ಮತ್ತೊಂದು ಕಳ್ಳತನದ ಕಥೆ!

 ಆತ್ಮೀಯ ಓದುಗರೇ, 
ಈ ವಾರ ಮತ್ತೊಂದು ಕಳ್ಳತನದ ಕಥೆ ನಿಮ್ಮ ಓದಿಗೆ ಸಿದ್ಧವಿದೆ, ಅನಿವಾಸಿಯ ಹಿರಿಯ ಸದಸ್ಯರಲ್ಲೊಬ್ಬರಾದ ಡಾ ಶ್ರೀರಾಮುಲು ಅವರು ತಮ್ಮ ಮನೆಗೆ ಕಳ್ಳರಿಂದ ಕರುಣಿಸಲ್ಪಟ್ಟ ‘ಶ್ರೀವತ್ಸ’ದ ಕುರಿತು ಹಾಸ್ಯಮಯ ಘಟನೆಯನ್ನು ಅನನ್ಯ ಶೈಲಿಯಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಡಾ ಶ್ರೀವತ್ಸ ದೇಸಾಯಿಯವರು ರಸವತ್ತಾದ ವಿವರಣೆಯನ್ನು ನೀಡಿ, ಡಾ ಗುಡೂರ್ ಅವರ ವ್ಯಂಗ್ಯಚಿತ್ರಗಳು, ಬರಹಗಳಿಗೆ  ಮತ್ತಷ್ಟು ಮೆರುಗನ್ನು ತಂದಿದೆ.  
ಈ ವಾರದ ಓದಿಗೆ ತಮಗಿದೊ ಸ್ವಾಗತ.
-ಸಂಪಾದಕಿ 

।।ಸರ್ವಂ ಶ್ರೀವತ್ಸಮಯಂ।। – ಡಾ ಶ್ರೀರಾಮುಲು

ಚಿತ್ರ: ಡಾ ಎಲ್ಲೆನ್ ಗುಡೂರ್
ಅನಿವಾಸಿಯ ಇತರ ಬರಹಗಾರರ ಕಳ್ಳರ ಕಥೆಗಳನ್ನು ಕೇಳಿ ನನಗೂ ಒಂದು ಪ್ರಸಂಗ ಜ್ಞಾಪಕಕ್ಕೆ ಬಂತು. ನನ್ನ ಲೇಖನ ಸ್ವಲ್ಪ ಲೇಟ್ ಆಯಿತು ಅನಿಸಿತು. ಆದರೆ ಕಳ್ಳತನಕ್ಕೆ ಭೂತವೇನು, ವರ್ತಮಾನವೇನು ಅಥವಾ ಭವಿಷ್ಯವೇನು?
ಒಬ್ಬ ಫ್ಯೂನರಲ್ ಡೈರೆಕ್ಟರ್ ಹೇಳಿದ್ದು ನೆನಪಿಗೆ ಬರುತ್ತದೆ: 'You know doc, ours is never a dying trade!' ಅಂತ ಕಳ್ಳತನವು ಅದೇ ಗುಂಪಿಗೆ ಬರುತ್ತದೆ ಅನಿಸುತ್ತದೆ. ಈ ಉದ್ಯೋಗ ಅಂದರೆ ಅಪಹರಣ, ಕಳ್ಳತನ ಇತ್ಯಾದಿ. ಅದರ ವಸ್ತು, ರೂಪ, ಅಥವಾ ವಿಧಾನ ಸ್ವಲ್ಪ ಬದಲಾಗಿರಬಹುದು ಈ ಕಳ್ಳರು ಹಿಂದೆಯೂ ಇದ್ದರೂ, ಈಗಲೂ  ಇದ್ದಾರೆ ಮತ್ತು ಮುಂದೆಯೂ ಇರುತ್ತಾರೆ. ತ್ರೇತಾಯುಗದಲ್ಲಿ ರಾಮ ಕಳೆದುಕೊಂಡ. ದ್ವಾಪರ ಯುಗದಲ್ಲಿ ಗೋಗ್ರಹಣವಾಯಿತು. ಇದು ಕಲಿಯುಗ, ಇನ್ನೂ ದುಷ್ಟ ಕಾಲ!  ನನ್ನ ನಿಷ್ಠಾವಂತ ಮಡದಿಗೆ ವಿಷ್ಣುಸಹಸ್ರನಾಮದ ಮೇಲೆ ಅಪಾರ ನಂಬಿಕೆ. ಆದರೂ ನಮ್ಮ ಮನೆಯಲ್ಲೇ ಶ್ರೀವತ್ಸ ಉದ್ಭವಿಸುತ್ತಾನೆಂದು ಮಾತ್ರ ಕನಸಿನಲ್ಲಿಯೂ ಎಣಿಸಿಸಿರಲಿಲ್ಲ. ಮುಂದೆ ಓದಿ, ಎಲ್ಲ ತಿಳಿಯಾಗುತ್ತದೆ.

 ಆಗತಾನೆ ಈಗ ವಾಸವಾಗಿರುವ ಮನೆಗೆ ಬಂದಿದ್ದವು. ಒಂದು ಬೆಳಗ್ಗೆ ಮಹಡಿಯಿಂದ ಇಳಿದುಬಂದೆ ಅಡಿಗೆಮನೆಯಿಂದ ಗ್ಯಾರೇಜ ಗೆ ಹೋಗುವ  ಹಿಂದಿನ ’ಬಾಗಿಲು’  ಏನೋ ವಿಚಿತ್ರವಾಗಿ ಕಾಣುತ್ತಿತ್ತು;  ಬೆಳಗಿನ ಮಂಪರ. ಒಂದೆರಡು ಕ್ಷಣಗಳಲ್ಲಿ ತಿಳಿಯಿತು ಬಾಗಿಲದ ಅಗಲಕ್ಕೂ ಒಂದು  ಹೊಸ ಕಿಂಡಿ ಹುಟ್ಟಿದೆ ಅಂತ - ಕನಕನ ಕಿಂಡಿಯಲ್ಲದಿದ್ದರೂ, ಮನೆಯಲ್ಲಿರದ ಕನಕ ಕದಿಯಲು ಬಂದ ಕಳ್ಳನ ಕಿಂಡಿ! ದಿಕ್ಕು ತೋಚದೆ ತೊದಲುತ್ತ ಪೋಲಿಸ್ ಗೆ ಫೋನ್ ಮಾಡಿದೆ. ನನ್ನ ಕಳ್ಳತನದ ಪ್ರಕರಣದ ಕರೆಯನ್ನು ನಿರೀಕ್ಷಿತ್ತಿದ್ದರು ಎಂಬಂತೆ ಪೋಲಿಸ್ ದ್ವಯರು ಬಂದೇಬಿಟ್ಟರು. ಒಬ್ಬನ ಮೊಟ್ಟಮೊದಲನೆ ಪ್ರಶ್ನೆ: 'You have got a nice house! What do you do for living?'  ಆಗ ತಾನೆ ಗೃಹ ಪ್ರವೇಶ ಮಾಡಿದ ಮನೆಯ ನವ್ಯ ಕಾರ್ಪೆಟ್ಗಳು, ತೂಗು ದೀಪಗಳನ್ನು (ಶಾಂಡೆಲಿಯರ್) ಬೆರಗುಗಣ್ಣಿನಿಂದ ನೋಡಿದ ಅವನಿಗೆ ಆಶ್ಚರ್ಯವಾಗಿರಬೇಕು. ಕಳ್ಳನ ಮನಸ್ಸಿನಲ್ಲೂ ಅದೇ ಪ್ರಶ್ನೆಯೆದ್ದಿದ್ದಕ್ಕೇ ಕನ್ನ ಹಾಕಿರಬೇಕಲ್ಲವೆ?  ಈಗ ಮೂವತ್ತು  ವರ್ಷಾದಮೇಲೆ  ಬಂದು ಕಣ್ಣು ಹಾಯಿಸಿ ಮಾಸಿದ ಓಡಾಡಿ ಪೆಟ್ಟುಬಿದ್ದ ಕಾರ್ಪೆಟ್, ಬೆಳಗಲು ಬೇಡವೋ ಅಂತ ಹಿಂಜರಿಯುವ ಲೈಟ್ಗಳನ್ನು ನೋಡಿದರೆ ’ಯಾವಾಗ ರಿಟೈರ್  ಆದರಿ’ ಅಂತ ಕೇಳುತ್ತಾನೇನೋ! ಆತನ ಜೊತೆಗಿದ್ದ ಇನ್ನೊಬ್ಬಾತ ಕೊಟ್ಟ ಸಾಂತ್ವನ ಪರ ಮಾತು ಕೇಳಿ: I know this is work of  south Yorkshire gang. They use Bunsen like burner to get in. They specialise in it ಅಂತ ಸುಟ್ಟ ಬಾಗಿಲಿನತ್ತ ಬೊಟ್ಟು ಮಾಡಿ ಹೇಳಿದ. ಬರ್ನರ್ನಿಂದ ಕಟ್ಟಿಗೆಯ ಬಾಕಿಲಿಗೆ ಕೊರೆದ ರಂಧ್ರ ನನ್ನನ್ನೇ ಕಬಳಿಸುವಂತೆ ಬಾಯಿ ತೆಗೆದುಕೊಂಡು ಆ’ಕಳಿಸುತ್ತಿತ್ತು! ಇನ್ಸಿಡೆಂಟ್ ನಂಬರ್  ಕೊಟ್ಟು ಹೊರಟೇಬಿಟ್ಟರು.

ಈ ವಿಚಾರ ಹೇಳಿದಾಗ ನನ್ನ ಸಹೋದ್ಯೋಗಿ ಆ ಪೊಲೀಸರ  ಹೆಸರುಗಳು ಗೊತ್ತೇ ಅಂದ. ಅದಕ್ಕೆ ನನ್ನ ಉತ್ತರ ಅವರು ನನ್ನ ಹೆಸರು ಕೇಳಲಿಲ್ಲ ನಾನು ಅವರ ಹೆಸರುಗಳನ್ನೂ ಕೇಳಲಿಲ್ಲ , quits,ಅಂದೆ. ಯಾವಾಗಲು ಅವರ ಡೀಟೇಲ್ಸ್ ತಿಳಿದುಕೊಳ್ಳುವುದು ಒಳ್ಳೆಯದು ಅಂತ ಕಿರು ಉಪದೇಶ ಕೊಟ್ಟ. ಆದ್ರೆ ಮನೆಯಲ್ಲಿಂದ ಏನೂ ಕಳುವಾದಂತೆ ಕಾಣಲಿಲ್ಲ. ಹಾಗೆ ಕಳುವಾಗಿದ್ದರೂ, ಅದರ ಅವಶ್ಯಕತೆ ಬೀಳಲೇ ಇಲ್ಲ. ಬಹುಶಃ ಆತನನ್ನು ಅಥವಾ ಕಳ್ಳರನ್ನು ಏನೋ ಡಿಸ್ಟರ್ಬ್ ಮಾಡಿರಬಹುದು. ಅದು ಮಹಡಿಯ ಮೇಲೆ ಮಲಗಿದ್ದ ನನ್ನ ಗೊರಕೆಯೋ, ಬಡಬಡಿಕೆಯೋ ಇರಲೂ ಬಹುದು! ತಮ್ಮ ಕೆಲಸವನ್ನು ಅರ್ಧಕ್ಕೇ ಬಿಟ್ಟು ಓಡಿ ಹೋಗಿರಬಹುದೆ ಎನಿಸುತ್ತದೆ. ನನ್ನ ಅದೃಷ್ಟ ತೆರೆದುಕೊಂಡಿತ್ತು! ಇನ್ಶೂರನ್ಸ್ ಕಂಪೆನಿಯಿಂದ ಹೊಸ ಬಾಗಿಲು ಏನೋ ಬಂತು.

 ಇನ್ನು ಶ್ರೀವತ್ಸನ ಮಾತು?  ಅನಿವಾಸಿಯಲ್ಲಿ ದೇಸಾಯಿಯವರು ಕಳ್ಳತನದ ಈ ಸರಣಿಯಲ್ಲಿ ಬರೆದ ಲೇಖನವೇನೋ ನಮ್ಮ ಮನೆಯ ಘಟನೆಯನ್ನು ನೆನಪಿಸಿತು, ಸರಿ. ಇನ್ನೊಂದು  ಸಂಬಂಧವೆಂದರೆ ಸಂಸ್ಕೃತ ಮತ್ತು ಕನ್ನಡದ ನಿಘಂಟು ತೆಗೆದು ನೋಡಿರಿ. ಶ್ರೀವತ್ಸ ಶಬ್ದಕ್ಕೆ ವಿಷ್ಣುವನ್ನು ಬಿಟ್ಟು ಇನ್ನೊಂದು ಅರ್ಥ ಕನ್ನ ಹಾಕುವ ಕಳ್ಳ ಮನೆಗೆ ಕೊರೆದ ಒಂದು ’ವಿಶಿಷ್ಟ ತರದ’ ತೂತು ಎಂದು. ಸರ್ವಂ ವಿಷ್ಣು ಮಯಂ ಅಥವಾ ಸರ್ವಂ ಶ್ರೀವತ್ಸಮಯಂ.
ಚಿತ್ರ : ಡಾ ಎಲ್ಲೆನ್ ಗುಡೂರ್

ಶ್ರಿರಾಮುಲು ಅವರ ’ಕಳ್ಳನ ಕಿಂಡಿ’ ಲೇಖನಕ್ಕೆ ಒಂದು ಟಿಪ್ಪಣಿ – ಡಾ ಶ್ರೀವತ್ಸ ದೇಸಾಯಿ
ಸಂಪಾದಕಿಯ ಸೌಜನ್ಯದಿಂದ ಮೇಲಿನ ಲೇಖನ ನನ್ನ ಅವಗಾಹನೆಗೆ ಬಂದಿತು. ಶ್ರಿರಾಮುಲು ಅವರು ಸರಣಿಯ ಪ್ರಾರಂಭದಲ್ಲಿಯ ನನ್ನ ಲೇಖನವನ್ನು ಉಲ್ಲೇಖಿಸುತ್ತಾರೆ. ಅದನ್ನು ಓದಿದಾಗ ನನಗೆ ನೆನಪಾದುದು ಅಂಗ್ಲ ಭಾಷೆಯ ಪ್ರಚಲಿತ ನುಡಿಗಟ್ಟು: hoist by his own petard, ಅಂತ. ಅಂದರೆ ತನ್ನ ಕಾರುಬಾರು ತನಗೇ ಕುತ್ತಾಗಿ ಬಂದುದು, ಎನ್ನುವ ಅರ್ಥದಲ್ಲಿ. ನಿಮ್ಮ Yo-Yo ನಿಮ್ಮ ಮುಖಕ್ಕೇ ಬಂದು ಅಪ್ಪಳಿಸಿದಂತೆ ಅಥವಾ ಆಸ್ಟ್ರೇಲಿಯದ ಆದಿವಾಸಿ ಒಗೆದ ಬೂಮರ್ಯಾಂಗ್ ಅತನಿಗೇ ಗಾಯ ಮಾಡಿದಂತೆ. ಈ ನುಡಿಗಟ್ಟಿನ ಮೂಲದ ಜಾಡನ್ನು ಹಿಡಿದು ಹೋದಾಗ ಅನೇಕ ಸ್ವಾರಸ್ಯಕರ ಸಂಗತಿಗಳು ತಿಳಿದವು. ಹ್ಯಾಮ್ಲೆಟ್ ನಾಟಕದಲ್ಲಿ ಈ ವಾಕ್ಯ ಬರುತ್ತದೆ. ತಾನು ಹಚ್ಚಿದ ’ಪಿಟಾರ್ಡ್’ (ಕೈಬಾಂಬು) ತನ್ನನ್ನೇ ಕೊಲ್ಲಲು ಹೊರಟಂತೆ, ಅಂತ ಇದನ್ನು ಅರ್ಥೈಸಬಹುದು. ಅವೆಷ್ಟೋ ಶೇಕ್ಸ್ಪಿಯರನ ಮಾತುಗಳು ಇಂದಿಗೂ ಬಳಕೆಯಲ್ಲಿದ್ದು ಅದನ್ನರಿಯದೆ ನಾವು ಪ್ರತಿದಿನವೂ ಬಳಸುತ್ತಿರುತ್ತೇವೆ. ಉದಾ: foregone conclusion, the world’s my oyster, good riddance ಇತ್ಯಾದಿ. OED (ಅಧಿಕೃತ ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿಯ) ಪ್ರಕಾರ: Petard: A small bomb made of a metal or wooden box filled with powder, used to blow in a door, gate, etc., or to make a hole (ಶ್ರೀವತ್ಸ?) in a wall. ಫ್ರೆಂಚ್ ಭಾಷೆಯ pétarade ಆ ಶಬ್ದದ ವ್ಯುತ್ಪತ್ತಿ ಅಂತ ಕೆಲವರ ವಾದ. ಆ ಪದದ ಇನ್ನೊಂದು ಅರ್ಥ ಸಂಸ್ಕೃತದ ’ಪರ್ದತೇ’ ಶಬ್ದಕ್ಕೆ ಹತ್ತಿರವಾಗಿದೆ. ಅಂದರೆ ಅಪಾನವಾಯುವನ್ನು ಬಿಡುವುದು ಎನ್ನುವ ’ಹ’ಕಾರದ ಶಬ್ದ! ಇಲ್ಲಿ ನನ್ನ ಮಿತ್ರ ಶ್ರಿರಾಮುಲು ಅವರು ನನ್ನ ಬಗ್ಗೆ ’he’s an old fart’ ಅಂತ ಉದ್ಗಾರ ತೆಗೆಯುತ್ತಿದ್ದಾರೆಯೇ?

ಕಥೆ ಮತ್ತು ಕವಿತೆ.

ಪ್ರಿಯ ಓದುಗರೇ , 
ಈ ವಾರ ಅನಿವಾಸಿಯಲ್ಲಿ ಮತ್ತೊಂದು ''ಕಳ್ಳತನ'' ಕುರಿತಾದ ನಗು ಉಕ್ಕಿಸುವ ಬರಹವಿದೆ. ಶ್ರೀಮತಿ ಗೌರಿ ಪ್ರಸನ್ನ ಅವರು ತಮ್ಮ ಬಾಲ್ಯದ ಅನುಭವವೊಂದನ್ನ ಅವರ ಅನನ್ಯ ಶೈಲಿಯಲ್ಲಿ ನಮಗೆಂದು ಉಂಡೆಕಟ್ಟಿ ತಂದಿದ್ದಾರೆ.
ಜೊತೆಗೆ ಶ್ರೀಮತಿ ರಮ್ಯಾ ಭಾದ್ರಿ ಅವರು ಶರದ್ಕಾಲದಲ್ಲಿ ಇಮ್ಮಡಿಯಾಗುವ ಭೂರಮೆಯ ರಮ್ಯತೆಯನ್ನು,ತಮ್ಮ ಕವಿತೆಯಲ್ಲಿ ಪೋಣಿಸಿ ಅನಿವಾಸಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. 
ಈ ವಾರದ ಓದಿಗೆ ತಮ್ಮೆಲ್ಲರಿಗೆ  ಸ್ವಾಗತ. 
- ಸಂಪಾದಕಿ 
ಚಿತ್ರ: ಅಮಿತಾ ರವಿಕಿರಣ್

ಗಡ್ಡ ಎಳೆದವನಿಗೆ ಮಿಠಾಯಿ- ಶ್ರೀಮತಿ ಗೌರಿ ಪ್ರಸನ್ನ

ಅನಿವಾಸಿಯಲ್ಲಿ  ಈ ಕಳ್ಳತನದ ರೋಚಕ ಕಥೆಗಳನ್ನೆಲ್ಲ  ಓದಿ ನನಗೂ ನಮ್ಮ ಕಳ್ಳತನದ ಪ್ರತಾಪಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಮನಸ್ಸಾಗುತ್ತಿದೆ.ಕೇಳುತ್ತೀರಲ್ಲವೇ?

   ಅದು ಎಂಬತ್ತರ ದಶಕ. ನಾನು 12-13 ರ ಹುಡುಗಿ. ಮನೆಯಲ್ಲಿ ನನ್ನ ಮಾಂಶಿ(ಚಿಕ್ಕಮ್ಮ)ಯ ಬಾಣಂತನ ನಡೆದಿತ್ತು. ಬಾಣಂತಿ ಮನಿ ಎಂದ ಮೇಲೆ ಅಂಟಿನುಂಡೆ, ಕೇರಡಿಕೆಗಳಿರಲೇಬೇಕಲ್ಲವೇ? ನಾವು ಮನೆತುಂಬ ನಾಲ್ಕಾರು ಮಕ್ಕಳು, ಬರಹೋಗುವವರು ಎಲ್ಲರಿಗೂ ಬೇಕಾಗುತ್ತದೆಂದು ಬಾಣಂತಿಯ ಲೆಖ್ಖದ ಉಂಡಿಗಳನ್ನು ಬೇರೆಡೆ ಎತ್ತಿಟ್ಟು, ನಮಗೆಲ್ಲ ಮಾಸಲೆ ನೋಡಲು ಒಂದು, ಎರಡು ಕೊಟ್ಟು ಉಳಿದ ಸುಮಾರು 40-50 ಉಂಡಿಗಳನ್ನು ಎರಡು ಅಮುಲ್ ಸ್ಪ್ರೇ ಡಬ್ಬಿಗಳಲ್ಲಿ ಹಾಕಿ ಮುಕಾಟಲೆ ದೇವರ ಮಾಡದ ಹತ್ತಿರವಿದ್ದ ಇಷ್ಷುದ್ದದ ಮಾಡದಲ್ಲಿ ಹಿಂದಕ್ಕೆ ಸರಿಸಿ ಮುಚ್ಚಿಟ್ಟಿದ್ದಳು ನಮ್ಮ ಓಣ್ಯಾಯಿ. (ಅಜ್ಜಿ) ಅಲ್ಲಿಡಲು ಬಲವಾದ ಕಾರಣಗಳಿದ್ದವು. ಅಲ್ಲೇ ದೇವರ ಮಾಡ, ಪಕ್ಕದಲ್ಲೇ ಕೆಳಗಡೆ ಮಡಿನೀರು ಇರುವುದರಿಂದ ಮಕ್ಕಳಾರೂ ಆ ಕ್ಷೇತ್ರದತ್ತ ಸುಳಿಯುತ್ತಿರಲಿಲ್ಲ. ಅಲ್ಲದೇ ಉದ್ದ ಮೀಸೆಯ ಜೊಂಡಿಗವೋ, ಕಟಕ್ಕನೇ ಕೈಹಿಡಿದು ಬಿಡುವ ಕಟ್ಟಿರುವೆಯೋ, ಅಗಾಧ ಉರಿಯೆಬ್ಬಿಸಿಬಿಡುವ ಕೆಂಪಿರುವೆ-ಕೆಂಜಗವೋ, ಕೊಂಡಿಯೆತ್ತಿ ಕುಟುಕಿ ಸರಭರ ಓಡಿಹೋಗುವ ಚೇಳೋ  ಯಾವಾಗ ಬೇಕಾದರೂ ಪ್ರತ್ಯಕ್ಷವಾಗಿಬಿಡುವ  ಉದ್ದೋಉದ್ದಕ್ಕೆ ಇರುವ ಆ ಮಾಡದಲ್ಲಿ ಕೈ ಹಾಕುವ ಧೈರ್ಯವೂ ನಮಗಾರಿಗೂ ಇರಲಿಲ್ಲ ಅನ್ನಿ. ಆದರೆ ಈ ಉಂಡಿಯ ಮಾಸಲೆ ತೋರಿಸಿದ್ದೇ ನಮ್ಮಾಯಿ. ಮಾಡಿದ್ದ ತಪ್ಪಾಗಿತ್ತು. ಮನುಷ್ಯರ ರಕ್ತದ ರುಚಿ ಹತ್ತಿದ ನರಭಕ್ಷಕ ಹುಲಿಯಂತೆ ನಮ್ಮ ಜಿಹ್ವೆಗಾಗಲೇ ಅಂಟಿನುಂಡೆಯ ರುಚಿ ನೆಟ್ಟು ಬಿಟ್ಟಿತ್ತು.

   ಆಯ್ತು. ಇದಾಗಿ ಎಂಟ್ಹತ್ತು ದಿನಗಳಾಗಿರಬಹುದೇನೋ? ನೆಂಟರ, ಬೀಗರ ಗುಂಪೊಂದು ಕೂಸು-ಬಾಣಂತಿಯನ್ನು ನೋಡಲು ಬಂದಿತ್ತು. ಚಾ-ಪಾನಿ ಮುಗಿಸಿ ಹೊರಟುನಿಂತ ಅವರಿಗೆ ಪದ್ಧತಿಯಂತೆ ಕುಂಕುಮದೊಡನೆ ಅಂಟಿನುಂಡೆ, ಕೇರಡಿಕ ಕೊಡಬೇಕೆಂದು ಡಬ್ಬಿ ತೆಗೆದ ಅಜ್ಜಿಯ ಕೈಗೆ ಹತ್ತಿದ್ದು ತಳದಲ್ಲಿ ಅಲ್ಲಲ್ಲಿ  ಚದುರಿಬಿದ್ದಿದ್ದ ಗೇರುಬೀಜ, ಉತ್ತತ್ತಿಯ ತುಣುಕುಗಳು. ಗಾಬರಿಬಿದ್ದ ಅಜ್ಜಿ ಪಕ್ಕಕ್ಕಿದ್ದ ಇನ್ನೊಂದು ಡಬ್ಬಿ ತೆರೆದರೆ ಅದರಲ್ಲೂ ತನ್ನ ಬಳಗದ ಅಳಿದುಳಿದ ಅವಶೇಷಗಳ ಮಧ್ಯೆ ಅನಾಥವಾಗಿ ಡಬ್ಬಿಯ ಮೂಲೆಯಲ್ಲಿ ಬಿದ್ದಿದ್ದ ಒಂಟಿ ಅಂಟಿನುಂಡೆ. ಅಂತೂ ಬಾಣಂತಿ ಖೋಲಿಯಲ್ಲಿಟ್ಟಿದ್ದ ಉಂಡಿಗಳನ್ನೇ ಕೊಟ್ಟು ನೆಂಟರನ್ನು ಸಾಗಹಾಕಿ ತೆಹಕೀಕಾತ್ ನಡೆಸಲಾಗಿ ನನ್ನ ಮಾಮಾನ ಮಗ ಮೂರ್ತಿಯೇ ಆ ಕಳ್ಳರ ಗುಂಪಿನ ನಾಯಕನೆಂಬುದಾಗಿ ಪತ್ತೆ ಹಚ್ಚಲಾಯಿತು. ಅವನ ಹಿಂದೆ ನಾನು, ನನ್ನ  ಸಣ್ಣ ಸೋದರ ಮಾವ ಎಲ್ಲರೂ ಆ ಕಳ್ಳತನದ ಕಾಯಕದಲ್ಲಿ ಸ್ವಯಂಪ್ರೇರಣೆಯಿಂದ ಭಾಗಿಗಳಾಗಿ ಶಕ್ತಿ ಮೀರಿ ದುಡಿದಿದ್ದೆವು.

  ನಮ್ಮಜ್ಜಿ ಸಣ್ಣಗೆ ಗದರಿದರೂ ‘ಅಲ್ರೋ, ಅದ್ಯಾವ ಮಾಯದಾಗ ಎಲ್ಲಾ ತಿಂದ್ರ್ಯೋ?’ ಅಂತ ಅಚ್ಚರಿಪಟ್ಟಿದ್ದಲ್ಲದೇ ಒಂದೊಂದು ಬಾಣಂತಿ ಮೀಸಲಿನ ಉಂಡಿಯನ್ನು ನಮ್ಮ ಕೈಗಿಟ್ಟಾಗ ನನಗೆ ಅನಿರೀಕ್ಷಿತವಾಗಿ ದೊರೆತ ಉಂಡಿಗಾಗಿ ಖುಷಿಯಾದರೂ ‘ಕಳುವಿನಂಥ ಕೆಟ್ಟ ಕೆಲಸ ಮಾಡಿದ್ದಲ್ಲದೇ ಸಿಕ್ಕಿಯೂ ಬಿದ್ದೆನಲ್ಲ’ ಎಂಬ ಅಪರಾಧೀಭಾವ, ಅಪಮಾನದಿಂದಾಗಿ ಕೈಯುಂಡೆ ಕಳುವಿನುಂಡೆಯಷ್ಟು ರುಚಿಯಾಗದೇ ಯಾಕೋ  ಸ್ವಲ್ಪ ಕಹಿಯೆನ್ನಿಸಿತು. ಆದರೆ ನನ್ನ ತಮ್ಮ ಮೂರ್ತಿ ಮಾತ್ರ ‘ಗಡ್ಡ ಎಳೆದವನಿಗೆ ಮಿಠಾಯಿ’ ಕೊಟ್ಟ ದೊರೆಸಾನಿ ನಮ್ಮಜ್ಜಿಯ ಮಡಿಲಲ್ಲಿ ಕುಳಿತು ಉಂಡಿ ಮೆಲ್ಲುತ್ತಿದ್ದ.

ಕೊನೆಯದಾಗಿ ಒಂದು ಮಾತು. ನನ್ನನ್ನು ಉಂಡಿ ಕಳ್ಳಿ ಅಂತ ಕರೆವ ಮುಂಚೆ ಒಮ್ಮೆ ಜ್ಞಾಪಿಸಿಕೊಳ್ಳಿ. ನಿಮ್ಮನ್ನೂ ಚಿಕ್ಕಂದಿನಲ್ಲಿ ಅಮ್ಮ,ಅಪ್ಪ, ಅಜ್ಜ,ಅಜ್ಜಿ ಯಾರಾದರೂ ’ಛೀ ಕಳ್ಳಾ’ಎಂದು ಕರೆದೇ ಕರೆದಿರುತ್ತಾರೆ. ಅಂದಮೇಲೆ ನೀವೂ ಒಂದರ್ಥದಲ್ಲಿ ನನ್ನ ವೃತ್ತಿ ಬಾಂಧವರೇ ಆದಿರಿ ತಾನೇ?!

****************************************************

ಚಿತ್ರ : ಅಮಿತಾ ರವಿಕಿರಣ್

ಭೂ ಬನದ ಬಣ್ಣಗಳು – ಶ್ರೀಮತಿ ರಮ್ಯಾ ಭಾದ್ರಿ

ಕಣ್ಣಿನ ದೃಷ್ಟಿಗೆ ರಂಗೇರಿದಿಯೆ? ಇಲ್ಲ, ದೃಶ್ಯವೇ ವರ್ಣರಂಜಿತವಾಗಿದಿಯೇ?
ಅಥವಾ ದೃಷ್ಟಿಯ, ದೃಶ್ಯದ ಸಮ್ಮಿಲನದಿ ಸುರಿದ ಬಣ್ಣದೋಕುಳಿಯೇ?

ಚಿಗುರೆಲೆಗಳೆಲ್ಲಾ ಹಣ್ಣಾಗಿ, ಮಣ್ಣಾಗುವ ಕೊನೆಯ ಕ್ಷಣಗಳಲ್ಲಿ 
ವನದೇವತೆಯನ್ನು ಮದುಮಗಳಾಗಿ ಕಣ್ಣಾರೆ ಕಾಣುವ ಹಂಬಲದಿ ಸಿಂಗರಿಸಿರಬಹುದೆ?

ಬಿರುಸಾಗಿ ಬೀಸುವ ಗಾಳಿಗೆ ಸಿಲುಕುವ ಮುನ್ನ ಉಡುಗೊರೆಯಾಗಿ,  
ಹಣ್ಣೆಲೆಗಳೆಲ್ಲ ಒಂದಾಗಿ ತಾವೇ ಬಣ್ಣಗಳ ಗುಚ್ಛವಾಗಿ ತೋರುವ ಸಮರ್ಪಣಾ ಭಾವವೇ?

ಈ ಸೊಬಗಿನ ರೂಪರಾಶಿಗೆ ಕನ್ನಡಿಯಂತೆ,
ಸೊಗಸನ್ನು ಹನಿಹನಿಯಲ್ಲೂ ಪ್ರತಿಬಿಂಬಿಸುತ ಹೊಳೆ ಹೊಳೆಯುವ ಹೊಳೆಯೇ,

ಝುಳು ಝುಳುಯಂದು ಹರಿಯುತ್ತಾ, ನುಲಿಯುತ್ತಾ, 
ಗುನುಗುವ ಮಂಜುಳ ಗಾನಕ್ಕೆ ವನವೆಲ್ಲ ತಲೆದೂಗಿ ಚಪ್ಪಾಳೆಯ ಹೂಮಳೆ ಗೆರೆದಿರುವುದೇ?

ಹಗಲ ಗಗನದಲ್ಲಿ ಮೂಡಿದ ಕಾಮನಬಿಲ್ಲು ಹೂಡಿದ ಬಣ್ಣದ ಬಾಣಗಳಿರಬಹುದೆ?
ಇರುಳ ಆಗಸದಲ್ಲಿ ಸುಡು ಮದ್ದು ಸಿಡಿದು ಬಿಡಿಸುವ ರಂಗೋಲಿಗೆ ಇದೆ ಪ್ರೇರಣೆಯೇ?

ಹೇಗೆ ಬಣ್ಣಿಸಿದರೂ ವರ್ಣನಾತೀತ ಈ ಲಾವಣ್ಯ
ಈ ಸೊಬಗ ಸವಿಯುವ ನಯನಗಳೆ ಧನ್ಯ
ತೆರೆದ ಕಣ್ಗಳ ತುಂಬಾ ತುಂಬಿಕೊಂಡ ಸೌಂದರ್ಯ
ಕಣ್ಮುಚ್ಚಿದರೂ ಮನದಲ್ಲಿ ಅಚ್ಚಾಗುವ ನಿಸರ್ಗವೇ ಆಶ್ಚರ್ಯ