಜೊತೆಗೆ ಗಂಟೆಗಟ್ಟಲೆ ಏಕಮುಖ ಸಂವಹನ ನಡೆಸುತ್ತಿದ್ದಳಾದರೂ, ಬೆಕ್ಕು, ನಾಯಿಗಳ ನೆರಳೂ ಆಕೆಗೆ ಆಗುತ್ತಿರಲಿಲ್ಲ.
ಇಂತಿಪ್ಪ ನನ್ನ ಅಮ್ಮನ ಸಮ್ಮುಖ ಈ ಹೊಸ ಬೆಕ್ಕನ್ನು ತಂದಿದ್ದನ್ನು ಅರುಹಿ ಸಂಭಾಳಿಸೋದು ಯಾರು ಎಂಬುದು ನಮ್ಮ ಮುಂದಿದ್ದ ದೊಡ್ಡ ಪ್ರಶ್ನೆಯಾಗಿತ್ತು. ಜೊತೆಗೆ ಮನೆಯಲ್ಲಿ ಅದಾಗಲೇ ಗಿಳ್ಳಿ ಎಂಬ ಹಿಂದೆಂದೂ ಒಂದೂ ಇಲಿ ಹಿಡಿಯದ ಬೆಕ್ಕು ಒಲೆಯ ಹಿಂದೆ, ಕೆಲವೊಮ್ಮೆ ಬೆಚ್ಚಗಿನ ಬೂದಿಯ ಮೇಲೆ ಮಲಗಲೆಂದು ಒಲೆಯನ್ನು ಕೆದರಿ ಹಾಕಿ ಅಮ್ಮನ ಕೋಪ ಕಟಾಕ್ಷಕ್ಕೆ ಆಗಾಗ್ಯೆ ಗುರಿಯಾಗುತ್ತಿತ್ತು.
ಅಡಿಗೆ ಕೊಣೆಯಲ್ಲಿ ಓಡಾಡೋ ಅದನ್ನು ಅಮ್ಮ ಎಲ್ಲ ರೀತಿಯಿಂದಲೂ ಹೀಯಾಳಿಸುತ್ತಿದ್ದರೆ ಅದು ಮಾತ್ರ ನನಗೂ ಈ ಬೈಗುಳಿಗೂ ಯಾವ ಸಂಬಂಧ ಇಲ್ಲ ಸರ್ ನಾ ತುಂಬಾ ಒಳ್ಳೆಯವನು ಎನ್ನುತ್ತಾ ಚಕ್ಕುಲಿಯಾಗಿ ಮತ್ತೂ ಗಾಢ ನಿದ್ದೆ ಮಾಡುತ್ತಿತ್ತು.
ಹೀಗೆ ಹೊತ್ತಲ್ಲದ ಹೊತ್ತಲ್ಲಿ ಮತ್ತೊಂದು ಬೆಕ್ಕು ತಂದು ಮನೆಗೆ ಸೇರಿಕೊಳ್ಳುವ ಬಯಕೆ ಆದಾಗಲೆಲ್ಲ ನಮ್ಮದೊಂದು ಪುಟ್ಟ ಡ್ರಾಮಾ ಟೀಂ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿತ್ತು. ಅಮ್ಮ ಒಬ್ಬಳು ಬಿಟ್ಟು ಇನ್ನುಳಿದವರಿಗೆಲ್ಲ ಅವರವರ ಪಾತ್ರ, ಸಂಭಾಷಣೆ ನೀರು ಕುಡಿದಷ್ಟೇ ಸರಳವಾಗಿ ರೂಢಿಯಾಗಿತ್ತು.
ಹಿತ್ತಲ ಬಾಗಿಲಿಂದ ಬೆಕ್ಕನ್ನು ಒಳಗೆ ಬಿಟ್ಟು, ಮುಂದಿನ ಪಡಸಾಲೆಯಲ್ಲಿ ಏನೇನೂ ಗೊತ್ತಿಲ್ಲದವರಂತೆ ಬಂದು ಕೂತು ಬಿಡುತ್ತಿದ್ದೆವು. ಮನೆಗೆ ಬೆಕ್ಕು ತಾನಾಗೇ ಬಂದು ಸೇರಿದರೆ ಒಳ್ಳೇದು ಎಂದು ಅಮ್ಮನಿಗೆ ಅವರಮ್ಮ ಅದ್ಯಾವುದೋ ಕಾಲದಲ್ಲಿ ಹೇಳಿದ ಮಾತನ್ನು, ಅದ್ಯಾವುದೋ ಒಂದು ಗಳಿಗೆಯಲ್ಲಿ ನಮ್ಮ ಮುಂದೆ ಹೇಳಿದ್ದೇ ತಪ್ಪಾಗಿತ್ತು. ನಾವು ಹೀಗೆ ಹಿತ್ತಲ ಬಾಗಿಲಿನಿಂದ ಮನೆಗೆ ಸೇರಿಸಿ ತಾನಾಗೇ ಬೆಕ್ಕು ಬಂತು ಎಂದಾಗ ಉಪಾಯ ಇಲ್ಲದೆ ಪಾಪದ ನನ್ನಮ್ಮ, ಅವರಮ್ಮನ ಮಾತನ್ನು ನೆನೆದು, ಬೆಕ್ಕನ್ನು ಒಲ್ಲದ ಮನಸಲ್ಲೇ ಆದರೂ ಒಳಗೆ ಸೇರಿಸಿಕೊಳ್ಳಲೇ ಬೇಕಾಗುತ್ತಿತ್ತು.
ಆಮೇಲೆ ಬೆಕ್ಕಿನ ತಲೆಗೆ ಸ್ವಲ್ಪ ತೆಂಗಿನ ಎಣ್ಣೆ ಸವರಿ ಅಡಿಗೆ ಒಲೆಯ ಸುತ್ತ ೩ ಬಾರಿ ಅದನ್ನ ಹಿಡಿದು ತಿರುಗಿಸಿದರೆ ಆ ದಿನದಿಂದ ಅದು ನಮ್ಮ ಬೆಕ್ಕು.
ಹಾಗೆ ಬಂದ ನಂತರ ಅದಕ್ಕೆ ನಾಮಕರಣವೂ ಆಗಬೇಕಲ್ಲ. ಸಾಮಾನ್ಯವಾಗಿ ಯಾವ ದಿನ ತಂದಿದ್ದೆವೋ ಆ ವಾರದ ಹೆಸರಿನ ಆರಂಭದ ಅಕ್ಷರದಲ್ಲೇ ಹೆಸರಿಡೋದು ನಮ್ಮ ಮನೆಯ ಅಲಿಖಿತ ನಿಯಮ. ಆದರೆ ಈ ಬಾರಿ ಆ ಬೆಕ್ಕಿನ ಮರಿಯ ಅದಾ,ನಜಾಕತ್, ನೋಡಿ ಅದಕ್ಕೆ ಐಶ್ವರ್ಯ ಅನ್ನೋ ಹೆಸರಿಟ್ಟಿದ್ದೆವು. ಆಕೆ ನಾವು ಆ ತನಕ ನೋಡಿದ, ನಮ್ಮ ಮನೆಯಲ್ಲಿ ಸಾಕಿದ ಬೆಕ್ಕುಗಳಲ್ಲಿ ಚಂದ ರೂಪಿನವಳು. ಜಗದೇಕ ಸುಂದರಿ
ಹಾಗೆ ಬಂದು ಮನೆ ಸೇರಿದ ‘ಬಿಲ್ಲಿ’ ನಮ್ಮ ಮನೆಯ ಎಲ್ಲರ ಮುದ್ದು ಮರಿಯಾಗಿಬಿಟ್ಟಳು. ಆಕೆಯನ್ನ ಹೇಗೆ ಮುದ್ದೆ ಮಾಡಿ ತೀಡಿ ಹೇಗೆ ತಿರುಚಿ ಮಲಗಿಸಿದರು ಆಕೆ ಅದೇ ಆಕಾರದಲ್ಲಿ ಮಲಗಿರುತ್ತಿದ್ದಳು. ಮೈ ಶಾಖ, ಅಡುಗೆ ಒಲೆಯ ಹಿಂದಿನ ಬಿಸಿಗೆ ಮಲಗುವುದೆಂದ್ರೆ ಅದಕ್ಕೆ ಪ್ರಾಣ... ದಿನಕಳೆದಂತೆ ಇನ್ನು ಚಂದ, ಮತ್ತೂ ಚಂದ ಆಗುತ್ತಾ ಹೋದಳು. ಅವತ್ತು ಪಪ್ಪನ ಸ್ನೇಹಿತರು ಮನೆಗೆ ಬಂದಾಗ ಐಶ್ವರ್ಯಳನ್ನು ನೋಡಿ, ಅರೇ ಈ ಬೆಕ್ಕು ಎಲ್ಲಿಂದ ತಂದಿರಿ? ಇದು German long hair ಅನ್ನುವ ತಳಿ, ಭಾರತದಲ್ಲಿ ಅಪರೂಪವೇ, ಎಂದು ಆಶ್ಚರ್ಯ ಪಟ್ಟಾಗ. ಆಕೆಗೆ ಐಶ್ವರ್ಯ ಎಂದು ಹೆಸರಿಟ್ಟಿದ್ದು ಸಾರ್ಥಕ ಅನಿಸಿತ್ತು.
ಹಾಗೆ ಲಾಸ್ಯ, ಲಾವಣ್ಯಗಳಿಂದ, ನಯ ನಾಜೂಕನ್ನೇ ಹೊದ್ದು ಆಕರ್ಷಣೀಯವಾಗಿ ಇದ್ದ ಐಶ್ವರ್ಯಾ ಹೊಟ್ಟೆ ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಬಂತು. ನಮಗೆಲ್ಲರಿಗೂ ಖುಷಿ! ಬೆಕ್ಕು ಮುಚ್ಚಿಟ್ಟ ಮರಿಗಳನ್ನು ಹುಡುಕಿ, ಕಣ್ಣು ಬಿಡುವ ತನಕ ದಿನವೂ ಅವನ್ನು ಎಣಿಸಿ ಮುದ್ದಿಸಿ ಬರುವ ಕಾತುರದಲ್ಲಿ ನಾವಿದ್ದೆವು. (ನಾವು=ನಾನು,ತಂಗಿ, ಅತ್ತೇ, ಅಜ್ಜಿ, ಪಪ್ಪ, ಚಿಕ್ಕಪ್ಪ) ಥೇಟ್ ಮುದ್ದಿನ ಮಗಳು ಬಾಣಂತನಕ್ಕೆ ಬಂದಂಥ ಸಂಭ್ರಮ ಅದು.
ಬೆಕ್ಕುಗಳು ಕತ್ತಲಲ್ಲೇ ಮರಿ ಹಾಕುತ್ತವೆ ಹಾಕಿದ ಮೊದಲ ಮರಿ ತಿಂದು ಮುಗಿಸುತ್ತವೆ, ೭ ಜಾಗೆ ಬದಲಿಸುತ್ತವೆ ಹೀಗೆ ಬೆಕ್ಕಿನ ಬಾಣಂತನದ ಕುರಿತು ಏನೇನೋ ನಂಬಿಕೆಗಳಿವೆ ಐತಿಹ್ಯಗಳೂ ಇವೆ. ಆದರೆ ಅದೆಲ್ಲ ಸುಳ್ಳು ಅನ್ನೋದನ್ನ ನನಗೆ ಮನವರಿಕೆ ಮಾಡಿಕೊಟ್ಟಿದ್ದೆ ಐಶ್ವರ್ಯ.
ಆ ದಿನ ನಮ್ಮ ಮನೆಯ ಮೂಲೆಯ ಕೋಣೆಯಲ್ಲಿ ಓದುತ್ತ ಕುಳಿತಿದ್ದೆ. ನಮ್ಮ ಮುದ್ದು ಐಶು ಬಂದು ನನ್ ಕಾಲ್ ಮೇಲೆ ಮಲಗಿತು. ಅದು ಆಕೆಯ ಯಾವತ್ತಿನ ರೂಡಿ. ಆದರೆ ಇವತ್ತು ಪ್ರತಿದಿನದಂತಲ್ಲ ಏನೋ ಹೇಳೋರ್ ಥರ ಪುಸ್ತಕ ವನ್ನ ಪರಚೋದು ಕಾಲು ಒಮ್ಮೆಲೇ ನೆಟ್ಟಗೆ ಮಾಡಿ ವಿಚಿತ್ರ ದನಿಯಲ್ಲಿ ಕೂಗೋದು. ಮಲಗಿದ ಕಡೆಯೇ ಕಾಲಿನಿಂದ ಕೆದರಿ ಉಗುರು ಹೊರ ತೆಗೆಯುವುದು ಹೀಗೆಲ್ಲ ವಿಚಿತ್ರ ವರ್ತನೆ ಮಾಡೋಕೆ ಶುರು ಮಾಡಿತು.
ಅದು ಮಾಡ್ತಿರೋದನ್ನ ನೋಡಿದ್ರೆ ಅದಕ್ಕೆ ಹೊಟ್ಟೆನೋವು ಬಂದಿದೆ ಎಂದು ಅನಿಸತೊಡಗಿತ್ತು ಆದರೆ ಆಯಾ ತನಕ ಕೇಳಿದ ಕಥೆಗಳ ಪ್ರಕಾರ ಮರಿ ಹಾಕಲು ಬೆಕ್ಕಿಗೆ ಕತ್ತಲೆ ಜಾಗ ಬೇಕಲ್ಲ? ಇದನ್ನ ನಾನೇ ಒಯ್ದು ಅಟ್ಟದ ಮೇಲಿದ್ದ ಹಳೇ ಹಿತ್ತಾಳೆ ಹಂಡೆಯ ಒಳಗೆ ಇಟ್ಟು ಬರಲಾ? ಎದ್ದು ಬಿಡಲ? ಎನ್ನುವ ಯೋಚನೆ ಬಂತಾದರೂ, ನನ್ನ ಮೈಯ್ಯ ಮೇಲಂತೂ ಮರಿ ಹಾಕಲ್ಲ ಅನ್ನೋ ಒಂದು ವಿಶ್ವಾಸದೊಂದಿಗೆ ಅದನ್ನ ತೊಡೆಯ ಮೇಲೆ ಮಲಗಿಸಿ ಕೊಂಡು ಸುಮ್ಮನೆ ಅದರ ತಲೆ, ಹೊಟ್ಟೆ ಕೊರಳನ್ನ ಸವರುತ್ತ ಕುಳಿತೆ. ಹೀಗೆ ಅಂದುಕೊಂಡು ಗಳಿಗೆಯೂ ಕಳೆದಿಲ್ಲ ನನ್ನ ಅರಿವಿಗೆ ಬರುವ ಮೊದಲೇ ನನ್ನ ತೊಡೆಮೇಲೆ ನಮ್ಮ ಬಿಲ್ಲು, ಮರಿ ಹಾಕಿಬಿಟ್ಟಿತ್ತು. ಆ ಅನುಭವ ಬೇಕೆಂದರೂ ಸಿಗುವಂತದ್ದಲ್ಲ. ಕೆಲವರಿಗೆ ಹೇಸಿಗೆ, ಕೆಲವರಿಗೆ ಅಯ್ಯೋ ರಾಮ್ ರಾಮನ ನೆನಪು, ಕೆಲವರಿಗೆ ನನ್ ಡ್ರೆಸ್ ಚಿಂತೆ,ನಾನು ಮಾತ್ರ ಆ ಗಳಿಗೆಗಳನ್ನು ಆಸ್ವಾಧಿಸುವುದರಲ್ಲಿ ಮಗ್ನಳಾಗಿದ್ದೆ. ನನಗೆ ಆ ಅನುಭವ ಎಷ್ಟು ರೋಮಾಂಚನ ತಂದಿತ್ತು ಎಂದರೆ, ಮುಂದಿನ ೩ ಮರಿಗಳನೂ ಅದು ನನ್ ತೊಡೆ ಮೇಲೆ ಹೆತ್ತು, ಕೆಳಗೆ ನಿಂತು ಹೊಕ್ಕಳ ಬಳ್ಳಿಯನ್ನು ತನ್ನ ಹಲ್ಲಿನಿಂದ ತುಂಡು ಮಾಡಿ ಮತ್ತೆ ತೊಡೆ ಮೇಲೆ ಬಂದು ಮಲಗಿ ಮತ್ತೆ ನೋವು ಕೊಡುತ್ತಿತ್ತು. ನಾನು ಪ್ರತಿಸಲ ಅದು ಹುಡುಗಿಯಿಂದ ಅಮ್ಮನಾಗಿ ಪರಿವರ್ತನೆ ಗೊಂಡ ರೀತಿಯನ್ನು ಆ ಜವಾಬ್ದಾರಿ ನಿರ್ವಹಿಸುತ್ತಿದ್ದ ಪರಿ ಕಂಡು ಮೂಕ ವಿಸ್ಮಿತಳಾಗಿದ್ದೆ.
ಯಾರು ಹೇಳಿಕೊಟ್ಟರು ಅದಕ್ಕೆ? ಕಣ್ಣು ಬಿಡದ ಆ ಮರಿಗಳನ್ನು ತನ್ನ ಮೊಲೆಗೆ ಅಂಟಿಸಿಕೊಂಡು ಹಾಲುಣಿಸುವ ಪರಿಯ, ಮರಿಯ ಮಯ್ಯಸುತ್ತ ಇರೋ ಜಿಡ್ಡು ನೆಕ್ಕಿ ಅದನ್ನ ಶುಭ್ರ ಗೊಳಿಸೋ ಕ್ರಮವ? ಪ್ರಕೃತಿ ಅದೆಷ್ಟು ಅಧ್ಭುತ ಅಲ್ವಾ ? ನನಗನಿಸಿದ ಮಟ್ಟಿಗೆ ಬೆಕ್ಕಿನ ಬಾಣಂತನದಷ್ಟು ಸ್ವಚ್ಛ ಶುಭ್ರ ಹೆರಿಗೆ, ಮತ್ತ್ಯಾವ ಜೀವಿಯೂ ಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೋ. ಏನೇ ಹೇಳಿ, ಇದೊಂದು ಜೀವಕಾಲದ ಅಮೂಲ್ಯ ಅನುಭವ. ಅದಕ್ಕೆ ಅಕ್ಷರ ರೂಪ ಕೊಡುವುದು ಕಷ್ಟ ಅನಿಸುತ್ತದೆ. ಆದರೆ ನೀವು ನನ್ನನ್ನ ಎಂದಾದರೂ ಭೇಟಿ ಆದಾಗ, ಅದನ್ನ ಮಾತಲ್ಲಿ ವಿವರಿಸೋ ಪ್ರಯತ್ನ ಖಂಡಿತ ಮಾಡೇನು! ಆದರೆ ಅಕ್ಷರಗಳಿಗೆ ದಕ್ಕದ ಭಾವಗಳನ್ನು ಮಾತಿನ ಮಾಲೆಯಲ್ಲಿ ಕಟ್ಟಿ ಹಾಕಲಾದೀತೆ?
ಅಲ್ಲಾದರೂ ನಾನೆ ಸೋಲುತ್ತೇನೆ! ಐಶು ಈಗಿಲ್ಲ. ಆದ್ರೆ ಅವಳ ನೆನೆಪು, ನನಗೆ ಮೊದಲ ಬಾರಿ ಹೆರಿಗೆ ನೋವು ಬಂದಾಗ ಕಾಡಿದ್ದಂತೂ ನಿಜ. ಇದು ನಮ್ಮ ಬೆಕ್ಕು ಐಶ್ವರ್ಯಳ ಚೊಚ್ಚಲ ಬಾಣಂತನದ ಕಥೆ. - ಅಮಿತಾ ರವಿಕಿರಣ್
ಎಲ್ಲರಿಗೂ ಆತ್ಮೀಯ ನಮಸ್ಕಾರ, ಈ ವಾರದ ಅನಿವಾಸಿ ಸಂಚಿಕೆಯಲ್ಲಿ ಎರಡು ಪುಟ್ಟ ಬರಹಗಳಿವೆ. ಒಂದು ಶ್ರಾವಣ ಮಾಸದಲ್ಲಿ ಸಾರಸ್ವತ ಸಮುದಾಯದಲ್ಲಿ ಆಚರಿಸಲಾಗುವ ಚೂಡಿ ಪೂಜೆಯ ಕಿರು ಪರಿಚಯ ಮತ್ತು ಅನಿವಾಸಿ ಬ್ಲಾಗ್ ನಲ್ಲಿ ಇದೇ ಮೊದಲ ಸಲ ಬರೆಯುತ್ತಿರುವ ಶ್ರೀಮತಿ ರೇಖಾ ಪಾಟೀಲ್ ಅವರು, ನಮ್ಮನ್ನು ತಮ್ಮ ಅಜ್ಜನ ಮನೆಯ ನೆನಪುಗಳ ಜಾತ್ರೆಗೆ ಪದಗಳ ತೇರಿನಲ್ಲಿ ಕರೆದೊಯ್ಯಲಿದ್ದಾರೆ. ಓದಿ ತಮ್ಮ ಅನಿಸಿಕೆಯನ್ನು ತಿಳಿಸುವುದನ್ನು ಮರೆಯಬೇಡಿ ಪ್ರೀತಿಯಿಂದ ಅಮಿತಾ ರವಿಕಿರಣ್ .
ಚೂಡಿ-ಶ್ರಾವಣದ ವಿಶಿಷ್ಟ ಆಚರಣೆ. ಮೊನ್ನೆ ಮೊನ್ನೆಯಷ್ಟೇ ಯುಗಾದಿ ಆದಂತಿದೆ, ಅದೋ ಆಗಲೇ ಶ್ರಾವಣ ಬಂದು ಸಾಲು ಸಾಲು ಹಬ್ಬಗಳನ್ನು ತನ್ನೊಟ್ಟಿಗೆ ಕರೆದು ತಂದಿದೆ. ಭಾರತದಲ್ಲಿ ಮಳೆಗಾಲವೆಂಬ ಈ ಚೈತನ್ಯಪೂರ್ಣ ಕಾಲದಲ್ಲಿ ಹೊಲದಲ್ಲಿ ಗದ್ದೆ ತೋಟದಲ್ಲಿ ಮನೆಗಳಲ್ಲಿ ಮನಗಳಲ್ಲಿ ಎಲ್ಲೆಡೆ ಒಂದು ಬಗೆಯ ಸಂಭ್ರಮ. ಜಿರಾಪತಿ ಮಳೆಯಲ್ಲೂ ತಮ್ಮ ಜರಿಸೀರೆಯನ್ನುಟ್ಟು ಮನೆ ಮನೆಗೆ ಅರಿಶಿನ ಕುಂಕುಮಕ್ಕೆ ಹೋಗುವ ಆ ನೋಟವೇ ಚಂದ. ಜೊತೆಗೆ ನಾಗರ ಪಂಚಮಿ,ರಾಖಿ,ನೂಲು ಹುಣ್ಣಿಮೆ, ಕೃಷ್ಣಾಷ್ಟಮಿ, ವರಮಹಾಲಕ್ಷ್ಮಿ ಸಾಲು ಸಾಲು ಸಂಭ್ರಮಗಳ ಮಾಸ ಈ ಶ್ರಾವಣ. ಈ ಶ್ರಾವಣಮಾಸದಲ್ಲಿ ಬರುವ ಇನ್ನೊಂದು ವಿಶಿಷ್ಟ ಹಬ್ಬ, ಕೇವಲ ಸಾರಸ್ವತ ಸಮುದಾಯದವರು ಪಾಲಿಸಿಕೊಂಡು ಬಂದಿರುವ ಆಚರಣೆಯೇ ಚೂಡಿ ಪೂಜೆ.
ಸರಸ್ವತಿ ನದಿತೀರದಿಂದ ವಲಸೆ ಬಂದು ಮಹಾರಾಷ್ಟ್ರದ ರತ್ನಾಗಿರಿಯಿಂದ ಕೇರಳದ ತುದಿಯವರೆಗಿನ ಕೊಂಕಣ ಪಟ್ಟಿಯಗುಂಟ ಹೆಚ್ಹಾಗಿ ನೆಲೆಸಿರುವ ಸಾರಸ್ವತರು ಎದುರು ನೋಡುವುದು ಶ್ರಾವಣದ ಚೂಡಿ ಪೂಜೆಯನ್ನ. ಶ್ರಾವಣದ ಪ್ರತಿ ಶುಕ್ರವಾರ ಮತ್ತು ವಿಶೇಷವಾಗಿ ಭಾನುವಾರಗಳಂದು ಈ ಪೂಜೆ ತುಳಸಿಯ ಮುಂದೆ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ.
ಬರಿಯ ಪೂಜೆ ಅಂದ್ರೆ ಅದರಲ್ಲೇನು ವಿಶೇಷ ಅಂದ್ರಾ? ಆ ಪೂಜೆಯಲ್ಲಿ ಬಳಸುವ ವಸ್ತುಗಳು ಈ ಆಚರಣೆಯನ್ನು ವಿಶೇಷವಾಗಿಸುತ್ತವೆ. ಮಳೆಗಾಲದಲ್ಲಿ ಭೂಮಾತೆ ಹಸಿರುಟ್ಟು ನಗುವಾಗ ಅವಳಲ್ಲಿ ದೊರೆಯುವ ಅಪರೂಪದ ಹದಿನಾರು ಬಗೆಯ ಎಲೆಗಳು, ಜೊತೆಗೆ ಸೇವಂತಿಗೆ, ಗರಿಕೆ ,ಹೊಲದ ಬದುವಿನಲ್ಲಿ ಸಿಗುವ ನೆಲನೆಲ್ಲಿ,ಲಾಯಾ ಮಡ್ಡಿ,ರತ್ನಗಂಧಿ,ವಿಷ್ಣುಕಾಂತಿ ,ಸುಗಂಧಿ,ಕಾಗಿ ಕಾಲು ಗುಬ್ಬಿ ಕಾಲು ,ಹುಲಿ ಉಗುರು.ಬೆಕ್ಕಿನ ಕಾಲು,ಮಿಟಾಯಿ ಹೂ ,ಗೌರಿ ಮುತ್ತು,ಗೌರಿ ಹೂವು,ರಥದ ಹೂ ಎಂಬ ವಿಚಿತ್ರ ಜನಪದ ಹೆಸರಿನ ಸಸ್ಯಗಳನ್ನು ತಂದು ಕೂಡಿಸಿ ಗುಚ್ಛ ಕಟ್ಟಿದರೆ ಚೂಡಿ ಸಿದ್ಧ. ಚೂಡಿ ಎಂಬುದು ಕಲಾತ್ಮಕತೆಯ ಕನ್ನಡಿಯೂ ಹೌದು. ಲಭ್ಯ ಇರುವ ಸಸ್ಯಗಳನ್ನು ಹೂ ಎಲೆಗಳನ್ನು ಬಣ್ಣದ ಹೊಂದಾಣಿಕೆ ಮತ್ತು ಆಕಾರ ಗಾತ್ರ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಕಟ್ಟ ಬೇಕಾಗುತ್ತದೆ. ಚೂಡಿಯನ್ನು ಕಟ್ಟುವಾಗ ಬಾಳೇನಾರನ್ನು ನೆನೆಸಿ ಅದರಿಂದ ದಾರದ ಎಳೆಗಳನ್ನು ತೆಗೆದು ಅದರಿಂದಲೇ ಕಟ್ಟಲಾಗುತ್ತದೆ.ಇತ್ತೀಚಿಗೆ ಸಾರಸ್ವತ ಸಮಾಜ ಮಂದಿರಗಳಲ್ಲಿ ದೇವಳಗಳಲ್ಲಿ ಚೂಡಿ ಸ್ಪರ್ಧೆ ಏರ್ಪಡಿಸುವುದೂ ಉಂಟು.
ಆಚರಣೆ -ವಿಧಿ ವಿಧಾನ ಪ್ರತ್ಯೇಕ ಚೂಡಿಯನ್ನು ವೀಳ್ಯದೆಲೆಯೊಂದಿಗೆ ತುಳಸಿ ಮುಂದೆ ಇಟ್ಟು, ದೀಪ ಹಚ್ಹಿ ಹಣ್ಣು ಕಾಯಿ ಸಮರ್ಪಿಸಿ ತುಳಸಿಗೆ ಪ್ರದಕ್ಷಿಣೆ ಹಾಕಲಾಗುತ್ತದೆ. ಜೊತೆಗೆ ಮತ್ತೊಂದು ವಿಶೇಷ ಎಂದರೆ ಇಲ್ಲಿ ಪೂಜೆಗೆ ಅರಿಶಿನ ಕುಂಕುಮ ದೊಂದಿಗೆ ''ರುವಣ'' ಎಂದು ಕರೆಯಲಾಗುವ ಸುಣ್ಣ ಮತ್ತು ಗಂಧ ಅರಿಶಿನದ ಮಿಶ್ರಣವನ್ನು ಬಳಸುವುದು. ಆಗತಾನೇ ಚಿಗುರೊಡೆದು ನಿಂತಿರುವ ಅರಿಸಿನದ ಎಲೆ ತಂದು ಅದರ ಮೇಲೆ ಅಕ್ಕಿಯನ್ನು ಹರಡಿ. ಅದರ ಮೇಲೆ ಅಡಿಕೆ ಬೆಟ್ಟವನ್ನು ಇಟ್ಟು ಅದರ ಎದುರಿಗೆ ೫,೭.೧೧.೨೧.ಹೀಗೆ ಚೂಡಿಯನ್ನಿಟ್ಟು ಪೂಜಿಸಿ ೧೬.೩೨ ರಂತೆ ಗರಿಕೆಯನ್ನು ಕಟ್ಟಿ ಸೆರಗಿನ ತುದಿಯಿಂದ ಅದನ್ನು ಹಿಡಿದು ಸೂರ್ಯನಿಗೆ ಅರ್ಘ್ಯ ನೀಡುತ್ತಾರೆ. ನಂತರ ಬಾವಿ ಕಟ್ಟೆಗೆ ಮನೆಯ ಸೂರಿಗೆ, ತೆಂಗಿನ ಮರಕ್ಕೆ, ಮನೇ ಹೊಸಿಲಿಗೆ ವಿಳ್ಯದೊಂದಿಗೆ ಇವನ್ನು ಇಟ್ಟು ಪೂಜಿಸುತ್ತಾರೆ. ಸೌಭಾಗ್ಯ ಸಮೃದ್ಧಿ ವೃದ್ಧಿಸುವಂತೆ ಹೆಂಗಳೆಯರು ಪ್ರಾರ್ಥಿಸುತ್ತಾರೆ. ಭತ್ತದ ಅರಳು ಮತ್ತು ಬೆಲ್ಲವನ್ನ ನೇವೇದ್ಯ ಮಾಡಿ ಹೊಸಿಲ ಮೇಲೆ ಚೂಡಿಯನ್ನು ಇಟ್ಟು ಆರತಿ ಮಾಡುತ್ತಾರೆ.. ಕೆಲವೊಂದು ಮನೆಯ ಸಂಪ್ರದಾಯದಲ್ಲಿ, ಪೂಜೆಯನ್ನು ದೇವರ ಮುಂದೆ ಮಾಡಿ ಸಂಜೆ ಸಮಯದಲ್ಲಿ ತುಳಸಿಯ ಮುಂದೆ ಚೂಡಿ ಯನ್ನುವಿಸರ್ಜಿಸಲಾಗುತ್ತದೆ. ಘಟ್ಟದ ಕೆಳಗೆ ಮತ್ತು ಘಟ್ಟದ ಮೇಲಿನ ಆಚರಣೆಯಲ್ಲಿ ಕೆಲವು ವ್ಯತ್ಯಾಸಗಳು ಕಾಣಸಿಗುತ್ತವೆ.
ಮದುವೆಯ ನಂತರ ಬರುವ ಮೊದಲ ಚೂಡಿಯನ್ನು ಮದುಮಗಳೊಂದಿಗೆ ಸಮಾಜದ ಎಲ್ಲಾ ಬಂಧು ಭಗಿನಿಯರು ಸೇರಿ ಆಚರಿಸುತ್ತಾರೆ. ಮತ್ತು ಮದುಮಗಳು ಎಲ್ಲಾ ಹಿರಿಯರಿಗೂ ಚೂಡಿ ಕೊಟ್ಟು ನಮಸ್ಕರಿಸಿದ ಮೇಲೆ ಆಕೆಗೆ ಉಡುಗೊರೆಯನ್ನು ನೀಡಲಾಗುತ್ತದೆ. ಪತಿ ಮತ್ತು ಇತರ ಹಿರಿಯರಿಗೆ ಕೇವಲ ವೀಳ್ಯದೆಲೆಯನ್ನು ನೀಡಿ ನಮಸ್ಕರಿಸಲಾಗುತ್ತದೆ. ಅನುಕೂಲಸ್ಥರು ಈ ದಿನ ಔತಣ ನೀಡುವುದೂ ಉಂಟು.ಸಂಜೆ ಮನೆ ಮನೆಗೆ ಹೋಗಿ ಹಿರಿಯ ಮುತ್ತೈದೆಯರಿಗೆ, ದೇವಸ್ಥಾನಗಳಿಗೂ ಚೂಡಿಯನ್ನು ಕೊಟ್ಟು ಬರುವ ನಿಯಮವಿದೆ. ದೂರವಿದ್ದವರು ಪೋಸ್ಟಿನ ಮೂಲಕ ಕಳಿಸುವುದೂ ಉಂಟು.ಇದು ಗೌರವ ಸೂಚಕವು ಹೌದು.
ಆಶಯ ಮೇಲು ನೋಟದಲ್ಲಿ ಕೇವಲ ಪೂಜೆಯಾಗಿ ಕಾಣುವ ಈ ಆಚರಣೆ, ನಮ್ಮ ಜನಪದರ ಪ್ರಕೃತಿ ಪೂಜೆಯ ಮುಂದುವರಿಕೆ, ಸಮಷ್ಟಿ ಪ್ರಜ್ಞೆಯ ಮತ್ತೊಂದು ಉದಾಹರಣೆ ಎಂದರೂ ತಪ್ಪಲ್ಲ .ಎಲ್ಲೂ ಬಳಕೆ ಆಗದ ಸಸ್ಯಗಳು.ಈ ಆಚರಣೆಯಲ್ಲಿ ಬಳಸಲ್ಪಡುತ್ತವೆ. ಸಮಾಜದಲ್ಲಿ ಎಲ್ಲಾ ಸಮುದಾಯದ ಸಾಮರಸ್ಯದ ತತ್ವವನ್ನು ಇದು ಒಳಗೊಂಡಿದೆ.ಇದೊಂದು ಆಚರಣೆಯ ನಿಮಿತ್ಯ ತನ್ನ ಬಿಡುವಿಲ್ಲದ ದಿನಚರಿಯ ನಡುವೆಯೂ ಗೃಹಿಣಿ ತನ್ನ ಸರೀಕರೊಂದಿಗೆ ಬೆರೆತು ಕಷ್ಟ ಸುಖ ಮಾತಾಡುವ ಅವಕಾಶವನ್ನು ಮಾಡಿಕೊಡುವ ಉದ್ದೇಶದಿಂದಲೂ ಈ ನಿಯಮ ಮಾಡಿರಬಹುದು.. ಪದ್ಧತಿ ಸಂಪ್ರದಾಯಗಳು ಯಾವುದೊ ಒಂದು ಆಶಯ ದ ಹಿನ್ನೆಲೆಯಲ್ಲೇ ರೂಪುಗೊಂಡಿರುತ್ತವೆ.ಮತ್ತು ಮಾನವನಿಗೆ ಸಂಸ್ಕೃತಿಗೆ ಸನ್ನಿಹಿತವಾಗಿ ನಡೆಯಲು ಪ್ರೇರೇಪಿಸುತ್ತವೆ.ಅದನ್ನು ಅರಿತು ಮುನ್ನಡೆಸಿಕೊಂಡು ಹೋಗುವ ಮನಸ್ಸು ನಮಗಿರಬೇಕು ಅಷ್ಟೇ!
ನೆನಪಿನ ಅಂಗಳದಲ್ಲಿ
ರೇಖಾ ಪಾಟೀಲ. ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ಊರಿನವರು. ಅವರ ಕರ್ಮಭೂಮಿಯಾದ ಬೆಂಗಳೂರು ಈಗ ಗಂಡನ ಮನೆ ಕೂಡ. ಸಾಹಿತ್ಯ, ಹಾಡು ಕೇಳುವುದು ಪ್ರವಾಸ, ಹರಟೆ,ಕನ್ನಡ ನಾಡು ನುಡಿ,ಅವರ ಮನಸಿಗೆ ಖುಷಿ ಕೊಡುವ ವಿಚಾರಗಳು. ಸಾಫ್ಟವೇರ್ ಕಂಪನಿಯಲ್ಲಿ ಉದ್ಯೋಗ ನಿಮಿತ್ತ ಬೆಲ್ಫಾಸ್ಟ್ನಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದಾರೆ .
ಚಿಕ್ಕಂದಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಶಾಲೆಯ ಕೊನೆಯ ದಿನ ಪರೀಕ್ಷೆ ಮುಗಿಸಿ ಬಂದವರೇ ಅಜ್ಜನ ಊರಿಗೆ ಹೋಗುವುದು ವಾಡಿಕೆಯಾಗಿತ್ತು. ನನ್ನ ಅಜ್ಜನ ಊರು ಗಾಡಗೋಳಿ ಅನ್ನುವ ಹೆಸರಿನ, ಹೊಳೆ ಆಲೂರಿನ ಹತ್ತಿರ ಒಂದು ಹಳ್ಳಿ. ಭರ್ಜರಿ ೨ ತಿಂಗಳಿನ ಬೇಸಿಗೆ ರಜೆ ಕಳೆಯುವುದು ಅಲ್ಲೇ. ಅಲ್ಲಿಗೆ ಹೋಗುವುದಕ್ಕೆ ಕಾರಣ ಅಜ್ಜ,ಅಜ್ಜಿ,ಚಿಕ್ಕಮ್ಮ, ಮಾಮ ಅವರು ತೋರಿಸುವ ಪ್ರೀತಿ ಒಂದು ಕಡೆ ಆದರೆ ಊರಲ್ಲಿ ಹಾದು ಹೋಗುವ, ಊರಿನ ಜೀವ ನದಿ ಮಲಪ್ರಭೆ ಅತಿ ಮುಖ್ಯ ಮತ್ತು ಅಸಲಿ ಕಾರಣ ಅಂತ ಅನಿಸುತ್ತದೆ
ದೈನಂದಿನ ನೀರಿನ ಎಲ್ಲ ಅವಶ್ಯಕತೆಗಳಿಗೆ ಇಡೀ ಊರೇ ನೆಚ್ಚಿಕೊಂಡಿದ್ದು ಮಲಪ್ರಭೆಯನ್ನೇ. ಅಜ್ಜನ ಮನೆಯಿಂದ ಹೊಳೆ 3 ರಿಂದ 4 ನಿಮಿಷದ ಕಾಲು ದಾರಿ. ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ದನ ಕರುಗಳಿಗೆ ನೀರು ಕುಡಿಸಲು ಹೀಗೆ ಹತ್ತು ಹಲವು ಕೆಲಸಗಳಿಗೆ ಊರಿನ ಜನ ಇಡೀ ದಿನ ಹೊಳೆಗೆ ಹೋಗಿ ಬರುವುದು ಸಾಮಾನ್ಯವಾಗಿತ್ತು. ಪ್ರತಿ ಸಲ ನಮ್ಮ ಮನೆಯಿಂದ ಯಾರಾದರೂ ಹೊಳೆಗೆ ಹೋದರೂ ನಾನು ಮತ್ತು ನನ್ನ ತಮ್ಮಂದಿರು ಅವರನ್ನು ಹಿಂಬಾಲಿಸುತ್ತಿದ್ದೆವು. ಕಾರಣ ನದಿಯಲ್ಲಿ ಈಜುವುದು.
ದಿನದ ಕನಿಷ್ಠ ಪಕ್ಷ, 4 ರಿಂದ 5 ಘಂಟೆಗಳ ಕಾಲ ಹೊಳೆಯಲ್ಲೇ ಕಳೆಯುತ್ತಿದ್ದೆವು. ಬಟ್ಟೆ ತೊಳೆಯುವುದಕ್ಕೆಂದು ಹೋದವರ ಜೊತೆ ಹೋಗಿ, ಬಟ್ಟೆ ತೊಳೆದು, ಮರಳಿನ ಮೇಲೆ ಹಾಕಿ ಬಟ್ಟೆ ಒಣಗಿಸಿ ಮಡಚಿದ ಮೇಲೆಯೇ ಮನೆಗೆ ಮರಳುವುದು. ಅಲ್ಲಿಯವರೆಗೂ ನೀರಲ್ಲೇ ಆಟ. ಊರಿನಲ್ಲಿ ಕೆಲವೊಂದು ಮನೆಗೆ ನಲ್ಲಿಯ ವ್ಯವಸ್ಥೆ ಇತ್ತಾದರೂ ಸಾಕಾಗುವಷ್ಟು ಕುಡಿಯಲು ನೀರು ಸಿಗುತ್ತಿರಲಿಲ್ಲ. ಅದಕ್ಕೂ ಹೊಳೆ ದಾಟಿ ಮರಳನ್ನು ಬಗೆದು ವರ್ತಿ ತೋಡಿ ತಿಳಿಯಾದ ಕುಡಿಯುವ ನೀರನ್ನುತೆಗೆದುಕೊಂಡು ಹೋಗುತ್ತಿದ್ದರು. ಆ ವರ್ತಿಯಲ್ಲಿ ಒಂದು ಚಿಕ್ಕ ಪಾತ್ರೆಯ ಸಹಾಯದಿಂದ ತಿಳಿಯಾದ ನೀರನ್ನು ಕೊಡಕ್ಕೆ ತುಂಬುವುದೇ ಒಂದು ಖುಷಿ. ಇದೆಲ್ಲ ಸಂಭ್ರಮವನ್ನು ನೋಡಲೆಂದೇ ತಾಯಿ ಮಲಪ್ರಭೆ ಊರನ್ನು ಶಾಂತವಾಗಿ ದಾಟಿ ಹೋಗುತ್ತಿದ್ದಳೇನೋ ಅನಿಸುತ್ತದೆ.
ಹೊಳೆ ಆಲೂರಿನಲ್ಲಿ ಹೊಳೆಗೆ ಅಡ್ಡವಾಗಿ ರೈಲ್ವೆ ಹಳಿ ಇದೆ. ಅದರ ಮೇಲೆ ಕೂಗಿಕೊಂಡು ಹೋಗುವ ರೈಲಿನ ಶಬ್ದ ಇಲ್ಲಿಗೂ ಕೇಳುತ್ತದೆ. ಆ ಕೂಗಿನೊಂದಿಗೆ ಜನ ಸಮಯವನ್ನು ಗುರುತಿಸುತ್ತಿದ್ದರು. 12ರ ಟಪಾಲ್ ಗಾಡಿ, 5ರ ಹಾಲಿನ ಗಾಡಿ ಹೀಗೆ. ಈಗ ನಾನಿರುವ ಮನೆಯ ಮೇಲೆ ಪ್ರತಿ 10 ರಿಂದ 15 ನಿಮಿಷಕ್ಕೊಂದು ವಿಮಾನ ಹಾರುತ್ತದೆ, ಅದರಿಂದ ನಾನು ಯಾವ ದಿನಚರಿಯನ್ನು ಗುರುತಿಸಿಕೊಂಡಿಲ್ಲವಾದರೂ ನನಗೆ ನೆನಪಾಗುವುದು ಟಪಾಲ್ ಗಾಡಿ ಮತ್ತು ಹಾಲಿನ ಗಾಡಿ. ಒಂದಷ್ಟು ವರ್ಷಗಳ ನಂತರ ಪ್ರತಿ ಮನೆಗೆ ನಲ್ಲಿ ಸೌಕರ್ಯ ದೊರಕಿ ಹೊಳೆಗೆ ಹೋಗುವುದು ಕಡಿಮೆ ಆಯಿತು. ಅಷ್ಟೊತ್ತಿಗೆ ನಾವುಗಳು ಪ್ರೌಢ ಶಾಲೆಗೆ ಸೇರಿದ್ದರಿಂದ ರಜೆಗೆಂದು ಊರಿಗೆ ಹೋಗುವುದು ತೀರಾ ವಿರಳವಾಗಿತ್ತು. ಹೊಳೆಯಲ್ಲಿ ಮಣ್ಣೆತ್ತುವ ಕೆಲಸ ಭರದಿಂದ ಸಾಗಿ ಹೊಳೆಗೆ ಹೋಗುವುದೇ ಅಪಾಯ ಅನ್ನುವಂತಾಯಿತು. ಊರಿನ ಜನ ಹೊಳೆಯಾಚೆಗಿನ ಹೊಲಗಳನ್ನು ಮಾರಿಕೊಂಡರು. 2009ರ ಪ್ರವಾಹದಲ್ಲಿ ಮಲಪ್ರಭೆ ಇಡೀ ಊರನ್ನೇ ಆವರಿಸಿಕೊಂಡಳು. ಒಂದಿಡೀ ವಾರ ಪೂರ್ತಿ ಊರಿಗೆ ಊರೇ ನೀರಲ್ಲಿ ಮುಳುಗಿ ಹೋಯಿತು. ಊರ ಜನರೆಲ್ಲಾ ಗಂಜಿ ಕೇಂದ್ರಗಳಿಗೆ ಹೋಗಿ ಸೇರಿಕೊಂಡರು.ಈಗ ಊರನ್ನು ನದಿಯಿಂದ ದೂರ ಸ್ಥಳಾಂತರಿಸಲಾಗಿದೆ. ಸುಮಾರಷ್ಟು ವರ್ಷಗಳಾದ ಮೇಲೆ ಮತ್ತೆ ಹೋದೆ ಅಜ್ಜನ ಮನೆ ಮತ್ತು ನಾವು ಜೀವದಂತೆ ಪ್ರೀತಿಸುತ್ತಿದ್ದ ಹೊಳೆ ನೋಡಲು. ಅಜ್ಜನಿಲ್ಲದ ಬಿದ್ದು ಹೋದ ಮನೆ ನೋಡಿ ಯಾಕೋ ಗಂಟಲಬ್ಬಿಬಂತು, ಮಾತೇ ಹೊರಡಲಿಲ್ಲ ಕಣ್ಣು ತುಂಬಿಕೊಂಡಿತ್ತು.