ಚಿತ್ರ ಬರೆಸಿದ ಕವಿತೆ

 ಓದುಗರಿಗೆಲ್ಲ ಆತ್ಮೀಯ ನಮಸ್ಕಾರ,
ಸಾಮಾಜಿಕ ಜಾಲತಾಣಗಳು ಮನುಷ್ಯನ ಭಾವಾಭಿವ್ಯಕ್ತಿಗೆ ಸಶಕ್ತ ಮಾಧ್ಯಮಗಾಳಾಗಿವೆ. ಬರವಣಿಗೆ, ಹಾಡು, ಅನಿಸಿಕೆ ಅಭಿಪ್ರಾಯಗಾಲ ಜೊತೆಗೇ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಹಾಕುವುದು, ಬಹಳಷ್ಟು ಜನರ ಪ್ರಮುಖವಾದ ಹವ್ಯಾಸವಾಗಿ ಬದಲಾಗಿದೆ. ಫೋಟೋ ವಿಡಿಯೋ ಹಾಕುವ ಕಾಯಕವೇ ಹಣಗಳಿಸುವ ಉತ್ತಮ ವೇದಿಕೆಯಾಗಿಯೂ ಮಾರ್ಪಟ್ಟಿದೆ. ಒಂದಿಷ್ಟು ಜನ ತಮ್ಮ ವೈಯಕ್ತಿಕ ಜೀವನವನ್ನು ಚಿತ್ರಗಳ ಮೂಲಕ ಜಗತ್ತಿನ ಮುಂದೆ ಅನಾವರಣ ಗೊಳಿಸಿದರೆ, ಮತ್ತೊಂದಷ್ಟು ಜನ ಹೂವು, ಹಣ್ಣು, ನೀರು, ಆಕಾಶ, ಕೀಟ, ಹಕ್ಕಿ ಅಂತೆಲ್ಲ ನಮ್ಮ ಸುತ್ತಲಿನ ಸುಂದರ ಜಗತ್ತನ್ನು ಇನ್ನೂ ಸುಂದರವಾಗಿ ತಮ್ಮ ಚಿತ್ರಗಳ ಮೂಲಕ ಚಿತ್ರಿಸಿ ನಮ್ಮ ಮುಂದಿಟ್ಟು ರಂಜಿಸುತ್ತಾರೆ. ಈ ಚಿತ್ರಗಳು ಪರಿಚಯವೇ ಇಲ್ಲದ ಜಗತ್ತಿನ ಅದ್ಯಾವುದೋ ಮೂಲೆಯಲ್ಲಿದ್ದುಕೊಂಡು ಮತ್ತೊಬ್ಬ ಸಮಾನಸಕ್ತನ ಭಾವಕೋಶದ ಪದರನ್ನು ಮೆತ್ತಗೆ ತಟ್ಟಿ, ಸ್ಫೂರ್ತಿ ಕೊಡುತ್ತವೆ. ಕವಿಮನಸನ್ನು ಆವರಿಸಲು ಯಶಸ್ವಿಯಾದ ಒಂದೇ ಒಂದು ಭಾವಚಿತ್ರ ಸಾವಿರ ಭಾವಗಳನ್ನು ಪದಗಳಲ್ಲಿ ಹೊಮ್ಮಿಸಲೂಬಹುದು.

ನಾನು ಆಗಾಗ್ಯೆ, ನನ್ನ ಕ್ಯಾಮೆರಾ ಮತ್ತು ಫೋನಿನಲ್ಲಿ ತೆಗೆದ ಚಿತ್ರಗಳನ್ನ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಎಂಬ ಸಾಮಾಜಿಕ ಜಾಲತಾಣಗಲ್ಲಿ ಹಂಚಿಕೊಳ್ಳುತ್ತಾ ಇರುತ್ತೇನೆ. ಅಲ್ಲಿರುವ ಕೆಲ ಕವಿ ಹೃದಯಗಳಿಗೆ ನಾನು ಹಂಚಿಕೊಂಡ ಚಿತ್ರಗಳು ಇಷ್ಟವಾಗಿ ಅವರ ಮನ ಸೃಜಿಸಿದ ಭಾವವನ್ನು ಅಕ್ಷರರೂಪಕ್ಕಿಳಿಸಿ ನನ್ನೊಂದಿಗೆ ಹಂಚಿಕೊಳ್ಳುತ್ತಾರೆ.
ಇತ್ತೀಚಿಗೆ ಲ್ಯಾಂಡ್ ಸ್ಕೇಪ್, ಹೂ, ನದಿ, ಚಿಕ್ಕ ಚಂದ್ರರ ಫೋಟೋ ಕ್ಲಿಕ್ ಮಾಡುವಾಗಲೆಲ್ಲ, ಈ ಸ್ನೇಹಿತರು ನೆನಪಾಗಿ ಬಿಡುತ್ತಾರೆ. ಈ ಚಿತ್ರ ಇವರಿಗೆ ಇಷ್ಟ ಆಗಬಹುದು/ಆಗುತ್ತದೆ ಎಂದು ಮನಸ್ಸು ಹೇಳುತ್ತದೆ.

ನಾನು ಕ್ಲಿಕ್ಕಿಸಿದ ಭಾವಚಿತ್ರವನ್ನು ಸ್ಫೂರ್ತಿಯಾಗಿ ಕವಿತೆಯನ್ನು
ಬರೆದು ಕಳಿಸುವ ನನ್ನ ಮೆಚ್ಚಿನ ಮೇದಿನಿ, ಈಶ್ವರ ಭಟ್ ಕೆ, ಮತ್ತು ಗುರುರಾಜ ಹೇರ್ಳೆ ಅವರನ್ನು ಅನಿವಾಸಿ ಬಳಗಕ್ಕೆ ಪರಿಚಯಿಸಿ,
ಚಿತ್ರಗಳೊಂದಿಗೆ, ಅವರ ಕವಿತೆ ಹಂಚಿಕೊಳ್ಳುತ್ತಿರುವೆ .
—ಅಮಿತಾ ರವಿಕಿರಣ್ ( ವಾರದ ಸಂಪಾದಕಿ)
ಈ ನೀಲಿಯಾಚೆಗೆ....

ಈ ನೀಲಿಯಾಚೆಗೆ ಆ ಮೋಡದೀಚಿಗೆ
ನಗುತಿರುವ ಸಗ್ಗವೊಂದಿದೆ ಅಲ್ಲಿ ಬಾ
ನೀಲಿಯೊಳು ಮೈಮರೆತು ಮೋಡದೊಳು
ಮರೆಯಾಗಿ ಜಗವನ್ನೆ ಹೊರನೂಕಿ ಮೆರೆಯೋಣ ಬಾ

ಬಾನು ಭುವಿ ಮೈಮರೆತು ಮಾತನಾಡುವುದಲ್ಲಿ
ಮರದ ಮಾತೆಲ್ಲವೂ ಮೋಡದೊಡನೆ ಧುಮ್ಮಿಕ್ಕಿ
ಹಾಲ್ನೊರೆಯ ತೇಲಿಸುವ ನದಿಯೊಂದು
ಸಂಭಾಷಿಸಿಹುದು ತೀರದೊಡನೆ

ಮಾತು ಮರೆತಿಹ ಮನಸು
ನೋಟ ಮರೆತಿಹ ಅಕ್ಷಿ
ಕಾಲ ಪ್ರವಾಹದಲಿ ಕಳೆಯೋಣ ಬಾ
ಮೌನದಾಚೆಯ ಮಾತು ಕಣ್ಣಿನಾಚೆಯ ನೋಟ
ಹೇಳುತಿದೆ ಏನನ್ನೊ ಕೇಳೋಣ ಬಾ

ಕುಂತಲ್ಲಿ ಏನಿಹುದು, ನಿಂತಲ್ಲಿ ಸೊಗಸೇನು
ಸಾಗಿ ಹೋಗೋಣ ಆ ತೀರದೆಡೆಗೆ
ನೀಲಿಯಾಚೆಯ ನಾಡು ಮೋಡದೀಚೆಯ
ಜಾಗ ಸೃಷ್ಟಿಯಾಗಿಹ ನೀಲ ಸ್ವರ್ಗದೆಡೆಗೆ

ತಬ್ಬುವುದೆಂದರೇನು ಸಖೀ?!

ತಬ್ಬುವುದೆಂದರೇನು ಸಖೀ?!
ತೋಳುಗಳ ಬಂಧನವೇ?
ಹೃದಯದ ಬೆಸುಗೆಯೇ
ಅಗಲಿರಲಾರೆನೆಂದು ಕೈ ಮೇಲೆ ಕೈಯಿಟ್ಟ ಪ್ರಮಾಣವೇ?

ತಬ್ಬುವುದೆಂದರೇನು ಸಖೀ?
ದಿನದ ಅಷ್ಟೂ ಘಳಿಗೆಯಲ್ಲೂ
ಜೊತೆಗಿದ್ದು
ಅಂಟಿಯೂ ಅಂಟದಂತೆ
ನವಿರಾಗಿ ತಾಗುತ್ತಾ
ಕಣ್ಣಲ್ಲೇ ಹೊರಡಿಸುವ ಪ್ರೇಮದ ನೋಟವೇ?

ತಬ್ಬುವುದೆಂದರೇನು ಸಖೀ?
ನೀಲಾಕಾಶವು
ನೀಲಸಮುದ್ರವ ಕರೆಯುತ್ತಾ
ನಾ ಕೆಳಗಿಳಿದೆ, ನೀ ಮೇಲೆ ಬಾ ಎನ್ನುವ
ಸಂಭ್ರಮದಿ
ತಾಗಿಯೂ, ತಾಗದಿರುವುದೇ
ತಬ್ಬುವುದೆಂದರೇನು ಸಖೀ?!

ಈಶ್ವರ ಭಟ್ ಕೆ (ಕಿರಣ),

ಮೂಲತಃ ಕಾಸರಗೋಡು ಕೇರಳದವರು. ಈಗ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸ ಬರಹ, ತಿರುಗಾಟ.
ಗಡಿನಾಡಿನ ಸೀಮೆಯವರು ಆಗಿದ್ದಕ್ಕೂ ಏನೋ, ಕಿರಣರಿಗೆ ದಕ್ಷಿಣ ಭಾರತದ ಎಲ್ಲ ಭಾಷೆಗಳೂ ಮಾತಾಡಲು ಮತ್ತು ಓದಲು ಬರೆಯಲು ಬರುತ್ತದೆ ಅದೇ ಕಾರಣದಿಂದ ಆ ಭಾಷೆಯ ಕಥೆ, ಕವನ, ಭಜನೆಗಳನ್ನು ತುಂಬಾ ಸುಂದರವಾಗಿ ಕನ್ನಡಕ್ಕೆ ಅನುವಾದಿಸುತ್ತಾರೆ.
ಇವರ ಕವಿತೆಗಳು ಸರಳವಾಗಿ ಹಾಡಿಸಿಕೊಂಡು ಹೋಗುತ್ತವೆ. ರಾಗಕ್ಕೆ, ತಾಳಕ್ಕೆ ಹೊಂದುವ ಸಾಹಿತ್ಯ ಬರೆಯುವ ಇವರು, ಹಾಸ್ಯಬರಹ, ಮತ್ತೆ ಅಷ್ಟೇ ಗಂಭೀರ ವಿಷಯಗಳನ್ನೂ ಬರೆಯಬಲ್ಲರು.

ಮಲ್ಲಿಗೆಯವಳು.

ಹೂವಬುಟ್ಟಿಯ ಹೊತ್ತು ಮಲ್ಲಿಗೇ ಮಲ್ಲಿಗೇ
ಎಂದೆನುತ ಬಂದಳೋ ಬಿಂಕದವಳು
ಮೊಳಕೆ ಎಷ್ಟೆಂದರೆ ಕಣ್ಣಲ್ಲೆ ಗದರಿಸುತ
ಹಣದ ಲೆಕ್ಕಾಚಾರ ಯಾಕೆಂಬಳು!

ಮೊಳಕೆ ಮೂವತ್ತಾಯ್ತೆ? ಮೊನ್ನೆ ಇಷ್ಟಿರಲಿಲ್ಲ
ಪಿಸುಮಾತಿಗಳಿಗಿಷ್ಟು ಕೋಪಗೊಂಡು;
ಮಲ್ಲಿಗೆಯ ಗಿಡಕೆಲ್ಲ ರೋಗ ಬಂದಿದೆ ಒಡೆಯ
ಮೊನ್ನೆಯಷ್ಟಿಲ್ಲ ಹೂ ಎಂದೆಂಬಳು.

ಒಂದು ಮೊಳ ಸಾಕೆನಗೆ, ತೆಗೆದುಕೋ ನಲುವತ್ತು
ಎಂದಾಡಿದರೆ ಮತ್ತೆ ಜನ್ಮ ಹೊರಗೆ;
ಮಾಲೆ ಕಟ್ಟುವ ಸಮಯ ಪರಿಮಳವ ಕುಡಿದೆಹೆನು
ನಾ ಹೇಳುವಷ್ಟನೇ ಕೊಡು ಎಂದಳು.

ಮೊಳ ಕತ್ತರಿಸುವಾಗ ಒಂದಿಷ್ಟು ಹೆಚ್ಚಿಸುತ
ಜೊತೆಗಷ್ಟು ಗುಲಾಬಿ ತೆಗೆದಿಡುತಲಿ;
ಹೂವನ್ನು ಹೆಚ್ಚಿಸುವ ಖುಷಿ ತುಂಬುಮೊಗದಲ್ಲಿ
ನಾಳಿನಾ ಭರವಸೆಯ ನಗು ನಕ್ಕಳು.
ಸೂರ್ಯಾಸ್ತ!

ಅಲ್ಲಿ ಕೆರೆಯಂಚಿನಲಿ, ಮುಳುಗುತಿಹ ನೇಸರಗೆ
ಮರದ ಹಸಿರನು ಕಪ್ಪು ಮಾಡುವಾಸೆ
ಇಲ್ಲಿಯೋ ತಂಗಾಳಿ ಬಿಸಿಯೇರೆ ಹಣಕಿಸುತ
ಹತ್ತಿರಕೆ ಕಳಿಸುವುದು, ಒಲವಿನಾಸೆ!

ಎಷ್ಟು ಮಾತುಗಳಾಡಿ, ಜಗಳದಲಿ ಒಂದಾಗಿ
ಮತ್ತೆ ಮಾತಿನ ದೋಣಿ ತೇಲಿಹೋಗಿ
ಸುತ್ತ ಕತ್ತಲೆ ಹಬ್ಬಿ ಮಾತು ಮೌನಕೆ ದಣಿದು
ಅವಳ ಸಾಮೀಪ್ಯವನೆ ಅಲೆವ ರೋಗಿ

ಹಾರುವುದು ಎದೆಗನಸು ನೂರು ಮೈಲಿಗಳಾಚೆ
ಅಲ್ಲಿಯೂ ನೇಸರನು ಮುಳುಗುತಿಹನು
ಅವಳಿಗೂ ಇದೆ ನೆಪವು, ಇಂತಹದೆ ಬೇಸರವು
ಏನನೋ ಕಾಯುವುದು, ಹೆಳವ ನಾನು.

ಒಂದು ದಿನವಾದರೂ ಸಂಜೆಯಾಗದೆ ಇರಲಿ
ದೂರವಿಹ ವಿರಹಿಗಳ ಎದೆಯ ಸುಡದೆ ಮಂದಮಾರುತ ಹೋಗಿ ಸುಖಿಪವರ ಜೊತೆಗಿರಲಿ
ನನ್ನ ಕಾಡಲುಬೇಡ, ಅವಳು ಸಿಗದೆ




ಗುರುರಾಜ ಹೇರ್ಳೆ

 ಮೂಲತಃ ಉಡುಪಿ ಜಿಲ್ಲೆಯ ಸಾಲಿಗ್ರಾಮ ಎಂಬ ಊರಿನವರು. ಪ್ರಸ್ತುತ  ಬಹರೈನ್ ಎಂಬ ಪುಟ್ಟ ದ್ವೀಪ ರಾಷ್ಟ್ರದಲ್ಲಿ ಉದ್ಯೋಗಿ  ವಾಸ. ಪ್ರಾರಂಭಿಕ ಓದು, ಬೆಳವಣಿಗೆ ಎಲ್ಲ ಉಡುಪಿಯಲ್ಲೇ ಆದರೂ, ಉನ್ನತ ವ್ಯಾಸಂಗ ಮತ್ತು ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿಯೂ ಒಂದಷ್ಟು ಕಾಲ ವಾಸಮಾಡಿದ್ದಾರೆ. 
ಇವರು ಒಳ್ಳೆಯ ಹಾಡುಗಾರರು. ಭಾವಗೀತೆಗಳ ಮೇಲೆ ಒಲವು ಜಾಸ್ತಿ. ಮಕ್ಕಳ ಹಾಡುಗಳು, ಪ್ರೇಮಗೀತೆಗಳನ್ನು ಬರೆಯುತ್ತಾರೆ. ಬರೆದ ಪದ್ಯಕ್ಕೆ ರಾಗ ಹಾಕಿ ಹಾಡುತ್ತಾರೆ ಕೂಡ

ಸಾಗರ ಸನ್ನಿಧಿ

ನೀಲ ಸಾಗರವನ್ನು ನೆಚ್ಚಿ ದೋಣಿಯೊಂದು ಸಾಗಿದೆ,
ಹಾಯಿ ಬಿಚ್ಚಿ ಗಾಳಿ ಬೀಸೋ ದಿಕ್ಕಿನತ್ತೇ ನಡೆದಿದೆ

ನಾಂತದಲ್ಲಿ ಬಾನು ಬುವಿಯು ಸೇರಿದಂತೆ ಭಾಸವು
ತೀರ ಸಿಗದ ದಾರಿಯಲ್ಲಿ ಮುಗಿಯದಿರುವ ಯಾನವು

ಒಮ್ಮೆ ಇಳಿತ ಒಮ್ಮೆ ಭರತ, ಏಳು ಬೀಳಿನಲೆಗಳು
ಒಮ್ಮೆ ನೋವು ಒಮ್ಮೆ ನಲಿವು, ಇದುವೇ ಜೀವನ ರೀತಿಯು

ಕಣ್ಣು ಹಾಯಿಸಿದಷ್ಟು ನೀರು ಕುಡಿಯಲಿನಿತು ಸಾಧ್ಯವೇ ?
ಬಾಳಿನಲ್ಲೂ ನೂರು ಜನರು, ಎಲ್ಲ ಜೊತೆಗೆ ಬರುವರೇ ?

ಅಲ್ಲಿ ಇಲ್ಲಿ ಸಿಗಲು ಬಂಡೆ ದಣಿವನಾರಿಸಬೇಕಿದೆ,
ಹಳೆಯ ತಪ್ಪನೆಲ್ಲ ಮರೆಯದೆ ದಾರಿ ಸಾಗಬೇಕಿದೆ
ಗಮ್ಯ ತಲುಪಬೇಕಿದೆ.
ಬಂದೇ ಬರುತಾವ ಕಾಲ.

ಈ ಸಮಯವೂ ಸರಿದು ಹೋಗಲೇಬೇಕು
ನಮಗೆಂದೇ ಒಂದು ಕಾಲ ಬರಲೇಬೇಕು

ಕರೆದ ಹಾಲದು ಕೆನೆಯ ಕಟ್ಟಲುಬೇಕು
ಹೆಪ್ಪುತಾಗೆ ಗಟ್ಟಿಮೊಸರು ಆಗಲೇಬೇಕು,
ಕಡೆಯಲದನು ಬೆಣ್ಣೆ ಮೇಲೆ ತೇಲಲೇಬೇಕು
ಬಿಸಿತಾಕಲು ಕರಗಿ ತುಪ್ಪವಾಗಲೇಬೇಕು

ಹರುಷ ಹೊನಲಿನ ನದಿಯು ಉಕ್ಕಲೇಬೇಕು
ಮುನಿದ ದೈವವು ಮುಗುಳು ನಗಲುಬೇಕು
ಬಾಡಿದಂತ ಲತೆಯು ಮತ್ತೆ ಚಿಗುರಲುಬೇಕು
ಮುದುಡಿದ ತಾವರೆ ಅರಳುತ ನಲಿಯಲೇಬೇಕು

ಇರುಳಲಿ ಕರಗಿದ ತಿಂಗಳು ಮೂಡಲೇಬೇಕು
ಮುಳುಗಿದ ರವಿ ಮೂಡಣದಿ ಹುಟ್ಟಲೇಬೇಕು
ಧಗೆಯೇರಲು ಮೇಘ ಕರಗಿ ಸುರಿಯಲೇಬೇಕು,
ಸುಖ ಶಾಂತಿ ನೆಮ್ಮದಿಯ ತರಲೇಬೇಕು


ಎರಡು ಕವನಗಳು

ಪ್ರಸಾದ್ ನಂಜನಗೂಡು, ಮೂಲತಃ ಮೈಸೂರಿನವರಾದರೂ ಬೆಂಗಳೂರಿಗ. ಬೆಂಗಳೂರಿನ ಹೆಸರಾಂತ ಶಿಕ್ಷಣ ಸಂಸ್ಥೆಗಳಾದ ಬಸವನಗುಡಿಯ ನ್ಯಾಷನಲ್ ಕಾಲೇಜು ಹಾಗೂ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಓದಿ ಮುಗಿಸಿದ ಮೇಲೆ ಪ್ರತಿಷ್ಠಿತ ಸಂಸ್ಥೆಯಾದ ಮದರಾಸಿನ ಐಐಟಿ ಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತದನಂತರ ಎಚ್ ಏ ಎಲ್, ಟಿಸಿಎಸ್ ಗಳಲ್ಲಿ ಕೆಲಸ ಮಾಡಿ, ಅಮೇರಿಕೆಯ ಹಾದಿಯಾಗಿ ಬ್ರಿಸ್ಟಲ್ ನಗರದಲ್ಲಿ ನೆಲೆಸಿದ್ದಾರೆ. ಅವರ ಪರಿಣತಿ ವಿಮಾನಗಳ ಕ್ಷೇತ್ರದಲ್ಲಿ. ಈಗ ರಕ್ಷಣಾ ಮಂತ್ರಾಲಯದ ಉದ್ಯೋಗಿ. ತಮ್ಮ ಅಭಿಯಂತ ವೃತ್ತಿಯಲ್ಲಿ ನಿರತರಾದರೂ ಸಾಹಿತ್ಯದ ಹಾಗೂ ಸಂಗೀತದ ಆಸಕ್ತಿಯನ್ನು ಪೋಷಿಸಿಕೊಂಡು ಬಂದಿದ್ದಾರೆ. ಲಘುಬರಹ, ಕವನ, ವಿಮರ್ಶೆ ಇವರಿಗೆ ಇಷ್ಟವಾಗುವ ಪ್ರಕಾರಗಳು.

ಈ ವಾರ ಪ್ರಸಾದ್ ತಮ್ಮ ಎರಡು ಕವನಗಳನ್ನು ಅನಿವಾಸಿ ಓದುಗರೊಂದಿಗೆ ಹಂಚಿಕೊಡಿದ್ದಾರೆ. ಇವೆರಡೂ ವಿಭಿನ್ನ ವಿಷಯಗಳನ್ನು ಅವಲೋಕಿಸುತ್ತವೆ. ಇವುಗಳಲ್ಲಿ ಪ್ರಸಾದ್ ಅವರ ಆಲೋಚನೆಯ ಹರಿವನ್ನು ಕಾಣಬಹುದು . ಮೊದಲ ಕವನದಲ್ಲಿ ಪ್ರಸಾದ್ ಪ್ರೇಮವನ್ನು ದಿನಚರಿಯಾಗಿಸಿದ್ದಾರೆ. ಪ್ರೇಯಸಿಯ ಮೇಲಿನ ಪ್ರೀತಿಯನ್ನು ಮನದಾಳದಿಂದ ಬಿಚ್ಚಿಟ್ಟಿದ್ದಾರೆ. ಎರಡನೇ ಕವಿತೆಯಲ್ಲಿ ಇಂದಿಗೂ-ಎಂದಿಗೂ ಪ್ರಸ್ತುತವಾಗುವ ಮೊಂಡು ಬುದ್ಧಿಯ ವಿಶ್ಲೇಷಣೆಯನ್ನು ಕಾಣಬಹುದು. ಪ್ರಾಪಂಚಿಕ ವಿಷಯದಿಂದ ಈ ಮನೋಭಾವನೆಯನ್ನು ಆಧ್ಯಾತ್ಮಕ್ಕೆ ಕೊಂಡೊಯ್ಯುವ ಪ್ರಯತವನ್ನು ಮಾಡಿದ್ದಾರೆ. ಇದು ಪ್ರಸಾದ್ ಅವರಿಂದ ಅನಿವಾಸಿಗೆ ಚೊಚ್ಚಲ ಕೊಡುಗೆ. ನಿಯಮಿತವಾಗಿ ಅವರ ಕವನ, ಬರಹಗಳನ್ನು ಓದುವ ಅವಕಾಶ ನಮ್ಮದಾಗಲಿ ಎಂಬುದು ಹಾರೈಕೆ.

  • ಸಂಪಾದಕ

ದಿನಚರಿ

ನನ್ನೀ ದಿನಚರಿ ನಿನ್ನ ಒಲವ ಪರಿ

ಸಾಗುವೆ ಅದು ಕರೆದೊಯ್ದಲಿ

ಹಗಲೇ ಇರಲಿ ಇರುಳೇ ಬರಲಿ

ಇರುವೆನು ನಾ ಸನಿಹದಲಿ

ಬರೆಯುತ ಹೋದರೂ ಮುಗಿಯದು ಎಂದೂ

ದಣಿಯದು ಎಷ್ಟೇ ಬಣ್ಣಿಸಿಯೂ

ಆಡುವ ಮಾತೆಲ್ಲ ಕೇಳಿದರೂ

ತೀರದು ಆಡದ ಮಾತುಗಳು

ನೋಟವೇ ಸಾಕು ಮನ ತಿಳಿಯಲು

ನೋಡುತಲಿದ್ದರೂ ಮನ ತಣಿಯದು

ಅರಿಯುತಲಿದ್ದರೂ ಅನುದಿನವೂ

ಅರಿಯದೆ ಇರುವದು ಇನ್ನೆಷ್ಟೋ

ಜೀವದೊಡೆಯೇ ಜೀವವಾಗಿ

ಜೀವನವ ನಾವ್ ನಡೆಸಿಹೆವೂ

ಜಗಕೆ ನೀನೊಂದು ಜೀವವಾದರೂ

ಜಗವೇ ನೀನಾಗಿಹೆ ಈ ಜೀವಕೆ

ಮೂಗಿನ ನೇರಕೆ

ಮೂಗಿನ ನೇರಕೆ ಎಲ್ಲ ಮೂಗಿನ ನೇರಕೆ

ಮೂಗಿನ ನೇರಕೆ ನಮ್ಮ ಮೂಗಿನ ನೇರಕೆ

ವೃಥಾ ಚಿಂತೆ ಯಾತಕೆ ಮಂಥನ ವೇತಕೆ

ಮೂಗಿನ ನೇರಕೆ ಎಲ್ಲ ಮೂಗಿನ ನೇರಕೆ

ಯಾವುದು ಒಳಿತು ಯಾರಿಗೆ ಒಳಿತು

ಯಾರಲಿ ಯಾರು ಹೇಳ್ವವರು ಕುಳಿತು

ಸಾದರವಾವುದು ಹಾದರವಾವುದು

ಮೂಗಿನ ನೇರಕೆ ನಮ್ಮ ಮೂಗಿನ ನೇರಕೆ

ಸ್ವಾರ್ಥ ಯಾವುದು ತ್ಯಾಗ ಯಾವುದು

ಪುರಾಣವಾವುದು ಪುರಾತತ್ವವಾವುದು

ಆತ್ಮನದಾವುದು ಪರಮಾತ್ಮನದಾವುದು

ಮೂಗಿನ ನೇರಕೆ ಎಲ್ಲ ಮೂಗಿನ ನೇರಕೆ!

-ಪ್ರಸಾದ್ ನಂಜನಗೂಡು