ಮಡಿಬಾ, ಮತ್ತೆ ಬಾ – ಗಿರಿಧರ ಎಸ್ ಹಂಪಾಪುರ ಕವನ

ಇವತ್ತು ನೆಲ್ಸನ್ ಮಂಡೆಲಾ ಅವರ ಪ್ರಥಮ ಪುಣ್ಯತಿಥಿ. ಡಾ. ಗಿರಿಧರ ಹಂಪಾಪುರ ಅವರಿಂದ ಒಂದು ಕವನಾಂಜಲಿ.

cc- lasanta.com.ec

ಮಡಿಬಾ,

ವರ ವೀರ
ಧೀರ ಶೂರ
ಮಡಿಬಾ
ಮತ್ತೆ ಬಾ,
ಕಾರಾಗ್ರಹ ನಿನ್ನ ನಿತ್ರಾಣಗೊಳಿಸಲಿಲ್ಲ
ಹಗೆಯ ಭಾವನೆ ಹೃದಯ ತಟ್ಟಲಿಲ್ಲ.
ಬಿಳಿಯರ ಕರಿ ಮಡಿಯನ್ನು ಕಡಿದು
ವರ್ಣಭೇದವನ್ನು ಛೇದಿಸಿ
ಸಹನೆ ಸಹಬಾಳ್ವೆಯ ರೂಪಿಸಿ
ಕಾಮನಬಿಲ್ಲಿನ ನಾಡೊಂದ ಸೃಷ್ಟಿಸಿ
ಗೆದ್ದು ರಾಜ್ಯವ ಬಿಟ್ಟುಕೊಟ್ಟ ರಾಜರ್ಷಿ
ಈ ಧರೆಯೋಳ್ ಮತ್ತೆ ಬಾ
ಮಡಿಬಾ

6 thoughts on “ಮಡಿಬಾ, ಮತ್ತೆ ಬಾ – ಗಿರಿಧರ ಎಸ್ ಹಂಪಾಪುರ ಕವನ

 1. ಮಹಾತ್ಮಾ ಗಾಂಧಿಯವರು ಕಣ್ಮರೆಯಾದ ನಂತರ ಹುಟ್ಟಿದ (ನನ್ನಂಥ) ಪೀಳಿಗೆಯವರಿಗೆ ಇನ್ನೊಬ್ಬ ಇಂಥ ಮಹಾ ಚೇತನವನ್ನು ನೋಡಲಿಕ್ಕೆ ಸಿಗಲಿಕ್ಕಿಲ್ಲ. ೨೭ ವರ್ಷಗಳ ನಂತರ ಕಾರಾಗೃಹದಿಂದ ಹೊರಬಂದ ತಕ್ಷಣ ಕೊಟ್ಟ ಪತ್ರಿಕಾ ಗೋಷ್ಠಿಯನ್ನು ದೂರದರ್ಶನದಲ್ಲಿ ನೋಡಿದವರಿಗೆ ಅವರ ತೀಕ್ಷ್ಣಮತಿ, ಸಮಯಪ್ರಜ್ನೆ ಮರೆಯುವಂತಿಲ್ಲ. ಗಿರಿಧರ ಅವರ ”ಬಿಳಿಯರ ಕರಿ ಮಡಿ” -ಈ ತೀಕ್ಷ್ನ ಪದಗುಚ್ಛದ ಮುಂದೆ apartheid ಬಿಳಿಚಿಕೊಂಡಂತಿದೆ! ಅರ್ಥಪೂರ್ಣ ಕವನಾಂಜಲಿ.

  Like

  • ನಿಮ್ಮ ಮಾರ್ಗದರ್ಶನಕ್ಕ ಮತ್ತು ಸಲಹೆಗಳಿಗೆ ಧನ್ಯವಾದಗಳು.

   Like

 2. ಸಂಭವಾಮಿ ಯುಗೇಯುಗೇ ಎಂಬುದು ಸನಾತನ ಧರ್ಮದ ಭರವಸೆಯ ನುಡಿ. ಅನ್ಯಾಯ ಅತಿಕ್ರಮಗಳನ್ನು ಪ್ರತಿಭಟಿಸುವ ಈ ಮಹಾನ್ ಚೇತನಗಳು ಈ ನುಡಿಯನ್ನು ಮಾರ್ದನಿಸುವುದಷ್ಟೇ ಅಲ್ಲ, ಪೀಳಿಗೆಯಿಂದ ಪೀಳಿಗೆಗೆ ಅದನ್ನು ಜೀವಂಅತವಾಗಿಯೂ ಇಡುತ್ತವೆ. ಈ ಶತಮಾನ ಕಂಡ ಅಪರೂಪದ ವ್ಯಕ್ತಿ. ಹೋರಾಟದ ಇತಿಮಿತಿಗಳನ್ನು ವಿಸ್ತರಿಸಿದ ಮಂಡೇಲಾ, ಅಧಿಕಾರದ ವಿಷಯದಲ್ಲಿ ಅವಧಿಯನ್ನು ಪರಿಮಿತಿಯ ಒಳಗೆ ತೊರೆದಿದ್ದು ಅವರ ಆತ್ಮಸಾಕ್ಷಾತ್ಕಾರದ ಮಜಲು ಎಷ್ಟೆಂಬುದನ್ನು ಮನವರಿಕೆ ಮಾಡಿಕೊಡುತ್ತದೆ,
  ಗಿರಿಧರ ಅವರ ಈ ಕವನವನ್ನು ನಾನು ವಾಚಿಸುವಾಗ ಕೇಳಿದ್ದೆ. ಸರಳ ಸುಂದರ ಆದರೆ ಬಿಗಿಯಾದ ನಿರೂಪಣೆ ಇಲ್ಲಿದೆ.

  Like

  • ಸರಳ ಪದ್ಯ. ವಿಶ್ವಾಸವಿಟ್ಟು ಓದಿ ಪ್ರೋತ್ಸಾಹ ನೀಡಿದ್ದೀರಿ. ಧನ್ಯವಾದಗಳು.

   Like

 3. ದಕ್ಷಿಣ ಆಫ಼್ರಿಕೆಯಲ್ಲಿ ನಡೆಯುತ್ತಿದ್ದ ವರ್ಣೀಯ ನೀತಿಯ ವಿರುದ್ಧ ಹೋರಾಟದಲ್ಲಿ ತನ್ನ ತನು ಮನ ಧನಗಳನ್ನೆಲ್ಲ ಅರ್ಪಿಸಿ, ಜೀವನವನ್ನೇ ಯುದ್ಧಭೂಮಿಯನ್ನಾಗಿ ಪರಿವರ್ತಿಸಿಕೊಂಡ ನಮ್ಮೆಲ್ಲರ ನೆಚ್ಚಿನ ನೆಲ್ಸನ್ ಮಂಡೆಲಾ ಅವರ ಪ್ರಥಮ ಪುಣ್ಯ ತಿಥಿಯಂದು “ಮಡಿಬಾ“ ಕವನದ ಪ್ರಕಟನೆ ನಿಜಕ್ಕೂ ಅವರಿಗೆ ಸಲ್ಲಿಸಬಹುದಾದ ಉತ್ತಮ ಶ್ರದ್ಧಾಂಜಲಿ. ಗಿರಿಧರ್ ಅವರು ಈ ಕವನದಲ್ಲಿ, ತಮ್ಮ ಮನದ ಭಾವನೆಗಳನ್ನು, ಬಹಳ ಸರಳ ರೀತಿಯಲ್ಲಿ ತೆರೆದಿಟ್ಟಿದ್ದಾರೆ. ಮಡಿಬಾ ನೆಲ್ಸನ್ ಮಂಡೆಲಾ ಅವರಿಗೆ ದಕ್ಷಿಣ ಆಫ಼್ರಿಕಾ ಜನರಿತ್ತಿದ್ದ ಪ್ರೀತಿಯ ಹೆಸರು. ಗಿರಿಧರ್ ಮಡಿಬಾರನ್ನು ನಮ್ಮ ಗಾಂಧಿಯ ತೆರದಲ್ಲೇ ವರ್ಣಿಸಿ, ಮತ್ತೊಮ್ಮೆ ಜನ್ಮವೆತ್ತಿ ಬಾ. ನೀನೊಬ್ಬ ರಾಜರ್ಷಿ , ಈ ಧರೆಯಲ್ಲಿನ ಹಗೆತನವನ್ನೆಲ್ಲಾ ನಿವಾರಿಸಲು, ನಮ್ಮಲ್ಲಿ ಹೊಗೆಯಾಡುತ್ತಿರುವ ದ್ವೇಷ್ಗಳನ್ನೆಲ್ಲಾ ಹೊಡೆದೋಡಿಸಲು ಧರೆಗಿಳಿದು ಬಾ ಎಂದು ಮನಃಪೂರ್ವಕವಾಗಿ ಕರೆದು, ಮಡಿಬಾ ಅವರ ಬಗ್ಗೆ ತಮಗಿರುವ ಗೌರವವನ್ನು ಪದಗಳಲ್ಲಿ ಬರೆಯುತ್ತಾರೆ. ಗಿರಿಧರ್ ಅವರ ಕವನಗಳು ಕಾಮನಬಿಲ್ಲಿನಂತೆ ನಮ್ಮ ವೇದಿಕೆಯ ಆಗಸದಲ್ಲಿ ಮೂಡಲಿ ಎಂದು ಆಶಿಸುತ್ತೇನೆ.
  ಉಮಾ ವೆಂಕಟೇಶ್

  Like

  • ತುಂಬಾ ಧನ್ಯವಾದಗಳು. ನಿಮ್ಮ ಪ್ರೊತ್ಶಾಹವೇ ನನಗೆ ಸ್ಪೂರ್ತಿ

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.