ವಿಶ್ವ ಯೋಗ ದಿನಾಚರಣೆ 2024

ಅನಿವಾಸಿ ಬಳಗಕ್ಕೆ ವಿಶ್ವ ಯೋಗದಿನದ ಶುಭಾಶಯಗಳು.
ಯೋಗದಿಂದ ಭವ ರೋಗ ದೂರ ಎಂಬ ಮಾತು ಜನಜನಿತವಾದದ್ದು. ಆದರೆ ಈ ಯೋಗ ಎಂಬ ಕಲ್ಪವೃಕ್ಷದ ಕೃಪೆ ಪಡೆಯಲು ಕೂಡ ಯೋಗ ಬೇಕು ಎನ್ನುವುದೂ ಜ್ಞಾನಿಗಳ ಅಂಬೋಣ.
ಇತ್ತೀಚಿಗೆ ಯೋಗ ಎಂಬುದು ಹಿಂದೆಂದಿಗಿಂತಲೂ ಹೆಚ್ಚು ಪ್ರಚುರಗೊಂಡಿದೆ. ಜೂನ್ ೨೧ನೇ ತಾರೀಖನ್ನು ಈ ವರ್ಷದ ವಿಶ್ವ ಯೋಗದಿನ ಎಂದು ಘೋಷಿಸಿದ ನಂತರ ಪ್ರತಿ ವರ್ಷ ವಿಶ್ವದಾದ್ಯಂತ ಯೋಗಾಭ್ಯಾಸಿಗಳು ಈ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಯೋಗದ ಮೂಲ ಸಿದ್ಧಾಂತಗಳನ್ನು ಪತಂಜಲಿಮುನಿ ಯೋಗಸೂತ್ರಗಳಲ್ಲಿ ದಾಖಲಿಸಿ ನಮ್ಮೆಲ್ಲರಿಗೂ ಬಳುವಳಿಯಾಗಿ ನೀಡಿದ್ದಾರೆ. ಪತಂಜಲಿ ಮುನಿ ಹೇಳುವಂತೆ ”ಯೋಗಃ ಚಿತ್ತವೃತ್ತಿ ನಿರೋಧಃ” – ಯೋಗಾಭ್ಯಾಸ ಮನಸ್ಸಿನ ಚಾಂಚಲ್ಯವನ್ನು ದೂರಮಾಡಿ ನಮ್ಮನ್ನು ಆಧ್ಯಾತ್ಮಿಕ ಸಾಧನೆಗೆ ಅಣಿಮಾಡುತ್ತದೆ. ದೇಹ ಮತ್ತು ಮಾನಸಿಕ ಸಾಮರಸ್ಯಕ್ಕೆ ಸೇತುವೆಯಾಗುತ್ತದೆ. ಹಾಗಾದರೆ ಯೋಗ ಎಂದರೆ ಬರೀ ವ್ಯಾಯಾಮ, ಆಸನವಲ್ಲ. ಯೋಗವನ್ನು ಎಂಟು ಹಂತಗಳಲ್ಲಿ ಮುನಿ ಪತಂಜಲಿ ವಿವರಿಸುತ್ತಾರೆ. ಯಮ, ನಿಯಮ, ಪ್ರಾಣಾಯಾಮ, ಆಸನ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ.

ಯೋಗ ಕಲಿಯಲು, ಅನುಸರಿಸಲು ಯಾರಿಗಾದರೂ ಹೇಳಿದರೆ ಸಮಯದ ಅಭಾವವೋ, ನಾವೇ ನಮಗೆ ಹಾಕಿಕೊಂಡ ಮಿತಿಗಳಿಂದಲೂ ಅಯ್ಯೋ ನಮ್ಮಿಂದಾಗದು ಅನ್ನುವ ಜನರು ಹೇರಳವಾಗಿದ್ದಾರೆ. ಯೋಗ ಕಲಿಯಲು ಬೇಕಾದ ಅರ್ಹತೆಗಳೇನು? ಹಾಗೊಂದು ಪ್ರಶ್ನೆ ಎದುರಾದರೆ ಅದಕ್ಕೆ ಉತ್ತರ ಉತ್ಸಾಹ, ಅಸೀಮ ಶ್ರದ್ಧೆ , ಗುರುವಿನಲ್ಲಿ ನಂಬಿಕೆ ಎಂದು ನಾನು ಧೈರ್ಯವಾಗಿ ಹೇಳಬಲ್ಲೆ. ಯೋಗದಿಂದ ಬದುಕು ಬದಲಿಸಿಕೊಂಡ ಕೋಟಿ ಕೋಟಿ ಜನರಲ್ಲಿ ನಾನೂ ಒಬ್ಬಳು.

ನಾವು ಯಾವುದೇ ಕೆಲಸವನ್ನು ಪ್ರತಿಫಲದ ಅಪೇಕ್ಷೆ ಇಲ್ಲದೆ ಮಾಡುವುದು ಅಪರೂಪ. ನಾವು ಎಲ್ಲೋ ನಮ್ಮ ಸಮಯ ಕೊಡುತ್ತೇವೆಂದರೆ ಅಲ್ಲಿಂದ ನಮಗೆ ವಾಪಸ್ ಏನಾದರೂ ಸಿಗಬೇಕು! ನಾನು ಕೂಡ ಯೋಗಾಭ್ಯಾಸ ಶುರು ಮಾಡಿದ್ದು ಹೀಗೆ ಕೇಲವು ನಿರೀಕ್ಷೆಗಳನ್ನಿಟ್ಟುಕೊಂಡು. ಆದರೆ ಯೋಗ ನನ್ನ ಜೀವನದಲ್ಲಿ ತುಂಬಿದ ಸಕಾರಾತ್ಮಕತೆ ಇಂಥ ನೀರಿಕ್ಷೆಗಳನ್ನೇ ಕಡಿಮೆ ಮಾಡಿ ನಾನೆಂದೂ ಊಹಿಸದ ಜಗತ್ತಿಗೆ ನನ್ನನು ಪರಿಚಯಿಸಿತು.
ಈ ಯೋಗ ದಿನದಂದು ನನ್ನ ಮತ್ತು ಯೋಗದ ಬಾಂಧವ್ಯ, ನನಗೆ ಅದನ್ನು ಪರಿಚಯಿಸದ ಗುರುವಿನ ಕುರಿತು ನಿಮ್ಮೊಂದಿಗೆ ಹಂಚಿಕೊಳ್ಳೋಣ ಅನ್ನಿಸಿತು. ಇದರ ಜೊತೆಗೇ ಶ್ರೀವತ್ಸ ದೇಸಾಯಿಯವರು ತಮ್ಮ ಯೋಗ ಗುರುಗಳ ಬಗ್ಗೆ ಬರೆದ ಲೇಖನವನ್ನೂ ಲಗತ್ತಿಸಿದ್ದೇನೆ. ಅಮಿತಾ ರವಿಕಿರಣ (ಸಂ)



ನಾನು ಆಲಸಿ,ಪರಮಾಲಸಿ.ಹಾಗಂತ ಏನೂ ಮಾಡಲ್ಲ ಅಂತ ಅಲ್ಲ, ವ್ಯಾಯಾಮ, ನಡಿಗೆ, ನಿಗದಿತ ಸಮಯಕ್ಕೆ ಊಟ ಇವೆಲ್ಲ ನನ್ನ ಶಬ್ಧಕೋಶದಲ್ಲಿ ಇರಲೇ ಇಲ್ಲ. ಹಾಡು ಹೇಳೋದು, ರಂಗೋಲಿ ಕಸೂತಿ ಅಡುಗೆಮಾಡು ಫೋಟೋ ತಗಿ.. ಇಂಥದ್ದೆಲ್ಲ ಜೀವ ಬೇಜಾರಿಲ್ದೆ ಮಾಡ್ತಿತ್ತು. ದಿನಕ್ಕೆ 24 ಘಂಟೆಯೂ ನಾನು ಕುಳಿತುಕೊಂಡು ಇಂಥದ್ದೆಲ್ಲ ಮಾಡಬಲ್ಲೆ.

Self care, fit ಅನ್ನುವ ಪದಗಳ ಅರ್ಥ ಗೊತ್ತಾಗಲು ಕೆಲವು ಆರೋಗ್ಯ ಸಂಬಂಧಿ ಸಮಸ್ಯೆಗಳು ಶುರು ಆಗಬೇಕಾಯಿತು.
ತೂಕವಂತೂ ಮೊದಲನೇ ಹೆರಿಗೆ ಆದಾಗಿಂದ ಕಡಿಮೆಯೇ ಆಗಿರಲಿಲ್ಲ. ಆ ಮೊದಲೂ ನನ್ನನು ದಪ್ಪ ದಪ್ಪ ಅಂದು ನನ್ನ ಮನೆಮಂದಿಯಿಂದ ಹಿಡಿದು ರಸ್ತೆಯಲ್ಲಿ ಹೋಗೋ ಅಪರಿಚಿತರೂ ಕರೆಯುತ್ತಿದ್ದರಿಂದ, ದೇಹ ಹಿಂಜಿ ಅಳುತ್ತಿದ್ದರೂ ನಾನು ಆ ಕಡೆ ಗಮನ ಕೊಡಲಿಲ್ಲ.

ಇದೆಲ್ಲವಕ್ಕೆ ಕನ್ನಡಿ ಹಿಡಿದಿದ್ದು ಒಂದು ಫೋಟೋ.
ಕೋವಿಡ್ ಸಮಯ ಆ ದಿನ ಮಗಳ ಸ್ನೇಹಿತೆಯ birthday ಗೆ ಹೊರಟಿದ್ದೆ. ಕಪಾಟಿನಲ್ಲಿದ್ದ ಒಂದೇ ಒಂದು ಬಟ್ಟೆಯಲ್ಲಿ ನನಗೆ ಹೊಕ್ಕಲು ಸಾಧ್ಯವಾಗಲಿಲ್ಲ. ಇದ್ದಿದ್ದರಲ್ಲಿ ಯಾವುದೋ ಒಂದು top ಹಾಕಿ ಹೊರಟೆ ಅಲ್ಲಿ ನನ್ನ ಫೋಟೋ ಒಂದನ್ನ ನನ್ನ ಮಗಳು ಕ್ಲಿಕ್ಕಿಸಿದಳು.
ಮನೆಗೆ ಬಂದು ಆ ಫೋಟೋ ನೋಡಿದಾಗಲೇ ಮೊದಲ ಬಾರಿ ಅನಿಸಿದ್ದು. ಏನು ಮಾಡಿಕೊಂಡಿದ್ದೇನೆ ನಾನು. ದೇವರು ಸರ್ವರೀತಿಯಿಂದಲೂ ಒಳ್ಳೆಯ ಆರೋಗ್ಯವಂತ ದೇಹ ಕೊಟ್ಟಿದ್ದ, ಅದನ್ನ ನಾನು ಎಲ್ಲ ರೀತಿಯಿಂದಲೂ ಹಾಳು ಮಾಡಿಕೊಂಡಿದ್ದೆ.
ಆ ದಿನ ಕಣ್ಣೀರು ಪುಟಿದಿತ್ತು. self pity ಅಲ್ಲ ಅದು. ಬೇಜಾರು ,ಸಿಟ್ಟು, ನನಗೆ ನನ್ನ ಮೇಲೆಯೇ ಉಂಟಾದ ಅಸಮಾಧಾನ. ಆಗ ನನ್ನ BMI obese ಅಂತ ತೋರಿಸುತ್ತಿತ್ತು.

ಬದಲಾಗ ಬೇಕು ಎನ್ನುವ ಮನಸ್ಸಿದ್ದರೆ ಜೀವನದ ಕೊನೆ ಗಳಿಗೆಯಲ್ಲೂ ಬದಲಾಗಬಹುದಂತೆ, ನಾನು ಕೂಡ ಮನಸು ಘಟ್ಟಿ ಮಾಡಿಕೊಂಡೆ. ಏನಾದರಾಗಲಿ ನನ್ನ ಬಗ್ಗೆ ನಾನು ಸ್ವಲ್ಪ ಗಮನ ಕೊಡಬೇಕು ಎಂದು.
ಹೀಗಿರುವಾಗಲೇ ಧೃತಿ ಮಹಿಳಾ ಮಾರುಕಟ್ಟೆ ಎಂಬ ಫೇಸ್ಬುಕ್ ಗುಂಪಿನಲ್ಲಿ online yoga ತರಗತಿಗಳ ಬಗ್ಗೆ ಒಂದು ಪ್ರಕಟಣೆ ಇತ್ತು. ಅದನ್ನು ಹಾಕಿದ್ದು ನನಗೆ 9 ವರ್ಷಗಳಿಂದ facebook ಮೂಲಕ ಪರಿಚಯವಿದ್ದ ಪೂರ್ಣಿಮಕ್ಕ. ಪೂರ್ಣಿಮಾ ಗಿರೀಶ್.

ನನಗೆ ನನ್ನ ನಿರ್ಧಾರದ ಮೇಲೆ ನಂಬಿಕೆ ಇರ್ಲಿಲ್ಲ. ಆ ನಿರ್ಧಾರ ಬದಲಾಗೋ ಮೊದ್ಲು ನಾನು ಪೂರ್ಣಿಮಕ್ಕನಿಗೆ ಮೆಸೇಜ್ ಮಾಡಿ ಅವರ ಯೋಗಕ್ಲಾಸ್ ಗೆ ಸೇರಿಕೊಂಡೆ.
ಆ ದಿನ ನನಗೆ ಬುದ್ಧಿಕೊಟ್ಟ ದೇವರಿಗೆ ನಾ ಎಷ್ಟು ಧನ್ಯವಾದ ಹೇಳಿದರೂ ಕಡಿಮೆ.

ಅಷ್ಟು ತೂಕ ,ಕಾಲುಗಂಟು ನೋವು, ಎಲ್ಲ ಇದ್ದು ಯೋಗಾಸನ ಮಾಡುವುದು ಸುಲಭವಿರಲಿಲ್ಲ. 30 ಸೆಕೆಂಡ್ ವಜ್ರಾಸನದಲ್ಲಿ ಕುಳಿತರೆ ಉಸಿರು ಕಟ್ಟುತ್ತಿತ್ತು.
ಮನಸಿನ ಚಂಚಲತೆ ಬೇರೆ! ‘ಬಿಟ್ಟುಬಿಡು ಏನಕ್ಕೆ ಕಷ್ಟ ಪಡ್ತೀಯ’ ಅಂತಿತ್ತು. ‘ಇವತ್ತು ನಿಂಗ್ ತಲೆನೋವು,ಇವತ್ತು Netflix ನೋಡು, ಇವತ್ತು ಯಾಕೋ ತುಂಬಾ ಮೈ ಕೈ ನೋವು’ ಅಂತ ಹೇಳಿ ನನ್ನ ಕ್ಲಾಸ್ ತಪ್ಪಿಸಲು ವಿಧ ವಿಧವಾಗಿ ಪ್ರಯತ್ನ ಪಡುತ್ತಿತ್ತು. ಮನಸು ನನ್ನದೇ, ಬುದ್ಧಿಯೂ ನನ್ನದೇ. ದೇಹವೂ ನನ್ನದೇ. ಗೆಲ್ಲುತ್ತಿದ್ದುದು ಮಾತ್ರ ಪೂರ್ಣಿಮಕ್ಕನ ಜೊತೆ ಕಳೆಯಲು ಸಿಗುವ ಆ ಒಂದ ತಾಸಿನ ತರಗತಿಯಲ್ಲಿದ್ದ positivity.

ಒಂದು ದಿನವೂ ತಪ್ಪಿಸಲು ಆಗದಂಥ ಏನೋ ಮೋಡಿ ಮಾಡಿ ಕಟ್ಟಿಹಾಕಿದ್ದರು. ಹೇಗೆ ಸಾಧ್ಯ ಇದು? ಇಷ್ಟು ಅಡವುಗಚ್ಚಿ ನಾನು ಯಾವುದನ್ನೂ ಈ ಒರೆಗೂ ಮಾಡಿಯೇ ಇಲ್ಲ! ಇವರು ನನ್ನಿಂದ ಹೇಗೆ ಮಾಡಿಸ್ತಿದ್ದಾರೆ ಇಷ್ಟು ವ್ಯಾಯಾಮ, ಪ್ರಾಣಾಯಾಮ ಎಲ್ಲ? ಅನ್ನೋ ಪ್ರಶ್ನೆ ನನ್ನೊಳಗೆ ಮೂಡುತ್ತಿತ್ತು. ನಾನು ಅವರಿಗೆ ಶರಣಾಗಿದ್ದೆ. ಅವರು ನಿನಗೆ ಆಗುತ್ತೆ ಮಾಡು ಅಂದ್ರೆ ಅದು ಆಗುತ್ತೆ ಅಂತಾನೆ ಅರ್ಥ. ನಾನು ಮಾಡಿಯೇ ಬಿಡುತ್ತಿದ್ದೆ.

ಪಕ್ಕದ ರಸ್ತೆಯಲ್ಲಿದ್ದ ಅಂಗಡಿಯಿಂದ ಹಾಲು ಹಣ್ಣು ತರಲು ಅಳುತ್ತಿದ್ದ ನಾನು. ದಿನ 10,000 ಹೆಜ್ಜೆ ಹಾಕಲು ಶುರು ಮಾಡಿದೆ.
ಯಾರದೋ ಅನುಕಂಪ ಬಯಸುತ್ತಿದ್ದ ಮನಸು. ಈಗ ತನ್ನಷ್ಟಕ್ಕೆ ತಾನು ಖುಷಿಯಾಗಿರ್ತಿತ್ತು. 30 ಸೆಕೆಂಡ್ ವಜ್ರಾಸನದಲ್ಲಿ ಕುಳಿತುಕೊಳ್ಳಲು ಕಷ್ಟ ಪಡುತ್ತಿದ್ದ ನನ್ನನ್ನು. 23 ಕಿಲೋಮೀಟರ ವಾಕಥಾನ್(walkathon) ಮಾಡುವಷ್ಟು, ಅವರು Fit ಮಾಡಿದ್ರು. ಜೊತೆಗೆ ಸಮಾನಮನಸ್ಕ ಕನ್ನಡ ಗೆಳತಿಯರೂ ಕೂಡ ತುಂಬಾ ಪ್ರೋತ್ಸಾಹ ಕೊಡುತ್ತಿದ್ದರು.

ಲಂಡನ್ ನಗರದ ರಸ್ತೆಗಳಲ್ಲಿ ಒಂದು ಪೂರ್ತಿ ರಾತ್ರಿ 23 ಕಿಮೀ ನಡೆಯುತ್ತ ಒಂದು ರಾಶಿ ಫೋಟೋ ವಿಡಿಯೋ ಮಾಡಿಕೊಂಡು ಬಂದು “ನಾನು ಇಷ್ಟು ಕಿಲೋಮೀಟರ್ ನಡೆದೇ” ಅಂತ ದೊಡ್ಡಸ್ತಿಕೆ ತೋರಿಸೋಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆ.
Walk ಮುಗಿಸಿ medal ತಗೊಳೋ ಸಮಯಕ್ಕೆ ನಡಿಗೆಯ ಸುಸ್ತು ಕೂಡ ಮರೆತು ನಾನು ಹುಚ್ಚಿಯಂತೆ ಹಿಂದಿ ಹಾಡಿಗೆ ಕುಣಿದದ್ದನ್ನ ನನ್ನ ಸ್ನೇಹಿತೆಯರು ರೆಕಾರ್ಡ್ ಮಾಡಿದ್ದರು. ಅದನ್ನ ಮೊದಲು ಕಳಿಸಿದ್ದು ನನ್ನ ಪೂರ್ಣಿಮಕ್ಕನಿಗೆ.

ಅವರು ನನ್ನ ಖುಷಿ ನೋಡಿ,ಕಣ್ಣೀರಾದರು. “ತುಂಬಾ ಖುಷಿ ಆಯ್ತು ಅಮಿತಾ” ಅಂದು ಬಿಕ್ಕಿದರು.ನಾನೂ ಅತ್ತೆ. ಆ ಒಂದು ಕ್ಷಣದಲ್ಲಿ ನನ್ನ ಒಂದುವರೆ ವರುಷದ ಕಲಿಕೆ, ಕ್ಲಾಸ್ಸು, ಅಭ್ಯಾಸ,ನನ್ನ obese ದೇಹ ಅದು ಬದಲಾದ ರೀತಿ ಎಲ್ಲ ಒಮ್ಮೆ ಕಣ್ಣಮುಂದೆ ಬಂದು ಹೋಯಿತು. ಅಷ್ಟೇ! ನನಗೆ ನನ್ನ ಬಹುಮಾನ ಸಿಕ್ಕಿತ್ತು. ನಾನು ಆ ವಿಡಿಯೋ ಎಲ್ಲೂ share ಮಾಡಲೇ ಇಲ್ಲ.

ಪೂರ್ಣಿಮಕ್ಕ ನನ್ನ ಬಾಳಿಗೆ ಅವರ ಹೆಸರಿನಂತೆಯೇ ತಂಪು ಬೆಳದಿಂಗಳು. ಅವರು ಎಷ್ಟು ಮುದ್ದು ಮಾಡ್ತಾರೋ ಅಷ್ಟೇ ಕಟ್ಟುನಿಟ್ಟು, ನಿಷ್ಠುರ ಕೂಡ. ಅವರು ನನ್ನ ಬದುಕಲ್ಲಿ ತಂದ ಬದಲಾವಣೆ ಒಂದೆರಡಲ್ಲ. ಎಲ್ಲಕ್ಕಿಂತ ಮುಖ್ಯ ವಾದುದು ಬೆಳಿಗ್ಗೆ ಬೇಗ ಏಳುವಂತೆ ಮಾಡಿದ್ದು.
ಅವರು ನನಗೆ ಗೆಳತಿ, ಅಕ್ಕ, ಕೌನ್ಸಿಲರ್,ಸಮಾಧಾನ ಕೊಡೋ ಸನ್ನಿಧಿ.
ನಾನು ಮೇಲೆ ಕೊಟ್ಟ ಯಾವ ಕ್ರೆಡಿಟ್ಟು ಅವರು ತಗೊಳಲ್ಲ. ನಿನ್ನ ಶ್ರದ್ಧೆ ಅದು ಅಂತಾರೆ. ಆದರೆ ಮನಸ್ಸಿನಿಂದ ಹೇಳ್ತೀನಿ “ಪೂರ್ಣಿಮಕ್ಕ, ಅಲ್ಲದೇ ಇನ್ನಾರೂ ಈ ಮಟ್ಟಿಗಿನ ಬದಲಾವಣೆ ನನ್ನಲ್ಲಿ ತರಲು ಸಾಧ್ಯವಿರಲಿಲ್ಲ.”

ನನ್ನ ಮಗಳು ಯಾವಾಗ್ಲೂ ಒಂದು ಪ್ರಶ್ನೆ ಕೇಳ್ತಾಳೆ, ಅಮ್ಮ ನೀ ದೊಡ್ಡೋಳ್ ಆದ ಮೇಲೆ ಏನ್ ಆಗ್ತೀಯಾ ಅಂತ. ಮೊದಲೆಲ್ಲ ಈ ಪ್ರಶ್ನೆ ನಗು ತರಿಸುತ್ತಿತ್ತು. ಆದ್ರೆ ಈಗ ನನಗೇ ನಾನು ಹೇಳಿಕೊಳ್ಳುತ್ತೀನಿ ನನ್ನ ಆದ್ರೆ ಪೂರ್ಣಿಮಕ್ಕನ ಹಾಗೆ ಆಗ್ತೀನಿ ಎಂದು.

-ಅಮಿತಾ ರವಿಕಿರಣ

ಯೋಗ ಗುರು ಶ್ರೀಮತಿ ಪೂರ್ಣಿಮಾ ಗಿರೀಶ್


ಡಾ ಭಾಗೀರಥಿ ಕನ್ನಡತಿಯವರ ನೇತೃತ್ವದಲ್ಲಿ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ 


ಇಂದು ಜಗತ್ತಿನಲ್ಲಿ ಕನ್ನಡಿಗರು ಇರುವ ಎಲ್ಲ ದೇಶಗಳಲ್ಲಿ ಡಾ ಭಾಗೀರಥಿ ಕನ್ನಡತಿ ಅವರ ಹೆಸರು ಯೋಗದ ಪರ್ಯಾಯ ಶಬ್ದದಂತೆಯೇ ಗುರುತಿಸಲ್ಪಡುತ್ತದೆಯೆಂದರೆ ಅತಿಶಯೋಕ್ತಿಯಲ್ಲ. ಆ ರೀತಿಯಲ್ಲಿ ನಮ್ಮ ಸಂಸ್ಕೃತಿಯ ಮತ್ತು ದೈನಂದಿನ ಜೀವನದ ಒಂದು ಸ್ತಂಭವಾದ ಯೋಗದ ಬಗ್ಗೆಯ ತಿಳುವಳಿಕೆಯನ್ನು ಸಾವಿರಾರು ಜನರಲ್ಲಿ ಅಡವಳಿಕೆ ಮಾಡಿಕೊಳ್ಳುವದರಲ್ಲಿ ತಮ್ಮ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿದ್ದಾರೆ. ಇದರಿಂದ ಅವರ ಮತ್ತು ಯೋಗದ ಅನ್ಯೋನ್ಯ ಸಂಬಂಧ ಗೊತ್ತಾಗಬಹುದು.

ಕಳೆದ ಜೂನ್ 21ರಂದು ಅವರ ನೇತೃತ್ವದಲ್ಲಿ ಅವರ ಯೋಗ ಬಳಗದವರೆಲ್ಲ ಯೋಗ ದಿನಾಚರೆಣೆಯಲ್ಲಿ ಪಾಲುಗೊಂಡರು. ನಾನೂ ಸೇರಿಕೊಂಡಿದ್ದೆ.

ಕಟ್ಟೇಹೊಳೆಗ್ರಾಮದಿಂದ ವಸುಧೈವ ಕುಟುಂಬಕಮ್ ವರೆಗೆ!
ಅವರು ಹುಟ್ಟಿದ್ದು ಹಾಸನದ ಒಂದು ಕಟ್ಟೇಹೊಳೆ ಎಂಬ ಗ್ರಾಮದಲ್ಲಿ. ವಿಶ್ವದ ನಾಲ್ಕೂ ದಿಕ್ಕುಗಳಲ್ಲಿ ವಾಸಿಸುತ್ತಿರುವ ಕನ್ನಡಿಗರ ಮನೆಮನೆಯಲ್ಲೂ ಪ್ರತಿವಾರ, ಅಥವಾ ವಾರಕ್ಕೆರಡು ಮೂರು ಸಲ ಅಂತರ್ಜಾಲದ ಝೂಮ್ ಮುಖಾಂತರ ಸ್ವಾಗತಿಸಲ್ಪಡುವ ಭಾಗೀರಥಿಯವರ ಇಲ್ಲಿಯವರೆಗಿನ ”ಜರ್ನಿ’ ಒಂದು ದಂತಕಥೆಯೆನಿಸಿದರೆ ಆಶ್ಚರ್ಯವಿಲ್ಲ. ತನ್ನ ಅಜ್ಜಿಯ ಮನೆಯಲ್ಲಿ (ಅವರನ್ನು ಆಕೆ ’ಅವ್ವ’ ಎಂದೇ ಕರೆಯುತ್ತಾರೆ) ಬೆಳೆದರು. ಅವ್ವನ ನಾಟಿ ಔಷಧೋಪಚಾರದ ಪ್ರವೃತ್ತಿಯ ಹಿನ್ನೆಲೆಯಲ್ಲಿ ಸಮಾಜ ಸೇವೆಯ ಬೀಜ ಆವಾಗಲೇ ಅವರ ಮನದಲ್ಲಿ ಬಿತ್ತಿರ ಬೇಕು. ಹಳ್ಳಿಯ ಹೊಲದಲ್ಲಿ ಬಿತ್ತುವ ಸೀಸನ್ ಸಮಯ ಶಾಲೆಗೆ ಹೊರಟ ಬಾಲಕಿ ಭಾಗೀರಥಿಯ ಕೈಯಿಂದಲೇ ಹಳ್ಳಿಯ ಜನ ಮೊದಲ ಬೀಜವನ್ನು ಹೊಲದಲ್ಲಿ ಬಿತ್ತಿಸುತ್ತಿದ್ದರಂತೆ! ಆಕೆಯ ಕೈಗುಣಕ್ಕೆ ಅಂಥ ಪ್ರತೀತಿಯಿತ್ತು!  ಮುಂದೆ ಕಲಿಯಲು ಬೆಂಗಳೂರಿಗೆ ಬಂದಾಗ ಸರಿಯಾಗಿ ಇಂಗ್ಲಿಷ್ ಬರುತ್ತಿರಲಿಲ್ಲ ಅಂತ ಹೇಳಿದ್ದನ್ನು ಅವರ ಬಾಯಿಂದಲೇ ಕೇಳಿದ್ದೇನೆ. ಮುಂದೆ ಡಾಕ್ಟರಾಗ ಬೇಕೆನ್ನುವ ಅವರ ಮನೆಯ ಹಿರಿಯರ ಆಶಯ ಫಲಿಸಲಿಲ್ಲವಾದರೂ ಗೌರವ ಡಾಕ್ಟರೇಟ್ ಪಡೆದ ಅವರು ಅದರ ನೂರು ಪಾಲು ಹೆಚ್ಚು ದೇಹಗಳ ಸ್ವಾಸ್ಥ್ಯವನ್ನು ತಮ್ಮ ಯೋಗ ಶಿಕ್ಷಣದಿಂದ ಹೆಚ್ಚಿಸಿದ್ದಾರೆ.

ಮುರಿದ ಎಲುಬುಗಳು ಮತ್ತು ಯೋಗ ಜೋಡಿಸಿದ ಜೀವಗಳು
ಭಾಗೀರಥಿ ಅವರಿಗೆ 2010 ರಲ್ಲಿ ಆದ ಅಪಘಾತದಲ್ಲಿ ದೇಹದ ಬಲಭಾಗಕ್ಕೆ ತೀವ್ರ ಧಕ್ಕೆಯಾಗಿ ಭುಜದ ಎಲ್ಲ ಎಲುವುಗಳು ಮುರಿದು ತಿಂಗಳುಗಟ್ಟಲೆ ಹಾಸಿಗೆ ಹಿಡಿಯ ಬೇಕಾಯಿತು ಅಂತ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಆ ಅನಾಹುತವನ್ನೇ ವರದಾನವನ್ನಾಗಿ ಮಾಡಿಕೊಂಡು ಚೇತರಿಸುತ್ತ ಸ್ವಪ್ರಯತ್ನದಿಂದ ಯೋಗ ಪಟುವಾಗಿ ಮಾರ್ಪಟ್ಟು ಯೋಗದ ಸೇವೆಯೇ ಜನಾರ್ಧನನ ಸೇವೆಯೆನ್ನುವಂತೆ ಯೋಗವನ್ನು ಪ್ರಸಾರ ಮಾಡುತ್ತ, ವಿವಿಧ ಪ್ರಕಾರದ ವಿಕಲ್ಪಗಳ ಗುಣಮಾಡುತ್ತಿದ್ದಾರೆ. ದುಬೈದಲ್ಲಿದ್ದಾಗ ಕೋವಿಡ್ ಪಿಡುಗು ಇಡೀ ಮನುಕುಲವನ್ನೇ ಕಪಿಮುಷ್ಟಿಯಲ್ಲಿ ಹಿಡಿದು ಹಿಂಡುತ್ತ ಜೀವನೋಪಾಯಕ್ಕಾಗಿ ಜನ ತತ್ತಿರಿಸುತ್ತಿದ್ದಾಗ ಅವರು ಮುಂದಿನ ಮಾರ್ಗ ಹುಡುಕುವದರಲ್ಲಿದ್ದರು.

ಲಂಡನ್ ದಲ್ಲಿ ಸ್ಥಾಪನೆಯಾದ ಕನ್ನಡಿಗರು ಯು ಕೆಗೆ ಕೊಟ್ಟ ಕರೆ ಒಂದು ರೀತಿಯ ಸಹಾಯಹಸ್ತವಾಗಿ  ಪರಿವರ್ತಿಸಿದಾಗ ಅವರ ಪ್ರಥಮ ಯೋಗ ಶಿಬಿರದಲ್ಲಿ ನಾನೂ ಸೇರಿಕೊಂಡೆ. ಆಗ ಪ್ರಾರಂಭವಾದ ಅವರ ಯೋಗ ಕಲಿಕೆಯ ಪ್ರಚಾರ ಗರಿಗೆದರಿ ಈಗ ದೇಶವಿದೇಶಗಳ ಹದ್ದು ದಾಟಿ ಎಲ್ಲೆಡೆಗೆ ಪಸರಿಸಿದೆ. ಅದು ನಿಜವಾಗಿಯೂ ’ವಸುಧೈವ ಕುಟುಂಬಕಮ್’ ಎನ್ನುವ ಮಾತಿನಂತೆ (ಅದು ಕಳೆದ ವರ್ಷದ  ಅಂತರ್ರಾಷ್ಟ್ರೀಯ ಯೋಗ ದಿನದ ಧ್ಯೇಯ ವಾಕ್ಯವೂ ಆಗಿತ್ತು) ಎಲ್ಲರನ್ನು ಕೂಡಿಸಿದೆ. ಈ ವರ್ಷದ ಥೀಮ್ ( June 21, 2024) 'Yoga for Self and Society' ಅಂತ. ಮೂಲ ಸಂಸ್ಕೃತದ ಶಬ್ದ ಯೋಗ ಹುಟ್ಟಿದ್ದು ಯುಜ್ ಎನ್ನುವ ಧಾತುವಿನಿಂದ. ಅದರ ಅರ್ಥ - ಕೂಡಿಸು ಅಂತ. ದೇಹವನ್ನು ಮನಸ್ಸು-ಬುದ್ಧಿಯೊಂದಿಗೆ ಜೋಡಿಸುವ ಕ್ರಿಯೆ, ಅದು. ಅವರಿಗೆ ದೊರಕಿದ ಗೌರವ ಆರ್ಯ ಭಟ್ಟ ಡಾಕ್ಟರೇಟ್ ಪ್ರಶಸ್ತಿಯಲ್ಲದೆ, ಸಾವಿರಾರು ಕನ್ನಡೇತರಿಗೆ ಕನ್ನಡ ಕಲಿಸಿದ್ದಕ್ಕಾಗಿ ಕನ್ನಡಕ್ಕೆಸಾಹಿತ್ಯ ಪರಿಷತ್ತಿನಿಂದ ಹಿಡಿದು ಅನೇಕ ಸಂಸ್ಥೆಗಳ ಪ್ರಶಸ್ತಿಗಳು, ಇನ್ನೂ ಅನೇಕ ಸಹ, ಅವರು ಮಾಡಿದಸೇವೆಗಾಗಿ ಅವರನ್ನರಸಿ ಬಂದಿವೆ. (ಅವರ ಫೇಸ್ ಬುಕ್ ಜಾಲತಾಣನೋಡಿರಿ. https://www.facebook.com/WowPowerYoga). 

2014ರಲ್ಲಿ ಯುನೈಟೆಡ್ ನೇಷನ್ಸ್ ಜೂನ್ 21ನೆಯ ದಿನವನ್ನು (ಠರಾವು 69/131) ಅಂತರ್ರಾಷ್ಟ್ರೀಯ ಯೋಗ ದಿನವಾಗಿ ಘೋಷಿಸಿದ ನಂತರದ ಈ ವರ್ಷದ ಯೋಗ ದಿನದ ಸಲುವಾಗಿ ಅವರು ತಮ್ಮ ಎಲ್ಲ ಯೋಗಿ-ಯೋಗಿನಿಯರಿಗೆ ತಮ್ಮ ಫೇವರೈಟ್ ಯೋಗ ಆಸನದ ಫೋಟೋವನ್ನು ಅವರಿಗೆ ಕಳಿಸಿಕೊಡಲು ವಿಜ್ಞಾಪಿಸಿದಾಗ ಇಂಗ್ಲೆಂಡ್, ಯೂರೋಪ್, ಆಸ್ಟ್ರಲೇಷಿಯಾ, ಭಾರತ, ಅಮೇರಿಕ, ಕೊಲ್ಲಿ ದೇಶಗಳಲ್ಲಿರುವ (UAE) ಎಂಬತ್ತಕ್ಕೂ ಹೆಚ್ಚಿನ ಯೋಗ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಳಿಸಿದ   ತಂತಮ್ಮ ಆಸನಗಳ ಚಿತ್ರಗಳ ಸುರಿಮಳೆಯಾಯಿತು. ಅದರಲ್ಲಿ ಕೆಲವನ್ನು ಪತ್ರಿಕೆಗಳು ಪ್ರಕಟಿಸಿಯೂ ಬಿಟ್ಟವು. ಆ ಶಿಷ್ಯವೃಂದದ ವ್ಯಾಪ್ತಿ ಚಿಕ್ಕವಯಸ್ಸಿನ ಮಕ್ಕಳಿಂದ ಹಿಡಿದು ಎಪ್ಪತ್ತರ ವಯಸ್ಸಿನ ಹಿರಿಯರ ವರೆಗೆ. ಆದರೆ ಯೋಗ ಗುರುಮಾ ಎಂದೇ ಸಂಬೋಧಿಸಲ್ಪಡುವ ಗುರುವಿಗೆ ಎಲ್ಲರೂ ಕೂಸುಗಳೇ! ಅವರೆಲ್ಲರ ಮೇಲೆ ಅಷ್ಟೇ ಮಮತೆ. ನಾನು ಇದನ್ನು ಪ್ರತ್ಯಕ್ಷ ಅನುಭವಿಸಿದ್ದೇನೆ ಎಂತಲೇ ಇದನ್ನು ಬರೆಯುತ್ತಿದ್ದೇನೆ.ಇತ್ತೀಚೆಗೆ ಅವರ ಯೋಗ ಪಠನದ ಕಾರ್ಯ ಬೃಹದಾಕಾರದಲ್ಲಿ ವಿಸ್ತಾರಗೊಂಡಿದೆ. ಕರ್ನಾಟಕದ ಮೂಲೆ ಮೂಲೆಗಳ ಪೋಲೀಸು ಪಡೆಗಳಿಗೆ ಅವರು ಕೊಟ್ಟ ತರಬೇತಿಗಳಿಗೆ ಲೆಕ್ಕವಿಲ್ಲ! ಅವರ ಉತ್ಸಾಹ, ಆಸ್ಥೆ ಮತ್ತು ಶಕ್ತಿ ಅದಮ್ಯ. ಜೈ ಗುರುಮಾ! ಜೈ ಭಾರತ್, ಜೈ ಜಗತ್, ಜೈ ಯೋಗ!
- ಶ್ರೀವತ್ಸ ದೇಸಾಯಿ
2024
ಗುರು ಮಾ ಡಾ ಭಾಗೀರಥಿ ಕನ್ನಡತಿ