ನಾವೆಲ್ಲಾ ಈಗ ವೈಜ್ಞಾನಿಕ ತಜ್ಞರೇನು ? (Are We All Scientific Experts Now!)

ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್ ಕರು ನಾಡ ವರ್ಗಳ್  ಎಂಬ ಹೇಳಿಕೆ ನಮಗೆಲ್ಲ ಗೊತ್ತೇ ಇದೆ. ಈ ಮಾತು ಸಾರ್ವತ್ರಿಕವಾಗಿ ಅನ್ವಯಿಸುವಂಥದ್ದು. ಸಾಮಾಜಿಕ ಜಾಲತಾಣಗಳ ವಿಸ್ಫೋಟ, ಟಿ ವಿ ವಾಹಿನಿಗಳ ಪ್ರಭಾವ ಜೀವನದ ಪ್ರತಿ ಮೂಲೆಯ ಮೇಲೆ ಅಗಾಧವಾಗಿದೆ. ಈ ಲೇಖನದಲ್ಲಿ ಉಮಾ ವೆಂಕಟೇಶ್ ಈ  ವಿಷಯವನ್ನು ಸುಂದರವಾಗಿ ವ್ಯಕ್ತಪಡಿಸಿದ್ದಾರೆ.

ಪೀಠಿಕೆ: ಕಳೆದ ೫ ತಿಂಗಳುಗಳಿಂದ ಲಾಸ್ ಏಂಜಲೀಸ್ ಪಟ್ಟಣದ ಹೊರವಲಯದಲ್ಲಿರುವ ಪಸಡೀನಾದಲ್ಲಿ ವಾಸ್ತವ್ಯ ಹೂಡಿರುವ ನಾವು, ದೂರದರ್ಶನದ ಸಿ.ಎನ್.ಎನ್ ಚಾನೆಲಿನಲ್ಲಿ ಸಮಾಚಾರವನ್ನು ವೀಕ್ಷಿಸುತ್ತಿದ್ದೆವು. ಕ್ರಿಸಮಸ್ ರಜೆಯಲ್ಲಿ ಕಿಕ್ಕಿರಿದು ತುಂಬಿದ್ದ ಡಿಸ್ನಿಲ್ಯಾಂಡಿನಲ್ಲಿ, ಮಕ್ಕಳು ದಡಾರ ಅಥವಾ Measles ಎಂಬ ಅತ್ಯಂತ ಸಾಂಕ್ರಾಮಿಕವಾದ ವೈರಸ್ ವ್ಯಾಧಿಗೆ ತುತ್ತಾಗಿದ್ದಾರೆ ಎನ್ನುವುದನ್ನು ನೋಡಿದೆವು. ಡಿಸ್ನಿಲ್ಯಾಂಡ್ ಪಾರ್ಕನ್ನು ನೋಡಲು ಬರುವ ಸಂದರ್ಶಿಗರಲ್ಲಿ, ಮಕ್ಕಳ ಸಂಖ್ಯೆಯೇ ಜಾಸ್ತಿ. ದಡಾರದ ವ್ಯಾಧಿಗೆ ತುತ್ತಾಗುವವರೂ ಅವರೇ. ಕೆಮ್ಮು, ಮತ್ತು ಸೀನುವ ಮೂಲಕ ಸಾಮಾನ್ಯವಾಗಿ ಹರಡುವ ಈ ವ್ಯಾಧಿ, ಅಷ್ಟೊಂದು ಸಂಖ್ಯೆಯ ಮಕ್ಕಳು ನೆರೆದಿದ್ದಾಗ ಹರಡಿದ್ದರೆ ಅದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಅಮೆರಿಕೆಯಂತಹ ಮುಂದುವರೆದ ದೇಶದಲ್ಲಿ, ವೈದ್ಯಕೀಯ ಸೌಲಭ್ಯಗಳಿರುವ ಖಂಡದಲ್ಲಿ, ಈ ವ್ಯಾಧಿ ತಡೆಯುವ ಲಸಿಕೆಯನ್ನು ಮಕ್ಕಳಿಗೆಲ್ಲಾ ಬಾಲ್ಯದಲ್ಲೇ ಚುಚ್ಚಿರುತ್ತಾರೆ ಎನ್ನುವುದು ನಮ್ಮಲ್ಲೆರ ಸಾಮಾನ್ಯ ಜ್ಞಾನವೂ ಹೌದು. ಆದರೆ, ಸಿ.ಎನ್.ಎನ್ ಬಿತ್ತರಿಸಿದ ಈ ಸುದ್ದಿ ಕೇಳಿದಾಗ, ಅಮೆರಿಕೆಯ ಪ್ರಗತಿಯ ಬಗ್ಗೆ ನನಗಿದ್ದ ಅಭಿಪ್ರಾಯಗಳೆಲ್ಲಾ ತಲೆಕೆಳಗಾಗಿ, ತೀವ್ರವಾದ ಆಘಾತವಾದಂತಾಯಿತು.

 

ಹಿನ್ನೆಲೆ: 1998ರಲ್ಲಿ, ಆಂಡ್ರ್ಯೂ ವೇಕಫ಼ೀಲ್ಡ್ ಎಂಬ ಬ್ರಿಟಿಷ್ ವೈದ್ಯನು, ಸುಮಾರು 12 ಮಕ್ಕಳ ಕಡಿಮೆ ಸಂಖ್ಯೆಯ ಒಂದು ತಂಡವನ್ನು ಬಳಸಿ ನಡೆಸಿದ ಚಿಕಿತ್ಸಕ ಅಧ್ಯಯನವೊಂದರಲ್ಲಿ, MMR-(Measles, Mumps, Rubella) ಎಂಬ ಬಾಲ್ಯದಲ್ಲಿ ಚುಚ್ಚುವ ಲಸಿಕೆಯನ್ನು ಪಡೆದ ಮಕ್ಕಳು, Autism ಅಥವಾ ಸ್ವಲೀನತೆ ಎಂಬ ನರಗಳ-ಬೆಳವಣಿಗೆಯ ಅಸ್ವಸ್ಥತೆಗೆ ತುತ್ತಾಗುತ್ತಾರೆ ಎಂದು ನಿರ್ಣಯವಿರುವ ವಿಜ್ಞಾನ ಲೇಖನವೊಂದನ್ನು, ಪ್ರಸಿದ್ಧ ಬ್ರಿಟಿಷ್ ವೈದ್ಯಕೀಯ ನಿಯತಕಾಲಿಕೆ, Lancet ಜರ್ನಲಿನಲ್ಲಿ ಪ್ರಕಟಿಸಿದ್ದ. ಅದನ್ನು ನಂಬಿ ಮಾಧ್ಯಮದವರು ನೀಡಿದ ಪ್ರಚಾರದ ಆಧಾರದ ಮೇಲೆ, ಅನೇಕರು ತಮ್ಮ ಮಕ್ಕಳಿಗೆ ಈ ಲಸಿಕೆಯನ್ನು ಚುಚ್ಚಿಸಲು ಹಿಂಜರಿದರು. ಇದೇ ಪ್ರಚಾರದಿಂದ, ಅಮೆರಿಕೆಯಲ್ಲಿ ಅನೇಕರು ಅಂದು ಮತ್ತು ಇಂದೂ ಸಹಾ ಮಕ್ಕಳಿಗೆ ಈ ಲಸಿಕೆಯನ್ನು ಚುಚ್ಚಿಸುತ್ತಿಲ್ಲ. ಈಗ ಹಲವು ವರ್ಷಗಳ ಹಿಂದೆ, ಈ ವಿಷಯದ ಮೇಲೆ ನಡೆದ ಮತ್ತಷ್ಟು ಸಂಶೋಧನೆಗಳ ಆಧಾರದ ಮೇಲೆ, ವಿಜ್ಞಾನಿಗಳು ವೇಕಫ಼ೀಲ್ಡನ ಅಧ್ಯಯನ ನಿಖರವಾದದ್ದಲ್ಲ ಎಂದು ಮತ್ತೊಮ್ಮೆ ಪ್ರಕಟಿಸಿದ್ದಲ್ಲದೇ, ವೇಕಫ಼ೀಲ್ಡನ ವಿರುದ್ಧ ಕಾನೂನಿನ ಕ್ರಮವನ್ನೂ ಕೈಗೊಳ್ಳಲಾಯಿತು. Lancet ನಿಯತಕಾಲಿಕೆ ವೇಕಫ಼ೀಲ್ಡನ ಲೇಖನವನ್ನು ಕೂಡಾ ರದ್ದುಪಡಿಸಿತು.

 

ಆದರೆ ಇಷ್ಟರಲ್ಲೇ ಆ ಲಸಿಕೆಯನ್ನು ಪಡೆಯದಿದ್ದ ಮಕ್ಕಳು, ಈ ವ್ಯಾಧಿಗಳ ವಿರುದ್ಧ ಯಾವ ಸುರಕ್ಷಣೆಯೂ ಇಲ್ಲದ ಕಾರಣ, ಸುಮಾರು ಹತ್ತು ವರ್ಷಗಳ ನಂತರ, ಈಗ ದಡಾರದ ವ್ಯಾಧಿಗೆ ತುತ್ತಾಗುತ್ತಿದ್ದಾರಲ್ಲದೇ, ಜನಸಮುದಾಯದ ಇತರ ಮಕ್ಕಳ ಆರೋಗ್ಯದ ಪಾಲಿಗೂ ಕಂಟಕವಾಗುತ್ತಿದ್ದಾರೆ. ಸಿ.ಎನ್.ಎನ್ ಇತ್ತೀಚೆಗೆ ಬಿತ್ತರಿಸಿದ ಸುದ್ದಿಯ ಪ್ರಕಾರ, ಅಮೆರಿಕೆಯ ಅನೇಕ ರಾಜ್ಯಗಳಲ್ಲಿನ ವಿದ್ಯಾವಂತ ಮತ್ತು ಅವಿದ್ಯಾವಂತ ಮಾತಾಪಿತೃಗಳು, ಈ ಅವಧಿಯಲ್ಲಿ ತಮ್ಮ ಮಕ್ಕಳಿಗೆ ಲಸಿಕೆಯನ್ನು ಚುಚ್ಚಿಸಿಲ್ಲ. ಅವರ ಅಭಿಪ್ರಾಯದಲ್ಲಿ, ಈ ಮಕ್ಕಳಿಗೆ ತಾಯಿಯರು ಚೆನ್ನಾಗಿ ಹಾಲೂಡಿಸಿದ್ದಾರೆ, ಹಾಗಾಗಿ ಅವರೆಲ್ಲಾ ಬಹಳ ಆರೋಗ್ಯವಂತರಾಗಿದ್ದು, ಈ ವ್ಯಾಧಿಗಳ ವಿರುದ್ಧ ಉತ್ತಮವಾದ ರಕ್ಷಣೆಯನ್ನು ಹೊಂದಿದ್ದಾರೆ ಎಂದು ಇಂದಿಗೂ ವಾದಿಸುತ್ತಿರುವುದನ್ನು ನೋಡಿ ದಿಗ್ಭ್ರಾಂತಿಯಾಯಿತು. ಕೇವಲ ವೇಕಫ಼ೀಲ್ಡನ ಸಂಶೋಧನೆಯೊಂದೇ, ಜನಸಮುದಾಯದಲ್ಲಿ ಇಂತಹ ಬಲವಾದ ಅಭಿಪ್ರಾಯವನ್ನು ಮೂಡಿಸಲು ಸಾಧ್ಯವಿಲ್ಲ. ಅವನ ವಾದವನ್ನು ಜನತೆಗೆ ತಲುಪಿಸುವಲ್ಲಿ ಮಾಧ್ಯಮಗಳು ಮತ್ತು ಅವರು ನಡೆಸುವ ಜನಪ್ರಿಯ ಹರಟೆ-ಕಾರ್ಯಕ್ರಮಗಳು ಇದರಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸಿವೆ.

 

ಪ್ರೊಫ಼ೆಸರ್ ಹ್ಯಾರಿ ಕೊಲಿನ್ಸರ ಉಪನ್ಯಾಸ ೨೦೧೩ ಅಕ್ಟೋಬರ್:  “Are we all experts now?!

 

2008 ರ ಏಪ್ರಿಲ್ ತಿಂಗಳಲ್ಲಿ, ಅಮೆರಿಕೆಯ ದೂರದರ್ಶನದಲ್ಲಿ ಪ್ರಸಾರವಾಗುವ, ಲ್ಯಾರಿ ಕಿಂಗ್ ಶೋ (Larry King show) ಎಂಬ ಪ್ರಖ್ಯಾತ ಹರಟೆಯ ಕಾರ್ಯಕ್ರಮದಲ್ಲಿ “Playboy” ಎಂಬ ಪ್ರಸಿದ್ಧ ಪತ್ರಿಕೆಯಲ್ಲಿ ರೂಪದರ್ಶಿಯಾಗಿದ್ದ, ಜೆನ್ನಿ ಮೆಕಾರ್ಥಿ (Jenny McCarthy) ಎಂಬ ಮಹಿಳೆಯೊಬ್ಬಳು ಭಾಗವಹಿಸಿದ್ದಳು. ಅವಳು ಈ ಹರಟೆಯಲ್ಲಿ ಮಾತನಾಡುವಾಗ, ಅವಳ ಮಗನಿಗೆ MMR ಲಸಿಕೆಯನ್ನು ಚುಚ್ಚಿಸಿದ ಹಲವು ತಿಂಗಳುಗಳ ನಂತರ, ಒಂದು ಮದ್ಯಾನ್ಹ ಶಾಲೆಯಿಂದ ಹಿಂತಿರುಗಿದಾಗ ಜ್ವರವೆಂದು ಮಲಗಿದವನು, ನಂತರದಲ್ಲಿ ಮಾತನಾಡುವುದನ್ನೇ ನಿಲ್ಲಿಸಿದನಲ್ಲದೇ, ಮುಂದೆ ಆಟಿಸಮ್ (Autism) ಎಂಬ ಸ್ವಲೀನತೆಯೆಂಬ ನಡವಳಿಕೆಯ ವ್ಯಾಧಿಗೆ ತುತ್ತಾದ ಎಂಬ ಒಂದು ಪ್ರಕಾಂಡ ಪಾಂಡಿತ್ಯದ ಹೇಳಿಕೆಯನ್ನು ನೀಡಿದಳು. ಅಷ್ಟೇ ಅಲ್ಲದೇ, ಅಮೆರಿಕೆಯ ಕುಟುಂಬದ ಮಾತಾಪಿತೃಗಳು, ಈ ಲಸಿಕೆಯನ್ನು ತಮ್ಮ ಮಕ್ಕಳಿಗೆ ಚುಚ್ಚಿಸುವ ವಿಷಯವನ್ನು ವಿಚಾರಮಾಡಬೇಕೆಂದೂ, ಕೇವಲ ವೈದ್ಯರ ಸಲಹೆಯನ್ನು ಅನುಸರಿಸುವುದರಲ್ಲಿ ಯಾವ ಪ್ರಯೋಜನವೂ ಇಲ್ಲ, ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಆ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಲಕ್ಷಾಂತರ ತಂದೆತಾಯಿಗಳ ಮನಗಳಲ್ಲಿ ಸಂಶಯದ ಬೀಜವನ್ನೇ ಬಿತ್ತಿದ್ದಳು. ಅವಳ ಪ್ರಕಾರ, ಮಕ್ಕಳ ತಂದೆತಾಯಿಗಳು ತಮ್ಮ ಅನುಭವವನ್ನಾಧರಿಸಿ ನೀಡುವ ಮಾಹಿತಿ ವೈಜ್ಞಾನಿಕವಾದದ್ದು ಎನ್ನುವುದನ್ನು ಸೂಚಿಸುತ್ತಿತ್ತು. ಈ ರೀತಿ ಒಬ್ಬ ಜನಪ್ರಿಯ ವ್ಯಕ್ತಿ, ದೂರದರ್ಶನದಂತಹ ಪ್ರಭಾವಿ ಮಾಧ್ಯಮದ ಮೂಲಕ, MMR (Measles,Mumps,Rubella) ಲಸಿಕೆಯನ್ನು ಮಕ್ಕಳಿಗೆ ಚುಚ್ಚಿಸುವುದರಿಂದ, ಮಕ್ಕಳು ಭಯಂಕರ ನಡವಳಿಕೆಯ ವ್ಯಾಧಿಗೆ ತುತ್ತಾಗುತ್ತಾರೆ ಎಂದು ನೀಡುವ ಆಳವಾದ ಹೇಳಿಕೆ, ಒಂದು ರೀತಿಯಲ್ಲಿ ಅಸಾಮಾನ್ಯವಾಗಿ ತೋರುತ್ತದೆ. ಆದರೆ, ಅಂತಹ ಹೇಳಿಕೆಯೊಂದು ಸಮುದಾಯದ ಆರೋಗ್ಯಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಬಹುದು ಎಂಬುದು ಇತ್ತೀಚಿನ ವಿದ್ಯಮಾನದಿಂದ ತಿಳಿದುಬರುತ್ತಿದೆ.

 

1950ರ ದಶಕದಲ್ಲಿ, ವೈಜ್ಞಾನಿಕ ಸಂಶೋಧನೆಯ ಬಗ್ಗೆ ಇಂತಹದೊಂದು ಹೇಳಿಕೆಯನ್ನು ಒಂದು ರೀತಿಯಲ್ಲಿ ಅನೂಹ್ಯವೆಂದು ಪರಿಗಣಿಸಬಹುದಿತ್ತು. ವಿಜ್ಞಾನವು ತನ್ನ ರೆಕ್ಕೆಯನ್ನು ಬಿಚ್ಚಿ ಹಾರಾಡಲು ಪ್ರಾರಂಭಿಸಿದ್ದ ಸಮಯವದು. ಲಂಡನ್ನಿನಲ್ಲಿ ನಡೆಯುತ್ತಿದ್ದ ದೊಡ್ಡ ದೊಡ್ಡ ವಿಜ್ಞಾನ ಪ್ರದರ್ಶನಗಳು, ಜನಗಳ ಊಹೆಗೆ ಸಾಕಷ್ಟು ಬಣ್ಣವನ್ನು ಬಳಿಯುತ್ತಿತ್ತು. ಮಾನವನು ವಿಜ್ಞಾನ ಮತ್ತು ತಂತ್ರಜ್ಞಾನಗಳ ನೆರವಿನಿಂದ ನಿರ್ಮಿಸಿದ್ದ ಮೊಟ್ಟಮೊದಲ ಪ್ರಯಾಣಿಕರ ಜೆಟ್ ವಿಮಾನ, ನೈಲಾನ್ ಬಟ್ಟೆಯ ಶೋಧನೆ, ಮೊದಲ ಅಣುಶಕ್ತಿ ಉತ್ಪಾದನೆ, ಮೊದಲ ಪರಮಾಣು ಫ಼್ಯೂಶನ್ ಪ್ರತಿಕ್ರಿಯೆ, ಹೀಗೆ ಹಲವಾರು ವೈಜ್ಞಾನಿಕ ಅನ್ವೇಷಣೆಗಳು ಮಾನವನ ಕಲ್ಪನೆಗಳನ್ನು ಬೆಳಸುತ್ತಲೇ ನಡೆದಿದ್ದವು. ನಂತರ 50 ದಶಕದ ಕಡೆಯಲ್ಲಿ ಸಂಭವಿಸಿದ ಹಲವಾರು ವಿಮಾನ ಅಪಘಾತಗಳು, ಬಳಕೆಯಾಗುತ್ತಾ ಹೋದಂತೆ ನೈಲಾನ್ ಬಟ್ಟೆ ವಿವರ್ಣವಾಗುವ ಸಂಗತಿ, ಪರಮಾಣುಶಕ್ತಿ ಸ್ಥಾವರಗಳಿಂದ ಹೊಮ್ಮಬಹುದಾದ ವಿಕಿರಣಗಳ ಅಪಾಯದ ಸಾಧ್ಯತೆ, ಪರಮಾಣುವನ್ನು ಆತಂಕವಾದಿಗಳು ಬಳಸಿ, ಮಾನವ ಜಾತಿಯನ್ನು ನಿರ್ಮೂಲನ ಮಾಡಬಹುದಾದ ಪ್ರಯತ್ನಗಳು, ಹೀಗೆ ಹಲವು ಹತ್ತು ಬೆಳವಣಿಗೆಗಳು ಜನಸಾಮಾನ್ಯರನ್ನು ಕಾಡಿದ್ದವು. ಆದರೆ, 60ರ ದಶಕಗಳು ಮತ್ತೊಮ್ಮೆ ನಮ್ಮ ಪಾಲಿಗೆ ಆಸಕ್ತಿಪೂರ್ಣವಾದವು. ವಿಜ್ಞಾನದಲ್ಲಿ ಎಲ್ಲಾ ರೀತಿಯ ಆಲೋಚನೆಗಳಿಗೂ ಅನುಮತಿಯಿತ್ತು. ಪಾಶ್ಚಿಮಾತ್ಯ ದೇಶಗಳಲ್ಲಿ, ಮಾದಕ ದ್ರವ್ಯಗಳ ಸೇವನೆ ಮನೆಮಾತಾಯಿತು. ಹಲವಾರು ಪ್ರಸಿದ್ಧ ನಿಯತಕಾಲಿಕೆಗಳು, ಎಲ್.ಎಸ್.ಡಿ ಅಂತಹ ಮಾದಕದ್ರವ್ಯದ ಪ್ರಭಾವದಲ್ಲಿ, ವಿಶೇಷ ರೀತಿಯ ವಿಜ್ಞಾನದ ಸಂಶೋಧನೆಗೆ ಅನುಮತಿ ಮತ್ತು ಅವಕಾಶಗಳಿರಬೇಕು ಎಂದು ಪ್ರತಿಪಾದಿಸಿ ಬರೆದಿದ್ದ ಲೇಖನಗಳನ್ನು ಪ್ರಕಟಿಸಿದ್ದವು.

 

ಮುಂದೆ 70ರ ದಶಕಗಳಲ್ಲಿ, ವಿಜ್ಞಾನದ ಯಶಸ್ಸಿನ ಹಿಂದಿರುವ ಸಾಮಾಜಿಕ ಮತ್ತು ರಾಜಕೀಯ ರಹಸ್ಯಗಳನ್ನು ವಿವರಿಸುವ ವಿಷಯವೊಂದು ಜನ್ಮವೆತ್ತಿತು. ಅದರ ಮೂಲ ಉದ್ದೇಶವು, ವಿಜ್ಞಾನದ ಅಸಾಮಾನ್ಯ ಯಶಸ್ಸನ್ನು ವಿವರಿಸುವುದಲ್ಲ, ಆದರೆ ಅದೊಂದು ಬಹಳ ಸಾಮಾನ್ಯವಾದ ವಿಷಯವೆಂದು ಜನಗಳಿಗೆ ತೋರಿಸುವುದಾಗಿತ್ತು. Sociology of Science ಎಂಬ ಈ ಹೊಸ ವಿಭಾಗ, ಅರ್ಥಾತ್, ವಿಜ್ಞಾನ ಸಮಾಜಶಾಸ್ತ್ರದ ಪರಿಣಿತರ ಪ್ರಕಾರ, ವಿಜ್ಞಾನವು “ನೀವೇ ಮಾಡಿ ನೋಡಿ (Do it yourself [DIY])” ಎನ್ನುವಂತಹ, ಮತ್ತು ರಾಜಕೀಯದ ಒಂದು ಉನ್ನತ ದರ್ಜೆಯ ಮಿಶ್ರಣವಾಗಿತ್ತು. ವಿಜ್ಞಾನವು ಎಲ್ಲವನ್ನೂ ಸಾಬೀತು ಮಾಡಿ ತೋರಿಸುವುದಿಲ್ಲ, ವಿಜ್ಞಾನಿಗಳು ನಡೆಸುವ ಸಂಶೋಧನೆಯು, ಒಂದು ಪರಸ್ಪರ ಒಪ್ಪಂದ ಮತ್ತು ವಿಶ್ವಾಸದ ಮೇರೆಗೆ ಒಪ್ಪಿಕೊಳ್ಳುವ ಒಂದು ವಿಚಾರವಾಗಿದ್ದು, ವಿಜ್ಞಾನವೇನು ಪರಿಪೂರ್ಣವಾದದ್ದಲ್ಲ ಎನ್ನುವುದನ್ನು ಎತ್ತಿಹಿಡಿಯುವುದಾಗಿತ್ತು. ಇದಕ್ಕೆ ಉದಾಹರಣೆಗಳಾಗಿ, 1987ರಲ್ಲಿ ಬಿಬಿಸಿ ದೂರದರ್ಶನದ ಹವಾಮಾನದ ವರದಿಯಲ್ಲಿ, ಬ್ರಿಟನ್ನಿನ ಕರಾವಳಿಯನ್ನು ಸಮೀಪಿಸುತ್ತಿದ್ದ ಚಂಡಮಾರುತದ ಬಗ್ಗೆ ನೀಡಿದ್ದ ಅಪೂರ್ಣವಾದ ಮುನ್ನೆಚ್ಚರಿಕೆಯು, ವಿಜ್ಞಾನಿಗಳಿಗೆ ದೀರ್ಘಾವಧಿಯ ಹವಾಮಾನವಿರಲಿ, ಅಲ್ಪಾವಧಿಯ ಹವಾಮಾನವನ್ನೂ ಕೂಡಾ ನಿಖರವಾಗಿ ಮುನ್ನುಡಿಯಲು ಅಸಾಧ್ಯ ಎಂದು ತೋರಿಸಿತ್ತು.

 

ಹಾಗಾಗಿ, 50 ಮತ್ತು 60 ದಶಕಗಳಲ್ಲಿ, ಅಗ್ರಸ್ಥಾನವನ್ನು ಪಡೆದಿದ್ದ ವಿಜ್ಞಾನ, ಮುಂದೆ ವಿವಾದಕೊಳ್ಳಗಾಗಿ ಎಲ್ಲರೂ ಅದರ ಪರಿಪೂರ್ಣತೆಯ ಬಗ್ಗೆ ಪ್ರಶ್ನಿಸುವಂತಹ ಪರಿಸ್ಥಿತಿ ಉಂಟಾಯಿತು. ಈಗಂತೂ, ಹೊಗೆಸೊಪ್ಪಿನ ಉದ್ಯಮಗಳು, ಕ್ಯಾನ್ಸರ್ ರೋಗಕ್ಕೂ, ಹೊಗೆಸೊಪ್ಪಿನ ಬಳಕೆಗೂ ಇರುವ ಸಂಬಂಧವನ್ನು ಮುಚ್ಚಿ ತಮ್ಮ ಲೇಖನಗಳನ್ನು ಪ್ರಕಟಿಸಲು ವಿಜ್ಞಾನಿಗಳಿಗೆ ಅಪಾರವಾದ ಧನದ ಆಮಿಷವನ್ನು ತೋರುತ್ತಿವೆ. ಶ್ರೀಮಂತವಾದ ತೈಲದ ಉದ್ಯಮಗಳು, ಮಾನವಜನ್ಯ ಚಟುವಟಿಕೆಗಳಿಗೂ, ಜಾಗತಿಕ ತಾಪಮಾನದ ಏರಿಕೆಗೂ ಇರುವ ಸಂಬಂಧವನ್ನು ಪ್ರಶ್ನಿಸಲು, ವಿಜ್ಞಾನಿಗಳು ನಡೆಸುತ್ತಿರುವ ಸಂಶೋಧನೆಗೆ ನೀಡುತ್ತಿರುವ ಧನಸಹಾಯ, ಹೀಗೆ ಹಲವು ಹತ್ತು ವಿದ್ಯಮಾನಗಳು ವಿಜ್ಞಾನದಲ್ಲಿರುವ ಅನೇಕ ಕೊರತೆಗಳನ್ನು ಎತ್ತಿ ತೋರಿಸಿ, ವಿಜ್ಞಾನವು ತನ್ನ ಅಧಿಕಾರವನ್ನು ಕಳೆದುಕೊಂಡಿದೆ ಎನ್ನುವುದನ್ನು ಜನಸಾಮಾನ್ಯರಿಗೆ ಹರಡುವಲ್ಲಿ ಯಶಸ್ವಿಯಾಗಿದೆ.

 

ಆದಾಗ್ಯೂ, ಇತ್ತೀಚೆಗೆ ಕಣಭೌತ ಶಾಸ್ತ್ರಜ್ಞರು, ತಮ್ಮ ಅಗಾಧವಾದ ಬುದ್ಧಿಶಕ್ತಿಯಿಂದ ನಿರ್ಮಿಸಿದ ಭಾರಿ ಕಣ-ಘರ್ಷಕದ (Large Hadron Collider) ಮೂಲಕ ಪತ್ತೆಹಚ್ಚಿರುವ ಹಿಗ್ಸ್-ಬೋಸಾನ್ ಕಣಗಳ ಅನ್ವೇಷಣೆ, ಕ್ವಾಂಟಮ್ ಸಿದ್ಧಾಂತದ ಪ್ರತಿಪಾದನೆ, ಮತ್ತು ಹಬ್ಬಲ್ ಅಂತರಿಕ್ಷ ದೂರದರ್ಶಕದ ಮೂಲಕ ತೆಗೆದಿರುವ, ಈ ವಿಶ್ವದ ವಿಸ್ಮಯಕಾರಿ ವಸ್ತುಗಳ ಚಿತ್ರಗಳು, ಹೀಗೆ ಅನೇಕ ವೈಜ್ಞಾನಿಕ ಸಾಧನೆಗಳು ಇನ್ನೂ ಕೂಡಾ ವಿಜ್ಞಾನದ ಯಶಸ್ಸಿನ ಅಭೂತಪೂರ್ವ ಕಥೆಯನ್ನೇ ಹೇಳುತ್ತಲಿವೆ. ಅರ್ಥಶಾಸ್ತ್ರ ಮಾದರಿಗಳು, ವಿಜ್ಞಾನದ ಭವಿಷ್ಯವಾಣಿಗಳು ಸಾಕಷ್ಟು ಯಶಸ್ವಿಯಾದರೂ ಕೂಡಾ, ಎಲ್ಲೋ ಒಂದು ಮೂಲೆಯಲ್ಲಿ ನಡೆಯುವ ಅಜಾಗರೂಕತೆಯ ಸಂಗತಿಗಳು, ಇವೆಲ್ಲಾ ಯಶಸ್ಸನ್ನೂ ಮೂಲೆಗೊತ್ತಿ, ಏನೂ ತಿಳಿಯದ ಸಾಮಾನ್ಯ ಪ್ರಜೆಗಳೆಲ್ಲಾ ಕೇವಲ ತಾವು ಓದುವ ಹಲವಾರು ವೃತ್ತಪತ್ರಿಕೆಗಳು, ನೋಡುವ ದೂರದರ್ಶನದ ಹಲವಾರು ಯಥಾರ್ಥವಲ್ಲದ ಹರಟೆಯ ಕಾರ್ಯಕ್ರಮಗಳಲ್ಲಿ, ಜನಪ್ರಿಯ ಕಲಾವಿದರು ನೀಡುವ ಹೇಳಿಕೆಗಳನ್ನು ಕೇಳಿ, ಮನಬಂದಂತೆ ತಮ್ಮ ಅಭಿಪ್ರಾಯಗಳನ್ನು ವಿಜ್ಞಾನ ಮತ್ತು ವಿಜ್ಞಾನಿಗಳ ಬಗ್ಗೆ ವ್ಯಕ್ತಪಡಿಸುವ ಸಂದರ್ಭಗಳು ಒದಗುತ್ತಿವೆ.

 

ಪ್ರತಿಯೊಬ್ಬರೂ, ಕಾಲು-ಬಾಯಿ ರೋಗ, (Foot & Mouth disease) ಪರಮಾಣು ಸಮ್ಮಿಳನ ಶಕ್ತಿ, ಮ್ಯಾಡ್ ಕೌ ರೋಗ (Mad cow disease), ಜಾಗತಿಕ ಹವಾಮಾನ ಬದಲಾವಣೆ, MMR ಲಸಿಕೆ ಹೀಗೆ ಹಲವು ಹತ್ತು ವಿಷಯಗಳ ಬಗ್ಗೆ ತಮ್ಮ ದೃಢ ಅಭಿಪ್ರಾಯಗಳನ್ನು ನೀಡಿ, ತಮಗೆಲ್ಲಾ ಒಂದು ರೀತಿಯ ಪೂರ್ವನಿಯೋಜಿತ ಪರಿಣಿತಿ (Default Expertise) ಇದೆ ಎನ್ನುವ ಕಲ್ಪನೆಯನ್ನು ಮೂಡಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿಯೇ, ಜೆನ್ನಿ ಮೆಕಾರ್ಥಿ ಅಂತಹ ಮಹಿಳೆಯೊಬ್ಬಳಿಗೆ, ದೂರದರ್ಶನದ ಜನಪ್ರಿಯ ಕಾರ್ಯಕ್ರಮವೊಂದರಲ್ಲಿ, ಗಂಭೀರವಾದ ವೈದ್ಯಕೀಯ ವಿಜ್ಞಾನ ವಿಷಯದ ಬಗ್ಗೆ ತನ್ನ ಅಭಿಪ್ರಾಯವನ್ನು ನೀಡುವ ಅವಕಾಶ ದೊರೆತಿದೆ.

 

ವಿಜ್ಞಾನ ಸಮಾಜಶಾಸ್ತ್ರ ಮತ್ತು ಪರಿಣಿತಿ: ವಿಜ್ಞಾನ ಸಮಾಜಶಾಸ್ತ್ರಜ್ಞರಿಗೆ ಇರುವ ಒಂದು ಸಮಸ್ಯೆಯೆಂದರೆ, ವಿಜ್ಞಾನದ ಇತಿಹಾಸ ಮತ್ತು ತತ್ವಗಳು ಒಂದು ರೀತಿಯಲ್ಲಿ ಪರಿಪೂರ್ಣವಾದ ವಿಷಯಗಳು ಎಂಬ ಗೀಳಿದೆ. ಆ ವಿಷಯದ ಬಗ್ಗೆ ಮತ್ತೊಮ್ಮೆ ಆಳವಾಗಿ ಗಮನಿಸಿ ನೋಡುವ ಸಮಯ ಈಗ ಹತ್ತಿರ ಬಂದಿದೆ. ಇಲ್ಲಿಯವರೆಗಿನ ಬೆಳವಣಿಗೆಗಳನ್ನು ಗಮನಿಸುತ್ತಾ ಹೋದರೆ, ವಿಜ್ಞಾನಕ್ಕೆ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯವಾಗಿಲ್ಲ ಎಂಬ ಅಂಶ ತಿಳಿಯುತ್ತದೆ. ಮಾನವನ ಜೀವನದ ಗುಣ-ಮಟ್ಟವನ್ನು, ಆದಷ್ಟೂ ಉತ್ತಮಗೊಳಿಸುವ ಮತ್ತು ಅದನ್ನು ಅನೇಕ ರೀತಿಗಳಲ್ಲಿ ಸಾಧಿಸಿರುವ ವಿಜ್ಞಾನದ ಗುರಿ, ಇನ್ನೂ ಹೆಚ್ಚಿನದನ್ನು ಸಾಧಿಸುವುದೇ ಹೊರತು, ಪರಿಪೂರ್ಣತೆಯಲ್ಲ ಎನ್ನುವುದೂ ಅರಿವಾಗುತ್ತದೆ. ಆದ್ದರಿಂದ ವಿಜ್ಞಾನದ ನೂತನ ಧ್ಯೇಯವು, ಉತ್ಕೃಷ್ಟವಾದ ಸಾಧನೆಗಳನ್ನು ಗೈಯ್ಯುವ ಮಾರ್ಗದಲ್ಲಿ ಮುನ್ನಡೆಯುವುದಾಗಿದೆ. ಇದನ್ನು ಸಾಧಿಸುವುದಾದರೂ ಹೇಗೆ? ಒಂದು ಮಾರ್ಗವೆಂದರೆ, ವೈಜ್ಞಾನಿಕ ವಿಷಯಗಳಲ್ಲಿ ಪರಿಣಿತಿ ಉಳ್ಳವರ ಅಭಿಪ್ರಾಯಗಳಿಗೆ ಹೆಚ್ಚಿನ ಮನ್ನಣೆ ನೀಡುವುದು. ಈ ತಜ್ಞರ ಅಭಿಪ್ರಾಯಗಳು ಯಾವಾಗಲೂ ನಿಖರವಾಗಿಲ್ಲದಿರಬಹುದು, ಅಥವಾ ತಜ್ಞರಿಗೆ ಅವರು ನೀಡುವ ಅಭಿಪ್ರಾಯಗಳಲ್ಲಿ ಸದಾ ಪೂರ್ಣ ವಿಶ್ವಾಸವೂ ಇಲ್ಲದಿರಬಹುದು. ಆದರೂ ಕೂಡಾ, ಪರಿಣಿತಿಯು ವಿಜ್ಞಾನದ ಯಶಸ್ಸಿಗೆ ಒಂದು ಅತ್ಯಾವಶ್ಯಕ ಹಾಗೂ ನಿರ್ಣಾಯಕವಾದ ಅಂಶವಾಗಿದೆ.

 

ಹಾಗಾದರೆ ಮೊದಲಿಗೆ ಈ ಪರಿಣಿತಿಯ ಸ್ವಭಾವವನ್ನು ಚೆನ್ನಾಗಿ ಪರೀಕ್ಷಿಸಿ ನೋಡಬೇಕು. ಪರಿಣಿತಿಯೆಂದರೇನು? ಮತ್ತು ಆ ಪರಿಣಿತಿಯನ್ನು ಪಡೆದಿರುವರು ಯಾರು? ಪರಿಣಿತಿಯ ಬಗ್ಗೆ 2002, ಹಾಗೂ 2007ರಲ್ಲಿ ಪ್ರಕಟಿಸಿರುವ ಪರಿಣಿತಿಗಳ ಆವರ್ತಕ ಕೋಷ್ಟಕದ (Periodic table of expertise) ಪ್ರಕಾರ, ಪರಿಣಿತಿಯಲ್ಲಿ ವಿವಿಧ ಪ್ರಕಾರಗಳಿವೆ. ಅವುಗಳಲ್ಲಿ ಹಲವನ್ನು ಈ ಕೆಳಕಂಡಂತೆ ಹೆಸರಿಸಬಹುದು.

 

1.ಸರ್ವತ್ರ ಪರಿಣಿತಿಗಳು ಈ ನೈಪುಣ್ಯತೆ, ಈ ಸಮಾಜದಲ್ಲಿ ಬದುಕಲು ಎಲ್ಲರ ಬಳಿ ಇರುವ ಒಂದು ಮೂಲಭೂತವಾದ ಪರಿಣಿತಿ. ಉದಾಹರಣೆಗೆ, ಆಡುಭಾಷೆ, ಬಳಕೆಯ ಗಣಿತ ಇತ್ಯಾದಿ…

  1. ತಜ್ಞರ ನೈಪುಣ್ಯತೆಗಳು ತಜ್ಞತೆಯನ್ನು ಇನ್ನೂ ಹಲವು ಪ್ರಕಾರಗಳಾಗಿ ವಿಂಗಡಿಸುತ್ತಾರೆ.

2.1 ಜನಸಾಮಾನ್ಯರ ವಿಜ್ಞಾನ ಜ್ಞಾನ: ಈ ಜ್ಞಾನವು ಸಾಮಾನ್ಯ ಜನವರ್ಗವು, ವಿಜ್ಞಾನದ ಬಗ್ಗೆ ಜನಪ್ರಿಯ ಲೇಖನಗಳು, ಕಾರ್ಯಕ್ರಮಗಳನ್ನು ಓದಿ, ನೋಡಿ ಸಂಪಾದಿಸುವಂತಹದು. ಉದಾಹರಣೆಗೆ, ವೈರಸ್ ಮೂಲದ ರೋಗಗಳಾದ, ಇಂಫ಼್ಲುಯೆಂಜ಼ದಂತಹ ರೋಗಗಳನ್ನು, ಜೀವ ವಿರೋಧಕಗಳ (Antibiotics), ಸೇವನೆಯಿಂದ ಗುಣಪಡಿಸಲಾಗದು ಎನ್ನುವ ವಿಷಯ, ಎಲೆಕ್ಟ್ರಿಕ್ ಕೆಟಲಿನಲ್ಲಿ ನೀರನ್ನು ಕುದಿಸುವುದರಿಂದ ಇಂಧನವನ್ನು ಉಳಿಸಬಹುದು ಎನ್ನುವ ಅಂಶ. ಹೀಗೆ ಇಂತಹ ಜ್ಞಾನವನ್ನು ಒಬ್ಬರಿಂದ ಮತ್ತೊಬ್ಬರು ಪರಸ್ಪರ ಮಾತನಾಡುವುದರಿಂದಲೂ ಪಡೆದುಕೊಳ್ಳಬಹುದು.

2.2: ಬೀಯರ್ ಮ್ಯಾಟ್ ಜ್ಞಾನ: ಇದು ಪರಿಣಿತಿಯಲ್ಲಿ ಅತ್ಯಂತ ಕಡಿಮೆ ಮಟ್ಟದ್ದು. ಉದಾಹರಣೆಗೆ ಕ್ಯಾಮೆರಾದಂತಹ ಸಾಧನವನ್ನು ಬಳಸಲು ಪಡೆದಿರುವ ಸಾಮಾನ್ಯ ಪರಿಣಿತಿ.

2.3: ಪ್ರಾಥಮಿಕ ಮೂಲ ಜ್ಞಾನ: ಈ ಜ್ಞಾನವನ್ನು ವಾಸ್ತವದಲ್ಲಿ ಒಬ್ಬ ವ್ಯಕ್ತಿ ವೃತ್ತ ಪತ್ರಿಕೆಗಳು, ಜನಪ್ರಿಯ ವೈಜ್ಞಾನಿಕ ಲೇಖನಗಳನ್ನು ಓದಿ ಸಂಪಾದಿಸಬಹುದು. ಜನಸಾಮಾನ್ಯರು ಇಂತಹ ಜ್ಞಾನವನ್ನು ಪಡೆಯಲು ಸಾಧ್ಯವಿದೆ. ಆದರೆ, ಕೇವಲ ಈ ರೀತಿಯ ಜನಪ್ರಿಯ ಲೇಖನಗಳು, ವಿಜ್ಞಾನದ ಬಗ್ಗೆ ಆಳವಾದ ತಿಳುವಳಿಕೆಯನ್ನು ನೀಡುವುದಿಲ್ಲ. ಸಂಪೂರ್ಣವಾಗಿ ಉನ್ನತ ಮಟ್ಟದಲ್ಲಿ ಬರೆದ ವೈಜ್ಞಾನಿಕ ಪ್ರಬಂಧಗಳನ್ನು, ಜನಸಾಮಾನ್ಯ ಅಥವಾ ವಿಜ್ಞಾನದಲ್ಲಿ ಪರಿಣಿತಿ ಇಲ್ಲದವರು ಅರ್ಥಮಾಡಿಕೊಳ್ಳಲು ಸಮರ್ಥರಲ್ಲ. ಕಾರಣ ಅದನ್ನು ಅರ್ಥಮಾಡಿಕೊಳ್ಳಲು ಅವಶ್ಯವಾದ ದೃಢವಾದ ನೈಪುಣ್ಯತೆ ಜನಸಾಮಾನ್ಯರಿಗಿರುವುದಿಲ್ಲ. ಆಳವಾದ ವೈಜ್ಞಾನಿಕ ನೈಪುಣ್ಯತೆ ಇಲ್ಲದ ಜನವರ್ಗ, ಕೇವಲ ಅಂತರಜಾಲಾ ತಾಣದಲ್ಲಿ ಲಭ್ಯವಿರುವ ವೈಜ್ಞಾನಿಕ ವಿಚಾರಗಳನ್ನು ಓದಿ, ಅದರ ಆಧಾರದಿಂದ ದೇಶದ ಒಂದು ಗಂಭೀರವಾದ ಆರೋಗ್ಯದ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ತೀರ್ಮಾನ ತೆಗೆದುಕೊಂಡರೆ ಆಗುವ ಅನಾಹುತಕ್ಕೆ ಹಲವಾರು ಉದಾಹರಣೆಗಳಿವೆ.

 

ಅದರಲ್ಲಿ ಒಂದೆಂದರೆ, 1999ರಲ್ಲಿ, ದಕ್ಷಿಣ ಆಫ಼್ರಿಕಾದಲ್ಲಿ, ಭಯಂಕರ ವ್ಯಾಧಿ ಏಡ್ಸ್ ರೋಗಕ್ಕೆ ಕಾರಣವಾದ ಎಚ್.ಐ.ವಿ ವೈರಸ್ಸುಗಳ ವಿರುದ್ಧವಾಗಿ ವರ್ತಿಸುವ ಪ್ರತಿರೋಧಕ ಔಷಧಗಳ ವಿಷತ್ವದ ಬಗ್ಗೆ, (Anti-retroviral drug toxicity) ಹಾಗೂ ಅವುಗಳ ಬಳಕೆಯಿಂದ ಮಾನವನ ಆರೋಗ್ಯದ ಮೇಲಾಗುವ ಹಾನಿಯ ಬಗ್ಗೆ, ಅಂತರಜಾಲ ತಾಣದಲ್ಲಿ ಅಗಾಧವಾದ ಪ್ರಮಾಣದಲ್ಲಿ ಲಭ್ಯವಿದ್ದ ಅವೈಜ್ಞಾನಿಕ ಮಾಹಿತಿಯನ್ನಾಧಾರಿಸಿ, ಅಂದಿನ ಅಧ್ಯಕ್ಷರಾಗಿದ್ದ ಥಾಬೋ ಬೆಕಿ (Thabo Mbeki) ಮತ್ತು ಅವರ ಸಮಿತಿಯ ಸದಸ್ಯರು ತೆಗೆದುಕೊಂಡ ತೀರ್ಮಾನವು, ಸುಮಾರು 10,000 ಕ್ಕಿಂತಲೂ ಅಧಿಕವಾದ ಸಂಖ್ಯೆಯ ಜನಗಳ ಮೃತ್ಯುವಿಗೆ ಕಾರಣವಾಯಿತು. ಈ ಸಂದರ್ಭದಲ್ಲಿ ಪರಿಣಿತರ ಸಲಹೆಯನ್ನು ಅನುಸರಿಸದೆ, ತಮ್ಮ ಪ್ರಾಥಮಿಕ ಮೂಲಜ್ಞಾನವನ್ನು ಅನ್ವಯಿಸಿದಾಗ ನಡೆದ ಪ್ರಮಾದಕ್ಕೆ ಇದೊಂದು ಉತ್ತಮವಾದ ಉದಾಹರಣೆ.

 

ಇಂತಹುದೇ ಮತ್ತೊಂದು ಹಗರಣ ಇತ್ತೀಚೆಗೆ ಬಯಲಿಗೆ ಬಂದಿದೆ. Climate-gate ಎಂಬ ಹೆಸರಿನಿಂದ ಕರೆಯಲ್ಪಡುವ ಈ ಪ್ರಕರಣವು, ಬದಲಾಗುತ್ತಿರುವ ನಮ್ಮ ಭೂಮಿಯ ಹವಾಮಾನದ ಬಗ್ಗೆ ನಡೆದಿರುವ ಸಂಶೋಧನೆಯಲ್ಲಿ, ಹವಾಮಾನ ಪರಿಣಿತರ ನಡುವೆ ಇರುವ ಭಿನ್ನಾಭಿಪ್ರಾಯದ ಚರ್ಚೆಯಾಗಿದೆ. ಈ ಭಿನ್ನಾಭಿಪ್ರಾಯಗಳು, ಕೇವಲ ಕೆಲವೇ ವ್ಯಕ್ತಿಗಳ ನಡುವೆ ಪ್ರಾರಂಭವಾಗಿ, ಮುಂದೆ ಅಲ್ಲಿಂದ ಮಾಧ್ಯಮದವರ ಮೂಲಕ ತಿರುಚಲ್ಪಟ್ಟು, ಜನಸಾಮಾನ್ಯರಿಗೆ ತಲಪುವ ವೇಳೆಗೆ, ಅದರ ಗಂಭೀರತೆಗೆ ಬಣ್ಣ ಹಚ್ಚಿ ಅದನ್ನು ಹತ್ತು ಪಟ್ಟು ಉತ್ಪ್ರೇಕ್ಷಿಸಿ ವರ್ಧಿಸಲಾಗಿದೆ. ಈ ಸಮಸ್ಯೆ ಈಗಂತೂ, ಮಾಹಿತಿ ಮಾಧ್ಯಮಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿ, ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿದೆ. ಇದೊಂದು ಅಪಾಯಕರ ಪರಿಸ್ಥಿತಿ. ಕೇವಲ ಮಾಧ್ಯಮದ ಮೂಲಕ ತಿರುಚಲ್ಪಟ್ಟ ವೈಜ್ಞಾನಿಕ ಮಾಹಿತಿಯನ್ನು ಪಡೆದ ಜನಸಾಮಾನ್ಯರು, ತಮಗೆ ಈ ವಿಷಯದ ಬಗ್ಗೆ ಬಹಳಷ್ಟು ಪರಿಣಿತಿ ಇದೆ ಎಂಬಂತೆ ವರ್ತಿಸುತ್ತಿದ್ದಾರೆ.  ಈ ವಿಷಯದ ಬಗ್ಗೆ ಸಾಕಷ್ಟು ಸಂಖ್ಯೆಯಲ್ಲಿ ಜನಬಲವನ್ನು ಸೇರಿಸಿ, ಒಂದು ದೊಡ್ಡ ಪ್ರಮಾಣದ ಪ್ರಚಾರೋದ್ಯಮ ಮತ್ತು ಚಳುವಳಿಯನ್ನೇ ಪ್ರಾರಂಭಿಸಿ ಜನಗಳ ಮನದಲ್ಲಿ ಭೀತಿಯ ಬೀಜವನ್ನೂ ಬಿತ್ತುತ್ತಿದ್ದಾರೆ. ಆದರೆ, ಇಂತಹ ಪ್ರಚಾರಕಾರ್ಯಗಳಲ್ಲಿ ತೊಡಗಿರುವ ವ್ಯಕ್ತಿಗಳಾರೂ ತಜ್ಞರಲ್ಲ ಎನ್ನುವುದು ಇಲ್ಲಿ ಗಮನಾರ್ಹವಾದ ಅಂಶವಾಗಿದೆ.

  1. ಅಂತರ್ಗತ ಪರಿಣಿತಿ: (Specialist tacit Knowledge) ಈ ಜ್ಞಾನವನ್ನು, ಒಬ್ಬ ವ್ಯಕ್ತಿ ಯಾವುದೇ ವಿಷಯದಲ್ಲಿ ಪಾರಂಗತರಾದವರ ಸಂಗದಲ್ಲಿದ್ದು, ಅವರಾಡುವ ಮಾತುಕತೆಗಳನ್ನು ಕೇಳಿ, ಅನುಸರಿಸಿ ಪಡೆಯುವಂತಹದ್ದು. ವಿಜ್ಞಾನಿಗಳ ಜೊತೆಯಲ್ಲಿ, ಅವರ ಸಭೆಗಳಲ್ಲಿ, ಅವರ ಚರ್ಚೆಗಳಲ್ಲಿ ಕುಳಿತು ಕೇಳುತ್ತಾ, ಅವರ ಸಂಶೋಧನೆಗಳ ಬಗ್ಗೆ ಸ್ವಲ್ಪಮಟ್ಟಿಗೆ ಓದಿ ತಿಳಿದುಕೊಳ್ಳಬಹುದಾದಂತಹ ಪರಿಣಿತಿಯೇ, ಅಂತರ್ಗತ ಪರಿಣಿತಿ. ಇದರಲ್ಲಿ ಮತ್ತೆ ಎರಡು ವಿಧಗಳಿವೆ.

3.1: ವಿನಿಮಯ ಪ್ರಕ್ರಿಯೆ ಪರಿಣಿತಿ (Interactive expertise): ಈ ಪರಿಣಿತಿಯನ್ನು, ವಿಶೇಷ ಪರಿಣಿತಿ ಉಳ್ಳವರ ಜೊತೆಯಲ್ಲಿ ಇದ್ದು, ಅವರ ಮಾತುಕತೆಗಳಲ್ಲಿ, ಚರ್ಚೆಗಳಲ್ಲಿ, ಸಮ್ಮೇಳನಗಳಲ್ಲಿ ವರ್ಷಾನುಗಟ್ಟಲೆ ಭಾಗವಹಿಸಿ, ಅವರ ಪರಿಣಿತಿಯ ಬಗ್ಗೆ ತಿಳಿದುಕೊಳ್ಳುವುದು. ಉದಾಹರಣೆಗೆ, ಹಲವು ಸಮಾಜಶಾಸ್ತ್ರಜ್ಞರು, ವಿಜ್ಞಾನಿಗಳ ತಂಡಗಳೊಡನೆ, ದಶಕದ ಕಾಲವಾದರೂ ಭಾಗವಹಿಸಿ ಅವರ ತಜ್ಞತೆಯ ಬಗ್ಗೆ ತಿಳಿದುಕೊಳ್ಳುತ್ತಾರೆ. ಪ್ರೊಫ಼ೆಸರ್ ಹ್ಯಾರಿ ಕಾಲಿನ್ಸ್, ಕಾರ್ಡಿಫ಼್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರಜ್ಞ, (Professor Harry Collins, Sociologist, Cardiff University, United Kingdom), ಅದೇ ವಿಶ್ವವಿದ್ಯಾಲಯದ ಖಗೋಳಶಾಸ್ತ್ರ ಮತ್ತು ಭೌತಶಾಸ್ತ್ರ ವಿಭಾಗದಲ್ಲಿ, ಗುರುತ್ವದ ಅಲೆಗಳ ಬಗ್ಗೆ ನಡೆಸುತ್ತಿರುವ ಸಂಶೋಧನೆಯ ಬಗ್ಗೆ ಆ ತಂಡದೊಡನೆ ಸುಮಾರು ೧೦ ವರ್ಷಗಳಿಂದ ಸೇರಿಕೊಂಡು, ಈ ಮೇಲೆ ಹೇಳಿರುವ ಅಂತರ್ಗತ ಪರಿಣಿತಿಯನ್ನು ಪಡೆದು, ಆ ವಿಷಯದ ಬಗ್ಗೆ ಒಂದೆರಡು ಪುಸ್ತಕಗಳನ್ನೂ ಸಹಾ ಬರೆದಿದ್ದಾರೆ. ಹ್ಯಾರಿ ಇಂದು ಗುರುತ್ವದ ಅಲೆಗಳ ಸಂಶೋಧನೆಯ ಬಗ್ಗೆ, ಆ ವಿಜ್ಞಾನಿಗಳೊಡನೆ ಒಂದು ಮಟ್ಟದಲ್ಲಿ ಚರ್ಚೆ ಮಾಡಬಹುದಾದಷ್ಟು ಪರಿಣಿತಿ ಪಡೆದಿದ್ದರೂ, ಆ ಸಂಶೋಧನೆಗೆ ಬೇಕಾದ ಆಳವಾದ ಪರಿಣಿತಿ ಅವರಲ್ಲಿಲ್ಲ. ಆ ಸಂಶೋಧನೆಗೆ ಅಗತ್ಯವಾದ ತಾಂತ್ರಿಕ ಪರಿಣಿತಿಯ ಬಗ್ಗೆ ಮಾತನಾಡುವ ವಿಶೇಷ ತಜ್ಞತೆ ಅವರಲ್ಲಿಲ್ಲ. ಆದಾಗ್ಯೂ, ವಿನಿಮಯ ಪ್ರಕ್ರಿಯೆಯ ಮೂಲಕ ಸಂಪಾದಿಸಿದ ಪರಿಣಿತಿಯೇನೂ ಅಲ್ಪವಾದ ವಿಷಯವಲ್ಲ. ಅದಕ್ಕೂ ಒಬ್ಬ ವ್ಯಕ್ತಿ ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ.

  1. ವಿಶಾಲ ವಲಯ ಪರಿಣಿತಿಗಳು (Meta Expertise): ಈ ಪರಿಣಿತಿ ಉಳ್ಳವರು, ಹಲವಾರು ವಿಷಯಗಳ ಬಗ್ಗೆ ಒಂದು ವ್ಯಾಪಕ ಶ್ರೇಣಿಯ ಜ್ಞಾನವುಳ್ಳವರಾಗಿರುತ್ತಾರೆ. ಉದ್ಯಮಿಗಳು ಹಾಗೂ ಪತ್ರಿಕೋದ್ಯಮಿಗಳನ್ನು ಈ ಬಗೆಯ ಪರಿಣಿತಿಗೆ ಉದಾಹರಣೆ ನೀಡಬಹುದು. ಈ ರೀತಿಯ ಪರಿಣಿತಿ ಉಳ್ಳವರೂ ಕೂಡಾ, ಗಂಭೀರವಾದ ವಿಷಯಗಳನ್ನು ಚರ್ಚಿಸುವಾಗ, ಆಯಾ ವಲಯಗಳಲ್ಲಿನ ತಜ್ಞರ ಸಲಹೆಯ ಮೇರೆಗೆ ನಡೆದುಕೊಳ್ಳುವುದು ಸರಿಯೆನಿಸುತ್ತದೆ. ಹೊಗೆಸೊಪ್ಪಿನ ಉದ್ಯಮಗಳು ವಿಜ್ಞಾನಿಗಳ ಸಂಶೋಧನೆಗೆ ಹಣವನ್ನು ನೀಡಿ, ಹೊಗೆಸೊಪ್ಪಿನ ಬಳಕೆ ಮತ್ತು ಕ್ಯಾನ್ಸರ್ ನಡುವೆ ಇರುವ ಸಂಬಂಧದ ಬಗ್ಗೆ ಸಂಶೋಧನೆಗೆ ಪ್ರೋತ್ಸಾಹ ನೀಡಿದ ಪ್ರಕರಣಗಳು, ಒಂದು ಉತ್ತಮವಾದ ವೈಜ್ಞಾನಿಕ ಪರಿಪಾಠಕ್ಕೆ ಉದಾಹರಣೆಯಾಗಿದೆ. ಅದರ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗುವ ವೈಜ್ಞಾನಿಕ ಪ್ರಬಂಧಗಳೂ ಸಹಾ, ತನಿಖಾ ಪತ್ರಿಕೋದ್ಯಮದ ಮತ್ತೊಂದು ಉತ್ತಮ ಪರಿಪಾಠವೆನಿಸುತ್ತದೆ. ಆದ್ದರಿಂದ ಯಾವುದೇ ವೈಜ್ಞಾನಿಕ ಮತ್ತು ತಂತ್ರಜ್ಞಾನವನ್ನು ಸಂಬಂಧಿಸಿದ ವಿಷಯಗಳ ತೀರ್ಮಾನಗಳನ್ನು, ಅದರಲ್ಲಿ ಪರಿಣಿತಿ ಇರುವ ವರ್ಗಕ್ಕೆ ಬಿಡುವುದು ಉತ್ತಮ. ಇದರಲ್ಲಿ ರಾಜಕಾರಣಿಗಳು ಮತ್ತು ಉದ್ಯಮದವರು ನಡುವೆ ತಲೆಹಾಕದಿದ್ದರೆ ಸಮಾಜಕ್ಕೆ ಕ್ಷೇಮ. ಅದನ್ನು ಸಾಮಾನ್ಯರ ಕೈಗೆ ಒಪ್ಪಿಸಿದಲ್ಲಿ, ಜೆನ್ನಿ ಮೆಕಾರ್ಥಿಯ ಪ್ರಕರಣಗಳು ಹೆಚ್ಚುತ್ತಾ, ಜನ ಸಾಮಾನ್ಯರು ತಮ್ಮ ತೀರ್ಮಾನಗಳನ್ನು ಪೂರ್ವಾಗ್ರಹಕ್ಕೊಳಪಟ್ಟು ಮಾಡಲು ಪ್ರಾರಂಭಿಸಿದಲ್ಲಿ, ಇಂದು ಅಮೆರಿಕೆಯಲ್ಲಿ ದಡಾರದಿಂದ ನರಳುತ್ತಿರುವ ನೂರಾರು ಮಕ್ಕಳ ಸ್ಥಿತಿ, ಎಲ್ಲರಿಗೂ ಒಂದಲ್ಲ ಒಂದು ಕಾರಣಕ್ಕೆ ಅನುಭವಿಸುವ ಪರಿಸ್ಥಿತಿ ಬರುತ್ತದೆ. ಜೆನ್ನಿ ಮೆಕಾರ್ಥಿಯಂತಹ ಮಹಿಳೆ, ತನ್ನ ಅಭಿಪ್ರಾಯ, ವೈದ್ಯಕೀಯ ರಂಗದ ತಜ್ಞರಿಗಿಂತ ಮೇಲು, ಪ್ರತಿಯೊಂದು ಲಸಿಕೆ ಅಥವಾ ಔಷಧದ ಹಿಂದೆ, ಅಂಟು-ರೋಗಗಳ ತಜ್ಞರ ಪಿತೂರಿ ಅಡಗಿರುತ್ತದೆ ಎಂದು ಆಲೋಚಿಸುವುದನ್ನು ಮುಂದುವರೆಸಿದಲ್ಲಿ, ಪಾಂಡಿತ್ಯ ಪರಿಣತೆಯು, ಪ್ರಖ್ಯಾತಿಗೆ ಸಮಾನವೆಂಬ ವಾತಾವರಣ ಪರಿಣಮಿಸುತ್ತದೆ. ಅಂತಹದೊಂದು ಸಮಾಜದಲ್ಲಿ ಜೀವನ ದುಸ್ತರವಾಗುತ್ತದೆ.

 

ಹಿನ್ನುಡಿ:  ಜೆನ್ನಿ ಮೆಕಾರ್ಥಿಯಂತಹ ತಾಯಂದಿರ ಅಭಿಪ್ರಾಯಗಳನ್ನು, ಪತ್ರಿಕೋದ್ಯಮ ವಲಯದವರ ತನಿಖೆಗೆ ಒಳಪಡಿಸುವುದು ನ್ಯಾಯವಾದ ಮಾತು. ಆದರೆ ಪತ್ರಿಕೋದ್ಯಮದ ವ್ಯಕ್ತಿಗಳು ವಿಜ್ಞಾನದ ಬಗ್ಗೆ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಒಂದು ಅಪಾಯಕಾರಿಯಾದ ವಿಷಯ. MMR ಲಸಿಕೆಯನ್ನು ಮಕ್ಕಳಿಗೆ ನೀಡುವ ವಯಸ್ಸು, ಹಾಗೂ Autism ಅಥವಾ ಸ್ವಲೀನತೆಯಂತಹ ವ್ಯಾಧಿಗೀಡಾದ ಮಕ್ಕಳ ಸಮಸ್ಯೆಗಳು ಹೊರಬರುವ ವಯಸ್ಸು ಎರಡು ಒಂದೇ ಆಗಿದೆ. ಆದ್ದರಿಂದ, MMR ಲಸಿಕೆಯನ್ನು ಹೊಂದಿದ ಸಮಯಕ್ಕೆ ಹತ್ತಿರದಲ್ಲಿ ಈ ವ್ಯಾಧಿಗೀಡಾದ ಹಲವು ಮಕ್ಕಳಿಗೆ ಅದರ ಲಕ್ಷಣಗಳು ಕಾಣಿಸಿಕೊಳ್ಳಬಹುದು, ಅಥವಾ ಈ ಲಸಿಕೆಯನ್ನು ಪಡೆಯುವ ಮೊದಲೂ ಹಲವರಿಗೆ ಕಾಣಿಸಿಕೊಳ್ಳುವ ಸಂಭವವಿದೆ. ಹಾಗಾಗಿ ಲಸಿಕೆಯಿಂದ ಸ್ವಲೀನತೆಯ ವ್ಯಾಧಿ ಕಾಣಿಸಿಕೊಂಡಿದೆ ಎಂದು ಜನರು ಹೇಳುತ್ತಾರೆಯೇ ಹೊರತು, ಸ್ವಲೀನತೆಯ ಕಾರಣದಿಂದ ಲಸಿಕೆಯನ್ನು ಪಡೆಯಲಾಯಿತು ಎಂದು ಯಾರೂ ಹೇಳುವುದಿಲ್ಲ. ಹಾಗಾಗಿ ಈ ಸನ್ನಿವೇಶದಲ್ಲಿ, ತಾಯಿತಂದೆಯರ ಅನುಭವ ಉಪಯೋಗಕ್ಕೆ ಬರುವುದಿಲ್ಲ.

 

ಇಲ್ಲಿ ಪರಿಣಿತರ ತಜ್ಞತೆ ಮುಖ್ಯವಾದದ್ದು. ಯಾವುದೇ ವೈದ್ಯಕೀಯ ತಜ್ಞನೂ, ರೋಗಿಯನ್ನು ಅವನ ರೋಗದ ಗುಣಲಕ್ಷಣಗಳ ಬಗ್ಗೆ ಕೇಳುತ್ತಾನೆಯೇ ಹೊರತು, ರೋಗವನ್ನು ಪತ್ತೆಹಚ್ಚುವ ಕಾರ್ಯಕ್ಕೆ ಅವನನ್ನು ಕರೆಯುವುದಿಲ್ಲ. ಅಥವಾ ಅವನ ಅಭಿಪ್ರಾಯವನ್ನು ಕೇಳುವುದಿಲ್ಲ. ಅನೇಕ ಸಂದರ್ಭಗಳಲ್ಲಿ, ರೋಗಿ ತನ್ನ ರೋಗ, ಅದರ ಲಕ್ಷಣಗಳು ಮತ್ತು ಔಷಧಗಳ ಬಗ್ಗೆ ತಜ್ಞ-ವೈದ್ಯರಂತೆ ಪರಿಣಿತಿಯನ್ನು ಅನೇಕ ವರ್ಷಗಳ ಅನುಭವದಿಂದ ಪಡೆದಿರುವ ಉದಾಹರಣೆಗಳಿವೆ. ಆದರೆ ಈ ರೀತಿಯ ವಿನಿಮಯ ಪ್ರಕ್ರಿಯಾ ಪರಿಣಿತಿಯನ್ನು ಸಂಪಾದಿಸಲು, ದಶಕಗಳೇ ಬೇಕಾಗುತ್ತದೆ. “An old patient is better than a new doctor”  “ಹೊಸ ವೈದ್ಯನಿಗಿಂತ, ಒಬ್ಬ ಹಳೆಯ ರೋಗಿಯೇ ಮೇಲು,” ಎನ್ನುವ ನಾಣ್ಣುಡಿಯು, ಜನಸಾಮಾನ್ಯರ ನಾಲಿಗೆಯ ಮೇಲೆ ನಲಿದಾಡುವುದು, ನಮ್ಮ ಸಮಾಜದಲ್ಲಿ ಸರ್ವೇಸಾಮಾನ್ಯವಾದರೂ, ಅಜ್ಞಾನ, ಮೂಢ-ನಂಬಿಕೆಗಳು ತುಂಬಿರುವ ಸಮಾಜಗಳಲ್ಲಿ, ಇಂತಹ ನಾಣ್ಣುಡಿ ಜೀವಗಳನ್ನು ಅಪಾಯದ ಅಂಚಿಗೆ ತಳ್ಳುವುದಂತೂ ನಿಜ!  ಅಂತಿಮವಾಗಿ ಯಾವುದೇ ವೈಜ್ಞಾನಿಕ ತಿಳುವಳಿಕೆಯೂ ಸಹ ಅಸ್ಥಿರ ಅಥವ ನಶ್ವರವಾದದ್ದು. ಅದನ್ನೂ ವಿಜ್ಞಾನಿಗಳೂ ಒಪ್ಪಿಕೊಳ್ಳುತ್ತಾರೆ. ಆದರೆ, ಅವರ ಆನ್ವೇಷಣೆಯ ಕಾರ್ಯ ಎಡಬಿಡದೆ ಮುಂದುವರೆದಿರುತ್ತದೆ.

 

(ಅಂದ ಹಾಗೆ, ಇತ್ತೀಚಿಗೆ ಮತ್ತೊಮ್ಮೆ ಪ್ರಾರಂಭವಾಗಿರುವ ದಡಾರದ ಪ್ರಕರಣದ ನಂತರ, ಜೆನ್ನಿ ಮೆಕಾರ್ಥಿಯ ಹೇಳಿಕೆಗೆ ಅಂದು ಪ್ರಾಮುಖ್ಯತೆ ನೀಡಿದ ಮಾಧ್ಯಮದವರೇ, ಈಗ ಆಕೆಯನ್ನು ಮತ್ತೊಮ್ಮೆ ಮಾಧ್ಯಮದ ಮೂಲಕ ಕ್ಷಮಾಪಣೆ ಯಾಚಿಸಿ ತನ್ನ ಹೇಳಿಕೆಯನ್ನು ಹಿಂತೆಗೆದುಕೊಳ್ಳಲು ಒತ್ತಾಯಪಡಿಸುತ್ತಿದೆ ಎನ್ನುವುದೂ ಒಂದು ಬಿಸಿ ಸುದ್ದಿ!)

 

ಈ ಪ್ರಸಕ್ತ ಲೇಖನವನ್ನು, ಈ ಮೊದಲೇ ನಾನು 2013 ಅಕ್ಟೋಬರ್ ತಿಂಗಳಲ್ಲಿ, ಕಾರ್ಡಿಫ಼್ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆಸುವ ಉಪನ್ಯಾಸಮಾಲೆಯಲ್ಲಿ, ಅಲ್ಲಿನ ಗಣ್ಯ ಸಮಾಜಶಾಸ್ತ್ರ ಪ್ರಾಧ್ಯಾಪಕ, ಡಾ ಹ್ಯಾರಿ ಕೊಲಿನ್ಸ್ ಅವರು ನೀಡಿದ್ದ, “Are we all experts now?,” ಎಂಬ ಉಪನ್ಯಾಸದಲ್ಲೇ ಈ ಮೇಲೆ ಪ್ರಸ್ತಾಪಿಸಿದ ಜೆನ್ನಿ ಮೆಕಾರ್ಥಿಯ ಉದಾಹರಣೆ ಬಗ್ಗೆ ಕೇಳಿದ್ದೆ. ಇದರೊಂದಿಗೇ ತಮ್ಮ  ಉಪನ್ಯಾಸವನ್ನು ಪ್ರಾರಂಭಿಸಿದ್ದ ಪ್ರೊಫ಼ೆಸರ್ ಕೊಲಿನ್ಸ್, ಮುಂದೆ ವಿಜ್ಞಾನದ ಪರಿಣಿತಿ, ಅದರ ಸ್ವಭಾವಗಳು, ಅದನ್ನು ಉಳ್ಳವರಾರು ಎಂಬ ವಿಷಯಗಳನ್ನು, ಸಂಬದ್ಧವಾದ ನಿದರ್ಶನಗಳೊಡನೆ ವಿವರಿಸಿದ್ದರು. ಅವರ ಉಪನ್ಯಾಸವನ್ನಾಧಾರಿಸಿ ಬರೆಯುತ್ತಿರುವ ಈ ಲೇಖನದಲ್ಲಿ, ವಿಜ್ಞಾನದ ಪ್ರಬಲತೆ ಮತ್ತು ದುರ್ಬಲತೆಗಳು, ಅದರ ಬಗ್ಗೆ ಇರುವ ಪರಿಣಿತಿ, ಈ ಪರಿಣಿತಿಯ ವಿಧಗಳು, ಈ ಪರಿಣಿತಿಯನ್ನು ಗಳಿಸುವ ವಿಧಾನಗಳು, ಹೀಗೆ ಹಲವು ಹತ್ತು ವಿಷಯಗಳನ್ನು ಉದ್ದೇಶಿಸಿ ನೀಡಿದ್ದ ಆ ಉಪನ್ಯಾಸದ ಪ್ರಮುಖ ಅಂಶಗಳನ್ನು ಈ ಲೇಖನದಲ್ಲಿ ಸೇರಿಸಿದ್ದೇನೆ. ಇದರ ಜೊತೆಗೆ, ವಿಜ್ಞಾನದ ಪಾಂಡಿತ್ಯವನ್ನು ಪಡೆಯದ ಸಾಮಾನ್ಯರ ಆದರೆ ಜನಪ್ರಿಯರಾದ ವ್ಯಕ್ತಿಗಳ, ಅನವಶ್ಯಕ ಮತ್ತು ಅಹಂಕಾರದ ಹೇಳಿಕೆಗಳು, ಜನಸಮುದಾಯವನ್ನು ಸಂಪೂರ್ಣವಾಗಿ ತಪ್ಪುದಾರಿಗೆಳೆಯಬಹುದು ಎನ್ನುವ ಅಂಶವನ್ನು, ಇತ್ತೀಚೆಗೆ ಮತ್ತೊಮ್ಮೆ ಪ್ರಾರಂಭವಾದ ದಡಾರದ ಸೋಂಕಿನ ಹಿನ್ನೆಲೆಯಲ್ಲಿ ಒತ್ತಿ ಹೇಳುವ ಪ್ರಯಾಸವನ್ನು ಮಾಡಿದ್ದೇನೆ.

 

ಈ ಲೇಖನವು, ಪ್ರೊಫ಼ೆಸರ್ ಹ್ಯಾರಿ ಕೊಲಿನ್ಸ್, ಕಾರ್ಡಿಫ಼್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು 2013 ಅಕ್ಟೋಬರಿನಲ್ಲಿ ನೀಡಿದ ಉಪನ್ಯಾಸದ ಮೇಲೆ ಆಧಾರಿತವಾಗಿದೆ.

ಉಪನ್ಯಾಸದ ಶೀರ್ಷಿಕೆ, –“Are we all experts now?”.

 

ಪ್ರೊಫ಼ೆಸರ್ ಹ್ಯಾರಿ ಕೊಲಿನ್ಸ್, ಕಾರ್ಡಿಫ಼್ ವಿಶ್ವವಿದ್ಯಾಲಯದ, ಸಮಾಜಶಾಸ್ತ್ರ ವಿಭಾಗದಲ್ಲಿ ಗಣ್ಯ ಪ್ರಾಧ್ಯಾಪಕರಾಗಿದ್ದಾರೆ, ಹಾಗೂ ಜ್ಞಾನ, ಪರಿಣಿತಿ ಹಾಗೂ ವಿಜ್ಞಾನದ ವಿಷಯದಲ್ಲಿ ನಡೆಯುತ್ತಿರುವ ಅಧ್ಯಯನ ಕೇಂದ್ರದಲ್ಲಿ (Centre for the study of Knowledge, Expertise and Science-KES) ನಿರ್ದೇಶಕರು. ಬ್ರಿಟಿಷ್ ಅಕ್ಯಾಡೆಮಿಯ ಸದಸ್ಯರು. ವಿಜ್ಞಾನದಲ್ಲಿ ಪ್ರಸಿದ್ಧಿಯಾದ, ಗೋಲೆಮ್ ಸರಣಿಯನ್ನೂ ಸೇರಿದಂತೆ ಇದುವರೆಗೂ, 17 ಪುಸ್ತಕಗಳನ್ನು ಬರೆದಿದ್ದಾರೆ. ಹ್ಯಾರಿ ಕೊಲಿನ್ಸ್ ಪ್ರಸ್ತುತದಲ್ಲಿ, ವೈಜ್ಞಾನಿಕ ಜ್ಞಾನದ ಸ್ವರೂಪದ ಬಗ್ಗೆ, ಪರಿಣಿತಿಯ ವಿಶ್ಲೇಷಣೆ ಹಾಗೂ ಗುರುತ್ವದಲೆಗಳ ಅನ್ವೇಷಣೆಯ ಸಮಾಜಶಾಸ್ತ್ರ ಮತ್ತು ಚರಿತ್ರೆಯ ಬಗ್ಗೆ ತಮ್ಮ ಸಂಶೋಧನೆಯನ್ನು ಮುಂದುವರೆಸಿದ್ದಾರೆ.

 

http://www.cf.ac.uk/socsi/contactsandpeople/academicstaff/C-D/professor-harry-collins-overview.html

 

(Harry Collins is Distinguished Research Professor of Sociology and Director of the Centre for the Study of Knowledge, Expertise and Science (KES) at Cardiff University. He is a Fellow of the British Academy. He has written 17 previous books including the well-known Golem series on science. Harry Collins is continuing his research on the nature of scientific knowledge, on the analysis of expertise and on the sociology of gravitational wave detection).

 

ಈ ಲೇಖನದ ಮೂಲಾಧಾರವಾದ “Are we all experts now?” ಉಪನ್ಯಾಸದ ಭಾಷಣಕಾರ ಪ್ರೊಫೆಸರ್ ಹ್ಯಾರಿ ಕಾಲಿನ್ಸ್, ಕಾರ್ಡಿಫ಼ ವಿಶ್ವವಿದ್ಯಾಲಯ, ಯು.ಕೆ, ಅವರಿಗೆ ನಾನು ಆಭಾರಿ.  ಈ ಲೇಖನದ ಕಡತವನ್ನು ಓದಿ, ತಮ್ಮ ಅಮೂಲ್ಯವಾದ ಹಿನ್ನುಣಿಕೆ ನೀಡಿದ ಪ್ರೊಫೆಸರ್. ಬಿ.ಎಸ್.ಸತ್ಯಪ್ರಕಾಶ, ಡಾ ಜಿ.ಎಸ್. ಶಿವಪ್ರಸಾದ್, ಡಾ ಶ್ರಿವತ್ಸ ದೇಸಾಯಿ ಮತ್ತು ಶ್ರಿವತ್ಸ ಜೋಷಿ ಅವರಿಗೂ ಲೇಖಕಿಯ ಧನ್ಯವಾದಗಳು.

 

ಡಾ ಉಮಾ ವೆಂಕಟೇಶ್, ಕಾರ್ಡಿಫ಼