“ನೆಟ್ಟಿ”ಗೇರಿದ ಪಠ್ಯ @ ನೆತ್ತಿಗೇರುವುದೇ? ಅಂತರ್ಜಾಲದಲ್ಲಿ ಕನ್ನಡ ಮಾಧ್ಯಮ ಶಾಲಾ ಪಠ್ಯಗಳು – ಸುದರ್ಶನ ಗುರುರಾಜರಾವ್ ಲೇಖನ

ನಾವು ಶಾಲೆಯಲ್ಲಿ ಓದುತ್ತಿರುವಾಗ ಒಂದು ತರಗತಿಯಿಂದ  ಉತ್ತೀರ್ಣರಾಗಿ ಇನ್ನೊಂದು ತರಗತಿಗೆ ಹೋಗುವುದರ ಜೊತೆಗೆ ಮುಂದಿನ ತರಗತಿಯ ಪಠ್ಯ ಪುಸ್ತಕಗಳ ಬೇಟೆಯೂ ಶುರುವಾಗುತ್ತಿತ್ತು. ಏಪ್ರಿಲ್ ಹತ್ತನೇ ತಾರೀಖು ನಮ್ಮ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಿ ಅಧಿಕೃತವಾಗಿ ಪಾಸಾಗಿದ್ದೇವೆಂದು ಘೋಷಣೆಯಾಗುತ್ತಿದ್ದಂತೆ ನಮಗಿಂತ  ಒಂದು ವರ್ಷ ಮುಂದಿನ ವಿದ್ಯಾರ್ಥಿಗಳೊಂದಿಗೆ ನಮ್ಮ ಮಾತುಕತೆ ಶಾಲಾ ಆವರಣದಲ್ಲೇ ಶುರುವಾಗುತ್ತಿತ್ತು. .

ಮುಂಚಿನ ಪರಿಚಯದ ಆಧಾರದ ಮೇಲೆ, ಪುಸ್ತಕಗಳನ್ನು ಜೋಪಾನವಾಗಿ ಬೈಂಡು  ಹಾಕಿ ಕಾಪಾಡಿಕೊಂಡಿದ್ದನೆಯೇ ಇಲ್ಲವೇ ಎಂಬ ಗಾಳಿಸುದ್ದಿಯ ಮೇಲೆ ಯಾರೊಂದಿಗೆ ವ್ಯವಹರಿಸುವುದೆಂಬ ಕಾರ್ಯಕಾರಿ ನಿರ್ಣಯ ಕೈಗೊಳ್ಳಲಾಗುತ್ತಿತ್ತು.  ಇನ್ನು ಮುಂದಿನ ಕ್ಲಾಸಿನ ವಿದ್ಯಾರ್ಥಿ ಹುಡುಗಿಯಾಗಿದ್ದರೆ ಅವರನ್ನು ನೇರವಾಗಿ ಮಾತುಕತೆಗೆ ಎಳೆಯಲು ಆಗದ ನಾವು ಅವರುಗಳ ಅಣ್ಣಂದಿರ ಮೂಲಕ ವ್ಯವಹಾರ ಕುದುರಿಸಿಕೊಳುತ್ತಿದ್ದೆವು.  ಪುಸ್ತಕ ಬೇಟೆಯ ದಂಡಿಗೆ img-5ಕೊರತೆಯಿಲ್ಲದಿದ್ದರೂ ಗಿರಾಕಿಗಳಿಗೂ ಒಂದು ಸ್ಥಾನ ಮಾನ ಇರುತ್ತಿತ್ತು. ಮಾತುಕತೆಗೆ ಮುಂಚೆಯೇ ಹಣ ತೋರಿಸಬಲ್ಲ , ಪುಸ್ತಕಕ್ಕೆ ತಕ್ಷಣ ಹಣ ಪಾವತಿಸಬಲ್ಲ, ಒಂದೆರೆಡು ದಿನಗಳಲ್ಲಿ ಕೊಡಬಲ್ಲ, ಒಂದೆರೆಡು ಕಂತುಗಳಲ್ಲಿ ಕೊಡಬಲ್ಲ, ಪುಸ್ತಕ ಕೊಂಡುಹೋಗಿ ಹಣ ಕೊಡಲಾಗದೆ ಪುನಃ ಜಪ್ತಿ ಮಾಡಿಸಿಕೊಂಡ ಇತಿಹಾಸವುಳ್ಳ ಇತ್ಯಾದಿ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಈ ಕೊಡು ಕೊಳ್ಳುವ ವ್ಯವಹಾರ ನಡೆಯುತ್ತಿತ್ತು. ಶಾಲೆಗಳು ಪ್ರಾರಂಭವಾಗಿ ೩-೪ ತಿಂಗಳು ಕಳೆದರೂ ಕೆಲವೊಮ್ಮೆ ಕೆಲವು ವಿಷಯಗಳ ಪಠ್ಯ  ಪುಸ್ತಕಗಳು ಸಿಗುತ್ತಲೇ ಇರಲಿಲ್ಲ !! ಬೆಂಗಳೂರಿನಿಂದ ಹರದಾರಿ ದೂರದ ಕೊಂಪೆಗಳಲ್ಲಿದ್ದ ನಮಗೆ ಎಷ್ಟೋ ಬಾರಿ ಪುಸ್ತಕಗಳು ಅಂಗಡಿಗಳಿಗೆ ಬಂದು ಖರ್ಚಾಗಿ ಹೋಗುತ್ತಿದ್ದುದೂ  ತಿಳಿಯುತ್ತಿರಲಿಲ್ಲ. ಈಗಿನಂತೆ ಜೆರಾಕ್ಸ್ ಸೌಲಭ್ಯವೂ ಸುಲಭವೂ, ಅಗ್ಗವೂ ಆಗಿ ದೊರಯದ ಕಾರಣ ಈ ಬಳಸಲ್ಪಟ್ಟ ಪುಸ್ತಕಗಳಿಗೆ ಎಲ್ಲಿಲ್ಲದ ಬೇಡಿಕೆ ಇತ್ತು. ಅಷ್ಟಕ್ಕೂ ಉತ್ತಮವಾಗಿ ಕಾಯ್ದುಕೊಂಡ ಅವೇ ಪುಸ್ತಕಗಳು ಕಡಿಮೆ ಬೆಲೆಗೆ ಸಿಕ್ಕಿ ಒಂದೆರೆಡು ರೂಪಾಯಿ ಉಳಿದರೆ ಅದೂ  ಸಂತೋಷಕರವೇ ! ಐದು ಹತ್ತು ಪೈಸೆಗಳಿಗೂ ತತ್ವಾರ ಆಗಿದ್ದ ಅ ದಿನಗಳಲ್ಲಿ Tesco  ದ ಧ್ಯೇಯವಾಕ್ಯವಾದ every little helps ಎಂಬುದು ನಮ್ಮ ಅಳಿವು ಉಳಿವಿನ ವೇದವಾಕ್ಯವಾಗಿತ್ತೆನ್ನಿ. ಇಷ್ಟಾಗಿಯೂ ಆರು- ಏಳನೇ ತರಗತಿಯಲ್ಲಿ ಸಮಾಜ ಮತ್ತು ಕನ್ನಡದ ಪಠ್ಯಗಳು ಸಿಗದೇ ೨೦೦ ಹಾಳೆಯ ಲೇಖಕ್ ಪುಸ್ತಕವೊಂದರಲ್ಲಿ ಅದರ ನಕಲು ಮಾಡಿಕೊಂಡಿದ್ದೆ.

ಇಂತಿಪ್ಪ, ಈ ಸೀನಿಯರ್ ವಿದ್ಯಾರ್ಥಿಗಳೊಂದಿಗಿನ ನಮ್ಮ ಈ  ಚೌಕಾಸಿಯೊಂದಿಗೆ  ಬೇಸಿಗೆ ರಜೆಯ ಆಚರಣೆಗೆ ಶ್ರೀಕಾರ ಹಾಡಲಾಗುತ್ತಿತ್ತು.

ನನ್ನ ಮುಂದಿನ ತರಗತಿಯಲ್ಲಿದ್ದ ವಿರುಪಿ, ಪಾಂಡಿ, ಸತೀಶ, ಹೋಟ್ಲು ಮಂಜ, ಉಜಿನಪ್ಪ, ಗೋವಿಂದ ,ಬಾಬು, ದೇವರಾಜಪ್ಪ, ತಿಪ್ಪೇಸ್ವಾಮಿಯೇ ಮೊದಲಾದವರ ಬಳಿ ಮಾತಾಡಿ ಅವರ ಮನೆಗಳಿಗೆ ಎಡತಾಕಿ, ಅಳೆದು ಸುರಿದು, ಹಗ್ಗ ಜಗ್ಗಾಟ ನಡೆಸಿ, ಅವರುಗಳಿಂದ ‘ ಕೊಡುವುದಿಲ್ಲ ಹೋಗೆಂ’ಬ ಧಮಕಿಗಳಿಗೆ ಒಳಗಾಗಿ ಕೆಲವೊಮ್ಮೆ ಗೆದ್ದು, ಕೆಲವೊಮ್ಮೆ ಸೋತು,ಅಷ್ಟಿಷ್ಟು  ಕೆಲವೊಮ್ಮೆ ಮೋಸಹೋಗಿ, ಮತ್ತೆ ಕೆಲವೊಮ್ಮೆ ಮರುಳು ಮಾಡಿ, ಬೇರೆ ಯಾವುದೋ ಆಸೆ ತೋರಿಸಿ ವ್ಯವಹಾರ ಮುಗಿಸಿ ಎಲ್ಲ ಪುಸ್ತಕಗಳೊಂದಿಗೆ ಮನೆ ಸೇರಿದರೆ ಅಲ್ಲಿಗೆ ಪಾಂಡವ ಅಶ್ವಮೇಧವೂ ನಮ್ಮ ವಿಜಯೋತ್ಸವಕ್ಕೆ ಸಮವಿರುತ್ತಿರಲಿಲ್ಲ. ವರುಷ ಪೂರ್ತಿ ನಾನು ಕೂಡಿಟ್ಟುಕೊಂಡ ಹಣಕ್ಕೆ ವರುಷದ ಕೊನೆಗೆ ನಮ್ಮ ತಾಯಿ ಕೊಡುತ್ತಿದ್ದ ೫ ರೂಪಾಯಿ ಸೇರಿ ಸ್ವಲ್ಪ ಬಂಡವಾಳ ಇಟ್ಟುಕೊಂಡು ಹೋಗುತ್ತಿದ್ದ ನನಗೆ ಸ್ವಲ್ಪ ಆದ್ಯತೆ ಇತ್ತು ಎಂದೇ ಹೇಳಬೇಕು. ಮಾರುವವರಿಗೂ ಹಣ ಸಿಕ್ಕರೆ ಅವರ ಪುಸ್ತಕಗಳಿಗೂ ದಾರಿಯಾದೀತೆಂಬ ಯೋಚನೆ ಅವರಿಗೆ!

ನಗರಗಳಲ್ಲಿದ್ದ ನಮ್ಮ ಕೆಲವು ನೆಂಟರ ಮಕ್ಕಳಿಗೆ ಈ ಗೋಜಲು-ಪರಿಪಾಟಲುಗಳು ಇರಲಿಲ್ಲ. ಖಾಸಗೀ ಶಾಲೆಯಾದ ಕಾರಣ ಅವರಿಗೆ ಹೇಗೋ ಪುಸ್ತಕಗಳು ಹೊಂದಿಕೆಯಾಗಿಬಿಡುತ್ತಿದ್ದವು. ಆಂಗ್ಲಮಾಧ್ಯಮವೂ ಸಹ! ನೋಟು ಪುಸ್ತಕಗಳು ಕೂಡಾ ಅವರಿಗೆ ಸಲೀಸಾಗಿ ಸಿಗುತ್ತಿದ್ದವು. ನಾವು ಅವರುಗಳ ಮನೆಗೆ ಹೋದಾಗ ಅವರ ಹಿಂದಿನ ಕ್ಲಾಸಿನ ಪುಸ್ತಕಗಳನ್ನು ಪಡೆದು ಬರೆಯದ ಹಾಳೆಗಳನ್ನು ಜೋಪಾನವಾಗಿ ಹರಿದು ಸೇರಿಸಿ ದಪ್ಪ ದಾರ ದಬ್ಬಳಗಳಿಂದ ಅವುಗಳನ್ನು ಹೊಲಿದು ತರುತ್ತಿದ್ದೆವು. ಅವರೂ ಅವುಗಳನ್ನು ಕೊಡುವಷ್ಟು ಧಾರಾಳಿಗಳಾಗಿದ್ದರು. ಈಗ ಕಾಲ ಬದಲಾಗಿದೆ. ಮೊದಲ ಹಂತವೆಂಬಂತೆ ಎಲ್ಲ ಸರಕಾರೀ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಕಾಲ ಕಾಲಕ್ಕೆ ತಲುಪದ ವಿಳಂಬ ನೀತಿ ಇಂದಿಗೂ ಒಂದು ಜಾಡ್ಯವೇ ಆದರೂ ಪುಸ್ತಕ ಸಿಗುವುದರ ಭರವಸೆಯಂತೂ ಇದೆ. ಆದರೆ ಹೊರಗಡೆಯ ಮಾರಾಟವನ್ನು ನಿಷೇಧಿಸಿರುವ ಕಾರಣ ಕಾಸುಕೊಟ್ಟರೂ ನಿಮಗೆ ಪುಸ್ತಕಗಳು ಸಿಗಲಾರವು.

ಎರಡನೆ ಹಂತದಲ್ಲಿ ಈ ಪಠ್ಯಗಳನ್ನು ಅಂತರ್ಜಾಲದಲ್ಲಿ ಏರಿಸುತ್ತೇವೆಂದು ಕಳೆದ ಐದು ವರುಷಗಳಲ್ಲಿ ಹೇಳುತ್ತಾ ಮೂಗಿಗೆ ತುಪ್ಪ ಹಚ್ಚಿ ಕೂಡಿಸಿದ್ದ ಕರ್ನಾಟಕ  ಘನವೆತ್ತ ಸರಕಾರ ಕೊನೆಗೂ ಆ ಕೆಲಸ ಮಾಡಿದೆ. ಕರ್ನಾಟಕದಲ್ಲಿ ಕಲಿಸಲ್ಪಡುವ ಎಲ್ಲ ಭಾಷಾ ಮಾಧ್ಯಮಗಳ ಎಲ್ಲ ವಿಷಯಗಳ ಪಠ್ಯ ಪುಸ್ತಕಗಳನ್ನು “ನೆಟ್ಟಿ” ಗೆ ಏರಿಸಿದೆ.  ಕನ್ನಡ ಮಾಧ್ಯಮದ ಪುಸ್ತಕಗಳು ಈಗ ಸಮಗ್ರವಾಗಿ ಒಂದು ಕಡೆ ಲಭ್ಯವಾಗಿವೆ. ಕನ್ನಡದ ಮಟ್ಟಿಗೆ ಇದೊಂದು ಸಕಾರಾತ್ಮಕವಾದ, ಧನಾತ್ಮಕವಾದ ಬೆಳವಣಿಗೆ. ಹಾಗೆಂದು ಕನ್ನಡ ಪಠ್ಯಗಳನ್ನು ಅಂತರ್ಜಾಲದಲ್ಲಿ ದೊರೆಯುವಂತೆ ಮಾಡುವ ಕೆಲವು ಪ್ರಯತ್ನಗಳು ಹಿಂದೆ ನಡೆದಿದ್ದವು. ಅಮೇರಿಕಾದ, ಕನ್ನಡಕ್ಕೆ ಮಿಡಿಯುವ ಕೆಲವು ಜೀವಗಳು ಸ್ಕ್ಯಾನ್ ಮಾಡಿದ ಕೆಲವು ಪುಸ್ತಕಗಳ,  ಬಿಡಿ ಹಾಳೆಗಳನ್ನು ಒಂದೆಡೆ ಸೇರಿಸಿ ಆಸಕ್ತರಿಗೆ ಕೊಡಮಾಡುವ ಕೆಲಸ ಮಾಡಿದ್ದರು. ಸರಳತೆಯ, ಸಮಗ್ರತೆಯ ನಿಟ್ಟಿನಿಂದ ಇವು ಹೆಚ್ಚು ಪ್ರಯೋಜನಕಾರಿಯಾಗುವಲ್ಲಿ ಸೋತವು. ನಾನು ಸಹಾ ಭಾರತದಲ್ಲಿ ಪುಸ್ತಕಗಳಿಗಾಗಿ ಹಲವಾರು ಬಾರಿ ಪ್ರಯತ್ನಿಸಿ ಸೋತಿದ್ದೆ . ಇನ್ನು ಆ ಚಿಂತೆ ಇಲ್ಲ!

Capture+_2016-06-04-21-44-33ತಮಿಳುನಾಡು ಸರಕಾರದ ಶಿಕ್ಷಣ ಪ್ರಾಧಿಕಾರವು ಕನ್ನಡ ಪುಸ್ತಕಗಳನ್ನುಅಂತರ್ಜಾಲದಲ್ಲಿ  ಮೊದಲು ಬಿಡುಗಡೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾದ  ಸಂಸ್ಥೆ. ಬಣ್ಣದ ಚಿತ್ರ, ಸರಳತೆ, ವಿಷಯ ವಿಸ್ತಾರ, ನಿರೂಪಣೆಯಿಂದ ಗುಣಮಟ್ಟದ ಪಠ್ಯಗಳನ್ನು ಕೊಡಮಾಡಿದೆ. ಒಂದನೇ ತರಗತಿಯಿಂದ ೧೨ ನೇ ತರಗತಿಯವರೆಗೆ ಎಲ್ಲಾ ವಿಷಯಗಳ ಪುಸ್ತಕಗಳು ಕನ್ನಡ, ತೆಲುಗು, ಮಲೆಯಾಳಂ ಹಾಗೂ ತಮಿಳು ಮಾಧ್ಯಮದಲ್ಲಿ ದೊರೆಯುತ್ತವೆ. ಮೊದಲು ವರ್ಷದ ಪೂರ್ಣ ಪಠ್ಯ ಲಭ್ಯವಿತ್ತು . ಈಗ ಸೆಮಿಸ್ಟರ್ ಪದ್ಧತಿಯಲ್ಲಿ ಎರೆದು ಮೂರು ಭಾಗಗಳಾಗಿ ವಿಂಗಡಿಸಿ ವಿಭಜಿಸಿದ ಕಾರಣ ಸ್ವಲ್ಪ ಅವ್ಯವಸ್ಥೆ ಅನಿಸುತ್ತದೆ.  ಮೊದಲು ಕನ್ನಡ ಭಾಷಾ ಭಾರತಿ ಪಠ್ಯ ವೂ ಇತ್ತು. ಈಗ ಭಾಷಾ ಭಾರತಿ ಆರನೆ ತರಗತಿಯಿಂದ ಮಾತ್ರ ಲಭ್ಯ. ಇದೂ ಸಹಾ ಒಂದು ಕೊರತೆ! ಆದಾಗ್ಯೂ ಇದೊಂದು ಬಲು ಉಪಯೋಗಿಯಾದ ಪ್ರಯತ್ನ. ನನ್ನ ಮಕ್ಕಳಿಗೆ ಕನ್ನಡವನ್ನು ಇದರ ಸಹಾಯದಿಂದ ಕಲಿಸುತ್ತಿದ್ದೇನೆ. ೧೨ನೇ ತರಗತಿಯ ಕನ್ನಡ ಪುಸ್ತಕದಲ್ಲಿ ಪೂರ್ಣಚಂದ್ರ ತೇಜಸ್ವಿಯವರ “ಕೃಷ್ಣೇಗೌಡನ ಆನೆ” ಕಥೆ ಇದೆ. ಧರೆಗಿಳಿಸಿಕೊಂಡು ಓದಿ.

NCERT ಅವರ ಜಾಲತಾಣದಲ್ಲಿಯೂ ಪಠ್ಯಗಳಿವೆ. ಹಿಂದೀ, ಇಂಗ್ಲೀಶು, ಉರ್ದು ಮಾಧ್ಯಮದ ಈ ಪಠ್ಯಗಳು ಕನ್ನಡ ಕಲಿಕೆಗೆ ಸಹಕಾರಿಯಾಗಿಲ್ಲ.  ೬-೮ ವರುಷಗಳಿಂದ ಇದು ಚಾಲ್ತಿಯಲ್ಲಿದ್ದರೂ ಪ್ರಾಂತೀಯ ಭಾಷೆಗಳನ್ನು ಕಡೆಗಣಿಸಲಾಗಿತ್ತು.  ಭಾರತದ ಅಧಿಕೃತ ಭಾಷೆಗಳಲ್ಲಿ ಕಲಿಕಾಸಾಮಗ್ರಿಗಳು ದೊರೆಯುವಂತೆ ಮಾಡಲು ಕೇಂದ್ರಸರಕಾರದ “ಭಾರತವಾಣಿ “ ಎಂಬ ಮಹತ್ವಾಕಾಂಕ್ಷಿ  ಯೋಜನೆಯ ಸಹಯೋಗದಲ್ಲಿ ಕನ್ನಡ ಪುಸ್ತಕಗಳು ಕರ್ನಾಟಕದಿಂದ ಕಡೆಗೂ  ಬೆಳಕು ಕಂಡಿವೆ ಹಾಗೂ ಇದನ್ನು ಬಹಳ ಅಚ್ಚುಕಟ್ಟಾಗಿ ಮಾಡಲಾಗಿದೆ. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಎಲ್ಲ ವಿಷಯದ ಪುಸ್ತಕಗಳು ಇವೆ. ಕನ್ನಡಿಗರಾದ ಬೇಳೂರು ಸುದರ್ಶನ ಅವರ ತಂಡವು ಶ್ರದ್ಧೆ ಪ್ರೀತಿಗಳಿಂದ ನಮಗೆ ಕೊಡಮಾಡಿದ್ದಾರೆ.

bharatavaniCapture+_2016-06-04-21-46-56ಇಲ್ಲಿ ಎಲ್ಲ ಪುಸ್ತಕಗಳನ್ನು PDF ಆವೃತ್ತಿಯಲ್ಲಿ ನೋಡಬಹುದು , electronic ಸ್ಲೇಟುಗಳಲ್ಲಿ, ಮಡಿಲಲ್ಲಿ ಮಗುವಾಗಿ ಮಡಿಸಿಕೊಂಡು ಮಲಗುವ, ಬಿಚ್ಚಿಕೊಂಡು ಆಡುವ ಗಣಕ ಯಂತ್ರಗಳಲ್ಲಿ ಧರೆಗಿಳೀಸಿಕೊಂಡು ಶೇಖರಿಸಿಡಬಹುದು, ಓದಬಹುದು, ಕಲಿಯಬಹುದು, ಕಲಿಸಬಹುದು!!

ಕರ್ನಾಟಕದ ಈ ಪುಸ್ತಕಗಳನ್ನು ಕರ್ನಾಟಕದ “ಕಣಜ” ದಲ್ಲೂ ಇವುಗಳನ್ನು ಪಡೆಯಬಹುದಾಗಿದೆ. ಆದರೆ, not for  copy  ಎಂಬ ನೀರಿನ ಕಲೆ ಕಡುಕಪ್ಪಾಗಿ ಕಾಣುವ ಕಾರಣದಿಂದ ಕಿರಿಕಿರಿ ಯಾಗುತ್ತದೆ. ಭಾರತವಾಣಿಯಲ್ಲಿ ಈ ತೊಂದರೆಯಿಲ್ಲ.  ಭಾರತವಾಣಿ ಎಂಬ ದೂರದೃಷ್ಟಿಪೂರ್ಣ, ಬಹುತ್ವಾಕಾಂಕ್ಷಿ  ಯೋಜನೆಯ ಒಳಹೊಕ್ಕು ಒಮ್ಮೆ ನೋದಿಬನ್ನಿ. Capture+_2016-06-04-21-48-03ಇಡೀ ಭಾರತದ ಭಾಷೆಗಳಲ್ಲಿರುವ ಜ್ಞಾನ ಗಂಗೆಯನ್ನು ಒಂದೆಡೆ ಸೇರಿಸುವ ಸಾಗರದೋಪಾದಿ ಯೋಜನೆ. ನಿಘಂಟು, ಪಠ್ಯಗಳು, Capture+1_2016-06-04-21-48-25ಜೊತೆಗೆ ಕನ್ನಡದ ವಿಶ್ವಕೋಶ ಸಹಾ ಇಲ್ಲಿ ಲಭ್ಯ! ಮಹಾರಾಷ್ಟ್ರ ಸರಕಾರದ ಕನ್ನಡದ ಪಠ್ಯಗಳು ಸಹ ಇಲ್ಲಿ ಲಭ್ಯ  ಇವೆ. ಎಲ್ಲ ತರಗತಿಯ ಎಲ್ಲ ಪುಸ್ತಕಗಳು ಇನ್ನೂ ಇಲ್ಲ. ಆದರೆ ಗುಣಮಟ್ಟದ ದೃಷ್ಟಿಯಿಂದ ತಮಿಳುನಾಡಿನ ಪುಸ್ತಕಗಳಿಗಿಂತ ಉತ್ತಮವಾದುವು. ಭಾರತವಾಣಿ ಬೆಳೆಯುತ್ತಾ ಹೋದಂತೆ ನಮ್ಮ ಆಯ್ಕೆಯ ಸಾಧ್ಯತೆಗಳು ವಿಸ್ತಾರವಾಗುತ್ತವೆ. ಬಹು ಮಾಧ್ಯಮ ಜ್ಞಾನವಾಹಿನಿಯೂ ಅಭಿವ್ರುದ್ಧಿಗೊಳ್ಳುತ್ತಿದೆ ಎಂದು ಕೇಳಿ ಬಲ್ಲೆ. ಕನ್ನಡದ ಉಳಿವು ಬೆಳವಣಿಗೆಗೆ ಆದ ಸಹಾ ಸಹಾಯಕವಾಗಬಹುದು; ಕಾಯಬೇಕು.

ಕನ್ನಡದ ಮೊದಲ ರಾಷ್ಟ್ರಕವಿ ಹಿರಿಮೆಯ ಶ್ರೀ ಗೋವಿಂದಪೈ ಅವರ  ‘ ತಾಯೆ ಬಾರಾ ಮೊಗವ ತೋರ ಕನ್ನಡಿಗರ ಮಾತೆಯೇ’ ಎಂಬ ಹಾಡಿನಲ್ಲಿ

 

ಎನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ

ಮೃಗದ  ಸೇಡು  ನಮ್ಮ ಪಾಡು ಪರರ ನುಡಿಗೆ ಮಿಡುಕುವ

ಕನ್ನಡ ಕಸ್ತೂರಿಯನ್ನ ಹೊಸತು ಸಿರಿಂ ತೀಡದೆನ್ನ

ಸುರಭಿ ಎಲ್ಲಿ? ನಿನದನ್ನ ನವಶಕ್ತಿಯನೆಬ್ಬಿಸು

ಹೊಸ ಸುಗಂಧದೊಸಗೆಯಿಂದ  ಜಗದಿ ಹೆಸರ ಹಬ್ಬಿಸು

ಎನ್ನುವ  ಮಾತುಗಳಿವೆ.

ಸರಳ, ಸುಂದರ, ಸಶಕ್ತವಾದ ಕನ್ನಡ ಭಾಷೆ ತನ್ನ ಜನರಿಂದಲೇ ಅವಗಣನೆಗೆ ಒಳಗಾಗಿ ಅಳಿವು ಉಳಿವಿನ ಹೋರಾಟದಲ್ಲಿ ನಲುಗುತ್ತಿರುವಾಗ ಇದೊಂದು ಆಶಾದಾಯಕವಾದ  ಬೆಳವಣಿಗೆ. ತಾಂತ್ರಿಕ ಯುಗದ ಪಾಶ್ಚಾತ್ಯೀಕರಣದ ಹೊಡೆತಕ್ಕೆ ಸಿಕ್ಕಿ ಬಳಲಿರುವ ಭಾಷೆಗೆ ಇದು ಒಂದು ತಾತ್ಕಾಲಿಕವಾದ ಶಕ್ತಿ ನೀಡುವ ಸೂಜಿಮದ್ದು.

ಉಪಸಂಹಾರ:

Capture+_2016-06-04-21-43-29ಇಲ್ಲಿಗೆ ಎರಡು ವರುಷಗಳ ಹಿಂದೆ ನನ್ನ ಪ್ರೌಢಶಾಲಾ ಶಿಕ್ಷಕರೊಬ್ಬರ ಭೇಟಿ ಮಾಡಿದ್ದೆ. ನಾವು ಮಕ್ಕಳಾಗಿ, ವಿದ್ಯಾರ್ಥಿಗಳಾಗಿ ಅಂದು ನಾವು ಪಡುತ್ತಿದ್ದ ಪರಿಪಾಟಲುಗಳನ್ನು  ಅವರು ಮೆಲುಕುಹಾಕಿದರು.’’ ಅಂದು ನಿಮಗೆ ಕಲಿಯುವ ಆಸೆಯಿತ್ತು, ಜ್ಞಾನದ ಹಸಿವಿತ್ತು. ನಿಮ್ಮ ಆ ಅವಶ್ಯಕತೆಗಳನ್ನು ಪೂರೈಸುವ ಸೌಲಭ್ಯವಾಗಲಿ, ಆರ್ಥಿಕ ಶಕ್ತಿಯಾಗಲೀ ನಮಗಿರಲಿಲ್ಲ. ಇಂದಿನ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ನು, ಪೆನ್ಸಿಲ್ ಸೈಕಲ್ ,ಊಟ, ಬಟ್ಟೆ ಎಲ್ಲವೂ ಉಚಿತವಾಗಿ  ದೊರೆಯುತ್ತದೆ. ಆದರೆ ಕಲಿಯುವಂತ ಹಸಿವೆ ಅವರಲ್ಲಿ ನಮಗೆ ಕಾಣುವುದಿಲ್ಲ’’.  

ಅವರಾಗ ಹೇಳಿದ ಎರಡು ಮಾತುಗಳು ಆಗಾಗ  ನನ್ನ ಮನಃ ಪಟಲದಲ್ಲಿ ಹಾಯ್ದುಹೋಗುತ್ತಿರುತ್ತವೆ.  

ಕನ್ನಡಕ್ಕೆ ಕುರಿತಾದ ಈ ಹೊಸ ಬೆಳವಣಿಗೆಯೂ ಹಸಿವಿಲ್ಲದವನಿಗೆ ಬಡಿಸಿದ ಮೃಷ್ಠಾನ್ನವಾಗದಿದ್ದರೆ ಸಾಕು. ಅಂಗೈಯಲ್ಲಿ ಅರಮನೆಯಿದ್ದರೇನು ಭಾಗ್ಯ? ಕನ್ನಡದ ಮಕ್ಕಳು ಅನುಭವಿಸುವ ಅದೃಷ್ಟವಿಲ್ಲದ ”ಭೋಗ ಅಭಾಗ್ಯ”ರಾಗದಿದ್ದರೆ ಸಾಕು..

ನೇರವಾಗಿ ‘’ನೆಟ್ಟಿ’’ ಗೆ ಏರಿದ ಕನ್ನಡ , ತನ್ನ ಮಣ್ಣಿನ ಋಣವಿರುವ ಕನ್ನಡ ಕೂಸುಗಳ ನೆತ್ತಿಗೇರುವುದೇ ಎಂಬುದು ಯಕ್ಷ ಪ್ರಶ್ನೆ

 

ಗೋವಿಂದ ಪೈ ಗಳ ಈ ಸಾಲುಗಳೊಂದಿಗೆ ಕನ್ನಡದ ವೈಭವಕ್ಕೆ ಹಾತೊರೆಯುತ್ತಾ,,,

‘’ಕುಗ್ಗದಂತೆ ಹಿಗ್ಗಿಪಂತೆ ನಿನ್ನ ಹೆಸರ ಟೆಕ್ಕೆಯಂ

ನೀಗದಂತೆ  ಸಾಗಿಪಂತೆ ನಿನ್ನ ನುಡಿಯ ಢಕ್ಕೆಯಂ

ನಮ್ಮೆದೆಯಂ ತಾಯೆ ಬಲಿಸು

ಎಲ್ಲರ ಬಾಯಲ್ಲಿ ನೆಲೆಸು

ನಮ್ಮ ಮನನೊಂದೆ ಕಲಸು

ಇದನೊಂದನೆ ಕೋರುವೆ

ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮಗೆ ತೋರುವೆ? ‘’

——————————————————–

‘’ನೆಟ್ಟಿ’’ಗೇರ್ದ ನುಡಿಯು ನೆತ್ತಿಗೇರಲದು ಅಸಾಧ್ಯವೇ ?

ಸಹಿಷ್ಣುತೆ ಮತ್ತು ಸೆಕ್ಯುಲರಿಸಂ – ಸುದರ್ಶನ ಗುರುರಾಜರಾವ್ ಲೇಖನ

Indian-Muslim

ಅದೊಂದು ಅನಿವಾಸಿ ಭಾರತೀಯರ ಚಿಕ್ಕದೊಂದು ಸಂಘ. ಹತ್ತಾರು ವರ್ಷಗಳಿಂದ, ಎಲ್ಲ ಸಂಘಗಳು ಕಾಣುವ ಏಳು ಬೀಳುಗಳನ್ನು, ಒಳಿತು ಕೆಡಿಕುಗಳನ್ನು, ಸಂಘಟನೆ-ವಿಘಟನೆಗಳನ್ನು ಕಾಲ ಕಾಲಕ್ಕೆ ಅನುಭವಿಸಿಯೂ ಕ್ರಿಯಾತ್ಮಕವಾಗಿದ್ದ ಒಂದು ಚಿಕ್ಕ ಊರಿನ ಚಿಕ್ಕ ಸಂಘಟನೆ. ನೆಲ-ಜಾಲಗಳನ್ನು ಬಿಟ್ಟು ಬಂದಿಳಿದ ಭಾರತೀಯರನ್ನು ಒಂದು ಚಾವಣಿಯಡಿ ತಂದು, ವರುಷಕ್ಕಿಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿ ತನ್ನ ಕೈಲಾದಷ್ಟು ಚಾರಿಟಿಗಳನ್ನು ಮಾಡುತ್ತಿದ್ದ ಒಂದು ಸಂಸ್ಥೆ. ದೀಪಾವಳಿ, ಹೋಳಿ ಹಬ್ಬ, ಆಹಾರ ಮೇಳ, ಹೊಸವರ್ಷಾಚರಣೆಗಳು ಅದರ ಪ್ರಮುಖ ಕಾರ್ಯಕ್ರಮಗಳಾಗಿದ್ದವು.

ಭಾರತೀಯರೆಂದ ಮೇಲೆ ವೈವಿಧ್ಯತೆ ಸ್ವಾಭಾವಿಕವಷ್ಟೇ. ಹಲವು ಭಾಷೆ, ವೇಷ, ಆಚಾರ, ವಿಚಾರ, ಧರ್ಮ, ಪಂಗಡಗಳ ಗೂಡು ಎಂಬುದನ್ನು ಹೇಳಬೇಕಿಲ್ಲ. ಬಹುತೇಕರು ಹಿಂದೂ ಧರ್ಮದವರಾಗಿದ್ದು ಮೊದಲಿಗೆ ಎರಡು ಮುಸ್ಲಿಂ ಹಾಗೂ ಎರೆಡು ಕ್ರಿಸ್ಚಿಯನ್ ಪಂಗಡಗಳು ಇದರಲ್ಲಿದ್ದವು. ಕ್ರಿಶ್ಚಿಯನ್ ಪಂಗಡಗಳವರು ಕ್ಯಾತೋಲಿಕ್ ಅನುಯಾಯಿಗಳಗಿದ್ದು ಹೊಸವರ್ಷಾಚರಣೆ ಹೊರತುಪಡಿಸಿ ಉಳಿದ ಹಬ್ಬಾಚರಣೆಯಲ್ಲಿ ಪಾಲ್ಗೊಂಡಿದ್ದು ನಾನು ನೋಡಿರಲಿಲ್ಲ. ಮುಸ್ಲಿಂ ಕುಟುಂಬಗಳಲ್ಲಿ ಒಂದು, ಅವರೇ ಹೇಳಿಕೊಂಡಂತೆ ‘ಅಹ್ಮದೀಯ’ ಎಂಬ ಶಾಖೆಗೆ ಸೇರಿದ ಜನ. ಇನ್ನೊಂದು, ನನಗೆ ತಿಳಿಯದು, ನಾನೂ ಕೇಳಿಲ್ಲ, ಅವರೂ ಹೇಳಿಲ್ಲ.

ಯಾವ ಭೇದಭಾವವೂ ಇಲ್ಲದೆ ಎಲ್ಲರೂ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆವು. ಬಾಲಿವುಡ್ ಹಾಡುಗಳು, ಕಿರು ಪೌರಾಣಿಕ ಪ್ರಸಂಗಗಳು, ಶಾಸ್ತ್ರೀಯ ಸಂಗೀತ ಹಾಗೂ ನೃತ್ಯರೂಪಕಗಳು ಕಾರ್ಯಕ್ರಮದ ಭಾಗಗಳಾಗಿದ್ದವು. ನಮ್ಮ ಭರತನಾಟ್ಯದ ಶಿಕ್ಷಕಿಗೆ ಅವಕಾಶ ಸಿಕ್ಕಾಗ, ಕೆಲವು ಸೂಫಿ ಸಂತರ ಹಾಡುಗಳಿಗೂ ಮಕ್ಕಳಿಂದ ಹೆಜ್ಜೆ ಹಾಕಿಸುತ್ತಿದ್ದರು. ಸದಸ್ಯರ ಕುಟುಂಬಗಳು ಉತ್ಸಾಹದಿಂದಲೇ ಭಾಗವಹಿಸುತ್ತಿದ್ದವು.

ಬದಲಾವಣೆ ಯುಗದ ಧರ್ಮ. ಕಾಲಕ್ರಮದಲ್ಲಿ ಮಂಗಳೂರು, ಹೈದರಾಬಾದು, ಉತ್ತರ ಪ್ರದೇಶ ಹಾಗೂ ಬಿಹಾರಗಳ ಮುಸ್ಲಿಮ್ ಕುಟುಂಬಗಳು ಊರಿಗೆ ಸೇರ್ಪಡೆಯಾದವು. ನಾವು ಸಹ ಸಂಘದ ಸದಸ್ಯತ್ವಕ್ಕೆ ಅವರನ್ನು ಆಹ್ವಾನಿಸಿ ಸೇರಿಸಿಕೊಂಡೆವು. ಮೊದಲ ವರ್ಷ ಏನೂ ತೊಂದರೆಯಿರಲಿಲ್ಲ. ಎರಡನೇ ವರ್ಷದ ದೀಪಾವಳಿ ಸಮಯಕ್ಕೆ ಈದ್ ಹಬ್ಬವೂ ಬರುವ ಕಾರಣ ದೀಪಾವಳಿ-ಈದ್ ಎಂಬ ಯುಗಳ ಹಬ್ಬವಾಗಿ ಕಾರ್ಯಕ್ರಮ ನಡೆಸಬೇಕೆಂಬ ಕೋರಿಕೆ ಬಂತು. ಸಮಿತಿ ಸರ್ವಾನುಮತದಿಂದ ಅಂಗಿಕರಿಸಿ, ಅದಕ್ಕೆಂದೇ ಹೊಸ ಭಿತ್ತಿ ಪಟವನ್ನು ಬರೆಸಲಾಯಿತು. ಏಕತೆ- ಸಮಗ್ರತೆಯ ನಡೆಯೆಂದು ಎಲ್ಲರೂ ಸಂತೋಷಿಸಿದರು!

ಆದರ ನಂತರ ಹೋಳಿ ಹಬ್ಬ ಅತಿ ಧಾರ್ಮಿಕ ಆಚರಣೆಯೆಂದೂ, ಸಮುದಾಯದ ಎಲ್ಲರ ಆಶಯಕ್ಕೆ ಅನುಗುಣವಾಗಿಲ್ಲವೆಂದೂ, ಅದನ್ನು ಸೆಕ್ಯುಲರ್ ಅದ ಅಚರಣೆಯಾಗಿ ಬದಲಾಯಿಸಬೇಕೆಂಬ ಕೋರಿಕೆ ಬಂತು. ಹೋಳಿ ಹಬ್ಬ ಎಂಬುದನ್ನು ವಸಂತೋತ್ಸವ ಎಂಬ ಹೆಸರಿನಿಂದ ಕರೆಯಲಾಯಿತು. ಬಣ್ಣದ ಬದಲಿಗೆ ಹೂವಿನ ಪಕಳೆಗಳನ್ನು ಚಿಮ್ಮಲಾಯಿತು. ಕೆಲವರು ಗೊಣಗುಟ್ಟಿದರೂ ಬದಲಾವಣೆಯನ್ನು ಒಪ್ಪಿಕೊಂಡರು. ಆದರೆ ಬಣ್ಣದ ಎರಚಾಟವಿಲ್ಲದೆ ಮಕ್ಕಳು ನಿರಾಶರಾಗಿದ್ದು ಸುಳ್ಳಲ್ಲ.

ಮತ್ತೊಂದು ವರುಷ ಕಳೆದು ಆ ವರುಷದ ದೀಪಾವಳಿ ಕಾರ್ಯಕ್ರಮದ ಮುಸ್ಲಿಂ ಸಮುದಾಯದ ಮಕ್ಕಳು ವಿಷ್ಣುವಿನ ದಶಾವತಾರದ ನೃತ್ಯರೂಪಕವೊಂದರಲ್ಲಿ ಪಾಲ್ಗೊಳ್ಳಲಿಲ್ಲ! ನಮ್ಮ ನೃತ್ಯ ಶಿಕ್ಷಕಿ ಅವರಿಗಾಗಿ ಮತ್ತೊಂದು ಹಾಡೊಂದಕ್ಕೆ ತರಬೇತಿ ಕೊಡಬೇಕಾಗಿ ಬಂತು. ಕೆಲಸದೊತ್ತಡದಲ್ಲಿ ಅವರು ನಲುಗಿದ್ದಂತೂ ನಿಜ. ಆದರೆ ಮೊದಲು ಹೇಳಿದ ಅಹ್ಮದೀಯ ಕುಟುಂಬ ಇದಕ್ಕೆ ಹೊರತು. ಎಲ್ಲ ಕಾರ್ಯಕ್ರಮಗಳಲ್ಲಿ ಅವರು ಭಾಗಿಗಳಾಗಿದ್ದರು.

ನಂತರದ ವರ್ಷದಲ್ಲಿ ಹಬ್ಬಾಚರಣೆಗಳು ಎಲ್ಲರ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿರದ ಕಾರಣ ದೀಪಾವಳಿ ಅಡಿಯಲ್ಲಿ ಲಕ್ಷ್ಮಿಪೂಜೆ ಕೂಡದೆಂದೂ, ದೀಪವನ್ನು ಬೆಳಗಿ ಕಾರ್ಯಕ್ರಮ ಉದ್ಘಾಟಿಸುವುದು ‘’ಸೆಕ್ಯುಲರ್’’ ಅಲ್ಲವೆಂದು ಆಕ್ಷೇಪಣೆ ಬಂತು. ಸಮಿತಿಯ ಸಭೆಯಲ್ಲಿ ಕೆಲವರು ಸಮಾನತೆಯ ಮನೋಭಾವದ ಗುಂಗಿನಲ್ಲಿ ಅನುಮೋದಿಸಿದರು, ಕೆಲವರು ಸುಮ್ಮನಿದ್ದರು ಮತ್ತೆ ಕೆಲವರು ಮುಖ ಮುಖ ನೋಡಿಕೊಂಡರು – ತಮ್ಮ ಅಸಮ್ಮತಿಯನ್ನು ಹೊರಹಾಕಲು ಹಿಂಜರಿದರು. ನಾನು ಶಾಂತವಾಗಿ ಪ್ರತಿಭಟಿಸಿದೆ. ನಮ್ಮದು ಭಾರತೀಯ ಪರಂಪರೆಯನ್ನು ಬಿಂಬಿಸುವ ಸಂಘಟನೆಯಾಗಿದ್ದಲ್ಲಿ, ಭಾರತೀಯ ಸಂಸ್ಕೃತಿಯನ್ನು ಅಭಿವ್ಯಕ್ತಗೊಳಿಸುವ ಆಚರಣೆಗಳನ್ನು ಅನುಸರಿಸಲು ಹಿಂದೆ ಮುಂದೆ ನೋಡಬೇಕಾದ ಪ್ರಮೇಯವಿಲ್ಲ. ಭಾರತವೆಂದರೆ ಬಾಲಿವುಡ್ ಅಲ್ಲ, ಅದನ್ನು ಮೀರಿದ ಒಂದು ವಿಶಿಷ್ಟ ವ್ಯವಸ್ಥೆ, ಅದನ್ನು ಬಿಟ್ಟು ಕಾರ್ಯಕ್ರಮ ರೂಪಿಸುವುದಾದರೆ ಅದಕ್ಕಿಂತ ದೊಡ್ಡ ಅಭಾಸ ಅಸಂಬದ್ಧತೆ ಇರಲಾರದು. ಭಾರತೀಯ ಪರಂಪರೆಯ ವೈಶಿಷ್ಟ್ಯವೆಂದರೆ ಮನುಷ್ಯನ ಜೀವನದೆಲ್ಲ ಕೋನಗಳಲ್ಲಿ ತಾತ್ತ್ವಿಕ ಧಾರ್ಮಿಕ, ಲೌಕಿಕ, ಪಾರಮಾರ್ಥಿಕ ಸಮಗ್ರತೆಯ ಆಯಾಮಗಳು ಹಾಸುಹೊಕ್ಕಾಗಿವೆ. ಇದು ಕಲಾ ಪ್ರಾಕಾರಗಳಲ್ಲಿ ವ್ಯಕ್ತಗೊಂಡಿದೆ. ಅದು ಸಂಗೀತ, ಸಾಹಿತ್ಯ, ನೃತ್ಯ, ಶಿಲ್ಪ, ಚಿತ್ರಕಲೆಗಳಿರಬಹುದು – ಅದು ಆಧ್ಯಾತ್ಮ ಪುರಾಣಗಳ ಜತೆಗೆ ಹಾಸುಹೊಕ್ಕಾಗಿ ಹೊಸೆದುಕೊಂದಿರುವ ಒಂದು ಅಪರೂಪದ ಜೀವನ ದರ್ಶನ. ಅದರ ಹಿಂದಿನ ಆಶಯಗಳನ್ನು ಗುರಿತಿಸಿ ಗೌರವಿಸಬೇಕೇ ವಿನಃ ಬೇಧ ಎಣಿಸಬಾರದೆಂದು ವಾದಿಸಿದೆ. ಈ ತತ್ವಗಳನ್ನು ಮುಂದಿನಪೀಳಿಗೆಗೆ ದಾಟಿಸುವ ಹೊಣೆ ನಮ್ಮ ಮೇಲಿದ್ದಲ್ಲಿ, ಈ ಸಂಘಟನೆಗೂ ಒಂದು ಅರ್ಥವಿದೆ, ಹಬ್ಬಾಚರಣೆಗೂ ಒಂದು ಅರ್ಥವಿದೆ. ಇಲ್ಲವಾದಲ್ಲಿ ದೀಪಾವಳಿ ಹೆಸರಿನಲ್ಲಿ ನವೆಂಬರ್ ತಿಂಗಳ ಈ ಕಾರ್ಯಕ್ರಮಕ್ಕೆ ಯಾವುದೇ ಅರ್ಥವಿಲ್ಲ, ನಾನು ಒಪ್ಪಲಾರೆ ಎಂದೆ.

ನನ್ನ ವಾದ ತೀವ್ರವಾದವೆಂದೂ, ಅದು ಸೆಕ್ಯುಲರ್ ಅಲ್ಲವೆಂದೂ, ನಮ್ಮ ನಂಬಿಕೆಯನ್ನು ಇತರರ ಮೇಲೆ ಹೇರುವ ಹುನ್ನಾರವೆಂದು ಆಕ್ಷೇಪಣೆ ಬಂತು. ನೀವು ಒಪ್ಪದ ಆಚರಣೆಗಳನ್ನು ಕೈಬಿಡಲು ಒತ್ತಡ ಹಾಕುತ್ತಿರುವಿರಾದರೆ ನಿಮ್ಮದು ಸೆಕ್ಯುಲರ್ ಹೇಗಾಯಿತು? ಸಹಿಷ್ಣುತೆ ನಿಮ್ಮ ನಡೆಯಲ್ಲಿ ಎಲ್ಲಿದೆ ಎಂಬ ಪ್ರಶ್ನೆಗೆ, ನಾವು ನಮ್ಮ ಆಚರಣೆಗಳನ್ನು ವೇದಿಕೆಯ ಮೇಲೆ ತರುವುದಿಲ್ಲ ಹಾಗಾಗಿ ನೀವೂ ಸಹ ತರಬಾರದೆಂಬ ವಾದ ಬಂತು!!

ಅಲ್ಲಿಗೆ, ನಾನು ಸೆಕ್ಯುಲರ್ ಎಂಬುದರ ಅರ್ಥವನ್ನು ಅಲ್ಲಿರುವ ಸದಸ್ಯರು ಹೇಗೆ ಅರ್ಥೈಸಿಕೊಂಡಿದಾರೆಂಬ ಪ್ರಶ್ನೆ ಮಾಡಿದಾಗ ಯಾರಲ್ಲೂ ಸ್ಪಷ್ಟ ಉತ್ತರವಿರಲಿಲ್ಲ. ಧಾರ್ಮಿಕ ಆಚರಣೆಗಳನ್ನು ಇನ್ನೊಬ್ಬರು ಒಪ್ಪದಿದ್ದಾಗ ಕೈಬಿಡುವುದೇ ಸೆಕ್ಯುಲರ್ ಎಂಬ, ಇತರರ ಆಚರಣೆ ನಂಬಿಕೆಗಳನ್ನು ಸಹಿಸಿಕೊಳ್ಳುವ ಮನೋಭಾವವೆಂದೂ ಗೊಂದಲಮಯ ವ್ಯಾಖ್ಯೆ ಕೊಟ್ಟರು.

ನನ್ನ ಪ್ರಕಾರ ಸೆಕ್ಯುಲರ್ ಎಂಬುದು ಆಂತರ್ಯದಲ್ಲಿ ಗೌರವ ಎಂಬ ಹೂರಣವನ್ನು ಇಟ್ಟುಕೊಂಡ ಮನಸ್ಥಿತಿ ಎಂದೂ, ಅದು ಕೇವಲ ಸಹಿಸಿಕೊಳ್ಳುವ ಸ್ಥಿತಿ ಅಲ್ಲ. ಸಹಿಸಿಕೊಳ್ಳುವವ ಅಸಹಿಷ್ಣು ಆಗಬಹುದು, ಆದರೆ ಗೌರವ ಭಾವ ಒಂದು ನಿರುಪಾಧಿಕ (absolute) ಸ್ಥಿತಿ. ಪರಸ್ಪರರ ಆಚರಣೆಗಳಿಗೆ ಗೌರವ ಕೊಟ್ಟು ಬೆಳೆಸುವ ಸ್ಥಿತಿಯೇ ಸೆಕ್ಯುಲರ್-ಸಹಿಷ್ಣುತೆ ಎಂಬ ಪ್ರತಿವಾದ ಹೂಡಿದೆ. ನಿಮ್ಮಲ್ಲಿ ಸಾಂಸ್ಕೃತಿಕವಾದ ಸರಕಿದ್ದರೆ ಅದನ್ನು ವೇದಿಕೆಗೆ ತನ್ನಿ. ಸಂತೋಷವಾಗಿ ಅಚರಿಸೋಣ. ಇಲ್ಲದಿದ್ದಲ್ಲಿ ಉಳಿದವರದ್ದು ನೋಡಿ ಸಂತೋಷಿಸಿ. ನಾವೂ ಮಾಡೆವು ನಿಮಗೂ ಬಿಡೆವು ಎಂಬ ಧೋರಣೆ ಆರೊಗ್ಯಕರವಲ್ಲ. ನಿರ್ಧಿಷ್ಟ ಗುರಿಗಳಿಲ್ಲದಿದ್ದರೆ ನಮ್ಮದು ಅರ್ಥಹೀನ ಸಂಘಟನೆಯಾಗುತ್ತದೆ ಎಂಬ ವಾದವನ್ನು ಮುಂದಿಟ್ಟೆ. ಕೆಲವರು ಆಗ ನನ್ನನ್ನು ಬೆಂಬಲಿಸಿದರು. ಕಾರ್ಯಕ್ರಮಗಳು ಯಥಾಪ್ರಕಾರ ನಡೆದವು. ಧರ್ಮಬಾಹಿರವಾದ ಅಂಶಗಳಿದ್ದ ಕಾರಣ ದೇಶಬಾಂಧವರು ಊಟದ ಹೊತ್ತಿಗೆ ಆಗಮಿಸಿ ತಿಂದುಂಡು ನಡೆದರು. ನಂತರದ ವರ್ಷಗಳಲ್ಲಿ ಮೊದಲಿದ್ದ ಎರೆಡು ಕುಟುಂಬಗಳನ್ನು ಹೊರತು ಪಡಿಸಿ ಉಳಿದ ಮುಸ್ಲಿಂ ಕುಟುಂಬಗಳು ಕಾರ್ಯಕ್ರಮಕ್ಕೆ ಬರುವುದನ್ನ್ನು ನಿಲ್ಲಿಸಿಯೇ ಬಿಟ್ಟರು.

ಮೊದಲು ಹೇಳಿದಂತೆ, ಕ್ರಿಶ್ಚಿಯನ್ ಕುಟುಂಬಗಳು ಮೊದಲಿನಿಂದಲೂ ಈ ಹಬ್ಬಾಚರಣೆಯಲ್ಲಿ ಪಾಲ್ಗೊಂದೇ ಇರಲಿಲ್ಲ. ನಮ್ಮೂರಿನ ಸಕಲ (ನನ್ನನ್ನು ಹೊರತು ಪಡಿಸಿ) ಹಿಂದೂಗಳ ಮನೆಯಲ್ಲಿ ಕ್ರಿಸ್ಮಸ್ ಮರವನ್ನು, ಈಸ್ಟರ್ ಮೊಟ್ಟೆ-ಮೊಲಗಳನ್ನು ಕಂಡಿದ್ದೇನೆ ಆದರೆ ಇತರರ ಮನೆಗಳಲ್ಲಿ ನಮ್ಮ ದೀಪಾವಳಿಯನ್ನೋ, ಗಣೇಶ ಚತುರ್ಥಿಯನ್ನೋ ಆಚರಿಸುವುದು ನೋಡಿಲ್ಲ.

ಇದು, ಒಂದು ಸಂಘಟನೆಯ ಕಾರ್ಯದರ್ಶಿಯಾಗಿ ನಾನು ಕಂಡುಂಡ ಅನುಭವ. ವೈಯಕ್ತಿಕವಾಗಿ ನಾನು ಹಿಂದು (ಸನಾತನ) ಧರ್ಮದ ಅನುಯಾಯಿ-ಅಭಿಮಾನಿಯಾಗಿದ್ದರೂ ಇತರ ಧರ್ಮಾಚರಣೆಗಳನ್ನು ಅವಿರುವಂತೆಯೇ ಗೌರವಿಸಿದವನು.ಈ ಪರಸ್ಪರ ಗೌರವ ಆದರಗಳ ಗೆರೆ ಮೀರಿದ ಪರಿಸ್ಥಿತಿಯಲ್ಲಿ ನಮ್ಮ ತತ್ವಗಳನ್ನು, ಆದರ್ಶ ನಂಬಿಕೆಗಳನ್ನು ನಿರ್ಭೀತಿಯಿಂದ ಪ್ರತಿಪಾದಿಸಿದವನು. ಇದಕ್ಕಾಗಿ ವೈಯಕ್ತಿಕವಾಗಿ ಸಂಬಂಧಗಳು ಹಳಸಿದರೂ, ಅದನ್ನು ಅನುಭವಿಸಿದವನು. ನನ್ನ ಈ ನಡೆಯನ್ನು ಅಸಹಿಷ್ಣುತೆ ಎಂಬ ಹಣೆಪಟ್ಟಿಯನ್ನು ಕಟ್ಟಿದವರನ್ನೂ ಸಹ ಕಂಡಿದ್ದೇನೆ.

ಇತರ ಧರ್ಮಗಳ/ನಂಬಿಕೆಗಳನ್ನು ಅಂಗೀಕರಿಸುವ ನಮ್ಮ ಮನಸ್ಥಿತಿ ಬೇರೆಯಾದ ಅವರಿಗೇಕೆ ಬರಲಿಲ್ಲ ಎಂಬುದು ಒಂದು ಮೂಲಭೂತವಾದ ಪ್ರಶ್ನೆ. ಕಾರಣ ಇಷ್ಟೆ: ಮಧ್ಯಪ್ರಾಚ್ಯದಲ್ಲಿ ಹುಟ್ಟಿ ಬೆಳೆದ ಈ ಸೆಮೆಟಿಕ್ ರಿಲಿಜನ್-ಗಳು( ಅಬ್ರಹಾಮಿಕ್ ರಿಲಿಜನ್) ಗಳು ಏಕದೇವ, ಏಕತತ್ವ, ಏಕಮಾರ್ಗ ಪ್ರತಿಪಾದಕ ರಿಲಿಜನ್-ಗಳು. ಇವುಗಳನ್ನು ಒಂದು ಅರ್ಥದಲ್ಲಿ ಧರ್ಮ ಎನ್ನಲಾಗದು. ಅವು ಮತಗಳು. ಇರುವುದೊಂದೇ ಪುಸ್ತಕ. ಅದನ್ನು ಓದಿಕೊಂಡ ಅನುಯಾಯಿಗಳು ನಂಬುವುದು, ನಮ್ಮ ಮಾರ್ಗವೊಂದೆ ಸತ್ಯ. ಉಳಿದವು ಪಾಪಿಗಳದ್ದು. ಹಾಗಾಗಿ ಅವುಗಳನ್ನು ನಿರ್ಮೂಲನೆ ಮಾಡು ಎಂಬ ಬೋಧನೆ ನೀಡುವ ಧರ್ಮ ಗ್ರಂಥಗಳು ಇಲ್ಲವೇ ಅದರ ನಿರ್ವಚನಗಳು (interpretation). ಹಾಗಾಗಿ ಕ್ರೈಸ್ತ ಧರ್ಮದವರು ಆಮಿಷ ಒತ್ತಡಗಳ ಮೂಲಕ ಮತ ಪರಿವರ್ತನೆಗೆ ಓಲೈಸಿದರೆ, ಇಸ್ಲಾಂ ಭಯ, ಬಲಾತ್ಕಾರ, ಬಳಪ್ರಯೋಗಗಳ ಮಾರ್ಗದಲ್ಲಿ ತಮ್ಮ ಮತವನ್ನು ಹರಡಲು ಪ್ರಚೋದಿಸುತ್ತದೆ. ತಮ್ಮದು ಹೊರತಾಗಿ ಉಳಿದೆಲ್ಲವೂ ಹರಾಮ್ ಆದ ಕಾರಣ ಒಪ್ಪಿಕೊಳ್ಳುವ ಮನೋಭಾವವೇ ಅಲ್ಲಿ ಇರಲಾರದು. ಇದಾಗ್ಯೂ ಅದು ನಿಯಮದಲ್ಲಿ ವಿನಾಯತಿ (exception to the rule), ಅಷ್ಟೆ. ಇತ್ತೀಚಿನ ದಿನಗಳಲ್ಲಿ ಇದರ ಪ್ರಖರತೆ ಹೆಚ್ಚಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಈ ಒಪ್ಪಿಕೊಳ್ಳದ ಮನೋಭಾವವನ್ನು ಬಲಾಢ್ಯ ಪೋರ್ಚುಗೀಸರು ಗೋವಾ ಮತ್ತಿತರ ಜಾಗಗಳಲ್ಲಿ ನಡೆಸಿದ ವಿಧ್ವಂಸಕತೆಯಲ್ಲಿ ಕಾಣಬಹುದು, ಘೋರಿ ಮಹಮ್ಮದನಲ್ಲಿ ಕಾಣಬಹುದು, ವಿಜಯನಗರದ ಬೀದಿಗಳಲ್ಲಿ ಕಾಣಬಹುದು, ಕಾಶ್ಮೀರಿ ಪಂಡಿತರ ಮಾರಣಹೋಮದಲ್ಲಿ ಕಾಣಬಹುದು, ಇಂದಿಗೂ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ಹಿಂದುಗಳ ಮೇಲೆ ಕ್ರಿಶ್ಚಿಯನ್ ಪಂಗಡಗಳು ನಡೆಸುತ್ತಿರುವ ದೌರ್ಜನ್ಯದಲ್ಲಿ ಕಾಣಬಹುದು. ಕೇರಳದಲ್ಲಿ ನಡೆಯುತ್ತಿರುವ ದೌರ್ಜನ್ಯದಲ್ಲಿ ಕಾಣಬಹುದು. ಆಂಧ್ರಪ್ರದೇಶದ ಕರಾವಳಿಯಲ್ಲಿ ನಡೆದಿರುವ ಮತ ಪರಿವರ್ತನಾ ಅಭಿಯಾನದಲ್ಲಿ ಕಾಣಬಹುದು. ಈ ಎಲ್ಲ ಹುನ್ನಾರಗಳ ಹಿಂದಿನ ವಿಸ್ತೃತ ಹಾಗೂ ಆಧುನಿಕ ರೂಪವೇ ಇಂದು ಚರ್ಚೆಗೊಳಗಾಗಿರುವ ಅಸಹಿಷ್ಣುತೆಯ ಕೂಗು.

ಈ ಕೂಗಿನ ಹಿಂದಿನ ರಾಜಕೀಯ ಷಡ್ಯಂತ್ರಗಳು, ಸಮಾಜ ವಿರೋಧಿ ಹುನ್ನಾರಗಳು, ಓಲೈಕೆ ರಾಜಕಾರಣ, ಮತಬ್ಯಾಂಕಿನ ಹಪಾಹಪಿ, ಇದರ ಹಿಂದಿರುವ ಬುದ್ಧಿಜೀವಿಗಳು, ರಾಜಕಾರಿಣಿಗಳು, ಸಾಹಿತಿಗಳು ಇವರುಗಳ ಬದ್ಧತೆ, ಬಂಡವಾಳಗಲನ್ನು ಗಮನಕ್ಕೆ ತೆಗೆದುಕೊಂಡರೆ ಇವರ ಈ ಅಬ್ಬರ ಮತ್ತು ಕೂಗಾಟದ (hue and cry) ಹಿಂದಿರುವ ಪ್ರಾಮಾಣಿಕತೆ ಬಯಲಾಗುತ್ತದೆ. ಇಷ್ಟು ದಿನ ಕೇಳಿಬರದ ಈ ವಿದ್ಯಮಾನ ಇದ್ದಕ್ಕಿದ್ದಂತೆ ಮಾರ್ಮೊಳಗುತ್ತಿರುವುದರ ರಹಸ್ಯ ಎಲ್ಲರಿಗೂ ಉತ್ತರ ಗೊತ್ತಿರುವ ಪ್ರಶ್ನೆಯೇ.

ಸರಕಾರ, ಮಾಧ್ಯಮಗಳು ಸಂಘ ಸಂಸ್ಥೆಗಳು ಎಲ್ಲವೂ ತಮ್ಮ ಹಿಡಿತದಲ್ಲಿದ್ದಾಗ ತಮಗೆ ಅನುಕೂಲವಾಗುವ ವಾತಾವರಣ ಇದ್ದಾಗ ಕೇಳಿಬರದ ಈ ಕೂಗು ಇಂದು ಕೇಳುತ್ತಿರುವ ಕಾರಣ, ಪಟ್ಟಭದ್ರರ ಅಡಿ ಅಲುಗುತ್ತಿರುವುದಷ್ತೆ. ತಿರುಚಿದ ಇತಿಹಾಸವನ್ನು ಪ್ರಶ್ನಿಸಿದಾಗ ರೋಮಿಲಾ ಥಾಪರ್ ಅಸಹಿಷ್ಣುತೆಯ ಕೂಗು ಹಾಕುತ್ತಾಳೆ, ಯಾಕೂಬ್ ಮೆಮನ್-ನನ್ನು ಗಲ್ಲಿಗೇರಿಸಿದಾಗ ದೇಶದೆಲ್ಲ ಬುದ್ಧಿಜೀವಿಗಳು ಒಕ್ಕೊರಲಿನಿಂದ ಪ್ರತಿಭಟಿಸುತ್ತಾರೆ, ನಕ್ಸಲರನ್ನು ಮಟ್ಟಹಾಕಿದರೆ ಮಾನವ ಹಕ್ಕುಗಳ ಪ್ರಶ್ನೆ ಏಳುತ್ತದೆ, ಯಾವುದೊ ಒಂದು ಮುಸ್ಲಿಮನ ಕೊಲೆಯಾದರೆ ದೇಶಾದ್ಯಂತ ಅಲ್ಲೋಲ ಕಲ್ಲೋಲವಾಗುತ್ತದೆ, ವಿವೇಕಾನಂದ ಜನ್ಮದಿನಾಚರಣೆ ಕೋಮುವಾದಿಯಾಗುತ್ತದೆ, ದಲಿತನಲ್ಲದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಬ್ರಾಹ್ಮಣ ಪುರೋಹಿತಶಾಹಿಯನ್ನು ಎಳೆದು ತರಲಾಗುತ್ತದೆ. ಅಕ್ಬರ್ -ಬಾಬರ್ ಇತ್ಯಾದಿಗಳಿಗೆ ಒಂದೊಂದು ಪಾಠ ಮುಡಿಪಾಗಿಟ್ಟು ಇಡಿ ವಿಜಯನಗರ ಇತಿಹಾಸವನ್ನು ಒಂದು ಪುಟಕ್ಕೆ ಸೀಮಿತವಾಗಿದ್ದನ್ನು ಪ್ರಶ್ನಿಸಿದರೆ ಕೋಮುವಾದ ಭುಗಿಲೇಳುತ್ತಿದೆ ಎಂಬುದಾಗಿ ಕೂಗಲಾಗುತ್ತದೆ.  ಇಂದಿಗೆ ಅಸತ್ಯವೆಂದು ಸಾಬೀತಾಗಿರುವ ಆರ್ಯ ದ್ರಾವಿಡ ಇತಿಹಾಸವನ್ನೇ ಇನ್ನೂ ಬಂಡವಾಳ ಮಾಡಿಕೊಂಡು ದೇಶ ವಿಭಜನೆಗೆ ಪ್ರಯತ್ನಿಸಲಾಗುತ್ತದೆ, ಅದನ್ನು ವಿರೋಧಿಸಿದರೆ ಅಸಹಿಷ್ಣುತೆಯ ಪಟ್ಟ ಕಟ್ಟಲಾಗುತ್ತದೆ. ರಾಮಾಯಣದ ರಾಮ ವ್ಯಭಿಚಾರಿಯೆಂದೂ, ಅವನು ಕಬ್ಬಿಣ ತರಲು ಕಾಡಿಗೆ, ಶ್ರೀಲಂಕಾಕ್ಕೆ ಹೋದನೆಂದೂ ಹೇಳಿದವನಿಗೆ ಪ್ರೊಫೆಸ್ಸರ್-ಗಿರಿ ನೀಡಲಾಗುತ್ತದೆ. ಭಗವದ್ಗೀತೆ ಹಿಂಸಾ ಪ್ರಚೋದಕೆವೆಂದು ಬಡಬಡಿಸುವ ಭಗವಾನನಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಾವಿರಾರು ರೈತರು ಸತ್ತಾಗ ಇರಲಾಗದ ಹಣ, ಕಕ್ಕುಲತೆ, ಟಿಪ್ಪೂ ಸುಲ್ತಾನನ ಜನ್ಮದಿನ ಆಚರಣೆಗೆ ಬಿಡುಗಡೆಯಾಗುತ್ತದೆ. ಅದರ ಔಚಿತ್ಯವನ್ನು ಪ್ರಶ್ನಿಸಿ ವಿರೋಧಿಸಿದಾಗ ಅಸಹಿಷ್ಣುತೆಯ ಹೊಗೆ ದೇಶದ ತುಂಬ ವ್ಯಾಪಿಸುತ್ತದೆ. ಕಂಬಳದ ಕೋಣ ಓಟದ ಸ್ಪರ್ಧೆ, ಜಲ್ಲಿಕಟ್ಟು ಆಚರಣೆಗಳು ಪ್ರಾಣಿಹಿಂಸೆಯ ಪ್ರತೀಕವಾದರೆ, ಬಕೄದಿನ ಕುರಿ, ಒಂಟೆಗಳ ಮಾರಣಹೋಮ ಪ್ರಾಣಿದಯಾ ಸಂಘದ, ಬುದ್ಧಿಜೀವಿಗಳ ಕಣ್ಣಿಗೆ ಕಾಣದೆ ಹೋಗುತ್ತದೆ.

ಇಂದಿನ ಸಹಿಷ್ಣುತೆ ಅಸಹಿಷ್ಣುತೆಗಳ ಚರ್ಚೆ ಧಾರ್ಮಿಕವೆನ್ನಿಸಬಹುದಾದ ಹೊದಿಕೆ ಹೊದ್ದಿದ್ದರೂ ಸಹ ಅದರ ಮೂಲವಿರುವುದು ನಮ್ಮ ಇಡೀ ದೇಶದ ಒಂದು ಪಂಗಡದ ಇಬ್ಬಂದಿತನದ ವೈಚಾರಿಕ ಪೊಳ್ಳುತನದಲ್ಲಿ. ಪ್ರಾಮಾಣಿಕತೆಯ ದಿವಾಳಿತನದಲ್ಲಿ. ಭಿನ್ನತೆ ಜಗದ ನಿಯಮ. ಪ್ರಕೃತಿಯಲ್ಲಿ ಏಕರೂಪತೆ ಅಸಾಧ್ಯ. ಅದು ರೂಪ ಗುಣಗಳಿರಬಹುದು, ಚಿಂತನೆಯಿರಬಹುದು, ನಂಬಿಕೆ ಆಚರಣೆಗಳಿರಬಹುದು. ಆದರೆ ಪ್ರಾಮಾಣಿಕತೆ ಎಂಬುದು ಸಾಧ್ಯ. ಸಮಸ್ಯೆಯ ಮೂಲ ಇರುವುದು ಇಲ್ಲಿಯೇ. ಮೊದಲು ಹೇಳಿದ ಸೆಮೆಟಿಕ್ ರಿಲಿಜನ್-ಗಳು ’ಆನೋ ಭದ್ರಾ ಕ್ರತುವೋ ಎಂತು ವಿಶ್ವತಃ (ಉದಾತ್ತ ವಿಚಾರಗಳು ಎಲ್ಲಿಂದಾದರೂ ಬರಲಿ)’ ಎಂಬ ತೆರೆದ ಹಾದಿಯ ಮತಗಳಲ್ಲ. ನಮ್ಮದೇ ಸರಿ. ಉಳಿದವರು ವಿಧರ್ಮಿ (heathen) ಅಥವಾ ಹರಾಮ್ ಎನ್ನುವ ಮನೋಭಾವದ ಜನ, ನಮ್ಮವರೇ ಬುದ್ಧಿಜೀವಿಗಳ ಮೂಲಕ ಅಸಹಿಷ್ಣುತೆಯ ಆರೋಪವನ್ನು ಸಹಿಷ್ಣುಗಳ ಮೇಲೆ ಹೊರಿಸುತ್ತಿರುವುದು ಒಂದು ವಿಪರ್ಯಾಸಕರ ಬೆಳವಣಿಗೆ. ಈ ಸಂಘರ್ಷ ಇರಬಾರದು ಎಂದು ಆಶಿಸುವುದು ಒಂದು ಹಗಲುಗನಸು ಅಷ್ಟೇ. ವಾಸ್ತವ ಭಿನ್ನವಾದದ್ದು. ಇಸ್ಲಾಮಿನ ಸುನ್ನಿಗಳು ಶಿಯಾ, ಅಹ್ಮದೀಯ ಪಂಗಡಗಳನ್ನು ಸಹಾ ಒಪ್ಪುವ ಸ್ಥಿತಿಯಲ್ಲಿ ಇಲ್ಲದ್ದು ನಾವು ಕಾಣುತ್ತಿದ್ದೇವೆ. ಬಹುಸಂಖ್ಯಾತ ಮುಸ್ಲಿಮರು ಬಾಂಗ್ಲಾ, ಪಾಕಿಸ್ತಾನ, ಕಾಷ್ಮೀರಗಳಲ್ಲಿ ಹಿಂದೂಗಳ ಮಾರಣಹೋಮ ನಡೆಸಿರುವುದನ್ನು ಕಂಡಿದ್ದೇವೆ. ಶಾಂತಿಮಂತ್ರ ಅಲ್ಲಿ ಕೆಲಸಕ್ಕೆ ಬಂದಿಲ್ಲದ್ದನ್ನೂ ನೋಡಿದ್ದೇವೆ. ಮಾನವರನ್ನು ಮಾನವನಾಗಿ ಕಾಣು ಎಂಬುದು ಬೃಹಹದಾಶಯವೇ ಸರಿ. ಆದರೆ ಎದುರುಗಿರುವ ಮಾನ ದಾನವ ಪ್ರವೃತ್ತಿಯವನೆಂದಾದಾಗ ನಮ್ಮ ನಿಲುವು ಏನಿರಬೇಕೆಂಬುದು ನಮಗೆ ಸ್ಪಷ್ಟವಾಗಿರಬೇಕು ಅಷ್ಟೇ.

ಭಾರತ ಇಂದು ಭಾರತವಾಗಿ ಉಳಿದಿರುವುದರ ಹಿಂದೆ ದೇಶಪ್ರೇಮಿಗಳ ಧರ್ಮಾಧಕರ ಬೆವರಿದೆ. ಶಿವಾಜಿಯಂಥ ಹೋರಾಟಗಾರರ ಛಲವಿದೆ. ಧರ್ಮದ-ಸಂಸ್ಕೃತಿಯ ಮೇಲಿನ ಒಲವಿದೆ ಭಕ್ತಿಯಿದೆ, ಅಭಿಮಾನವಿದೆ. ಅವನ ತಾಯಿಯಂತಹ ಮಹಿಳೆಯರ ಆದರ್ಶವಿದೆ. ಸಾಮಾಜಿಕವಾಗಿ ಆಚರಿಸಿದ ಧಾರ್ಮಿಕ ಕಾರ್ಯಕ್ರಮಗಳ ಪರಿಣಾಮವಿದೆ. ಮನೆಮನೆಗಳಲ್ಲಿ ಇಟ್ಟು ಪೂಜಿಸಿದ ದೇವ ದೇವರ ಮೇಲಿನ ಶ್ರದ್ಧೆಯಿದೆ. ಕಟ್ಟುವ ಮನಸ್ಸುಗಳಲ್ಲಿ ಸಾಮಾನ್ಯವಾಗಿ ಕಾಣುವ ಗುಣಗಳಿವು.

ಹಿಂದಿನ ವಿಚಾರಗಳನ್ನು ಕೆದಕಬಾರದು ಎನ್ನುವವರು ತಿಳಿಯಬೇಕಾದ ಒಂದು ವಿಚಾರ ’ಅಸತ್ಯ-ಅಪ್ರಾಮಾಣಿಕತೆಯ ವೈಚಾರಿಕ ಪೊಳ್ಳುತನ ಓಲೈಕೆಯಿಂದ ಸಹಿಷ್ಣು ಸಮಾಜ ಕಟ್ಟಲು ಸಾಧ್ಯವಿಲ್ಲ/` ಜಾತಿ ವ್ಯವಸ್ಥೆಗೆ ಬ್ರಾಹ್ಮಣರನ್ನು,ಆರ್ಯರನ್ನು ದೂರುವ ಸಹಿಷ್ಣುಗಳು ಇತಿಹಾಸದಲ್ಲಿ ಚೆನ್ನಾಗಿಯೇ ದಾಖಲಾಗಿರುವ ಹಿಂದೂಗಳ ಮೇಲಿನ ಮುಸ್ಲಿಂ ದಾಳಿಕೋರರ, ರಾಜ ರಾಜರುಗಳ ದಬ್ಬಾಳಿಕೆಯನ್ನು ಪ್ರಾಮಾಣಿಕವಾಗಿ, ಮುಕ್ತವಾಗಿ ಚರ್ಚಿಸಬೇಕು. ಅದನ್ನು ಆ ಸಮುದಾಯ ಒಪ್ಪಿಕೊಳ್ಳುವಂತೆಯೂ ಉತ್ತೇಜಿಸಬೇಕು. ಕಸವನ್ನು ಚಾಪೆಯ ಕೆಳಗೆ ತಳ್ಳಿದರೆ ಅದೇನು ಇಲ್ಲವಾಗುವುದಿಲ್ಲ. ಹುಳಗಳನ್ನು ಬೆಳೆಸುವ ತಿಪ್ಪೆಯಾಗಿ ಮಾರ್ಪಡಬಹುದಷ್ಟೇ.

ಎಲ್ಲರೂ ಒಂದೇ ನಮ್ಮಲ್ಲಿ ವೈಷಮ್ಯ ಬೇಡ, ನಿರಂತರ ಸಂತೋಷ (happy ever after) ಎಂದು ಆಶಿಸುವ ಹಿಂದೂ ಮನಸ್ಸುಗಳು ಕೇಳಿಕೊಳ್ಳಬಹುದಾದ ಪ್ರಶ್ನೆಯಿದು:

ತೋಳವೊಂದು ಕುರಿಯ ಬಳಿಗೆ ಬಂದು ನಾವಿಬ್ಬರೂ ಒಂದೇ ಭೂಮಿಯ ಮಣ್ಣಿನಿಂದ ಆದವರು. ನನಗೂ ನಿನಗೂ ವ್ಯತ್ಯಾಸವಿಲ್ಲ. ನಾನೀಗ ನಿನ್ನನ್ನು ತಿಂದುಬಿಡುವೆ. ನೀನು ನನ್ನಲ್ಲಿಯೇ ಸೇರಿಹೋಗಿಬಿಡುತ್ತೀಯ. ಹಾಗಾಗಿ ನಿನ್ನದೇನು ನಷ್ಟವಾಗುವುದಿಲ್ಲ ಎಂದಾಗ ಕುರಿ ಏನು ಹೇಳಬೇಕು? ಅಥವಾ ಬುದ್ಧಿ ಜೀವಿಯಾಗಿ ಕುರಿಗೆ ನೀವೇನು ಹೇಳುತ್ತೀರಿ ಎಂಬುದು ಕೇಳಿಕೊಳ್ಳಬೇಕು.

(ಕಳೆದ ವಾರ ಇದೇ ವಿಷಯದ ಬಗ್ಗೆ ವಿವಿಧ ಬರಹಗಳ ಲೇಖನ ಪ್ರಕಟವಾಗಿತ್ತು: ಅದನ್ನು ಓದಲು ಇಲ್ಲಿ ಒತ್ತಿ.)