ಚಿತ್ರ ಬರೆಸಿದ ಕವಿತೆ

 ಓದುಗರಿಗೆಲ್ಲ ಆತ್ಮೀಯ ನಮಸ್ಕಾರ,
ಸಾಮಾಜಿಕ ಜಾಲತಾಣಗಳು ಮನುಷ್ಯನ ಭಾವಾಭಿವ್ಯಕ್ತಿಗೆ ಸಶಕ್ತ ಮಾಧ್ಯಮಗಾಳಾಗಿವೆ. ಬರವಣಿಗೆ, ಹಾಡು, ಅನಿಸಿಕೆ ಅಭಿಪ್ರಾಯಗಾಲ ಜೊತೆಗೇ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಹಾಕುವುದು, ಬಹಳಷ್ಟು ಜನರ ಪ್ರಮುಖವಾದ ಹವ್ಯಾಸವಾಗಿ ಬದಲಾಗಿದೆ. ಫೋಟೋ ವಿಡಿಯೋ ಹಾಕುವ ಕಾಯಕವೇ ಹಣಗಳಿಸುವ ಉತ್ತಮ ವೇದಿಕೆಯಾಗಿಯೂ ಮಾರ್ಪಟ್ಟಿದೆ. ಒಂದಿಷ್ಟು ಜನ ತಮ್ಮ ವೈಯಕ್ತಿಕ ಜೀವನವನ್ನು ಚಿತ್ರಗಳ ಮೂಲಕ ಜಗತ್ತಿನ ಮುಂದೆ ಅನಾವರಣ ಗೊಳಿಸಿದರೆ, ಮತ್ತೊಂದಷ್ಟು ಜನ ಹೂವು, ಹಣ್ಣು, ನೀರು, ಆಕಾಶ, ಕೀಟ, ಹಕ್ಕಿ ಅಂತೆಲ್ಲ ನಮ್ಮ ಸುತ್ತಲಿನ ಸುಂದರ ಜಗತ್ತನ್ನು ಇನ್ನೂ ಸುಂದರವಾಗಿ ತಮ್ಮ ಚಿತ್ರಗಳ ಮೂಲಕ ಚಿತ್ರಿಸಿ ನಮ್ಮ ಮುಂದಿಟ್ಟು ರಂಜಿಸುತ್ತಾರೆ. ಈ ಚಿತ್ರಗಳು ಪರಿಚಯವೇ ಇಲ್ಲದ ಜಗತ್ತಿನ ಅದ್ಯಾವುದೋ ಮೂಲೆಯಲ್ಲಿದ್ದುಕೊಂಡು ಮತ್ತೊಬ್ಬ ಸಮಾನಸಕ್ತನ ಭಾವಕೋಶದ ಪದರನ್ನು ಮೆತ್ತಗೆ ತಟ್ಟಿ, ಸ್ಫೂರ್ತಿ ಕೊಡುತ್ತವೆ. ಕವಿಮನಸನ್ನು ಆವರಿಸಲು ಯಶಸ್ವಿಯಾದ ಒಂದೇ ಒಂದು ಭಾವಚಿತ್ರ ಸಾವಿರ ಭಾವಗಳನ್ನು ಪದಗಳಲ್ಲಿ ಹೊಮ್ಮಿಸಲೂಬಹುದು.

ನಾನು ಆಗಾಗ್ಯೆ, ನನ್ನ ಕ್ಯಾಮೆರಾ ಮತ್ತು ಫೋನಿನಲ್ಲಿ ತೆಗೆದ ಚಿತ್ರಗಳನ್ನ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಎಂಬ ಸಾಮಾಜಿಕ ಜಾಲತಾಣಗಲ್ಲಿ ಹಂಚಿಕೊಳ್ಳುತ್ತಾ ಇರುತ್ತೇನೆ. ಅಲ್ಲಿರುವ ಕೆಲ ಕವಿ ಹೃದಯಗಳಿಗೆ ನಾನು ಹಂಚಿಕೊಂಡ ಚಿತ್ರಗಳು ಇಷ್ಟವಾಗಿ ಅವರ ಮನ ಸೃಜಿಸಿದ ಭಾವವನ್ನು ಅಕ್ಷರರೂಪಕ್ಕಿಳಿಸಿ ನನ್ನೊಂದಿಗೆ ಹಂಚಿಕೊಳ್ಳುತ್ತಾರೆ.
ಇತ್ತೀಚಿಗೆ ಲ್ಯಾಂಡ್ ಸ್ಕೇಪ್, ಹೂ, ನದಿ, ಚಿಕ್ಕ ಚಂದ್ರರ ಫೋಟೋ ಕ್ಲಿಕ್ ಮಾಡುವಾಗಲೆಲ್ಲ, ಈ ಸ್ನೇಹಿತರು ನೆನಪಾಗಿ ಬಿಡುತ್ತಾರೆ. ಈ ಚಿತ್ರ ಇವರಿಗೆ ಇಷ್ಟ ಆಗಬಹುದು/ಆಗುತ್ತದೆ ಎಂದು ಮನಸ್ಸು ಹೇಳುತ್ತದೆ.

ನಾನು ಕ್ಲಿಕ್ಕಿಸಿದ ಭಾವಚಿತ್ರವನ್ನು ಸ್ಫೂರ್ತಿಯಾಗಿ ಕವಿತೆಯನ್ನು
ಬರೆದು ಕಳಿಸುವ ನನ್ನ ಮೆಚ್ಚಿನ ಮೇದಿನಿ, ಈಶ್ವರ ಭಟ್ ಕೆ, ಮತ್ತು ಗುರುರಾಜ ಹೇರ್ಳೆ ಅವರನ್ನು ಅನಿವಾಸಿ ಬಳಗಕ್ಕೆ ಪರಿಚಯಿಸಿ,
ಚಿತ್ರಗಳೊಂದಿಗೆ, ಅವರ ಕವಿತೆ ಹಂಚಿಕೊಳ್ಳುತ್ತಿರುವೆ .
—ಅಮಿತಾ ರವಿಕಿರಣ್ ( ವಾರದ ಸಂಪಾದಕಿ)
ಈ ನೀಲಿಯಾಚೆಗೆ....

ಈ ನೀಲಿಯಾಚೆಗೆ ಆ ಮೋಡದೀಚಿಗೆ
ನಗುತಿರುವ ಸಗ್ಗವೊಂದಿದೆ ಅಲ್ಲಿ ಬಾ
ನೀಲಿಯೊಳು ಮೈಮರೆತು ಮೋಡದೊಳು
ಮರೆಯಾಗಿ ಜಗವನ್ನೆ ಹೊರನೂಕಿ ಮೆರೆಯೋಣ ಬಾ

ಬಾನು ಭುವಿ ಮೈಮರೆತು ಮಾತನಾಡುವುದಲ್ಲಿ
ಮರದ ಮಾತೆಲ್ಲವೂ ಮೋಡದೊಡನೆ ಧುಮ್ಮಿಕ್ಕಿ
ಹಾಲ್ನೊರೆಯ ತೇಲಿಸುವ ನದಿಯೊಂದು
ಸಂಭಾಷಿಸಿಹುದು ತೀರದೊಡನೆ

ಮಾತು ಮರೆತಿಹ ಮನಸು
ನೋಟ ಮರೆತಿಹ ಅಕ್ಷಿ
ಕಾಲ ಪ್ರವಾಹದಲಿ ಕಳೆಯೋಣ ಬಾ
ಮೌನದಾಚೆಯ ಮಾತು ಕಣ್ಣಿನಾಚೆಯ ನೋಟ
ಹೇಳುತಿದೆ ಏನನ್ನೊ ಕೇಳೋಣ ಬಾ

ಕುಂತಲ್ಲಿ ಏನಿಹುದು, ನಿಂತಲ್ಲಿ ಸೊಗಸೇನು
ಸಾಗಿ ಹೋಗೋಣ ಆ ತೀರದೆಡೆಗೆ
ನೀಲಿಯಾಚೆಯ ನಾಡು ಮೋಡದೀಚೆಯ
ಜಾಗ ಸೃಷ್ಟಿಯಾಗಿಹ ನೀಲ ಸ್ವರ್ಗದೆಡೆಗೆ

ತಬ್ಬುವುದೆಂದರೇನು ಸಖೀ?!

ತಬ್ಬುವುದೆಂದರೇನು ಸಖೀ?!
ತೋಳುಗಳ ಬಂಧನವೇ?
ಹೃದಯದ ಬೆಸುಗೆಯೇ
ಅಗಲಿರಲಾರೆನೆಂದು ಕೈ ಮೇಲೆ ಕೈಯಿಟ್ಟ ಪ್ರಮಾಣವೇ?

ತಬ್ಬುವುದೆಂದರೇನು ಸಖೀ?
ದಿನದ ಅಷ್ಟೂ ಘಳಿಗೆಯಲ್ಲೂ
ಜೊತೆಗಿದ್ದು
ಅಂಟಿಯೂ ಅಂಟದಂತೆ
ನವಿರಾಗಿ ತಾಗುತ್ತಾ
ಕಣ್ಣಲ್ಲೇ ಹೊರಡಿಸುವ ಪ್ರೇಮದ ನೋಟವೇ?

ತಬ್ಬುವುದೆಂದರೇನು ಸಖೀ?
ನೀಲಾಕಾಶವು
ನೀಲಸಮುದ್ರವ ಕರೆಯುತ್ತಾ
ನಾ ಕೆಳಗಿಳಿದೆ, ನೀ ಮೇಲೆ ಬಾ ಎನ್ನುವ
ಸಂಭ್ರಮದಿ
ತಾಗಿಯೂ, ತಾಗದಿರುವುದೇ
ತಬ್ಬುವುದೆಂದರೇನು ಸಖೀ?!

ಈಶ್ವರ ಭಟ್ ಕೆ (ಕಿರಣ),

ಮೂಲತಃ ಕಾಸರಗೋಡು ಕೇರಳದವರು. ಈಗ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸ ಬರಹ, ತಿರುಗಾಟ.
ಗಡಿನಾಡಿನ ಸೀಮೆಯವರು ಆಗಿದ್ದಕ್ಕೂ ಏನೋ, ಕಿರಣರಿಗೆ ದಕ್ಷಿಣ ಭಾರತದ ಎಲ್ಲ ಭಾಷೆಗಳೂ ಮಾತಾಡಲು ಮತ್ತು ಓದಲು ಬರೆಯಲು ಬರುತ್ತದೆ ಅದೇ ಕಾರಣದಿಂದ ಆ ಭಾಷೆಯ ಕಥೆ, ಕವನ, ಭಜನೆಗಳನ್ನು ತುಂಬಾ ಸುಂದರವಾಗಿ ಕನ್ನಡಕ್ಕೆ ಅನುವಾದಿಸುತ್ತಾರೆ.
ಇವರ ಕವಿತೆಗಳು ಸರಳವಾಗಿ ಹಾಡಿಸಿಕೊಂಡು ಹೋಗುತ್ತವೆ. ರಾಗಕ್ಕೆ, ತಾಳಕ್ಕೆ ಹೊಂದುವ ಸಾಹಿತ್ಯ ಬರೆಯುವ ಇವರು, ಹಾಸ್ಯಬರಹ, ಮತ್ತೆ ಅಷ್ಟೇ ಗಂಭೀರ ವಿಷಯಗಳನ್ನೂ ಬರೆಯಬಲ್ಲರು.

ಮಲ್ಲಿಗೆಯವಳು.

ಹೂವಬುಟ್ಟಿಯ ಹೊತ್ತು ಮಲ್ಲಿಗೇ ಮಲ್ಲಿಗೇ
ಎಂದೆನುತ ಬಂದಳೋ ಬಿಂಕದವಳು
ಮೊಳಕೆ ಎಷ್ಟೆಂದರೆ ಕಣ್ಣಲ್ಲೆ ಗದರಿಸುತ
ಹಣದ ಲೆಕ್ಕಾಚಾರ ಯಾಕೆಂಬಳು!

ಮೊಳಕೆ ಮೂವತ್ತಾಯ್ತೆ? ಮೊನ್ನೆ ಇಷ್ಟಿರಲಿಲ್ಲ
ಪಿಸುಮಾತಿಗಳಿಗಿಷ್ಟು ಕೋಪಗೊಂಡು;
ಮಲ್ಲಿಗೆಯ ಗಿಡಕೆಲ್ಲ ರೋಗ ಬಂದಿದೆ ಒಡೆಯ
ಮೊನ್ನೆಯಷ್ಟಿಲ್ಲ ಹೂ ಎಂದೆಂಬಳು.

ಒಂದು ಮೊಳ ಸಾಕೆನಗೆ, ತೆಗೆದುಕೋ ನಲುವತ್ತು
ಎಂದಾಡಿದರೆ ಮತ್ತೆ ಜನ್ಮ ಹೊರಗೆ;
ಮಾಲೆ ಕಟ್ಟುವ ಸಮಯ ಪರಿಮಳವ ಕುಡಿದೆಹೆನು
ನಾ ಹೇಳುವಷ್ಟನೇ ಕೊಡು ಎಂದಳು.

ಮೊಳ ಕತ್ತರಿಸುವಾಗ ಒಂದಿಷ್ಟು ಹೆಚ್ಚಿಸುತ
ಜೊತೆಗಷ್ಟು ಗುಲಾಬಿ ತೆಗೆದಿಡುತಲಿ;
ಹೂವನ್ನು ಹೆಚ್ಚಿಸುವ ಖುಷಿ ತುಂಬುಮೊಗದಲ್ಲಿ
ನಾಳಿನಾ ಭರವಸೆಯ ನಗು ನಕ್ಕಳು.
ಸೂರ್ಯಾಸ್ತ!

ಅಲ್ಲಿ ಕೆರೆಯಂಚಿನಲಿ, ಮುಳುಗುತಿಹ ನೇಸರಗೆ
ಮರದ ಹಸಿರನು ಕಪ್ಪು ಮಾಡುವಾಸೆ
ಇಲ್ಲಿಯೋ ತಂಗಾಳಿ ಬಿಸಿಯೇರೆ ಹಣಕಿಸುತ
ಹತ್ತಿರಕೆ ಕಳಿಸುವುದು, ಒಲವಿನಾಸೆ!

ಎಷ್ಟು ಮಾತುಗಳಾಡಿ, ಜಗಳದಲಿ ಒಂದಾಗಿ
ಮತ್ತೆ ಮಾತಿನ ದೋಣಿ ತೇಲಿಹೋಗಿ
ಸುತ್ತ ಕತ್ತಲೆ ಹಬ್ಬಿ ಮಾತು ಮೌನಕೆ ದಣಿದು
ಅವಳ ಸಾಮೀಪ್ಯವನೆ ಅಲೆವ ರೋಗಿ

ಹಾರುವುದು ಎದೆಗನಸು ನೂರು ಮೈಲಿಗಳಾಚೆ
ಅಲ್ಲಿಯೂ ನೇಸರನು ಮುಳುಗುತಿಹನು
ಅವಳಿಗೂ ಇದೆ ನೆಪವು, ಇಂತಹದೆ ಬೇಸರವು
ಏನನೋ ಕಾಯುವುದು, ಹೆಳವ ನಾನು.

ಒಂದು ದಿನವಾದರೂ ಸಂಜೆಯಾಗದೆ ಇರಲಿ
ದೂರವಿಹ ವಿರಹಿಗಳ ಎದೆಯ ಸುಡದೆ ಮಂದಮಾರುತ ಹೋಗಿ ಸುಖಿಪವರ ಜೊತೆಗಿರಲಿ
ನನ್ನ ಕಾಡಲುಬೇಡ, ಅವಳು ಸಿಗದೆ




ಗುರುರಾಜ ಹೇರ್ಳೆ

 ಮೂಲತಃ ಉಡುಪಿ ಜಿಲ್ಲೆಯ ಸಾಲಿಗ್ರಾಮ ಎಂಬ ಊರಿನವರು. ಪ್ರಸ್ತುತ  ಬಹರೈನ್ ಎಂಬ ಪುಟ್ಟ ದ್ವೀಪ ರಾಷ್ಟ್ರದಲ್ಲಿ ಉದ್ಯೋಗಿ  ವಾಸ. ಪ್ರಾರಂಭಿಕ ಓದು, ಬೆಳವಣಿಗೆ ಎಲ್ಲ ಉಡುಪಿಯಲ್ಲೇ ಆದರೂ, ಉನ್ನತ ವ್ಯಾಸಂಗ ಮತ್ತು ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿಯೂ ಒಂದಷ್ಟು ಕಾಲ ವಾಸಮಾಡಿದ್ದಾರೆ. 
ಇವರು ಒಳ್ಳೆಯ ಹಾಡುಗಾರರು. ಭಾವಗೀತೆಗಳ ಮೇಲೆ ಒಲವು ಜಾಸ್ತಿ. ಮಕ್ಕಳ ಹಾಡುಗಳು, ಪ್ರೇಮಗೀತೆಗಳನ್ನು ಬರೆಯುತ್ತಾರೆ. ಬರೆದ ಪದ್ಯಕ್ಕೆ ರಾಗ ಹಾಕಿ ಹಾಡುತ್ತಾರೆ ಕೂಡ

ಸಾಗರ ಸನ್ನಿಧಿ

ನೀಲ ಸಾಗರವನ್ನು ನೆಚ್ಚಿ ದೋಣಿಯೊಂದು ಸಾಗಿದೆ,
ಹಾಯಿ ಬಿಚ್ಚಿ ಗಾಳಿ ಬೀಸೋ ದಿಕ್ಕಿನತ್ತೇ ನಡೆದಿದೆ

ನಾಂತದಲ್ಲಿ ಬಾನು ಬುವಿಯು ಸೇರಿದಂತೆ ಭಾಸವು
ತೀರ ಸಿಗದ ದಾರಿಯಲ್ಲಿ ಮುಗಿಯದಿರುವ ಯಾನವು

ಒಮ್ಮೆ ಇಳಿತ ಒಮ್ಮೆ ಭರತ, ಏಳು ಬೀಳಿನಲೆಗಳು
ಒಮ್ಮೆ ನೋವು ಒಮ್ಮೆ ನಲಿವು, ಇದುವೇ ಜೀವನ ರೀತಿಯು

ಕಣ್ಣು ಹಾಯಿಸಿದಷ್ಟು ನೀರು ಕುಡಿಯಲಿನಿತು ಸಾಧ್ಯವೇ ?
ಬಾಳಿನಲ್ಲೂ ನೂರು ಜನರು, ಎಲ್ಲ ಜೊತೆಗೆ ಬರುವರೇ ?

ಅಲ್ಲಿ ಇಲ್ಲಿ ಸಿಗಲು ಬಂಡೆ ದಣಿವನಾರಿಸಬೇಕಿದೆ,
ಹಳೆಯ ತಪ್ಪನೆಲ್ಲ ಮರೆಯದೆ ದಾರಿ ಸಾಗಬೇಕಿದೆ
ಗಮ್ಯ ತಲುಪಬೇಕಿದೆ.
ಬಂದೇ ಬರುತಾವ ಕಾಲ.

ಈ ಸಮಯವೂ ಸರಿದು ಹೋಗಲೇಬೇಕು
ನಮಗೆಂದೇ ಒಂದು ಕಾಲ ಬರಲೇಬೇಕು

ಕರೆದ ಹಾಲದು ಕೆನೆಯ ಕಟ್ಟಲುಬೇಕು
ಹೆಪ್ಪುತಾಗೆ ಗಟ್ಟಿಮೊಸರು ಆಗಲೇಬೇಕು,
ಕಡೆಯಲದನು ಬೆಣ್ಣೆ ಮೇಲೆ ತೇಲಲೇಬೇಕು
ಬಿಸಿತಾಕಲು ಕರಗಿ ತುಪ್ಪವಾಗಲೇಬೇಕು

ಹರುಷ ಹೊನಲಿನ ನದಿಯು ಉಕ್ಕಲೇಬೇಕು
ಮುನಿದ ದೈವವು ಮುಗುಳು ನಗಲುಬೇಕು
ಬಾಡಿದಂತ ಲತೆಯು ಮತ್ತೆ ಚಿಗುರಲುಬೇಕು
ಮುದುಡಿದ ತಾವರೆ ಅರಳುತ ನಲಿಯಲೇಬೇಕು

ಇರುಳಲಿ ಕರಗಿದ ತಿಂಗಳು ಮೂಡಲೇಬೇಕು
ಮುಳುಗಿದ ರವಿ ಮೂಡಣದಿ ಹುಟ್ಟಲೇಬೇಕು
ಧಗೆಯೇರಲು ಮೇಘ ಕರಗಿ ಸುರಿಯಲೇಬೇಕು,
ಸುಖ ಶಾಂತಿ ನೆಮ್ಮದಿಯ ತರಲೇಬೇಕು


ಸೇವೆಯ ಕನಸು-ಸಾರ್ಥಕ ಬದುಕು 

ಇದು ಇಂದಿರೆಯ ಕಥನ… 

ಹುಡುಗ, ಹುಡುಗಿ ಒಬ್ಬರನ್ನೊಬ್ಬರು ನೋಡಿ ಮೆಚ್ಚಿದ್ದಾಯ್ತು , ಹಿರಿಯರು ಮದುವೆಯ ಮಾತುಕತೆ ಶಾಸ್ತ್ರವನ್ನೂ ಪೂರೈಸಿದ್ದೂ ಆಯಿತು, ಇನ್ನೇನು ಬದುಕಿನ ಹೊಸ ಆರಂಭದ ಮುನ್ನುಡಿ ಬರೆಯುವ ದಿನ ಮದುವೆಯ ದಿನ ಬಂದೇ ಬಿಟ್ಟಿತು. ಈ ಒಂದು ದಿನಕ್ಕೆ ಬೇಕಾಗುವ ಪೂರ್ವತಯಾರಿ ಮಾಡಿದವರಿಗೇ ಗೊತ್ತು, ಛತ್ರ ದಿಂದ ಹಿಡಿದು ಅಡುಗೆಯವರ ತನಕ, ವಾಲಗದವರಿಂದ ಹಿಡಿದು ಪುರೋಹಿತರತನಕ ಎಲ್ಲವನ್ನ ನಿಭಾಯಿಸುವಾಗ ಮನಸಲ್ಲಿರುವುದು ಅದೊಂದೇ ಭಾವ ‘’ಮದುವೆ ಒಂದು ಚನ್ನಾಗಿ ಆಗಿ ಬಿಟ್ಟರೆ ಅಷ್ಟೇ ಸಾಕು’’ಅಪ್ಪ ಅಮ್ಮ ಮದುವೆಯ ಇತರ ಗಡಿಬಿಡಿಯಲ್ಲಿ ಮಗ್ನರಾಗಿರುವಾಗ ಮದುಮಗಳ ಕಸಿವಿಸಿ ಕೇಳಬೇಕೆ ? ಮದುವೆಯ ಕೇಂದ್ರ ಬಿಂದುವೇ ಆಕೆ. ಆಕೆ ಚನ್ನಾಗಿ ಕಾಣಬೇಕು , ಇನ್ನು ಶುರು, ಬ್ಯೂಟಿಶಿಯನ್ ಹುಡುಕಾಟ, ಅತ್ತೆ ಮಗಳ ಮದುವೆಗೆ ಬಂದವಳನ್ನ ಕರೆಯೋದೇ? ದೊಡ್ಡಮ್ಮನ ಮಗಳ ಮದುವೆಗೆ ಬಂದಿದ್ದಳಲ್ಲ ಅವಳನ್ನ ಕರೆಯೋದೇ? ಹಾಗೊಮ್ಮೆ ಯಾರನ್ನ ಕರೆಯೋದು ಅನ್ನೋದು ನಿರ್ಧಾರವಾದರೂ ಬಜೆಟ್ ಭೂತ ದಿಗ್ಗನೆ ಎದುರಿಗೆಬಂದು ನಿಲ್ಲುತ್ತದೆ.ಇತ್ತೀಚಿನ ದಿನಗಳಲ್ಲಿ ಮದುಮಗಳ ಸಿಂಗಾರಕ್ಕೆ ಹತ್ತು ಸಾವಿರದಿಂದ  ಒಂದು ಲಕ್ಷದವರೆಗೂ ಚಾರ್ಜ್ ಮಾಡುವ ಬ್ಯೂಟಿಶಿಯನ್ ಇದ್ದಾರೆ. ತರಹೇವಾರಿ ಪ್ಯಾಕೇಜ್ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. 

ಆದರೆ ಕೆಲವೊಂದು ಸಮುದಾಯದ ವಿಶಿಷ್ಟ ಮದುವೆ ಧಿರಿಸು ಮತ್ತು ವಧುವನ್ನು ಸಿಂಗರಿಸುವ ರೀತಿ ಎಲ್ಲ ಬ್ಯೂಟಿಶಿಯನ್ ಗಳಿಗೆ ತಿಳಿದಿರುವುದಿಲ್ಲ, ಅಂಥವರನ್ನೇ ಹುಡುಕಿ ಅವರು ಹೇಳಿದಷ್ಟು ಮೊತ್ತವನ್ನು ಕೊಟ್ಟು ಕರೆಯುವುದು ಒಂದು ಬಗೆಯ ಅನಿವಾರ್ಯತೆಯೂ ಹೌದು. ಮೊದಲೆಲ್ಲ ಈ ಮದುಮಗಳನ್ನು ಸಿಂಗರಿಸುವ ಕೆಲಸ ಅವಳದೇ ಸಂಬಂಧಿಗಳಲ್ಲಿ ಯಾರೋ ಒಬ್ಬರು ಮಾಡಿ ಬಿಡುತ್ತಿದ್ದರು, ಆದರೆ ಈಗ ದಿನಮಾನ ಹಾಗಿಲ್ಲ ಹಣ ಕೊಟ್ಟರೂ ನಿರೀಕ್ಷಿಸಿದ ಸೇವೆ  ಲಭ್ಯವಾಗುವುದು ಅಪರೂಪ.ಇಂಥಹ ವ್ಯಾವಹಾರಿಕ ಪ್ರಪಂಚದಲ್ಲಿ ಪ್ರತಿಫಲಾಪೇಕ್ಷೆ ಇಲ್ಲದೇ ಕಳೆದ ೨೫ ವರುಷಗಳ ಕಾಲ ಮದುವೆ ಹೆಣ್ಣನ್ನು ಸಿಂಗರಿಸಿ ಆಕೆಯ ಆ ವಿಶೇಷ ದಿನಕ್ಕೆ ಮೆರಗನ್ನು ತರುವ ಕಾರ್ಯವನ್ನು ತಮ್ಮ ಜವಾಬ್ದಾರಿಎಂಬಂತೆ ಮಾಡಿ ಎಲೆಮರೆಯಲ್ಲೇ ಮಾಗಿದ ಹಿರಿಯ ಜೀವದ ಪರಿಚಯ ಇಲ್ಲಿದೆ.

ಇವರ ಪರಿಚಯ ನಿಮ್ಮೆಲ್ಲರಿಗೂ ಮಾಡಿಕೊಡುವ ಸದಾವಕಾಶ ನನಗೆ ದೊರೆತದ್ದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ಇವರು ನನ್ನ ಪತಿಯ ದೊಡ್ಡಮ್ಮ ನನ್ನ ದೊಡ್ಡ ಅತ್ತೆ. ನನಗಂತೂ ಇವರೊಂದಿಗೆ ಮಾತಾಡುತ್ತಾ ಕುಳಿತರೆ ನಿಜಕ್ಕೂ ಟೈಂ ಮಶೀನ್ನಲ್ಲಿ ಕುಳಿತು ಅವರು ಹೇಳುವ ಗತಕಾಲದ ಕಥೆಯನ್ನು ನಾನೂ ನೋಡುತ್ತಿದ್ದೇನೋ ಅನ್ನಿಸುವಷ್ಟು ನೈಜವಾಗಿ ಅವರು ಕಥೆ, ಅನುಭವ ರೂಪಿಸುತ್ತಾರೆ.  ನನ್ನ ದೊಡ್ಡತ್ತೆ ಶ್ರೀಮತಿ ಇಂದಿರಾ ನರಸಿಂಹ ಶಾನಭಾಗ್ ಉಡುಪಿ ಜಿಲ್ಹೆಯ ಸಾಲಿಗ್ರಾಮದವರು. ಪ್ರಸ್ತುತ ಕೋಟ ಗ್ರಾಮ ನಿವಾಸಿ.ತಮ್ಮ ಹದಿನಾಲ್ಕನೇ ವಯಸ್ಸಿಗೆ ಹಸೆಮಣೆ ಏರಿದ ಇಂದಿರಾ ಅವರ ಅನುಭವಗಳನ್ನು ಅವರ ಮಾತಲ್ಲೇ ಕೇಳಿ.

‘’ಅದು ೧೯೫೫ ರ ಸಮಯ, ಆಗಿನ ಮದುವೆಗಳು ಈಗಿನಂತಲ್ಲ, ಅದರ ಚಂದವೇ ಬೇರೆ. ಮದುವೆಯೆಂದರೆ ಸುಮ್ಮನೆಯೇ ? ಅದರ ಸುತ್ತ ಇರುವ ತಯಾರಿ ಸಂಭ್ರಮ, ಊಟತಿಂಡಿಯ ತಯಾರಿಗಳು, ಶಾಸ್ತ್ರ ಸಂಪ್ರದಾಯಗಳನ್ನು ಒಳಗೊಂಡು ನಾಲ್ಕೈದು ದಿನದ ಮದುವೆಗಳು, ಬಂದವರಿಗೆ ಬೆಲ್ಲದ ನೀರು ಬಾಳೆಹಣ್ಣು, ವೀಳ್ಯ ಕೊಟ್ಟು ಉಪಚರಿಸಿದರೆ ಅದು ದೊಡ್ಡ ಮರ್ಯಾದೆ ಕೊಟ್ಟಂತೆ. ಬಂದವರು ಕುಳಿತುಕೊಳ್ಳಲು ಈಗಿನಂತೆ ತರಹೇವಾರಿ ಖುರ್ಚಿಗಳಿರಲಿಲ್ಲ ಒಣಹುಲ್ಲು ಹಾಸಿನಮೇಲೆ ಗೋಣಿಚೀಲ ಅದರ ಮೇಲೊಂದು ಪಂಚೆ ಹಾಸಿದರೆ ಅದೇ ಸುಖಾಸನ. ಅದೆಷ್ಟೇ ಅನುಕೂಲಸ್ಥರಾಗಿದ್ದರೂ ಮದುವೆಗೆ ಗಂಜಿ ಊಟ ಹಾಕಿಸಲೇಬೇಕು. ವಧುವರರನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಮೆರವಣಿಗೆಯಲ್ಲಿ ಕರೆ ತಂದರೆ ಅದು ವಿಜೃಂಭಣೆಯ ಮದುವೆ.

ಇದೆಲ್ಲದರ ನಡುವೆ ವಧುವನ್ನು ಸಿಂಗರಿಸುವ ಗಮನ ಯಾರಿಗಿರುತ್ತಿತ್ತು?  ಚಿಕ್ಕ ಪ್ರಾಯದ ಹುಡುಗಿಯರಿಗೆ ಸೀರೆ ಸುತ್ತಿ ನಿಲ್ಲಿಸುವುದೇ ದೊಡ್ಡ ಕೆಲಸವಾಗಿತ್ತೇನೋ! ನನ್ನ ಮದುವೆಯಾದಾಗ ನನಗೆ ಹದಿನಾಲ್ಕು ವರ್ಷ.  ಎಲ್ಲರಿಗೂ  ಗಡಿಬಿಡಿ, ಅವರಲ್ಲೇ ಒಬ್ಬರು ಅದ್ಹೇಗೋ ನನಗೆ ಸೀರೆ ಸುತ್ತಿ, ಮಂಟಪದಲ್ಲಿ ನಿಲ್ಲಿಸಿದ್ದರು. ಆಗ, ಆ ನಂತರ ಅದೆಷ್ಟೋ ಸಲ ಅನ್ನಿಸುತ್ತಿತ್ತು ಮದುವೆ ಎಂಬುದು ಬದುಕಿನ ಅತಿ ಸುಂದರ ಗಳಿಗೆ ಹುಡುಗಿಯೊಬ್ಬಳು  ಮದುಮಗಳರೂಪದಲ್ಲಿ ರೂಪಂತರವಾಗುವ ಆ ಗಳಿಗೆ, ಯಾವುದೇ ತಯಾರಿ ಇಲ್ಲದೆ ಅದ್ಹೇಗೆ  ಮುಗಿಸಿಬಿಡುವುದು? ಅದೇ ಗಳಿಗೆಯಲ್ಲಿ, ಈ ಸುಸಂದರ್ಭವನ್ನು, ಅವಳನ್ನು ಇನ್ನೂ ಚಂದ ಮಾಡಿ ಆ ದಿನವನ್ನು ಇನ್ನೂ ವಿಶೇಷ ಮಾಡಬೇಕು, ನೆನಪಲ್ಲಿರುವಂತೆ ಮಾಡಬೇಕು ಎಂಬ ಕನಸಿನ ಬೀಜ ನನ್ನ ಮನದಲಿ ಮೊಳೆಯಿತು.

ಹದಿನಾಲ್ಕಕ್ಕೆ ಮದುವೆ ಹದಿನೈದು ಮುಗಿಯುವ ಮುನ್ನ ಮಗು ಹುಟ್ಟಿದ ಸಂಭ್ರಮ. ಕೂಡು ಕುಟುಂಬದ ಬಿಡುವಿರದ ದಿನಚರಿಯ ನಡುವೆ ನನ್ನ ಕನಸುಗಳು ಆಗಾಗ ನನ್ನ ಕೈ ಎಳೆದು ಕರೆಯುತ್ತಲೇ ಇದ್ದವು. ಆದರೆ ಯಾರಲ್ಲೂ ಹೇಳುವ ಧೈರ್ಯ ಬರಲಿಲ್ಲ. ಮಕ್ಕಳು ಬೆಳೆದು ದೊಡ್ಡವರಾದ ಮೇಲೆ, ಅದೆಷ್ಟೋ ವರುಷಗಳ ನಂತರ ಪತಿಯೊಂದಿಗೆ ನನ್ನ ಈ ಕನಸನ್ನು ಸಂಕೋಚದಿಂದಲೇ ಹಂಚಿಕೊಂಡಾಗ ಅವರು ಸಂತಸದಿಂದ ಒಪ್ಪಿಕೊಂಡು ಪ್ರೋತ್ಸಾಹಿಸಿದರು ಆದರೆ ಈ ಕೆಲಸವನ್ನು ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಬೇಕು ಅನ್ನುವುದು ಅವರ ಆಶಯವಾಗಿತ್ತು. ಇಷ್ಟರಲ್ಲಿ  ಮಕ್ಕಳ ಮದುವೆಯೂ ಆಗಿತ್ತು, ಮಕ್ಕಳು ಸೊಸೆಯಂದಿರು ಕೂಡ ನನ್ನ ಈ ಬಹುದಿನದ ಆಸೆಗೆ ಒತ್ತಾಸೆ ಕೊಟ್ಟು ಸಹಕರಿಸಿದರು.  

ಹಾಗೆ ಶುರುವಾಯಿತು ನನ್ನ ಈ ನನಸಿನ ಪಯಣ,ತಮ್ಮ ಮದರಾಸಿನಿಂದ ಆಭರಣದ ಸೆಟ್ಗಳನ್ನ ಒಳ್ಳೆಯ ಚವರಿಗಳನ್ನು ತಂದು ಉಡುಗೊರೆಯಾಗಿತ್ತು ನನ್ನ ಕೆಲಸಕ್ಕೆ ಮತ್ತಷ್ಟು ಸಕಾರಾತ್ಮಕ ಬೆಂಬಲ ನೀಡಿದ. ಸಾರಸ್ವತ ಸಮಾಜದ ಮದುವೆಗಳಲ್ಲಿ  ವಧುವಿಗೆ ಕಚ್ಚೆ ಸೀರೆ ಉಡಿಸುವ ಪದ್ಧತಿ ಇದೆ ಜೊತೆಗೆ ಧಾರೆಯ ಸಮಯದಲ್ಲಿ ಸೆರಗಿನ ಬದಲು ಬಿಳಿಯ ಪಟ್ಟಿಯನ್ನು ಬಳಸುತ್ತಾರೆ ಈ ಶೈಲಿಯ ಸೀರೆ ಉಡಿಸುವುದು ಎಲ್ಲರಿಗೂ ಬರುತ್ತಿರಲಿಲ್ಲ . ನನ್ನ ತಣಿಯದ ಕುತೂಹಲ ಆಸಕ್ತಿ ಯಿಂದ ನಾನು ಈ ವಿಧಾನವನ್ನು ಕರಗತ ಮಾಡಿಕೊಂಡಿದ್ದೆ.  ಮಂಗಳೂರು ಮಲ್ಲಿಗೆಯ ಜಡೆ ಹಾಕುವುದು ನನಗೆ ಸಿದ್ದಿಸಿತ್ತು. ಅದರೊಂದಿಗೆ ಸಿಂಗಾರ ಮಾಡಲು, ಬೇಕಾಗುವ ಎಲ್ಲ ಪೂರಕ ತಯಾರಿ, ಕೌಶಲ್ಯವು ಇತ್ತು , ಅದಕ್ಕೆ ನನ್ನಲ್ಲಿ ಆತ್ಮ ವಿಶ್ವಾಸಕ್ಕೆ ಕೊರತೆ ಇರಲಿಲ್ಲ.

ಒಳ್ಳೆಯ ಉದ್ದೇಶದಿಂದ ಶುರುಮಾಡಿದ ಕೆಲಸಕ್ಕೆ ದೈವ ಬಲ ಸಿಗದೇ ಇರುತ್ತದೆಯ.? ದಿನ ಕಳೆದಂತೆ ಸಿಂಗರಿಸುವ ಕೈಂಕರ್ಯಕ್ಕೆ ಕರೆಯುವವರ ಸಂಖ್ಯೆ ಹೆಚ್ಚಿತು. ನನ್ನ  ಮನೆಯ ಹೆಣ್ಣು ಮಕ್ಕಳ ಮದುವೆಗಳಿಂದ ಶುರುವಾದ ಈ ಪಯಣ ಕೆಲವೊಮ್ಮೆ ಒಂದೇ ದಿನ ಎರಡೆರಡು ಮದುವೆಗೆ ನಿಮಂತ್ರಣ ಬರುವ ಮಟ್ಟಿಗೆ ನಡೆದು ಬಂತು. ಹಾಗಾದಾಗ ಇಲ್ಲ ಅನ್ನಲು ಮನಸು ಬಾರದೇ ಮಗಳು, ಸೊಸೆ ಇಬ್ಬರಿಗೂ ತರಬೇತಿ ಕೊಟ್ಟು ಅವರನ್ನು ಕಳಿಸುತ್ತಿದ್ದೆ.

ವರುಷ ಪೂರ್ತಿ ಮನೆಯಲ್ಲಿ ಒಂದಿಲ್ಲೊಂದು ಚವಲ, ಉಪನಯನ, ಮದುವೆ ಇದ್ದೇ ಇರುತ್ತಿತ್ತು ಆಗಂತೂ ನನಗೆ ಇನ್ನೂ ಖುಷಿ. ಕೆಲವೊಮ್ಮೆ ದೂರದೂರಿನಲ್ಲಿ ಮದುವೆಗಳು ಇರುತ್ತಿದ್ದವು. ಮೈಸೂರ, ಗೋವ, ಮುಂಬೈ ಬೆಂಗಳೂರು ಎಲ್ಲ ಕಡೆ ಮನೆಯ ಜವಾಬ್ದಾರಿಯ ನಡುವೆಯೂ ಆ ಮದುವೆಗೆ ಹೋಗಿ ನನ್ನ ಪಾಲಿಗೆ ಬಂದ ಸೇವಾಭಾಗ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೆ . 

ಆಸಕ್ತಿ ಇರುವ ಹಲವರಿಗೆ ನಾನು ತರಬೇತಿ ಕೊಟ್ಟಿದ್ದೇನೆ. ಬದಲಾಗುತ್ತಿರುವ ಕಾಲಕ್ಕನುಗುಣವಾಗಿ ಹೊಸ ವಿಧಾನಗಳನ್ನು ಕಲಿಯಲು ನಾನು ಸದಾ ಉತ್ಸಾಹ ತೋರುತ್ತಿದ್ದೆ, ಕಲಿಕೆಗೆ ವಯಸ್ಸಿನ ಮಿತಿ ಇಲ್ಲವಲ್ಲ!! ಈ ಇಪ್ಪತೈದು ವರುಷಗಳ (೧೯೮೩-೨೦೦೯)ಅನುಭವದಲ್ಲಿ  ನನ್ನ ಸಂಗ್ರಹದಿಂದ ಕಳೆದುಹೋದ ವಸ್ತುಗಳ ಪಟ್ಟಿ ದೊಡ್ಡದಿದೇ ಆದರೆ ಪಡೆದ ಆತ್ಮ ಸಂತೃಪ್ತಿಯಮುಂದೆ ಅದು ತೃಣ ಸಮಾನ.ನಮ್ಮಲ್ಲಿ ಹಿರಿಯರು ಯಾವಾಗಲು ಹೇಳುತ್ತಿದ್ದರು ‘’ವಧುವರರು ಸಾಕ್ಷಾತ್ ಲಕ್ಷ್ಮಿ ನಾರಾಯಣನ ರೂಪ’’ ಎಂದು ಅದನ್ನೇ ನಾನು ಕೂಡ  ನಂಬುತ್ತೇನೆ ಶ್ರದ್ಧೆ ನಿಷ್ಠೆಯಿಂದ ನನ್ನ ಈ ಸೇವೆಯನ್ನು ಭಗವಂತನ ಕೆಲಸವೆಂದೇ ಮಾಡಿದ್ದೇನೆ ಅದಕ್ಕಿಂತ ಹೆಚ್ಚು ಏನು ಬೇಕು? ಹೀಗೆಂದು ಕೇಳುವ ಇಂದಿರಾ ಅವರಿಗೆ ೮೨ರ ಹರೆಯ. ಈಗಲೂ ಅವರು ಉತ್ಸಾಹದ ಬುಗ್ಗೆ , ಕಾದಂಬರಿಗಳನ್ನು ಓದುವುದು ಅವರಿಗೆ ಅಚ್ಚು ಮೆಚ್ಚು. ತಾವು ಓದಿದ್ದನ್ನ ಕಣ್ಣಿಗೆ ಕಟ್ಟುವಂತೆ ಇತರರಿಗೆ ಹೇಳುವ ಅಪ್ರತಿಮ ಅಭಿವ್ಯಕ್ತಿ  ಅವರಲ್ಲಿದೆ. ಕಲಾತ್ಮಕವಾಗಿ ಹೂಮಾಲೆ ಕಟ್ಟುವುದು, ಸಾಂಪ್ರದಾಯಿಕ ಅಡುಗೆ ಮಾಡುವುದು ಇವರ ಹವ್ಯಾಸ. ಅದಲ್ಲದೆ ಹಲವು ಮರೆತೇ ಹೋದವು ಅನ್ನುವ ಕೊಂಕಣಿ ಜನಪದ ಕಥನ ಗೀತೆಗಳು ಇವರ ಸ್ಮೃತಿಯಲ್ಲಿವೆ.  ತಾವು ಮಾಡುವ ಪ್ರತಿಯೊಂದು ಕೆಲಸವನ್ನು ಅನುಭವಿಸಿ ಪ್ರೀತಿಯಿಂದ ಮಾಡುವುದು ಇವರ ಹೆಗ್ಗಳಿಕೆ.

ಇಂಥಹ ಅಪರೂಪದ ಜೀವನ್ಮುಖಿ ನನ್ನ ದೊಡ್ಡತ್ತೆ  ಅನ್ನುವುದೇ ನನ್ನ ಪಾಲಿನ ಹೆಮ್ಮೆ ಖುಷಿ. 

ಲೇಖನ ಮತ್ತು ಚಿತ್ರಗಳು ; ಅಮಿತಾ ರವಿಕಿರಣ್