ಮನಸೆಂಬ ಮಾಯಾವಿಗೆ ಕೊಟ್ಟ ಮಾತು ತಪ್ಪಲಾಗದ ಅನಿವಾರ್ಯತೆಯಿಂದಲೂ, ಬದುಕುವ ಛಲದಿಂದಲೂ,ಕಛೇರಿಗೆ ಕಾಲನ್ನೋ ಕಾರನ್ನೋ ಎಳೆದುಕೊಂಡು ಹೋಗಿ, ದಿನವೆಲ್ಲಾ ದುಡಿದು ಚಿಂತೆ ಆತಂಕ,ಆಯಾಸಗಳು ಮೇಳೈಸಿರುವ ಬೇಸರವೆಂಬ ಬೇತಾಳವನ್ನು ಬೆನ್ನಿಗೇರಿಸಿಕೊಂಡು ಮರಳಿ ಮನೆಗೆ ಬಂದಿರುವ ಆಧುನಿಕ ಯುಗದ ವಿಕ್ರಮಾದಿತ್ಯರಾದ ನಿಮ್ಮೆಲ್ಲರಿಗೆ ನಿಮ್ಮ ಬೇಸರ ಕಳೆಯುವಂಥ ಕವಿತೆ ಹೇಳುತ್ತೇನೆ ಕೇಳಿ.
ಜಿ.ಎಸ್.ಶಿವಪ್ರಸಾದರು ಬರೆದ ಈ ಕವಿತೆಯನ್ನು ಓದುತ್ತಾ ಸಾಗಿದರೆ , ಭಾಷೆಯ ಸೌಂದರ್ಯದಿಂದಲೂ, ವಿಷಯ ಲಾಲಿತ್ಯದಿಂದಲೂ ಇದ್ದೂ ಇರದಂತೆ ಸುಪ್ತವಾಗಿರುವ ವಿಡಂಬನೆಯಿಂದಲೂ ಖಂಡಿತವಾಗಿಯೂ ನಿಮ್ಮ ಆಯಾಸ ಪರಿಹಾರವಾಗುತ್ತದೆ. ಪದ್ಯವನ್ನು ಓದಿ ಮುಗಿಸಿದಾಗ ಅದು ಯಾರನ್ನು ಕುರಿತು ಎಂಬ ರಹಸ್ಯ ನಿಮಗೆ ತಾನೇ ತಾನಾಗಿ ಹೊಳೆದಿರುತ್ತದೆ. ಇದನ್ನು ಓದಿ, ಉತ್ತರದ ಜೊತೆಗೆ ವಿಮರ್ಶೆಯನ್ನು ನಮ್ಮ ಜಾಲಜಗುಲಿಯಲ್ಲಿ ಬಿತ್ತರಿಸದೇ ಇದ್ದ ಪಕ್ಷದಲ್ಲಿ, ಜಡತ್ವವನ್ನು ತೊರೆದು ಬರೆಯದೇ ಹೋದಲ್ಲಿ ನಿಮ್ಮಲ್ಲಿ ಅಡಗಿ ಕುಳಿತಿರುವ ತಾಮಸ (ಆಲಸಿ ಪ್ರವೃತ್ತಿ) ಗುಣ ನುಚ್ಚುನೂರಾಗಿ ಸಿಡಿದು ಹೋದೀತು ……………. ಎಂದ ಅನಿವಾಸಿ ಕವಿತೆಯನ್ನು ತಮಗೆಲ್ಲರಿಗೂ ಪ್ರಸ್ತುತಪಡಿಸತೊಡಗಿತು……….
ಹೀಗೂ ಒಬ್ಬ ರಾಜಕುಮಾರ

ಚಾಣಾಕ್ಷ, ಸುಂದರಾಂಗ, ಸದ್ಗುಣ ಸಂಪನ್ನ
ಪರಿಸರ ಪ್ರೇಮಿ
ಬಹು ಜನಪ್ರಿಯ ರಾಜಕುಮಾರ

ವಿಜೃಂಭಣೆಯ ದಶಕದ ಮದುವೆ
ಬೆಡಗಿನ ಹೆಂಡತಿಯ ಪ್ರೀತಿಸಲಾರದೆ
ಓರ್ವಪ್ರೇಮಿಗೆ ಕಾದು
ಪ್ರೇಮಲೋಕದಲ್ಲಿ ಕೈಗೊಂಡ ವನವಾಸ!
ಸ್ವರ್ಗಸ್ಥ ಹೆಂಡತಿಯಾದಳು
ಸಾಮಾನ್ಯರ ಕನಸಿನ ರಾಣಿ
ಮೊಮ್ಮಗ ಹುಟ್ಟಿದ್ದರೂ ತಾನು
ಇನ್ನು ರಾಜಕುಮಾರ!
ದೊರೆಯ ಪಟ್ಟಕ್ಕೆ
ಯಾವ ಯುದ್ಧವನ್ನು ಹೊಡಬೇಕಿಲ್ಲ
ಪಿತೂರಿ ಕೊಲೆಗಳ ಅಗತ್ಯವಿಲ್ಲ
ಯಾವ ನಾಡನ್ನು ಜಯಿಸಬೇಕಿಲ್ಲ
ಜಪಿಸಬೇಕು ಸಹನೆ ನಿರೀಕ್ಷೆಯ ಮಂತ್ರಗಳು
ಎಂಥ ಅನಿವಾರ್ಯ ರಾಜ ಸೂತ್ರಗಳು
ಗೆಲುವಿನಲ್ಲೂ ಇದೆಂತಹ ಸೋಲು
ದೊರೆಯಾಗುವ ಕನಸು ಮಾತ್ರ ತನ್ನ ಪಾಲು!
Dr.G.S.Shivaprasad.


