ವಸುಮತಿ ರಾಮಚಂದ್ರ ಅವರ ಕಿರು ಕಥೆ ಹಾಗು ಕವಿತೆಗಳು

ವಸುಮತಿ ರಾಮಚಂದ್ರ ಅವರ ಕಿರು ಕಥೆ ಹಾಗು ಕವಿತೆಗಳು:

ಸಮುದ್ರದ ನೀರನ್ನು ಬೊಗಸೆಯಲ್ಲಿ ಹಿಡಿಯುವುದೆಷ್ಟು ಅಸಂಬದ್ಧವೋ ಹಾಗೇ ವಸುಮತಿಯವರ ಎಲ್ಲ ಪ್ರತಿಭೆಯನ್ನು ಒಂದು ಕಂತಿನಲ್ಲಿ ಪರಿಚಯಿಸುವುದು ಅಷ್ಟೇ ಸಂಬದ್ಧವೇ ಸರಿ. ಸಾಹಿತ್ಯ , ಚಿತ್ರಕಲೆ, ಬೋಧನೆ, ಅಭಿನಯ ಇತ್ಯಾದಿಗಳಲ್ಲಿ ತಮ್ಮ ಆಸಕ್ತಿಯ ಹರವಿರುವ ಇವರ ಕೆಲವು ರಚನೆಗಳ ಪರಿಚಯವಷ್ಟೇ ಮಾಡಿದ್ದೇನೆ. ನಮ್ಮ ವಾರದ ಲೇಖನಗಳಿಗೆ ಹೋಲಿಸಿದರೆ ಇದು ಸ್ವಲ್ಪ ದೀರ್ಘ ಎನ್ನಿಸಿದರೂ ತನ್ನ ವೈವಿಧ್ಯತೆ ಹಾಗೂ ವಿದ್ವತ್ಪೂರ್ಣತೆಯಿಂದ ನಿಮ್ಮನ್ನು ಹಿಡಿದಿಡುವಲ್ಲಿ ಸಂದೇಹವಿಲ್ಲ.

Screenshots_2015-09-07-17-40-43

received_981206478589374

SHORT STORY-1

ಚಕ್ರ ತಿರುಗಿತು….

ಆ ಮುದುಕ ಏನೋ ಗೊಣಗುತ್ತಾ ಕಿಟಕಿಯಾಚೆ ಕ್ಯಾಕರಿಸಿ ಉಗಿದ…

. ಅದು ಅಲ್ಲೇ ರಸ್ತೆ ಪಕ್ಕದಲ್ಲಿ ಬಾಳೆಹಣ್ಣು ತಿನ್ನುತ್ತಾ ನಿಂತಿದ್ದವನಿಗೆ ಸಿಡಿಯಿತು.. “ ಕೊಳಕು ಜನ..’ ಅಂತ ಕಿರುಚಿ ಆತ ಬಾಳೇ ಹಣ್ಣಿನ ಸಿಪ್ಪೆಯನ್ನು ರಸ್ತೆಯೆಡೆ ಎಸೆದ.. ..

ಅದು ತನ್ನ ಮೇಲೆ ಬೀಳುವುದನ್ನು ಸ್ಲಲ್ಪದರಲ್ಲೇ ತಪ್ಪಿಸಿಸಿಕೊಂಡ ಸೈಕಲ್ ಸವಾರ.. “ತಲೆ ಇದೆಯೇನ್ರೀ….? ಅಂತ ಅರಚಿ ರಾಂಗ್ ಸೈಡನಲ್ಲಿ ನುಗ್ಗಿದ.. ..

ಆಗ ಎದುರಾಗಿ ಬಂದ ಕಾರಿನವನೊಬ್ಬ.. ಸೈಕಲ್ ಸವಾರನನ್ನು ದುರುಗುಟ್ಟಿ ನೋಡಿ “ರೋಡ್ ಸೆನ್ಸ್ ಇಲ್ಲ … ನಾಲಾಯಕ್ ಜನ..’…’ ಅಂತ ಕೆಂಪು ದೀಪವನ್ನು ಅಲಕ್ಷಿಸಿ ನುಗ್ಗಿದ್ದನ್ನು ಕಂಡು ಜಡವಾಗಿ ನಿಂತಿದ್ದ ಪೋಲೀಸಪ್ಪ ಚೈತನ್ಯ ತುಂಬಿಕೊಂಡು ಅವನನ್ನು ಬೆನ್ನೆಟ್ಟಿದ.. …

ಅವರ ನಡುವೆ ಇನ್ನೂರು ರೂಗಳಿಗೆ ವ್ಯಾಪಾರ ಕುದುರಿದ್ದು ಪಕ್ಕದಲ್ಲೇ ನಿಂತ ಬಸ್ ಕಂಡೆಕ್ಟರ್ ಗಮನಿಸಿದ…

“ಪೋಲೀಸರೇ ಕಳ್ಳರು…” ಅಂತ ಮಣಗುಟ್ಟಿ.. ಪ್ರಯಾಣಿಕನೊಬ್ಬ ನೀಡಿದ ಮೂವತ್ತು ರೂಗಳಲ್ಲಿ ಹದಿನೈದನ್ನು ಜೇಬಿಗಿಳಿಸಿ ಟಿಕೆಟ್ ಕೊಡದೇ ಹದಿನೈದನ್ನು ಮರಳಿಸಿ, ಲಜ್ಜೆಗೆಟ್ಟ ನಗು ಬೀರಿದ..

“ನಾಚಿಕೆ ಇಲ್ಲದ ಜನ ಸರ್ಕಾರವನ್ನು ಕೊಳ್ಳೆ ಹೊಡೀತಾರೆ ….”ಅಂತ ಕಿಟಕಿ ಪಕ್ಕ ಕುಳಿತ ಮುದುಕ ಕ್ಯಾಕರಿಸಿ ಹೊರಗೆ ಉಗಿದ..

…..

……    ಚಕ್ರ ತಿರುಗಿತು!!!!

SHORT STORY-2

ಒಂದು ಪುಟ್ಟೇ ಪುಟ್ಟ ಕಥೆ–ಪ್ರೀತಿ ಬಗ್ಗೆ…

…. ಒಂದು ದ್ವೀಪ ಇತ್ತಂತೆ. ಅಲ್ಲಿ ಬರೀ ಆಡಂಬರ , ಶ್ರೀಮಂತಿಕೆ, ದು:ಖ, ಆನಂದ, ಪ್ರೀತಿಮುಂತಾದವೆಲ್ಲಾ ಇರ್ತಿದ್ವಂತೆ. ಒಂದ್ ಸಲ ಆ ದ್ವೀಪ ಮುಳ್ಗೋಗಕ್ಕೆ ಶುರು ಆಯ್ತಂತೆ. ಆಗ ಎಲ್ರೂ ಒಂದೊಂದು ಹಡಗಲ್ಲಿ ಬೇರೆ ದ್ವೀಪಕ್ಕೆ ಹೊರಟ್ರಂತೆ. ಪ್ರೀತಿಗೆ ಮಾತ್ರ ಹಡಗಿರಲಿಲ್ಲ ಅಂತೆ. ಅದು ಮೊದ್ಲು ಶ್ರೀಮಂತಿಕೆ ಹತ್ರ ಹೋಯ್ತಂತೆ “ಅಣ್ಣಾ ನಾನೂ ನಿಂಜೊತೆ ಬರ್ಲಾ?” ಅಂತ ಕೇಳ್ತಂತೆ. ಅದಕ್ಕೆ ಶ್ರೀಮಂತಿಕೆ“ ಏ! ನೀನು ಒದ್ದೆ ಆಗಿದ್ದೀ. ಬರ್ಬೇಡ ನನ್ ಹಡಗು ಗಲೀಜಾಗುತ್ತೆ” ಅಂತ ಗದರಿಸ್ತಂತೆ. ಆಮೇಲೆ ಪ್ರೀತಿ ಆಡಂಬರ ಹತ್ರ ಕೇಳ್ದಾಗ,“ ಹೂಂ, ನೀನ್ ಬರ್ಬಹುದಿತ್ತು. ಆದ್ರೆ ನನ್ ಹಡಗಿನ್ ತುಂಬಾ ಚಿನ್ನ, ಬೆಳ್ಳಿ ತುಂಬಿವೆ ಜಾಗಾನೇ ಇಲ್ಲ” ಅಂತಂತೆ. ಸರಿ ದು:ಖನ ಕೇಳಿದ್ರೆ. “ಅಯ್ಯೋ ನಾನೇ ನಂಗೆ ಭಾರ ನೀನ್ಬೇರೆನಾ?” ಅಂತ ಅಳುತ್ತಾ ಹೋಗ್ಬಿಡ್ತಂತೆ. ಆನಂದವೋ ಪರವಶವಾಗಿತ್ತು. ಅದಕ್ಕೆ ಪ್ರೀತಿಯ ಮೊರೆ ಎಲ್ಲಿ ಕೇಳ್ಬೇಕು?

ಪ್ರೀತಿ ಏನೂ ತೋಚ್ದೇ ನಿಂತಿರುವಾಗ ಒಬ್ಬ ಮುದುಕ ಬಂದು “.ಬಾ ನಂಜೊತೆ…” ಅಂತ ಕರ್ಕೊಂಡು ಹೊರಟನಂತೆ. ಪ್ರೀತಿ“ ನೀನ್ಯಾರು?” ಅಂತ ಕೇಳ್ತಂತೆ. ಅದು “ನಾನು ಕಾಲ. ನಿನ್ನ ಯಾರು ಮರೆತ್ರೂ ನಾನು ಮರೆಯೋಲ್ಲ…….”ಅಂತಂತೆ.

“ಎಲ್ಲರೂ ನನ್ನ ಕೈ ಬಿಟ್ಟಾಗ ನೀನು ಮಾತ್ರ ಯಾಕೆ ಸಹಾಯ ಮಾಡ್ದೆ….? ” ಅಂತ ಪ್ರೀತಿ ಕೇಳಿದ್ದಕ್ಕೆ ಕಾಲ ಹೇಳ್ತಂತೆ “ ನನಗೆ ಮಾತ್ರ ಪ್ರೀತಿಯನ್ನು ಅರ್ಥ ಮಾಡಿಕೊಳ್ಳೋಕೆ ಬರುತ್ತೆ…..”

==============XXXXXXXXXX==============

ಲೇಖನಿಯ ಪದಗಳಿಗೆ ರೇಖೆಗಳ ಸಖ್ಯ!!! ( Vasumati is a good artist too !!)

ಭೀಷ್ಮ (ಕವನ )

Bheeshma facebook_1442824924769

ನೋಯಿಸಿತೆ ಶರಶಯ್ಯೆ ಎಂದೆಯಾ ಮಾಧವ?

ಬದುಕೆಲ್ಲ ದೊರೆತದ್ದು ಶರ ಶಯ್ಯೆಯಲ್ಲವ?

ಯೌವನದ ಮದದ ಶಪಥವೆನ್ನುವ ಶರ

ಭೀಷ್ಮನೆನ್ನುವ ಬಿರುದು ದೊರೆತ ಹೆಮ್ಮೆಯ ಶರ

ಬಂದ ಬಿರುದನು ಕಾಪಿಡುವ ಕಾತರತೆ ಶರ

ಬೆಂದ ಬಯಕೆಗ ಮರೆಸುವನಿವಾರ್ಯತೆಯ ಶರ

ಎಲ್ಲ ಇದ್ದರೂ ಏಕಾಕಿತನವೆನ್ನೋ ಶರ

ಸುಳ್ಳು ಶಿಷ್ಟಾಚಾರ ಸಂಯಮದ ಶರ

ಧರ್ಮವನ್ನುಮೋದಿಸಲು ಬಿಡದ ಶರ

ಅಧರ್ಮವನು ವಿರೋದಿಸಲು ಬಿಡದ ಶರ

ಸಹಜ ಸಾವನು ಕೊಡದ ಇಚ್ಛಾಮರಣವೆನುವ ಶರ

ಸಾಯಲೂ ಶುಭದಿನಕೆ ಕಾಯ್ವ ನೋವಿನ ಶರ

ಪ್ರತಿದಿನವು ಪ್ರತಿ ಕ್ಷಣವೂ ಶರಶಯ್ಯೆ ಹರಿಯೇ

ಹೊಸದಾವ ನೋವಿಲ್ಲ ನೀ ಹೇಗೆ ಅರಿಯೆ?

ಶರ ಪಿಡಿಯದ ಸರಸತಿಗೆ ಕರಮುಗಿಯುತ್ತಾ ( ಕಿರು ಕವಿತೆ)

saraswati facebook _1442818406177
saraswati

ಹರುಷದಿ ಸರಸತಿ

ಹರಸಲು ವದನದಿ

ಸರಸರ ಬರುವವು ಕವನಗಳು |

ಶರಗಳು ಧನುವನು

ತೊರೆಯುತ ಬರುವೊಲು

ಭರ ಭರ ಬರುವವು ಬರಹಗಳು ||

ಸರ್ವ ಲಘು ಪದ್ಯ: ಒಂದೂ ಗುರುವಿರದ ಪದಗಳ ಸರಮಾಲೆ!! ಇದು ಭೋಗ ಷಟ್ಪದಿಯಲ್ಲಿದೆ

vanite facebook_1442818364439
vanite

ಅವಳು ಜನನಿ ಅವಳು ಮಡದಿ

ಅವಳು ಗೆಳತಿ ಅವಳು ಮಗಳು

ಅವಳು ವನಿತೆಯವಳ ಮಮತೆ ಮಧುರ ಅನುಪಮI  

ಅವಳ ಒಳಗೆ ರಮೆಯು ಇಹಳು

ಭಾವದ ಭಯವ ದಹಿಸುತಿಹಳು

ಅವಳು ಹರಸಿ ಸಲಹೆ ಬದುಕ ಚೆಲುವು ನಿರುಪಮII

ದವನ ( ಕಿರು ಕವಿತೆ)

ಹತ್ತಾರು ಮಲ್ಲಿಗೆಯ ನಡುವಿದ್ದರೂ ಕೂಡ

ಕತ್ತು ಬಗ್ಗಿಸಿ ಕುಳಿತು ಅಳುತಿತ್ತು ದವನ

ಚನ್ನ ಮಲ್ಲಿಗೆ ಎಂದು ಹೊಗಳುವರು ಎಲ್ಲರೂ

ನನ್ನ ಮೇಲೇಕಿಲ್ಲ ಒಂದೂ ಕವನ?

ಮೆಲ್ಲನೇ ನಾ ನುಡಿದೆ ಮುರಳಿಧರನಂತೆ ನೀ

ಮಲ್ಲಿಗೆಯ ಮನದ ಗೋಪಿಯರ ನಡುವೆ

ದವನ, ನಿನ್ನೊಡಗೂಡಿ ಮಲ್ಲಿಗೆಯ ಹಾರವದು

ಕವನ ಲಯದಿಂಗೂಡಿ ಮಧುರವಾಯ್ತು ಎನುವೆ

 

7 thoughts on “ವಸುಮತಿ ರಾಮಚಂದ್ರ ಅವರ ಕಿರು ಕಥೆ ಹಾಗು ಕವಿತೆಗಳು

  1. ವಸುಮತಿಯವರ ಚುಟುಕು ಕವಿತೆ ಮತ್ತು ಕತೆಗಳ ಮೂಲಕ ನಮ್ಮ ಬಳಗಕ್ಕೆ ಈ ಪ್ರತಿಭಾನ್ವಿತ ಲೇಖಕಿಯನ್ನುಪರಿಚಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಮತ್ತು ನಿಮ್ಮ ಆಯ್ಕೆಯು ಬಹಳ ಚೆನ್ನಾಗಿದೆ .

    ದಾಕ್ಷಾಯಣಿ

    Like

  2. ವಸುಮತಿಯವರ ಕಥೆ, ಕವನ, ಚಿತ್ರ ಎಲ್ಲವೂ ಸುಂದರ. ಅವರ ಪ್ರತಿಭೆಗೆ ಸಾಕ್ಷಿ, ಅವರಿಗೆ ‘ ಸರ ಸರ, ಭರ ಭರ’ ವೆನುತ ಬರುವ ಕವನಗಳು! ಭೋಗ ಷಟ್ಪದಿಯ ಗುರುವಿಲ್ಲದ ‘ಲಘು’ಪದ್ಯ ಮತ್ತು ಭೀಷ್ಮನ ಶರ ಪಂಜರದ ಸಾಲುಗಳು ಮನದಲ್ಲಿ ನಿಲ್ಲುವಂಥವು.ಹನಿಗತೆಗಳು ಸಹ. ಅತಿಥಿ ಸಾಹಿತಿ ವಸುಮತಿಯವರ ಇವೆಲ್ಲವನೂ ಉಣಿಸಿ ತೃಪ್ತಿ ಪಡಿಸಿದ ಸುದರ್ಶನರಿಗೂ ಕೃತಜ್ಞತೆಗಳು.

    Like

  3. ನಮ್ಮ ಇಂದಿನ ಅತಿಥಿ ಲೇಖಕಿ ವಸುಮತಿ ಅವರ ಕೈಯಿನ ಸಾಹಿತ್ಯದೂಟ ನಿಜಕ್ಕೂ ಸ್ವಾದಿಷ್ಟವಾಗಿದೆ. ಬಹುಮುಖ ಪ್ರತಿಭೆಯ ಲೇಖಕಿ. “ಭೀಷ್ಮ“ ಕವನದಲ್ಲಿ ಅವನ ಜೀವನದ ಸಾರವನ್ನೆಲ್ಲಾ ಬಹಳ ಪರಿಣಾಮಕಾರಿಯಾಗಿ ತಮ್ಮ ಪದಗಳಲ್ಲಿ ಹೆಣೆದಿಟ್ಟಿದ್ದಾರೆ. ಸರಸತಿಯ ಪದ್ಯ ಮತ್ತು ದವನದ ಅಳಲನ್ನು ವಿವರಿಸಿರುವ ಕವನ ಬಹಳ ಸುಂದರವಾಗಿದೆ. ಈಕೆಯ ವಿಗ್ನಾನದ ಲೇಖನಗಳನ್ನು ನಮಗೆ ಪರಿಚಯಿಸಲಿ ಎಂದು ಕೋರಿಕೊಳ್ಳುತ್ತೇನೆ. ವಸುಮತಿ ಅವರನ್ನು ನಮ್ಮ ಸದಸ್ಯರಿಗೆ ಪರಿಚಯಿಸಿದ ಸುದರ್ಶನ್ ಅವರಿಗೂ ನನ್ನ ಧನ್ಯವಾದಗಳು.
    ಉಮಾ ವೆಂಕಟೇಶ್

    Like

Leave a comment

This site uses Akismet to reduce spam. Learn how your comment data is processed.