ಎಳ್ಳೆಣ್ಣೆಯ ಎರಡು ದೀಪ.
_ ಡಾ. ದಾಕ್ಷಾಯಿಣಿ ಗೌಡ
ಈ ಬಾರಿ,ಹೊಸ ಪರಿಯ ಕಳಕಳಿ
ನಮ್ಮ ನಿಮ್ಮೆಲ್ಲರ ಈ ದೀಪಾವಳಿ
ನಮ್ಮೂರಲ್ಲಿ, ಗೃಹಜ್ಯೋತಿಯ ಆಗಮನ,
ಆದರೇನು, ಯೂನಿಟ್ನ ಮಿತಿಮೀರದೆಡೆ ಗಮನ
ಸಾಮಾನ್ಯರಿಗೆ ಎಣ್ಣೆ ಬಲು ದುಬಾರಿ,
ಸರ್ಕಾರದ ಖರ್ಚಿನಲ್ಲಿ ಕೋಟಿ ದೀಪಗಳ ಅದ್ದೂರಿ.
ಮನೆಮುಂದೆ ಮಿನುಗುತ್ತಿದೆ ಎಳ್ಳೆಣ್ಣೆಯ ಎರಡು ದೀಪ.
ಈ ಊರಲ್ಲೂ ಬಗ್ಗುತ್ತಿಲ್ಲ ಹಣದುಬ್ಬರ
ಕೈಗೆಟುಕದು ಬಡತನಕೆ ವಿದ್ಯುತ್ ದರ.
ಬಿಸಿ ಊಟ, ಬಿಸಿಗಾಳಿ ಆಶಿಸುವ ಎದೆ, ಉದರ,
ಎಚ್ಚರಿಕೆ, ಕೂಗುತಿದೆ, ಹಿಮಗಾಳಿಯ ಅಬ್ಬರ.
ಮನೆಮುಂದೆ ಮಿನುಗುತ್ತಿದೆ ಎಳ್ಳೆಣ್ಣೆಯ ಎರಡು ದೀಪ.
ಕಾಂಚಾಣ ಕುಣಿಸಿದಂತೆ ಆಡುವ, ತೂಗುವ ಬೆಳಕು,
ಗಗನ ಕುಸುಮ, ಬಡತನಕೆ, ಬಹುದೀಪಗಳ ಥಳುಕು.
ಲಕ್ಷದೀಪವಿರಲಿ, ಕಗ್ಗತ್ತಿನ ಕತ್ತಲಿರಲಿ ಹೊರಗೆ,
ಮಿನುಗಲಿ ನಿಮ್ಮ ನಮ್ಮೊಳಗೆ ಆನಂದದ ದೀಪ,
ಹೊಸಬಗೆಯ ಬೆಳಕಲಿ, ಬೆಳಗಲಿ ನಮ್ಮ ಸೃಷ್ಟಿಯ ದ್ವೀಪ.
ಅನಬೆಲ್ಲ ಹೇಳಿದ ಅಮರಾಂತೆ ಕಥೆ - ಡಾ.ಮುರಳಿ ಹತ್ವಾರ್
ಅಮರಾಂತೆ ಪೋರ್ಚುಗಲ್ಲಿನ ಒಂದು ಸಣ್ಣ ಊರು. ಅದರ ಮಧ್ಯದಲ್ಲೊಂದು ನದಿ, ಅದರ ಹೆಸರು ತಮೆಗಾ. ಡ್ಯುರೋ ನದಿಯ ಉಪನದಿಯಾದ ಇದರ ಒಂದು ಕಡೆ ಈಗ ಹೊಟೇಲಾಗಿರುವ ಹಳೇ ಕಾಲದ ಶ್ರೀಮಂತನ ಬಂಗಲೆ ಮತ್ತದರ ಸುತ್ತ ಬೆಳೆದ ಮನೆಗಳು, ಅಂಗಡಿಗಳು ಇತ್ಯಾದಿ. ಇನ್ನೊಂದು ಕಡೆ, ಸಂತ ಗೋನ್ಸಾಲನ ಇಗರ್ಜಿ ಮತ್ತದರ ಹಿಂದೆ ಯಾವತ್ತೋ ಇದ್ದ ಕಾಡನ್ನು ಮರೆಸಿ ಬೆಳೆದ ಊರು. ಮಧ್ಯದಲ್ಲೊಂದು ಅವೆರಡನ್ನೂ ಸೇರಿಸುವ ಹಳೆಯ ಬ್ರಿಡ್ಜ್ . ಸುಮಾರು ೭೦೦ ವರ್ಷದ ಹಿಂದೆ ಇದ್ದ, ಮೊದಲು ಪಾದ್ರಿಯಾಗಿ, ಆಗಾಗ ಪವಾಡ ಮಾಡಿ, ದೊಡ್ಡ ಮೊನಾಸ್ಟರಿಯೊಂದನ್ನು ಕಟ್ಟಿ, ಕಡೆಗೆ ಸಂತರಾದ ಗೋನ್ಸಾಲರ ಇಗರ್ಜಿಯ ಅಮರಾಂತೆ ಈಗ ಪೊರ್ಟೊ ನಗರದಿಂದ ಡ್ಯುರೋ ಕಣಿವೆಗೆ ಮುಂಜಾನೆ ಹೊರಟು ಸಂಜೆಗೆ ಮರಳುವ ಪ್ಯಾಕೇಜ್ ಟೂರಿಗರಿಗೆ ಮೊದಲು ಸಿಗುವ ಸ್ಟಾಪ್.
ಪೊರ್ಟೊ ದಲ್ಲಿ ಮುಂಜಾನೆ ಎಂಟಕ್ಕೆ ಟೂರಿನ ಮಿನಿ ಬಸ್ ಆಫೀಸಿಗೆ ವಿಧೇಯ ವಿದ್ಯಾರ್ಥಿಗಳಂತೆ ಅರ್ಧ ಗಂಟೆ ಮುಂಚೆಯೇ ತಲುಪಿದ್ದ ನಮಗೆ, ಅಲ್ಲಿನ ಏಜೇಂಟ್ ಒಬ್ಬ ನಮ್ಮ ಬಸ್ ನಂಬ್ರ ೧೯ ಮತ್ತು ಗೈಡ್ ಅನಬೆಲ್ಲ ಎಂದು ಪ್ರಿಂಟಾದ ಚೀಟಿ ಕೊಟ್ಟ. ಅದಾಗಿ ಸ್ವಲ್ಪ ಹೊತ್ತಿಗೆ ಆ ಬಸ್ಸು ಮತ್ತದರೊಟ್ಟಿಗೆ ಬಂದಿಳಿದ ಮಧ್ಯ ವಯಸ್ಸಿನ ಸ್ಥೂಲ ಕಾಯದ ಅನಬೆಲ್ಲ, ಗಟ್ಟಿ ದನಿಯಲ್ಲಿ ಬಸ್ಸಿನ ನಂಬ್ರ ಮತ್ತೆ ಹೊರಡುವ ಟೈಮನ್ನು ಮೊದಲು ಇಂಗ್ಲಿಷಿನಲ್ಲೂ ನಂತರ ಫ್ರೆಂಚಿನಲ್ಲೂ ಕೂಗಿ, ಆ ಕರೆಗೆ ಕಾದವರಂತೆ ಗಡಿಬಿಡಿಯಲ್ಲಿ ಅನಬೆಲ್ಲ ಸುತ್ತ ಸೇರಿದ ಜನರನ್ನ ಬಸ್ಸೇರಿಸಿ, ಕಡೆಗೆ ತಾನೂ ಹತ್ತಿ ಮುಂದಿನ ಸೀಟಿನಲ್ಲಿ ಕುಳಿತು, ಕೈಗೊಂದು ವಯರಿನ ಮೈಕೆಳೆದುಕೊಂಡು ಮಾತು ಶುರುಮಾಡಿದಳು.
ಅವಳ ಮಾತುಗಳು ರೆಕಾರ್ಡೆಡ್ ಟೇಪಿನಂತೆ ಇಂಗ್ಲಿಷ್-ಫ್ರೆಂಚ್ ತಾಳದಲ್ಲಿ ಬಸ್ಸಿನ ಕಿಟಕಿಯಾಚೆ ಕಾಣುವ ಐತಿಹಾಸಿಕ ಕಟ್ಟಡಗಳು, ಬ್ರಿಡ್ಜುಗಳು, ಸುರಂಗಳು ಅವನ್ನೆಲ್ಲ ಆದಷ್ಟು ಕಡಿಮೆ ಶಬ್ದಗಳಲ್ಲಿ ಹೇಳುತ್ತಾ, ಮಧ್ಯೆ ಮಧ್ಯೆ ನಗೆ ತಾರದ ಜೋಕುಗಳನ್ನು ಉರುಳಿಸುತ್ತಾ, ಆದಷ್ಟು ಮೊಬೈಲ್ ಫೋನಿನಲ್ಲಿ ಅದ್ದಿದ ಮುಖಗಳನ್ನು ಹೊರ ತೆರೆಯಲು ಪ್ರಯತ್ನಿಸುತ್ತಿದ್ದಳು. ಕಡೆಗೊಮ್ಮೆ ಬಸ್ಸು ನಿಧಾನಿಸಿ ನಿಂತಾಗ, ಎಲ್ಲರನ್ನು ಕೆಳಗಿಳಿಸಿ, ಪಕ್ಕದ ಕಟ್ಟೆಯ ಮೇಲೆ ನಿಂತು, ಕೆಳಗೆ ಹರಿಯುತ್ತಿದ್ದ ತಮೆಗಾ ನದಿಯ ಪರಿಚಯವನ್ನೂ, ಗೋನ್ಸಾಲರ ಇಗರ್ಜಿಯನ್ನೂ ತೋರಿಸಿ, ಮುಕ್ಕಾಲು ಘಂಟೆಯೊಳಗೆ ಎಲ್ಲ ಸುತ್ತಿ, ಫೋಟೋದಲ್ಲಿ ಕಟ್ಟುವಷ್ಟು ಕಟ್ಟಿ, ಮತ್ತೆ ಬಸ್ಸಿನಲ್ಲಿರಬೇಕೆಂದು ಅಪ್ಪಣಿಸಿದಳು. ಅಷ್ಟಕ್ಕೇ ನಿಲ್ಲಿಸದೆ, ತನ್ನ ಮೊಬೈಲಿನಲ್ಲಿದ್ದ ಫೋಟೋವೊಂದನ್ನು ಗುಂಪಿನ ಎಲ್ಲ ಅಡಲ್ಟಿಗರಿಗೆ ತೋರಿಸುತ್ತ, ಅವರ ನಾಚಿಕೆಯ, ಆಶರ್ಯದ ನಗುವಿಗೆ ತಾನು ನಗುತ್ತ, ಅದೊಂದು ಜೋಕು ಎಂದಳು. ಅವಳು ತೋರಿಸಿದ ಆ ಫೋಟೋದ ಮರ್ಮ ಮತ್ತು ಅದರ ಹಿಂದಿನ ಜೋಕು ಆಗ ಅರ್ಥವಾಗಿರಲಿಲ್ಲ. ಸುಮ್ಮನೆ ನಕ್ಕೆವು.
ಅನಬೆಲ್ಲ ಹೇಳಿದಂತೆ, ಆ ಹಳೆಯ ಬ್ರಿಡ್ಜಿನತ್ತ ನಡೆದು, ಅದರ ಮೇಲೆ ನಿಂತು ಆಚೆ ಈಚೆಯ ಕಟ್ಟಡಗಳನ್ನು, ಕೆಳಗೆ ಹರಿಯುತ್ತಿರುವ ನದಿಯ ಹರಿವನ್ನೂ ನೋಡುತ್ತಾ, ಗೊನ್ಸಾಲರು ತಮ್ಮ ಪವಾಡದಲ್ಲಿ ಮೊದಲು ಕಟ್ಟಿದ, ಆನಂತರ ೧೭-೧೮ ಶತಮಾನದಲ್ಲಿ ಮತ್ತೆ ಹೊಸದಾಗಿ ಕಟ್ಟಿದ, ನೆಪೋಲಿಯನ್ನಿನ ಕಾಲದಲ್ಲಿ ನಡೆದ ಹೋರಾಟದಲ್ಲಿ ಸಿಡಿದ ಗುಂಡುಗಳ ಕಲೆಯನ್ನ ಇನ್ನೂ ಸಾಕಿರುವ ಆ ಬ್ರಿಡ್ಜನ್ನು ದಾಟಿ, ಅಮರಾಂತೆಯ ಸಂತರ ಇಗರ್ಜಿಯತ್ತ ನಡೆದ ನಮಗೆ, ಮೊದಲು ಕರೆದದ್ದು ಅಲ್ಲಿನ ಕಾರ್ ಪಾರ್ಕಿನ ಪಕ್ಕದ ಸಣ್ಣ ತೋಟದಲ್ಲಿ ದೊಡ್ಡದಾಗಿ ಇಂಗ್ಲಿಷ್ ಅಕ್ಷರಗಳಲ್ಲಿ ನಿಲ್ಲಿಸಿಟ್ಟ AMARANTE. ಬಣ್ಣ ಬಣ್ಣದ ಆ ದೊಡ್ಡ ಅಕ್ಷರಗಳ ಮುಂದೆ ನಿಂತು ಫೋಟೋದಲ್ಲಿ ನಮ್ಮ ಜೊತೆ ಅದನ್ನು ಸೇರಿಸಿ ಹೊರನಡೆಯುವಾಗ, ಪಕ್ಕದಲ್ಲೇ ಚಪ್ಪರವೊಂದರ ಕೆಳಗೆ ಒಂದಿಷ್ಟು ಸಾಮಾನುಗಳನ್ನು ಮಾರುತ್ತಿದ್ದ, ಆ ಕಾರ್ ಪಾರ್ಕಿನ ಒಂದೇ ಅಂಗಡಿಯತ್ತ, ಅಲ್ಲಿನ 'ವಿಶಿಷ್ಣ' ಆಕಾರದ, ಪ್ಲಾಸ್ಟಿಕಿನಲ್ಲಿ ಸುತ್ತಿಟ್ಟ ವಸ್ತುಗಳನ್ನ ಏನೆಂಬ ಕುತೂಹಲದಲ್ಲಿ ನೋಡಲು ಹತ್ತಿರ ಹೋದೆವು. ಅಲ್ಲಿದ್ದದ್ದು, ಅನಬೆಲ್ಲ ಫೋನಿನಲ್ಲಿ ಜೋಕೆಂದು ತೋರಿಸಿದ ಆಕಾರದ ಸಣ್ಣ, ದೊಡ್ಡ, ಗಟ್ಟಿ, ಮತ್ತು ಮೆತ್ತನೆಯ ವೆರೈಟಿಯ ಕೇಕುಗಳು.
ಆ ಕೇಕುಗಳ ದರ್ಶನದಿಂದ ಮನಸ್ಸಿನಲ್ಲಿ ಕುಣಿಯುತ್ತ ಮುಖದಲ್ಲಿ ಹೊರಬರಲು ಯತ್ನಿಸುತ್ತಿದ್ದ ಚೇಷ್ಟೆಯ ಹುಡುಗುತನವನ್ನ ಸ್ವಲ್ಪ ಬದಿಗಿಟ್ಟು, ಆ ಅಂಗಡಿಯ ಒಡತಿಗೆ, ಆ ಕೇಕುಗಳ ಆಕಾರದ ಹಿಂದಿನ ಕಥೆ ಏನೆಂದು ಕೇಳಿದೆವು. ನಮ್ಮ ಇಂಗ್ಲೀಷು ಆಕೆಯ ಪೋರ್ಚುಗೀಸು ನಡುವೆ ಯಾವುದೇ ಸೇತುವೆ ಇಲ್ಲದ ಕಾರಣ, ಕೈ ಸನ್ನೆಯಲ್ಲಿ ಒಂದು ಕೇಕಿನ ದುಡ್ಡು ಕೇಳಿ, ಕೊಂಡು, ಸಕ್ಕರೆಯ ಐಸಿಂಗಿನ ಆ ಕೇಕಿನ ಪ್ಲಾಸ್ಟಿಕಿನ ಬಂಧನದಿಂದ ಹೊರ ತಂದು, ತರತರದಲ್ಲಿ ಕೈಯಲ್ಲಿ ಹಿಡಿದು, ಫೋಟೋ ಮತ್ತು ವಿಡಿಯೋಗಳಲ್ಲಿ ಅದನ್ನು ವರ್ಣಿಸಿ, ಆಪ್ತ ಗೆಳೆಯರ ವಾಟ್ಸಪ್ಪ್ ಗುಂಪಿಗೆ ಆ ಕೇಕನ್ನು ವಿಡಿಯೋದ ಮೂಲಕ ಅರ್ಪಿಸಿ, ಮುನ್ನಡೆದೆವು. ಆಗ ಮಾತೆಲ್ಲ ಆ ಕೇಕು ಹುಟ್ಟಿದ, ಮತ್ತೆ ಹೀಗೆ ದಿನ ದಿನ ಅಮರಾಂತೆಯ ಹಲವು ಓವನ್ನು ಗಳಲ್ಲಿ ಬೇಯುತ್ತಿರುವ ಅದರ ಅವತಾರಗಳ ಹಿಂದಿನ ಕಾರಣಕ್ಕೆ ನಮ್ಮ ಊಹೆಯ ಪಟ್ಟಿ.
ಹಾಗೆ ಪಕ್ಕದ ಇಗರ್ಜಿಯ ಮುಂದಿಷ್ಟು ಭಂಗಿಗಳಲ್ಲಿ ನಮ್ಮನ್ನು ಫ್ರೇಮಿಸಿಕೊಂಡು, ಬ್ರಿಡ್ಜಿನ ಮೊದಲ ಬದಿಗೆ ಮರಳಿ, ಪಕ್ಕದ ಬೀದಿಯಲ್ಲಿ ಕಾಪಿಯ ಬಾಯಾರಿಕೆಗೆ ಹೊರಟ ನಮಗೆ ಮತ್ತೆ ಅಲ್ಲಿನ ಟೂರಿಸ್ಟ್ ಅಂಗಡಿಗಳ ಮ್ಯಾಗ್ನೆಟ್ಟುಗಳಲ್ಲಿ, ಹಾಗೆಯೇ ಆ ಬೀದಿಯ ಕೆಲವು ಬೇಕರಿಗಳಲ್ಲಿ ಮತ್ತದೇ ಕೇಕಿನ ದರ್ಶನ. ಬೇಕರಿಯ ಕೇಕುಗಳಿಗೆ ಸಕ್ಕರೆಯ ಕವಚವಿದ್ದರೆ, ಮ್ಯಾಗ್ನೆಟಿನ ಚಿತ್ರಗಳ ಕೇಕಿನ ಮೇಲೆ ಒಂದು ಹಲ್ಲಿ. ಆ ಮ್ಯಾಗ್ನೆಟ್ಟನ್ನು ಕೊಂಡುಕೊಳ್ಳುವಷ್ಟು ಧೈರ್ಯ ಬರಲಿಲ್ಲ. ಯಾವತ್ತಿನಂತೆ ಮೊಬೈಲಿನ ಕ್ಯಾಮರಾಕ್ಕೆ ಸೇರಿಸಿಕೊಂಡೆವಷ್ಟೇ. ಅಷ್ಟರಲ್ಲಿ ಸಮಯದ ಮುಳ್ಳು ಅನಬೆಲ್ಲ ಹಾಕಿದ ಗೆರೆ ಮುಟ್ತುತ್ತಿದ್ದರಿಂದ, ಅವಸರದಲ್ಲಿ ಕಾಪಿ ಕಪ್ಪು ಹಿಡಿದು ಬಸ್ಸಿನತ್ತ ಓಡಿದಂತೆ ನಡೆದೆವು.
ಬಸ್ಸಿನ ಬಾಗಿಲಿನ ಪಕ್ಕ ನಿಂತಿದ್ದ ಅನಬೆಲ್ಲಳ ಹತ್ತಿರ ಅಮರಾಂತೆಯ ಕೇಕಿನ ಕಥೆ ಮತ್ತೆ ಕೇಳಲು, ಅವಳು ಅದರ ಹೆಸರು ಸಂತ ಗೊನ್ಸಾಲಿನ್ಹೋ ಎಂದೂ, ಹಾಗೆಂದರೆ 'ದಿ ಲಿಟಲ್ ಗೋನ್ಸಾಲ್' ಎಂದರ್ಥವೆಂದೂ, ಮತ್ತೆ ಒಂದು ಕಾಲದಲ್ಲಿ ಅತಿ ಪ್ರಬಲವಾಗಿದ್ದ ಚರ್ಚಿನ ಹಿಡಿತದ ವಿರುದ್ಧ ಯಾವಾಗಲೋ ಸಿಡಿದೆದ್ದ ರೆಬೆಲಿಗರು, ಅವರ ಕೋಪ ಮತ್ತೆ ವ್ಯಂಗ್ಯವನ್ನು ವ್ಯಕ್ತಪಡಿಸಲು ಮೊದಮೊದಲು ಈ ಕೇಕನ್ನು ಬೇಯಿಸಿದರೆಂದೂ, ಹಾಗೆ ಬರುಬರುತ್ತ ಅದು ಅಮರಾಂತೆಯ ಜೋಕಿನ ಕೇಕಾಗಿ ಬಿಟ್ಟಿದೆ ಎಂದೆಲ್ಲ ವಿವರಿಸಿದಳು. ಅಷ್ಟಕ್ಕೇ ನಿಲ್ಲದೆ, ಆ ಕೇಕನ್ನು ತಿಂದವರಿಗೆ ಅವರಿಷ್ಟದ 'ಲವ್' ಸಿಗುತ್ತದೆ ಎಂದು ಜೋರಾದ ನಗುವಿನಲ್ಲಿ ಹೇಳುತ್ತಾ ಬಸ್ಸು ಹೊರಡಿಸಿದಳು.
ಅವಳ ವಿವರಣೆ, ಸಮಾಜದ ಪ್ರಬುದ್ಧತೆಗೆ ಅನುಗುಣವಾಗಿ ಹೋರಾಟದ ಮಜಲುಗಳು ವ್ಯಕ್ತವಾಗುವ ರೀತಿ, ಅವುಗಳ ಹಿಂದಿನ ಪ್ರೇರಣೆ ಮತ್ತು ಧೈರ್ಯವನ್ನು ಮೆಚ್ಚುತ್ತ, ವಿಮರ್ಶಿಸುತ್ತಾ, ನೆನಪಿನ ಕೊಟ್ಟೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಅಮರಾಂತೆಯನ್ನ ಮಡಿಚಿಡುತ್ತಿದ್ದವು. ಅಮರಾಂತೆಯನ್ನು ದಾಟಿದ ಮೇಲೂ ತಣಿಯದ ಕುತೂಹಲದಲ್ಲಿ ಹುಡುಕಿದ ವಿಕಿಪಿಡಿಯಾದಲ್ಲೂ ಅನಬೆಲ್ಲ ಕಥೆಯಷ್ಟು ವಿವರಗಳಿರಲಿಲ್ಲ. ಆದರೆ, 'ಸಂತ ಗೊನ್ಸಾಲಿನ್ಹೋ' ಚಿತ್ರವಿದೆ ಅಲ್ಲಿ, ಬೇಕಾದರೆ, ಸಣ್ಣ ಮಕ್ಕಳು ಪಕ್ಕ ಇಲ್ಲದಿದ್ದಾಗ ಸೈಲೆಂಟಾಗಿ ನೋಡಿ ನಮಸ್ಕರಿಸಿಬಿಡಿ.
ಆತ್ಮೀಯ ಓದುಗರೇ,
''ನಾನು ಅಲ್ಪ ಎಂದು, ಕುಗ್ಗಿ ಮುದುಗಬೇಡವೋ,
ಓ ಅಲ್ಪವೇ, ಅನಂತದಿಂದ ಗುಣಿಸಿಕೊ,
ನೀನ್ ಆನಂತವಾಗುವೆ!''
ಎಂಬ ಸುಂದರ, ಮಹತ್ತರ ಸಂದೇಶ ನೀಡಿದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವನ್ನು ಕನ್ನಡಿಗರು ವಿಶ್ವಮಾನವ ದಿನವೆಂದು ಆಚರಿಸುತ್ತಾರೆ. ಕರ್ನಾಟಕ ರತ್ನ, ಪದ್ಮವಿಭೂಷಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಸಋಷಿ, ರಾಷ್ಟ್ರಕವಿಗೆ ೨೦೨೧ನೇ ವರುಷದ ಕೊನೆಯ ವಾರದ, ಅನಿವಾಸಿ ಬರಹಗಳು ಅರ್ಪಣೆ.
ಈ ಸಂಚಿಕೆಯಲ್ಲಿ ಶ್ರೀಮತಿ ಗೌರಿ ಪ್ರಸನ್ನ ಅವರು ಕುವೆಂಪು ಅವರ ಕುರಿತು ಬರೆದಿರುವ ಲೇಖನದಲ್ಲಿ ಅವರಿಗೆ ಕೆವಿ ಪುಟ್ಟಪ್ಪನವರ ಮೇಲಿರುವ ಭಕ್ತಿ, ಆರಾಧನೆ, ಪ್ರೀತಿ ಎದ್ದು ಕಾಣುತ್ತದೆ. ಅಂತೆಯೇ ಅವರು ವಾಚಿಸಿರುವ ''ಸ್ವರ್ಗದ್ವಾರದಿ ಯಕ್ಷ ಪ್ರಶ್ನೆ'' ಕವನ ಕೂಡ ಅತೀ ಸುಂದರವಾಗಿದೆ ಚಂದದ ಕಿರುಗತೆಯಂತೆ ಭಾಸವಾಗುತ್ತದೆ.
ಡಾ ಶಿವಶಂಕರ ಮೇಟಿ ಅವರು ಕುವೆಂಪು ಅವರ ಅನಿಕೇತನ ಪದ್ಯವನ್ನು ಭಾವಪೂರ್ಣವಾಗಿ ಹಾಡಿದ್ದಾರೆ.
ಡಾ ಲಕ್ಷ್ಮಿನಾರಾಯಣ ಗುಡೂರ್ ಅವರು ವಾಚಿಸಿರುವ- ''ನಾ ನಿನಗೆ ನೀ ನನಗೆ ಜೇನಾಗುವ'' ಮತ್ತು ''ಬನವೆಲ್ಲ ಕೊನರೊಡೆದು'' ಮತ್ತೆ ಮತ್ತೆ ಕೇಳಬೇಕೆನ್ನುವಷ್ಟು ಮಧುರವಾಗಿವೆ.
ಡಾ ದಾಕ್ಷಾಯಣಿ ಗೌಡ ಅವರು ಹಾಡಿರುವ ''ದೂರ ಬಹು ದೂರ'' ನಿಮ್ಮನ್ನು ಭಾವಲೋಕದಲ್ಲಿ ತೇಲಿಸುತ್ತದೆ.
ಬನ್ನಿ ನಿಮಗೆ ರಸಋಷಿಯ ಜನ್ಮದಿನದ ವಿಶೇಷ ಸಂಚಿಕೆಗೆ ಸ್ವಾಗತ.
-ಸಂಪಾದಕಿ
ಕನ್ನಡಕಾವ್ಯಾರಾಮದಕೋಗಿಲೆ-ಕುವೆಂಪು.
ಶ್ರೀಮತಿ ಗೌರಿ ಪ್ರಸನ್ನ.
ರನ್ನ-ಷಡಕ್ಷರಿ, ಪೊನ್ನ, ಪಂಪ, ಲಕುಮಿಪತಿ, ಜನ್ನರಂತಹ ಕವಿಕೋಗಿಲೆಗಳ ಪುಣ್ಯಾರಾಮವಾದ, ವಿದ್ಯಾರಣ್ಯ-ಬಸವಣ್ಣರ ದಿವ್ಯಾರಣ್ಯವಾದ, ಕೃಷ್ಣೆ-ಶರಾವತಿ-ತುಂಗೆ-ಕಾವೇರಿಯರ ವರರಂಗವಾದ ಭಾರತ ಜನನಿಯ ತನುಜಾತೆಯಾದ ಕನ್ನಡಮ್ಮನಿಗೆ ವಂದಿಸಿ ಜಗದ ಕವಿ, ಯುಗದ ಕವಿ ಕುವೆಂಪುರವರ ಜನುಮದಿನದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ತನ್ಮೂಲಕ ಇಡಿಯ ಮಾನವಕುಲಕ್ಕೆ ಅವರಿತ್ತ ಅಪಾರ ಕೊಡುಗೆಗಳ ಋಣಭಾರವನ್ನು ವಿನೀತಳಾಗಿ ಹೊತ್ತು ಈ ಹೊತ್ತು ಅವರನ್ನು ಸ್ಮರಿಸುತ್ತಿದ್ದೇನೆ.
ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ
ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ
ದಿಗ್ ದಿಗಂತವಾಗಿ ಏರಿದ ಮಹಾನ್ ಚೇತನ ಕುವೆಂಪು ಅವರದು. ಕನ್ನಡಮ್ಮನ ಚರಣಾರವಿಂದಕ್ಕೆ ಮೊದಲ ಜ್ಞಾನಪೀಠದ ಕೊಡುಗೆಯನ್ನು ಸಲ್ಲಿಸಿದ ಕೀರ್ತಿ ಇವರದು. ಕನ್ನಡ ಕಾವ್ಯಾರಾಮದ ಕೋಗಿಲೆ ಎಂದೇ ಹೆಸರಾದ ಕುವೆಂಪುರವರ ಹೆಸರಿನಲ್ಲಿಯೇ ಕೋಗಿಲೆಯ ಕೂಜನದ ಇಂಪಿದೆ. ಅವರ ಒಂದೊಂದು ಕವಿತೆಯಲ್ಲಿಯೂ ಕೊಳಲಿನ ಮಾಧುರ್ಯವಿದೆ. ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಕುವೆಂಪು ಕೈಯಾಡಿಸದ ಸಾಹಿತ್ಯ ಪ್ರಕಾರವೇ ಇಲ್ಲ. ಮಹಾಕಾವ್ಯ, ಕಾದಂಬರಿ, ನಾಟಕ, ಗೀತ, ಲೇಖನ, ವಿಮರ್ಶೆ, ಮಕ್ಕಳ ಸಾಹಿತ್ಯ ..ಎಲ್ಲದಕ್ಕೂ ಜೀವ ನೀಡಿದವರು;ಕಸುವ ತುಂಬಿದವರು. ಮಹಾಕಾವ್ಯದ ಯುಗ ಮುಗಿದೇಹೋಯ್ತು ಎನ್ನುವ ಕಾಲಘಟ್ಟದಲ್ಲಿ ‘ಶ್ರೀರಾಮಾಯಣ ದರ್ಶನಂ’ ದಂಥ ಮಹಾಛಂದಸ್ಸಿನ ಅದ್ಭುತ ಮಹಾಕಾವ್ಯವನ್ನು ಸೃಷ್ಟಿಸಿದರೂ ತಾನದನ್ನು ಸೃಜಿಸಿಲ್ಲ, ಅದುವೇ ತನ್ನನ್ನು ಸೃಷ್ಟಿಸಿತು, “ಕುವೆಂಪುವ ವಿರಚಿಸಿದೀ ರಾಮಾಯಣ ದರ್ಶನಂ” ಎಂದು ಹೇಳಿ ವಿನಯವನ್ನು ಮೆರೆದವರು. ’ಈ ಪುಟ್ಟ ಕನ್ನಡದ ಪೊಸಸುಗ್ಗಿ ಬನದ ಪರಪುಟ್ಟ’ ಎಂದು ‘ವಿದ್ಯಾ ವಿನಯೇನ ಶೋಭತೆ’ ಎಂಬ ಮಾತಿಗೆ ನಿದರ್ಶನವಾದವರು.
1904 ಡಿಸೆಂಬರ, 29ರಂದು ಶಿವಮೊಗ್ಗೆಯ ಹಿರೇಕೂಡಿಗೆಯಲ್ಲಿ ಜನಿಸಿದ ಇವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎಂದು. ಪುರೋಹಿತಶಾಹಿಯ ಬಿಗಿಯಾದ ಕಪಿಮುಷ್ಟಿಯಲ್ಲಿ, ಕುಗ್ರಾಮವಾದ ಕುಪ್ಪಳ್ಳಿಯಲ್ಲಿ ಬೆಳೆದ, ಒಕ್ಕಲಿಗ ತುಂಬು ಕುಟುಂಬದ ಪೋರನೊಬ್ಬ ಮುಂದೆ ವಿಶ್ವವಿದ್ಯಾಲಯವೊಂದರ ಉಪಕುಲಪತಿಯ ಹುದ್ದೆಯನ್ನಲಂಕರಿಸಿ, ‘ರಾಷ್ಟ್ರಕವಿ’ ಮನ್ನಣೆಗೆ ಪಾತ್ರವಾಗುವುದು ಕಡಿಮೆ ಸಾಧನೆಯೇನಲ್ಲ. ‘ಕನ್ನಡದ ಆಸ್ಥಾನಕವಿ’ ಎಂದೇ ಹೊಗಳಿಸಿಕೊಳ್ಳುವ ಕುವೆಂಪು ಪಡೆದ ಪ್ರಶಸ್ತಿಗಳು ಅಸಂಖ್ಯಾತ.1968 ರಲ್ಲಿ ಜ್ಞಾನಪೀಠದ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಪಂಪ ಪ್ರಶಸ್ತಿ, ಪದ್ಮವಿಭೂಷಣ, ‘ಕರ್ನಾಟಕ ರತ್ನ’, ಗೌರವ ಡಾಕ್ಟರೇಟ್, ಇವೆಲ್ಲ ಇವರನ್ನರಸಿ ಬಂದವು. ನವಿಲು, ಕೊಳಲು, ಪಾಂಚಜನ್ಯ, ಕಲಾಸುಂದರಿ, ಪ್ರೇಮಕಾಶ್ಮೀರ ಇತ್ಯಾದಿ ಇವರ ಪ್ರಸಿದ್ಧ ಕವನ ಸಂಕಲನಗಳು. ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಬೃಹತ್ ಕಾದಂಬರಿಗಳು. ರಕ್ತಾಕ್ಷಿ, ಜಲಗಾರ, ಬೆರಳ್ಗೆ ಕೊರಳ್, ಸ್ಮಶಾನ ಕುರುಕ್ಷೇತ್ರಂ, ಯಮನ ಸೋಲು ಇತ್ಯಾದಿ ನಾಟಕಗಳು. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ.
ಕುವೆಂಪು ಕಾವ್ಯ ಕಬ್ಬಿಣದ ಕಡಲೆ, ಅವರು ಬಳಸುವ ಭಾಷೆ ಸುಲಭಕ್ಕೆ ಅರ್ಥವಾಗುವುದಿಲ್ಲ.. ಎಂಬಿತ್ಯಾದಿಟೀಕೆ-ಟಿಪ್ಪಣೆಗಳೂ ಇವೆ. ಆದರೆ ಜನತಾ ಜನಾರ್ಧನನ ಸಂತುಷ್ಟಿ, ಸಂಪುಷ್ಟಿಗಾಗಿಯೇ ಮಹಾಕವಿಯ ಕಾವ್ಯಯೋಗ. ನಗರ ಸಂಕ್ಷೋಭೆಯಿಂದ ದೂರವಾದ ನಿರ್ಜನಾರಣ್ಯದಲ್ಲಿ ತಪೋನಿರತನಾಗುವ ಋಷಿಯ ಗುರಿ ಜಗತ್ಕಲ್ಯಾಣ ಸಂಸಿದ್ಧಿಯೇ ಹೊರತು ಕೇವಲ ವೈಯಕ್ತಿಕ ಮೋಕ್ಷಸಾಧನೆಯಲ್ಲ. ವಲ್ಮೀಕ ಪ್ರವೇಶವಿಲ್ಲದೇ ವಾಲ್ಮೀಕಿಯಾಗುವುದು ಸಾಧ್ಯವಾಗಲಾರದು. ಆದ್ದರಿಂದ ಕುವೆಂಪು ಜನತೆಗೆ ದೂರವೆನಿಸಿದಂತೆ ತೋರಿದರೂ ವಾಸ್ತವವಾಗಿ ಹತ್ತಿರವೇ ಆಗಿದ್ದಾರೆ; ಹತ್ತಿರವಾಗುವುದಕ್ಕೋಸ್ಕರವೇ ದೂರವಾಗಿದ್ದಾರೆಂದರೆ ಸಮರ್ಪಕವಾದೀತೆಂಬುದು ಪ್ರಾಜ್ಞರ ಅಭಿಪ್ರಾಯ.
ಕುವೆಂಪು ಅಪ್ಪಟ ನಿಸರ್ಗ ಕವಿ. ಇವರ ಕಾವ್ಯದಲ್ಲಿ ಚಿತ್ರಿತವಾದಷ್ಟು ಸುಂದರವಾಗಿ ಪ್ರಕೃತಿ ಮತ್ತೆಲ್ಲೂ ಚಿತ್ರಿತವಾಗಿಲ್ಲವೆಂದರೆ ಅತಿಶಯೋಕ್ತಿಯೇನಲ್ಲ. ‘ಸೃಷ್ಟಿಯೊಲ್ಮೆಯೇ ಸೃಷ್ಟಿಕರ್ತಂಗೆ ಪೂಜೆಯಯ್’ ಎಂದಿವರು ಸಾರುತ್ತಾರೆ. ಹೊನ್ನಗಿಂಡಿಯ ಹಿಡಿದು ಕೈಯಲಿ ಹೇಮವಾರಿಯ ಚಿಮುಕಿಸಿ, ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ’ ಎಂಬ ದೋಣಿಹಾಡಿನ ಬಣ್ಣನೆ ಮೈನವಿರೇಳಿಸುವಂಥದು. ಹಾರುತಿಹ ಬೆಳ್ಳಕ್ಕಿಗಳ ಸಾಲು ಇವರ ಕಂಗಳಿಗೆ ದೇವರ ರುಜುವಿನಂತೆ ಕಾಣುತ್ತದೆ. ಗಿಳಿಗೊರವಂಕ ಹಕ್ಕಿಗಳಿಂಚರ ಕಿವಿಹಾಯ್ದು ಎದೆ ಮುಟ್ಟುತ್ತದೆ.
ಕನ್ನಡ ಪ್ರೇಮವಂತೂ ಇವರ ಉಸಿರಾಗಿದೆ.’ಕನ್ನಡ ಎನೆ ಕುಣಿದಾಡುವುದೆನ್ನೆದೆ. ಕನ್ನಡ ಎನೆ ಕಿವಿ ನಿಮಿರುವುದು’ ಎಂದು ಹಾಡುವ ಇವರು ‘ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಗೋವರ್ಧನಗಿರಿಯಾಗುತ್ತದೆ. ಕನ್ನಡಕ್ಕಾಗಿ ಕೊರಳೆತ್ತು ಅದು ಪಾಂಚಜನ್ಯವಾಗುತ್ತದೆ' ಎಂದು ಎದೆ ತಟ್ಟಿ ಹೇಳಿದವರು. ಎಲ್ಲಾದರೂ ಇರು..ಎಂತಾದರೂ ಇರು..ಎಂದೆಂದಿಗೂ ನೀ ಕನ್ನಡವಾಗಿರು ಎಂದು ಹರಸಿದವರು. ನನಗಿಲ್ಲಿ ತೇಜಸ್ವಿಯವರ ‘ಅಣ್ಣನ ನೆನಪು’ ಪುಸ್ತಕದಲ್ಲಿನ ಒಂದು ಘಟನೆ ಹೇಳಲೇಬೇಕು. ತೇಜಸ್ವಿ, ಚೈತ್ರ ಚಿಕ್ಕವರಿದ್ದಾಗಿನ ಪ್ರಸಂಗ. ಅವರಿಬ್ಬರೂ ಅದ್ಯಾ ವುದೋ ನಾಯಿಯೊಡನಾಡುತ್ತ ಅದಕ್ಕೆ ಆದೇಶ ಕೊಡುತ್ತಿರುತ್ತಾರೆ. ‘ಕಮಾಂಡಾ, ಕಮಾಂಡಾ’..ಎಂದೆಲ್ಲ. ಕುವೆಂಪುಗೆ ಎಷ್ಟು ತಲೆಕೆಡಿಸಿಕೊಂಡರೂ ಅದ್ಯಾವ ಶಬ್ದದ ಅಪಭ್ರಂಶ ಈ ‘ಕಮಾಂಡಾ’ ಅರ್ಥವಾಗುವುದಿಲ್ಲ. ಕೊನೆಗೆ ಮಕ್ಕಳನ್ನೇ ಕರೆದು ಕೇಳಿದಾಗ ಅವರು ಇದು ಇಂಗ್ಲೀಷ್ ನಾಯಿಯೆಂತಲೂ, ಬಾ ಅಂತ ಕನ್ನಡದಲ್ಲೆಲ್ಲ ಮಾತಾಡಿದರೆ ಅದಕ್ಕೆ ತಿಳಿಯುವುದಿಲ್ಲವಾದ್ದರಿಂದ ‘ಕಮಾಂಡಾ’ ಎಂದು ಇಂಗ್ಲೀಷ್ ನಲ್ಲಿ ಕರೆಯಬೇಕೆಂದು ‘ಜಾನಪ್ಪ’ ಹೇಳಿಕೊಟ್ಟಿದ್ದಾನೆಂತಲೂ ವಿವರಿಸುತ್ತಾರೆ. ಇದು ‘come on dog’ ದ ಅಪಭ್ರಂಶವೆಂದು ಅರ್ಥವಾಗುವುದರ ಜೊತೆಗೆ ಕನ್ನಡಕ್ಕಾದ ಅಪಮಾನದಿಂದ ಅವರ ಮೈ ಉರಿದುಹೋಗುತ್ತದೆ. “ನಮ್ಮ ಪಂಪ ಇಲ್ಲಿ ಮಹಾಕಾವ್ಯ ಬರೆಯುತ್ತಿದ್ದಾಗ ನಿಮ್ಮ ದೊರೆಗಳಿನ್ನೂ ತೊಗಟೆಯುಟ್ಟುಕೊಂಡು ಅಡವಿಯಲ್ಲಿ ಅಲೆಯುತ್ತಿದ್ದರು ಎಂದು ಹೋಗಿ ಹೇಳಿ ನಿಮ್ಮ ಆ ಜಾನಪ್ಪನಿಗೆ’' ಎಂದು ಗರ್ಜಸುತ್ತಾರಂತೆ. ನನಗೆ ಈ ಪ್ರಸಂಗವನ್ನೆಷ್ಟು ಸಲ ಓದಿದರಷ್ಟೂ ಸಲವೂ ಮೈಮೇಲೆ ಮುಳ್ಳು..ಕಣ್ಣಲ್ಲಿ ನೀರೊಡೆಯುತ್ತದೆ.
ಕುವೆಂಪು ದಾರ್ಶನಿಕ ಕವಿಯೂ ಹೌದು. ಜೀವನದ ಸಣ್ಣಪುಟ್ಟದರಲ್ಲಿಯೂ ಉದಾತ್ತತೆಯನ್ನೂ, ಅನಂತತೆಯನ್ನು ಕಾಣುವ ಕವಿ ನಮಗೂ ಅದನ್ನು ತೋರಿಸುತ್ತಾರೆ. ‘ಬೃಂದಾವನಕೆ ಹಾಲನು ಮಾರಲು’ ಅಂಥದೇ ಒಂದು ಭಾವಪೂರ್ಣ ಗೀತೆ. ಗೋಪಿಯೊಬ್ಬಳು ತನ್ನ ಸಖಿಗೆ ಬೃಂದಾವನಕೆ ಹಾಲನು ಮಾರಲು ತನ್ನೊಡನೆ ಬರಲು ಕರೆಯುತ್ತಿದ್ದಾಳೆ. ಆ ಸಖಿಗೋ ಪರಮಾಶ್ಚರ್ಯ! ಹಾಲು-ಹೈನಿನಿಂದ ಸಮೃದ್ಧವಾದ ಆ ಬೃಂದಾವನದಲ್ಲಿ ತಮ್ಮ ಹಾಲನ್ನು ಯಾರು ಕೇಳಿಯಾರು ಎಂಬ ಚಿಂತೆ ಅವಳದು. ಈ ಮುಗುದೆಗೋ ಹಾಲು ಮಾರುವುದೊಂದು ನೆಪ. ಅವಳ ಜೀವವೆಲ್ಲ ಶ್ರೀಕೃಷ್ಣನಲ್ಲಿ. ಹಾಲನು ಮಾರುವ ನೆವದಿಂದ ಹರಿಯ ಮೋಹಿಸಿ ಕರೆಯುವುದೇ ಅವಳ ಉದ್ದೇಶ. ಜೊತೆಗೇ ಗೋವಿಂದ ಹಾಲನು ಕೊಂಡು ಅದಕ್ಕೆ ಪ್ರತಿಯಾಗಿ ತನ್ನನೇ ನೀಡುವನೆಂಬ ಬಲವಾದ ನಂಬಿಕೆ. ಈ ಗೀತೆಗೊಂದು ನೃತ್ಯ ರೂಪಕದ ಗುಣವಿದೆ; ದರ್ಶನದ ಹೊಳಹಿದೆ. ‘ನಾವು ಲೀಲಾ ಮಾತ್ರ ಜೀವರು ನಮ್ಮ ದೇವನ ಲೀಲೆಗೆ..ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ’ ಎಂಬಲ್ಲಿ ಸಂಪೂರ್ಣ ಶರಣಾಗತಿಯ ಸೊಗವಿದೆ. ರಾಮಾಯಣ ದರ್ಶನಂದಲ್ಲಿ ಅಹಲ್ಯೋದ್ಧಾರ ಸಂದರ್ಭದ ‘ಕಲ್ಲಾದರೇನ್, ತೀವ್ರತಪದಿಂದೆ ಚೇತನಸಿದ್ಧಿಯಾಗದೇ ಜಡಕೆ? ಜಡವೆಂಬುದು ಬರಿ ಸುಳ್ಳು..ಚೇತನ ಮೂರ್ತಿಯು ಈ ಕಲ್ಲು’ ಎಂದು ಚೈತನ್ಯ ಪೂಜೆ ಮಾಡುತ್ತಾರೆ. ‘'ಕಡೆಯದೆಯೇ ಕೇಳ್ ಬೆಣ್ಣೆ ಹೊಮ್ಮುವುದೇ? ಮೂಡುತಿರ್ದುವೇ ಮಹಾರತ್ನಗಳ್, ಪೇಳ್ ಮಥಿಸದಿರೆ ಮಂಥರೆಯ ವಾಸುಕಿ, ಮಹಾಮಮತೆ ತಾಂ ಕೈಕೆ ಮಂದರದಿಂದಮಾ ತ್ರೇತಾ ಸಮುದ್ರಮಂ” ಎಂದು ‘ಪ್ರಾಕೃತ ಘಟನೆಗಳ್ಗೆ ಪ್ರಕೃತಿ ಕಾರಣದಂತೆ ದೇವಕಾರಣಮಿರ್ಪುದು’ ಎಂಬ ರಹಸ್ಯವನ್ನರುಹುತ್ತಾರೆ. ‘ಲೇಸನೆಸಗುವ ವಿಧಿಗೆ ಬಹು ಪಥಗಳುಂಟು ನಡೆಯಲ್’ ಎಂದು ಕಂಗೆಟ್ಟವರನ್ನು ಸಂತೈಸುತ್ತಾರೆ. ‘ ರಸಜೀವನಕೆ ಮಿಗಿಲು ತಪಮಿಹುದೇ? ರಸಸಿದ್ಧಿಗಿಂ ಮಿಗಿಲೇ ತಾನ್ ಸಿದ್ಧಿ’ ಎಂದು ರಸದ ಹೊನಲನ್ನೇ ಹರಿಸುತ್ತಾರೆ.
ಕೊನೆಯದಾಗಿ ನಾನಿಲ್ಲಿ ಬರೆಯುತ್ತಿರುವುದು ಕವಿಯೊಡನೆ ನನ್ನ ನಂಟಿನ ಬಗ್ಗೆ; ಆ ಮಹಾಕವಿ ಒಂದಿನಿತು ನನಗೂ ದಕ್ಕಿದ ಬಗ್ಗೆ. ‘ಹಿಂದೆ ಕುಳಿದವಳೆಂಬ ನಿಂದೆಯ ಸಹಿಸಿ ನೊಂದಿಹೆ ಬಲ್ಲೆನು; ಆದರೊಲಿಯೆನು ಅನ್ಯರ..ಚಿನ್ನವೊಲಿದಿಹ ಧನ್ಯರ’ ಎಂದು ಪ್ರಾಥಮಿಕ ಶಾಲೆಯಲ್ಲಿ ಬಾಯಿಪಾಠ ಮಾಡಿ ಹಾಡಿ, ಇದನ್ನು ಬರೆದವರು ಕುವೆಂಪು, ಅವರ ಪೂರ್ಣ ಹೆಸರು......’ ಇತ್ಯಾದಿಯೊಂದಿಗೆ ಶುರುವಾದದ್ದು ಕುವೆಂಪುರವರ ನಂಟು. ಬಾಲ್ಯದ ಆದಿನಗಳಲ್ಲಿ ದೇಶಭಕ್ತಿ, ನಾಡು-ನುಡಿಯ ಬಗ್ಗೆ ಅಭಿಮಾನ, ಪ್ರೇಮ ಹೀಗೆಲ್ಲ ಗರಿಮೂಡಿದ್ದೇ ಅವರ ಜಯಭಾರತ ಜನನಿಯ ತನುಜಾತೆ, ಬಾರಿಸು ಕನ್ನಡ ಡಿಂಡಿಮವ ಇತ್ಯಾದಿ ಗೀತೆಗಳಿಂದ..ನನ್ನ ಹೈಸ್ಕೂಲಿನ ಮಾಸ್ತರರೊಬ್ಬರು ‘ವಿದ್ಯಾರ್ಥಿಗಳು ಭತ್ತ ತುಂಬುವ ಗೋಣಿ ಚೀಲಗಳಾಗಬಾರದು; ಭತ್ತ ಬೆಳೆಯುವ ಗದ್ದೆಗಳಾಗಬೇಕು’ ಎನ್ನತ್ತಾರೆ ಕುವೆಂಪು ಎಂದು ನಮ್ಮ ಅಭ್ಯಾಸದ ಪರಿಯನ್ನು ತಿದ್ದಿದ ರೀತಿ ನನಗಿಂದಿಗೂ ನೆನಪಿದೆ. ಶಾಲೆಯಲ್ಲಿ ಏರ್ಪಡಿಸಿದ್ದ ‘ನನ್ನ ನೆಚ್ಚಿನ ಕವಿ’ ನಿಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ನಾ ಪಡೆದಿದ್ದ ಸ್ಟೀಲ್ ಲೋಟವೊಂದು ಇನ್ನೂ ಅಮ್ಮನ ಮನೆಯಲ್ಲಿದೆ.
ನಂತರ ಕ್ಯಾಸೆಟ್ಟಿನ ಆ ಸುವರ್ಣಯುಗದಲ್ಲಿ ಅಶ್ವತ್ಥ, ಮೈಸೂರು ಅನಂತಸ್ವಾಮಿ, ರಾಜಕುಮಾರ್, ಮಾಲತಿ ಶರ್ಮ,ರತ್ನಮಾಲಾ ಪ್ರಕಾಶ್ ಅವರೆಲ್ಲರ ಸಿರಿಕಂಠದಿಂದ ಹರಿದು ಬಂದ ಕುವೆಂಪು ಗೀತೆಗಳು ನನ್ನನ್ನು ಬೇರೆಯದೇ ಲೋಕಕ್ಕೆ ಒಯ್ದದ್ದು ಸುಳ್ಳಲ್ಲ. ‘ಎಲ್ಲಿಯೂ ನಿಲ್ಲದಿರು..ಮನೆಯನೆಂದೂ ಕಟ್ಟದಿರು’, ‘ನೀನು ಹೊಳೆದರೆ ನಾನು ಹೊಳೆವೆನು’, ‘ಚಿನ್ನವ ಕೊಡನೇ ರನ್ನವ ಕೊಡನೇ ತನ್ನನೇ ಕೊಡುವನು ಕೇಳೆ ಸಖಿ’..ಇಂಥ ಗೀತೆಗಳಲ್ಲಿ ಮುಳುಗಿ ಕಳೆದುಹೋದದ್ದೆಷ್ಟು ಬಾರಿಯೋ? ಕೆರೆಯ ಅಂಚಿನ ಮೇಲೆ ಮಿಂಚುವ ಹಿಮಮಣಿಗಳ ಚಿತ್ರಣಕ್ಕೆ ಮನಸೋತಿದ್ದೆಷ್ಟು ಬಾರಿಯೋ? ಬೇಸರದ ಬದುಕಿಗುಸುರ ತುಂಬಲು ‘ಅಂತಾದರೂ ಬಾ, ಇಂತಾದರೂ ಬಾ, ಎಂತಾದರೂ ಬಾ ಬಾ’ ಎಂದು ಎದೆಬಾಗಿಲು ತೆರೆದಿಟ್ಟು ಆ ಅತಿಥಿಯನ್ನು ಧ್ಯಾನಿಸಿದ್ದೆಷ್ಟು ಸಲವೋ? ಮುಂದೆ ನಲ್ಲನೊಬ್ಬ ಒಲಿದಾಗ ‘ಆವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು’ ಎಂದು ಮನತುಂಬಿದ ಭಾವ ಈ ಕವಿಯ ಸಾಲುಗಳದ್ದೇ. ಮಲೆಗಳಲ್ಲಿ ಮದುಮಗಳು ಓದುತ್ತಿದ್ದಾಗ ನಾ ಚೊಚ್ಚಲ ಬಸುರಿ. ಅದರಲ್ಲಿ ಮೇಲಿಂದ ಮೇಲೆ ಬರುವ ತುಂಡು, ಕಡುಬು, ಕಳ್ಳುಗಳ ವರ್ಣನೆ ಇಷ್ಟು ನನ್ನ ಮನ ಹೊಕ್ಕಿಬಿಟ್ಟಿತ್ತೆಂದರೆ ಅದ ತಿನ್ನುವ, ಕುಡಿವ ಬಯಕೆ ಎಡೆಬಿಡದೇ ಕಾಡಿದ್ದು, ಅದನ್ನೇ ಹತ್ತು ಸಲ ಹಲುಬಿ ಅಮ್ಮನಿಂದ ಬೈಸಿಕೊಂಡದ್ದು ಮಧುರ ನೆನಪು. ಕಾನೂರ ಹೆಗ್ಗಡತಿಯಂತೂ ಆಗ ನಿದ್ದೆಯಲ್ಲೂ ಬಂದು ಕಾಡಿದ್ದಳು. ರಾಮಾಯಣ ದರ್ಶನಂ ಅಂತೂ ಸದೈವ ಕಾಲ ಇಷ್ಟದೇವತಾ ಪಟದಂತೆ ನನ್ನ ಕಣ್ಣೆದಿರು ಇರಲೇಬೇಕು..ನನ್ನ ಟೇಬಲ್ ಮೇಲೆ. ಅದು ಮಾಡಿದ ಪ್ರಭಾವದ ಬಗ್ಗೆ ಇಲ್ಲಿ ಬರೆಯಲಾಗದು. ‘ರಾಮಾಯಣಂ ಅದು ವಿರಾಮಯಣಂ ಕಣಾ’.
ಬುದ್ಧಿಗೆ ಅತೀತವಾದುದನ್ನು ಭಾವದಿಂ ಗ್ರಹಿಸುವ ಶಕ್ತಿ ಕರುಣಿಸಿದ್ದಕ್ಕೆ, ಎದೆಯ ತಿಳಿವಿಗೂ ಮಿಗಿಲು ಶಾಸ್ತ್ರವಿಹುದೇ ಎಂದು ಎದೆಯ ಮಾತಾಲಿಸಲು ಕಲಿಸಿದ್ದಕ್ಕೆ ಕವಿಗೆ ಮಣಿಯುತ್ತಿದ್ದೇನೆ.
ಮುಗಿದಿರಲಿ ಕೈ; ಮಣಿದಿರಲಿ ಮುಡಿ; ಮತ್ತೆ ಮಡಿಯಾಗಿರಲಿ ಬಾಳ್ವೆ..ಕವಿವಾಕ್ಯ ಸದಾ ನನ್ನ ಪೊರೆಯಲೆಂಬ ಆಶಯ.