ಮತ್ತೊಂದು ಕಳ್ಳತನದ ಕಥೆ!

 ಆತ್ಮೀಯ ಓದುಗರೇ, 
ಈ ವಾರ ಮತ್ತೊಂದು ಕಳ್ಳತನದ ಕಥೆ ನಿಮ್ಮ ಓದಿಗೆ ಸಿದ್ಧವಿದೆ, ಅನಿವಾಸಿಯ ಹಿರಿಯ ಸದಸ್ಯರಲ್ಲೊಬ್ಬರಾದ ಡಾ ಶ್ರೀರಾಮುಲು ಅವರು ತಮ್ಮ ಮನೆಗೆ ಕಳ್ಳರಿಂದ ಕರುಣಿಸಲ್ಪಟ್ಟ ‘ಶ್ರೀವತ್ಸ’ದ ಕುರಿತು ಹಾಸ್ಯಮಯ ಘಟನೆಯನ್ನು ಅನನ್ಯ ಶೈಲಿಯಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಡಾ ಶ್ರೀವತ್ಸ ದೇಸಾಯಿಯವರು ರಸವತ್ತಾದ ವಿವರಣೆಯನ್ನು ನೀಡಿ, ಡಾ ಗುಡೂರ್ ಅವರ ವ್ಯಂಗ್ಯಚಿತ್ರಗಳು, ಬರಹಗಳಿಗೆ  ಮತ್ತಷ್ಟು ಮೆರುಗನ್ನು ತಂದಿದೆ.  
ಈ ವಾರದ ಓದಿಗೆ ತಮಗಿದೊ ಸ್ವಾಗತ.
-ಸಂಪಾದಕಿ 

।।ಸರ್ವಂ ಶ್ರೀವತ್ಸಮಯಂ।। – ಡಾ ಶ್ರೀರಾಮುಲು

ಚಿತ್ರ: ಡಾ ಎಲ್ಲೆನ್ ಗುಡೂರ್
ಅನಿವಾಸಿಯ ಇತರ ಬರಹಗಾರರ ಕಳ್ಳರ ಕಥೆಗಳನ್ನು ಕೇಳಿ ನನಗೂ ಒಂದು ಪ್ರಸಂಗ ಜ್ಞಾಪಕಕ್ಕೆ ಬಂತು. ನನ್ನ ಲೇಖನ ಸ್ವಲ್ಪ ಲೇಟ್ ಆಯಿತು ಅನಿಸಿತು. ಆದರೆ ಕಳ್ಳತನಕ್ಕೆ ಭೂತವೇನು, ವರ್ತಮಾನವೇನು ಅಥವಾ ಭವಿಷ್ಯವೇನು?
ಒಬ್ಬ ಫ್ಯೂನರಲ್ ಡೈರೆಕ್ಟರ್ ಹೇಳಿದ್ದು ನೆನಪಿಗೆ ಬರುತ್ತದೆ: 'You know doc, ours is never a dying trade!' ಅಂತ ಕಳ್ಳತನವು ಅದೇ ಗುಂಪಿಗೆ ಬರುತ್ತದೆ ಅನಿಸುತ್ತದೆ. ಈ ಉದ್ಯೋಗ ಅಂದರೆ ಅಪಹರಣ, ಕಳ್ಳತನ ಇತ್ಯಾದಿ. ಅದರ ವಸ್ತು, ರೂಪ, ಅಥವಾ ವಿಧಾನ ಸ್ವಲ್ಪ ಬದಲಾಗಿರಬಹುದು ಈ ಕಳ್ಳರು ಹಿಂದೆಯೂ ಇದ್ದರೂ, ಈಗಲೂ  ಇದ್ದಾರೆ ಮತ್ತು ಮುಂದೆಯೂ ಇರುತ್ತಾರೆ. ತ್ರೇತಾಯುಗದಲ್ಲಿ ರಾಮ ಕಳೆದುಕೊಂಡ. ದ್ವಾಪರ ಯುಗದಲ್ಲಿ ಗೋಗ್ರಹಣವಾಯಿತು. ಇದು ಕಲಿಯುಗ, ಇನ್ನೂ ದುಷ್ಟ ಕಾಲ!  ನನ್ನ ನಿಷ್ಠಾವಂತ ಮಡದಿಗೆ ವಿಷ್ಣುಸಹಸ್ರನಾಮದ ಮೇಲೆ ಅಪಾರ ನಂಬಿಕೆ. ಆದರೂ ನಮ್ಮ ಮನೆಯಲ್ಲೇ ಶ್ರೀವತ್ಸ ಉದ್ಭವಿಸುತ್ತಾನೆಂದು ಮಾತ್ರ ಕನಸಿನಲ್ಲಿಯೂ ಎಣಿಸಿಸಿರಲಿಲ್ಲ. ಮುಂದೆ ಓದಿ, ಎಲ್ಲ ತಿಳಿಯಾಗುತ್ತದೆ.

 ಆಗತಾನೆ ಈಗ ವಾಸವಾಗಿರುವ ಮನೆಗೆ ಬಂದಿದ್ದವು. ಒಂದು ಬೆಳಗ್ಗೆ ಮಹಡಿಯಿಂದ ಇಳಿದುಬಂದೆ ಅಡಿಗೆಮನೆಯಿಂದ ಗ್ಯಾರೇಜ ಗೆ ಹೋಗುವ  ಹಿಂದಿನ ’ಬಾಗಿಲು’  ಏನೋ ವಿಚಿತ್ರವಾಗಿ ಕಾಣುತ್ತಿತ್ತು;  ಬೆಳಗಿನ ಮಂಪರ. ಒಂದೆರಡು ಕ್ಷಣಗಳಲ್ಲಿ ತಿಳಿಯಿತು ಬಾಗಿಲದ ಅಗಲಕ್ಕೂ ಒಂದು  ಹೊಸ ಕಿಂಡಿ ಹುಟ್ಟಿದೆ ಅಂತ - ಕನಕನ ಕಿಂಡಿಯಲ್ಲದಿದ್ದರೂ, ಮನೆಯಲ್ಲಿರದ ಕನಕ ಕದಿಯಲು ಬಂದ ಕಳ್ಳನ ಕಿಂಡಿ! ದಿಕ್ಕು ತೋಚದೆ ತೊದಲುತ್ತ ಪೋಲಿಸ್ ಗೆ ಫೋನ್ ಮಾಡಿದೆ. ನನ್ನ ಕಳ್ಳತನದ ಪ್ರಕರಣದ ಕರೆಯನ್ನು ನಿರೀಕ್ಷಿತ್ತಿದ್ದರು ಎಂಬಂತೆ ಪೋಲಿಸ್ ದ್ವಯರು ಬಂದೇಬಿಟ್ಟರು. ಒಬ್ಬನ ಮೊಟ್ಟಮೊದಲನೆ ಪ್ರಶ್ನೆ: 'You have got a nice house! What do you do for living?'  ಆಗ ತಾನೆ ಗೃಹ ಪ್ರವೇಶ ಮಾಡಿದ ಮನೆಯ ನವ್ಯ ಕಾರ್ಪೆಟ್ಗಳು, ತೂಗು ದೀಪಗಳನ್ನು (ಶಾಂಡೆಲಿಯರ್) ಬೆರಗುಗಣ್ಣಿನಿಂದ ನೋಡಿದ ಅವನಿಗೆ ಆಶ್ಚರ್ಯವಾಗಿರಬೇಕು. ಕಳ್ಳನ ಮನಸ್ಸಿನಲ್ಲೂ ಅದೇ ಪ್ರಶ್ನೆಯೆದ್ದಿದ್ದಕ್ಕೇ ಕನ್ನ ಹಾಕಿರಬೇಕಲ್ಲವೆ?  ಈಗ ಮೂವತ್ತು  ವರ್ಷಾದಮೇಲೆ  ಬಂದು ಕಣ್ಣು ಹಾಯಿಸಿ ಮಾಸಿದ ಓಡಾಡಿ ಪೆಟ್ಟುಬಿದ್ದ ಕಾರ್ಪೆಟ್, ಬೆಳಗಲು ಬೇಡವೋ ಅಂತ ಹಿಂಜರಿಯುವ ಲೈಟ್ಗಳನ್ನು ನೋಡಿದರೆ ’ಯಾವಾಗ ರಿಟೈರ್  ಆದರಿ’ ಅಂತ ಕೇಳುತ್ತಾನೇನೋ! ಆತನ ಜೊತೆಗಿದ್ದ ಇನ್ನೊಬ್ಬಾತ ಕೊಟ್ಟ ಸಾಂತ್ವನ ಪರ ಮಾತು ಕೇಳಿ: I know this is work of  south Yorkshire gang. They use Bunsen like burner to get in. They specialise in it ಅಂತ ಸುಟ್ಟ ಬಾಗಿಲಿನತ್ತ ಬೊಟ್ಟು ಮಾಡಿ ಹೇಳಿದ. ಬರ್ನರ್ನಿಂದ ಕಟ್ಟಿಗೆಯ ಬಾಕಿಲಿಗೆ ಕೊರೆದ ರಂಧ್ರ ನನ್ನನ್ನೇ ಕಬಳಿಸುವಂತೆ ಬಾಯಿ ತೆಗೆದುಕೊಂಡು ಆ’ಕಳಿಸುತ್ತಿತ್ತು! ಇನ್ಸಿಡೆಂಟ್ ನಂಬರ್  ಕೊಟ್ಟು ಹೊರಟೇಬಿಟ್ಟರು.

ಈ ವಿಚಾರ ಹೇಳಿದಾಗ ನನ್ನ ಸಹೋದ್ಯೋಗಿ ಆ ಪೊಲೀಸರ  ಹೆಸರುಗಳು ಗೊತ್ತೇ ಅಂದ. ಅದಕ್ಕೆ ನನ್ನ ಉತ್ತರ ಅವರು ನನ್ನ ಹೆಸರು ಕೇಳಲಿಲ್ಲ ನಾನು ಅವರ ಹೆಸರುಗಳನ್ನೂ ಕೇಳಲಿಲ್ಲ , quits,ಅಂದೆ. ಯಾವಾಗಲು ಅವರ ಡೀಟೇಲ್ಸ್ ತಿಳಿದುಕೊಳ್ಳುವುದು ಒಳ್ಳೆಯದು ಅಂತ ಕಿರು ಉಪದೇಶ ಕೊಟ್ಟ. ಆದ್ರೆ ಮನೆಯಲ್ಲಿಂದ ಏನೂ ಕಳುವಾದಂತೆ ಕಾಣಲಿಲ್ಲ. ಹಾಗೆ ಕಳುವಾಗಿದ್ದರೂ, ಅದರ ಅವಶ್ಯಕತೆ ಬೀಳಲೇ ಇಲ್ಲ. ಬಹುಶಃ ಆತನನ್ನು ಅಥವಾ ಕಳ್ಳರನ್ನು ಏನೋ ಡಿಸ್ಟರ್ಬ್ ಮಾಡಿರಬಹುದು. ಅದು ಮಹಡಿಯ ಮೇಲೆ ಮಲಗಿದ್ದ ನನ್ನ ಗೊರಕೆಯೋ, ಬಡಬಡಿಕೆಯೋ ಇರಲೂ ಬಹುದು! ತಮ್ಮ ಕೆಲಸವನ್ನು ಅರ್ಧಕ್ಕೇ ಬಿಟ್ಟು ಓಡಿ ಹೋಗಿರಬಹುದೆ ಎನಿಸುತ್ತದೆ. ನನ್ನ ಅದೃಷ್ಟ ತೆರೆದುಕೊಂಡಿತ್ತು! ಇನ್ಶೂರನ್ಸ್ ಕಂಪೆನಿಯಿಂದ ಹೊಸ ಬಾಗಿಲು ಏನೋ ಬಂತು.

 ಇನ್ನು ಶ್ರೀವತ್ಸನ ಮಾತು?  ಅನಿವಾಸಿಯಲ್ಲಿ ದೇಸಾಯಿಯವರು ಕಳ್ಳತನದ ಈ ಸರಣಿಯಲ್ಲಿ ಬರೆದ ಲೇಖನವೇನೋ ನಮ್ಮ ಮನೆಯ ಘಟನೆಯನ್ನು ನೆನಪಿಸಿತು, ಸರಿ. ಇನ್ನೊಂದು  ಸಂಬಂಧವೆಂದರೆ ಸಂಸ್ಕೃತ ಮತ್ತು ಕನ್ನಡದ ನಿಘಂಟು ತೆಗೆದು ನೋಡಿರಿ. ಶ್ರೀವತ್ಸ ಶಬ್ದಕ್ಕೆ ವಿಷ್ಣುವನ್ನು ಬಿಟ್ಟು ಇನ್ನೊಂದು ಅರ್ಥ ಕನ್ನ ಹಾಕುವ ಕಳ್ಳ ಮನೆಗೆ ಕೊರೆದ ಒಂದು ’ವಿಶಿಷ್ಟ ತರದ’ ತೂತು ಎಂದು. ಸರ್ವಂ ವಿಷ್ಣು ಮಯಂ ಅಥವಾ ಸರ್ವಂ ಶ್ರೀವತ್ಸಮಯಂ.
ಚಿತ್ರ : ಡಾ ಎಲ್ಲೆನ್ ಗುಡೂರ್

ಶ್ರಿರಾಮುಲು ಅವರ ’ಕಳ್ಳನ ಕಿಂಡಿ’ ಲೇಖನಕ್ಕೆ ಒಂದು ಟಿಪ್ಪಣಿ – ಡಾ ಶ್ರೀವತ್ಸ ದೇಸಾಯಿ
ಸಂಪಾದಕಿಯ ಸೌಜನ್ಯದಿಂದ ಮೇಲಿನ ಲೇಖನ ನನ್ನ ಅವಗಾಹನೆಗೆ ಬಂದಿತು. ಶ್ರಿರಾಮುಲು ಅವರು ಸರಣಿಯ ಪ್ರಾರಂಭದಲ್ಲಿಯ ನನ್ನ ಲೇಖನವನ್ನು ಉಲ್ಲೇಖಿಸುತ್ತಾರೆ. ಅದನ್ನು ಓದಿದಾಗ ನನಗೆ ನೆನಪಾದುದು ಅಂಗ್ಲ ಭಾಷೆಯ ಪ್ರಚಲಿತ ನುಡಿಗಟ್ಟು: hoist by his own petard, ಅಂತ. ಅಂದರೆ ತನ್ನ ಕಾರುಬಾರು ತನಗೇ ಕುತ್ತಾಗಿ ಬಂದುದು, ಎನ್ನುವ ಅರ್ಥದಲ್ಲಿ. ನಿಮ್ಮ Yo-Yo ನಿಮ್ಮ ಮುಖಕ್ಕೇ ಬಂದು ಅಪ್ಪಳಿಸಿದಂತೆ ಅಥವಾ ಆಸ್ಟ್ರೇಲಿಯದ ಆದಿವಾಸಿ ಒಗೆದ ಬೂಮರ್ಯಾಂಗ್ ಅತನಿಗೇ ಗಾಯ ಮಾಡಿದಂತೆ. ಈ ನುಡಿಗಟ್ಟಿನ ಮೂಲದ ಜಾಡನ್ನು ಹಿಡಿದು ಹೋದಾಗ ಅನೇಕ ಸ್ವಾರಸ್ಯಕರ ಸಂಗತಿಗಳು ತಿಳಿದವು. ಹ್ಯಾಮ್ಲೆಟ್ ನಾಟಕದಲ್ಲಿ ಈ ವಾಕ್ಯ ಬರುತ್ತದೆ. ತಾನು ಹಚ್ಚಿದ ’ಪಿಟಾರ್ಡ್’ (ಕೈಬಾಂಬು) ತನ್ನನ್ನೇ ಕೊಲ್ಲಲು ಹೊರಟಂತೆ, ಅಂತ ಇದನ್ನು ಅರ್ಥೈಸಬಹುದು. ಅವೆಷ್ಟೋ ಶೇಕ್ಸ್ಪಿಯರನ ಮಾತುಗಳು ಇಂದಿಗೂ ಬಳಕೆಯಲ್ಲಿದ್ದು ಅದನ್ನರಿಯದೆ ನಾವು ಪ್ರತಿದಿನವೂ ಬಳಸುತ್ತಿರುತ್ತೇವೆ. ಉದಾ: foregone conclusion, the world’s my oyster, good riddance ಇತ್ಯಾದಿ. OED (ಅಧಿಕೃತ ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿಯ) ಪ್ರಕಾರ: Petard: A small bomb made of a metal or wooden box filled with powder, used to blow in a door, gate, etc., or to make a hole (ಶ್ರೀವತ್ಸ?) in a wall. ಫ್ರೆಂಚ್ ಭಾಷೆಯ pétarade ಆ ಶಬ್ದದ ವ್ಯುತ್ಪತ್ತಿ ಅಂತ ಕೆಲವರ ವಾದ. ಆ ಪದದ ಇನ್ನೊಂದು ಅರ್ಥ ಸಂಸ್ಕೃತದ ’ಪರ್ದತೇ’ ಶಬ್ದಕ್ಕೆ ಹತ್ತಿರವಾಗಿದೆ. ಅಂದರೆ ಅಪಾನವಾಯುವನ್ನು ಬಿಡುವುದು ಎನ್ನುವ ’ಹ’ಕಾರದ ಶಬ್ದ! ಇಲ್ಲಿ ನನ್ನ ಮಿತ್ರ ಶ್ರಿರಾಮುಲು ಅವರು ನನ್ನ ಬಗ್ಗೆ ’he’s an old fart’ ಅಂತ ಉದ್ಗಾರ ತೆಗೆಯುತ್ತಿದ್ದಾರೆಯೇ?

7 thoughts on “ಮತ್ತೊಂದು ಕಳ್ಳತನದ ಕಥೆ!

  1. ಶ್ರೀರಾಮುಲು ನಿಮ್ಮ ಮತ್ತು ಶ್ರೀವತ್ಸ ಅವರ ಹಾಸ್ಯ ಪ್ರಜ್ಞೆ ಅನನ್ಯವಾದದ್ದು
    ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಂಡು ಅದನ್ನು ಇಷ್ಟು ಸ್ವಾರಸ್ಯಕರವಾಗಿ ಸಂಕ್ಷಿಪ್ತವಾಗಿ ಬರೆಯುವ ಕಲೆ ಮೆಚ್ಚಿದೆ.
    ನಿಮ್ಮ ಗೊರಕೆಯ ರೆಕಾರ್ಡಿಂಗ್ ಮಾಡಿ ಕಳುಹಿಸಿ ನಾವು ಅದನ್ನು ಉಪಯೋಗಿಸಬಹುದು

    Liked by 1 person

  2. ಪುಟ್ಟದಾದರೂ ಸುಂದರವಾದ ಹಾಸ್ಯಭರಿತ ಲೇಖನ ಶ್ರೀರಾಮುಲು ಅವರದ್ದು. ನಿಮ್ಮ ಬಾಗಿಲಿನ ಕಿಂಡಿಗೂ ಶ್ರೀವತ್ಸನಿಗೂ ಹಾಕಿದ ಕೊಂಡಿ ಅಪರೂಪದ್ದು. ಗೊರಕೆಗೆ ತುಡುಗ ಬಗ್ಗಲಾರ, ಅದು ಅವನ ಕಸುಬಿಗೆ ಶ್ರೀವತ್ಸನ ವರದ ಹಸ್ತ. ಆತ ಕೆಲಸ ಪೂರೈಸದೇ ಕಾಲು ಕಿತ್ತಿದ್ದು ನಿಮ್ಮ ಶ್ರೀಮತಿಯ ಸಹಸ್ರನಾಮಾರ್ಚನೆಯ ಫಲವೇ! ಅಂತೂ ನೀವು ಲಕ್ಕಿ ಕಳ್ಳ ಮನೆ ಗುಡಿಸಿ ಹೋಗದಿದ್ದುದಕ್ಕೆ; ಸುಧಾಮನಂತೆ: ಭಾಗ್ಯ ತೆರೆಯಿತು ಶ್ರೀವತ್ಸನಿಗೆ ತಿನಿಸಿ ಅವಲಕ್ಕಿ.

    ಗುಡೂರರ ಚಿತ್ರ, ದೇಸಾಯರ ಅಡಿಬರಹ ಲೇಖನಕ್ಕೆ ಹೆಚ್ಚಿನ ಮೆರುಗು ನೀಡಿವೆ.

    – ರಾಂ

    Liked by 1 person

  3. ಶೀರ್ಷಿಕೆ ಮತ್ತು ಗುಡೂರವರ ಚಿತ್ರವನ್ನು ನೋಡಿ, ಇದೇನಪ್ಪಾ ಎಂದುಕೊಂಡು ಶ್ರೀರಾಮುಲು ಅವರ ಬರಹವನ್ನು ಓದಿದೆ. ಲಘುಹಾಸ್ಯದ ಸುಲಲಿತ ಬರವಣಿಗೆ ಮತ್ತು ಗುಡೂರರ ಚಿತ್ರಗಳು ಮೆಲುಕುಹಾಕುವಂತಿವೆ. ಅಮಿತಾ ಅವರ ಸಂಪಾದಕೀಯದ ಪರಿಶ್ರಮ.

    -ಕೇಶವ

    Like

  4. ಈ ಹಿಂದೆ ದೇಸಾಯಿಯವರು ತಮ್ಮ ಮನೆಯಲ್ಲಿ ಆದ ಕಳ್ಳತನದ ಬಗ್ಗೆ ಬರೆದದ್ದನ್ನು ಓದಿದ್ದೇ. ಈಗ ಡಾ. ಶ್ರೀರಾಮಲು ಅವರು ಬರೆದ ಕಥೆ ನಿಜಕ್ಕೂ ಚೆನ್ನಾಗಿದೆ. ಇಂಗ್ಲೆಂಡಿನ ಕಳ್ಳರು ಬೇರೆ ತರಹ. ಮನೆಗೆ ಬರಿ ರಂಧ್ರ ( ಶ್ರೀವತ್ಸ) ಕೊರೆದು ಹಾಗೆ ಹೋಗಿದ್ದಾನೆ. ಆ ಕಳ್ಳನಿಗೆ ಬರಿ ರಂಧ್ರ. ಕೊರೆಯುವದೇ ಹವ್ಯಾಸವೆ? ಅಥವಾ ಡಾ. ಶ್ರೀರಾಮಲು ಅವರ ಗೊರಕೆ ಅಷ್ಟೊಂದು ಪ್ರಭಾವಶಾಲಿಯೇ?
    ಡಾ. ದೇಸಾಯಿಯವರ ಬರಹಗಳು ನಮಗೆ ಬಲು ಇಷ್ಟ. ಈಗ ಡಾ. ಶ್ರೀರಾಮಲು ಅವರ ಕಥೆ ಬಲು ಇಷ್ಟವಾಯಿತು.

    Liked by 1 person

  5. ಶ್ರೀರಾಮುಲು ಅವರೇ,
    ನಿಮ್ಮ ಬರಹಗಳು ನನಗೆ ಬ‌ಳ ಇಷ್ಟ. ನಿಮ್ಮ ನಿರೂಪಣೆ, ತಿಳಿಹಾಸ್ಯ ತುಂಬಾ ಚೆನ್ನಾಗಿರುತ್ತವೆ.
    ನೀವು ಬರೆದದ್ದು ಅಂದ ಕೂಡಲೆ ಓದುವ ಉತ್ಸಾಹ ಹೆಚ್ಚುತ್ತದೆ. ಈ ಲೇಖನವು ಹಾಗೇ ಇದೆ.
    ನೀವು ಮತ್ತು ದೇಸಾಯಿಯವರು ( ಈಗ ಇದೇ ಸರಿಯೇನೋ) ಅದೆಂತಹ ಅದೃಷ್ಟ ಶಾಲಿಗಳು. ನಿಮ್ಮ ಮನೆಗೆ ಕಳ್ಳರು ಶ್ರೀವತ್ಸ ಹಾಕಿ ಬರುತ್ತಾರೆ ಕದಿಯುವುದಿಲ್ಲ! ಇನ್ನೊಬ್ಬ ರ ಮನೆಯ ಗೂಡ್ಸ್ ಅವತ್ತೇ ಹಿಂತಿರುಗುತ್ತದೆ! ವಾರೆವ್ಹಾ…👏👏
    ಶ್ರೀವತ್ಸ ದ ಅರ್ಥ ಗಳು ಭಲೇ ಇವೆ 😎
    ಗೂಡೂರರ ಚಿತ್ರ ಗಳು ಸೊಗಸಾಗಿವೆ. ವಿಷ್ಣು ವಿನ ಜೊತೆಗಿನ ಸೆಲ್ಫೀ ತರದ್ದು ಇನ್ನೂ ಸೂಪರ್. ‌ ಬ್ರದರ್ಸ್ ತರ ಚಿತ್ರಿಸಿದ್ದಾರೆ 👌😄

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.