ನೋಡು ಬಾ ನಮ್ಮೂರ ಸರಣಿ: ಮೈಸೂರೆಗೊಳುವ ಮೈಸೂರು! – ಉಮಾ ವೆಂಕಟೇಶ್

“ಚಿನ್ನದ ನಾಡಿದು ಮೈಸೂರು, ಶ್ರೀಗಂಧದ ಬೀಡಿದು ಮೈಸೂರು, ವೀಣೆಯ ಬೆಡಗಿನ ಮೈಸೂರು, ನಾಲ್ವಡಿ ಕೃಷ್ಣನ ಮೈಸೂರು” ಈ ಪದ್ಯದ ಸಾಲುಗಳಲ್ಲಿ ನನ್ನೂರ ಹಿರಿಮೆ, ಗರಿಮೆ, ಸಿರಿ-ಸಂಪತ್ತು ಮತ್ತು ಸೌಂಧರ್ಯಗಳು ತುಂಬಿ ತುಳುಕುತ್ತವೆ. ಸರ್ ಮೋಕ್ಷಗುಂಡಮ್ ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ಪಡೆದಿದ್ದ ನನ್ನೂರು, ತನ್ನ ವೈಭವದ ಪರಾಕಾಷ್ಠೆಯಲ್ಲಿದ್ದಾಗ, ಮಾದರಿ ಮೈಸೂರು” ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಒಡೆಯರ್ ಮನೆತನದಿಂದ ಆಳಲ್ಪಟ್ಟ ಈ ಊರಿನಲ್ಲಿ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ವಿಧ್ಯಾಭ್ಯಾಸ ಹೀಗೆ ಒಂದೇ ಎರಡೇ, ಎಲ್ಲಾ ರಂಗಗಳಲ್ಲೂ ತನ್ನ ಹಿರಿಮೆಯನ್ನು ಮೆರೆದ ಈ ಮಹಿಷಪುರದಲ್ಲಿ, ಹುಟ್ಟಿ, ಬೆಳೆದು, ವಿದ್ಯಾಭ್ಯಾಸ ಮಾಡಿದ ನನ್ನ ಮನದಲ್ಲಿ, ಅಲ್ಲಿನ ನೆನಪುಗಳು ಇನ್ನೂ ಹಚ್ಚಹಸಿರಾಗಿಯೇ ಉಳಿದಿದೆ.

Mysore aramane
Mysore aramane -CC Wiki

ಸರಸ್ವತಿಪುರಂ ಮಧ್ಯದ ತೆಂಗಿನ ತೋಟದ ಹತ್ತಿರದಲ್ಲಿ (ಸಮತೆಂತೋ): ಬುದ್ಧಿಜೀವಿಗಳ ನಗರವೆಂದು ಹೆಸರಾಗಿದ್ದ ಈ ಬಡಾವಣೆಯ ಮೊದಲನೆಯ ಮೇನ್ ರಸ್ತೆಯಲ್ಲಿದ್ದ ಮಾಡಲ್ ಹೌಸುಗಳ ಸಾಲಿನಲ್ಲಿದ್ದ ೩ನೆಯ ಮನೆಯಲ್ಲಿ ನಾನು ಹುಟ್ಟಿ ನನ್ನ ಜೀವನದ ಮೊದಲ ಮೂರು ವರ್ಷಗಳನ್ನು ಕಳೆದಿದ್ದು. ಆ ದಿನಗಳು ನನ್ನ ನೆನಪಿನಲ್ಲಿ ಅಷ್ಟೇನೂ ಸ್ಪಷ್ಟವಾಗಿಲ್ಲದಿದ್ದರೂ, ಹಲವು ಚಿತ್ರಗಳು ಇನ್ನೂ ಮಸುಕು ಮಸುಕಾಗಿವೆ. ನಮ್ಮ ಮನೆಯ ಮುಂದಿದ್ದ ಹಳದಿ ಗುಲಾಬಿ ಮತ್ತು ಕೆಂಪು ದಾಸವಾಳದ ಗಿಡಗಳು, ಹಾಲಿನ ವರ್ತನೆಯ ಹೆಂಗಸು ನಿಂಗಮ್ಮ, ಮನೆಯ ಮುಂದಿನ ಕೋಣೆಯಲ್ಲಿ ಸಂಜೆ ಸಂಗೀತದ ಪಾಠವನ್ನು ಹೇಳುತ್ತಿದ್ದ ಕನ್ನಡಕಧಾರಿ ಮೇಷ್ಟ್ರು ರಾಘವನ್, ನಮ್ಮ ಮನೆಯ ಮುಂದಿನ ಸಾಲಿನಲ್ಲಿದ್ದ ಅಂಗಡಿಯಲ್ಲಿ ಬಟ್ಟೆ ಹೊಲೆಯುತ್ತಿದ್ದ ದರ್ಜಿ ರಾಜು, ಅಲ್ಲಿಯೇ ಹತ್ತಿರದಲ್ಲಿದ್ದ ಸರಸ್ವತಿ ಶಿಶುವಿಹಾರ, ನನ್ನ ಅಕ್ಕ ಅಲ್ಲಿಗೆ ಹೋಗುವಾಗ ಧರಿಸುತ್ತಿದ್ದ ಬಣ್ಣಬಣ್ಣದ ಹೂವುಗಳ ಸ್ಕರ್ಟ್, ಸುಂದರವಾದ ಕಂದು ಬಣ್ಣದ ಕಾಲಿನ ಶೂಗಳು, ಶಿಶುವಿಹಾರದ ಹತ್ತಿರದಲ್ಲೇ ವಾಸಿಸುತ್ತಿದ್ದ ಪ್ರಸಿದ್ಧ ಕನ್ನಡ ಚಲನಚಿತ್ರ ನಿರ್ದೇಶಕ ಶಂಕರ್ ಸಿಂಗ್ ಮತ್ತು ಅವರ ಪತ್ನಿ ಹೆಸರಾಂತ ನಟಿ ಮತ್ತು ಪ್ರತಿಮಾ ದೇವಿ ಅವರ ಮನೆ, ಮತ್ತು ಸದಾ ಅಲ್ಲೇ ನಿಂತಿರುತ್ತಿದ್ದ ಅವರ ಕರಿಯ ಬಣ್ಣದ ಹಿಲಮನ್ ಕಾರು ಇವೆಲ್ಲಾ ನನ್ನ ಮನದಲ್ಲಿ ಇನ್ನೂ ನೆಲೆಯಾಗಿ ನಿಂತಿವೆ. ಪ್ರತಿ ಶನಿವಾರ ಬೆಳಿಗ್ಗೆ ಮೈಸೂರು ಅರಮನೆಯ ಆನೆಗಳನ್ನು ಮೆರವಣಿಗೆಯಲ್ಲಿ ಅಲ್ಲಿ ಕರೆತರುತ್ತಿದ್ದರು. ಸ್ವಲ್ಪ ದಿನ ಅದನ್ನು ನೋಡಿ ಹೆದರುತ್ತಿದ್ದ ನನ್ನನ್ನು, ನಮ್ಮ ಅಜ್ಜಿ ಹತ್ತಿರ ಕರೆದು ಕೊಂಡು ಹೋಗಿ, ಏನೂ ಭಯವಿಲ್ಲ ಅದೇನೂ ಮಾಡುವುದಿಲ್ಲ ಎನ್ನುತ್ತಾ, ಮನೆಯಿಂದ ಬೆಳ್ಳಿಯ ತಟ್ಟೆಯಲ್ಲಿ ಅಕ್ಕಿ, ಬೆಲ್ಲ ಮತ್ತು ತೆಂಗಿನ ಕಾಯಿಯನ್ನು ಅದರ ಮುಂದಿಡುತ್ತಿದ್ದ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ಸಂಜೆಯಾಯಿತೆಂದರೆ ಮನೆಗಳ ತೋಟದಲ್ಲಿದ್ದ ಕೆಂಡ ಸಂಪಿಗೆ ಮರಗಳ ಹೂವುಗಳ ಮೊಗ್ಗಿನಿಂದ ಹೊರಸೂಸುತ್ತಿದ್ದ ಆ ಮತ್ತೇರಿಸುವ ಸುವಾಸನೆ, ಮಲ್ಲಿಗೆ ಮೊಗ್ಗುಗಳ ಸಂಭ್ರಮ, ಹೀಗೆ ಮೈಸೂರಿನಲ್ಲಿ ಯಾವಾಗಲೂ ಒಂದು ರೀತಿಯ ಹಬ್ಬದ ವಾತಾವರಣವೇ ಇತ್ತೇನೋ ಅನ್ನಿಸುತ್ತಿತ್ತು.  ಇನ್ನು ತಂದೆ ತಾಯಿಯ ಜೊತೆಯಲ್ಲಿ ಒಮ್ಮೊಮ್ಮೆ ಸಂಜೆ ಮೈಸೂರಿನ ಹೆಸರಾಂತ ದೇವರಾಜ ಮಾರ್ಕೆಟ್ಟಿಗೆ ಹೋಗುವುದೆಂದರೆ ಎಲ್ಲಿಲ್ಲದ ಸಡಗರ. ಅಲ್ಲಿನ ಸಾಲು ಅಂಗಡಿಗಳಲ್ಲಿ ನೇತು ಹಾಕಿರುತ್ತಿದ್ದ ಬಳೆ, ಟೇಪು, ಸರಗಳು, ವೈವಿಧ್ಯಮಯ ತರಕಾರಿ ಹಣ್ಣುಗಳು, ಅಲ್ಲಿಯೇ ಸಯ್ಯಾಜಿರಾವ್ ರಸ್ತೆಯಲ್ಲಿದ್ದ ಪ್ರಸಿದ್ಧ ಹೋಟೇಲ್ ಇಂದ್ರಭವನದಿಂದ ಹೊರಹೊಮ್ಮುತ್ತಿದ್ದ ಮಸಾಲೆದೋಸೆಯ ಹಿತವಾದ ಪರಿಮಳ, ಬಾಟಾ ಚಪ್ಪಲಿ ಅಂಗಡಿಯಲ್ಲಿ ಪ್ರದರ್ಶನಕ್ಕಿಟ್ಟಿರುತ್ತಿದ್ದ ವಿವಿಧ ನಮೂನೆಯ ಚಪ್ಪಲಿಗಳು ಹೀಗೆ ನೆನಪಿನ ಚಿತ್ರಗಳ ಸರಮಾಲೆಯೇ ಕಣ್ಣಿನ ಮುಂದೆ ನಿಲ್ಲುತ್ತದೆ.

Mysore sarasvathipuramdownload (1)
ಸರಸ್ವತಿಪುರಂ ಮೊದಲನೆಯ ಮೇನ್ ರೋಡ್ – CC-Wiki pictures

ಮೈಸೂರು ದಸರಾ ಎಷ್ಟೊಂದು ಸುಂದರ: ಪ್ರತಿ ವರ್ಷ ಅಕ್ಟೋಬರ್ ತಿಂಗಳ ೧೦ ದಿನಗಳು ನನ್ನ ಪ್ರಾಥಮಿಕ ಶಾಲಾ ದಿನಗಳ ಅಚ್ಚುಮೆಚ್ಚಿನ ಸಮಯವಾಗಿತ್ತು. ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಇನ್ನೂ ಜಯಚಾಮರಾಜ ಒಡೆಯರ್ ಮೈಸೂರಿನ ಆಳ್ವಿಕೆಯನ್ನು ನಡೆಸುತ್ತಿದ್ದರು. ಹಾಗಾಗಿ ಸುಮಾರು ೨-೩ ವರ್ಷಗಳು, ಅಂದಿನ ದಸರಾ ಸಂಭ್ರಮವನ್ನು ನಾನು ನೋಡುವ ಅವಕಾಶ ಸಿಕ್ಕಿತ್ತು. ನಮ್ಮ ತಂದೆ ಒಬ್ಬ ಭೂಗರ್ಭಶಾಸ್ತ್ರಜ್ಞರು. ಹಾಗಾಗಿ ಅವರ ಕೆಲಸವಿದ್ದದ್ದು ಉತ್ತರಕನ್ನಡ ಜಿಲ್ಲೆಯ ಕಾಳಿ ನದಿಯ ದಡದಲ್ಲಿದ್ದ ಸೂಪಾ ಪ್ರದೇಶದಲ್ಲಿ. ನಾವು ಮೂರು ಮಕ್ಕಳು, ನಮ್ಮ ತಾಯಿ, ಅಜ್ಜ, ಅಜ್ಜಿ ಮತ್ತು ನಮ್ಮ ಅವಿವಾಹಿತ ಚಿಕ್ಕಪ್ಪಂದಿರು ಮತ್ತು ಸೋದರತ್ತೆಯೊಡನೆ ಮೈಸೂರಿನಲ್ಲಿ ವಾಸಿಸುತ್ತಿದ್ದೆವು. ಆದರೆ ಪ್ರತೀ ದಸರಾ ಹಬ್ಬದ ಸಮಯದಲ್ಲೂ, ನಮ್ಮ ತಂದೆ ೧೦ ದಿನಗಳು ತಪ್ಪದೇ ಬರುತ್ತಿದ್ದರು. ಮನೆಯಲ್ಲಿ ಸರ್ವೇ ಸಾಧಾರಣವಾಗಿ ನೆಂಟರುಗಳು ಮೈಸೂರಿನ ದಸರಾ ಹಬ್ಬವನ್ನು ನೋಡಲು ಬಂದಿಳಿಯುತ್ತಿದ್ದರು. ಮನೆಯಲ್ಲಿ ಹೆಂಗಳೆಯರಿಗೆ ಕೈಬಿಡುವಿಲ್ಲದಷ್ಟು ಕೆಲಸ. ನಮಗೋ ರಜೆಯ ಜೊತೆಗೆ ಗೊಂಬೆ ಕೂರಿಸಿ ಮೆರೆಸುವ ಸಂಭ್ರಮ.

Dasara bombegalu
ದಸರಾ ಬೊಂಬೆಗಳ ವೈಭವ–CC- Wiki

ಬೊಂಬೆಯಾಟವಯ್ಯಾ: ನಮ್ಮ ಮನೆಯಲ್ಲಿ ಹಿಂದಿನಿಂದ ಬಂದ ಸಂಪ್ರದಾಯದಂತೆ, ೧೦ ದಿನಗಳು ಬೊಂಬೆ ಪ್ರದರ್ಶನ ಮತ್ತು ಸಾಂಗವಾದ ದೇವಿ ಪೂಜೆ ಶಿಸ್ತಾಗಿ ನಡೆಯುತ್ತಿತ್ತು. ದಸರೆಯ ಅಮಾವಾಸ್ಯೆಯ ದಿನ ಸಂಜೆ ಬಂತೆಂದರೆ ನಮಗೆ ಹೇಳ ತೀರದ ಸಡಗರ. ಅಂದು ಸಂಜೆ ನಮ್ಮ ತಾಯಿ ಮರದ ಹಲಗೆಗಳನ್ನೆಲ್ಲಾ ಚೊಕ್ಕವಾಗಿ ಅಂತಸ್ತುಗಳಂತೆ ಜೋಡಿಸಿ, ಅವುಗಳ ಮೇಲೆ ಶುಭ್ರವಾದ ಬಿಳಿಯ ಹೊದಿಕೆಗಳನ್ನು ಹಾಸಿ ಬೊಂಬೆಗಳನ್ನು ಕೂರಿಸಲು ಅನುವು ಮಾಡುತ್ತಿದ್ದರು. ನಮ್ಮ ಚಿಕ್ಕಪ್ಪ ನಟರಾಜ ಅಂದು ತಮ್ಮ ಕೆಲಸದಿಂದ ಸ್ವಲ್ಪ ಮುಂಚೆ  ಹಿಂತಿರುಗಿ ಬರುತ್ತಿದ್ದರು. ಅವರೇ ಖುದ್ದಾಗಿ ಅಟ್ಟದ ಮೇಲೆ ಮರದ ಪೆಟ್ಟಿಗೆಗಳಲ್ಲಿ, ಬಟ್ಟೆಗಳಲ್ಲಿ ಸುತ್ತಿ ಇಟ್ಟಿರುತ್ತಿದ್ದ ಮಣ್ಣಿನ ಬೊಂಬೆಗಳು, ಗಾಜಿನವು, ಹಿತ್ತಾಳೆ, ಪಿಂಗಾಣಿ, ಬಟ್ಟೆಯಿಂದ ಮಾಡಿದ್ದು ಹಾಗೂ ಆಗಲೇ ಮಾರ್ಕೆಟ್ಟಿಗೆ ಲಗ್ಗೆ ಇಟ್ಟಿದ್ದ,  ಪ್ಲಾಸ್ಟಿಕ್ಕಿನ  ತರಹಾವರಿ ಬೊಂಬೆಗಳನ್ನು ಮೇಲಿಂದ ಕೆಳಕ್ಕೆ ಇಳಿಸುತ್ತಿದ್ದರು. ನಮಗೋ ಅವನ್ನೆಲ್ಲಾ ಮುಟ್ಟಿ ನೋಡುವಾಸೆ. ಆದರೆ ಅದಕ್ಕೆ ಅನುಮತಿ ಇರಲಿಲ್ಲ. ಬೊಂಬೆಯ ಜೊತೆ ಮಕ್ಕಳಿಗೆ ಆಡಲು ಅನುಮತಿ ಇಲ್ಲ ಎನ್ನುವುದು ಸ್ವಲ್ಪ ವಿನೋದಮಯವೆನಿಸುತ್ತದೆ ಈಗಿನ ಕಾಲಕ್ಕೆ. ಆದರೆ ಅಂದು ಮೈಸೂರಿನ ಮನೆಗಳಲ್ಲಿ ಬೊಂಬೆಗಳಿಗೆ ದೇವರ ಸ್ಥಾನವಿತ್ತು. ದಸರೆಯ ಹತ್ತು ದಿನಗಳು ಮಾತ್ರಾ ಅವುಗಳ ಪ್ರದರ್ಶನ, ನಂತರ ಮತ್ತೆ ಅಟ್ಟದ ಮೇಲೆ ಪೆಟ್ಟಿಗೆಯಲ್ಲಿ ಅವುಗಳ ವಾಸ. ಸ್ವಲ್ಪ ವಿಚಿತ್ರವೇ ಅಲ್ಲವೇ? ಶ್ರೀಮಂತರು ಮೈಸೂರಿನ ತಮ್ಮ ಮನೆಗಳಲ್ಲಿ ಕಟ್ಟಿರುತ್ತಿದ್ದ ಹೊಸ ರೀತಿಯ ಪ್ರದರ್ಶನದ ಗಾಜಿನ ಅಲ್ಮೇರಾಗಳು ಆಗಿನ್ನೂ ಜನಪ್ರಿಯವಾಗುತ್ತಿದ್ದ ಕಾಲವದು. ನಮ್ಮ ತಾಯಿಗೆ ಅವರ ತವರಿನಿಂದ ಕೊಡುಗೆಯಾಗಿ ತಂದ ಬೊಂಬೆಗಳಿಗೆ ವಿಶೇಷವಾದ ಸ್ಥಾನವಿತ್ತು. ಪ್ರತಿಯೊಂದು ಬೊಂಬೆಯ ಹಿಂದೆಯೂ ಒಂದು ಹಿನ್ನೆಲೆಯ ಕಥೆಯೇ ಇತ್ತು. ಪಟ್ಟದ ಬೊಂಬೆಯೆಂದು ಕರೆಯಲ್ಪಡುತ್ತಿದ್ದ, ಮರದಿಂದ ಮಾಡಿದ ಒಂದು ಜೊತೆ ಗಂಡು ಮತ್ತು ಹೆಣ್ಣು ಬೊಂಬೆಯನ್ನು, ಪ್ರದರ್ಶನದ ಅಂತಸ್ತುಗಳಲ್ಲಿ ಮೊಟ್ಟ ಮೊದಲ ಅಂತಸ್ತಿನಲ್ಲಿ, ದಸರಾದ ಮೊದಲ ದಿನ ಪಾಡ್ಯದಂದು ಬೆಳ್ಳಿಯ ಕಲಶದೊಡನೆ ಸ್ಥಾಪಿಸುವುದು ವಾಡಿಕೆಯಾಗಿತ್ತು. ಈ ಪಟ್ಟದ ಬೊಂಬೆಗಳನ್ನು, ಹೆಣ್ಣು ಮಕ್ಕಳಿಗೆ ಮದುವೆಯ ಸಮಯದಲ್ಲಿ, ತವರು ಮನೆಯಲ್ಲಿ ಕಾಣಿಕೆಯಾಗಿ ಕೊಡುವುದು ಒಂದು ಸಂಪ್ರದಾಯ. ನನ್ನ ಮದುವೆಯಲ್ಲೂ ನನ್ನ ಜೊತೆ ಬಂದ ಪಟ್ಟದ ಬೊಂಬೆಯ ಒಂದು ಜೊತೆಯನ್ನು, ಈಗ ನನ್ನ ಮಗಳು ತನ್ನ ಆಟಿಕೆಗಳ ಸಂಗ್ರಹದಲ್ಲಿ ಭಧ್ರವಾಗಿ ಇಟ್ಟಿದ್ದಾಳೆ.

ದಸರೆಯ ಹಬ್ಬಕ್ಕೆ ಒಂದು ತಿಂಗಳ ಮುಂಚೆಯೇ, ಈ ಬೊಂಬೆಗಳಿಗೆ ಅಲಂಕಾರ ಮಾಡುತ್ತಿದ್ದರು. ಬಣ್ಣದ ಕಾಗದದಿಂದ ಸೀರೆ, ಹೊನ್ನು ಮತ್ತು ಬೆಳ್ಳಿಯ ಬಣ್ಣದ ಪಟ್ಟೆ ಕಾಗದದಿಂದ ಗಂಡು ಬೊಂಬೆಯ ಶರಾಯಿ, ಕೋಟು ಪೇಟಾಗಳು ಮತ್ತು ಹೆಣ್ಣು ಬೊಂಬೆಯ ಕುಪ್ಪುಸಗಳು ತಯಾರಾಗುತ್ತಿದ್ದವು. ಸೀರೆಯ ಮೇಲೆ ನಕ್ಷತ್ರಗಳ ಆಕಾರದಲ್ಲಿ ಈ ಕಾಗದವನ್ನು ಕತ್ತರಿಸಿ, ಜರಿ ಮತ್ತು ಬುಟ್ಟಾಗಳಂತೆ ಸಿಂಗರಿಸುತ್ತಿದ್ದದ್ದು ನೆನಪಿದೆ. ಈ ಕಾರ್ಯದಲ್ಲೂ ನಮ್ಮನ್ನು ಸೇರಿಸುತ್ತಿರಲಿಲ್ಲ. ಬೊಂಬೆಗೆ ಕಿವಿಯಲ್ಲಿ ತೂತು ಮಾಡಿ, ಬಣ್ಣದ ಲೋಲಾಕುಗಳನ್ನು ತೂಗಿಸುತ್ತಿದ್ದರು. ಈ ಸಿದ್ಧತೆ ನಿಜಕ್ಕೂ ಒಂದು ಸವಿನೆನಪಾಗಿದೆ. ಪ್ರತಿ ಗೊಂಬೆಯನ್ನೂ ಅದರದೇ ಅಂತಸ್ತಿನಲ್ಲಿ ಸಾಲಾಗಿ ಇಡಲಾಗುತ್ತಿತ್ತು. ರಾಮನ ಪಟ್ಟಾಭಿಶೇಕ, ರಾಧಾ-ಕೃಷ್ಣ, ಶಿವ-ಪಾರ್ವತಿ ಹೀಗೆ ಪೌರಾಣಿಕ ಪಾತ್ರಗಳ ಜೋಡಿಗಳನ್ನು ಅಮ್ಮ ತಮ್ಮದೇ ಆದ ಶೈಲಿಯಲ್ಲಿ ಜೋಡಿಸಿ ಇಡುತ್ತಿದ್ದರು. ಇಲ್ಲಿ ನಮ್ಮ ಅಭಿಪ್ರಾಯಗಳಿಗೆ ಸ್ಥಾನವಿರಲಿಲ್ಲ. ಕೇವಲ ಪ್ಲಾಸ್ಟಿಕ್ ಗೊಂಬೆಗಳನ್ನು ಎತ್ತಿಡಲು ನಮಗೆ ಅವಕಾಶವಿತ್ತು. ಪ್ರಾಣಿಗಳ ಸೆಟ್, ಅಡಿಗೆ ಮನೆ ಸೆಟ್ , ಕುಯ್ಗುಟ್ಟುವ ನಾಯಿ, ಕುಪ್ಪಳಿಸುವ ಮೊಲ, ತಲೆಯ ಮೇಲೆ ಹೊಡೆದರೆ ತಲೆ ಅಲ್ಲಾಡಿಸುವ ವಿವಿಧ ನಾಗರೀಕತೆಯ ಜೋಡಿ ಬೊಂಬೆಗಳು ಹೀಗೆ ಹಲವು ಹತ್ತು ಬಗೆಯ ಬೊಂಬೆಗಳಿದ್ದವು. ಮೈಸೂರು ಟಾಯ್ ಪ್ಯಾಲೇಸ್ ಆಗಿನ ಕಾಲಕ್ಕೆ ಆಟಿಕೆಗಳನ್ನು ಸೊಗಸಾಗಿ ಮಾಡಿ ಮಾರುತ್ತಿದ್ದರು. ಅಲ್ಲಿಂದ ಕೊಂಡು ತಂದ ಚನ್ನಪಟ್ಟಣದ ಮರದ ಆಟದ ಸಾಮಾನುಗಳದೇ ಒಂದು ವೈಖರಿ.

ಇವೆಲ್ಲದರ ಮಧ್ಯೆ ನನ್ನ ಅಕ್ಕ ಮಗುವಾಗಿದ್ದಾಗ ನಮ್ಮ ತಂದೆ ಕೊಂಡು ತಂದಿದ್ದ ಬೊಂಬಾಯಿಯ ಒಂದು ಹೆಣ್ಣು ಕರ್ಪೂರದ ಬೊಂಬೆಗೆ ವಿಶೇಷವಾದ ಅಲಂಕಾರವನ್ನು ಪ್ರತಿದಿನ ಮಾಡುತ್ತಿದ್ದ ನೆನಪು. ಸರಸ್ವತಿ ಪೂಜೆಯ ದಿನದಂದು ಆ ಗೊಂಬೆಗೆ ಶಾರದೆಯ ವಿಭೂಷಣಗಳನ್ನು ತೊಡಿಸುತ್ತಿದ್ದರು. ಅದರ ಕೈಯಲ್ಲಿ ವೀಣೆಯನ್ನು ಕೊಡಬೇಕಿತ್ತು. ಅದಕ್ಕಾಗಿ ನಮ್ಮ ಅಮ್ಮ ಪರದಾಡುತ್ತಿದ್ದಾಗ, ನಮ್ಮ ಚಿಕ್ಕಪ್ಪ ತಕ್ಷಣವೇ ನಮ್ಮ ತೋಟದಲ್ಲಿದ್ದ ದಾಳಂಬಿ ಗಿಡದಿಂದ ಎರಡು ದಾಳಂಬಿ ಕಾಯಿಗಳನ್ನು ಕಿತ್ತು ತಂದು, ಹಲವು ಬಿದುರಿನ ಕಡ್ಡಿಗಳ ಸಹಾಯದಿಂದ ಒಂದು ವೀಣೆಯನ್ನು ತಯಾರಿಸಿದ್ದು ಎಂದಿಗೂ ಮರೆಯುವುದಿಲ್ಲ. ಅಜ್ಜಿ, ಅಮ್ಮ ಗಂಟೆಗಟ್ಟಲೆ ಕುಳಿತು ತಯಾರಿಸಿದ ಚಕ್ಕುಲಿ, ಕೋಡುಬಳೆ, ತೇಂಗೊಳಲು, ಮುತ್ಸೋರೆ, ನಿಪ್ಪಟ್ಟು, ನಾಲ್ಕಾರು ಬಗೆಯ ಉಂಡೆಗಳು ನಮ್ಮ ಪ್ರತಿ ಸಂಜೆಯ ಬೊಂಬೆ ಆರತಿಯ ಚರ್ಪುಗಳಾಗಿದ್ದವು. ಸಂಜೆಯಾಯಿತೆಂದರೆ ಬಣ್ಣಬಣ್ಣದ ಬಟ್ಟೆಗಳನ್ನು ತೊಟ್ಟು, ಇತರರ ಮನೆಗೆ ಆರತಿಗೆ ಹೋಗಿ ನಲಿಯುತ್ತಿದ್ದನ್ನು ಮರೆಯಲು ಸಾಧ್ಯವೇ?

ಅರಮನೆಯ ಬೆಡಗು: ಇದು ಮನೆಯಲ್ಲಿ ಆಚರಿಸುತ್ತಿದ್ದ ದಸರೆಯ ವೈಖರಿಯಾದರೆ, ನಮ್ಮೂರಿನ ಅರಮನೆಯ ವೈಭವವೇ ಬೇರೆ. ಪ್ರತಿ ಸಂಜೆ ಮಹರಾಜರು ಅರಮನೆಯ ದರ್ಬಾರ್ ಹಾಲಿನಲ್ಲಿ ಹೊನ್ನಿನ ಸಿಂಹಾಸನದ ಮೇಲೆ ಕುಳಿತೊಡನೆ, ಮೈಸೂರು ಅರಮನೆ, ಸಯ್ಯಾಜಿರಾವ್ ರಸ್ತೆ, ನಗರದ ಮುಖ್ಯ ಕಟ್ಟಡಗಳು, ಚಾಮುಂಡಿ ಬೆಟ್ಟದ ದೇವಸ್ಥಾನ, ದಸರೆಯ ವಸ್ತುಪ್ರದರ್ಶನದ ಕಟ್ಟಡಗಳು ಹೀಗೆ ನಗರದಲ್ಲೆಲ್ಲಾ ವಿದ್ಯುತ್ ದೀಪಗಳು ಜಗ್ಗನೆ ಬೆಳಗಿ ನಮ್ಮ ಮನವನ್ನು ಪುಳುಕಗೊಳಿಸುತ್ತಿತ್ತು. ಮನೆಯವರೆಲ್ಲಾ ಅರಮನೆಯ ಆವರಣಕ್ಕೆ ಸಂಜೆ ಹೋದಾಗ ಅಲ್ಲಿ ನೆರೆದ ಜನಜಾತ್ರೆಯ ಮಧ್ಯದಲ್ಲಿ ನಮಗೇನೂ ಕಾಣಿಸದಿದ್ದಾಗ, ನಮ್ಮ ತಂದೆ ಮತ್ತು ಚಿಕ್ಕಪ್ಪಂದಿರು ನಮ್ಮನ್ನು ಅವರ ಹೆಗಲ ಮೇಲೆ ಕೂರಿಸಿ ಕೊಂಡು ಅರಮನೆಯ ದರ್ಬಾರ್ ಹಾಲಿನ ಕಡೆಗೆ ತೋರಿಸುತ್ತಿದ್ದದ್ದು ನೆನಪಿದೆ. ಸರಿ ಅಲ್ಲಿಗೆ ಹೋದೆವೆಂದರೆ ನಮ್ಮ ಬೇಡಿಕೆಗಳು ಒಂದೊಂದಾಗಿ ಹೊರಬೀಳುತ್ತಿದ್ದವು. ಮೊದಲನೆಯದಾಗಿ ಬಣ್ಣಬಣ್ಣದ ಬೆಲೂನುಗಳು, ಚುರುಮುರಿ, ಪಾಪ್-ಕಾರ್ನ್, ಹೀಗೆ ಹಲವು ಹತ್ತು ಬೇಡಿಕೆಗಳನ್ನು ನಮ್ಮ ತಂದೆ ಪೂರೈಸಿದ ನಂತರವೇ ನಾವೆಲ್ಲಾ ಮನೆಗೆ ಹಿಂತಿರುಗಿ ಹೋಗುತ್ತಿದ್ದದ್ದು. ಅಂದಿನ ಮೈಸೂರಿನಲ್ಲಿ ಸಾಮಾನ್ಯವಾಗಿ ಎಲ್ಲರೂ ನಡದೇ ಎಲ್ಲೆಡೆ ಓಡಾಡುತ್ತಿದ್ದ ಸಮಯವದು. ಆದರೆ ದಸರಾ ಸಮಯದಲ್ಲಿ ಮಾತ್ರಾ, ವಿಶೇಷವಾದ ಬಸ್ ವ್ಯವಸ್ಥೆಯಿರುತ್ತಿತ್ತು.

250px-Wood_inlay_Mysore
ದಸರೆಯ ಪಟ್ಟದಾನೆ –CC-Wiki

ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ಮಹರಾಜರನ್ನೇ ಕಂಡಿದ್ದೆ: ದಸರೆಯ ಹತ್ತನೆಯ ದಿನದ ಜಂಬೂ ಸವಾರಿಯನ್ನು ನೋಡಲು ಬೆಳಿಗ್ಗೆ ೧೦ ಗಂಟೆಗೇ ಮನೆ ಬಿಟ್ಟು ಸಯ್ಯಾಜಿರಾವ್ ರಸ್ತೆಯಲ್ಲಿ ವಿವಿಧ ಸ್ಥಳಗಳಲ್ಲಿ ಜನಗಳು ಕೂತು ಜಂಬೂ ಸವಾರಿಯನ್ನು ವೀಕ್ಷಿಸುತ್ತಿದ್ದ ದಿನಗಳವು. ಒಟ್ಟಿನಲ್ಲಿ ದಸರೆಯ ಹಬ್ಬದ ಆ ಹತ್ತು ದಿನಗಳ ಮಜಾ ಮತ್ತೆಂದೂ ನಾವು ಕಂಡೆ ಇಲ್ಲ. ಜನ ಮರುಳೋ ಜಾತ್ರೆ ಮರುಳೋ ಎಂಬಂತೆ, ಜನ ನೆರೆಯುತ್ತಿದ್ದ ಆ ಸಮಯ ಈಗೆಲ್ಲಿ? ಈಗ ಮೈಸೂರಿನ ಜನಸಂಖ್ಯೆಯೇನೋ ಮೊದಲಿಗಿಂತ ೧೦ ಪಟ್ಟು ಜಾಸ್ತಿ ಇರಬಹುದು. ಆದರೆ ಅಂದಿನ ಆ ವೈಭವ ಇಂದು ಕಂಡು ಬರುವುದಿಲ್ಲ ಎಂದು ನನ್ನ ಚಿಕ್ಕಪ್ಪ ಮತ್ತು ಅವರ ಕುಟುಂಬ ಹೇಳುತ್ತಲೇ ಇರುತ್ತಾರೆ. ಇಂದಿನ ಔದ್ಯೋಗಿಕರಣ ಪರಿಸರದಲ್ಲಿ, ಎಲ್ಲವೂ ಮಲಿನವಾಗಿದೆ. ಮೈಸೂರಿನ ಕೋಗಿಲೆಯ ಕಂಠದಲ್ಲಿರುವ ಮಾಧುರ್ಯ, ಬೆಂಗಳೂರಿನ ಕೋಗಿಲೆಗಿಲ್ಲ ಎಂಬ ಪ್ರತೀತಿ ಅಂದೂ ಇತ್ತು. ನನ್ನ ಜೀವನದ ೨೪ ವಸಂತಗಳನ್ನು ಆ ನಗರದಲ್ಲಿ ಕಳೆದ ನನ್ನ ಮನದಲ್ಲಿ ಇನ್ನೂ ಸಾವಿರಾರು ನೆನಪುಗಳು ಸವಿಯಾಗಿ ಕುಳಿತಿವೆ. ಇಂದಿಗೂ ಹಳೆಯ ಕನ್ನಡ ಚಲನಚಿತ್ರಗಳನ್ನು ನೋಡುವ ಸಮಯದಲ್ಲಿ, ನನ್ನೂರನ್ನು ಕಂಡಾಗಲೆಲ್ಲಾ, ನನ್ನ ನೆನಪಿನ ಸುರುಳಿ ತಾನಾಗಿಯೇ ಬಿಚ್ಚಿಕೊಳ್ಳುತ್ತದೆ. ಆದರಿಲ್ಲಿ ಎಲ್ಲವನ್ನೂ ಬರೆಯಲು ಸಾಧ್ಯವಿಲ್ಲವೇ!. ಹಾಗಾಗಿ ನನ್ನ ನೆನಪಿನ ಪುಟಗಳನ್ನು ಸಧ್ಯಕ್ಕೆ ಇಲ್ಲಿಯೇ ಮುಚ್ಚಿಡುವೆ.

ಕಸ್ತೂರಿ ಕನ್ನಡದ ನನ್ನೂರು, ಕಲೆಗೆ ಕಣ್ಣಾದ ನನ್ನೂರು!

6 thoughts on “ನೋಡು ಬಾ ನಮ್ಮೂರ ಸರಣಿ: ಮೈಸೂರೆಗೊಳುವ ಮೈಸೂರು! – ಉಮಾ ವೆಂಕಟೇಶ್

  1. ನಿಮ್ಮ ಲೇಖನಕ್ಕೆ “ಮೈಸೂರೆನೆ ಕುಣಿದಾಡುವುದೆನ್ನೆದೆ” ಎಂದು ತಲೆಬರಹ ಕೊಡುವಷ್ಟು ಉತ್ಸಾಹ, ಪ್ರೀತಿಯಿಂದ ಬರೆದು ನಿಮ್ಮೂರಿನ ವೈಭವವನ್ನು, ನಿಮ್ಮ ನೆನಪುಗಳನ್ನು ಹಣ್ಣಿಗೆ ಕಟ್ಟುವಂತೆ ವರ್ಣಿಸಿದ್ದೀರಿ. ‘ದಸರಾ ಎಂದರೆ ಮೈಸೂರು; ಮೈಸೂರೆಂದರೆ ದಸರಾ’ ಅಂತೆ ಎಂದು ಅರವತ್ತು ವರ್ಷಗಳಿಗೂ ಮೇಲೆ ಕೇಳುತ್ತಲಿದ್ದೇನೆ. ಆ ಊರಿನ ಕೃಷ್ಣಮೂರ್ತಿಪುರಂದವಳೇ ಆಗಿದ್ದ ನನ್ನವಳು ‘ ಹಗಲೆಲ್ಲ’ ಮೈಸೂರಿನ ಬಗೆಗೆ ಹೇಳುತ್ತಿದ್ದರಲ್ಲಿ ಉತ್ಪ್ರೇಕ್ಷೆ ಇರಲಿಲ್ಲ ಎಂದು ನಿಮ್ಮ ವರ್ಣನೆ ಓದಿ ಈಗ ತಿಳಿಯಿತು!
    ರೊಮ್ಯಾಂಟಿಕ್ ಆಂಗ್ಲ ಕವಿ ವರ್ಡ್ಸ್ವರ್ಥ ಕಾಮನಬಿಲ್ಲನ್ನು ಕಂಡೊಡನೆ ಹುಡುಗನಂತೆ ಕುಣಿದಾಡಿದ್ದು ನೆನಪಾಗುತ್ತದೆ (The Rainbow). ಎಸ್ ಎಲ್ ಬಿ ಹೇಳಿದಂತೆ, ಮೇಲೊಬ್ಬರು ನೆನಪಿಸಿದಂತೆ child is father of man ಕವಿ ಆ ಕವನದಲ್ಲಿ ಅನ್ನುವದೂ ಅದೇ ವಿಷಯ. ಬರಹದಲ್ಲಿ ನಿಮ್ಮ ಉತ್ಸಾಹ ತುಂಬಿ ಹರಿದಿದೆ. ನಮ್ಮೊಂದಿಗೆ ಅದನ್ನು ಪಾಲ್ಗೊಂಡಿದ್ದಕ್ಕೆ ಧನ್ಯವಾದಗಳು.
    ಶ್ರೀವತ್ಸ

    Like

    • ದೇಸಾಯಿ ಆವರೆ , ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ಬಾಲ್ಯದ ಆ ದಿನಗಳು , ಇಳಿ ವಯಸ್ಸಿನಲ್ಲಿ, ನಮ್ಮ ಮನಸ್ಸಿಗೆ ಮುದ ನೀಡುವ ಆಸರೆಯೆಂದರೆ ಯಾವ ಅತಿಶಯೋಕ್ತಿಯೂ ಅಲ್ಲ. ಕೃಷ್ಣಮೂರ್ತಿ ಪುರಂನಲ್ಲಿ ನಾನು ಕಳೆದ, ಓಡಾಡಿ ನಲಿದಾಡಿದ ಪ್ರೌಢಶಾಲೆಯ ದಿನಗಳು ಬಹಳ ಹಸಿರಾಗಿವೆ. ಅದನ್ನು ಮತ್ತೊಂದು ಅಧ್ಯಾಯದಂತೆ ಬರೆಯುವಷ್ಟು ಸರಕು ಇದೆ. ಅದನ್ನೂ ಮತ್ತೊಮ್ಮೆ ಬರೆದು ಕಳಿಸುವೆ. ನಿಮ್ಮ ಪ್ರೋತ್ಸಾಹಕ ಹಿನ್ನುಣಿಕೆಗೆ ನನ್ನ ಧನ್ಯವಾದಗಳು.
      ಉಮಾ

      Like

  2. ತುಮಕೂರು-ಬೆಂಗಳೂರಿನಲ್ಲಿ ಓದಿದರು, ಮೈಸುರು ಅಂದರೆ ಪ್ರೀತಿ. ಅಲ್ಲಿಗೆ ತಪ್ಪದೆ ಹೋಗ್ತಿರ್ತೇವೆ.
    ಅಲ್ಲಿಯ ವತಾವರಣ ಇನ್ನೂ ತನ್ನತನ ಉಳಿಸಿಕೊಂಡಿರುವುದು ನಿಜ.
    ಸುತ್ತ-ಮುತ್ತಲಿನ ಜಾಗಗಳ ಬಗ್ಗೆಯೂ ನೀವು ಬರೆಯಬಹುದಿತ್ತು.
    ಮೈಸೂರಿನ ಬಗ್ಗೆ ನಿಮ್ಮ ಒಲವು ಸಹಜವೆ. ಬಾಲ್ಯದ ನಿಮ್ಮ ಉತ್ಸುಕತೆಯನ್ನು ನಾವು ಈಗಲು ಕಾಣಬಹುದು!
    ಸುಂದರ ಲೇಖನ.

    Like

    • ಪ್ರೇಮ ನನ್ನ ಮೈಸೂರಿನ ನೆನಪುಗಳು ಇನ್ನೂ ಬಹಳಷ್ಟಿವೆ. ಅದೆಲ್ಲವನ್ನೂ ಒಂದೇ ಲೇಖನದಲ್ಲಿ ಅಳವಡಿಸಲು ಸಾಧ್ಯವಿಲ್ಲ. ಅನೇಕ ಕಂತುಗಳಲ್ಲಿ ಬರೆಯ ಬಹುದು. ಅದನ್ನೇ ಮಾಡುವ ಉದ್ದೇಶವಿದೆ.
      ಉಮಾ

      Like

  3. ಉಮಾ ಅವರ – ನನ್ನೂರು ಮೈಸೂರು ಲೇಖನ ಇನ್ನೇನು ದಸರಾ ಶುರುವಾಗುವ ಮುನ್ನ ಸಕಾಲಿಕವಾಗಿ ಮೂಡಿ ಬಂದಿದೆ. ತಂದೆ ಯವರದ್ದು ಮೈಸೂರೇ ಆದರೂ ನಾವು ಅಲ್ಲಿ ಬೆಳೆಯುವ ಭಾಗ್ಯ ಪಡೆದಿರಲಿಲ್ಲ. ಇಂದಿಗೂ ಅದು ತನ್ನ ವೈಶಿಷ್ಟ್ಯ ವನ್ನು ಬಹುಮಟ್ಟಿಗೆ ಉಳಿಸಿಕೊಂಡಿದೆ ಎಂದೆ ಎಲ್ಲ ಹೇಳುತ್ತಾರೆ.
    ಭೈರಪ್ಪನವರು ಅಂದಂತೆ ಎಲ್ಲರೂ ತಮ್ಮ ಜೀವನದ ಮೊದಲ ೨೦-೩೦ ವರ್ಷಗಳಲ್ಲಿ ಕಂಡಿದ್ದನ್ನೇ ತಮ್ಮ ಸಾಹಿತ್ಯ ಸೃಷ್ಟಿಯಲ್ಲಿ ಬಳ ಸುತ್ತಾ ರೆಂಬುದು ನಿಜ. ನಮ್ಮ ಮನೋಭಾವನೆಗಳು ಈ ಪರಿಸರದಿಂದ ಪ್ರೇರೇಪಿಸಲ್ಪಡುತ್ತವೆ. ಇಂತಹ ಶ್ರೀಮಂತ ಪರಿಸವನ್ನು , ಸಾಂಪ್ರದಾಯಿಕ ಆಚರಣೆಗಳನ್ನು ತಮ್ಮ ಸ್ವಾನುಭವಗಳ ಮೂಲಕ ಸುಂದರವಾಗಿ ಹೆಣೆದು ನಮಗೆ ಕೊಡಮಾಡಿದ್ದಕ್ಕೆ ಧನ್ಯವಾದಗಳು.

    Like

    • ಸುದರ್ಶನ್ ಅವರೆ, ಭೈರಪ್ಪನವರು ಇದೇ ಮೈಸೂರಿಗೆ ವಾಪಸಾದ ಮೇಲೆಯೇ ತಮ್ಮ ಉತ್ತಮ ಕಾದಂಬರಿಗಳನ್ನು ರಚಿಸಿದ್ದು. ಸಾಹಿತ್ಯ ಮತ್ತು ಕಲೆಗಳ ಉನ್ನತ ಪರಂಪರೆಯನ್ನು ಹೊಂದಿದ, ಈ ನಗರದಲ್ಲಿ ಕನ್ನಡ ಸಾಹಿತ್ಯದ ದಿಗ್ಗಜಗಳು ವಾಸಿಸಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.
      ಉಮ

      Like

Leave a comment

This site uses Akismet to reduce spam. Learn how your comment data is processed.