ಆತ್ಮೀಯ ಓದುಗರೇ,
ಈ ವಾರ ತಮ್ಮ ಓದಿಗೆ ಶ್ರೀಯುತ ವಿಜಯನರಸಿಂಹ ಅವರು ಶ್ರೀ ಶ್ರೀ ಸಿದ್ದಗಂಗಾ ಸ್ವಾಮೀಜಿ ಅವರ ಕುರಿತು ಬರೆದ ಕವಿತೆ ''ಸಿದ್ಧ ಪುರುಷ''.
ಮತ್ತು ಬದುಕು ಬದಲಿಸಿದ ಸರಣಿಗೆ ಅರ್ಪಿತಾ ಅಭಿರಾಮ ಅವರು ಇದೆ ಮೊದಲ ಬಾರಿಗೆ ಅನಿವಾಸಿಯಲ್ಲಿ ಬರೆದಿದ್ದಾರೆ.
ಈವಾರದ ಎರಡೂ ಬರಹಗಳು ಚುಟುಕಾಗಿದ್ದರೂ ಚುರುಕಾಗಿವೆ.
ಇದು ಅನಿವಾಸಿ ಸಂಪಾದಕಿಯಾಗಿ ನಾನು ನಿರೂಪಿಸುತ್ತಿರುವ ಕೊನೆಯ ಸಂಚಿಕೆ, ನನ್ನ ಸಂಪಾದಕತ್ವದ ಅವಧಿಯಲ್ಲಿ ಕಾಲಕಾಲಕ್ಕೆ ಅಕ್ಷರ ಬೊಕ್ಕಸಕ್ಕೆ ದೇಣಿಗೆ ಕಳಿಸಿ ಅಕ್ಷಯವಾಗಿಟ್ಟ ಎಲ್ಲ ಸಹೃದಯರಿಗೆ ಧನ್ಯವಾದಗಳು. ಮುಂದಿನ ವಾರದಿಂದ ಶ್ರೀಮತಿ ಗೌರಿ ಪ್ರಸನ್ನ ಅವರು ಅನಿವಾಸಿಯ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅವರಿಗೆ ಆದರದ ಸ್ವಾಗತ. ಅವರ ಸಾರಥ್ಯದಲ್ಲಿ ಅನಿವಾಸಿಯ ಅಕ್ಷರತೇರು ಮೆರೆಯಲಿ ಎಂಬ ಸದಾಶಯದೊಂದಿಗೆ, ಈ ವಾರದ ಸಂಚಿಕೆಗೆ ತಮಗೆಲ್ಲ ಸ್ವಾಗತ.
-ಸಂಪಾದಕಿ
ಸಿದ್ಧ ಪುರುಷ
-ವಿಜಯನರಸಿಂಹ
ಹೆತ್ತ ಮಕ್ಕಳ ಹಸಿವನು ನೀಗಿಸಲು ಕಷ್ಟ
ಎಂದರು ಹೆತ್ತವರು
ನಮ್ಮ ಬಳಿ ಕಳಿಸಿ, ಅನ್ನದ ಅಕ್ಷಯವಿದೆ
ಎಂದು ಕೈಬೀಸಿ ಕರೆದರು
ಅನ್ನಕ್ಕೆ ಸಾಕಾಗುತ್ತದೆ, ವಸನಕ್ಕೆ ಕಾಸಿಲ್ಲ
ಮಕ್ಕಳ ಮೈ-ಮಾನವ ಮುಚ್ಚಲಾರೆವು ಎಂದರು
ನಮ್ಮ ಬಳಿ ಕಳಿಸಿ ಮಾನಕ್ಕೆ ತಕ್ಕಂತೆ
ಮಿತಿಗೆ ಮೀರದಂತೆ ಪವಿತ್ರದ ಸಮವಸ್ತ್ರವ ತೊಡಿಸಿ
ನಿತ್ಯ ಮೈ ಮನಸು ಶುಚಿಯಾಗಲಿದೆ ಎಂದು
ಮನಬಿಚ್ಚಿ ಕರೆದರು
ಅಸನಕ್ಕೆ, ವಸನಕ್ಕೆ ಸಾಕಾದೀತಷ್ಟೆ, ವಿದ್ಯೆಗಿಲ್ಲ
ನಮ್ಮಲ್ಲಿ ವ್ಯವಸ್ಥೆಯಿಲ್ಲ, ಕಲಿಸುವವರಿಲ್ಲ ಎಂದರು
ನಮ್ಮ ಬಳಿ ಕಳಿಸಿ, ಜ್ಞಾನ ದೇಗುಲವು ಇಲ್ಲಿದೆ
ಶಿಕ್ಷಣದಿಂದ ಬದುಕು ಹಸನಾಗಲಿದೆ ಎಂದು
ಅಭಯಕೊಟ್ಟು ಕರೆದರು
ಕಾಯಕದಲಿ ಕೈಲಾಸ ಕಂಡು
ಅನ್ನ, ಅರಿವೆ, ಅಕ್ಷರದ ತ್ರಿದಾಸೋಹದ
ಹರಿಕಾರನಾಗಿ ಸಿದ್ಧಗಂಗೆಯ ಸಿದ್ಧಪುರುಷನಾದ
ಗುರುವೆ ಇದೊ ನಿಮಗೆ ಮನ ಬಾಗಿ ವಂದನೆ!
ಬದುಕು ಬದಲಿಸಿದ ಪುಸ್ತಕ
-ಶ್ರೀಮತಿ ಅರ್ಪಿತಾ ಅಭಿರಾಮ್
(ಅರ್ಪಿತಾ ಮೂಲತಃ ಶಿವಮೊಗ್ಗೆಯವರು, ಎಂ. ಟೆಕ್ ಪದವೀಧರೆಯಾದ ಇವರು ಪ್ರಸ್ತುತ ಬೆಲ್ಫಾಸ್ಟ್ ನಗರದಲ್ಲಿ ಪತಿ ಅಭಿರಾಮ್ ಮತ್ತು ಮಗಳು ಆರಭಿಯೊಂದಿಗೆ ವಾಸವಾಗಿದ್ದಾರೆ. ಮಧುರ ಕಂಠದ ಗಾಯಕಿ, ಸಾಹಿತ್ಯ ಪ್ರೇಮಿ.–ಸಂ)
ನನ್ನ ಬದುಕಿನ ಮೇಲೆ ಗಾಢ ಪರಿಣಾಮ ಬೀರಿದ ಒಂದೇ ಒಂದು ಪುಸ್ತಕವನ್ನು ಆಯ್ಕೆ ಮಾಡಬೇಕೆಂದರೆ ಅದು ಬಹಳ ಕಷ್ಟ ಏಕೆಂದೆರೆ ನನ್ನ ಬದುಕನ್ನ ರೂಪಿಸಿದ ಪುಸ್ತಕಗಳು ಅನೇಕ. ಅವಗಳಲ್ಲಿ ಒಂದನ್ನು ಹೇಳಲೇಬೇಕು ಅಂದರೆ ಅದು'ಯೋಗಿಯ ಆತ್ಮಕಥೆ'.
ಬಹುಶಃ ನಾನು ಹತ್ತು ವರ್ಷದವಳಿರುವಾಗ ಆ ಪುಸ್ತಕದ ಕೆಲವು ಪುಟಗಳನ್ನ ನನ್ನ ಮಾವನ ಮನೆಯಲ್ಲಿ ಓದಿದ್ದೆ. ಆಗಲೇ ಅದು ನನ್ನ ಮನದ ಮೇಲೆ ವಿಶೇಷವಾದ ಛಾಪನ್ನು ಬಿಟ್ಟಿತ್ತು.
ನಂತರ ನಾನು ಓದು ಮುಗಿಸಿ ಕೆಲಸಕ್ಕೆ ಹೋಗಲು ಶುರು ಮಾಡಿದಾಗ ಒಂದಷ್ಟು ಸಮಯ ಖಿನ್ನತೆಗೆ ಒಳಗಾಗಿದ್ದೆ. ಜೀವನ ನಿರರ್ಥಕ ನೀರಸ ಎನಿಸುತ್ತಿತ್ತು. ಉಣ್ಣು, ತಿನ್ನು, ಮಲಗು ಮತ್ತೆ ಕೆಲಸಕ್ಕೆ ಹೋಗು ಬರೀ ಇಷ್ಟೇನಾ ಜೀವನ ಎಂದೆನಿಸುತ್ತಿತ್ತು. ಎಲ್ಲ ಕಡೆ ಸಿಕ್ಕು ಸುಳಿಗಳು ಬಂಧನಗಳೇ ಕಾಣುತ್ತಿದ್ದವು. ಒಂದುಕಡೆ ಏನೋ ಸಂತೋಷ ಸಿಕ್ಕಿತು ಅನ್ನುವಷ್ಟರಲ್ಲಿ ಅದು ಮಾಯ. ಯಾವುದೂ ಶಾಶ್ವತವಲ್ಲ ಎಂಬ ಖಾಲಿ ಭಾವ ಆವರಿಸುತ್ತಿತ್ತು.
ಆ ಸಮಯದಲ್ಲಿ 'ಯೋಗಿಯ ಆತ್ಮಕಥೆ' ಹಾಗೂ ಅದಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನೂ ಓದಲು ಶುರುಮಾಡಿದೆ. ಆ ಓದು ನಾನು ಜೀವನವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಿತು. ಜೀವನದ ಹಲವು ಆಯಾಮಗಳನ್ನೂ ಕೆಲವು ನಿತ್ಯ,ನಿರಂತರ ಅಭ್ಯಾಸಗಳಿಂದ ಪರಿಶೋಧಿಸಬಹುದು ಎಂಬುದನ್ನ ತೋರಿಸಿಕೊಟ್ಟಿತು.
ಅಂದು ಪ್ರಾರಂಭಿಸಿದ ಆ ಅಭ್ಯಾಸ, ಸಾಧನಾ ಪಥ ಇಂದಿಗೂ ನನ್ನ ದೈಹಿಕ ಹಾಗೂ ಮಾನಸಿಕ ಆರೋಗ್ಯದಮೇಲೆ ಒಳ್ಳೆಯ ಪರಿಣಾಮ ಬೀರುತ್ತಲೇ ಬಂದಿದೆ.
ಇಂದಿಗೂ ಯಾವುದೇ ಗೊಂದಲದಲ್ಲಿದ್ದಾಗ ಆ ಪುಸ್ತಕದ ಪುಟವೊಂದನ್ನು ತೆರೆಯುತ್ತೇನೆ, ಪ್ರತಿಬಾರಿಯೂ ಮನಸಿಗೆ ಚೈತನ್ಯವನ್ನು ತುಂಬಿ ಸಮಸ್ಯೆ ಎದುರಿಸುವ ಉತ್ಸಾಹ ಧೈರ್ಯ ಆ ಪುಸ್ತಕ ತುಂಬುತ್ತದೆ.
ಪ್ರಿಯ ಓದುಗರೇ,
ಈ ವಾರ 'ಅನಿವಾಸಿ'ಯಲ್ಲಿ ನಿಮ್ಮ ಓದಿಗೆ, ಡಾ ಪ್ರೇಮಲತಾ ಅವರು ಬರೆದ ಶರದೃತುವಿನ ಕುರಿತಾದ ಚಂದದ ಕವಿತೆ ''ಶರತ್ಕಾಲ'' ಮತ್ತು ನಮ್ಮ ಬಳಗದ ಹೊಸ ಸದಸ್ಯೆ ವಿಜಯಲಕ್ಷ್ಮಿಶೇಡಬಾಳ್ ಅವರು ಬರೆದಿರುವ ''ಅಪ್ಪು ಅಣ್ಣನ ನೆನಪು'' ಎಂಬೆರೆಡು ಕವಿತೆಗಳಿವೆ. ಎಂದಿನಂತೆ ತಾವು ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿ. ಜೊತೆಗೆ ನಿಮ್ಮ ಬರಹಗಳನ್ನೂ ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ವಿನಂತಿಸುತ್ತ, ಈ ವಾರದ ಓದಿಗೆ ನಿಮಗಿದೋ ಸ್ವಾಗತ.
- ಸಂಪಾದಕಿ
ಚಿತ್ರ: ಅಮಿತಾ ರವಿಕಿರಣ್
ಶರತ್ಕಾಲ- ಡಾ ಪ್ರೇಮಲತಾ ಬಿ
ಹಿತಚಳಿ ಮೈ ನೇವರಿಸಿ
ನಿಂತೂ ನಿಲ್ಲದ ಮಳೆ ನೆನಪು
ಅದುರದುರಿ ಹಾರಾಡುವ ತರಗೆಲೆ
ಗಾಳಿ ಗುಡಿಸಲಾಗದ ಬಯಕೆ ಕಾವು
ಮಂದ್ರ ನದಿಯು ತೂಗಿ
ಅಲೆಗಳೆದ್ದ ಪರಿಗೆ
ದಂಡೆಗೂ ಅರೆಕ್ಷಣದ ಉದ್ವೇಗ
ಗತಿ ಬದಲಿಸಿ ಸಾಗುವ ಮಂದ ಮಾರುತ
ಮುಗಿಲ ಕಣ್ಣಾಮುಚ್ಚಾಲೆಯಲಿ ತಿಮಿರ
ನುಂಗಿದ ಸುವರ್ಣವದನ ಸೂರ್ಯ
ಬಾಣ ಹೂಡುತ ಬಾನ ಕತ್ತಲಲಿ
ತುಸು ಹೆಚ್ಚೇ ನಗುವ ಚಂದ್ರ
ಉದ್ದುದ್ದ ರಾತ್ರಿಯಲಿ ಹುಚ್ಚೆದ್ದು
ಕುಣಿವ ನೆರಳುಗಳು
ಬೆಳಕನೇ ಅಡವಿಟ್ಟು ಗೂಡು ಕಟ್ಟುತ
ಸಾಂದ್ರವಾಗುವ ಒಳ ಕೂಗು
ಎಲೆಗೆಲೆಯು ಓಕುಳಿಯಾಟ
ವನವೆಲ್ಲ ವರ್ಣರಂಜಿತ
ಮಂಜುಕಟ್ಟುವ ಬೆಳಗಿಗು
ಕಣಿವೆಯಲೇಳುವ ಮುಗಿಲಿಗು
ಮೈ ತುಂಬಿಕೊಂಡ ಸಂತಸ
ಹಗಲ ತಬ್ಬುತ ಇಳಿವ ಕತ್ತಲೆ
ಕಡುಕಪ್ಪು ಅಗಾಧ ಈ ಕೌತುಕ
****************************
ಶ್ರೀಮತಿ ವಿಜಯಲಕ್ಷ್ಮಿ ಶೇಡಬಾಳ್– ಅಬರ್ಡೀನ್ ಸ್ಕಾಟ್ಲೆಂಡ್ ನಲ್ಲಿ ವಾಸವಿರುವ ಇವರು ಮೂಲತಃ ರಾಯಚೂರಿನವರು. ವಾಣಿಜ್ಯೋದ್ಯಮಿಯಾಗಿರುವ ಇವರಿಗೆ ಸಂಗೀತ, ಬರವಣಿಗೆ ಮೆಚ್ಚಿನ ಹವ್ಯಾಸ.
ಅಣ್ಣ ಅಪ್ಪುವಿನ ನೆನಪುಗಳು - ವಿಜಯಲಕ್ಷ್ಮಿ ಶೇಡಬಾಳ್
ಅಣ್ಣ ಆಪ್ಪು, ನೀ ಕೊಂಚ ಕಪ್ಪು।
ನಿನ್ನ ಹೃದಯ ವಜ್ರಕ್ಕಿಂತಲೂ ಹೊಳಪು।।
ಅಪ್ಪು ಅಣ್ಣ, ನಿನ್ನ ಅಪ್ಪ ಅಮ್ಮ ಬಿಟ್ಟು ಹೋದರೂ ಸದಾ ಅವರ ನೆನಪು ನಿನಗೆ।
ಈಗ ಹೇಳು ಆ ತರಹದ ನೆನಪುಗಳನ್ನು ಪೂರ್ತಿ ಮಾಡದೆ ಅರ್ಧದಲ್ಲೆ ಅವಸರದಲಿ ಏಕೆ ಬಿಟ್ಟು ಹೋದೆ ನಿನ್ನ ಮಕ್ಕಳನು
ಅಪ್ಪು ಅಣ್ಣ, ಸಾವಿರಾರು ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಪರಿಹಾರ ಕೊಟ್ಟೆ
ಕರೋಡಪತಿಯಾದ ನೀನು ನಿನ್ನ ಮಗಳ ಉನ್ನತ ಶಿಕ್ಷಣ ಮಾಡಲು
ಕಷ್ಟ ಪಟ್ಟು ವಿದ್ಯಾರ್ಥಿವೇತನ ಪಡೆಯುವ ಶೈಲಿಯ ಕಲಿಸಿಕೊಟ್ಟೆ
ಅಪ್ಪು ಅಣ್ಣ, ಕೋವಿಡ್ ಸಮಯದಲಿ ದುಡ್ಡು ಇರುವವರ ಕೈ ಹಾಗೂ ಮನಸ್ಸು ಚಿಕ್ಕದಾಗಿಬಿಟ್ಟಿತ್ತು
ಆದರೆ ಆ ಸಮಯದಲಿ ನೀನು ಮಾಡಿದ ಧಾನ ಎಷ್ಟು ದೊಡ್ದದು, ನಿನ್ನ ಕೈ ಹಾಗೂ ಮನಸ್ಸು ಎಷ್ಟು ವಿಷಾಲವಾದದು ಎಂದು ತೋರಿಸಿಬಿಟ್ಟಿತು।।
ಅಪ್ಪು ಅಣ್ಣ, ನೀನು ನಗು ಬಾರದಿದ್ದವರಿಗೆ ನಿನ್ನ ನಟನೆಯ ಮೂಲಕ ನಗೆಸಿ ಬಿಟ್ಟೆ ।
ನೀನು ಯೋಗ್ಯವಾದ ಕಥೆ ಹಾಗೂ ಅಭಿನಯದ ಮೂಲಕ
ನಮ್ಮೆಲ್ಲರ ಪರಿವಾರಗಳಲಿ ಪರಸ್ಪರ ಪ್ರೀತಿ ಹುಟ್ಟಿಸಿ ರಾಜಕುಮಾರ ನೀನಾದೆ।।
ಅಪ್ಪು ಅಣ್ಣ, ನೀನು ಮಾಡಿದ ಅತ್ಯಮೂಲ್ಯ ಪರಿಕಲ್ಪನೆಯ ಜಾಹಿರಾತುಗಳಾದ
ಶಿಕ್ಷಣ, Kmf Nandini ಹಾಲು ಅಥವಾ Pothys Go Green Kannada ಯಾರೂ ಮಾಡಿಲ್ಲಾ ।
ನಿನ್ನನ್ನು POWER STAR ಎಂದು ಸುಮ್ಮನೆ ಕರೆಯಲು ಸಾಧ್ಯವಿಲ್ಲಾ ।।
ಅಪ್ಪು ಅಣ್ಣ, ನೀನು ಆರಂಭಿಸಿದ ಆಶ್ರಮಗಳಿಗೆ ಮುಂದಾಲೋಚನೆ
ಮಾಡಿ ಸದಾ ಸುರಕ್ಷಿತವಾಗಿರಲು ಹೆಚ್ಚು ಪರಿಹಾರವ ಕೊಟ್ಟು ಕ್ಷೇಮವಾಗಿಟ್ಟೆ ।
ಆದರೆ, ಈಗ ಹೇಳು ನೀ ಗೆದ್ದಿರುವ ಕೊಟ್ಯಾoತರ ಹೃದಯಗಳಿಗೆ ಹೇಗೆ ಸಮಾಧಾನ ಪಡಿಸುವೆ?
ಅಪ್ಪು ಅಣ್ಣ, ಹೋಗುತ್ತಾ ಅಂಧರಿಗೆ ನಿನ್ನ ಕಣ್ಣು ಕೊಟ್ಟೆ ।
ಇನ್ನು ನಮಗೆ ಬರೀ ನಿನ್ನ ನೆನಪುಗಳು ಮಾತ್ರವೇ?
**************************************