ಯುಗಾದಿ ಎನ್ನುವ ಪ್ರಬುದ್ಧ ಹಬ್ಬ- ಡಾ. ಪ್ರೇಮಲತ ಬಿ.

“ಬೇವಿನ ಕಹಿ ಬಾಳಿನಲ್ಲಿ, ಹೂವಿನ ನಸುಗಂಪ ಸೂಸಿ ಜೀವಕಳೆಯ ತರುತಿದೆ“. ವರಕವಿ ದ.ರಾ.ಬೇಂದ್ರೆಯವರ ಈ ಕವಿತೆ ವಸಂತಮಾಸದ ಸೊಗಸು, ಸೌಂದರ್ಯದಲ್ಲಿ ತೊನೆಯುತ್ತಿರುವ ಪ್ರಕೃತಿಯನ್ನು ನೋಡಿದಾಗಲೆಲ್ಲ ನನ್ನ ನೆನಪಿಗೆ ಬರುತ್ತದೆ. ವಸಂತಮಾಸದ ಜೊತೆಗೇ ಬರುತ್ತದೆ ಯುಗಾದಿ ಹಬ್ಬ. ಈ ಹಬ್ಬವನ್ನು ನಾವೆಲ್ಲ ತಪ್ಪದೇ ಆಚರಿಸುತ್ತಾ ಬಂದಿದ್ದರೂ, ಈ ಹಬ್ಬದ ಹಿಂದಿರುವ ಮಾಹಿತಿ ಬಹಳ ಮಂದಿಗೆ ತಿಳಿದಿರುವುದಿಲ್ಲವೆಂದು ನನ್ನ ಊಹೆ. ಈ ವಾರದ ಲೇಖನದಲ್ಲಿ ಪ್ರೇಮಲತಾರವರು, ನಮ್ಮ ನಾಡಿನ ಹಬ್ಬಗಳಲ್ಲಿ ಯುಗಾದಿಗಿರುವ ಪ್ರಭುದ್ಧ ಪಾತ್ರದ ಬಗೆಗೆ ನಮಗೆ ತಿಳಿಸಿಕೊಟ್ಟಿದ್ದಾರೆ. ಕೋವಿಡ್ ನ ಕರಾಳ ಕತ್ತಲಲ್ಲಿ ನಲುಗಿ, ನುಣುಚಿಕೊಳ್ಳಲು ಹೆಣಗುತ್ತಿರುವ ಮಾನವನ ಇಂದಿನ ಹೋರಾಟಕ್ಕೆ, ವಿವೇಕ, ಜ್ನಾನಗಳನ್ನು ಪ್ರತಿನಿಧಿಸುವ ಈ ಪ್ಲವ ಸಂವತ್ಸರ ವಿಜಯವನ್ನು ತರಲಿ ಮತ್ತು ನಮ್ಮ, ನಿಮ್ಮೆಲ್ಲರ ಬಾಳಿನಲ್ಲಿ ಹರುಷದ ಹೊನಲನ್ನು ಹರಿಸಲೆಂದು ಹಾರೈಸುತ್ತೇನೆ – ಸಂ

ಯುಗಾದಿ ಎನ್ನುವ ಪ್ರಬುದ್ಧ ಹಬ್ಬ

ಯುಗಾದಿ ಅಂದರೆ…. ಹೊಸವರ್ಷದ ಆರಂಭ. ಜಗತ್ತು ಮುಂದುವರಿಯಬೇಕೆಂದರೆ ಎಲ್ಲವೂ ಮರಳಿ ಸಂಭವಿಸಬೇಕು. ಕಾಲದ ಹುಟ್ಟು, ಪ್ರಕೃತಿಯ ಚೈತನ್ಯ, ಮನುಷ್ಯನ ಸಂಕಲ್ಪ, ಬದುಕು, ಬೆಳೆಗಳು ಎಲ್ಲವೂ ಹೊಸ ಕುಡಿಗಳೊಂದಿಗೆ ಮರಳಿ ಹುಟ್ಟಬೇಕು, ಹೊಸತನ್ನು ಪ್ರತಿಪಾದಿಸಬೇಕು.  ಪ್ರಕೃತಿಯ ಚಿಗುರು,ಹೂ,ಹೊಸ ಕುಹೂ,ಸಂತೋಷ, ಸಂಭ್ರಮ ಇತ್ಯಾದಿ ಎಲ್ಲ ಹೊಸತನ್ನೂ ಕಾಲದಲ್ಲಿ  ಗುರುತಿಸಿ ಆ ಸಂತೋಷವನ್ನು ಆಚರಿಸುತ್ತ, ಬರುವ ವರ್ಷದ ದಿವಸಗಳೆಲ್ಲ , ಸಂತೋಷವಾಗಿ, ಸಮತೋಲಿತವಾಗಿ ಕಳೆಯಲೆಂದು ಆಶಿಸಿ ಸಮಾಜದ ಜನರೆಲ್ಲ ಒಟ್ಟುಗೂಡಿ ಆಚರಿಸುವ ಹಬ್ಬವೇ ಯುಗಾದಿ. ಈ ಹಂಬಲದೊಂದಿಗೆ ಮತ್ತೆ ಮರಳಿ ಬರುತ್ತಿದೆ ಇದೋ ಈ ಯುಗಾದಿಯ ಸಂಭ್ರಮ.

ಮಾರ್ಚ್ ೨೦ ರಂದು ನಾವು ಇಲ್ಲಿನ ಕ್ಯಾಲೆಂಡರಿನ ಪ್ರಕಾರ ಅಧಿಕೃತವಾಗಿ ವಸಂತ ಋತುವಿಗೆ ಕಾಲಿಟ್ಟಿದ್ದೇವೆ. ಅದರ ಮೊದಲಲ್ಲೇ ಬರುವ ಯುಗಾದಿಗೆ ಸರಿಯಾಗಿ ಪ್ರಕೃತಿ ಹೊಸ ಹಸಿರು-ಚಿಗುರಿನ ಅಂಗಿತೊಟ್ಟು ಸಂಭ್ರಮಿಸುವ ಮುದ್ದು ಮಗುವೊಂದರಂತೆ ಕಂಗೊಳಿಸುವುದು, ನಮ್ಮಲ್ಲಿ ಸಂಭ್ರಮದ ಹೊಸ ಚೈತನ್ಯವನ್ನು ತುಂಬುವುದು ಪಾಶ್ಚಿಮಾತ್ಯ ದೇಶಗಳಲ್ಲಿ ಬದುಕುವ ನಮ್ಮ ಸೌಭಾಗ್ಯವೂ ಹೌದು.

ಭಾರತದಲ್ಲಿ ಜನರು ಬೇಸಿಗೆಯ ದಿನಗಳಲ್ಲಿದ್ದರೆ ಇಲ್ಲಿ ನಾವು ಯುಗಾದಿಯ ಎಳೆ ಬಿಸಿಲಿನ ನವೋಲ್ಲಾಸಕ್ಕೆ ತೆರೆದುಕೊಳ್ಳುತ್ತಿರುತ್ತೇವೆ.

ಹಬ್ಬಗಳು ಸಮಾಜದ ಅತಿ ಮುಖ್ಯ ಅಂಗಗಳು. ಹಬ್ಬಗಳ ಇರುವು ಸಮುದಾಯದ ಒಗ್ಗಟ್ಟನ್ನು, ಆರೋಗ್ಯದ ಸುಸ್ಥಿತಿಯನ್ನು ಬಿಂಬಿಸುತ್ತದೆ. ಹಬ್ಬಗಳು ಸಮಾಜದ ಜನರ ಚೈತನ್ಯವನ್ನು ಒಗ್ಗೂಡಿಸಿ, ಸಮುದಾಯದಲ್ಲಿ ಸಾರ್ಥಕತೆಯನ್ನು ತುಂಬುತ್ತವೆ.ನಮ್ಮ ನಾಡಿನ ಮತ್ತು ದೇಶದ ಬಹುತೇಕ ಹಿಂದೂ ಹಬ್ಬಗಳು ದೇವರ ಕಥೆ-ಉಪಕಥೆಗಳ ಆಧಾರದ ಮೇಲೆ ಸೃಷ್ಟಿಯಾದವು.ಇವುಗಳ ಜೊತೆ,ಪ್ರಕೃತಿಯ ಬದಲಾವಣೆಗಳ ಆಧಾರದ ಮೇಲೂ ಕೆಲವು ಹಬ್ಬಗಳು ಸೃಷ್ಟಿಯಾಗಿವೆ. ಕೃಷಿಯನ್ನು ಅಧರಿಸಿದ ರೈತಾಪಿ ಹಬ್ಬಗಳೂ ಇವೆ.ಆದರೆ ಸೃಷ್ಟಿಲೋಕದ ಕಾಲ ಮಾಪನವನ್ನು ಆಧರಿಸಿ ಬರುವ ಕೆಲವೇ ಹಬ್ಬಗಳಲ್ಲಿ ಯುಗಾದಿ ಅತ್ಯಂತ ಮುಖ್ಯವಾದ್ದು.

ಸೂರ್ಯ-ಚಂದ್ರರ ಪಥ ಗತಿಯನ್ನು ಅನುಸರಿಸಿ ಧರಿತ್ರಿ ಹೊಸ ಉಡುಗೆ ತೊಡುವ ಚೈತ್ರ ಮಾಸಕ್ಕೆ ಮತ್ತು ವಸಂತ ಋತುವಿಗಂತೂ ವರ್ಷದಲ್ಲಿ ಇನ್ನಿಲ್ಲದ ಪ್ರಾಧಾನ್ಯತೆ. ಭಾರತವೇ ಅಲ್ಲದೆ ಇತರೆ ದೇಶಗಳಲ್ಲೂ ಬೇರೆ ಬೇರೆ ಹೆಸರಿನಲ್ಲಿ ಈ ವಸಂತ ಋತುವಿಗೆ ಸ್ವಾಗತ ಸಿಗುತ್ತದೆ. ಅದರಿಂದಲೇ ಹೊಸವರ್ಷದ ಆರಂಭವೆಂದು ನಮ್ಮ ಹಿರಿಯರು ನಂಬಿದ ಸಂಪ್ರದಾಯವನ್ನೇ ನಾವು ಯುಗಾದಿ ಮತ್ತು ಇತರೆ ಹೆಸರುಗಳಲ್ಲಿ ಹಬ್ಬವಾಗಿ ಆಚರಿಸುತ್ತೇವೆ.

 ಚಳಿಗಾಲದ ಕತ್ತಲೆ, ಕಡಿಮೆ ಬೆಳಕು, ಸಣ್ಣ ದಿನಗಳನ್ನು ತೊಡೆದು ಚೈತ್ರ ಮಾಸ ತರುವ ಉಲ್ಲಾಸ ಅವರ್ಣನೀಯವಾದ್ದು. ಈ ಸಂಭ್ರಮದ ದಿಬ್ಬಣ ಶುರುವಾಗುವುದೇ ಯುಗಾದಿಯ ದಿನ. ನವೋಲ್ಲಾಸ, ಹೊಸ ಚಿಗುರಿನ ಜೊತೆ ಆಗ ತಾನೆ ಹುಟ್ಟಿ ಚಂಗನೆಂದು ನೆಗೆವ ಸಣ್ಣ ಮರಿಗಳಿಂದ ಹಿಡಿದು ,ಪುಟ್ಟ ಮಕ್ಕಳು, ಮುದುಕರು ಎಲ್ಲರೂ ಯುಗಾದಿಯ ಸಮಯದಲ್ಲಿ ನವ ಮುನ್ನುಡಿಯನ್ನು ಬರೆಯುತ್ತಾರೆ.ಸುತ್ತಲಿನ ಪರಿಸರದಲ್ಲೆಲ್ಲ ಪ್ರಸನ್ನತೆಯನು ಹರಡಿ, ಹೊಸ ಉಲ್ಲಾಸವನ್ನು ತುಂಬಿ ಬದುಕನ್ನು ಮತ್ತೆ ಪ್ರಚೋದಿಸುವ ಈ ಕಾಲವನ್ನು ಯುಗದ ಆದಿಯೆಂದೂ, ಹೊಸವರ್ಷವೆಂದೂ ನಮ್ಮ ಸಮಾಜ ಗುರುತಿಸಿರುವುದರಲ್ಲಿ ಅಪಾರವಾದ ಅರ್ಥ ಅಡಗಿದೆ.

 ಪ್ರತಿ  ದಿನವೂ ಹೊಸತೇ ಆದರೂ, ಕಾಲವನ್ನು ಗುಣಿಸುವವರು ಹಲವಾರು ವರ್ಷಗಳನ್ನು ಒಂದು ಕಾಲವಧಿಯಡಿ ಗುರುತಿಸಿ ಅದನ್ನು ಸಂವತ್ಸರವೆಂದು ಕರೆದಿದ್ದಾರೆ. ಈ ಪ್ರತಿ ಸಂವತ್ಸರದಲ್ಲಿ 60 ವರ್ಷಗಳನ್ನು ಕೂಡಿಹಾಕುತ್ತಾರೆ.ಈ ಗಣನೆಯ ಪಂಚಾಂಗದ ಪ್ರಕಾರ ವರ್ಷದ ಮೊದಲ ತಿಂಗಳೇ ಚೈತ್ರಮಾಸ. ಸಂಸ್ಕೃತ ಪದವಾದ ಯುಗ (ಕಾಲ) ಆದಿ(ಶುರುವಾತು) ಇನ್ನೂ ಕ್ಲಿಪ್ತವಾಗಿ ಹೇಳಬೇಕೆಂದರೆ ಕಲಿಯುಗದಲ್ಲಿ ಮಾತ್ರ ಆರಂಭವಾದ ಹಬ್ಬ. ಕಲಿಯುಗ ಶುರುವಾದ್ದು ಕೃಷ್ಣ ಈ ಲೋಕವನ್ನು ಬಿಟ್ಟು ತೆರಳಿದ ಬಳಿಕ. ಮಹರ್ಷಿ ವೇದವ್ಯಾಸರು ಇದನ್ನು ಹೀಗೆ ಹೇಳಿದ್ದಾರೆ “ ಯೆಸ್ಮಿನ್ ಕ್ರಿಷ್ಣೋ ದಿವಂವ್ಯತಃ, ತಸೇವ ಪ್ರತಿ ಪನ್ನಂ ಕಲಿಯುಗಃ “ ಎನ್ನುತ್ತಾರೆ. ಈ ಕಲಿಯುಗ ಶುರುವಾದ್ದು 3102 ಬಿ.ಸಿ. ಯ ಫೆಬ್ರವರಿ 17-18 ನೇ ತಾರೀಖಿನಂದಂತೆ.

ಗೌತಮೀಪುತ್ರ ಶತಕರ್ಣಿ, ಶತವಹಾನದ ರಾಜ  ವಸಂತಕಾಲದ ಈ ಮಹತ್ತನ್ನು ಗುರುತಿಸಿ ಯುಗಾದಿಯ ಆಚರಣೆಯನ್ನು ಶುರುಮಾಡಿದ ಎಂದು ನಂಬುವ ಚರಿತ್ರಕಾರರಿದ್ದಾರೆ. ಇದೇ ರಾಜವಂಶಜರು ಕರ್ನಾಟಕ, ಆಂಧ್ರಪ್ರದೇಶ  ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಆಳಿದ ಕಾರಣ ಈ ಹಬ್ಬವನ್ನು ಮುಖ್ಯವಾಗಿ ಈ ಮೂರು ರಾಜ್ಯಗಳಲ್ಲಿ ಆಚರಿಸುತ್ತಾರೆ. ಮಹಾರಾಷ್ಟ್ರ ದಲ್ಲಿ ಇದನ್ನು ‘ಗುಡಿಪಾಡ್ವ’ ಎಂದು ಕರೆಯುತ್ತಾರೆ.ಇದೇ ದಿನವನ್ನು ಉತ್ತರಭಾರತದವರು ‘ಚೈತ್ರ ನವರಾತ್ರಿ ‘ ಹಬ್ಬದ ಮೊದಲ ದಿನವಾಗಿ ಆಚರಿಸುತ್ತಾರೆ. ರಾಜಾಸ್ಥಾನದಲ್ಲಿ ‘ತಪ್ನಾ’ ಎನ್ನುವ, ಸಿಂಧಿಗಳು ‘ಚೇತಿ ಚಂದ್’ ಎನ್ನುವ ಮಣಿಪುರದವರು ‘ಸಜಿಬು ನೊನ್ಗ್ಮ ಪನ್ಬ’ ಎನ್ನುವ ಹೆಸರಿನ ಹಭ್ಭಗಳನ್ನು ಹೊಸವರ್ಷದ ಹೆಸರಲ್ಲಿ ಇದೇ ದಿನ ಆಚರಿಸಿದರೆ,  ಬಾಲಿ ಮತ್ತು ಇಂಡೋನೇಶಿಯಾದಲ್ಲಿರುವ ಹಿಂದೂಗಳು ‘ನ್ಯೇಪಿ’ ಎನ್ನುವ ಹೆಸರಲ್ಲಿ ಯುಗಾದಿಯ ತತ್ವ ಇರುವ ಹಬ್ಬವನ್ನು ಆಚರಿಸುತ್ತಾರೆ.

‘ಚಂದ್ರಮಾನ ಯುಗಾದಿ’ ಮತ್ತು ‘ಸೂರ್ಯಮಾನ ಯುಗಾದಿ’ ಗಳೆಂದು ಎರಡು ಬಗೆಯನ್ನು ಯುಗಾದಿಯಲ್ಲಿ ಜನರು ಆಚರಿಸಿದರೂ ಚೈತ್ರ ಶುದ್ದ ಪಾಡ್ಯಮಿ ಸೂಚಿಸುವುದು ಚಂದ್ರಮಾನ ಯುಗಾದಿಯನ್ನು. ಪ್ರಕಾಶಮಯವಾದ ಚೈತ್ರದ ಆಮೇಲಾರ್ಧದ ಮೊದಲನ್ನು ಯುಗಾದಿಯ ದಿನ ಸೂಚಿಸುತ್ತದೆ.

ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ, ಕೇರಳ, ತಮಿಳುನಾಡುಗಳಲ್ಲಿ ಸೌರಮಾನದ ರೀತ್ಯ ಯುಗಾದಿ ಆಚರಿಸುತ್ತಾರೆ. ಸೌರಮಾನ ಯುಗಾದಿಯನ್ನು ಸೂರ್ಯ ಭಗವಾನನು ಮೇಷ ರಾಶಿಯನ್ನು ಪ್ರವೇಶಿಸುವ ದಿನದಿಂದ ಆಚರಿಸುತ್ತಾರೆ. ‘ಬಾರ್ಹಸ್ಪತ್ಯಮಾನ’ ಎಂಬ ಆಚರಣೆಯೂ ಭಾರತದಲ್ಲಿ ಚಾಲ್ತಿಯಲ್ಲಿದೆ.

ಪ್ರಕೃತಿಯ ನಾಲ್ಕು ಕಾಲಗಳು ತಮ್ಮಿಂದ ತಾವೆ ಪುನರಾವರ್ತಿತವಾಗುತ್ತಲೇ ಬಂದಿವೆ. ಆದರೆ ಮಾನವನಿಗೆ ಅದನ್ನು ಅಳೆಯುವ ಬಯಕೆ. ಆಯಾ ಕಾಲಗಳಲ್ಲಿ ನಡೆವ ಪ್ರಕೃತಿಯ ವಿದ್ಯಮಾನಗಳನ್ನು ಗಮನಿಸಿ , ಅದಕ್ಕೆ ಸೂಕ್ತ ಹೆಸರಿಟ್ಟು ಅದರ ಸಂಭ್ರಮಗಳಲ್ಲಿ ತಾನು ಕೂಡ ಭ್ರಮಿತನಾಗುವ ಬಯಕೆ. ಈ ಪರಿಭ್ರಮಣೆಯ ಪರಿಣಾಮವೇ ಯುಗಾದಿ ಹಬ್ಬದ ಆಚರಣೆಗೆ ಕಾರಣ. ಮನುಜನಲ್ಲಿ ಕೂಡ ಒಂದು ರೀತಿಯಲ್ಲಿ ಭಾವ ಪುನರುತ್ಥಾನವಾಗುವ ಕಾಲವಿದು. ಜೀವನದ ಅನುಭವವಿರುವ ಹಿರಿಯರು, ಬದುಕನ್ನು ಅದರ ನಿಜರೂಪದಲ್ಲಿ ನೋಡಿದವರು ಕಾಲದಲ್ಲಿ ಒಳಿತೂ-ಕೆಡುಕೂ ಇರುವುದನ್ನು ಗಮನಿಸಿ ಅದನ್ನು ಜೀವನದ ಬೇವು (ಕಹಿ) ಬೆಲ್ಲ (ಸಿಹಿ)ಗಳಲ್ಲಿ ಗುರುತಿಸಿದ್ದಾರೆ. ಅವೆರಡೂ ಸಮನಾಗಿದ್ದಲ್ಲಿ ಬದುಕು ಸಮತೋಲಿತವಾ್ಗಿರಬಲ್ಲದು ಎಂಬ ಅಪಾರವಾದ ಅರಿವನ್ನು ತೋರುತ್ತ, ಅಷ್ಟನ್ನಾದರೂ ಅನುಗ್ರಹಿಸು ಎಂಬ ಬೇಡಿಕೆಯನ್ನು ದೇವನ ಮುಂದಿಡುತ್ತ ಯುಗಾದಿಯಲ್ಲಿ ದೇವರನ್ನು ಅನುನಯಿಸುತ್ತಾರೆ. ಜನ ಸಮುದಾಯಗಳಲ್ಲಿ, ಸಮಾಜದಲ್ಲಿ, ಕುಟುಂಬಗಳಲ್ಲಿ ,ಪ್ರಕೃತಿಯಲ್ಲಿ ವರ್ಷದ ಕಾಲಾವಧಿಯಲ್ಲಿ ಆಗಿರಬಹುದಾದ ಹಲವು ಒಳ್ಳೆಯ-ಕೆಟ್ಟ ಘಟನೆಗಳು ಬದುಕಿನ ಸಹಜವಾದ ಕ್ರಿಯೆ ಎಂದು ಸಾರುವಲ್ಲಿ ಅಪಾರ ಪ್ರಬು್ದ್ಧತೆಯನ್ನು ಮನುಜ ಈ ಹಬ್ಬದ ಮೂಲಕ ಮೆರೆದಿದ್ದಾನೆ.

ಯುಗಾದಿಯಲ್ಲಿ ಇದೇ ತಿಳಿವಿನ ಹೂರಣವನ್ನು ಒಬ್ಬಟ್ಟಿನಲ್ಲಿಟ್ಟು ತಟ್ಟಿದ್ದಾನೆ. ಪುಳಿಯೋಗರೆಯ ಹಿತವಾದ ಹುಣಸೆ ಹುಳಿಯಲ್ಲಿ,ಮಸಾಲೆಯಲ್ಲಿ ಸವಿದಿದ್ದಾನೆ. ಮಾವನ ಕಾಯಿ ಚಿತ್ರಾನ್ನವೂ ಜನಪ್ರಿಯ. ಆದರೆ ಯುಗಾದಿಯ ಸಾಂಕೇತಿಕ ಅಡುಗೆ ಅಂದರೆ ಉಗಾದಿ ಪಚಡಿ!

ಬೆಲ್ಲ, ಹಸಿಮೆಣಸಿನಕಾಯಿ,ಬೇವಿನೆಲೆ, ಹುಣಿಸೇಹಣ್ಣು, ಉಪ್ಪನ್ನು ಬಳಸಿ ಮಾಡುವ ಈ ನೈವೇದ್ಯದಡುಗೆಯಲ್ಲಿ ಬದುಕಿನ ಸುಖ,ದುಗುಡ, ಕಹಿ,ಕೋಪ,ಮತ್ತು ಆಶ್ಚರ್ಯ ಭಾವಗಳನ್ನು ಮೇಳೈಸಿ ಮತ್ತೆ  ಬದುಕು ಹೇಗೆ ಎಲ್ಲ ಅನುಭವಗಳ ಮಿಷ್ರಣ ಎನ್ನುವುದನ್ನು ಸಾಬೀತುಮಾಡಿ  ಜನರಿಗೆ ಸರಳವಾಗಿ ಅನುಭವಕ್ಕೆ ಬರುವಂತೆ ಮಾಡಿ, ಹೀಗೇ ಬದುಕನ್ನು ಎಲ್ಲ ರುಚಿಗಳಲ್ಲಿ ಅಸ್ವಾದಿಸಿ ಎನ್ನುವ ಕರೆಯನ್ನು ಯುಗಾದಿ ಹಬ್ಬದ ಮೂಲಕ ನೀಡಿದ್ದಾನೆ.ಈ ನಿಟ್ಟಿನಲ್ಲಿ ಯುಗಾದಿ ಬರೀ ಹೊಸವರ್ಷದ ಆಚರಣೆಯನ್ನು ಪ್ರತಿಪಾದಿಸುವ ಹಬ್ಬಮಾತ್ರವಾಗಿರದೆ ಬದುಕಿನ ಅನುಭವವನ್ನು ಸಮಚಿತ್ತನಾಗಿ ಸ್ವೀಕರಿಸಿರುವ ಮನುಷ್ಯನ ಪ್ರಬುದ್ಧತೆಯ ಶಿಖರ ಶೃಂಗವನ್ನು ತಿಳಿಸುವ ಹಬ್ಬವಾಗಿದೆ. ಬದುಕಲ್ಲಿ ಕಹಿ ಮಿಳಿತವಾಗಿದ್ದರೂ ಇನ್ನೆಲ್ಲ ಅನುಭವಗಳನ್ನು ಸೇರಿಸಿ ನೋಡಿದಲ್ಲಿ ಹೇಗೆ ಇದು ಸರಳವಾಗಿ ಸ್ವೀಕೃತವಾಗಬಲ್ಲುದು  ಎಂಬ ಸಂದೇಶವನ್ನು ಸಾರುವ ಹಬ್ಬವಿದು.

ಈ ಹಬ್ಬಕ್ಕೆ ದೇವರ ಕಥೆಗಳ ಜೋಡನೆ ಮಾಡುವ ಪ್ರಯತ್ನವೂ ಆಗಿವೆ. ಕೆಲವರು ಇದನ್ನು ಆದಿಕರ್ತ ಬ್ರಹ್ಮನು ಸೃಷ್ಟಿಯನ್ನು ಶುರುಮಾಡಿದ ಮೊದಲ ದಿನವೆಂದು ನಂಬುತ್ತಾರೆ. ಈ ದಿನ ಮನೆಗಳು ಇನ್ನಿಲ್ಲದಂತೆ ಬೇವು ಮತ್ತು ಮಾವಿನೆಲೆಗಳಿಂದ ಅಲಂಕೃತವಾಗುವುದನ್ನು ಗಮನಿಸಿದ್ದೀರಷ್ಟೆ? ಇದಕ್ಕೂ ಒಂದು ಉಪಕಥೆಯಿದೆ. ಆ ಪ್ರಕಾರ  ಗಣೇಶ ಮತ್ತು ಕಾರ್ತಿಕೇಯರಿಬ್ಬರಿಗೂ ಮಾವು ಎಂದರೆ ಅಪಾರ ಪ್ರೀತಿ. ಮಾವಿನ ಚಿಗುರು ಶುರುವಾಗುವುದು ಈ ವಸಂತದ ಸಮಯದಲ್ಲೇ.ಅಪತ್ತುಗಳ ನಿವಾರಕ ಗಣೇಶನನ್ನು ಈ ಸಮಯದಲ್ಲಿ ಪೂಜಿಸುವ ಪರಿಪಾಠವಿರುವುದರಿಂದ ಈ ಹಬ್ಬಕ್ಕೆ ಮಾವಿನೆಲೆಯ ತೋರಣ ಪ್ರತಿ ಮನೆಯನ್ನು ಸಿಂಗರಿಸುತ್ತದೆ. ಹೀಗೆ ಮಾಡಿರೆಂದು ಕಾರ್ತಿಕೇಯನು ಜನರಿಗೆ ಹೇಳಿದನೆಂಬ ಪ್ರತೀತಿಯಿದೆ.

ಬೇವು ಬೆಲ್ಲವನ್ನು ತಿಂದರೆ ದೇಹವು ವಜ್ರಕಾಯವಾಗಬಲ್ಲುದು ಎಂದು ಕೂಡ ಕೆಲವರು ಬರೆದಿದ್ದಾರೆ. ಹಾಗೆಂದೇ ಗಣೇಶನನ್ನು ಸ್ತುತಿಸುವ ಒಂದು ಶ್ಲೋಕ ಹೀಗೆ ಹೇಳುತ್ತದೆ.”ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ, ಸರ್ವಾರಿಷ್ಟ ವಿನಾಶಾಯ ನಿಂಬಕಂ ದಳ ಭಕ್ಷಣಂ “ ಎಂದು ನಂಬಿ ಬೇವು ಬೆಲ್ಲವನ್ನು ತಿಂದು, ಇತರರಿಗೂ ಹಂಚುತ್ತಾರೆ.

ಸಂಪ್ರದಾಯದ ಪ್ರಕಾರ ಯುಗಾದಿಯ ಆಚರಣೆ  ಎಣ್ಣೆ ಸ್ನಾನ,ಪೂಜೆ, ಪ್ರಾರ್ಥನೆ, ಹೋಳಿಗೆ ಊಟ, ಹೊಸಬಟ್ಟೆ, ಹೊಸ ಆಶಯಗಳು, ಇತರರಿಗೆ ಒಳಿತನ್ನು ಕೋರುವುದನ್ನು ಬಿಟ್ಟರೆ ಮತ್ತೇನು ವಿಶೇಷವಿಲ್ಲ. ಆದರೆ, ಹಳ್ಳಿಗಳಲ್ಲಿ ಹಾಗೂ ಇನ್ನೂ ಸಂಪ್ರದಾಯ, ಆಚರಣೆ ಉಳಿಸಿಕೊಂಡಿರುವ ಅಗ್ರಹಾರಗಳಲ್ಲಿ,ಪುರೋಹಿತರು, ಪಂಡಿತರು ಯುಗಾದಿಯಂದು ಸ್ನಾನ ಸಂಧ್ಯಾದಿ ಮುಗಿದ ಬಳಿಕ, ಕುಲದೇವರನ್ನೂ,ಪಂಚಾಗವನ್ನೂ ಪೂಜಿಸಿ, ಅಗಲ ಬಾಯಿಯ ಪಾತ್ರೆಯಲ್ಲಿ ತುಪ್ಪ ಹಾಕಿ ಮನೆಮಂದಿಯೆಲ್ಲ ಅದರಲ್ಲಿ ಮುಖ ನೋಡಿಕೊಳ್ಳುತ್ತಾರೆ. ಆನಂತರ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಸರ್ವದೋಷ ಪರಿಹಾರ ಆಗತ್ತೆ ಎಂಬುದು ನಂಬಿಕೆ. ಸಂಜೆ ಊರಿನ ಅರಳಿ ಕಟ್ಟೆಯಲ್ಲಿ ಸೇರಿ, ಪಂಡಿತರು ಊರಿನ ಜನಕ್ಕೆ ಪಂಚಾಂಗ ಓದಿ ಹೇಳುತ್ತಾರೆ. ವರ್ಷಫಲ ಕೇಳುವ ಸಂಪ್ರದಾಯ ಹಳ್ಳಿಗಳ ಕಡೆ ಇನ್ನೂ ಜೀವಂತವಾಗಿದೆ.

ಪ್ರತಿದೇಶದಲ್ಲೂ ಹಬ್ಬವನ್ನು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಅಲ್ಪ ಸ್ವಲ್ಪ ಮಾರ್ಪಾಟು ಮಾಡಿಕೊಳ್ಳುವುಸು ಸಹಜವೇ.ಯುಗಾದಿಯ ಹಬ್ಬವನ್ನು ಕೂಡ ಇದು ಹೊರತುಪಡಿಸಿಲ್ಲ. ಕರ್ನಾಟಕದ ಕೆಲವು ಭಾಗಗಳಲ್ಲಿ ಯುಗಾದಿಯ ದಿನ ಜೂಜಾಡುವುದೂ ಒಂದು ಸಂಪ್ರದಾಯವಾಗಿ ಬೆಳೆದುಬಿಟ್ಟಿದೆ. ಯುಗಾದಿಯ ಮಾರನೇ ದಿನವನ್ನು ವರ್ಷತೊಡಕು ಎಂದೂ ಆಚರಿಸುತ್ತಾರೆ. ಅಂದು ಮಾಂಸಾಹಾರಿಗಳು ಕಡ್ಡಾಯವಾಗಿ ಮಾಂಸದ ಊಟ ಮಾಡುತ್ತಾರೆ. ಮದ್ಯ ಸೇವನೆಯೂ ಈ ವರ್ಷತೊಡಗಿನ ಆಚರಣೆಯ ಭಾಗಗಳಲ್ಲೊಂದು.ಹಾಗಾಗಿ ಕೆಲವರಿ ಯುಗಾದಿಯ ಮಜಾ ಮಾರನೆಯ ದಿನದ ವರ್ಷ ತೊಡಕಿನಲ್ಲಿ ಸಿಗುತ್ತದೆ.

ಹಾಗಾಗಿ ಯುಗಾದಿ ಅಂದರೆ…. ಚಿಗುರಿನೆಲೆಗಳು ಹಾಡುವ ಪಲ್ಲವಿ, ಹಳೆಯ ಕೆಟ್ಟ ನೆನಪಿನ ಕೊನೆ, ಹೊಸತಿನ ಆಗಮನ, ಕಳೆದ ದಿನಗಳಿಗೆ ವಿದಾಯ ಮತ್ತು ಮುಂದಿನ ದಿನಗಳ ಬಗ್ಗೆ ಇತರರಿಗೆ ಶುಭವನ್ನು ಕೋರುವ, ದೇವರಲ್ಲಿ ಪ್ರಾರ್ಥಿಸುವ  ಕವನ.

 ಅಚ್ಚುಕಟ್ಟಾಗುವ ಮನೆ, ಬಾಗಿಲಿಗೆ  ತಳಿರು ತೋರಣ ,ದೇವರ ಮನೆಯ ಬಾಗಿಲಿಗೆ ಚಿಗುರು ಹಸಿರಿನ ಮಾವಿನೆಲೆಯ ಸಿಂಗಾರ, ಮನೆಯ ಮುಂದೆ ಚಿಕ್ಕಿಯ ಬಣ್ಣದ ರಂಗೋಲಿ, ಶುಭ್ರವಾಗುವ ರಾಸುಗಳು, ಅಭ್ಯಂಗನದ ಸ್ನಾನ, ಬೆಳಗುವ ಮನಸ್ಸು, ಪೂಜೆ ,ಪುನಸ್ಕಾರ, ಮುಂದಿನ ಶುಭ ದಿನಗಳಿಗಾಗಿ ದೇವರಲ್ಲಿ ಪ್ರಾರ್ಥನೆ, ಹೊಸ ಬಟ್ಟೆ, ಒಬ್ಬಟ್ಟಿನ ತಟ್ಟೆ, ಒಳ್ಳೆಯ ಮಾತು, ಶುಭ ಹಾರೈಕೆ, ಸಂಕಲ್ಪಗಳ ಹೂ ಮಾಲೆಯನ್ನು ಹೊಸೆಯುವ ಮತ್ತು ಕಳೆದ ಕಾಲದ ಪುನರಾವಲೋಕನಕ್ಕೆ ಅವಕಾಶ- ಎಲ್ಲವೂ  ಹೌದು.

 ಜೊತೆಗೆ ಯುಗಾದಿಯ ದಿನ ಮುಂಬರುವ ವರ್ಷದ ಬಗ್ಗೆ ಮುನ್ನುಡಿಯ ಉವಾಚವನ್ನು ಕೇಳುವ ಪರಿಪಾಠವೂ ಇದೆ. ಯುಗಾದಿಯ ದಿನ ಶುರು ಮಾಡುವ ಎಲ್ಲ ಹೊಸ ಯೋಜನೆಗಳು ಶುಭದಾಯಕ ಎನ್ನುವ ನಂಬಿಕೆಯೂ ಇದೆ.

ಹೊಸ ಸೇರ್ಪಡೆ ಎಂದರೆ ವಿಶ್ವರತ್ನ ಮಹಾನ್ ಮಾನವತಾವಾದಿ, ಶೋಷಿತ ಜನ ವಿಮೋಚಕ ಮತ್ತು ಬಹುಜನ ಬಂಧು ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ ಜನ್ಮದಿನವನ್ನೂ ಜನರು  ’ಭೀಮ ಯುಗಾದಿ ’ ಎಂದು ಕರೆದಿರುವುದು. ಈ ವರ್ಷ ಆಚರಿಸುವ ಚಂದ್ರಮಾನ ಯುಗಾದಿಯು ಏಪ್ರಿಲ್ 13 ರಂದು ಮಂಗಳವಾರ ಬಂದಿದೆ. ಏಪ್ರಿಲ್ 14 ರ ಬುಧವಾರ ಬರುವ ಅಂಬೇಡ್ಕರರ ಜನ್ಮ ದಿನವನ್ನು(ವರ್ಷ ತೊಡಕಿನ ದಿನವನ್ನು) ಭೀಮ ಯುಗಾದಿ ಎಂದು ಕರೆಯಲಾಗುತ್ತಿದೆ.

ಯುಗಾದಿ ನಮ್ಮ ನಾಡಿನ ಪ್ರಬುದ್ಧ ಹಬ್ಬ. ಹಿಂದೂಗಳ ಹಬ್ಬವೇ ಆದರೂ, ಈ ಹಬ್ಬದ ಹಿಂದಿನ ಮೌಲ್ಯ ಲೋಕಕ್ಕೇ ಅನ್ವಯವಾಗುವಂತದ್ದು.ಹಾಗಾಗಿ ತತ್ವದಲ್ಲಿ ಇದು ಧರ್ಮವನ್ನು ಮೀರಿದ್ದು. ಮನು ಕುಲದ ಪ್ರಬುದ್ಧತೆಯನ್ನು, ಕಾಲವನ್ನು ಅಳೆವ, ಗುಣಿಸುವ ಬೌದ್ಧಿಕ ಮಟ್ಟದ್ದು. ಪ್ರಕೃತಿಯಲ್ಲಿನ ಬದಲಾವಣೆಗಳನ್ನು ಗುರುತಿಸಿ ಅದರೊಡನೆ ತನ್ನನ್ನು ಜೋಡಿಸಿಕೊಳ್ಳುವ ಮನುಷ್ಯನ ತಾತ್ವಿಕತೆಯನ್ನು ಮತ್ತು ಹೊಂದಾಣಿಕೆಯನ್ನು ತೋರುವಂತದ್ದು. ಸಾಮಾಜಿಕವಾಗಿ ಭಾರತದಲ್ಲಿದ್ದ ಸಮುದಾಯಗಳಲ್ಲಿನ ಅರೋಗ್ಯವಂತ ಮನೋಧರ್ಮವನ್ನು ಬಿಂಬಿಸುವಂತಹ ಹಬ್ಬ ಯುಗಾದಿ. ಅದಕ್ಕೆಂದೇ ಪ್ರತಿಯೊಬ್ಬರ ಬದುಕಲ್ಲಿ ಯುಗಾದಿ ಮತ್ತೆ ಮತ್ತೆ ಮರಳಿ ಬರಲಿ ಮತ್ತು  ಇನ್ನಷ್ಟು ಸಂಭ್ರಮವನ್ನು ,ಸಂತೋಷವನ್ನು ತರಲಿ.

ಎಲ್ಲರಿಗೂ ಯುಗಾದಿ ಹಬ್ಬದ ಶುಭ ಹಾರೈಕೆಗಳು.

ಡಾ. ಪ್ರೇಮಲತ ಬಿ.

6 thoughts on “ಯುಗಾದಿ ಎನ್ನುವ ಪ್ರಬುದ್ಧ ಹಬ್ಬ- ಡಾ. ಪ್ರೇಮಲತ ಬಿ.

  1. ಯುಗಾದಿ ಹಬ್ಬದ ಪ್ರಬುದ್ಧ ಸಾಂಗ್ರಹಿಕ ಲೇಖನ ಸವಿಸ್ತಾರವಾಗಿ, ವಿಶ್ಲೇಷಿತವಾಗಿ ಮೂಡಿ ಬಂದಿದೆ ಪ್ರೇಮ!!!!! ಬಹಳ ಸೊಗಸಾಗಿ ವಿಮರ್ಶಿಸಿದ್ದೀರಿ.
    -ಸವಿ

    Like

  2. ಪ್ರಬುದ್ಧ ಹಬ್ಬದ ಬಗ್ಗೆ ಪ್ರೇಮಲತಾರ ಪ್ರೌಢ ಪ್ರಬಂಧ ಬಹಳ ಸೊಗಸಾಗಿದೆ. ಚಳಿಗಾಲ ಮುಗಿದರೆ ಸಾಕು ಎನ್ನುವಂತಹ ಉತ್ತರ ಗೋಳಾರ್ಧದ ದೇಶಗಳಲ್ಲಿ, ವಸಂತವನ್ನು ನಾವು ಅತ್ಯಂತ ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ನಮ್ಮ ಭಾರತದಲ್ಲೂ ಬೇಸಿಗೆಯಾದರು ಕೂಡಾ ಬೇವು ಮಾವುಗಳ ಸಂಗಮದ ವಸಂತ ನಿಜಕ್ಕೂ ಮನೋಲ್ಲಾಸದ ವಿಷಯ. ಯುಗಾದಿಯ ಹಬ್ಬದ ದಿನದಂದು ಮನೆಯಲ್ಲಿನ ಸಂಭ್ರಮದ ವಾತಾವರಣ ಇಂದಿಗೂ ಮರೆಯದ ನೆನಪು. ಬೆಳಗಿನ ಅಭ್ಯಂಗನ, ಹೊಸ ಬಟ್ಟೆಯ ಸಡಗರ, ಹೋಳಿಗೆ ಊಟದ ಸವಿ, ಸಂಜೆಯ ದೇವರ ಗುಡಿಯ ದರ್ಶನ, ಜೊತೆಗೆ ಮೈಸೂರಿನಲ್ಲಿ ಪ್ರಾರಂಭವಾಗುತ್ತಿದ್ದ ಸಂಗೀತ ಕಚೇರಿಗಳ ಮನೋಹರ ಅನುಭವಗಳು ಜೀವನ ಪರ್ಯಾಂತ ನಮ್ಮ ಮನದಲ್ಲಿ ಹಸಿರಾಗಿ ನಿಲ್ಲುವ ವಿಷಯಗಳು. ನಮ್ಮ ದೇಶದಲ್ಲಿ ಯುಗಾದಿ ಹಬ್ಬಕ್ಕಿರುವ ವೈಶಿಷ್ಟ್ಯತೆ, ದೇಶದ ವಿವಿಧ ಭಾಗಗಳಲ್ಲಿ ಅದನ್ನಾಚರಿಸುವ ಪರಿ ಎಲ್ಲವು ಸೊಗಸೇ. ಹಬ್ಬದ ದಿನದ ಬೆಳಗ್ಗೆ ಬೆಂಗಳೂರು ಆಕಾಶವಾಣಿಯಲ್ಲಿ ಎಸ. ಜಾನಕಿಯ ಕೋಕಿಲ ಕಂಠದಲ್ಲಿ ಪ್ರಸಾರವಾಗುತ್ತಿದ್ದ ವರಕವಿ ಬೇಂದ್ರೆಯ “ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ” ಇಂದಿಗೂ ನನ್ನ ಕಿವಿಗಳಲ್ಲಿ ರಿಂಗುಣಿಸುತ್ತಿದೆ. ಬಾಲ್ಯದ ಆ ನೆನಪುಗಳನ್ನು ತಾಜಾಗೊಳಿಸುವ ಜೊತೆಗೆ, ಹಬ್ಬದ ಇತರ ಪ್ರಾಧಾನ್ಯತೆಯನ್ನು ಓದುಗರಿಗೆ ಪರಿಣಾಮಕಾರಿಯಾಗಿ ತಲುಪಿಸಿದೆ ಈ ಲೇಖನ . ಧನ್ಯವಾದಗಳು ಪ್ರೇಮಲತಾ.
    ಉಮಾ ವೆಂಕಟೇಶ್

    Like

  3. ಯುಗಾದಿ ಹಬ್ಬದ ಪ್ರಬುದ್ಧತೆಯ ವಿಸ್ತೃತವಾದ ಲೇಖನದಿಂದ ನಿಮ್ಮ ಬರಹದ ಪ್ರಬುದ್ಧತೆ ಓದುಗರಿಗೆ ಗೋಚರವಾಗುತ್ತದೆ.
    ಹಬ್ಬದ ಹಿನ್ನೆಲೆಯ ಬಹಳಷ್ಟು ವಿಷಯಗಳನ್ನು ಸವಿವರವಾಗಿ ಹೇಳಿದ್ದೀರಿ.

    ಧನ್ಯವಾದಗಳು
    – ವಿಜಯನರಸಿಂಹ

    Like

  4. ಪ್ರೇಮಲತಾ ಅವರ ಲೇಖನಿಯಿಂದ ಬಂದ ಯುಗಾದಿ‌ ಪ್ರಬಂಧದಲ್ಲಿ ಎಷ್ಟೆಲ್ಲ ವಿಷಯಗಳಿವೆ. ವಿಕಿಪೀಡಿಯ ಮೀರಿಸುವುಷ್ಟು ವಿಷಯಗಳಿವೆ. ಈ ಲೇಖನವನ್ಮು ಓದಿ ಸಾಕಷ್ಟು ಹೊಸ ವಿಷಯಗಳು ಗೊತ್ತಾದವು. ಈ ಲೇಖನದ ಹಿಂದಿರುವ ಪರಿಶ್ರಮ ಅಗಾಧವದದ್ದು. ಯುಗಾದಿಯ ಹಾರ್ದಿಕ ಶುಭಾಶಯಗಳು.

    Like

  5. ನವ ನೂತನವಾಗಿ ಮರಳುವ ಯುಗಾದಿಯ ಬಗ್ಗೆ ಸಂಶೋಧನೆ ಮಾಡಿ ಬರೆದ ಉತ್ತಮ ಲೇಖನ. ಮಾಗಿಯ ನಂತರ ಚಳಿ ಕೊಡವಿಕೊಂಡು ಪ್ರಕೃತಿ ತೆರೆದುಕೊಳ್ಳುವ ಪ್ರಕ್ರಿಯೆಯ ಸಂಕೇತದ ಯುಗಾದಿಯನ್ನು ವಿಶ್ವದ ಹಲವೆಡೆ ಆಚರಿಸುವ ವಿಚಾರವನ್ನು ಎತ್ತಿ ತೋರಿಸಿದ್ದೀರಿ.

    ಮರಾಠಿಗರು ಇದನ್ನು ‘ಗುಡಿ ಪಾಡವಾ’ ಎಂದು ಆಚರಿಸುತ್ತಾರೆ, ಪಡ್ವಾ ಅಲ್ಲ. ಪಾಡವಾ ಎಂದರೆ ಪಾಡ್ಯ. ಗುಡಿ ಎಂದರೆ ಮಡಿಕೆ. ಚಿಕ್ಕ ಮಡಿಕೆಯನ್ನು ಬೋರಲಾಗಿ ಕೋಲಿಗೆ ಕಟ್ಟಿ, ಮಾವಿನ ತಳಿರಿಂದ ಶೃಂಗರಿಸುವುದು ಅಲ್ಲಿನ ಪದ್ಧತಿ.

    ಈ ಸಲ ಯಾಕೋ ಹಲವಾರು ಕಾಗುಣಿತದ ತಪ್ಪುಗಳು, ಓದುವಾಗ ಮೊಸರಿನಲ್ಲಿ ಕಲ್ಲು ಸಿಕ್ಕಿಸಿದವು.

    – ರಾಂ

    Like

Leave a comment

This site uses Akismet to reduce spam. Learn how your comment data is processed.